ADVERTISEMENT

ಕವಿತೆ: ಆಗಂತುಕದತ್ತ ಮುಖ ಮಾಡಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 19:30 IST
Last Updated 22 ಜನವರಿ 2022, 19:30 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ಊರ ಅಗಸ್ಯಾಗ ಬರಿಗಾಲಿಗೆ ಬರವಿಲ್ಲ
ಮೋಡ ಸೇರುವ ದೂಳದ್ಹುಡಿಗೆ ಕೊನೆಯಿಲ್ಲ
ದಣಿವಿಲ್ಲ ತಾಯಿ ತಲೆಮ್ಯಾಲಿನ ಸಿಂಬೀಗಿ
ಆಗಂತುಕದತ್ತ ಮುಖ ಮಾಡಿ...

ಹಳ್ಳದ ದಂಡ್ಯಾಗ ಮುಖ ಮಜ್ಜನ ಮಾಡಿ
ಕೂರಿಗೆ ಕುಂಟಿಗೆ ಎಡಿ ಮಾಡಿ..
ಜೋಡೆತ್ತ ಜೊತೆಗೂಡಿ ನಡೆಯುತ್ತ
ಆಗಂತುಕದತ್ತ ಮುಖ ಮಾಡಿ...

ಹರಿದ ಚಡ್ಡಿಗೆ ತ್ಯಾಪಿಯ ಹಚ್ಚಿಕೊಂಡು
ಮುಂಡಾಸ ಧರಿಸಿ ಮೈಯ ಮುಚ್ಚಿಕೊಂಡು
ಸೂರ್ಯ ಹುಟ್ಟಿದರೆಷ್ಟ..
ಸೂರ್ಯ ಮುಳುಗಿದರೆಷ್ಟ..

ADVERTISEMENT

ಅರಿವಿಲ್ಲ ಪರಿವಿಲ್ಲ ಮುಖದ ನೆರಿಗೆಯ ಖಬರಿಲ್ಲ
ಆಗಂತುಕದತ್ತ ಮುಖ ಮಾಡಿ...

ಅಂಗಾಲ ಸೇರಿದ ಮುಳ್ಳು ಆನೆಯಾಗಿ..
ಅರೆಹೊಟ್ಟೆ ಅಂಬಲಿ ಜೀವಕಮೃತವಾಗಿ
ಅರಸನಾಗಲು ಅಲಿಯದ..
ಸಿರಿವಂತಿಕೆ ಬಯಸದ..

ಶ್ರಮಜೀವ!

ಆಗಂತುಕದತ್ತ ಮುಖ ಮಾಡಿ...

ದಿಂಡ ಹಚ್ಚಿದ ಪಡಕಿ ಸುತ್ತಿಕೊಂಡ ಮಡದಿ
ಒಣಗಿದ ರೊಟ್ಟಿ ಕಾರ್ ಪುಡಿ ಉಡಿಯಾಗ ಕಟ್ಟಿಕೊಂಡ
ಹುಳಿಯ ಅಂಬಲಿ ಗಡಿಗೆ ತಲೆ ಮ್ಯಾಲೆ ಇಟ್ಟುಕೊಂಡ
ಸಿಂಬಳ ಸೋರುವ ಮಕ್ಕಳೆರಡ್ಮೂರು ಎಳಕೊಂಡ
ತತ್ರಾಣಿಗಿ ನೀರ ತುಂಬಿಕೊಂಡ..
ಆಗಂತುಕದತ್ತ ಮುಖ ಮಾಡಿ...

ಶಿವಶಿವಾ ಅನ್ನುತ ಸಗಣಿ ಕಸ ಬಳಿಯುತ
ಸೊಕ್ಕಿಲ್ಲ..
ಸೋಗಿಲ್ಲ..
ರೂಪಾಯಿಗೆ ಗತಿಯಿಲ್ಲ..
ಗೊತ್ತಿಲ್ಲ ಗುರಿಯಿಲ್ಲ ಬದುಕಿಗೆ ನೆಲೆಯಿಲ್ಲ..

ಸುಟ್ಟ ಕೈ ಸೂರಾಗ ಇಟ್ಟುಕೊಂಡ
ಬೆವರು ಹನಿಗಳ ಹೊತಗೊಂಡ..
ಆಗಂತುಕದತ್ತ ಮುಖ ಮಾಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.