ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ: ಲಯತಪ್ಪಿದ ಕಲಾತಂಡಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 4:31 IST
Last Updated 20 ಡಿಸೆಂಬರ್ 2024, 4:31 IST
   

ಮಂಡ್ಯ: ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ 157 ಕಲಾತಂಡಗಳಿಂದ 2250 ಕಲಾವಿದರು ಭಾಗವಹಿಸಿದ್ದು, ತಂಡಗಳ ನಡುವೆ ಅಂತರ ಹೆಚ್ಚಿದ ಕಾರಣ ಮೆರವಣಿಗೆಯ ಸೊಬಗು ಕಳೆಗುಂದಿತು‌.

ಕಲಾತಂಡಗಳ ನಡುವೆ ಸಮನ್ವಯತೆ ಸಾಧಿಸಿ ಒಟ್ಟಾಗಿ ಕರೆದೊಯ್ಯಬೇಕಿದ್ದ ಮೆರವಣಿಗೆ ಸಮಿತಿ ಪದಾಧಿಕಾರಿಗಳು ಈ ಬಗ್ಗೆ ಕಾಳಜಿ ತೋರದ ಕಾರಣ ಕಲಾತಂಡಗಳು ಲಯ ತಪ್ಪಿದವು.

ಪ್ರೇಕ್ಷಕರ ಕೊರತೆ:

ADVERTISEMENT

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಜನರು ರಸ್ತೆಯ ಎರಡೂ ಬದಿ ಕಿಕ್ಕಿರಿದು ಸೇರಿರುತ್ತಾರೆ ಎಂಬ ಕಲಾವಿದರ ನಿರೀಕ್ಷೆ ಹುಸಿಯಾಯಿತು.

ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಮಾತ್ರ ಜನಸಂದಣಿ ಇದ್ದುದನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆ ಕಲೆಯನ್ನು ಕಣ್ತುಂಬಿಕೊಳ್ಳಬೇಕಾದ ಕಲಾಭಿಮಾನಿಗಳ ಕೊರತೆ ತೀವ್ರ ಕಾಡಿತು.

ಹೀಗಾಗಿ ಕಲಾವಿದರು ಕೆಲವು ಕಡೆ ಕಲಾ ಪ್ರದರ್ಶನ ನೀಡದೆ ಕೈ ಬೀಸಿಕೊಂಡು ಮುಂದೆ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು

ಶಾಲಾ ಮಕ್ಕಳ ಹರ್ಷೋದ್ಗಾರ

ರಸ್ತೆಯ ಇಕ್ಕೆಲಗಳಲ್ಲಿ ನೆರದಿದ್ದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಕಲಾವಿದರನ್ನು ನೋಡಿ ಹರ್ಷೋದ್ಗಾರ ಮಾಡಿದರು.

ಯುವಕ- ಯುವತಿಯರು ಹಾಗೂ ಶಾಲಾ ಮಕ್ಕಳು ಕಲಾವಿದರೊಂದಿಗೆ ನೃತ್ಯ ಮಾಡುತ್ತಾ ಸಂಭ್ರಮಿಸಿದರು.

ಮಹಿಳೆಯರು ಗಾರುಡಿಗೊಂಬೆ ವೀರಗಾಸೆ ಕಲಾವಿದರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.