ADVERTISEMENT

ಕನ್ನಡ ಹಬ್ಬದಲ್ಲಿ ಮಿಂಚಿದ ‘ಸ್ವರ ಯಾತ್ರೆ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2024, 4:32 IST
Last Updated 21 ಡಿಸೆಂಬರ್ 2024, 4:32 IST
   

ಮಂಡ್ಯ: ಬೆಳಿಗ್ಗೆಯಿಂದ ರಾತ್ರಿವರೆಗೆ ಭಾಷಣಗಳು, ವಿಚಾರಗೋಷ್ಠಿಗಳಲ್ಲಿ ತಲ್ಲೀನರಾಗಿದ್ದ ಸಹಸ್ರಾರು ಮಂದಿಗೆ ‘ನುಡಿ ಜಾತ್ರೆಯಲ್ಲಿ ಸ್ವರ ಯಾತ್ರೆ’ ಎಂಬ ಸಂಗೀತ–ನೃತ್ಯ ಕಾರ್ಯಕ್ರಮವು ಮನರಂಜನೆಯ ರಸದೌತಣವನ್ನು ಉಣಬಡಿಸಿತು.

ರಾತ್ರಿ 8ರ ವೇಳೆಗೆ ಶುರುವಾದ ಗಾಯನ–ನೃತ್ಯ ಕಾರ್ಯಕ್ರಮ ತಡರಾತ್ರಿವರೆಗೂ ನಡೆಯಿತು. ಸಂಗೀತ ನಿರ್ದೇಶಕ ಸಾಧು ಕೋಕಿಲ ತಂಡದ ಗಾಯಕರು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಕನ್ನಡ ಭಾಷೆಯ ಸೊಬಗು ಮತ್ತು ಕನ್ನಡ ನಾಡಿನ ವೈವಿಧ್ಯತೆಯನ್ನು ಬಿಂಬಿಸುವ ಹಾಡುಗಳು ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಶುಕ್ರವಾರ ಸಂಜೆ ಜನರನ್ನು ರಂಜಿಸಿತು. ಎದೆ ಝಲ್ಲೆನಿಸುವಂತ ಸಂಗೀತದ ಬೀಟ್‌ಗಳಿಗೆ ಜನ ಕೇಕೆ, ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣ, ಉಷಾ ಕೋಕಿಲ, ಸಾಧು ಕೋಕಿಲ ಮತ್ತಿತರರು ಚಲನಚಿತ್ರ ಗೀತೆ, ಜಾನಪದ ಶೈಲಿಯ ಗೀತೆಗಳ ಗಾಯನದ ಮೂಲಕ ಶ್ರೋತೃಗಳ ಮನಕ್ಕೆ ಮುದ ನೀಡಿದರು.

‘ಹಾಡಿದವರ ಮನವಾ ಬಲ್ಲೆ, ನೀಡಿದವರ ನಿಜವಾ ಬಲ್ಲೆ...ಸಿದ್ದಯ್ಯ ಸ್ವಾಮಿ ಬಂದ...’ ಹಾಡನ್ನು ತಾರಕ ಸ್ವರದಲ್ಲಿ ಹಾಡಿದ ಉಷಾ ಕೋಕಿಲ ಅವರು ನಂತರ ‘ನಾನು ಕೋಳಿಕೆ ರಂಗಾ...’ದ ಮೂಲಕ ಗಮನ ಸೆಳೆದರು.

ನಂತರ ಸಾಧು ಕೋಕಿಲ ಅವರು ‘ಕನ್ನಡಾ....ರೋಮಾಂಚನವೀ ಕನ್ನಡ..’ ಎಂಬ ಹಾಡಿನ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆ ಇರಿಸಿದರು. ರಾಜೇಶ್ ಕೃಷ್ಣ ಹಾಡಿದ ‘ಉಸಿರೇ, ಉಸಿರೇ ನೀ ಉಸಿರ ಕೊಲ್ಲಬೇಡ’ ಎಂಬ ಹಾಡಿಗೆ ಚಪ್ಪಾಳೆ ಮತ್ತು ಶಿಳ್ಳೆಗಳ ಮೂಲಕ ಜನರು ಪ್ರೋತ್ಸಾಹ ತುಂಬಿದರು.

‘ಈ ವರ್ಷ ಇಷ್ಟೊಂದು ಸಂಖ್ಯೆಯ ಜನ ಸೇರಿದ ಕಾರ್ಯಕ್ರಮ ನನಗೆ ಇದೇ ಮೊದಲು’ ಎಂದು ಹೇಳಿ ರಾಜೇಶ್ ಕೃಷ್ಣನ್ ಮಂಡ್ಯದ ಜನರ ಅಭಿಮಾನಕ್ಕೆ ಧನ್ಯವಾದ ಹೇಳಿದರು.   

ಕನ್ನಡ ರೋಮಾಂಚನವೀ ಕನ್ನಡ..

ಕಾರ್ಯಕ್ರಮದ ಆರಂಭಕ್ಕೂ ಮೊದಲು ಮಕ್ಕಳ ನೃತ್ಯ ಕಾರ್ಯಕ್ರಮದ ಮೂಲಕ ಮೊದಲ ದಿನದ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿತು. ನಾಡಿನ ಉದ್ದಗಲದ ಸಾಂಸ್ಕೃತಿಕ ವೈಭವವನ್ನು ಮಕ್ಕಳು ನಾಟ್ಯದ ಮೂಲಕ ಪ್ರಸ್ತುತಪಡಿಸಿದರು.

ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ವಿಧಾನ ಸಭೆಯಲ್ಲಿ ಯಾವುದೋ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾರೆ. ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳೇ ಬೇರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.