ADVERTISEMENT

ಅಪ್ಪು ಮತ್ತು ಅಪ್ಪುವಿನ ತಪ್ಪು...

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 19:30 IST
Last Updated 29 ಸೆಪ್ಟೆಂಬರ್ 2018, 19:30 IST

ಮನೆಯಲ್ಲಿ ಸಡಗರ ಸಂಭ್ರಮದ ವಾತಾವರಣ ಎಲ್ಲೆಡೆ ತುಂಬಿತ್ತು. ಹಿರಿಯರೆಲ್ಲರೂ ಪಂಚಾಯ್ತಿ ಮಾಡುತ್ತಿದ್ದರು. ಹೆಂಗಸರು ಅಡುಗೆ ಕೆಲಸದಲ್ಲಿ ಮುಳುಗಿದ್ದರು. ಮಕ್ಕಳು ಮನೆಯನ್ನೆಲ್ಲ ಒಂದು ಮಾಡುವ ಹಾಗೆ ಕುಣಿದು ಕುಪ್ಪಳಿಸುತ್ತಿದ್ದರು.

ಇವರ ನಡುವೆ ಅಪ್ಪು ತನ್ನ ತುಂಟಾಟ ಮಾಡುತ್ತ ಅತ್ತಿತ್ತ ಓಡಾಡುತ್ತಿದ್ದ. ಅಪ್ಪು ಶುದ್ಧ ತರಲೆ. ಮುಟ್ಟಬೇಡ ಎಂದು ಹೇಳಿದರೆ ಆ ವಸ್ತುವನ್ನು ಮುಟ್ಟಿಯೇ ತಿರುವೆನೆಂಬ ಭಂಡತನದ ಸ್ವಭಾವ ಅವನದಾಗಿತ್ತು. ಹೀಗಿರುವಾಗ ಅಪ್ಪು ಬಂದನೆಂದರೆ ಮನೆಯ ವಸ್ತುಗಳೆಲ್ಲ ಅಪ್ಪಚ್ಚಿಯಾಗೋ ಮುನ್ನ ಮಾಳಿಗೆ ಮೇಲೆ ಎತ್ತಿ ಇಡುತ್ತಿದ್ದರು. ಕಾರಣ ಈತನ ಕೈಯಲ್ಲಿ ಚಿನ್ನದ ಕೆಲಸಕ್ಕೆಂದು ಬಳಸುವ ಸಣ್ಣ ಕಬ್ಬಿಣದ ಸುತ್ತಿಗೆ ಇರುತ್ತಿತ್ತು. ಇದೇ ಅವನ ಅಚ್ಚುಮೆಚ್ಚಿನ ಆಟಿಕೆಯಾಗಿತ್ತು. ಎಲ್ಲೇ ಹೋದರೂ ಇವನ ಬಾಲದಂತೆ ಅದು ಜೊತೆಗೆ ಇರಬೇಕಿತ್ತು. ಹಾಗಾಗಿ ಬಂದವರೆಲ್ಲರ ಗಮನವನ್ನು ಈತ ಬಹುಬೇಗ ಸೆಳೆಯುತ್ತಿದ್ದ. ಅದಲ್ಲದೆ ನೋಡಲು ಬಲು ಚೂಟಿಯಾಗಿದ್ದು ಮುದ್ದು ಮುದ್ದಾಗಿದ್ದ.

ಸದಾ ಕಾಲಿಗೆ ಚಕ್ರ ಕಟ್ಟಿದ ಹಾಗೆ ಮನೆಯೊಳಗೆ ಹೊರಗೆ ಓಡಾಡುವ ಅಪ್ಪು ಆ ದಿನ ಮನೆಯ ಒಂದು ಕೋಣೆಗೆ ನುಗ್ಗಿದ. ಕೋಣೆಯಲ್ಲಿದ್ದ ಅಲಂಕಾರದ ಸಾಮಗ್ರಿಗಳತ್ತ ದೃಷ್ಟಿ ನೆಟ್ಟ. ನೇತಾಕಿದ್ದ ಬಳೆಯನ್ನೆಲ್ಲ ಒಮ್ಮೆಗೇ ಬಾಚಿದ, ನೆಲಕ್ಕೆ ಕೆಡವಿದ. ಪಕ್ಕದಲ್ಲಿದ್ದ ಪೌಡರ್ ಡಬ್ಬದತ್ತ ಕೈ ಹಾಕಿ ಕೋಣೆಯಲೆಲ್ಲ ಚೆಲ್ಲಿ ಹರಡಿದ. ಅಲ್ಲಿದ್ದ ಇನ್ನು ಹಲವು ವಸ್ತುಗಳು ಅಪ್ಪುವಿನ ಕೈ ಸೇರಿ ಚೂರಾಗತೊಡಗಿದವು. ಅಷ್ಟೊತ್ತಿಗಾಗಲೇ ಇವನ ಅವಸ್ಥೆಯನ್ನು ನೋಡಿ ಲಕ್ಷ್ಮಿ ಅಮ್ಮನ ಕಿವಿಗೆ ಸುದ್ದಿ ಮುಟ್ಟಿಸಿದಳು. ಅಮ್ಮ ಅಡುಗೆ ಮನೆಯಿಂದ ಗುಡುಗುತ್ತಲೇ ಅಪ್ಪುವಿನತ್ತ ಬಂದು ಅವನಿಗೆ ಸರಿಯಾಗಿ ನಾಲ್ಕೈದು ಏಟು ಬಾರಿಸಿದರು. ಅಪ್ಪುವಿಗೆ ಅಮ್ಮನ ಪೆಟ್ಟಿನ ನೋವಿಗಿಂತ ಲಕ್ಷ್ಮಿ ದೂರದಲ್ಲಿ ನಿಂತು ಗೇಲಿಮಾಡಿ ಹೀಯಾಳಿಸಿ ನಗುತ್ತಿರುವುದು ಸಹಿಸಲಾಗಲಿಲ್ಲ. ಸಿಟ್ಟು ನೆತ್ತಿಗೇರಿತ್ತು. ಸೇಡು ತೀರಿಸಿಕೊಳ್ಳಲು ಸಂಚನ್ನು ಸಿದ್ಧಗೊಳಿಸಿ ಅವಕಾಶಕ್ಕಾಗಿ ಅಳುತ್ತಾ ಕಾಯುತ್ತಿದ್ದ.

ADVERTISEMENT

ಅಷ್ಟೊತ್ತಿಗಾಗಲೆ ಅಮ್ಮ ಸ್ನಾನ ಮಾಡಿಸಲೆಂದು ಲಕ್ಷ್ಮಿಯನ್ನು ಕರೆದೊಯ್ದಳು. ಆಕೆಯ ಕಿವಿಯಲ್ಲಿದ್ದ ಬಂಗಾರದ ಕಿವಿಯೋಲೆ, ಕೈ ಬಳೆ ಹಾಗೂ ಸರವನ್ನೆಲ್ಲ ಕಳಚಿಟ್ಟಳು. ಸ್ನಾನ ಮುಗಿಸಿ ಹೊರಬಂದು ನೋಡುವ ಹೊತ್ತಿಗೆ ಅಪ್ಪು ಕಣ್ಮರೆಯಾಗಿದ್ದ. ತುಸು ಹೊತ್ತಿನಲ್ಲಿ ಅಮ್ಮ ರೇಗಾಡುತ್ತ ಲಕ್ಷ್ಮಿಯ ಕಿವಿಹಿಂಡಿ ಕೆನ್ನೆಯ ಮೇಲೆ ಎರಡೇಟು ಬಾರಿಸಿದಾಗ ಲಕ್ಷ್ಮಿಯು ಅಳುವ ಸದ್ದುಕೇಳಿ ಅಪ್ಪು ಅದೆಲ್ಲಿಂದಲೋ ಬಲು ಸಂತಸದಿಂದ ನಗುತ್ತ ಕೈಯಲ್ಲಿ ಸುತ್ತಿಗೆಯನ್ನು ಹಿಡಿದು ಬಂದ. ಲಕ್ಷ್ಮಿಯನ್ನು ನೋಡುತ್ತಲೇ ಸುತ್ತಿಗೆಯನ್ನು ತನ್ನ ಭುಜದ ಮೇಲೇರಿಸಿಕೊಂಡು ನಗತೊಡಗಿದ. ಲಕ್ಷ್ಮಿಗೆ ಆತ ಯಮರಾಯನಂತೆ ಕಂಡ.

ಅವನದೇ ಈ ಕಿತಾಪತಿಯೆಂದರಿತು ಅಮ್ಮನಿಗೆ ಹೇಳಲು ಮುಂದಾದಳು. ಇದನ್ನು ಗ್ರಹಿಸಿದ ಅಪ್ಪು ಅಲ್ಲಿಂದ ಮರುಕ್ಷಣವೇ ಕಾಲಿಗೆ ಕೆಲಸ ಕೊಟ್ಟು ಹೊರನಡೆದಿದ್ದ. ಅಮ್ಮನ ತಾಳ್ಮೆ ಇಷ್ಟೊತ್ತಿಗಾಗಲೆ ಮಿತಿಮೀರಿ, ಸಿಟ್ಟು ನೆತ್ತಿಗೇರಿತ್ತು. ಇದಕ್ಕೆ ಕಾರಣ ಲಕ್ಷ್ಮಿಯ ಒಂದು ಕಿವಿಯೋಲೆ ಕಾಣೆಯಾಗಿತ್ತು. ಅದನ್ನು ಬಹಳ ಕಷ್ಟಪಟ್ಟು ಮಗಳಿಗೆಂದು ತಂದೆ ಮಾಡಿಸಿದ್ದರು. ಅದರ ಜೊತೆಗೆ ಹಲವು ಭಾವನೆಗಳು, ನೆನಪುಗಳು, ಕಷ್ಟದ ದಿನದಲ್ಲಿ ಮಾಡಿದ ತ್ಯಾಗ ಆ ಕಿವಿಯೋಲೆಯ ಜೊತೆಗಿತ್ತು. ಅದಕ್ಕೆ ಅದರ ಮೇಲೆ ವಿಶೇಷ ಒಲವಿದ್ದ ಕಾರಣ ಕಿವಿಯೋಲೆ ಎಲ್ಲಿಹುದೆಂದು ತಿಳಿದುಕೊಳ್ಳಲು ಅಮ್ಮ ರೌದ್ರಾವತಾರವನ್ನು ತಾಳಿದ್ದಳು.

ಹೊರಗಡೆ ಆಟವಾಡುತ್ತಿದ್ದ ಅಪ್ಪುವನ್ನು ಕರೆದು ‘ಲಕ್ಷ್ಮಿಯ ಕಿವಿಯೋಲೆ ಮುಟ್ಟಿದ್ದೀಯ?’ ಎಂದು ಕೇಳಿದ್ದೇ ಅಪ್ಪು ತಬ್ಬಿಬ್ಬಾದವನಂತೆ ತಡವರಿಸಿ ‘ನನಗೆ ಗೊತ್ತಿಲ್ಲ’ ಎಂದ. ಅಮ್ಮನಿಗೆ ಇದು ಅಪ್ಪುವಿನದೇ ಕೆಲಸ ಎಂದು ಗೊತ್ತಾಯಿತು. ಆದರೆ ರೇಗಾಡಿ ಕೂಗಾಡಿದರೆ ಅವನು ಸತ್ಯ ಬಾಯ್ಬಿಡುವುದಿಲ್ಲವೆಂದು ಆಕೆಗೆ ತಿಳಿದಿತ್ತು. ಅದಕ್ಕೆ ನಯವಾಗಿ ಅವನ ತಲೆಸವರುತ್ತ ಕೇಳಿದಳು.

ಅಮ್ಮ ಪುಸಲಾಯಿಸುತ್ತಿರುವಾಗಲೇ ಅಪ್ಪು, ‘ಅಮ್ಮಾ, ಈ ಚಿನ್ನ, ಕಬ್ಬಿಣ, ಲೋಹಗಳೂ ಮಾತಾಡುತ್ತವೆಯೆ? ಅವುಗಳಿಗೂ ನೋವಾಗುತ್ತದೆಯೆ?’ ಎಂದು ಕೇಳಿದ. ಅಮ್ಮ, ‘ಹೌದು ಮನುಷ್ಯರಂತೆ ಚಿನ್ನ, ಬೆಳ್ಳಿ, ತಾಮ್ರ, ಲೋಹಗಳು ಮಾತಾಡುತ್ತವೆ. ಆದರೆ ಅವರ ಭಾಷೆ ಸದ್ದಿನದ್ದು. ಅದಕ್ಕೆ ಅವುಗಳನ್ನು ಎಲ್ಲೆಂದರಲ್ಲಿ ಎಸೆಯುವುದಿಲ್ಲ. ಜೋಪಾನವಾಗಿ ಒಂದೆಡೆ ಎತ್ತಿಡುತ್ತಾರೆ. ಎಲ್ಲೆಂದರಲ್ಲಿ ಬಿಸಾಡಿದರೆ ಅವುಗಳಿಗೆ ನೋವಾಗುತ್ತದೆ’ ಎಂದಳು. ಅಪ್ಪು ಅದೇನೋ ಯೋಚಿಸಲು ಶುರುಮಾಡಿದ. ಒಂದೆರಡು ಕ್ಷಣ ಬಿಟ್ಟು ‘ಅವುಗಳಿಗೆ ನೋವಾದರೆ ಹೇಗೆ ಹೇಳುತ್ತವೆ?’ ಎಂದು ಮರುಪ್ರಶ್ನೆ ಹಾಕಿದ.

ಅಮ್ಮ ನಗುನಗುತ್ತ ಬೆನ್ನು ಸವರುತ್ತ ನುಡಿದರು; ‘ಅಪ್ಪು, ಅವುಗಳಿಗೆ ನೋವಾದರೆ ನಮ್ಮ ಹಾಗೆ ಬಾಯ್ಬಿಟ್ಟು ಹೇಳುವುದಿಲ್ಲ, ಅದು ಯಾರ ಜೊತೆಗಿರುತ್ತದೋ ಅವರೇ ಅದನ್ನು ಅರ್ಥಮಾಡಿಕೊಳ್ಳಬೇಕು. ನಾವೇ ಅದರ ಬಳಿ ಮಾತಾಡುತ್ತಿರಬೇಕು. ಹೀಗೆ ನೀನು ಸುತ್ತಿಗೆಯನ್ನು ಎಲ್ಲೆಂದರಲ್ಲಿ ಎಸೆದಾಗ ಅವು ಬಹಳ ನೊಂದುಕೊಳ್ಳುತ್ತವೆ’.

ಅಮ್ಮನ ಮಾತು ಕೇಳಿ ಅಪ್ಪು ಇನ್ನಷ್ಟು ಚಿಂತಿತನಾದ. ಕಾರಣ ಆತನು ಲಕ್ಷ್ಮಿಯ ಮೇಲಿನ ಸಿಟ್ಟಿಗೆ ಆಕೆಯ ಕಿವಿಯೋಲೆಯನ್ನು ತನ್ನ ಕಿಸೆಯಲ್ಲಿ ಇಟ್ಟುಕೊಂಡಿದ್ದ. ಅದಕ್ಕೆ ನೋವಾಗುತ್ತಿದೆ ಎಂಬ ಭಾವನೆ ಆತನಿಗೆ ಕಾಡತೊಡಗಿತು. ಆದರೆ ಮತ್ತೆ ಅದೇನೋ ಗೊಂದಲಕ್ಕೆ ಉತ್ತರ ಬಯಸಿ ಮತ್ತೊಂದು ಪ್ರಶ್ನೆಯ ಬಾಣಬಿಟ್ಟ; ‘ಅಮ್ಮಾ, ನನ್ನ ಈ ಪುಟ್ಟ ಕಬ್ಬಿಣದ ಸುತ್ತಿಗೆಯು ಇಂದು ಚಿನ್ನದ ಬಳಿ ಮಾತಾಡಿತು. ಆದರೆ ಅದು ಅಷ್ಟೇನೂ ಸದ್ದುಮಾಡಿ ಉತ್ತರಿಸಿಲ್ಲ. ಆದರೆ ನಾನು ಬೇರೆ ಬೇರೆ ಕಬ್ಬಿಣದ ಜೊತೆಗೆ ಸುತ್ತಿಗೆಯನ್ನು ಮಾತಾಡಿಸಿದಾಗ ಬಲು ಜೋರಾಗಿ ಸದ್ದುಮಾಡುತ್ತ ಮಾತಾಡುತ್ತದೆ ಯಾಕೆ?’ ಎಂದಿದ್ದೇ ಅಮ್ಮನ ಮನದಲ್ಲಿ ಆತಂಕ ಶುರುವಾಯಿತು. ಕಿವಿಯೋಲೆ ಅಪ್ಪುವಿನ ಕೈಯಲ್ಲಿ ಸೇರಿ ಅದ್ಯಾವ ಸ್ಥಿತಿ ತಲುಪಿಹುದೋ ಎಂದು ಮನದಲ್ಲೇ ನೊಂದುಕೊಂಡಳು. ಮಕ್ಕಳ ತುಂಟಾಟಕ್ಕೆ ಇನ್ನೆಷ್ಟು ಪ್ರೀತಿಯ ವಸ್ತುಗಳು ಬಲಿಯಾಗಬೇಕಿದೆಯೋ ಎಂದು ಕಣ್ಣಲ್ಲಿ ನೀರು ತುಂಬಿಕೊಂಡಿತು. ಗಂಟಲು ಬಿಗಿಯಾಗಿ ಅಪ್ಪುವಿಗೆ ಹೇಳಿದಳು, ‘ಮಗು, ನಮ್ಮವರಿಂದಲೇ ನಮಗೆ ಹೊಡೆತಬಿದ್ದಾಗ ಜಾಸ್ತಿ ನೋವಾಗುತ್ತದೆ. ಸಹಿಸಲು ಕಷ್ಟವಾಗಿ ಸದ್ದು ಜೋರಾಗಿ ಬರುತ್ತದೆ’ ಎಂದು ಹೇಳುತ್ತಿದ್ದಂತೆ ಅಮ್ಮನ ಕಣ್ಣೀರ ಕಟ್ಟೆಯೊಡೆದು ಅಪ್ಪುವಿನ ಸುತ್ತಿಗೆಯ ಮೇಲೆ ಕಂಬನಿ ಬಿತ್ತು. ಇದನ್ನು ಕಂಡ ಅಪ್ಪು ನಿಧಾನವಾಗಿ ತನ್ನ ಕಿಸೆಯಲ್ಲಿದ್ದ ಕಿವಿಯೋಲೆಯನ್ನು ಹೊರತೆಗೆದ. ಲಕ್ಷ್ಮಿ ಮೇಲಿನ ಸಿಟ್ಟಿಗೆ ಆಕೆ ಸ್ನಾನಕ್ಕೆ ಹೋದಾಗ ಕಿವಿಯೋಲೆಯನ್ನು ಅಪ್ಪು ಎತ್ತಿಕೊಂಡು ಹೋಗಿ ಸುತ್ತಿಗೆಯಿಂದ ಜಜ್ಜಿಬಿಟ್ಟಿದ್ದ. ಇದನ್ನು ನೋಡುತ್ತಲೇ ಅಮ್ಮ ಜೋರಾಗಿ ಎರಡೇಟು ಹೊಡೆದು ಅಳುತ್ತ ಜಜ್ಜಿದ ಕಿವಿಯೋಲೆಯನ್ನು ಎದೆಗೊತ್ತಿಕೊಂಡು ಮನೆಯೊಳಗೆ ನಡೆದಳು.

ಅಪ್ಪುವಿನ ಮೇಲೆ ತಾಯಿಯ ಕಣ್ಣೀರು ಬಹಳ ಪರಿಣಾಮ ಬೀರಿತು. ಇದಕ್ಕೆಲ್ಲ ಕಾರಣ ತನ್ನ ತುಂಟತನ, ಕೋಪ, ಎಂಬುದು ಅವನಿಗೆ ಅರಿವಾಯಿತು. ಸುತ್ತಿಗೆಯನ್ನು ಬೀಸಿ ಎಸೆದುಬಿಟ್ಟ.

ಮತ್ತೆಂದಿಗೂ ಈ ತಪ್ಪು ಮಾಡುವುದಿಲ್ಲವೆಂದು ವಚನತೊಟ್ಟ. ಸಿಟ್ಟು, ಕೋಪ,ತುಂಟಾಟ ಬಿಟ್ಟು ಶ್ರದ್ಧೆಯಿಂದ ವಿದ್ಯೆ ಕಲಿತು ಅಪ್ಪ ಅಮ್ಮನ ಪ್ರೀತಿಯ ಗೆದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.