ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ | ಮೊಳಗಿದ ಅರ್ಜುನ್‌ ‘ಜನ್ಯ’; ತೇಲಿದ ಜನ

‘ಸ್ವರಯಾತ್ರೆ’ಯಲ್ಲಿ ಭಾವಗೀತೆಗಳ ‘ನಾವೆ’; ಸಂಗೀತದಲೆಯ ಅಬ್ಬರ

ಮೋಹನ್‌ ಕುಮಾರ್‌ ಸಿ.
Published 22 ಡಿಸೆಂಬರ್ 2024, 7:02 IST
Last Updated 22 ಡಿಸೆಂಬರ್ 2024, 7:02 IST
ಮಂಡ್ಯದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ರಾತ್ರಿ ಚಲನಚಿತ್ರ ನಿರ್ದೇಶಕ ಅರ್ಜುನ ಜನ್ಯ ಗಾಯನ ಮೋಡಿ
ಮಂಡ್ಯದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ರಾತ್ರಿ ಚಲನಚಿತ್ರ ನಿರ್ದೇಶಕ ಅರ್ಜುನ ಜನ್ಯ ಗಾಯನ ಮೋಡಿ   

ಮಂಡ್ಯ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ರಾತ್ರಿ ಚಲನಚಿತ್ರ ನಿರ್ದೇಶಕ ಅರ್ಜುನ ಜನ್ಯ ಸಂಗೀತದಲೆಯಲ್ಲಿ ಸಾಹಿತ್ಯಪ್ರಿಯರು ತೇಲಿದರು. ಭಾವಗೀತೆಗಳಲ್ಲಿ ಆರಂಭವಾದ ಸಂಗೀತ ‘ಸ್ವರಯಾನ’ ತೀವ್ರತೆಯನ್ನು ಪಡೆಯುತ್ತಾ ಸಾಗಿತು. ಕೊನೆಕೊನೆಗೆ ಹುಚ್ಚೆದ್ದು ಕುಣಿಯುಂತೆ ಮಾಡಿತು. 

ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ಕೃಷ್ಣರಾಜ ಒಡೆಯರ್‌ ಪ್ರಧಾನ ವೇದಿಕೆಯಲ್ಲಿ ಡಿ.ಎಸ್‌.ಕರ್ಕಿ ಅವರ ‘ಹಚ್ಚೇವು ಕನ್ನಡದ ದೀಪ’ ಭಾವಗೀತೆ ಮೂಲಕ ಆರಂಭವಾದ ಸಂಗೀತ ಗೋಷ್ಠಿಯು ಸ್ವರಯಾನಕೆ ಮುನ್ನುಡಿ ಬರೆಯಿತು.  

ಜಿ.ಎಸ್‌.ಶಿವರುದ್ರಪ್ಪ ಅವರ ‘ಕಾಣದ ಕಡಲಿಗೆ ಹಂಬಲಿಸಿದೆ ಮನ.. ಕಾಣಬಲ್ಲೆನೆ ಒಂದು’ ಕವಿತೆ ಹಾಡಿದ ಗಾಯಕ ಸುನಿಲ್‌ ಎಲ್ಲರ ಚಪ್ಪಾಳೆ ಗಿಟ್ಟಿಸಿದರು. ದ.ರಾ.ಬೇಂದ್ರೆ ಅವರ ‘ನಾಕುತಂತಿ’ಯನ್ನು ಗಾಯಕಿ ಇಂದು ನಾಗರಾಜ್ ಹಾಡಿದರೆ, ಕೆ.ಎಸ್‌.ನರಸಿಂಹ ಸ್ವಾಮಿ ಅವರ ‘ದೀಪವೂ ನಿನ್ನದೇ ಗಾಳಿಯೂ ನಿನ್ನದೇ’ ಅನ್ನು ಸುಶ್ರಾವ್ಯವಾಗಿ ಸಾಕ್ಷಿ ಕಲ್ಲೂರ್‌ ಹಾಡಿ ನಾದದಲೆಯಲ್ಲಿ ತೇಲಿಸಿದರು. 

ADVERTISEMENT

ಸಿ.ಅಶ್ವಥ್ ಸಂಗೀತ ಸಂಯೋಜನೆಯ ಶಿಶುನಾಳ ಷರೀಫರ ‘ತರವಲ್ಲ ತಗಿ ನಿನ್ನ ತಂಬೂರಿ ಸ್ವರ’ ಹಾಡಿನ ಲಯ ಎಲ್ಲರನ್ನೂ ಕುಣಿಸಿತು. ಭಾವಗೀತೆಗಳಿಗೆ ಹೊಸದಾಗಿ ಹೊಸದಾಗಿ ಸಂಗೀತ ಭಾವವನ್ನು ತುಂಬಿದ್ದ ಅರ್ಜುನ್‌ ಜನ್ಯ ನಾದಕ್ಕೆ ಪ್ರೇಕ್ಷಕರು ತಲೆದೂಗಿದರು. ಭಾವಗೀತೆಯ ಸಂಗೀತ ಯಾನವು ಸಿನಿಮಾಗೀತೆಗಳತ್ತ ಹೊರಡಿತು. ಈ ವೇಳೆ ಪ್ರೇಕ್ಷಕರ ಒತ್ತಾಯವೂ ಜೋರಾದ ಚಪ್ಪಾಳೆ ಮುಗಿಲು ಮುಟ್ಟಿತ್ತು.

ಗಾಯಕ ಸುನಿಲ್ ಹಾಡಿದ ಭಜರಂಗಿ–2 ಚಿತ್ರದ ‘ನೀ ಸಿಗೋವರೆಗೂ ನಗೊವರೆಗೂ ಕಾದಿರುವೆ’ ಗೀತೆ ಮಾಧುರ್ಯ ಸೃಷ್ಟಿಸಿತು. ನಂತರ ‘ವೇದ’ ಚಿತ್ರದ ‘ಅರಳದ ಮಲ್ಲಿಗೆ’ ಗೀತೆಯನ್ನು ಹಾಡಿದ ಗಾಯಕಿ ‌ಇಂದು ನಾಗರಾಜ್, ಗೀತೆಯ ಮಧ್ಯದಲ್ಲಿ ಸ್ವರ ಪ್ರಸ್ತಾರವನ್ನು ಮನೋಧರ್ಮದಲ್ಲಿ ವಿಸ್ತರಿಸಿದ ಪರಿಗೆ ಸಹೃದಯರು ಮನಸೋತರು. 

‘ಉ‍ಪಾಧ್ಯಕ್ಷ–2’ ಚಿತ್ರದ ‘ನನಗೆ ನೀನಗೆ ನಾನು..’, ‘ಚಕ್ರವರ್ತಿ’ ಚಿತ್ರದ ‘ಮತ್ತೆ ಮಳೆಯಾಗಿದೆ’ ಹಾಡುಗಳನ್ನು ಹಾಡಿದ ಸಾಕ್ಷಿ ಹಾಗೂ ಸುನಿಲ್ ಜೋಡಿ ಶಿಳ್ಳೆ ಚಪ್ಪಾಳೆ ಗಿಟ್ಟಿಸಿತು. ಪ್ರೇಕ್ಷಕರು ಕೈಗಳಲ್ಲಿ ಅಲೆಗಳನ್ನು ಬರೆದು ಅಂಗಳದಲ್ಲಿ ಸಂಚಲನ ಮೂಡಿಸಿದರು. 

‘ಲವ್ 360’ ಆಲ್ಬಂ ಗೀತೆ ‘ಜಗವೇ ನೀನು ಗೆಳತಿಯೇ’ ಅನ್ನು ಗಾಯಕ ವ್ಯಾಸರಾಜ್ ಸೋಸಲೆ ಹಾಡಿ ತಲೆದೂಗಿಸಿದರು. ಈ ವೇಳೆ ಅರ್ಜುನ್‌ ಜನ್ಯ ‘ಭಜರಂಗಿ’ ಚಿತ್ರದ ಶೀರ್ಷಿಕೆ ಗೀತೆ ಹಾಡಿದರಲ್ಲದೇ ಜನರ ಮಧ್ಯೆಯೇ ಸಾಗಿ ಹುಚ್ಚೆಬ್ಬಿಸಿದರು. 

ನಿರೂಪಿಕಿ ಅನುಶ್ರೀ ಚಟ‍ಪಟ ಮಾತುಗಳಲಿ ಎಲ್ಲರನು ಸೆಳೆದರು.  

ಗಾಯಕರಾದ ಇಂದು ನಾಗರಾಜ್ ಸಾಕ್ಷಿ ಕಲ್ಲೂರ್‌ ವ್ಯಾಸರಾಜ್ ಸೋಸಲೆ ಸುನಿಲ್ ಗಾಯನ ಲಯರಿ 
ಜಮಾಯಿಸಿದ್ದ ಪ್ರೇಕ್ಷಕರು 
ನಿರೂಪಕಿ ಅನುಶ್ರೀ ಮಾತಿನ ಲಹರಿ.. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.