ADVERTISEMENT

ಅವಳು

ಗೀತಾ ಕುಂದಾಪುರ
Published 8 ಜೂನ್ 2019, 19:30 IST
Last Updated 8 ಜೂನ್ 2019, 19:30 IST
ಕಲೆ: ಗುರು ನಾವಳ್ಳಿ
ಕಲೆ: ಗುರು ನಾವಳ್ಳಿ   

ಒಂದು ಬೆಳಿಗ್ಗೆ ಆ ಊರಿನಲ್ಲಿ ಹಾಜರಾದಳು ಅವಳು. ಅವಳಿಗೂ ಆ ಊರಿಗೂ ಏನೂ ಸಂಬಂಧವಿರಲಿಲ್ಲ. ಆದರೂ, ಏಕೋ ಅವಳು ಆ ಊರಿಗೇ ಬಂದಳು. ಆ ಊರಲ್ಲೇ ನೆಲೆಸಲು ತೀರ್ಮಾನಿಸಿದಳು.

ಊರಿಗೆ ಬಂದವಳೇ ಅವಳು ಸೀದಾ ಹೋದದ್ದು ಬ್ರಾಹ್ಮಣರ ಕೇರಿಯಲ್ಲಿಯಲ್ಲಿರುವ ಸಣ್ಣಯ್ಯ ಶಾಸ್ತ್ರಿಗಳ ಮನೆಗೆ. ಎಲೆ ಅಡಿಕೆ ತಿಂದು ಸೂಸುವ ರಸವನ್ನು ಕಷ್ಟಪಟ್ಟು ಬಾಯಿಯ ಒಳಗಿಡಲು ಪ್ರಯತ್ನಿಸುತ್ತಿದ್ದ ಶಾಸ್ತ್ರಿಗಳು ಅವಳನ್ನು ನೋಡುತ್ತಿದ್ದಂತೆ, ಪಿಚಕ್ಕನೆ ತೆಂಗಿನ ಕಟ್ಟೆಗೆ ಉಗುಳಿದರು. ಉಟ್ಟಿದ್ದ ಧೋತರವನ್ನು ಸರಿಪಡಿಸುತ್ತಾ ಶಾಸ್ತ್ರಿಗಳು ಮುಖವನ್ನು ಮೇಲೆತ್ತಿ ಏನು ಎನ್ನುವಂತೆ ಮುಖದಲ್ಲೇ ಪ್ರಶ್ನಾರ್ಥಕ ಚಿಹ್ನೆ ತೋರಿಸಿದರು. ಶಾಸ್ತ್ರಿಗಳು ಯಾವತ್ತೂ ಅಷ್ಟೇ, ಮಾತು ಕಡಿಮೆ, ಆಡಿದರೆ ಪೆಟ್ಟೊಂದು ತುಂಡೆರಡು ಎಂಬಂತೆ. ತಗ್ಗಿಸಿದ ತಲೆಯನ್ನು ಮೇಲೆತ್ತದೆ ‘ಒಡೆಯ ಇರುಕೆ ಜಾಗ ಬೇಕಿತ್ತ, ಜಗಲಿ, ಸಣ್ಣ ಕೋಣೆ ಆದ್ರೂ ಅಡ್ಡಿಲ್ಲ’ ಭಟ್ಟರಿಗೆ ಅವಳ ಬಗ್ಗೆ ಎಲ್ಲಾ ತರಹದ ಅನುಮಾನಗಳು ಬಂದವು. ಹಾಗಂತ ಅವಳನ್ನು ಅಲ್ಲಿಂದ ಓಡಿಸಲೂ ಮನಸ್ಸಾಗಲಿಲ್ಲ. ಮತ್ತೆ ಅವಳನ್ನು ದೃಷ್ಟಿಸುತ್ತಾ ‘ಯಾವ ಊರ? ಜಾತಿ ಯಾವದ?’ ಕೇಳಿದರು. ‘ಊರು ಸಾಗರ ಒಡಿನೇ, ಯಾರೂ ಇಲ್ಲ, ಬ್ರಾಹ್ಮಣ್ರ’ ಎಂದಳು. ‘ದನದ ಕೊಟ್ಟಗೆ ಬದಿಯಲ್ಲಿ ಒಂದ ಸಣ್ಣ ಕೋಣೆ ಇತ್ತ ಅಡ್ಡಿಲ್ಯಾ? ತಿಂಗಳಿಗೆ 200 ರೂಪಾಯಿ ಆತ್ತ’ ಎಂದರು ಶಾಸ್ತ್ರಿಗಳು. ಸರಿ ಎನ್ನುವಂತೆ ಅವಳು ತಲೆಯಲ್ಲಾಡಿಸಿದಳು. ಶಾಸ್ತ್ರಿಗಳು ಕೋಣೆ ತೋರಿಸಲು ಮುಂದೆ ನಡೆದರೆ, ಅವಳು ಶಾಸ್ತ್ರಿಗಳ ಹಿಂದೆ ನಡೆದಳು.

ಉದ್ದ ಐದಡಿ ಇಲ್ಲವೇ ಇನ್ನೊಂದು ಚೂರು ಜಾಸ್ತಿ ಇರಬಹುದೇನೋ. ಕೋಲು ಮುಖ, ತಲೆ ಕೂದಲನ್ನು ಹಿಂದಕ್ಕೆ ಬಾಚಿ ಕಟ್ಟಿದ್ದರಿಂದಲೋ ಎನೋ ಮುಖ ಇನ್ನೂ ಉದ್ದವಾಗಿ ಕಾಣುತ್ತಿತ್ತು. ಮೂಗಿನಲ್ಲಿ ಕಿಲುಬು ಗಟ್ಟಿದ ಮೂಗುತಿ, ಕಿವಿಯಲ್ಲಿ ನೀಲಿ ಬಣ್ಣದ ಟಿಕ್ಕಿ, ಬೊಟ್ಟಿಲ್ಲದ ಹಣೆ, ಉದ್ದ ಕೈ ಬ್ಲೌಸ್, ನೀಲಿ ಬಣ್ಣದ ಚೌಕುಳಿ ಸೀರೆ ಅಥವಾ ಪಾಚಿ ಬಣ್ಣದ ಗೆರೆಗೆರೆ ಸೀರೆ, ಇದು ಬಿಟ್ಟು ಅವಳನ್ನು ಬೇರೆ ಬಣ್ಣದ ಸೀರೆ ಉಟ್ಟೋ, ಅಲಂಕಾರ ಮಾಡಿಕೊಂಡದ್ದನ್ನುಯಾರೂ ನೋಡಿಲ್ಲ. ಸೀರೆಯನ್ನಂತೂ ದೇಹದ ತುಂಬಾ ಸುತ್ತಿ ಸುತ್ತಿ ಉಡುತ್ತಿದ್ದಳು.

ADVERTISEMENT

ಸುಮಾರು 50-60 ಮನೆಗಳಿರುವ ಆ ಊರಲ್ಲಿ ಅವಳು ಬಂದಾಗಿನಿಂದ ಎಲ್ಲರಿಗೂ ಮಾತನಾಡಲು ಒಂದು ವಿಷಯವಾಗಿದ್ದಳು. ಏಕೆಂದರೆ, ಅವಳು ತನ್ನ ಹೆಸರು ‘ಪಂಕಜ, ಬ್ರಾಹ್ಮಣಳು, ಊರು ಸಾಗರ’ ಎನ್ನುವುದನ್ನು ಬಿಟ್ಟು ಬೇರೆನನ್ನು ಹೇಳಿರಲಿಲ್ಲ. ಕೆಲವರಂತೂ ‘ಎಲ್ಲೋ ಏನೋ ಯಾರನ್ನೋ ಕೊಲೆ ಮಾಡಿ ಈ ಊರಿಗೆ ಬಂದ್ಲ’, ಇನ್ನು ಕೆಲವರು ‘ಹಾದರಕ್ಕೆ ಹುಟ್ಟಿದವಳಿರಬೇಕು, ತಲೆ ಮರೆಸಿಕೊಂಡು ಇಲ್ಲಿಗ ಬಂದ್ಲ’ ಅಂದವರೂ ಇದ್ದರು. ಕೆಲವರು ಅವಳ ವಯಸ್ಸು ಇಪ್ಪತ್ತೈದು ಎಂದರೆ, ಇನ್ನು ಕೆಲವರು ನಾಲವತ್ತರ ಹತ್ತಿರ ಎಂದರು. ಕಡೆಗೆ ಆ ಕೇರಿಯ ಜನರೆಲ್ಲರೂ ಅವಳು ‘ಬ್ರಾಹ್ಮಣಳಲ್ಲ’ ಎನ್ನುವ ಒಮ್ಮತದ ತೀರ್ಮಾನಕ್ಕೆ ಬಂದರು.

ಸಣ್ಣಯ್ಯ ಶಾಸ್ತ್ರಿಗಳ ಹಟ್ಟಿಯೆಂದರೆ ನಾಲ್ಕೈದು ಹಸುಗಳು, ಮೂರುನಾಲ್ಕು ಕರುಗಳು, ಒಂದು ಜೊತೆ ಹೋರಿಗಳಿದ್ದವು. ಹಟ್ಟಿಯ ಪಕ್ಕದ ಕೋಣೆಯೆಂದರೆ ಅದರಲ್ಲಿ ದನಕ್ಕೆ ಹಾಕುವ ಬೂಸ, ಹುರುಳಿ, ಭತ್ತದ ಹೊಟ್ಟು ಎಲ್ಲವನ್ನೂ ಇಟ್ಟಿದ್ದರು. ತೊಲೆಯಲ್ಲಿ ಸೌತೆ, ಕುಂಬಳಕಾಯಿ ನೇತು ಹಾಕಿದ್ದರು. ಜೊತೆಗೆ ಒಂದೆರಡು ಹೆಗ್ಗಣಗಳೂ ಇದ್ದವು. ಅವಳು ಬಂದ ಮೇಲೆ ಮಸಿ, ಸಾಲಿಂಬಾಲಿ ತುಂಬಿದ ಕೋಣೆಯನ್ನು ಸ್ವಚ್ಛ ಮಾಡಿ ತನ್ನ ಚೀಲವನ್ನು ಬಿಚ್ಚಿದಳು. ದನಗಳಿಗೆ ಹುರುಳಿ ಬೇಯಿಸುವ ಒಲೆಯಲ್ಲೇ ಅನ್ನ ಬೇಯಿಸಿಕೊಂಡು ತಿಂದಳು.

ಅವಳಿರುವ ಕೋಣೆಯ ಹೊರಗೆ ಸೆಗಣಿ ಹಾಕಿ ಸಾರಿಸಿ ಚೆಂದದ ರಂಗೋಲಿ ಇಟ್ಟಳು. ಆ ಊರಲ್ಲಿ ರಂಗೋಲಿ ಇಡುವವರು ಕಡಿಮೆ, ಹಬ್ಬ ಬಂದಾಗ ದೇವರ ಎದುರು ಚಿಕ್ಕ ಪುಟ್ಟ ರಂಗೋಲಿ ಇಡುತ್ತಿದ್ದರು. ಊರಿನ ಕೆಲವು ಹೆಣ್ಣು ಮಕ್ಕಳು ಅವಳ ಹತ್ತಿರ ರಂಗೋಲಿ ಕಲಿಯುವ ಆಸಕ್ತಿ ತೋರಿಸಿದರು. ಮತ್ತೊಂದು ದಿನ ಉದ್ದಿನ ಸಂಡಿಗೆ, ಗೆಣಸಿನ ಹಪ್ಪಳ ಮಾಡಿ ಒಣಗಿಸಿದಳು. ಅವಳು ಮಾಡಿದ ಹಪ್ಪಳ, ಸಂಡಿಗೆ ರುಚಿ ನೋಡುತ್ತಿದ್ದಂತೆ ಅವಳ ಕೋಣೆಯಂತಿರುವ ಮನೆಗೆ ಜನರು ಬಂದು ಹೋಗತೊಡಗಿದರು. ಕೆಲವರು ಚೆಟ್ನಿ ಪುಡಿ ಬೇಕೆಂದರು, ಅದನ್ನೂ ಮಾಡಿಕೊಟ್ಟಳು. ಅವರು ಕೊಟ್ಟ ದುಡ್ಡನ್ನು ಬೇಡವೆನ್ನದೆ ತೆಗೆದುಕೊಂಡಳು. ಅವಳು ಮಾಡುವ ಹಪ್ಪಳ, ಸಂಡಿಗೆಯ ರುಚಿ ನೋಡಿದ ಮೇಲೆ ಜನರು ಅವಳ ಜಾತಿ ಕೇಳುವುದನ್ನು ಬಿಟ್ಟರು.

ಅವಳು ಊರಿಗೆ ಬಂದು ನಾಲ್ಕೈದು ತಿಂಗಳಾಗುತ್ತಿದ್ದಂತೆ ಕೆಲವರು ‘ಪಂಕಜ, ಪಂಕು’ ಎಂದು ಕರೆದರೆ, ಕೆಲವರು ‘ಪಂಕಜಕ್ಕ’ ಎಂದರು. ಇನ್ನೂ ಕೆಲವರು ‘ಪಂಕಜತ್ತೆ’ ಎಂದೂ ಕರೆದರು, ಏನು ಕರೆದರೂ ಹುಂ ಗುಟ್ಟುತ್ತಿದ್ದಳು. ಈಗೀಗ ಮೈ ಕೈ ತುಂಬಿಕೊಂಡು ಸ್ವಲ್ಪ ದಪ್ಪ ಬೇರೆ ಆಗಿದ್ದಳು, ತಲೆಯನ್ನು ಒಪ್ಪವಾಗಿ ಬಾಚುತ್ತಿದ್ದಳು.
ಒಂದು ದಿನ ಅವಳಿಗೆ ಎಲ್ಲಿಂದಲೋ ಕಾಗದವೂ ಬಂತು. ಹಿಂದೆ ಮುಂದೆ ಯಾರೂ ಇಲ್ಲವೆಂದು ಎಣಿಸಿದ ಅವಳಿಗೆ ಕಾಗದ ಬಂದಿದ್ದು ಊರಿನಲ್ಲಿ ಸುದ್ದಿಯಾಯಿತು. ಮತ್ತೆ ನಾಲ್ಕು ದಿನ ಎಲ್ಲರೂ ಅವಳ ಬಗ್ಗೆ ಮಾತಾಡಿಕೊಂಡರು.

ಸಣ್ಣಯ್ಯ ಶಾಸ್ತ್ರಿಗಳ ಅಪ್ಪಯ್ಯನ ಶ್ರಾದ್ಧ, ನಾಲ್ಕು ಸೇರು ಉದ್ದಿನ ಬೇಳೆಯನ್ನು ವಡೆ ಮಾಡಲು ನೆನೆಸಿಟ್ಟಿದ್ದರು. ಕರೆಂಟು ಬೆಳಿಗ್ಗೆಯಿಂದ ಕೈ ಕೊಟ್ಟಿತ್ತು. ಅಡಿಗೆ ಭಟ್ಟರು ಕೈ ಬೇರೆ ನೋವು ಮಾಡಿಕೊಂಡಿದ್ದರು. ಶಾಸ್ತ್ರಿಗಳ ಹೆಂಡತಿ ಅಂಬಿಕಮ್ಮ ಹಿಂದಿನ ಬಾಗಿಲಿನಿಂದ ಪಂಕಜಾಳನ್ನು ಒಳಗೆ ಕರೆದು ‘ಹೇಣೆ ಕೈ ಕಾಲು ಮುಖ ತೊಳ್ಕಂಡ ಬಾ, ಈ ಉದ್ದು ಒಂದ ಚೂರ ಅರೆದು ಕೊಡ ಕಾಂಬ, ನೈವೇದ್ಯ ಮಾಡ್ಕ, ಯಾರತ್ರ ಹೇಳ್ಬೇಡ’ ಎಂದಾಗ, ಪಂಕಜ ತಲೆ ಎತ್ತದೆ ಸರಸರನೆ ಅರೆದುಕೊಟ್ಟಳು. ಅಂದಿನಿಂದ ಅಂಬಿಕಮ್ಮ ಗುಟ್ಟಾಗಿ ಪಂಕಜಳ ಹತ್ತಿರ ಅಡಿಗೆ ಮನೆಯಲ್ಲಿ ಕತ್ತರಿಸುವ, ಅರೆಯುವ ಕೆಲಸವನ್ನು ಮಾಡಿಸಿದರು. ನಂತರದ ದಿನಗಳಲ್ಲಿ ಊರಿನ ಹೆಂಗಸರು ಶಾಂತಿ, ಪುಷ್ಠಿಯ ಅಡಿಗೆಯನ್ನೂ ಅವಳ ಹತ್ತಿರ ಮಾಡಿಸಿದರು. ಆದರೆ, ಊಟ ಮಾತ್ರ ಮನೆಯ ಹೊರಗಿನ ಜಗಲಿಯಲ್ಲಿ ಹಾಕಿದರು, ಅವಳು ಅದಕ್ಕೆ ಬೇಸರಗೊಳ್ಳಲಿಲ್ಲ.

ಅವಳು ಆ ಊರಿಗೆ ಬಂದು ಆಗಲೇ ಏಳೆಂಟು ತಿಂಗಳು ಕಳೆದಿತ್ತು. ಒಂದು ಬೆಳಿಗ್ಗೆ ಅವಳ ಕೋಣೆಯ ಬಾಗಿಲು ತೆಗೆದು ಹೊರಗೆ ಬರಲಿಲ್ಲ, ಮಧ್ಯಾಹ್ನವಾಯಿತು, ರಾತ್ರಿಯಾಯಿತು ಅವಳ ಸುದ್ದಿಯಿಲ್ಲ. ಬೆಳಿಗ್ಗೆ ನೀರು ತರಲು ಹೊರಟ ಹೆಂಗಸರಿಗೆ, ಮುಚ್ಚಿದ ಬಾಗಿಲಿನ ಹಿಂದಿನಿಂದ ಮಗುವಿನ ಅಳುವಿನ ಶಬ್ದ ಕೇಳಿಸಿತು. ಎರಡು ದಿನ ಬಿಟ್ಟು ಬಾಗಿಲು ತೆಗೆದಾಗ ಅವಳ ಕೈಯಲ್ಲಿ ಮಗುವಿತ್ತು. ಮತ್ತೆ ಊರಿನ ಜನರಿಗೆ ಮಾತಾಡಲು ವಿಷಯ ಸಿಕ್ಕಿತು. ‘ಬಸ್ರಿ ಅನ್ನಕಂಡ ಗೊತ್ತೇ ಆಯಿಲಿಲ್ಲ, ಮಗುವಿನ ಅಪ್ಪ ಯಾರೋ?’, ‘ಎಲ್ಲೋ ಬಸಿರಾಗಿ ಇಲ್ಲಿಗೆ ಬಂದ ಹೆತ್ಲ’, ‘ಇಲ್ಲೇ ಬಂದ ಬಸ್ರಿ ಆದದ್ದು’ ಎಂದರು. ಕೆಲವರಿಗೆ ಮಗುವಿನ ಮುಖದಲ್ಲಿ ಊರಿನ ಯಾರದ್ದೋ ಮುಖ ಕಾಣಿಸಿತು. ಸಣ್ಣಯ್ಯ ಶಾಸ್ತ್ರಿಗಳಿಗೆ ತಲೆ ಕೆಟ್ಟ ಹಾಗೆ ಆಯಿತು ‘ಇಲ್ಕಾಣ ಪಂಕಜ ನೀನು ಮಗಿನ ಎತ್ಕಂಡ ಇಲ್ಲಿಂದ ನಡಿ ಮೊದ್ಲ’, ಅಂಬಿಕಮ್ಮ ರೋಷದಿಂದ ‘ಮಾರ್ಯಾದೆ ಇರೋ ಜನರಿರುವ ಮನೆ ಇದ‘ ಎಂದರು. ಅಳುತ್ತಿರುವ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಅಳುತ್ತಾ ‘ಅಯ್ಯಾ, ಮಗು ಸಣ್ಣದ, ಒಂದು ತಿಂಗಳ ಕಳಿಲಿ ನಾನೇ ಊರ ಬಿಟ್ಟ ಹೋಗ್ತೆ’ ಎಂದಾಗ ಶಾಸ್ತ್ರಿಗಳು ‘ಸೈ ಒಂದೇ ತಿಂಗಳ ಮತ್ತೆ ಮನೆ ಖಾಲಿ ಮಾಡ್ಕ, ಈಗ ಬಾಣಂತಿ ಅಂದಕಂಡ ಬಿಟ್ಟಿದೆ’ ಎಂದಾಗ, ಅವಳು ಕೂತಲ್ಲೇ ಕೈ ಮುಗಿದಳು. ಅಂಬಿಕಮ್ಮನಿಗೆ ಸಿಟ್ಟಿದ್ದರೂ ಮಗುವಿಗೆ ಸುತ್ತಲು ಹಳೆ ಬಟ್ಟೆ ಕೊಟ್ಟರು.

ಮಗುವಿಗೆ ಒಂದು ತಿಂಗಳಾಗುತ್ತಾ ಬಂತು, ಮಗುವಿನ ಅಳು ಕಡಿಮೆಯಾಯಿತು. ಅವಳು ತನ್ನ ಮತ್ತು ಮಗುವಿನ ಬಟ್ಟೆಯ ಗಂಟು ಕಟ್ಟುವುದು ಕಂಡುಬಂತು. ತಲೆ ಬಾಚಿ ಆಗ ತಾನೇ ಅರಳಿದ ಗುಲಾಬಿ ಹೂವನ್ನು ಸಿಕ್ಕಿಸಿಕೊಂಡಳು. ಮೊದಲ ಬಾರಿಗೆ ದೊಡ್ಡ ಕುಂಕುಮ ಇಟ್ಟ ಅವಳು ಮಗುವನ್ನೆತ್ತಿಕೊಂಡು, ಇನ್ನೊಂದು ಕೈಯಲ್ಲಿ ಚೀಲ ಹಿಡಿದುಕೊಂಡು ಊರ ದಾರಿಯಲ್ಲಿ ಹೊರಟಳು. ಅವಳೊಂದಿಗೆ ಶಾಸ್ತ್ರಿಗಳ ಮಗ ದಿನೇಶನೂ ಹೊರಟ. ಇಬ್ಬರೂ ಮಂಗಳೂರಿಗೆ ಹೋಗುವ ಬಸ್ಸು ಹತ್ತಿದರು. ಮತ್ತೆ ಊರ ಜನರಿಗೆ ಮಾತನಾಡಲು ವಿಷಯ ಸಿಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.