ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ: ಸಾಂಸ್ಕೃತಿಕ ವೈಭವಕ್ಕೆ ಮನಸೋತ ಜನ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2024, 5:29 IST
Last Updated 23 ಡಿಸೆಂಬರ್ 2024, 5:29 IST
<div class="paragraphs"><p>ಮಂಡ್ಯ ನಗರದ ಕಲಾಮಂದಿರದಲ್ಲಿ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು</p></div>

ಮಂಡ್ಯ ನಗರದ ಕಲಾಮಂದಿರದಲ್ಲಿ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು

   

ಮಂಡ್ಯ: ಜೋಗಿಪದ, ಭರತ ನಾಟ್ಯ, ಶಾಸ್ತ್ರೀಯ ಸಂಗೀತ, ಜನಪದ ಗೀತ ಗಾಯನ ಸೇರಿದಂತೆ ಯಕ್ಷಗಾನ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಕಳೆದ ಮೂರು ದಿನಗಳಿಂದ ಕಲಾಪ್ರೇಮಿಗಳಿಗೆ ಸಾಂಸ್ಕೃತಿಕ ರಸದೌತಣ ನೀಡಿದವು. ಸಮ್ಮೇಳನದ ಸಮಾರೋಪದ ದಿನವಾದ ಭಾನುವಾರ ಸಾಂಸ್ಕೃತಿಕ ವೈಭವಕ್ಕೆ ತೆರೆ ಬಿದ್ದಿತು. 

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೂರದೂರಿನಿಂದ ಆಗಮಿಸಿದ್ದ ಕಲಾವಿದರು ತಮ್ಮ ಕಲಾ ಪ್ರದರ್ಶನದಿಂದ ಪ್ರೇಕ್ಷಕರ ಮನ ಗೆದ್ದರು. ಗಾಯಕ ಬಸವಣ್ಣ ಅವರು ಹಾಡಿದ ಮಂಟೇಸ್ವಾಮಿ ಮತ್ತು ಸಂತ ಶಿಶುನಾಳ ಷರೀಫರ ಹಾಡಿಗೆ ತಬಲ ನುಡಿಸಿದ ಅಂಧ ಕಲಾವಿದ ಸತ್ಯನಾರಾಯಣ್‌ ಅವರಿಗೆ ಪ್ರೇಕ್ಷಕ ಪ್ರಭು ಮನಸೋತರು.

ADVERTISEMENT

ಅಂಬೇಡ್ಕರ್‌ ಭವನದಲ್ಲಿ ಮಂಡ್ಯದ ಪುಟ್ಟಮಂಚಮ್ಮ ಮಾರೇಹಳ್ಳಿ ಮತ್ತು ಸಿದ್ದಮ್ಮ ತಂಡದಿಂದ ತತ್ವಪದ, ಎಚ್‌.ಎಂ.ಮಹದೇವ ಹೆಮ್ಮಿಗೆ ತಂಡದಿಂದ ಜನಪದ ಗೀತೆ, ಉತ್ತರ ಕನ್ನಡದ ಕೃಷ್ಣಮೂರ್ತಿ ಭಟ್‌ ತಂಡದಿಂದ ದಾಶವಾಣಿ, ಸಿದ್ದಲಿಂಗಯ್ಯ ಹಿರೇಮಠ ತಂಡದಿಂದ ಸಂಗೀತ ಕಾರ್ಯಕ್ರಮ ಹೀಗೆ... ವೈವಿಧ್ಯಮಯ ಕಾರ್ಯಕ್ರಮಗಳು ಪ್ರೇಕ್ಷಕರಿಗೆ ಮುದ ನೀಡಿದವು. 

ಮೈಸೂರು ಕಾರ್ತಿಕ್‌ ಕುಮಾರ್‌, ಬೆಳಗಾವಿ ಕೆ.ಸೌಭಾಗ್ಯಲಕ್ಷ್ಮಿ ವೀ.ಕೊಪ್ಪದ ಅವರಿಂದ ಭರತನಾಟ್ಯ, ಹಾವೇರಿ ಬಸವರಾಜು ಕೋಳೂರ ಗಂಗಾಪರಮೇಶ್ವರಿ ಡೊಳ್ಳಿನ ಸಂಘದಿಂದ ಜನಪದ ನೃತ್ಯ, ಮಂಗಳೂರಿನ ರೆಮಾನಾ ಪಿರೇನಾ ಪಳ್ನೀರ್‌ ನೃತ್ಯ ಪ್ರದರ್ಶನ, ಶಿವಮೊಗ್ಗದ ಗುಡ್ಡಪ್ಪ ಜೋಗಿ ಮತ್ತು ತಂಡದಿಂದ ಜೋಗಿಪದ ಸೇರಿದಂತೆ ಶಾಸ್ತ್ರೀಯ ಸಂಗೀತ, ಕನ್ನಡ ಗೀತಗಾಯನ, ನೃತ್ಯ ರೂಪಕ ಇವೆಲ್ಲವೂ ನೋಡಗರ ಕಣ್ಮನ ಸೆಳೆದವು.

ಕಲಾಮಂದಿರದಲ್ಲಿ ಕಳೆದ ಮೂರು ದಿನದಿಂದ ಮಂಡ್ಯದಲ್ಲಿ 17ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಗಮನ ಸೆಳೆದವು. ಅವುಗಳಲ್ಲಿ ಮಂಡ್ಯ ಸದ್ವಿದ್ಯಾ ತಂಡದಿಂದ ಬೊಮ್ಮನಹಳ್ಳಿ ಕಿಂದರ ಜೋಗಿ ನಾಟಕ, ಕೆ.ಮಲ್ಲರಾಜು ತಂಡದಿಂದ ‘ಹೆಬ್ಬೆಟ್ಟು’ ಸಾಮಾಜಿಕ ನಾಟಕ, ಹನಕೆರೆ ವಿವೇಕ ತಂಡದಿಂದ ಮೂಡಲಪಾಯ ಯಕ್ಷಗಾನ ಪ್ರದರ್ಶನಕ್ಕೆ ಪ್ರೇಕ್ಷಕರು ಮನಸೋತರು. 

ಮಂಡ್ಯ ನಗರದ ಅಂಬೇಡ್ಕರ್‌ ಭವನದಲ್ಲಿ ಮೈಸೂರಿನ ಮನು ವಿದ್ಯಾಕಲ್ಚರಲ್‌ ಫೌಂಡೇಷನ್ ತಂಡದ ಕಲಾವಿದರು ‘ನೃತ್ಯರೂಪಕ’ ಪ್ರದರ್ಶನ ನೀಡಿದರು

ಬೆಂಗಳೂರಿನ ದೇವನಹಳ್ಳಿ ದೇವರಾಜು ಪರಿವರ್ತನ ಕಲಾ ಸಂಸ್ಥೆಯಿಂದ ‘ಎದ್ದೇಳು ಕನ್ನಡಿಗ’ ಮೂಕ ನಾಟಕ, ಸೆಂಟರ್‌ ಆಫ್‌ ಇಂಡಿಯಾ ಟ್ರೇಡ್‌ ಯೂನಿಯನ್ಸ್‌ ಸಮಿತಿಯ ಮಹಿಳಾ ತಂಡದಿಂದ ‘ನ್ಯಾಯ ಕೇಳಿದ ನಿಂಗವ್ವ’ ನಾಟಕ, ವಿಜಯನಗರ ಕನ್ನಡ ಕಲಾ ಸಂಘದ ಟಿ.ಬಿ. ಡ್ಯಾಂ ತಂಡದಿಂದ ಮರಣ ಶಾಸನ ನಾಟಕ ಸೇರಿದಂತೆ ಯಕ್ಷಗಾನ, ನಗೆ ನಾಟಕಗಳು ಪ್ರೇಕ್ಷಕರ ಮೆಚ್ಚುಗೆ ಪಡೆದವು.

ಸಂತ ಶಿಶುನಾಳ ಸರೀಫರ ಹಾಡಿಗೆ ಅಂಧ ಕಲಾವಿದ ಸತ್ಯನಾರಾಯಣ್‌ ಅವರು ತಬಲ ಬಾರಿಸಿದರು

Cut-off box - 200 ತಂಡಗಳು ಭಾಗಿ ಒಟ್ಟಾರೆಯಾಗಿ ಸಮ್ಮೇಳನದಲ್ಲಿ 200ಕ್ಕೂ ಹೆಚ್ಚು ಸಾಂಸ್ಕೃತಿಕ ತಂಡಗಳು ಭಾಗವಹಿಸಿದ್ದವು. ನಗರದ ಅಂಬೇಡ್ಕರ್‌ ಭವನದಲ್ಲಿ ಸಂಗೀತ ಕಾರ್ಯಕ್ರಮಗಳ ನೃತ್ಯ ಪ್ರದರ್ಶನವಿದ್ದರೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಯಕ್ಷಗಾನ ಸಾಮಾಜಿಕ ನಾಟಕಗಳು ಪೌರಾಣಿಕ ನಾಟಕಗಳು ಕಿಂದರಿ ಜೋಗಿ ನಾಟಕ ಹಾಸ್ಯ ನಾಟಕಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮ್ಮೇಳನ ನಡೆಯುವ ಸ್ಥಳದಲ್ಲಿ ಆಯೋಜಿಸಿದ್ದರೆ ನಮಗೆ ಸಂತೋಷವಾಗುತ್ತಿತ್ತು. ಆದರೆ ನಗರದೊಳಗೆ ಕಾರ್ಯಕ್ರಮಗಳಿಗೆ ಅವಕಾಶ ನೀಡಿ ಪ್ರೇಕ್ಷಕರಿಂದ ವಂಚಿತರಾಗಿದ್ದೇವೆ ಎಂಬ ಭಾವನೆ ಮೂಡಿದೆ. ಏನೇ ಇರಲಿ ಸಮ್ಮೇಳನಕ್ಕಾಗಿ ನಾವು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸಮಾಧಾನವಿದೆ ಎನ್ನುತ್ತಾರೆ ನೃತ್ಯ ಕಲಾವಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.