ADVERTISEMENT

ವ್ಯಕ್ತಿ, ಅಭಿವ್ಯಕ್ತಿ ಸಂಘರ್ಷದ ನಡುವೆ ಯುವ ಲೇಖಕ: ವಿಕ್ರಮ ವಿಸಾಜಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2024, 5:21 IST
Last Updated 23 ಡಿಸೆಂಬರ್ 2024, 5:21 IST
ಹೊಸ ತಲೆಮಾರಿನ ಸಾಹಿತ್ಯ ಗೋಷ್ಠಿಯಲ್ಲಿ ವಿಕ್ರಂ ವಿಸಾಜಿ ಮಾತನಾಡಿದರು
ಹೊಸ ತಲೆಮಾರಿನ ಸಾಹಿತ್ಯ ಗೋಷ್ಠಿಯಲ್ಲಿ ವಿಕ್ರಂ ವಿಸಾಜಿ ಮಾತನಾಡಿದರು   

‘ವ್ಯಕ್ತಿ, ಅಭಿವ್ಯಕ್ತಿ ಸಂಘರ್ಷಗಳ ನಡುವೆ ಯುವ ತಲೆಮಾರು ಸಾಹಿತ್ಯ ರಚಿಸಬೇಕಾಗಿದೆ’ ಎಂದು ಲೇಖಕ ವಿಕ್ರಮ ವಿಸಾಜಿ ಅಭಿಪ್ರಾಯಪಟ್ಟರು.

ಸಂಚಿಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್ಞಿ ತ್ರಿವೇಣಿ ವೇದಿಕೆಯಲ್ಲಿ ಭಾನುವಾರ ‘ಹೊಸ ತಲೆಮಾರಿನ ಸಾಹಿತ್ಯ’ ಕುರಿತು ನಡೆದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸಮಷ್ಠಿ ಮತ್ತು ಬಹುತ್ವ ಪ್ರಜ್ಞೆಯನ್ನು ಹೊಸ ತಲೆಮಾರಿನ ಲೇಖಕರು ತಮ್ಮ ಸಾಹಿತ್ಯದಲ್ಲಿ ಒಳಗೊಳ್ಳುತ್ತಿರುವುದು ಸಂತಸದಾಯಕ’ ಎಂದು ಹೇಳಿದರು.

‘ಹೊಸ ತಲೆಮಾರಿನ ಕವಿಗಳು ಭಾಷಾ ಸಂವೇದನೆ ಹಾಗೂ ಅಭಿವ್ಯಕ್ತಿಯನ್ನು ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಕನ್ನಡಿಯಲ್ಲಿ ಕಾಣಲಾಗದ ಸಂಕೀರ್ಣತೆಗಳನ್ನು ತೋರಿಸಲು ಹೊಸ ತಲೆಮಾರಿನ ಕವಿಗಳು ಹಂಬಲಿಸುತ್ತಿದ್ದಾರೆ’ ಎಂದರು.

ADVERTISEMENT

‘ಹೊಸ ತಲೆಮಾರಿನ ಸಾಹಿತ್ಯವು ವೈವಿಧ್ಯಮಯವಾಗಿ ಬೆಳೆಯುತ್ತಿದೆ. ವಿರಹ, ಪ್ರೀತಿ ಮತ್ತು ಪ್ರಣಯವೇ ವಸ್ತುವಾಗಿದ್ದ ಸಾಹಿತ್ಯದಲ್ಲಿ ಅವುಗಳನ್ನು ಮೀರಿದ ವಸ್ತು ವಿಷಯಗಳು ಬರುತ್ತಿವೆ’ ಎಂದು ನಿವೃತ್ತ ಪ್ರಾಧ್ಯಾಪಕ ಸಿ.ಕೆ.ಜಗದೀಶ್ ಹೇಳಿದರು.

‘ಹೊಸ ತಲೆಮಾರಿನ ಕನ್ನಡ ಸಾಹಿತ್ಯ ಮತ್ತು ಬಹುಮುಖಿ ಕ್ಷೇತ್ರದ ಬರಹಗಾರರು’ ಕುರಿತು ಮಾತನಾಡಿದ ಮೇಘನಾ ಸುಧೀಂದ್ರ, ‘ಐಟಿ, ಬಿಟಿ ಉದ್ಯೋಗಿಗಳು ಕೂಡ ಕೆಲಸದ ಒತ್ತಡದ ನಿವಾರಣೆಗೆ ವಾರಾಂತ್ಯದಲ್ಲಿ ತಮ್ಮ ಕೆಲಸದ ತಲ್ಲಣ, ಸಂವೇದನೆಯನ್ನು ಸಾಹಿತ್ಯದ ಪ್ರಕಾರಗಳಲ್ಲಿ ದಾಖಲಿಸುತ್ತಿದ್ದಾರೆ. ಆ ಮೂಲಕ ಒತ್ತಡದಿಂದ ಬಿಡುಗಡೆ ಹೊಂದುತ್ತಿದ್ದಾರೆ. ಸ್ತ್ರೀವಾದಿ ಸಾಹಿತ್ಯ ಅಡುಗೆ ಮನೆ ಸಾಹಿತ್ಯವಾಗದೆ ಇಡೀ ಸ್ತ್ರೀ ಸಮುದಾಯದ ಸಂವೇದನೆಯನ್ನು ಕಟ್ಟಿ ಕೊಡುತ್ತಿದೆ’ ಎಂದರು.

‘ಚರಿತ್ರೆ ಕೇಂದ್ರಿತ ಸಾಹಿತ್ಯ ಪ್ರಕಾರ’ದ ಕುರಿತು ಸಹನ ವಿಜಯ ಕುಮಾರ್ ಮಾತನಾಡಿ, ‘ಐತಿಹಾಸಿಕ ವಸ್ತುವುಳ್ಳ ಸಾಹಿತ್ಯವೂ ಸತ್ಯ ನಿಷ್ಠೆಯಿಂದ ಕೂಡಿರಬೇಕು. ಚಾರಿತ್ರಿಕ ವಿಷಯಗಳನ್ನು ಕಾದಂಬರಿಗೆ ಆಯ್ಕೆ ಮಾಡಿಕೊಳ್ಳುವಾಗ ಸತ್ಯ ಮತ್ತು ಕಲ್ಪನೆಗಳ ನಡುವೆ ಸಮತೋಲನ ಇರಬೇಕು. ಚಾರಿತ್ರಿಕ ವಿಷಯಗಳ ಸತ್ಯಶೋಧನೆಗೆ ಭಾರತೀಯ ಬಹು ಭಾಷೆಗಳ ಅರಿವು ಅವಶ್ಯ’ ಎಂದು ಹೇಳಿದರು.

‘ಇತ್ತೀಚಿನ ಸಾಹಿತ್ಯದ ವಸ್ತು ವೈವಿಧ್ಯ’ ಕುರಿತು ರಮೇಶ ಎಸ್. ಕತ್ತಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.