ADVERTISEMENT

ಬಿದಲೋಟಿ ರಂಗನಾಥ್ ಅವರ ಕವನ: ನೆತ್ತರು ಬಿದ್ದ ನೆಲದ ನೆರಿಗೆ..

ಬಿದಲೋಟ ರಂಗನಾಥ
Published 17 ಜುಲೈ 2022, 0:15 IST
Last Updated 17 ಜುಲೈ 2022, 0:15 IST
ಸಾಂದರ್ಭಿಕ ಕಲೆಕಲೆ: ಡಿ.ಕೆ. ರಮೇಶ್‌
ಸಾಂದರ್ಭಿಕ ಕಲೆಕಲೆ: ಡಿ.ಕೆ. ರಮೇಶ್‌   

ಕಡುಗತ್ತಲ ಮೌನದಲಿ
ಬೆಳಕಿನ ಮಣಿಯೊಂದು ಉರುಳಿ ಹೋಯಿತು
ಹೋದಷ್ಟು ಹೋಗುತ್ತಲೇ ಇತ್ತು
ನೆತ್ತರು ಬಿದ್ದ ನೆಲದ ನೆರಿಗೆ
ಸುಕ್ಕಾಗೋವಷ್ಟು..!

ಅಲ್ಲೆಲ್ಲೋ
ಮುಖ ಕಾಣದ ಮನುಷ್ಯಾಕೃತಿ
ಅಳುವ ಸದ್ದು
ದಿಕ್ಕೇ ಕಾಣದ ಮಸಿಗತ್ತಲು
ಯಾರಾರೋ ನಡೆದು ಹೋಗುತ್ತಲೇ ಇದ್ದಾರೆ
ನಡೆದದ್ದೇ ರಸ್ತೆ...
ಮಾತಾಡಿದವನ ಬಿಚ್ಚು ಮಾತು ಹೊತ್ತು

ಕಾಲಿಗೆ ತೊಡರಿದ ಬೆಕ್ಕೊಂದರ
ಮಿಯ್ಯ್ಗುಡದ ದನಿ
ಬಂದೂಕಿನ ನಾಳದಿ ಅದೀಗತಾನೆ
ಗುಂಡು ಸಿಡಿದ ಕಮುಟು ಗವಲು
ನಾಸಿಕವ ಬಡಿಯುತ್ತಿದೆ

ADVERTISEMENT

ಹಸಿವಾದ ಹಸಿ ಕಂದನ ತೊದಲ ನುಡಿ
ಸುತ್ತಿ ನರಳುತ್ತಿರುವ ಮೂರು ದಿನದ
ಬಾಣಂತಿಯ ನೋವು
ಒಂದೆ ದಿನದಲ್ಲಿ ಒಣಗಿ ಸೊರಗಿದ ಹಸಿ ಚಪ್ಪರ
ಗೋಮಾಳದಲ್ಲಿ ಬಿದ್ದ ಜಿಂಕೆಯ ಹಿಕ್ಕೆಯ ಮೇಲೆ
ಸ್ವಾಧೀನದ ಹಕ್ಕು !

ಮಳೆ ಬಿದ್ದ ಮುಗಿಲಿಗೆ
ಪೊರೆಕಳಚಿ ಬಿಳಿಚಿ ನಿಲ್ಲುವ
ನಿರಾಳವಲ್ಲದ ಸೋಲು
ನಾಯಿಯೊಂದರ ಹಸಿದ ಮುಖ
ಕತ್ತಲ ಕಲ್ಪನೆಯಲಿ ತೇಲುತ್ತಿದೆ

ಹಸಿವುಂಡವರ ಬಾಗಿಲು ಮುಚ್ಚಿವೆ
ಬುಡ್ಡಿ ಬೆಳಕಿನ ನಡು ಮುರಿದು
ಮೊಣಕಾಲಿಗೆ ಇನ್ನೂ ಅಕ್ಕಿಕಾಣದ
ಹಸಿ ಮನಸುಗಳು
ಸಾವೊತ್ತ ಸಾಸಿವೆ ಚಲ್ಲುತ್ತಿವೆ !
ಯಾರದೋ ನೆಲದ ಮೇಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.