ADVERTISEMENT

ಪ್ರೇಮಕುಮಾರ್‌ ಹರಿಯಬ್ಬೆ ಅವರ ಕಥೆ: ಅವನು ಅಸ್ವಸ್ಥ ಇರಬೇಕು

ಪ್ರೇಮಕುಮಾರ್ ಹರಿಯಬ್ಬೆ
Published 4 ಅಕ್ಟೋಬರ್ 2025, 23:30 IST
Last Updated 4 ಅಕ್ಟೋಬರ್ 2025, 23:30 IST
   

ಬಾಲ್ಕನಿಯಲ್ಲಿ ನೇತು ಹಾಕಿದ್ದ ಗೂಡಿಗೆ ಬಂದು ಸೇರಿಕೊಂಡಿದ್ದ ಜೀಡಿ ಹಕ್ಕಿಗಳ ಚಿಲಿಪಿಲಿ ಸದ್ದಿಗೆ ಕ್ರಿಸ್ಟಿನಾಗೆ ಎಚ್ಚರವಾಯಿತು.

ಹಕ್ಕಿಗಳು ಎದ್ದಿವೆ. ಬೆಳಕಾಗುವುದನ್ನೇ ಕಾಯುತ್ತಿರುಬಹುದು ಅನ್ನಿಸಿತು. ಬೆಡ್‌ ರೂಮಿನ ಮಂದ ಬೆಳಕಿಗೆ ಕಣ್ಣುಗಳನ್ನು ಹೊಂದಿಸಿಕೊಳ್ಳುತ್ತ ಮಕ್ಕಳ ಮುಖ ನೋಡಿದಳು. ಇಬ್ಬರೂ ಗಾಢ ನಿದ್ದೆಯಲ್ಲಿದ್ದಾರೆ. ಈಗಲೇ ಎಬ್ಬಿಸಿಕೊಂಡು ಮನೆಯಿಂದ ಹೊರಡಬೇಕು ಅನ್ನಿಸಿತು. ಟೈಮ್‌ ಎಷ್ಟಾಗಿದೆ ಎಂದು ಸಶಬ್ದವಾಗಿ ಹೇಳಿಕೊಳ್ಳುತ್ತ ಮೊಬೈಲ್‌ ಆನ್‌ ಮಾಡಿದಳು. ಐದು ಗಂಟೆ. ಬೆಳಕು ಹರಿಯಲು ಸಾಕಷ್ಟು ಸಮಯವಿದೆ. ನ್ಯಾನ್ಸಿಯನ್ನು ಎಬ್ಬಿಸಿ ನಿನ್ನ ಅಜ್ಜಿ ಫೋನ್‌ ಮಾಡಿದ್ದರು. ಹಬ್ಬಕ್ಕೆ ಬರುವಂತೆ ಕರೆದರು ಎಂದರೆ ಹತ್ತು ನಿಮಿಷಗಳಲ್ಲಿ ರೆಡಿಯಾಗಿ ಹೊರಟು ನಿಲ್ಲುತ್ತಾಳೆ. ಆದರೆ ಅರವಿಂದನನ್ನು ಎಬ್ಬಿಸಿಸೋದೇ ಕಷ್ಟ. ನಿದ್ದೆ ಕೆಟ್ಟರೆ ರಚ್ಚೆ ಹಿಡಿಯುತ್ತಾನೆ. ಹೊಟ್ಟೆಯಲ್ಲಿ ಒಂದೂವರೆ ತಿಂಗಳ ಹೀಚು ಇಲ್ಲದ್ದಿದ್ದರೆ ಅವನನ್ನು ಹೆಗಲ ಮೇಲೆ ಹಾಕಿಕೊಂಡು ಹದಿನಾಲ್ಕು ಮೆಟ್ಟಿಲು ಇಳಿಯೋದು ಅವಳಿಗೆ ಕಷ್ಟವೇನಲ್ಲ. ಅಕ್ಕ,ಪಕ್ಕದವರಿಗೆ ಗೊತ್ತಾಗದಂತೆ ಆಟೋ ತರಿಸಿಕೊಂಡು ಸೆಂಟ್ರಲ್‌ ಬಸ್‌ ಸ್ಟೇಷನ್‌ಗೆ ಹೋದರೆ ಸಾಕು. ಸಿಕ್ಕ ಬಸ್ಸು ಹತ್ತಿ ಈ ಊರಿಂದ ಹೋಗಬೇಕು ಎಂದು ಮಲಗುವ ಮೊದಲು ಯೋಚಿಸಿದ್ದಳು. ಅರವಿಂದನನ್ನು ಹೊತ್ತು ಮೆಟ್ಟಿಲಿಳಿಯುವಾಗ ಎಡವಟ್ಟಾದರೆ ಅಬಾರ್ಷನ್‌ ಆಗಿಬಿಡಬಹುದು. ಪೂರಾ ಬೆಳಕಾದ ಮೇಲೆ ಹೊರಡುವುದು ಸಾಧ್ಯವಿಲ್ಲ. ಎಲ್ಲಿಗೋ ಹೊರಟಿದ್ದೀರಿ ಎಂದು ಕೇಳುವ ನೆರೆಯವರ ಪ್ರಶ್ನೆಗಳಿಗೆ ಏನು ಹೇಳೋದು ಅನ್ನಿಸಿ ಬೆಳಗಾದ ಮೇಲೆ ಹೊರಡುವ ಯೋಚನೆ ಕೈಬಿಟ್ಟಳು.

ಅವನಿಲ್ಲದ ಮನೆಯಲ್ಲಿ ಇರೋದು ಕಷ್ಟ. ಆದರೆ ಹೋಗೋದೆಲ್ಲಿಗೆ? ನಾವು ಹೋದ ಮೇಲೆ ಅವನು ಬಂದು ಬಿಟ್ಟರೆ? ಅನ್ನಿಸಿತು. ಇವತ್ತು ಬೇಡ, ಇಲ್ಲೇ ಇದ್ದು. ಇವತ್ತಾದರೂ ಬರುತ್ತಾನೋ ನೋಡಬೇಕು ಎನ್ನುವ ನಿರ್ಧಾರಕ್ಕೆ ಬಂದಳು.

ADVERTISEMENT

ಎಲ್ಲಿ ಹೋಗ್ತಾನೆ? ಸಿಟ್ಟು ಕಡಿಮೆ ಆದ ಮೇಲೆ ಮನೆಗೆ ಬರಲೇ ಬೇಕಲ್ಲ ಎಂದು ಅವನು ಮನೆ ಬಿಟ್ಟು ಹೋದ ಮರುಕ್ಷಣದಿಂದ ನೂರಾರು ಸಲ ಮನಸ್ಸಿನಲ್ಲೇ ಹೇಳಿಕೊಂಡಿದ್ದಳು. ಹೋಗಿ ಹದಿನೈದು ದಿನಗಳಾದವು. ಅವನ ಕೋಪ ಇನ್ನೂ ಕಡಿಮೆ ಆಗಿಲ್ಲ. ಬರ್ತಾನೆ ಅಂತ ಎಷ್ಟು ದಿನ ಹೀಗೇ ಕಾಯುತ್ತ ಕೂರುವುದು?

ಮನೆ ಬಿಟ್ಟು ಹೋಗುವಾಗ ಅವನು ಆಡಿದ ಮಾತುಗಳು ನೆನಪಾಗಿ ಅವನು ಬರಲಾರ ಎಂದು ಕ್ರಿಸ್ಟಿನಾ ಮನಸ್ಸು ಹೇಳಿತು. ಹದಿನೈದು ದಿನಗಳಿಂದ ಅವಳು ಬ್ಯಾಂಕಿಗೆ ಹೋಗಿಲ್ಲ.

‘ಕನ್ಸೀವ್‌ ಆಗಿದ್ದೀನಿ, ಮಾರ್ನಿಂಗ್‌ ಸಿಕ್‌ನೆಸ್‌ ಇದೆ...’ ಅನ್ನೋ ಕಾರಣ ಹೇಳಿ ರಜೆ ಹಾಕಿದ್ದಾಳೆ. ಹದಿನೈದು ದಿನ ಕಳೆದರೆ ಮಕ್ಕಳ ಸ್ಕೂಲ್‌ ಶುರುವಾಗುತ್ತೆ. ಅಷ್ಟರೊಳಗೆ ಅವನು ಬಂದರೆ ಸರಿ. ಇಲ್ಲವಾದರೆ ಒಂದು ನಿರ್ಧಾರಕ್ಕೆ ಬರಬೇಕು. ಮಕ್ಕಳ ಜತೆ ಇರುವುದನ್ನು ರೂಢಿಸಿಕೊಳ್ಳಬೇಕು. ಇದೇ ಊರಲ್ಲಿ, ಇದೇ ಮನೆಯಲ್ಲಿ. ನಿಮ್ಮ ಹಸ್ಬೆಂಡ್‌ ಎಲ್ಲಿ? ಕಾಣ್ತಾ ಇಲ್ಲ ಎಂದು ಕೇಳುವ ನೆರೆ ಹೊರೆಯವರಿಗೆ, ಅಪಾರ್ಟ್‌ಮೆಂಟಿನ ಸೊಸೈಟಿಯವರಿಗೆ ಏನು ಹೇಳೋದು? ಮಕ್ಕಳನ್ನಾದರೂ ಸ್ಕೂಲಿಗೆ ಕಳಿಸಬೇಕಲ್ಲ. ರಜೆ ಮುಗಿದ ಮೇಲೆ ಕೆಲಸಕ್ಕೆ ಹೋಗಬೇಕಲ್ಲ. ಮೂರು ಹೊತ್ತೂ ಮನೆಯಲ್ಲೇ ಇರಲು ಸಾಧ್ಯವೇ? ಯೋಚಿಸಿದಳು.

*

ಪ್ರಿಯ ಓದುಗ,

ಅವನು ಎಂದರೆ ನಮ್ಮ ಕಥಾ ನಾಯಕಿ ಕ್ರಿಸ್ಟಿನಾ ಗಂಡ ಬೃಂದಾವನಂ ಕೃಷ್ಣಮೂರ್ತಿ. ಹೆಂಡತಿ ಜತೆ ಜಗಳ ಆಡಿ ಅವನು ಮನೆ ಬಿಟ್ಟು ಹೋಗಿದ್ದಾನೆ. ಬರುತ್ತಾನೆ ಎಂದು ಅವನು ಹೋದ ಕ್ಷಣದಿಂದ ಕ್ರಿಸ್ಟಿನಾ ಕಾಯುತ್ತಿದ್ದಾಳೆ. ಆಗಾಗ ಕಿಟಕಿ ತೆರೆದು ಅಪಾರ್ಟ್‌ಮೆಂಟಿನ ದೊಡ್ಡ ಗೇಟಿನ ಕಡೆ ನೋಡುತ್ತಾಳೆ. ಯಾರಾದರೂ ಮೆಟ್ಟಿಲು ಹತ್ತಿ ಬರುವ ಸದ್ದು ಕೇಳಿಸಿದರೆ ಕೃಷ್ಣನೇ ಬಂದ ಎಂದು ಕೊಳ್ಳುತ್ತಾಳೆ. ಕಾಲಿಂಗ್‌ ಬೆಲ್‌ ಒತ್ತಿದ ಕೂಡಲೇ ಬಾಗಿಲು ತೆಗೆಯಬೇಕು ಅಂದುಕೊಳ್ಳುತ್ತ ಚಡಪಡಿಸುತ್ತಾಳೆ. ಬೆಲ್‌ ಆಗದಿದ್ದರೆ ನಿಟ್ಟುಸಿರು ಬಿಡುತ್ತಾಳೆ. ಮತ್ತೆ ಕಾಯುತ್ತ ಕೂರುತ್ತಾಳೆ. ಬರೀ ಅವನದೇ ಯೋಚನೆ ಅವಳಿಗೆ.

‘ಮದುವೆ ಆಗಿ ಏಳು ವರ್ಷಗಳಷ್ಟೇ ಕಳೆದಿವೆ. ಅಷ್ಟರಲ್ಲಿ ಕೃಷ್ಣನಿಗೆ ಹೆಂಡತಿ,ಮಕ್ಕಳು ಬೇಡವಾದರಲ್ಲ! ಮನೆಯಿಂದ ಹೋಗುವಾಗ ನೀನು ಸರಿಯಾಗಿದ್ರೆ ನಾನೂ ಸರಿಯಾಗೇ ಇರ್ತಿದ್ದೆ ಅಂದನಲ್ಲ! ಸರಿಯಾಗಿಲ್ಲ ಅಂದರೇನು? ದಾರಿ ತಪ್ಪಿದ್ದೇನೆ ಅಂತಲೇ? ಯೋಚಿಸಿ ಅವಳ ತಲೆ ಕೆಟ್ಟುಹೋಗಿತ್ತು. ಸಿಟ್ಟಿನಲ್ಲಿ ಅವನು ಏನೋ ಹೇಳಿರಬಹುದು. ಬಂದ ಮೇಲೆ ಅವನೇ ಸಾರಿ ಕೇಳುತ್ತಾನೆ ಅನ್ನಿಸಿದರೂ ದಿನಗಳು ಕಳೆದಂತೆ ಅವನು ಬರುವ ವಿಶ್ವಾಸ ಕ್ಷೀಣಿಸುತ್ತ ಹೋಗಿ ಕ್ರಿಸ್ಟಿನಾ ಮನಸ್ಸಿನಲ್ಲಿ ಭಯ ಹೆಪ್ಪುಗಟ್ಟಿತ್ತು.

*

‘ಮದುವೆ ಆಗುವುದಾದರೆ ನಿನ್ನನ್ನೇ....’ ಎನ್ನುತ್ತ ಐದು ವರ್ಷ ಅವಳಿಗಾಗಿ ಕಾದಿದ್ದ! ಮದುವೆ ಮುಗಿದ ಮೇಲೆ ಇವತ್ತು ನನ್ನ ಜೀವನಕ್ಕೆ ಅರ್ಥ ಬಂತು ಅಂದಿದ್ದ! ಮಗಳು ಹುಟ್ಟಿದ ದಿನ ನನ್ನ ಜೀವನ ಸಾರ್ಥಕವಾಯಿತು ಅಂದ. ಇನ್ನೊಂದು ಮಗು ಬೇಕು. ಅದು ಗಂಡೇ ಆಗಬೇಕು ಎಂದು ಬಯಸಿದ. ಅವನ ಬಯಕೆಯಂತೆ ಗಂಡು ಹುಟ್ಟಿತು. ಇಬ್ಬರು ಸಾಕು. ನಮ್ಮ ನಡುವೆ ಇನ್ನೊಂದು ಜೀವ ಬರೋದು ಬೇಡ ಅಂದಿದ್ದ. ಆದರೆ ಉಂಡ ತಟ್ಟೆಯಲ್ಲಿ ಕೈತೊಳೆದು ಎದ್ದು ಹೋಗುವ ಅತಿಥಿಯಂತೆ ಹೊರಟೇ ಹೋದ! ನಿನ್ನ ಮತ್ತು ಮಕ್ಕಳ ಜವಾಬ್ದಾರಿ ನನ್ನದಲ್ಲ ಎನ್ನುವಂತೆ! ಮಕ್ಕಳನ್ನು ಸಾಕುವ ಹೊಣೆ ನನ್ನೊಬ್ಬಳದೇ ಅಲ್ಲ ಎಂದು ಅವನನ್ನು ನಿಲ್ಲಿಸಿ ಹೇಳಬೇಕಿತ್ತು ಎಂದು ಅವನು ಹೋದ ಮೇಲೆ ಕ್ರಿಸ್ಟಿನಾಗೆ ಅನ್ನಿಸಿತ್ತು. ಆ ಕ್ಷಣವೇ ಹೊಳೆದಿದ್ದರೆ ಕೇಳುತ್ತಿದ್ದಳೇನೋ. ಅವನಿಗೆ ಉತ್ತರಿಸುವ ತಾಳ್ಮೆ ಇತ್ತೇ ? ನಾನು ಗಂಡಸು, ಯಾರ ಮಾತೂ ಕೇಳುವುದಿಲ್ಲ ಅನ್ನೋ ಅಹಂಕಾರ. ಅಪ್ಪ, ಅಮ್ಮನನ್ನು ಬಿಟ್ಟು ಬಂದವನಿಗೆ ಹೆಂಡತಿ, ಮಕ್ಕಳನ್ನು ಬಿಡುವುದು ಕಷ್ಟವಾಗಲಿಲ್ಲ ಅನ್ನಿಸಿ ಮೊದಲ ಸಲ ಗಂಡನ ಬಗ್ಗೆ ತಿರಸ್ಕಾರದ ಭಾವ ಹುಟ್ಟಿಕೊಂಡಿತ್ತು.

‘ಇವು ನಿನ್ನ ಮಕ್ಕಳು. ಅವನ್ನು ಸಾಕುವ ಜವಾಬ್ದಾರಿ ನನ್ನದಲ್ಲ ಎಂದು ಅವನು ಬಾಯಿಬಿಟ್ಟು ಹೇಳಲಿಲ್ಲ ಅಷ್ಟೇ. ಹೋಗುವಾಗ ಅವನ ಬಾಡಿ ಲಾಂಗ್ವೇಜ್‌ ಹಾಗಿತ್ತು! ನಾನೂ ಅವನಂತೆ ಮಾತಾಡಲು, ವರ್ತಿಸಲು ಸಾಧ್ಯವಿತ್ತೇ ಎಂಬ ಪ್ರಶ್ನೆ ಅವಳಲ್ಲಿ ಹುಟ್ಟಿಕೊಂಡಿತ್ತು. ಮರುಕ್ಷಣವೇ ತನ್ನದೇ ಕರುಳಿನ ಕುಡಿಗಳನ್ನು ಬಿಟ್ಟು ಹೋಗುವುದೇ? ಹೋಗುವ ಸಂದರ್ಭ ಬಂದರೆ ಈ ಲೋಕದಿಂದ ಹೋಗಿ ಬಿಡುತ್ತೇನೆ. ಇಲ್ಲವೇ ಮಕ್ಕಳನ್ನೂ ಜತೆಯಲ್ಲಿ ಕರೆದುಕೊಂಡು ಕೆರೆಗೋ, ಬಾವಿಗೋ ಹಾರಿ. ಇಲ್ಲವೇ ರೈಲಿಗೆ ತಲೆ ಕೊಟ್ಟು ಅನ್ನಿಸಿ ಮಲಗಿದ್ದ ಮಕ್ಕಳ ಮುಖ ನೋಡಿದಳು.

‘ಪಾಪ ಸಣ್ಣವು. ನ್ಯಾನ್ಸಿಗೆ ಆರು. ಅರವಿಂದನಿಗೆ ಮೂರು. ನಾನು ಹೋದರೆ ಅನಾಥರಾಗುತ್ತಾರೆ....’ ಆಮೇಲೆ ಅವರಿಗೆ ಆರ್ಫನೇಜ್‌ಗೆ ಸೇರಿಕೊಳ್ಳುವ ಪರಿಸ್ಥಿತಿ ಬರುತ್ತೆ ಎಂದು ಯೋಚಿಸುತ್ತಿದ್ದಂತೆ ಅವಳ ಬಾಲ್ಯ ನೆನಪಾಯಿತು.

*

ಆಗ ಅವಳಿಗೆ ಮೂರ್ನಾಲ್ಕು ವರ್ಷ. ಅಮ್ಮನನ್ನು ಕಳೆದುಕೊಂಡ ದಿನ. ಅಸ್ಪಷ್ಟವಾಗಿ ನೆನಪಿದೆ. ಸಣ್ಣ ಊರು. ಮಳೆಗಾಲದ ಸಂಜೆ. ಅಮ್ಮನ ಜತೆ ಯಾವುದೋ ಅಂಗಡಿ ಮುಂದೆ ನಿಂತಿದ್ದ ನೆನಪಿದೆ. ಅವಳ ಗಮನವೆಲ್ಲ ಅಂಗಡಿ ಮುಂದೆ ನೇತುಹಾಕಿದ್ದ ಪ್ಲಾಸ್ಟಿಕ್‌ ಗೊಂಬೆ ಮೇಲಿತ್ತು. ಗೊಂಬೆ ಕೊಡಿಸು ಎಂದು ಅಮ್ಮನ್ನ ಕೇಳಬೇಕು ಅನ್ನಿಸಿ ಹಿಂದಕ್ಕೆ ತಿರುಗಿದಳು. ಅಷ್ಟರಲ್ಲಿ ಅಮ್ಮ ಅಲ್ಲಿರಲಿಲ್ಲ! ಅತ್ತಿತ್ತ ನೋಡಿದಳು, ಕಾಣಲಿಲ್ಲ. ಅಮ್ಮ ಎಲ್ಲಿಗೆ ಹೋದಳು ಅನ್ನಿಸಿ ಭಯವಾಗಿ ಅಳು ಬಂತು. ಅಷ್ಟರಲ್ಲಿ ಅಲ್ಲದ್ದವರೊಬ್ಬರು ಬಂದು ಕೈಹಿಡಿದು ಸಂತೈಸಿದರು. ಮಗುವಿನ ತಾಯಿ ಬರಬಹುದೆಂದು ಸ್ವಲ್ಪ ಹೊತ್ತು ಅವಳ ಜತೆ ಇದ್ದರು. ಕತ್ತಲಾದರೂ ಅಮ್ಮ ಬರಲೇ ಇಲ್ಲ. ಮಗಳನ್ನು ಬೀದಿಯಲ್ಲಿ ಬಿಟ್ಟು ಹೋಗಿದ್ದಳು! ಅಳುತ್ತಲೇ ಇದ್ದ ಅವಳನ್ನು ಯಾರೋ ಒಬ್ಬರು ದೊಡ್ಡ ಮನೆ ಬಳಿ ಕರೆತಂದು ಬಿಟ್ಟುಹೋದ ನೆನಪು ಅವಳ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಅವಳು ಬಂದದ್ದು ಚರ್ಚಿಗೆ. ಮನೆಯ ಯಜಮಾನನನ್ನು ಎಲ್ಲರೂ ಫಾದರ್‌ ಎನ್ನುತ್ತಿದ್ದರು.

ಆ ರಾತ್ರಿಯೇ ಫಾದರ್‌ ಅವಳನ್ನು ಚರ್ಚಿನ ಆರ್ಫನೇಜಿನ ವಾರ್ಡನ್‌ಗೆ ಒಪ್ಪಿಸಿದರು. ಆಮೇಲೆ ಅದೇ ಅವಳ ಮನೆಯಾಯಿತು. ನಿನ್ನ ಅಪ್ಪ,ಅಮ್ಮ ಯಾರು? ನಿನ್ನ ಊರು ಯಾವುದು ಎಂದು ಕೇಳಿದವರಿಗೆ ಏನು ಹೇಳಬೇಕು ಎಂಬುದು ಅವಳಿಗೆ ಗೊತ್ತಿರಲಿಲ್ಲ! ತನ್ನದೇ ವಯಸ್ಸಿನ ಎಂಟ್ಹತ್ತು ಮಕ್ಕಳ ಜತೆ ಆಡುತ್ತ ಅಲ್ಲೇ ಇದ್ದಳು. ಹಸಿವಾದಾಗ ವಾರ್ಡನ್‌ ಕೊಟ್ಟದ್ದನ್ನು ತಿಂದಳು. ಇತರ ಮಕ್ಕಳ ಜತೆ ಮಲಗಿದಳು. ಬೆಳಿಗ್ಗೆ, ಸಂಜೆ ಎರಡೂ ಹೊತ್ತು ಪ್ರಾರ್ಥನೆ ಮಾಡಿದಳು. ನಿನ್ನ ಹೆಸರೇನು ಎಂದು ಯಾರಾದರೂ ಕೇಳಿದರೆ ಏನು ಹೇಳಬೇಕು ಅನ್ನೋದು ತಿಳಿಯದೆ ಪೆಚ್ಚಾಗಿ ನಗುತ್ತಿದ್ದಳು.

‘ನಿನ್ನ ಹೆಸರು ಕ್ರಿಸ್ಟಿನಾ, ನೀನು ಏಸುಸ್ವಾಮಿಯ ಮಗು...’ ಎಂದು ವಾರ್ಡನ್‌ ಮೇರಿಯಮ್ಮ ಪದೇ ಪದೇ ಹೇಳಿದರು. ಆಮೇಲೆ ಕ್ರಿಸ್ಟಿನಾ ಅನ್ನೋ ಹೆಸರು ನನ್ನದು ಎಂದು ಅವಳಿಗೆ ಖಾತ್ರಿಯಾಯಿತು. ಕ್ರಿಸ್ಟಿನಾ ಎಂದು ಕೂಗಿದವರ ಕಡೆಗೆ ನೋಡಲು ಶುರು ಮಾಡಿದಳು. ಆರ್ಫನೇಜು ಅವಳ ಮನೆ ಆಯಿತು. ಮೇರಿಯಮ್ಮ ಅಮ್ಮನಾದರು. ಅಮ್ಮನೆಂದರೆ ಹೆತ್ತ ಅಮ್ಮನಂತೆ. ದಿನಗಳು ಕಳೆದಂತೆ ಅವರೇ ನನ್ನ ಅಮ್ಮ ಎಂದು ಅನ್ನಿಸಿತು. ಹೆತ್ತಮ್ಮನ ಮುಖ ಮರೆತೇ ಹೋಯಿತು.

ಮೇರಿಯಮ್ಮ, ಕ್ರಿಸ್ಟಿನಾಳನ್ನು ಸ್ವಂತ ಮಗಳಂತೆ ಜೋಪಾನ ಮಾಡಿದರು. ಅಕ್ಷರ ಕಲಿಸಿದರು. ಚರ್ಚಿನ ಸ್ಕೂಲಿಗೆ ಕಳಿಸಿದರು. ಅವಳಿಗೆ ಹತ್ತನ್ನೆರಡು ವರ್ಷ ಆಗಿತ್ತೇನೋ. ಒಂದು ದಿನ ಕ್ರಿಸ್ಟಿನಾಳನ್ನು ಪಕ್ಕದಲ್ಲಿ ಕೂರಿಸಿಕೊಂಡು ‘ಮಗು, ನೀನು ಬುದ್ದಿವಂತೆ. ಚೆನ್ನಾಗಿ ಓದಬೇಕು. ಓದಿ ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ಚೆನ್ನಾಗಿ ಬದುಕಬೇಕು ...’ಎಂದು ಹೇಳಿದ್ದು ಅವಳಿಗೆ ನೆನಪಿದೆ. ಅಮ್ಮ ಹಾಗೆ ಹೇಳದೇ ಇದ್ದರೆ ಬಿ.ಕಾಂವರೆಗೆ ಓದಲು ಸಾಧ್ಯವಿತ್ತೇ. ಬ್ಯಾಂಕಿನ ಪರೀಕ್ಷೆ ಬರೆದದ್ದೂ ಅಮ್ಮನ ಒತ್ತಾಯದಿಂದ. ಮೂರು ಸಲ ಬರೆದ ಮೇಲೆ ಪಾಸಾಗಿ ಈ ಕೆಲಸ ಸಿಕ್ಕಿದ್ದು.

*

ಯಾರೋ ಮೆಟ್ಟಿಲು ಹತ್ತಿ ಬರುತ್ತಿರುವ ಸದ್ದು ಕೇಳಿಸಿತು. ಕೃಷ್ಣ ಬಂದನೆಂದು ನೆನಪುಗಳನ್ನು ಬದಿಗೆ ತಳ್ಳಿ ಬಾಗಿಲು ತೆರೆದಳು. ಯಾರೂ ಇಲ್ಲ. ಕೃಷ್ಣನೇ ಬಂದ ಅಂದುಕೊಂಡದ್ದು ಭ್ರಮೆ. ಮತ್ತೆ ವಾಸ್ತವಕ್ಕೆ ಬಂದಳು.

‘ಅಪ್ಪ ಅಮ್ಮ, ಅಣ್ಣ ಇದ್ದಿದ್ದರೆ ಅವರ ಆಶ್ರಯಕ್ಕೆ ಹೋಗಿ ಇದ್ದು ಬಿಡಬಹುದಿತ್ತು. ಅವಳಿಗೆ ಮನೆ ಅಂತ ಇದ್ದರೆ ಅದು ಮೊದಲು ಇದ್ದ ಹೋಲಿ ಚರ್ಚಿನ ಆರ್ಫನೇಜ್‌. ಈಗಲೂ ಅದೇ ಅವಳ ನನ್ನ ಮನೆ. ಈಗ ಅಲ್ಲಿ ವಾರ್ಡನ್‌ ಯಾರಿದ್ದಾರೋ? ಮೇರಿಯಮ್ಮ ಇನ್ನೂ ಅಲ್ಲೇ ಇರಬಹುದೇ? ನಂಗೆ ವಯಸ್ಸಾಯ್ತು, ಮಕ್ಕಳನ್ನು ನೋಡಿಕೊಳ್ಳೋಕೆ ನಂಗೆ ಕಷ್ಟವಾಗುತ್ತೆ ಎಂದು ಆರು ತಿಂಗಳ ಹಿಂದೆ ಪೋನ್‌ ಮಾಡಿದಾಗ ಅವರು ಹೇಳಿದ್ದು ನೆನಪಾಯಿತು. ಅವರು ಇನ್ನೂ ಅಲ್ಲೇ ಇದ್ದರೆ ಒಂದೆರಡು ದಿನಗಳ ಮಟ್ಟಿಗೆ ಅಲ್ಲಿ ಉಳಿಯಲು ನನಗೆ ಮತ್ತು ಮಕ್ಕಳಿಗೆ ಅವಕಾಶ ಕೊಡುತ್ತಾರೆ. ಅವರ ತೊಡೆ ಮೇಲೆ ತಲೆ ಇಟ್ಟು ಕಷ್ಟಗಳನ್ನು ಹೇಳಿಕೊಳ್ಳಬೇಕು ಅನ್ನಿಸಿತು. ಭಾವುಕಳಾಗಿ ಕಣ್ಣಲ್ಲಿ ನೀರು ತುಂಬಿಕೊಂಡಿತು. ಅಮ್ಮನ ಜತೆ ಹೋಗಿ ಫಾದರ್‌ಗೆ ನನ್ನ ಸಮಸ್ಯೆಗಳನ್ನು ಹೇಳಬೇಕು. ಮುರಿದು ಬಿದ್ದಿರೋ ನನ್ನ ಸಂಸಾರವನ್ನು ಎತ್ತಿ ನಿಲ್ಲಿಸಿ ಎಂದು ಕೇಳಬೇಕು ಅನ್ನಿಸಿತು. ಈಗ ಹೊಸ ಫಾದರ್‌ ಬಂದಿದ್ದಾರೆ ಎಂದು ಅಮ್ಮ ಹೇಳಿದ್ದು ನೆನಪಾಯಿತು. ಅವರು ನನ್ನ ಮಾತು ಕೇಳಿಸಿಕೊಳ್ಳಬಹುದೇ? ಕೇಳಿಸಿಕೊಂಡರೂ ಏನು ಹೇಳುತ್ತಾರೋ? ತಮ್ಮ ಕೆಲಸ, ಕಾರ್ಯಗಳನ್ನು ಬದಿಗಿಟ್ಟು ನನ್ನ ಪರ ನಿಂತು ನ್ಯಾಯ ಕೊಡಿಸುತ್ತಾರೆ ಅನ್ನೋ ವಿಶ್ವಾಸ ಅವಳಲ್ಲಿ ಹುಟ್ಟಲಿಲ್ಲ.

*

ಮೂರು ವಾರ ಕಳೆದುಹೋದವು.. ‘ನನ್ನ ಹಸ್ಬೆಂಡ್‌, ಕಾಲೇಜಿನ ಕೆಲಸದ ಮೇಲೆ ಹೊರಗೆ ಹೋಗ್ತೀನಿ...’ ಎಂದು ಹೇಳಿ ಹೋದವರು ಇನ್ನೂ ಬಂದಿಲ್ಲ. ಅವರನ್ನು ಎಲ್ಲಿಗೆ ಕಳಿಸಿದ್ದೀರಿ? ಎಂದು ಗಂಡನ ಕಾಲೇಜಿನ ಪ್ರಿನ್ಸಿಪಾಲರನ್ನು ಕೇಳಿದರೆ ಏನಾದರೂ ಗೊತ್ತಾಗಬಹುದು ಅನ್ನಿಸಿತು. ಆದರೆ ಹಾಗೆ ಕೇಳುವುದು ಸರಿಯಲ್ಲ ಅನ್ನಿಸಿ ಸುಮ್ಮನಾದಳು. ಸ್ವಲ್ಪ ಹೊತ್ತಿನ ನಂತರ ವಿಚಾರಿಸಿದರೆ ತಾನೇ ಏನಾದರೂ ಗೊತ್ತಾಗೋದು ಅನ್ನಿಸಿ ಕಾಲೇಜಿಗೆ ಫೋನ್‌ ಮಾಡಿಯೇ ಬಿಟ್ಟಳು.

‘ ಕೃಷ್ಣಮೂರ್ತಿ ಸರ್‌, ಎರಡು ವಾರ ರಜೆ ಹಾಕಿದ್ದಾರೆ...’ ಎಂದು ಆಫೀಸ್‌ ಸೂಪರಿಂಟೆಂಡೆಂಟ್‌ ಹೇಳಿದರು. ಕ್ರಿಸ್ಟಿನಾಗೆ ಸಮಾಧಾನವಾಯಿತು. ಸದ್ಯ, ನೀವು ಯಾರು ಎಂದು ಅವರು ಕೇಳಲಿಲ್ಲ! ಸಂಜೆ ಕೃಷ್ಣನ ಫ್ರೆಂಡು ಪ್ರಭಾಕರನಿಗೆ ಫೋನ್‌ ಮಾಡಿದಳು.

‘ಫ್ಯಾಮಿಲಿ ಜತೆ ಊರು ಸುತ್ತೋಕೆ ಹೋಗ್ತೀನಿ. ಎರಡು ವಾರ ರಜಾ ಹಾಕ್ತಿದ್ದೀನಿ, ಪಾಂಡಿಚೆರಿಗೆ ಹೋಗ್ತೀವಿ...’ ಎಂದು ಹೇಳಿದ್ದ. ನಿಮಗೂ ಹೇಳದೆ ಒಬ್ಬನೇ ಹೋದನೇ ಎಂದು ಅವನೇ ಕ್ರಿಸ್ಟಿನಾಳನ್ನು ಕೇಳಿದ್ದ. ಅವನಿಗೆ ಏನು ಉತ್ತರ ಹೇಳಬೇಕು ಅನ್ನೋದು ಗೊತ್ತಾಗದೆ ಅದೊಂದು ಇಂಟರೆಸ್ಟಿಂಗ್‌ ಸ್ಟೋರಿ. ಕೃಷ್ಣ ಬಂದ ಮೇಲೆ ಅವರನ್ನೇ ಕೇಳಿ ಎನ್ನುತ್ತ ಪೋನ್‌ ಡಿಸ್‌ಕನೆಕ್ಟ್‌ ಮಾಡಿಕೊಂಡಿದ್ದಳು. ಕೊನೆಗೂ ಕೃಷ್ಣನ ಸುಳಿವು ಸಿಕ್ಕಲಿಲ್ಲ! ಅವನ ಫೋನ್‌ ಆಫ್‌ ಆಗಿದೆ. ಇದೇ ಊರಲ್ಲಿರೋ ಅಪ್ಪನ ಮನೆಗೆ ಹೋಗಿರಬಹುದು ಅನ್ನಿಸಿ ಸಂಜೆ ಆಟೋ ಮಾಡಿಕೊಂಡು ಅವನ ಮನೆ ಬಳಿ ಹೋದಳು. ಕೃಷ್ಣನ ಸ್ಕೂಟರು ಮನೆ ಮುಂದೆ ನಿಂತಿತ್ತು! ಅವನು ಮನೆಯೊಳಗೆ ಇರಬಹುದು ಅನ್ನಿಸಿತು. ತಕ್ಷಣ ಆ ಮನೆಯೊಳಕ್ಕೆ ತನಗೆ ಪ್ರವೇಶವಿಲ್ಲ ಅನ್ನೋದು ನೆನಪಾಯಿತು.

‘ಅಪ್ಪ, ಅಮ್ಮ ನಿನ್ನನ್ನು ಸೊಸೆ ಅಂತ ಒಪ್ಪಿಕೊಳ್ಳೋವರೆಗೆ ನಾವು ಆ ಮನೆಯೊಳಕ್ಕೆ ಹೋಗೋಹಾಗಿಲ್ಲ...’ ಎಂದು ಕೃಷ್ಣ ಹೇಳಿದ್ದು ನೆನಪಾಯಿತು. ಅಂಗಳದಲ್ಲಿ ದೊಡ್ಡ ತುಳಸೀ ಕಟ್ಟೆ ಇದ್ದ ಹಳೇ ಹೆಂಚಿನ ಮನೆ. ಸ್ವಲ್ಪ ದೂರದಲ್ಲಿ ಅಟೋ ನಿಲ್ಲಿಸಲು ಹೇಳಿ, ಮನೆಯಿಂದ ಯಾರಾದರೂ ಹೊರಕ್ಕೆ ಬರಬಹುದೇ ಎಂದು ಸ್ವಲ್ಪಹೊತ್ತು ಕಾದಳು. ಕಾಯುವುದು ವ್ಯರ್ಥ ಅನ್ನಿಸಿದ ಮೇಲೆ ಹೊರಟು ಬಂದಳು.

‘ನಿನ್ನ ಹಸ್ಬೆಂಡ್‌ ಊರಲ್ಲಿಲ್ಲ ಅಂತೀಯ. ಅವರು ಬರ್ತಾರೆ ಅನ್ನೋ ನಂಬಿಕೆ ನಿನಗೆ ಇರಬಹುದು. ಅವರಿಗೆ ಏನಾದರೂ ಆಗಿರಬಹುದು! ನೆಗ್ಲೆಕ್ಟ್‌ ಮಾಡಬೇಡ. ಮೊದಲು ಕಂಪ್ಲೇಂಟ್‌ ಕೊಡು. ಪೊಲೀಸರೇ ಪತ್ತೆ ಮಾಡ್ತಾರೆ...’ ಎಂದು ಅವಳ ಕಲೀಗ್‌ಗಳು ಹೇಳಿದರು. ನಮ್ಮ ನಡುವೆ ಆದ ಜಗಳ,ಮನಸ್ತಾಪ, ಜಗಳ ಗೊತ್ತಿಲ್ಲ ಅವರಿಗೆ....’

*

‘ನಿನ್ನ ಇನ್ನೊಂದು ಮಗುವಿಗೆ ಅಮ್ಮ ಆಗ್ತಿದ್ದೀನಿ...’ ಅನ್ನೋ ಸುದ್ದಿಯನ್ನು ಕೃಷ್ಣನಿಗೆ ಹೇಳಬೇಕು ಎಂದು ಕ್ರಿಸ್ಟಿನಾ ಅವತ್ತು ಸಂಜೆಯಿಂದ ಕಾಯುತ್ತಿದ್ದಳು. ಮನೆಗೆ ಬಂದ ಕೂಡಲೇ ಹೇಳಬಾರದು. ಊಟಕ್ಕೆ ಕೂತಾಗ ನಿನಗೊಂದು ಸರ್‌ಪ್ರೈಸ್‌ ಇದೆ ಎಂದು ಹೇಳಿ ಸತಾಯಿಸಿ ಕೊನೆಗೆ ನಾನು ಕನ್ಸೀವ್‌ ಆಗಿದ್ದೀನಿ ಎಂದು ಹೇಳಬೇಕು. ಅವನು ಹೇಗೆ ಪ್ರತಿಕ್ರಿಯಿಸುತ್ತಾನೋ ನೋಡಬೇಕು ಎಂದು ನಿರ್ಧರಿಸಿದ್ದಳು.

ಕೃಷ್ಣನ ಮೂಡ್‌ ಸರಿ ಇಲ್ಲ ಅನ್ನೋದು ಅವನು ಮನೆಯೊಳಕ್ಕೆ ಕಾಲಿಡುತ್ತಿದ್ದಂತೆ ಗೊತ್ತಾಯಿತು. ಈಚೆಗೆ ಅವನು ಸಣ್ಣ ಪುಟ್ಟ ವಿಷಯಗಳಿಗೆ ಕೆಟ್ಟದಾಗಿ ರಿಯಾಕ್ಟ್‌ ಮಾಡೋಕೆ ಶುರು ಮಾಡಿದ್ದ. ಕೆಲವು ಸಲ ಮಾನಸಿಕ ಅಸ್ವಸ್ಥಂತೆ ವರ್ತಿಸುತ್ತಿದ್ದ. ಅವನೇಕೆ ಹಾಗೆ ಎಂದು ಹಲವು ಸಲ ಯೋಚಿಸಿದ್ದಳು. ಅವನದು ಸ್ವಲ್ಪ ತಿಕ್ಕಲು ಸ್ವಭಾವ ಅನ್ನೋದು ಗೊತ್ತಿತ್ತು. ಆದರೆ ಅವನು ಇಷ್ಟರ ಮಟ್ಟಿಗೆ ಮಾನಸಿಕ ಅಸ್ವಸ್ಥ ಎಂದು ಯಾವತ್ತೂ ಅನ್ನಿಸಿರಲಿಲ್ಲ.

‘ವಾರಕ್ಕೊಂದು ದಿನ ಕುಡೀತೀನಿ. ಅದರಿಂದ ಏನೂ ತೊಂದರೆ ಇಲ್ಲ ಅಂದಿದ್ದವನು ಈಚೆಗೆ ದಿನ ಬಿಟ್ಟು ದಿನ ಕುಡಿಯೋಕೆ ಶುರು ಮಾಡಿದ. ಮಕ್ಕಳು ದೊಡ್ಡವರಾಗ್ತಿದ್ದಾರೆ,ನೀನು ಕುಡಿಯೋದು ಅವರಿಗೆ ಗೊತ್ತಾಗುತ್ತೆ. ಮಕ್ಕಳ ಕಣ್ಣಲ್ಲಿ ಸಣ್ಣವನಾಗಬೇಡ. ಅಳತೆ ತಪ್ಪಿದರೆ ಅಮೃತವೂ ವಿಷವಾಗುತ್ತೆ. ನಿತ್ಯ ಕುಡಿಯೋರ ಪರಿಸ್ಥಿತಿ ಏನಾಗಿದೆ ಅನ್ನೋದು ನಿನಗೆ ನಾನು ಹೇಳಬೇಕಿಲ್ಲ ...’ ಎಂದು ಒಂದು ದಿನ ಕ್ರಿಸ್ಟಿನಾ ಎಚ್ಚರಿಸಿದ್ದಳು.

ಅದಕ್ಕವನು ಸಾರಿ. ಕಡಿಮೆ ಮಾಡಿಕೊಳ್ಳುತ್ತೀನಿ ಅಂದಿದ್ದನೇ ಹೊರತು ಕಡಿಮೆ ಮಾಡಲಿಲ್ಲ. ಕುಡಿದು ಬಂದ ದಿನ ಆಕ್ಷೇಪಣೆ ಮಾಡಬಹುದು ಅಂತ ಸಾಫ್ಟ್‌ ಆಗಿ ವರ್ತಿಸುತ್ತಿದ್ದ. ಆದರೆ ಅವತ್ತು ಮೈಪರಚಿಕೊಳ್ಳುವಷ್ಟು ಹತಾಶನಾಗಿದ್ದ! ಕಾರಣವೇ ಇಲ್ಲದೆ ರೇಗಿದ. ಅವನ ಕೂಗಾಟಕ್ಕೆ ನ್ಯಾನ್ಸಿಗೆ ಎಚ್ಚರವಾಯಿತು. ಸಿಟ್ಟಾದ ಅಪ್ಪನನ್ನು ನೋಡಿ ಹೆದರಿ ಗುಬ್ಬಚ್ಚಿಯಂತೆ ಮೂಲೆಯಲ್ಲಿ ಕೂತುಬಿಟ್ಟಳು.

‘ಇವತ್ತು ಬ್ಯಾಂಕಿಗೆ ಬಂದಿದ್ದೆ. ನೀನು ಕೆಲಸಕ್ಕೆ ಬಂದಿಲ್ಲ ಅಂತ ಅಟೆಂಡರ್‌ ಹೇಳಿದ. ಎಲ್ಲಿಗೆ ಹೋಗಿದ್ದೆ ...’ಎಂದು ಜೋರು ಧ್ವನಿಯಲ್ಲಿ ಕೇಳಿದ್ದ!

ರಿಕವರಿ ಸೆಕ್ಷನ್‌ನಲ್ಲಿ ಒಬ್ಬರು ರಜಾ ಹಾಕಿದ್ದರು. ಒಂದು ದಿನದ ಮಟ್ಟಿಗೆ ಅಲ್ಲಿ ಕೆಲಸ ಮಾಡಿ ಎಂದು ಮ್ಯಾನೇಜರ್‌ ಹೇಳಿದರು. ಸಾಲದ ತಗಂಡಿದ್ದ ಪಾರ್ಟಿಯೊಬ್ಬರ ಅಸೆಟ್‌ ರಿಕವರಿಗೆ ಹೋಗಿದ್ವಿ, ಅದು ಅಟೆಂಡರ್‌ಗೆ ಗೊತ್ತಿಲ್ಲ ಅನ್ಸುತ್ತೆ. ನಂಜತೆ ರಿಕವರಿ ಎಜಿಎಂ ಸರಸ್ವತಿ ಭಟ್‌ ಬಂದಿದ್ದರು. ಮೂರೂವರೆಗೆ ಬ್ಯಾಂಕಿಗೆ ಬಂದ್ವಿ...’ ಎಂದು ಕ್ರಿಸ್ಟಿನಾ ಹೇಳಿದ್ದು ಅವನಿಗೆ ಇಷ್ಟವಾಗಲಿಲ್ಲ.

‘ಐದಾರು ದಿನಗಳ ಹಿಂದೆ ಚರ್ಚ್‌ಸ್ಟ್ರೀಟ್‌ನಲ್ಲಿ ನಿನ್ನ ನೋಡಿದೆ. ಯಾರ ಜತೆಗೋ ಮಾತಾಡ್ತ ನಿಂತಿದ್ದೆ...’ ಎಂದು ಕೃಷ್ಣ ಹೇಳುತ್ತಿದ್ದಂತೆ ಕ್ರಿಸ್ಟಿನಾಗೆ ರೇಗಿ ಹೋಯಿತು. ಕುಡಿದು ಬಂದವನಿಗೆ ಉತ್ತರ ಕೊಟ್ಟರೆ ಮಾತು ಇನ್ನೆಲ್ಲಿಗೋ ಹೋಗುತ್ತೆ ಅನ್ನಿಸಿ ಅವನ ಪ್ರಶ್ನೆಗಳಿಗೆ ಉತ್ತರಿಸದೆ ಸುಮ್ಮನಿದ್ದಳು. ಮುಖ ತೊಳೆದು ಬಾ. ಊಟ ಬಡಿಸ್ತೀನಿ. ಊಟ ಮಾಡಿ ಮಲಗು. ಬೆಳಿಗ್ಗೆ ಮಾತಾಡೋಣ ಅಂದರೂ ಅವನು ಕೇಳಲಿಲ್ಲ. ಕೂಗಾಡುತ್ತಲೇ ಇದ್ದ. ಹಾಲ್‌ನಿಂದ ರೂಮಿಗೆ, ರೂಮಿನಿಂದ ಮಕ್ಕಳ ಬೆಡ್‌ ರೂಮಿಗೆ ದಡ ದಡ ಓಡಾಡಿದ. ಅಪ್ಪನ ಅಬ್ಬರಕ್ಕೆ ಹೆದರಿದ್ದ ನ್ಯಾನ್ಸಿಗೆ ಅಳಲು ಶುರು ಮಾಡಿದಳು. ಗಾಢ ನಿದ್ದೆಯಲ್ಲಿದ್ದ ಅರವಿಂದನಿಗೂ ಎಚ್ಚರವಾಯಿತು. ಇಬ್ಬರೂ ಅಪ್ಪ ರಾದ್ಧಾಂತಕ್ಕೆ ಹೆದರಿ ಅಳತೊಡಗಿದರು. ಆಮೇಲೆ ಸ್ವಲ್ಪ ಹೊತ್ತು ಹಾಲ್‌ನಲ್ಲಿ ಕೂತು ಏನೇನೋ ಬಡಬಡಿಸುತ್ತಿದ್ದ. ತನ್ನೊಳಗೆ ಅದುಮಿಕೊಂಡಿದ್ದ ಅಪದ್ಧಗಳನ್ನೆಲ್ಲ ಕಕ್ಕಿದ.

‘ನಿಂಜತೆ ಇರೋಕೆ ನಂಗೆ ಇಷ್ಟವಿಲ್ಲ! ನೀನು ಆರ್ಫನೇಜ್‌ನಲ್ಲಿ ಇದ್ದವಳಲ್ವ? ನಿನ್ನ ನಡವಳಿಕೆ ಸರಿ ಇಲ್ಲ ಅನ್ನೋದು ಊರಿಗೆಲ್ಲಾ ಗೊತ್ತಿದ್ದರೂ ನಂಗೇ ಗೊತ್ತಾಗಲಿಲ್ಲ! ಹಿಂದೆ ಮುಂದೆ ವಿಚಾರಿಸದೆ ಮದುವೆ ಆದೆ. ನೀನು ನಿನ್ನ ಹಳೇ ಚಾಳಿ ಬಿಡಲಿಲ್ಲ! ನನ್ನ ನಂಬಿಕೆ ಉಳಿಸಿಕೊಳ್ಳಲಿಲ್ಲ...’ ಎಂದು ಕೂಗಾಡಿದ. ಅವನು ಹೇಳಿದ್ದೆಲ್ಲ ಅಪದ್ಧ. ಕೊಳಕು ಮಾತುಗಳನ್ನು ಮಕ್ಕಳೆದುರು ಆಡಲು ಅವನು ಹಿಂಜರಿಯಲಿಲ್ಲ ಅನ್ನಿಸಿ ಕ್ರಿಸ್ಟಿನಾಗೆ ಅವನ ಬಗ್ಗೆ ಜಿಗುಪ್ಸೆಯಾಗಿತ್ತು. ನನ್ನ ನಡವಳಿಕೆ ಸರಿ ಇಲ್ಲ ಅಂದರೇನು?

‘ನಿನ್ನ ಮದುವೆ ಆಗೋಕೆ ಅಪ್ಪ, ಅಮ್ಮನ ವಿರೋಧ ಎದುರಿಸಲು ನಾನು ರೆಡಿ. ಜೀವನ ಪೂರ್ತಿ ನೀನು ನನ್ನ ಜತೆ ಇದ್ದರೆ ಸಾಕು...’ ಎಷ್ಟೇ ಕಷ್ಟಗಳು ಬರಲಿ ಎದುರಿಸ್ತೀನಿ ಎಂದು ಹೇಳಿದ್ದ ಕೃಷ್ಣ ಇವನೇ ಏನು? ಅವನನ್ನು ನನ್ನ ಜೀವ ಎಂದು ಭಾವಿಸಿದ್ದೆನಲ್ಲ! ನನ್ನ ಬದುಕಿಗೆ ಅರ್ಥ ಬಂದಿದ್ದು ಅವನಿಂದ ಎಂದು ಅನೇಕ ಸಲ ಅನ್ನಿಸಿತ್ತು. ಮಕ್ಕಳಾದ ಮೇಲೂ ಅವನ ಮೇಲಿನ ಪ್ರೀತಿ ಕಡಿಮೆ ಆಗಲಿಲ್ಲ! ಬದಲಾಗಿ ಅಕ್ಷಯವಾಗುತ್ತ ಹೋಯಿತು. ಕೃಷ್ಣ ನನ್ನ ಮೇಲೆ ನಂಬಿಕೆ ಕಳೆದುಕೊಂಡಿದ್ದು ಹೇಗೆ? ನನ್ನಿಂದ ಏನು ತಪ್ಪಾಯಿತು. ಎಲ್ಲಿ ಎಡವಿದೆ ಎಂದು ಮತ್ತೆ ಮತ್ತೆ ಯೋಚಿಸಿದ್ದಳು. ಉತ್ತರ ಸಿಕ್ಕಿರಲಿಲ್ಲ.

‘ಕುಡಿದಾಗ ನಿಂಗೆ ಕೆಟ್ಟ ಯೋಚನೆಗಳು ಬರ್ತವೆ. ನೀನು ಬರೋ ಹೊತ್ತಿಗೆ ಮಕ್ಕಳು ಮಲಗಿರ್ತವೆ. ನ್ಯಾನ್ಸಿ ಹೇಗೆ ಓದ್ತಿದ್ದಾಳೆ ಅನ್ನೋದನ್ನೂ ನೀನು ಗಮನಿಸ್ತ ಇಲ್ಲ. ಏನಾಗಿದೆ ನಿಂಗೆ? ...’ಎಂದು ಕ್ರಿಸ್ಟಿನಾ ಕೇಳಿದ್ದು ಅವನಿಗೆ ಇಷ್ಟವಾಗಲಿಲ್ಲ. ಮರುಕ್ಷಣವೇ ಮತ್ತೆ ಕೂಗಾಡಿದ.

‘ನೀನು ಸರಿಯಾಗಿದ್ದರೆ ನಾನೂ ಸರಿಯಾಗಿರ್ತಿದ್ದೆ ...’ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳಿದ.

ನೀನು ಸರಿ ಇಲ್ಲ ಎಂದು ಅವನು ಹೇಳಿದ್ದು ಅದೇ ಮೊದಲು!

*

ಅವನ ಮೊದಲ ಸಲ ಭೇಟಿ ನೆನಪಾಯಿತು. ಸಂಜೆ ಬ್ಯಾಂಕಿನಿಂದ ಹಾಸ್ಟೆಲಿಗೆ ಹೊರಡುವ ಸಮಯ. ನಿಮ್ಮ ಜತೆ ಮಾತಾಡಬೇಕು ಅನ್ನುತ್ತ ಅವಳ ಮುಂದೆ ಬಂದು ನಿಂತ. ಆಗಾಗ ಬ್ಯಾಂಕಿಗೆ ಬರುತ್ತಿದ್ದ ಕಸ್ಟಮರ್‌ ಕೃಷ್ಣಮೂರ್ತಿ ಅನ್ನೋ ಕಾರಣಕ್ಕೆ ಅವನ ಮುಖ ನೋಡುತ್ತ ಏನು ಮಾತು ಎಂದು ಕೇಳಿದ್ದಳು. ನಂತರ ಇಬ್ಬರೂ ಕಾಫಿಹೌಸ್‌ಗೆ ಹೋಗಿ ಕೂತು ಮಾತಾಡಿದ್ದರು.

ಅವನ ಹೆಸರು ಬಿ.ಕೃಷ್ಣಮೂರ್ತಿ ಅಂತಷ್ಟೇ ಗೊತ್ತಿತ್ತು. ಪೂರ್ಣ ಹೆಸರು ಬೃಂದಾವನಂ ಕೃಷ್ಣಮೂರ್ತಿ ಅನ್ನೋದು ಗೊತ್ತಾಗಿದ್ದು ಅವತ್ತೇ. ಬ್ಯಾಂಕಿನ ಕಸ್ಟಮರೊಬ್ಬ ನನ್ನನ್ನು ಮದುವೆ ಆಗ್ತೀರಾ ಎಂದು ಕೇಳುತ್ತಾನೆ ಎಂದು ಕ್ರಿಸ್ಟಿನಾ ಊಹಿಸಿರಲಿಲ್ಲ! ಅವನ ಪ್ರೇಮ ನಿವೇದನೆಯ ಪರಿ ಅವಳಿಗೆ ಇಷ್ಟವಾಗಲಿಲ್ಲ. ಸ್ವಲ್ಪ ಸಮಯ ತಗಂಡು ಯೋಚಿಸಿ ನಿಧಾನವಾಗಿ ಹೇಳಿದ. ಆಮೇಲೆ ಒಂದು ತಿಂಗಳು ಅವನು ಬ್ಯಾಂಕಿನ ಕಡೆ ತಲೆ ಹಾಕಲಿಲ್ಲ. ನಂತರ ಬಂದ ಮೇಲೂ ಅದೇ ಪ್ರಸ್ತಾವ ಇಟ್ಟ.

‘ನೋಡಿ, ಮಿ. ಕೃಷ್ಣಮೂರ್ತಿ, ನಾನು ಕ್ರಿಶ್ಚಿಯನ್‌. ಆರ್ಫನೇಜ್‌ನಲ್ಲಿ ಬೆಳೆದವಳು. ನಂಗೆ ಅಪ್ಪ, ಅಮ್ಮ ಯಾರೂ ಇಲ್ಲ. ನಾನು ಯಾವ ಧರ್ಮ, ಜಾತಿಯವಳು ಅನ್ನೋದು ಗೊತ್ತಿಲ್ಲ! ನಂಗೆ ಕ್ರಿಸ್ಟಿನಾ ಅಂತ ಹೆಸರು ಇಟ್ಟವರು ನಾನಿದ್ದ ಆರ್ಫನೇಜಿನ ವಾರ್ಡನ್‌. ಅವರಿಗೂ ನನ್ನ ಹಿನ್ನೆಲೆ ಗೊತ್ತಿರಲಿಲ್ಲ. ಅವರು ನನ್ನನ್ನು ಅವರ ಮಗಳಂತೆ ಬೆಳೆಸಿದರು. ಅವರೇ ನನ್ನನ್ನು ಸ್ಕೂಲಿಗೆ ಕಳಿಸಿದರು. ಅವರ ಒತ್ತಾಯದಿಂದ ಓದಿದೆ. ಅವರೇ ಒತ್ತಾಯ ಮಾಡಿ ಬ್ಯಾಂಕಿನ ಕೆಲಸಕ್ಕೆ ಅರ್ಜಿ ಹಾಕಿಸಿದರು. ಅವರ ಪ್ರಾರ್ಥನೆಯಿಂದ ನಂಗೆ ಈ ಕೆಲಸ ಸಿಕ್ಕಿದೆ. ನೀವು ಸಂಪ್ರದಾಯಸ್ಥ ಕುಟುಂಬದವರ ಹಾಗೆ ಕಾಣ್ತೀರಿ. ನಿಮಗೆ ಅಪ್ಪ, ಅಮ್ಮ, ಇದ್ದಾರೆ. ಜಾತಿ, ಧರ್ಮ ಇದೆ. ನಾನು ನಿಮ್ಮ ಕುಟುಂಬಕ್ಕೆ ಸರಿ ಹೋಗಲ್ಲ. ನಿಮ್ಮ ಸಂಪ್ರದಾಯ, ಆಚಾರ, ವಿಚಾರಗಳು ನಂಗೆ ಗೊತ್ತಿಲ್ಲ. ...’

‘ಮದುವೆ ಆದ ಮೇಲೆ ನಿಮ್ಮ ತಾಯಿ ಬಂದು ನನ್ನ ಮಗನನ್ನು ನೀನು ಕಿತ್ತುಕೊಂಡೆ ಎಂದು ಹೇಳಿದರೆ ಅವರಿಗೆ ಏನು ಉತ್ತರ ಹೇಳಲಿ? ಮದುವೆ ಕೆಲವೇ ನಿಮಿಷಗಳಲ್ಲಿ ಮುಗಿದು ಹೋಗುತ್ತೆ. ಜೀವನ ಹಾಗಲ್ಲ. ನಮ್ಮಿಬ್ಬರ ಪೈಕಿ ಒಬ್ಬರು ಬದುಕಿರೋವರೆಗೆ ನಮ್ಮ ಸಂಬಂಧ ಇರುತ್ತೆ. ನೀವೋ, ನಾನೋ ಸತ್ತ ಮೇಲೂ ನಮ್ಮ ಮಕ್ಕಳು ನಮ್ಮ ಸಂಬಂಧವನ್ನು ಗೌರವಿಸಬೇಕು ಎಂದು ನಾನು ಬಯಸ್ತೀನಿ. ನಾನು ಚೆನ್ನಾಗಿ ಯೋಚನೆ ಮಾಡಿ ಹೇಳ್ತಿದ್ದೀನಿ. ನಿಮ್ಮ ಜತೆ ಮದುವೆ ಸಾಧ್ಯವಿಲ್ಲ...’ ಎಂದು ಕ್ರಿಸ್ಟಿನಾ ಹೇಳಿದ್ದಳು.

ಮೂರು ತಿಂಗಳು ಕೃಷ್ಣ ಅವಳ ಭೇಟಿಗೆ ಬರಲಿಲ್ಲ. ಆಮೇಲೆ ಒಂದು ದಿನ ಸಂಜೆ ಅವಳ ಹಾಸ್ಟೆಲಿಗೆ ಬಂದ. ನಿಮ್ಮನ್ನು ಮದುವೆ ಆಗೋದು ಅಂತ ತೀರ್ಮಾನ ಮಾಡಿದ್ದೇನೆ. ನನ್ನ ನಿರ್ಧಾರ ಬದಲಾಗಲ್ಲ. ಮದುವೆ ಮಾಡಿಕೊಳ್ಳೋಕೆ ನೀವು ಒಪ್ಪಬೇಕು. ನಿಮಗಾಗಿ ನಾನು ಎಷ್ಟು ದಿನ ಬೇಕಾದರೂ ಕಾಯ್ತೀನಿ ಎಂದು ಸಿನಿಮಾ ಪ್ರೇಮಿಯಂತೆ ಹೇಳಿದ.

ಒಂದು ಮಾತು ನೆನಪಿಟ್ಟುಕೊಳ್ಳಿ. ನಿಮ್ಮನ್ನು, ನೀವು ಹೆತ್ತು ಕೊಡೋ ನಮ್ಮ ಮಕ್ಕಳನ್ನು ನಾನು ಬದುಕಿರೋವರೆಗೆ ಚೆನ್ನಾಗಿ ನೋಡಿಕೊಳ್ತೀನಿ ...’ ಎಂದು ಹೇಳಿದ್ದ. ಆಮೇಲೂ ಆಗಾಗ ಬ್ಯಾಂಕಿಗೆ ಬಂದು ಏನು ನಿರ್ಧಾರ ಮಾಡಿದಿರಿ ಎಂದು ಕೇಳುತ್ತಲೇ ಇದ್ದ. ಮದುವೆಗೆ ಒಪ್ಪದಿದ್ದರೆ ನಾನು ಒಂಟಿಯಾಗಿ ಇದ್ದು ಬಿಡ್ತೀನಿ ಅಂದಿದ್ದ. ಮದುವೆಗೆ ಮೊದಲು ಹಾಗೆಲ್ಲ ಹೇಳಿದವನು,ನನ್ನ ಕೃಷ್ಣನೇ ಎಂದು ಕ್ರಿಸ್ಟಿನಾ ಯೋಚಿಸಿದಳು.

*

‘ಆರ್ಫನೇಜ್‌ನಲ್ಲಿರೋ ಹೆಣ್ಮಕ್ಕಳನ್ನು ಈ ಸಮಾಜ ವಿಚಿತ್ರವಾಗಿ ನೋಡುತ್ತೆ . ನೀನು ನೋಡೋಕೆ ಚೆನ್ನಾಗಿದ್ದೀಯ, ಒಳ್ಳೇ ಸಂಬಳ ಬರುವ ಕೆಲಸದಲ್ಲಿದ್ದೀಯ. ನಿನ್ನ ಇಷ್ಟಪಡ್ತೀನಿ, ಮದುವೆ ಆಗ್ತೀನಿ ಅಂತ ಕೇಳಿಕೊಂಡು ಬರೋ ಗಂಡಸರ ಬಗ್ಗೆ ನೀನು ಹುಷಾರಾಗಿರಬೇಕು. ಟೀಕಾಗಿ ಡ್ರೆಸ್‌ ಮಾಡಿಕೊಂಡು ಸೆಂಟು ಪೂಸಿಕೊಂಡು ನಗುತ್ತ ಬರುವ ಗಂಡಸರನ್ನು ನಂಬಬೇಡ. ನಿನ್ನನ್ನು ಪ್ರೀತಿಸ್ತೀನಿ ಅಂತ ಹೇಳಿದವನನ್ನು ಅನುಮಾನಿಸು. ಅವನದು ಪ್ರೀತಿಯಲ್ಲ, ದೇಹದ ಆಕರ್ಷಣೆ. ಅದು ಹೆಚ್ಚು ಕಾಲ ಉಳಿಯಲ್ಲ. ನೀನು ಆರ್ಫನೇಜಲ್ಲಿದ್ದೆ ಅನ್ನೋದೇ ನಿನ್ನ ಭವಿಷ್ಯಕ್ಕೆ ತೊಡಕಾಗಬಹುದು. ನೀನು ಎಷ್ಟು ಎಚ್ಚರವಾಗಿದ್ದರೂ ಸಾಲದು...’ ಎಂದು ಮೇರಿಯಮ್ಮ ಕೆಲಸಕ್ಕೆ ಸೇರಲು ಆರ್ಫನೇಜ್‌ನಿಂದ ಹೊರಡುವಾಗ ಹೇಳಿದ್ದರು.

‘ನಾನು ನಿಂಗೆ ಹೆಚ್ಚೇನೂ ಹೇಳಲ್ಲ. ಏನೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಹತ್ತಾರು ಸಲ ಯೋಚನೆ ಮಾಡು. ನಿನ್ನ ನೆರಳನ್ನೂ ನಂಬಬೇಡ ಎಂದು ಕೆಲಸಕ್ಕೆ ಸೇರಿಕೊಂಡ ದಿನ, ಸಂಜೆ ಇಲ್ಲಿ ಎಲ್ಲವೂ ಅನುಕೂಲವಾಗಿದೆ ಎಂದು ಹೇಳಲು ಫೋನ್‌ ಮಾಡಿದಾಗ ಮೇರಿಯಮ್ಮ ಹೇಳಿದ್ದರು. ಮೊದಲ ಸಲ ಗಂಡನ ಮನೆಗೆ ಹೊರಟು ನಿಂತ ಮಗಳಿಗೆ ಹೇಳುವ ಬುದ್ದಿ ಮಾತುಗಳಂತಿದ್ದವು ಅಮ್ಮನ ಮಾತುಗಳು.

‘ಅನಾಥ ಹೆಣ್ಣುಗಳ ಮೇಲೆ ಹಕ್ಕು ಸಾಧಿಸಲು ಬರುವ ಗಂಡುಗಳಿಗೆ ಲೆಕ್ಕವಿಲ್ಲ. ನಿನ್ನಂಥ ಹೆಣ್ಮಕ್ಕಳ ಕಷ್ಟಗಳಿಗೆ ಕೊನೆ ಇರಲ್ಲ ಎಂದು ಮೇರಿಯಮ್ಮ ಫೋನ್‌ ಮಾಡಿದಾಗಲೆಲ್ಲ ಹೇಳುತ್ತಲೇ ಇದ್ದರು. ಅವರ ಮಾತು ನಿಜ ಅನ್ನಿಸಿದರೂ, ಎಲ್ಲಾ ಕಷ್ಟಗಳಿಗೂ ಕೊನೆ ಅನ್ನೋದು ಇದ್ದೇ ಇರುತ್ತೆ ಅನ್ನೋ ವಿಶ್ವಾಸ ಅವಳಿಗೆ ಬಂದಿದ್ದು ಕೆಲಸಕ್ಕೆ ಸೇರಿಕೊಂಡ ಮೇಲೆ. ಮೊದಲ ದಿನ ಅವಳ ಬ್ಯಾಂಕಿನಲ್ಲೇ ಕೆಲಸ ಮಾಡುವ ನಡು ವಯಸ್ಸಿನ ಕಲೀಗೊಬ್ಬರು ಅವರಿರುವ ವರ್ಕಿಂಗ್‌ ವಿಮೆನ್ಸ್‌ ಹಾಸ್ಟೆಲಿನ ವಿಷಯ ತಿಳಿಸಿ, ಅಲ್ಲಿ ಸೆಕ್ಯುರಿಟಿ ಚೆನ್ನಾಗಿದೆ. ನಿಮಗೆ ಅಟ್ಮಾಸ್ಪಿಯರ್‌ ಇಷ್ಟವಾಗುತ್ತೆ ಎಂದು ಹೇಳಿ ಸಂಜೆಯೇ ಕ್ರಿಸ್ಟಿನಾಳನ್ನು ಅವರಿದ್ದ ಹಾಸ್ಟೆಲಿಗೆ ಕರೆದುಕೊಂಡು ಹೋಗಿದ್ದರು. ಅವರು ಹೇಳಿದ್ದು ನಿಜ ಅನ್ನಿಸಿ ಅಲ್ಲಿಗೆ ಸೇರಿಕೊಂಡ ಮೇಲೇ ಕ್ರಿಸ್ಟಿನಾಗೆ ಧೈರ್ಯವಾಗಿ ಬದುಕುವ ವಿಶ್ವಾಸ ಬಂದಿದ್ದು.

*

ಆರ್ಯ ಸಮಾಜದಲ್ಲಿ ಬ್ಯಾಂಕಿನ ಸಹದ್ಯೋಗಿಗಳು ಮತ್ತು ಕೃಷ್ಣನ ಕೆಲವೇ ಗೆಳೆಯರ ಸಮಕ್ಷಮದಲ್ಲಿ ಮದುವೆ ಆಗಿತ್ತು. ಮದುವೆ ಆದ ಮೇಲೆ ಕೃಷ್ಣನ ಕಡೆಯವರು ಸಂಸಾರ ಶುರು ಮಾಡಲು ಅಡ್ಡಿ ಮಾಡಬಹುದು ಎನ್ನುವ ಹೆದರಿಕೆ ಇತ್ತು. ಸದ್ಯ ಹಾಗೇನೂ ಆಗಲಿಲ್ಲ. ನಮ್ಮದೇ ಒಂದು ಮನೆ ಅಂತಾದ ಮೇಲೇ ನಾನು ಅನಾಥೆಯಲ್ಲ ಅನ್ನೋ ಭಾವ ಬಲಿಯುತ್ತ ಹೋಯಿತು. ಗಂಡ ಇದ್ದಾರೆ, ಮನೆ ಇದೆ ಎಂಬ ಮನಸ್ಥಿತಿ ಬೆಳೆದು ತಾನೂ ಒಬ್ಬ ಗೃಹಿಣಿಯಾದೆ ಎಂಬ ಭಾವ ಬಲಿತು ಕ್ರಮೇಣ ಸ್ಥಾಯಿಯಾಗಿತ್ತು. ಆದರೆ ಅದು ಸಂಚಾರಿ ಭಾವ ಅನ್ನೋದು ಗೊತ್ತಾದ ಮೇಲೆ ಯಾಕಾದರೂ ಮದುವೆ ಮಾಡಿಕೊಂಡು ಮಕ್ಕಳನ್ನು ಹೆತ್ತೆನೋ ಎಂದು ಈಗ ಹಳಹಳಿಸುತ್ತಿದ್ದಾಳೆ!

ಎರಡು ಮಕ್ಕಳನ್ನು ಹೆತ್ತು ಕೊಟ್ಟ ಮೇಲೆ ಗಂಡನಿಗೆ ನಾನು ಬೇಡವಾದೆ. ಮೂರನೆಯದು ನನ್ನ ಹೊಟ್ಟೆಯಲ್ಲಿ ಕೂತಿದೆ ಅನ್ನೋದನ್ನು ಅವನಿಗೆ ಹೇಳಲು ಆಗಲಿಲ್ಲ. ಹೇಳಿ ಅವನ ಸಂಭ್ರಮವನ್ನು ನೋಡಬೇಕು ಅಂತಿರುವಾಗಲೇ ಜಗಳ ಶುರುವಾಯಿತು. ಅದು ತಾರಕಕ್ಕೆ ಹೋಯಿತು. ಅವನು ಮನೆಯಿಂದ ಹೋಗಿ ಬಿಟ್ಟ! ಕೃಷ್ಣ ಮನೆ ಬಿಟ್ಟು ಹೋದದ್ದು ಯಾರಿಗೂ ಗೊತ್ತಿಲ್ಲ. ಗಂಡ ಬಿಟ್ಟ ಹೆಂಗಸನ್ನು, ಅವಳ ಮಕ್ಕಳನ್ನು ಅಕ್ಕಪಕ್ಕದ ಮನೆಗಳ ಜನ ಹೇಗೆ ನೋಡಬಹುದು? ಮಗಳು ನ್ಯಾನ್ಸಿ ಇನ್ನೈದಾರು ವರ್ಷಗಳಲ್ಲಿ ದೊಡ್ಡವಳಾಗುತ್ತಾಳೆ. ಅವಳ ಮೇಲೆ ಕೆಟ್ಟ ಕಣ್ಣುಗಳು ಬೀಳದಂತೆ ಕಾಯೋದು ನನ್ನೊಬ್ಬಳಿಂದ ಸಾಧ್ಯವೇ ಎಂದು ಕ್ರಿಸ್ಟಿನಾ ಪ್ರತಿಕ್ಷಣವೂ ಯೋಚಿಸಿದ್ದಳು.

ಈಗ ಯೋಚಿಸಿ ಪ್ರಯೋಜನ ಇಲ್ಲ ಅನ್ನಿಸಿ ಮನಸ್ಸು ವಾಸ್ತವಕ್ಕೆ ಬರುತ್ತಿತ್ತು. ಪ್ರಪಂಚ ವಿಶಾಲವಾಗಿದೆ. ಸಂಬಳ ಬರುವ ಕೆಲಸವಿದೆ ಜೀವನ ಹೇಗೋ ನಡೆದುಕೊಂಡು ಹೋಗುತ್ತೆ. ಎಲ್ಲವನ್ನೂ, ಎಲ್ಲರನ್ನೂ ಎದುರಿಸಬೇಕು. ಸರ್ಕಾರ ಇದೆ. ಪೋಲಿಸರಿದ್ದಾರೆ. ಬ್ಯಾಂಕಿನ ಕಲೀಗ್‌ಗಳಿದ್ದಾರೆ. ನಮ್ಮ ಸುತ್ತ ಇರೋರೆಲ್ಲ ಕೆಟ್ಟವರಲ್ಲ. ದೇವರಿದ್ದಾನೆ, ಪಾಂಡಿಚೆರಿಯ ಗುರುಗಳು ಬೆನ್ನಿಗಿದ್ದಾರೆ. ಏನೂ ತೊಂದರೆ ಆಗಲ್ಲ. ಮಕ್ಕಳ ಜತೆ ಇರೋದು ಕಷ್ಟ ಅನ್ನಿಸಿದರೆ ಆರ್ಫನೇಜ್‌ನಿಂದ ಒಬ್ಬಿಬ್ಬರನ್ನು ಕರೆತಂದು ಜತೆಯಲ್ಲೇ ಇರಿಸಿಕೊಂಡು ನಮ್ಮ ಬಳಗ ದೊಡ್ಡದು ಅನ್ನೋ ಹಾಗೆ ಬದುಕಬೇಕು ಎಂದು ಒಮ್ಮೊಮ್ಮೆ ಕ್ರಿಸ್ಟಿನಾಗೆ ಅನ್ನಿಸುತ್ತಿತ್ತು.

*

ಮೊದಲು ಈ ಊರು ಬಿಟ್ಟು ಹೋಗಬೇಕು. ಎಲ್ಲಿಗಾದರೂ ದೂರದ ಊರಿಗೆ. ಅಲ್ಲಿ ನೆಮ್ಮದಿಯಾಗಿ ಇರಬಹುದು ಅನ್ನಿಸಿದರೆ ಅಲ್ಲಿಗೆ ವರ್ಗಾ ಮಾಡಿಸಿಕೊಳ್ಳಬಹುದು. ತನಗೆ, ಮಕ್ಕಳಿಗೆ ಒಂದು ನೆಮ್ಮದಿಯ ಆಶ್ರಯ ಹುಡುಕಬೇಕು ಅನ್ನಿಸಿ ಆರ್ಫನೇಜ್‌ನ ವಾರ್ಡನ್ ಮೇರಿಯಮ್ಮನ ಮನೆಗೆ ಹೋಗಿ ಅವರ ಸಲಹೆ ಕೇಳುವ ನಿರ್ಧಾರ ಮಾಡಿದಳು. ಅಷ್ಟರಲ್ಲಿ ಬಾಗಿಲು ತಟ್ಟಿದ ಶಬ್ದವಾಯಿತು. ಕೃಷ್ಣ ಬಂದ ಎಂಬ ಭಾವದಲ್ಲಿ ಬಾಗಿಲು ತೆರೆದರೆ ಎದುರಿಗೆ ವಾಚ್‌ಮನ್‌ ರಾಮ್‌ಸಿಂಗ್‌ ನಿಂತಿದ್ದ!.

‘ಸಬ್‌ ಟೀಕ್‌ ಹೈನಾ ಮಾಜಿ...’ ಎನ್ನುತ್ತ ಅವಳ ಮುಖ ನೋಡಿದ. ಬರೋಬರ್‌ ಹೈ ಎಂದಳು. ಅವನು ಮತ್ತೇನೂ ಕೇಳಲಿಲ್ಲ. ಅವನು ಹೋದಮೇಲೆ ಬಾಗಿಲು ಹಾಕಿಕೊಂಡಳು. ಅರವತ್ತು ವರ್ಷದ ರಾಂಸಿಂಗ್‌ನ ಕಂಡರೆ ಕ್ರಿಸ್ಟಿನಾಗೆ ಅನುಕಂಪವಿತ್ತು. ದುಡಿಯುವ ಮಕ್ಕಳಿದ್ದೂ ಹಗಲು ರಾತ್ರಿ ಎನ್ನದೆ ಅಪಾರ್ಟ್‌ಮೆಂಟಿನ ಹನ್ನೆರಡು ಮನೆಗಳನ್ನು ಕಾಯುವ ಕೆಲಸಕ್ಕೆ ಬಂದಿದ್ದ! ಕ್ರಿಸ್ಟಿನಾ ಅವನನ್ನು ಕೆಲವು ಸಲ ಭಯ್ಯಾ ಅಂತಲೂ ಕೆಲವೊಮ್ಮೆ ಚಾಚಾಜಿ ಎಂದು ಕರೆದು ಹರುಕು ಹಿಂದಿಯಲ್ಲಿ ಮಾತಾಡುತ್ತಿದ್ದಳು. ಅವನೆಂದೂ ಯಾರ ಮನೆಯ ವಿಷಯಕ್ಕೂ ತಲೆ ಹಾಕಿದ್ದು ಅವಳಿಗೆ ನೆನಪಿಲ್ಲ.

ಅಕ್ಕ ಪಕ್ಕದ ಮನೆಗಳವರಿಗೆ ಕೃಷ್ಣ ಕೆಲವು ದಿನಗಳಿಂದ ಮನೆಗೆ ಬಂದಿಲ್ಲ ಅನ್ನೋದು ಗೊತ್ತಾಗಬಹುದು. ಗಂಡ ಹೆಂಡತಿ ಜಗಳ. ಸರಿಹೋಗಬಹುದು ಎಂದು ಅಂದುಕೊಂಡು ಅವರು ಏನೋ ಗೊತ್ತಿಲ್ಲದವರಂತೆ ಇದ್ದರೂ ನಮ್ಮ ನಡುವೆ ನಡೆಯಿತು ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತೆ. ಯಾರಾದರೂ ಕೇಳಬಹುದು ಎಂದು ಕ್ರಿಸ್ಟಿನಾ ನಿರೀಕ್ಷಿಸಿದ್ದಳು. ಆದರೆ ಯಾರೂ ಕೇಳಲಿಲ್ಲ.

*

ಅರವಿಂದ ಹುಟ್ಟಿದ ದಿನ ಕೃಷ್ಣ, ಇನ್ನು ಮಕ್ಕಳು ಬೇಡ. ಮಗ ಕೊನೇವರೆಗೂ ನಮ್ಮ ಜತೆ ಇರ್ತಾನೆ ಅಂದವನು ಮಕ್ಕಳನ್ನು ಬಿಟ್ಟು ಹೋಗಬಹುದು ಎಂದು ಅವಳು ಊಹಿಸಿರಲಿಲ್ಲ. ಕೃಷ್ಣನಿಗೆ ಯಾರ ಮೇಲೂ ನಂಬಿಕೆ ಇಲ್ಲ! ನಮ್ಮನ್ನು ಬಿಟ್ಟು ಹೋಗೋಕೆ ಒಂದು ಕಾರಣ ಬೇಕಿತ್ತಷ್ಟೆ. ಹೇಳೋರು, ಕೇಳೋರು ಇಲ್ಲದ ಅನಾಥೆಯ ಮೇಲೆ ಯಾವ ಆರೋಪವನ್ನಾದರೂ ಹೊರಿಸಬಹುದು ಎಂದು ಅವನು ಭಾವಿಸಿದನಲ್ಲ ಅನ್ನಿಸಿ ಅಳು ಬಂತು.

*

ಅರವಿಂದ ಹುಟ್ಟಿದ ದಿನ ಮೆಟರ್ನಿಟಿ ವಾರ್ಡ್‌ನಲ್ಲಿ ಇರುವಾಗಲೇ ಮಗನಿಗೆ ಪಾಂಡಿಚೆರಿ ಗುರುಗಳ ಹೆಸರನ್ನೇ ಇಡೋಣ ಅಂದ. ಗಂಡು ಮಗುವಿನ ತಂದೆಯಾದ ಸಂತೃಪ್ತ ಭಾವದಲ್ಲಿದ್ದ. ಅರವಿಂದ ತನ್ನ ಹೊಟ್ಟೆಯಲ್ಲಿ ಭ್ರೂಣದ ರೂಪ ಧರಿಸಿದ್ದೂ ಪಾಂಡಿಚೆರಿಯಲ್ಲೇ. ಆ ನೆನಪಿಗೆ ಅರವಿಂದರ ಹೆಸರು ಇಡೋಣ ಎಂದು ಕೃಷ್ಣ ಹೇಳಿದಾಗ ಕ್ರಿಸ್ಟಿನಾಗೆ ಸಂತೋಷವಾಗಿತ್ತು. ಮೂರನೇ ಮಗು ಬೇಡ ಎಂದು ಅಂದೇ ನಿರ್ಧರಿಸಿದ್ದರು. ಎಷ್ಟೇ ಎಚ್ಚರದಿಂದ ಇದ್ದರೂ ಯಾವುದೋ ಆವೇಶದ ಕ್ಷಣದಲ್ಲಿ ಅಚಾತುರ್ಯ ನಡೆದು ಹೋಗಿತ್ತು! ಇನ್ನೊಂದು ಮಗು ಸಾಕುವುದು ಕಷ್ಟವೇನಲ್ಲ. ಮಗು ಬೇಡವೆಂದು ಕೃಷ್ಣ ಹೇಳಿದರೆ ತೆಗೆಸಿ ಬಿಡಲು ನಿರ್ಧರಿಸಿದ್ದಳು. ಅಷ್ಟರಲ್ಲಿ ಹೀಗಾಯಿತು.

‘ನೀನು ಸರಿ ಇಲ್ಲ, ಚರ್ಚ್‌ ಸ್ಟ್ರೀಟಿನಲ್ಲಿ ಯಾರ ಜತೆಗೂ ಮಾತಾಡ್ತಾ ನಿಂತಿದ್ದೆ....’ ಅಂದನಲ್ಲ. ಯಾರೊಂದಿಗೆ ಮಾತಾಡ್ತ ನಿಂತಿದ್ದೆ? ಎಷ್ಟು ಯೋಚಿಸಿದರೂ ಹೊಳೆಯಲಿಲ್ಲ. ಯಾರಾದರೂ ಅಪರಿಚಿತರ ಜತೆಗೆ ಮಾತಾಡಿರಬಹುದೇ? ನೆನಪಾಗಲಿಲ್ಲ.

*

‘ ನಾಳೆ ಭಾನುವಾರ. ಬೆಳಿಗ್ಗೆ ಬಂದು ನಿಮ್ಮ ಬಾಲ್ಕನಿಯಲ್ಲಿರೋ ಹಕ್ಕಿ ಗೂಡು ತೆಗೆದು ಹಾಕ್ತೀನಿ...’ ಎಂದು ರಾಮ್‌ ಸಿಂಗ್‌ ಹೇಳಿದಾಗ ನ್ಯಾನ್ಸಿಗೆ ಆತಂಕವಾಯಿತು.

‘ಗೂಡಿನಲ್ಲಿ ಪುಟ್ಟ ಹಕ್ಕಿಗಳಿವೆ. ಅವು ಅಲ್ಲಿರೋದರಿಂದ ನಿನಗೇನು ತೊಂದರೆ? ಗೂಡು ಬಾಲ್ಕನಿಯಲ್ಲೇ ಇರಲಿ...’ ಎಂದು ಅಮ್ಮನಿಗೆ ಕೋಪದಿಂದ ಹೇಳಿದಳು.

‘ನಮ್ಮ ಮನೆಯೇ ನಮ್ಮ ಜಗತ್ತು...’ ಎಂದು ಹೇಳಿಕೊಳ್ಳುವ ವಿಜ್ಞಾನ ಸಂಘದವರು ಪುಕ್ಕಟ್ಟೆಯಾಗಿ ಕೊಟ್ಟು ಹೋಗಿದ್ದ ಹಕ್ಕಿ ಗೂಡದು. ಅಮ್ಮ ಅದನ್ನು ಬಾಲ್ಕನಿಯ ಮೂಲೆಯಲ್ಲಿ ನೇತು ಹಾಕಿದ್ದಳು. ಈಚೆಗೆ ಎರಡು ಪುಟ್ಟ ಹಕ್ಕಿಗಳು ಅದರೊಳಕ್ಕೆ ಅಕ್ರಮ ಪ್ರವೇಶ ಮಾಡಿದ್ದವು! ತಮಗೊಂದು ಲಗತ್ತಾದ ಮನೆ ಸಿಕ್ತು ಅನ್ನೋ ಸಂಭ್ರಮದಲ್ಲಿ ಅಲ್ಲೇ ಝಾಂಡ ಹೂಡಿದ್ದವು! ಮೊದ ಮೊದಲು ಗೂಡಿಗೆ ಹಕ್ಕಿಗಳು ಬಂದು ಸೇರಿಕೊಂಡಾಗ ಕ್ರಿಸ್ಟಿನಾಗೆ ಏನೂ ಅನ್ನಿಸಲಿಲ್ಲ. ಈಚೆಗೆ ಅವುಗಳ ಉಪದ್ರವ ಹೆಚ್ಚಾಗಿದೆ ಅನ್ನಿಸೋಕೆ ಶುರುವಾಗಿದೆ. ಬೆಳಕು ಹರಿವ ಮೊದಲೇ ಕಿಚ್‌ ಕಿಚ್‌ ಅಂತ ಒಂದೇ ಸಮ ಗದ್ದಲ ಶುರು ಮಾಡುತ್ತವೆ. ವಾಚ್‌ಮನ್‌ಗೆ ಹೇಳಿ ಗೂಡನ್ನು ಕೆಳಕ್ಕಿಳಿಸಿ ಹೊರಗೆ ಕಾಂಪೌಂಡಿನಲ್ಲಿ ಎಲ್ಲಾದರೂ ನೇತು ಹಾಕಿಸಬೇಕು ಎಂದು ಯೋಚಿಸಿದ್ದಳು.

‘ಗೂಡು ಕೀಳಿಸಿದರೆ ನಾನು ಸುಮ್ಮನಿರಲ್ಲ...’ ಎಂದು ನ್ಯಾನ್ಸಿ ಅಮ್ಮನ ಮುಖ ನೋಡುತ್ತ ಸಿಟ್ಟಿನಲ್ಲಿ ಹೇಳಿದಳು. ಮೊಟ್ಟೆ ಇಟ್ಟು ಮರಿ ಮಾಡೋಕೆ ಅಂತಲೇ ಅವು ಗೂಡಿಗೆ ಬಂದಿವೆ. ಮರಿಗಳು ದೊಡ್ಡವಾದ ಮೇಲೆ ಗೂಡು ಬಿಟ್ಟು ಹೋಗ್ತವಂತೆ ನಮ್ಮ ಟೀಚರ್‌ ಹೇಳ್ತಿದರು, ಅಲ್ಲೀವರೆಗೆ ಸುಮ್ಮನಿರೋಕೆ ನಿನಗೇನು ಕಷ್ಟ...’ ಎಂದು ಮತ್ತೆ ಕೇಳಿದಳು. ಅರವಿಂದ ಏನೂ ಹೇಳಲಿಲ್ಲ. ಹಕ್ಕಿಗಳು ಮನೆಯ ಬಾಲ್ಕನಿಯ ಗೂಡಿಗೆ ಬಂದು ಸೇರಿಕೊಂಡಿರುವುದು ಅವನಿಗೆ ಇಷ್ಟವೇ. ಸಂಜೆ ಹೊತ್ತು ಹಕ್ಕಿಗಳು ಗೂಡಿನೊಳಕ್ಕೆ ಬಂದು ಸೇರಿಕೊಳ್ಳುವುದನ್ನು ನೋಡುತ್ತಿದ್ದ. ಹಕ್ಕಿ ಮೊಟ್ಟೆ ಹೇಗಿರ್ತವೆ, ಮರಿಗಳು ಹೇಗೆ ದೊಡ್ಡವಾಗ್ತವೆ ಅಂತ ಟೀವಿಯಲ್ಲಿ ಬಂದ ಕಾರ್ಯಕ್ರಮವನ್ನು ಇಬ್ಬರೂ ನೋಡಿದ್ದರು. ಗೂಡು ಅಲ್ಲೇ ಇರಲಿ ಎಂದು ಮಕ್ಕಳು ಹೇಳಿದ ಮೇಲೆ ಕ್ರಿಸ್ಟಿನಾ ತನ್ನ ನಿರ್ಧಾರ ಬದಲಿಸಿದ್ದಳು. ಗೂಡು ಕೀಳೋದು ಬೇಡ ಅಂತ ರಾಮ್‌ಸಿಂಗ್‌ಗೆ ಹೇಳ್ತೀನಿ ಎಂದು ಹೆಳಿದ ಮೇಲೆ ಮಕ್ಕಳು ಸುಮ್ಮನಾಗಿದ್ದರು.

*

ಬೆಳಗಿನ ಐದೂವರೆ ಹೊತ್ತಿಗೆ ಹಕ್ಕಿಗಳ ಕಿರುಚಾಟ ತಾರಕ್ಕೆ ಏರಿತು. ಬಾಲ್ಕನಿಗೆ ಬಂದು ಗೂಡಿನ ಕಡೆ ನೋಡಿದಳು. ಗೂಡಿನೊಳಗೆ ಮೊಟ್ಟೆಗಳು ಇಟ್ಟಿರಬಹುದೇ. ಅವು ಬಂದು ಸೇರಿಕೊಂಡು ಇಪ್ಪತ್ತು ದಿನಗಳಾದುವಲ್ಲ. ಆಹಾರ ಹುಡುಕಿಕೊಂಡು ಹೊರಹೋದಾಗ ಪರೀಕ್ಷೆ ಮಾಡಿ ನೋಡಬೇಕು ಎಂದುಕೊಳ್ಳುತ್ತ ಮತ್ತೆ ಗೂಡಿನ ಕಡೆ ನೋಡಿದಳು. ಎರಡೂ ಹಕ್ಕಿಗಳು ಗೂಡಿನ ಬಾಗಿಲಲ್ಲಿ ಕುಳಿತು ಜಾಲರಿಯ ಬಾಗಿಲು ತೆರೆದರೆ ನಾವು ಹೊರಕ್ಕೆ ಹೋಗ್ತೀವಿ ಎಂದು ಹೇಳ್ತಿರಬಹುದು ಎಂದು ಕ್ರಿಸ್ಟಿನಾಗೆ ಅನ್ನಿಸಿತು. ಎರಡೂ ಅವಳ ಕಡೆಗೇ ನೋಡುತ್ತ ಕಣ್ಣು ಪಿಳುಕಿಸ್ತಿವೆ ಅನ್ನಿಸಿ ಜಾಲರಿಯ ಬಾಗಿಲು ತೆರೆದಳು. ಹಕ್ಕಿಗಳು ಪುರ್ರಂತ ಹಾರಿ ಹೋದವು! ನಿಶ್ಶಬ್ದ ನೆಲೆಸಿತು. ಕೃಷ್ಣ ಮತ್ತೆ ಅವಳ ಮನಸ್ಸಿನ ಗೂಡಿನೊಳಕ್ಕೆ ಬಂದ.

ಸ್ಕೂಟರನ್ನು ಅಪ್ಪನ ಮನೆ ಮುಂದೆ ನಿಲ್ಲಿಸಿ ಹೋಗಿರಬಹುದೇ?, ಪ್ರಭಾಕರ ಹೇಳಿದಂತೆ ಶಿರಡಿ, ಮುಂಬೈ ಕಡೆಗೆ ಟೂರು ಹೋಗಿರಬಹುದೇ? ಹೆಂಡ್ತಿ, ಮಕ್ಕಳನ್ನೂ ಕರಕಂಡು ಹೋಗ್ತೀನಿ ಅಂತ ಪ್ರಭಾಕರನಿಗೆ ಹೇಳಿಹೋದವನು ಒಬ್ಬನೇ ಹೋಗಿರೋ ಸಾಧ್ಯತೆ ಇಲ್ಲ. ಅವನ ರಜೆ ಮುಗಿಯಲು ಆರು ದಿನಗಳು ಬಾಕಿ ಇವೆ.‌ ಅವನು ಬರೋದರೊಳಗೆ ನಿರ್ಧಾರ ಮಾಡಬೇಕು. ಅವನ ತಪ್ಪುಕಲ್ಪನೆ ಬಗ್ಗೆ ಮಾತನಾಡಿ ಬಗೆಹರಿಸಬೇಕು. ಮೂರು ದಿನ ಬ್ಯಾಂಕಿಗೆ ಸಾಲು ಸಾಲು ರಜೆ. ಇವತ್ತೇ ಮಕ್ಕಳ ಜತೆ ಕೃಷ್ಣನ ಅಪ್ಪನ ಮನೆಗೆ ಹೋಗಿ ಅವರ ಮುಂದೆ ನಿಂತು ಬಿಡೋಣ ಅನ್ನಿಸಿತು. ಮರುಕ್ಷಣವೇ ಅಷ್ಟು ಅತುರ ಬೇಡ ಅನ್ನಿಸಿತು.

ರಜೆ ಮುಗಿಯುವ ಹೊತ್ತಿಗೆ ಬರ್ತಾನೆ ಅನ್ನಿಸಿದರೂ ಒಂದೊಂದು ದಿನ ಕಳೆಯುವುದು ದುಸ್ತರವಾಯಿತು. ಮೊದಲೆಲ್ಲ ರಜೆಯ ದಿನಗಳು ಯಾಕಾದರೂ ಮುಗೀತವೋ ಅನ್ನಿಸ್ತಿತ್ತು. ಈಗ ಒಂದು ದಿನ ಕಳೆಯೋದು ಕಷ್ಟವಾಗಿದೆ. ಅಪ್ಪ ಯಾವಾಗ ಬರ್ತಾರೆ ಅಂತ ಪದೇ ಪದೇ ಕೇಳುವ ಅರವಿಂದನಿಗೆ ಉತ್ತರ ಹೇಳಿ ಸಾಕಾಗಿತ್ತು. ಅಪ್ಪ ಮನೆ ಬಿಟ್ಟು ಹೋಗಿದ್ದಾರೆ ಅನ್ನೋದು ನ್ಯಾನ್ಸಿಗೆ ಅರ್ಥವಾಗಿದೆ. ಅವಳಿಗೆ ತಾಳ್ಮೆ ಇದೆ. ಆರು ವರ್ಷದ ಕೂಸಾದರೂ ಬುದ್ದಿವಂತೆ. ಅಪ್ಪ ಬರ್ತಾರೆ ಅನ್ನೋ ನಂಬಿಕೆ ಅವಳಿಗಿರಬಹುದು, ಅವಳೂ ತನ್ನಂತೆ ಕಾಯುತ್ತಿದ್ದಾಳೆ ಅನ್ನಿಸಿತು.

*

ರಾತ್ರಿ ಎರಡು ಗಂಟೆವರೆಗೆ ಎಚ್ಚರವಾಗೇ ಇದ್ದಳು. ಮಕ್ಕಳು ಮಲಗಿದ್ದರು. ನಾನು ಎಲ್ಲಿ ಎಡವಿದೆ ಎಂಬ ಯೋಚನೆಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಅರೆನಿದ್ದೆ, ಎಚ್ಚರದ ಸ್ಥಿತಿ. ನಾಲ್ಕರ ಹೊತ್ತಿಗೆ ನಿದ್ದೆ ಹತ್ತಿತು.

ಸ್ವಲ್ಪ ಹೊತ್ತಲ್ಲೇ ಹಕ್ಕಿಗಳ ಕಿರುಚಾಟ ಶುರುವಾಯಿತು. ಎದ್ದು ಬಾಲ್ಕನಿಗೆ ಬಂದಳು. ಹಕ್ಕಿಗಳು ಗೂಡಿನಲ್ಲಿಲ್ಲ! ಆದರೆ ಸದ್ದು ಕೇಳುತ್ತಿದೆ. ಒಳಕ್ಕೆ ಬಂದು ಲೈಟು ಹಾಕಿ ಮತ್ತೆ ಬಂದು ನೋಡಿದಳು. ಗೂಡಲ್ಲಿದ್ದ ಮೊಟ್ಟೆಯೊಂದು ಕೆಳಕ್ಕೆ ಬಿದ್ದು ಒಡೆದಿದೆ! ಹಳದಿ ಲೋಳೆಯ ನಡುವೆ ಕಡಲೆಕಾಳು ಗಾತ್ರದ ಕಪ್ಪನೆಯ ವಸ್ತು. ಹಕ್ಕಿಗಳು ಪ್ರಾಣ ಹೋದಂತೆ ಕಿರುಚುತ್ತಿವೆ. ಕ್ರಿಸ್ಟಿನಾಗೆ ಸಂಕಟವಾಯಿತು. ಬಾಲ್ಕನಿಯಲ್ಲಿ ಗಾಳಿ ಇಲ್ಲದೆ, ಸಣ್ಣಗೆ ಸೆಕೆ ಇದೆ. ಜಾಲರಿಯ ಬಾಗಿಲು ತೆಗೆದಳು. ಮೊಟ್ಟೆ ಗೂಡಿನಿಂದ ಕೆಳಕ್ಕೆ ಬಿದ್ದದ್ದು ಹೇಗೆ? ಜಾರಿ ಬಿದ್ದಿರಬಹುದೇ? ಹಕ್ಕಿಗಳ ಗಡಿಬಿಡಿಯಲ್ಲಿ ಅಚಾನಕ್ಕಾಗಿ ಮೊಟ್ಟೆ ಜಾರಿ ಬಿದ್ದಿರಬಹುದು. ಎರಡೂ, ಒಡೆದ ಮೊಟ್ಟೆಯನ್ನೇ ನೋಡುತ್ತ ಅರಚುತ್ತಿವೆ.

ಹಕ್ಕಿಗಳು ಇಟ್ಟಿದ್ದು ಒಂದೇ ಮೊಟ್ಟೆಯೇ ಅಥವಾ ಗೂಡಿನೊಳಗೆ ಇನ್ನೂ ಮೊಟ್ಟೆಗಳಿರಬಹುದೇ? ಕರುಳ ಕುಡಿ ಕತ್ತರಿಸಿದ ನೋವನ್ನು ಹೇಳಲಾಗದ ಸಂಕಟದಲ್ಲಿರುವ ಹಕ್ಕಿಗಳನ್ನು ನೋಡಿ ಕ್ರಿಸ್ಟಿನಾಗೆ ಕರುಳು ಕಿವುಚಿತು. ಅವಕ್ಕೆ ಸಮಾಧಾನ ಹೇಳುವ ಶಕ್ತಿ ತನಗಿಲ್ಲ ಅನ್ನಿಸಿ ಒಳಕ್ಕೆ ಬಂದು ಕೂತಳು.

ಬೆಳಗಾಯಿತು. ಗಡಿಯಾರದ ಕಡೆಗೆ ನೋಡಿದಳು. ಇನ್ನೂ ಏಳು ಗಂಟೆ. ಡಾ. ಮನೋನ್ಮಣಿಗೆ ಫೋನ್‌ ಮಾಡಿದಳು. ದಿನದ ಮೊದಲ ಫೋನ್‌ ಎತ್ತಲು ಡಾಕ್ಟರು ಹಿಂಜರಿಯುತ್ತಿರಬಹುದೇ? ಪೋನ್‌ ಎತ್ತಿದರೂ ಆ ಕಡೆಯಿಂದ ಹಲೋ ಶಬ್ದ ಕೇಳಲಿಲ್ಲ. ಮೂರ್ನಾಲ್ಕು ಸೆಕೆಂಡುಗಳ ನಂತರ ‘ ಹಲೋ ಡಾಕ್ಟರ್‌, ನಾನು ಕ್ರಿಸ್ಟಿನಾ ...’ಅಂದಳು.

ಐದಾರು ಸೆಕೆಂಡುಗಳ ನಂತರ ಡಾಕ್ಟರು ಹೇಳು, ಕ್ರಿಸ್ಟಿನಾ ಅದೇನು ಇಷ್ಟು ಬೇಗ ಫೋನ್‌ ಮಾಡಿದೆ? ಆರೋಗ್ಯವಾಗಿದ್ದೀಯ ತಾನೆ? ಕೇಳಿದರು.

ನಂಗೇನೂ ಆಗಿಲ್ಲ ಡಾಕ್ಟರೇ, ಮಗು ಬೇಡ, ತೆಗೆದು ಬಿಡಿ ಅಂದಿದ್ದೆ. ಇವತ್ತು ಹತ್ತು ಗಂಟೆ ಹೊತ್ತಿಗೆ ಅಪಾಯಿಂಟ್‌ಮೆಂಟ್‌ ಕೊಟ್ಟಿದ್ರಿ. ಮಗುವನ್ನು ಉಳಿಸಿಕೊಳ್ಳಬೇಕು ಅನ್ನಿಸ್ತಿದೆ! ಸಾರಿ ಮೇಡಂ ನಾನು ಇವತ್ತು ಬರಲ್ಲ. ನನಗೆ ಕಾಯಬೇಡಿ...’ ಅದನ್ನು ಹೇಳೋಕೆ ಅಂತ ಫೋನ್‌ ಮಾಡಿದೆ ಸಾರಿ. ಪೋನ್‌ ಇಡ್ತೀನಿ ಅಂದಳು.

ಡಾಕ್ಟರು ಆಲ್‌ ದ ಬೆಸ್ಟ್‌ ಹೇಳಿದ್ದು ಕ್ರಿಸ್ಟಿನಾಗೆ ಕೇಳಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.