ಕೆಂಬೂತದ್ದು ತಪ್ಪಿರಲಿಲ್ಲ
ಮಾತ್ಸರ್ಯದಲಿ ಹೋಲಿಸಿ
ಹಂಗಿಸಿ ನವಿಲ ರೂಪವನು
ನಾವೇ ದೊಡ್ಡದು ಮಾಡುವುದು
ಜೀವಮಾನದಲ್ಲೇ ನವಿಲ
ಕಂಡಿರದ ಕೆಂಬೂತ
ಅದಾವ ಸೊಬಗಿಗೆ ಕೊರಗಿ
ಏಕೆ ಬಾಧೆ ಪಟ್ಟೀತು
ಹೊಳಪಿನ ಪುಕ್ಕದ ರಂಗು
ನರ್ತನದ ಕಾಲ್ನಡುಗೆ;
ಗರಿಗೆದರಿ ಕುಣಿವ ಖದರು
ಕೆಂಬೂತದ ನೆಮ್ಮದಿ ತೆಗೆದೀತೇ
ಮಯೂರಕೆ ಸೌಂದರ್ಯ ಕಿರೀಟ
ತೊಡಿಸಿ, ಕೆಂಬೂತಕೆ ಅಪರಾಧಿ
ಬೇಡಿ ತೊಡಿಸಿ; ಪಾತ್ರ ಕಟ್ಟಿ ನಮ್ಮ
ತಲೆಪರದೆ ಮೇಲೆ ಕುಣಿಸಿದೆವು
ಕಡೆಗೆ ನವಿಲು ಕೆಂಬೂತ ಯಾವುದೂ
ಆಗದವರು ಮತ್ಸರದಿ ಅಯ್ಯೋ,
ಇದು ಅದರಂತಾಗಲಿಲ್ಲೆಂದು
ರೋದಿಸಿ ಮೊಸಳೆ ಕಣ್ಣೀರಿಡುವೆವು
ನವಿಲ ಬಾಳು ಕೆಂಬೂತ ಬದುಕುವ
ಜರೂರತ್ತೆಂದಿಗೂ ಇರುವುದಿಲ್ಲ.
ಹೆಣ್ಣು ಕೆಂಬೂತ ಇಷ್ಟ ಪಡುವುದು
ಗಂಡು ನವಿಲನ್ನೇನೂ ಅಲ್ಲ……
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.