ADVERTISEMENT

ವಿ ಹರಿನಾಥಬಾಬು ಅವರ ಕವನ ಬಿಟ್ಟಿರುವುದಾದರೂ ಹೇಗೆ?!

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 0:15 IST
Last Updated 25 ಸೆಪ್ಟೆಂಬರ್ 2022, 0:15 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   


ಮಳೆಗಾಲದ ಮೋಡಗಳು ಒಂದು ಚೂರೂ ಹೊರಪು ಕೊಡದೇ ಸುರಿಸುತ್ತಿವೆ
ಅವಳ ನೆನಪು ಹೀಗೇ ಸದಾ ಯಾಕೆ ಕಾಡಬೇಕು ನನ್ನ!?
ಅದೇ ಒದ್ದೆ ಬಟ್ಟೆ
ಮತ್ತದೇ ಕೆಸರ ದಾರಿ
ಆಕಾಶದಲಿ ಇತ್ತಿಂದತ್ತ ಹರಿದ ಕೋಲ್ಮಿಂಚಿನ ಸೆಳಕು!


ಬಿಸಿಲು ಹಸಿದು ಬಂದವರಂತೆ ಅಂಗಳದಲ್ಲೇ ಕುಳಿತಿದೆ
ನನ್ನೊಳಗಿನ ಅವಳ ನೆನಪ ಜ್ವಾಲೆಗೆ ಮತ್ತಷ್ಟೂ ಬೆಂಕಿ ಸುರಿದಿದೆ
ಒಲೆ ಹಚ್ಚದೆಯೇ ರೊಟ್ಟಿ ಸೀದು ಹೋಗಿದೆ
ತಿನ್ನಲು ಚಾಚಿದ‌ ಕೈಯ್ಯೊಳಗೆ ಕೆಂಡದುಂಡೆಗಳ ಹೊಳಪು


ಕಂಬಳಿಯೊಳಗೆ ಗಡಗಡಾ ನಡುಗುತ್ತಾ ಕುಳಿತಿರುವ ಚಳಿ
ಒಂದು ಸಣ್ಣ ನೆನಪು ಬೂದಿ ಮುಚ್ಚಿದ ಒಲೆಗೆ ತಿದಿಯೊತ್ತಿದಂತಾಯ್ತು
ಎದ್ದು ಹೊರಗೆ ಬಂದು ಮೋಟು ಬೀಡಿಗೆ ಕಡ್ಡಿಗೀರಿ ಉರಿವ ಸೂರ್ಯನಿಗೆ ಸಡ್ಡು ಹೊಡೆದೆ

ADVERTISEMENT


ಅದೇಕೋ ಒಣಗಿದ ಕೆರೆಯಂಗಳದ ಬಿರುಕಿನ ತುಣುಕುಗಳು ನನ್ನ ಈ ತುಟಿಯನ್ನಾವರಿಸಿವೆ
ಕಡಲ ತುಂಬಾ ಅಪ್ಪಿಕೊಂಡಿದ್ದ ಉಪ್ಪು ಇಂದೇಕೋ ಕಣ್ಣ ಕುಳಿಯೊಳಗೆ ಅವಿತು ಕುಳಿತಿದೆ
ಅಗೋ ಅಲ್ಲಿ ಈಗವಳ ಕಾಲ ಗೆಜ್ಜೆಯ ಸಪ್ಪಳ
ಎದೆಯ ರಾಗಕೆ ಇದ್ದಕ್ಕಿದ್ದಂತೆ ಉಕ್ಕಿ ಹರಿವ ಭರಪೂರ ಪ್ರವಾಹ


ಹೀಗೇಕೆ ಹಾಳು ಬಿದ್ದ ಗೋಡೆಗೆ ಹಾರೆ ಹಾಕಿ ಮೀಟಿ ಕೆಡವುವ ಉಮೇದು
ಉಫ್ ಎಂದರೆ ತಾನೇ ಹಾರಿ ಹೋಗುವ ಹಾಗಿರುವಾಗ ಗಾವುದ ಗಾವುದ ದೂರ
ಥೂ ಈ ಹಾಳು ಒಂಟಿ ಕೂದಲು ಎಲ್ಲಿಂದ‌ ಹಾರಿ ಬಂತೋ ಸೋಜಿಗಕ್ಕೆ
ಕೈ ಬೆರಳುಗಳು ವಸಂತದಲಿ ಚಿಗಿವ ಮಾವಿನ ಮರದಂತೇಕಾದವೋ


ಸಂತೆಯೊಳಗಿನ‌ ಸಂತನಂತೆ ಮೌನವೇ ಮಾತಾದವನಿಗೆ
ಅದಾವಳೋ ಮುಡಿದ ಮಲ್ಲಿಗೆಯ ವಾಸನೆಯ ರುಚಿ
ಹೂವ ಹುತ್ತದೊಳಗೆ ಕೈಯಿಟ್ಟರೆ ಮೈ ತುಂಬಾ ಮರಿ ನಾಗರಗಳ ಮೆರವಣಿಗೆ
ಇರುಳ‌ ಹಾದಿಯ ತುದಿಯೇರಿದ ಸೂರ್ಯ ನಿಬ್ಬೆರಗಾಗಿ ನಿಂತಲ್ಲಿಯೇ ನಿಂತ
ಕನಸುಗಳು ಬಣ್ಣದಲ್ಲಿದ್ದರೆ ಅವರಪ್ಪನ ಗಂಟೇನು ಹೋಗುತ್ತಿತ್ತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.