ADVERTISEMENT

ರೀಲ್ಸ್‌, ರಿಯಾಲಿಟಿ ಷೋಗಳಿಂದ ಮಕ್ಕಳನ್ನು ಪಾರು ಮಾಡಿ: ಬಾಗೂರು ಮಾರ್ಕಂಡೇಯ

ಸಿದ್ದು ಆರ್.ಜಿ.ಹಳ್ಳಿ
Published 22 ಡಿಸೆಂಬರ್ 2024, 7:04 IST
Last Updated 22 ಡಿಸೆಂಬರ್ 2024, 7:04 IST
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ‘ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಸಾಹಿತ್ಯದ ಪಾತ್ರ’ ಗೋಷ್ಠಿಯಲ್ಲಿ ಸಾಹಿತಿ ಬಾಗೂರು ಮಾರ್ಕಂಡೇಯ ಮಾತನಾಡಿದರು
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ‘ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಸಾಹಿತ್ಯದ ಪಾತ್ರ’ ಗೋಷ್ಠಿಯಲ್ಲಿ ಸಾಹಿತಿ ಬಾಗೂರು ಮಾರ್ಕಂಡೇಯ ಮಾತನಾಡಿದರು   

ಮಂಡ್ಯ: ‘ಮಕ್ಕಳು ತಮ್ಮ ಭಾವನೆಯನ್ನು ಅಭಿವ್ಯಕ್ತಿಸಲು ಗೋಡೆ ಮೇಲೆ ಗೀಚುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳದ ಪೋಷಕರು ಮಕ್ಕಳನ್ನು ಗದರುತ್ತಾರೆ. ಗೋಡೆ ಬಣ್ಣಕ್ಕೆ ನೀಡುವ ಬೆಲೆಯನ್ನು ಮಗುವಿನ ಚಿತ್ರಕ್ಕೆ ಕೊಡುತ್ತಿಲ್ಲ’ ಎಂದು ಮಕ್ಕಳ ಸಾಹಿತಿ ಬಾಗೂರು ಮಾರ್ಕಂಡೇಯ ವಿಷಾದಿಸಿದರು. 

87ನೇ ನುಡಿಜಾತ್ರೆಯ ಸಂಚಿಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್ಞಿ ತ್ರಿವೇಣಿ ವೇದಿಕೆಯಲ್ಲಿ ಶನಿವಾರ ನಡೆದ ‘ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಸಾಹಿತ್ಯದ ಪಾತ್ರ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.  

ರೀಲ್ಸ್‌, ರಿಯಾಲಿಟಿ ಷೋಗಳಲ್ಲಿ ಮಗ್ನರಾಗಿರುವ ಮಕ್ಕಳನ್ನು ಕಲೆ, ಪಠ್ಯೇತರ ಓದಿನತ್ತ ಸೆಳೆಯಬೇಕು. ಗೃಹಪಾಠದ ಹೊರೆ, ಅಂಕಗಳ ಕಾರುಬಾರಿನಲ್ಲಿ ಮಕ್ಕಳ ಸೃಜನಶೀಲತೆ ಬಾಡದಂತೆ ನೋಡಿಕೊಳ್ಳಿ. ಪ್ರತಿ ಮಗು ಭೂಮಿ ಮೇಲಿನ ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದರು. 

ADVERTISEMENT

ಸಾಹಿತಿ ಬಸು ಬೇವಿನಗಿಡದ ಮಾತನಾಡಿ, ‘ರವೀಂದ್ರನಾಥ ಠಾಗೂರ್‌, ದಿನಕರ ದೇಸಾಯಿ, ಕುವೆಂಪು, ಶಿವರಾಮ ಕಾರಂತರು, ನಾ.ಡಿಸೋಜಾ, ಎಚ್‌.ಎಸ್‌.ವೆಂಕಟೇಶಮೂರ್ತಿ ಮುಂತಾದವರು ಮಕ್ಕಳ ಸಾಹಿತ್ಯಕ್ಕೆ ಅನನ್ಯ ಕಾಣಿಕೆ ನೀಡಿದ್ದಾರೆ. ಮಕ್ಕಳ ಸಾಹಿತ್ಯ ರಚನೆ ಸರಳವಲ್ಲ, ಅವರ ಭಾವಕೋಶಕ್ಕೆ ಲಗ್ಗೆ ಇಡುವ ರೀತಿ ಬರೆಯಬೇಕು’ ಎಂದರು. 

ಸಾಹಿತಿ ಆರ್‌.ಡಿ.ರವೀಂದ್ರ ಮಾತನಾಡಿ, ‘ಮಕ್ಕಳು ಭತ್ತ ಬೆಳೆಯುವ ಗದ್ದೆಯಾಗಬೇಕೇ ಹೊರತು, ಭತ್ತ ತುಂಬುವ ಚೀಲವಾಗಬಾರದು. ಕರ್ಣನ ಬದ್ಧತೆ, ಏಕಲವ್ಯನ ಏಕಾಗ್ರತೆ, ಸತ್ಯಹರಿಶ್ಚಂದ್ರನ ಸತ್ಯನಿಷ್ಠೆ, ಪ್ರಹ್ಲಾದದ ನಂಬಿಕೆ ಈ ಗುಣಗಳು ಮಕ್ಕಳಲ್ಲಿ ಮೈಗೂಡಬೇಕೆಂದರೆ, ಪೌರಾಣಿಕ ಕಾವ್ಯ ಮತ್ತು ನೀತಿ ಪ್ರಧಾನ ಕತೆಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದರು. 

ಮಕ್ಕಳ ಸಾಹಿತಿ ಡಿ.ಎನ್‌.ಅಕ್ಕಿ ಆಶಯ ನುಡಿಗಳನ್ನಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.