ಮೂಲ ಗುಜರಾತಿ : ಜ್ಯೋತಿಷ್ ಜಾನಿ
ಕನ್ನಡಕ್ಕೆ : ಡಿ. ಎನ್. ಶ್ರೀನಾಥ್
ನೀವು ಅಹಮದಾಬಾದಿನ ನನ್ನ ಆ ವಿಶೇಷ ಸ್ನೇಹಿತನ ವಿಷಯದಲ್ಲಿ ಕೇಳುತ್ತಿದ್ದೀರ. ಹೇಳುತ್ತೇನೆ. ನಿಮಗೆ ತೊಂದರೆಯಾಗದಿದ್ದರೆ, ನಿಮ್ಮಲ್ಲಿ ಒಂದು ವಿಷಯವನ್ನು ಕೇಳಲೇ? ನಿಮಗೆ ನಿಮ್ಮ ಹೆಸರು ಮಾಣಿಕಲಾಲ್ ಎಂಬುವುದು ನಿಮಗೆ ಇಷ್ಟವಾಗುವುದೇ? ಇಷ್ಟವಾಗುವುದು ಅಥವಾ ಇಷ್ಟವಾಗದಿರುವ ಪ್ರಶ್ನೆಯೇ ಇಲ್ಲ. ಹೀಗಾ? ಸಾಹೇಬರೇ, ಇದೊಂದು ವಿಚಿತ್ರ ಪ್ರಶ್ನೆ. ಜನ ಹೆಸರಿಗಾಗಿ ತವಕಿಸುತ್ತಾರೆ. ಇಂದು ಎಲ್ಲಾ ಮಹಿಮೆಗಳು ಹೆಸರಿಗೆ ಸಂಬಂಧಿಸಿದ್ದು ತಾನೇ?
ಈ ನನ್ನ ಜಯಶಂಕರ್ ಹೆಸರು...ನಿಜ ಹೇಳಬೇಕೆಂದರೆ...ನನಗೆ ಲೇಶಮಾತ್ರವೂ ಹಿಡಿಸುವುದಿಲ್ಲ. ಈ ಹೆಸರನ್ನು ಮನೆಯವರು ಇಟ್ಟರೋ ಅಥವಾ ಮೊಹಲ್ಲಾದವರು ಇಟ್ಟರೋ, ಆದರೆ ಶಂಕರ್ ಕಿ ಜಯ್‌ನಂಥ ಜಯಶಂಕರ್...ನಿಮಗೆ ನನ್ನಲ್ಲಿ ಜಯಶಂಕರನಂಥ ಗುಣ ಕಾಣಬರುವುದೇ? ನನ್ನಂಥ ಮನೋಧರ್ಮದ ಮನುಷ್ಯನ ಹೆಸರು ಜಯಶಂಕರ್ ಎಂಬುವುದು ನಿಮಗೆ ಕೆಡುಕೆಂದು ತೋರುವುದಿಲ್ಲವೇ? ಮಾಣಿಕಲಾಲ್...ವಜ್ರ, ಮುತ್ತು-ಮಾಣಿಕ್ಯದಂಥ ವ್ಯಕ್ತಿ ಮಾಣಿಕಲಾಲ್ ಎಂದು ಕಲ್ಪಿಸಿಕೊಳ್ಳುತ್ತೀರ. ಆದರೆ ವಾಸ್ತವಿಕತೆ ಎಂದರೆ, ನೀವು ತುಂಬಾ ಸರಳ ಸ್ವಭಾವದ, ಉತ್ತಮ ನಡೆತೆಯ ವ್ಯಕ್ತಿಗಳು.
ನಾನು ವಿಷಯಾಂತರ ಮಾಡಿ ಹೇಳಲು ಬಯಸುವುದಿಲ್ಲ. ಅಹಮದಾಬಾದಿನ ನನ್ನ ಆ ಮಿತ್ರನ ಹೆಸರನ್ನು ಸ್ವಲ್ಪ ಕಿವಿಗೊಟ್ಟು ಕೇಳಿ. ಅವನ ಹೆಸರು ‘ಹೆಸರಿಲ್ಲ’ ಎಂದಾಗಿದೆ. ಹೌದೌದು...ಯೆಸ್! ‘ಮಿಸ್ಟರ್ ನೋ ಬಡಿ’. ಹೆಸರು ಮತ್ತು ಕುಲದ ಹೆಸರು ಇದರಲ್ಲಿಯೇ ಇದೆ. ಇಲ್ಲ ಸ್ವಾಮಿ! ತಮಾಷೆ ಏಕೆ? ಕಳೆದ ಐದು ವರ್ಷಗಳ ಅವಧಿಯಲ್ಲಿ ನಾನು ಅನುಭವಿಸಿದ ಕಷ್ಟಗಳಿಂದಾಗಿ ನನ್ನ ಹಾಸ್ಯದ ಸ್ವಭಾವ ಅದೆಲ್ಲಿಗೆ ಓಡಿ ಹೋಗಿದೆಯೋ, ತಿಳಿಯದು.
ಹಾಂ, ನಾನೇನು ಹೇಳುತ್ತಿದ್ದನೆಂದರೆ, ನನ್ನ ಆ ಸ್ನೇಹಿತ ‘ಹೆಸರಿಲ್ಲ’ ದವನ ಬಳಿಗೆ ದೀಪಾವಳಿಯ ದಿನಗಳಲ್ಲಿ ನಾನು ಅಹಮದಾಬಾದಿಗೆ ಹೋಗಿದ್ದೆ. ಅವನು ಅನೇಕ ವರ್ಷಗಳಿಂದ ಅಹಮದಾಬಾದಿನಲ್ಲಿ ವಾಸಿಸುತ್ತಿದ್ದಾನೆ, ಆದರೆ ಅವನ ಬಗ್ಗೆ ಯಾರಿಗೂ ಏನೂ ತಿಳಿದಿಲ್ಲ. ‘ನೀವು ಹೇಗಿದ್ದೀರ?’ ಎಂದು ಯಾರೂ ಅವನನ್ನು ಕೇಳುವುದಿಲ್ಲ. ಅವನ ಗುಣ ತುಂಬಾ ಒಳ್ಳೆಯದು. ಅನೇಕ ವರ್ಷಗಳ ಹಿಂದೆ ಅವನಿಗೊಂದು ಹೆಸರಿತ್ತು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಹುಟ್ಟಿದಾಗಲೇ ಅವನಿಗೆ ಹೆಸರು ಇರಲಿಲ್ಲವೆಂದು ಹೇಳುತ್ತಾರೆ. ಕೆಲವರು, ‘ಹೆಸರಿಲ್ಲ’ ಎಂದು ಹೆಸರಿದ್ದರಿಂದ ಅವನು ತುಂಬಾ ನೊಂದಿದ್ದಾನೆ ಎಂದರೆ, ಮತ್ತೆ ಕೆಲವರು ‘ಹೆಸರಿಲ್ಲ’ ಎಂಬ ಈ ಸುಖ ಪುರುಷ ಈ ಜಗತ್ತಿನಲ್ಲಿ ಬೇರಾರೂ ಇಲ್ಲವೆಂದು ಸಹ ಹೇಳುತ್ತಾರೆ.
ಒಂದು ಕಾಲದಲ್ಲಿ ಯಾರು ಸುಖಿ? ಎಂಬ ಪ್ರಶ್ನೆ ಉದ್ಭವಿಸುತ್ತಿತ್ತು. ಆಗ ಯಾರೂ ಇಲ್ಲ ಎಂಬ ಉತ್ತರ ಲಭಿಸುತ್ತಿತ್ತು. ‘ಹೆಸರಿಲ್ಲ’ ದ ಈ ವ್ಯಕ್ತಿ ತುಂಬಾ ದುಃಖಿಯಾಗಿದ್ದಾನೆಂದು ತಿಳಿಯುವವರು, ಇವನನ್ನು ಯಾರೂ ಕರೆಯುವುದಿಲ್ಲ, ಹೀಗಾಗಿ ಇವನು ದುಃಖಿಯಾಗಿರುತ್ತಾನೆ ಎನ್ನುತ್ತಾರೆ. ಇನ್ನೊಂದೆಡೆ ಇವನು ಸುಖವಾಗಿದ್ದಾನೆಂದು ತಿಳಿಯುವವರು, ಇವನ ಸುಖದ ನಿಜ ರಹಸ್ಯವೇನೆಂದರೆ, ಇವನನ್ನು ಯಾರೂ ಕರೆಯುವುದಿಲ್ಲ ಎನ್ನುತ್ತಾರೆ.
ನನಗೆ ಅವನು ಮನಸಾ-ವಾಚಾ-ಕಾಯದಿಂದ ಶುದ್ಧವಾಗಿಲ್ಲವೆಂದು ಅನ್ನಿಸುತ್ತದೆ; ಅವನ ವಿಷಯದಲ್ಲಿ ಯಾರಿಗೂ ಏನೂ ಗೊತ್ತಿಲ್ಲ. ಇದರಿಂದಾಗಿ ಅವನ ಬಗ್ಗೆ ಎರಡು ವಿಭಿನ್ನ ಗುಂಪುಗಳಲ್ಲಿ ವಿಭಿನ್ನ ಅಭಿಪ್ರಾಯಗಳು ಮೂಡುತ್ತಿರುತ್ತವೆ. ಉದಾಹರಣೆಗೆ ಕೆಲವರು, ಅವನು ತುಂಬಾ ಬುದ್ಧಿವಂತ, ಅವನು ಹೇಳಿದ್ದನ್ನು ಮಾಡಿ ತೋರಿಸುತ್ತಾನೆ ಎನ್ನುತ್ತಾರೆ.
ಹೀಗಾಗಿ ನಾನು ಉತ್ಸುಕತೆಯಿಂದಾಗಿ ಈ ವಿಚಿತ್ರ ಸ್ನೇಹಿತ ‘ಹೆಸರಿಲ್ಲ’ ದವನ ಮನೆಗೆ ಹೊರಟೆ. ಅವನ ಪರಿವಾರದಲ್ಲಿ ಯಾರೂ ಇಲ್ಲ. ನಾನು ಅವನ ಮನೆಯ ಬಾಗಿಲ ಬಳಿಗೆ ಹೋದಾಗ ಅವನು ತುಂಬಾ ಉತ್ಸಾಹದಿಂದ ನನ್ನನ್ನು ಸ್ವಾಗತಿಸಿದ. ಕೆಲವು ಗಂಟೆಗಳ ಕಾಲ ಅವನ ಮಾತುಗಳನ್ನು ಕೇಳಿದ ನಂತರ ಅವನ ವ್ಯಕ್ತಿತ್ವದ ಒಂದು ಚಮತ್ಕಾರದ ರೂಪವನ್ನು ಮನಸ್ಸಿನಲ್ಲಿ ರೂಪಿಸಿಕೊಂಡೆ... ಅವನು ಮನೆಯಲ್ಲಿರುತ್ತಾನೆ, ಆದರೂ ‘ಮನೆಯಲ್ಲಿಲ್ಲ’ ಎಂದು ಅನ್ನಿಸುತ್ತದೆ. ಅವನು ಕುರ್ಚಿಯಲ್ಲಿ ಕೂತಿದ್ದರೆ, ಕುರ್ಚಿಯಲ್ಲಿ ಯಾರೂ ಕೂತೇ ಇಲ್ಲ, ಕುರ್ಚಿ ಖಾಲಿಯಿದೆ ಎಂದು ಅನ್ನಿಸುತ್ತದೆ. ಕೂರುವುದು-ಏಳುವುದು, ತಿನ್ನುವುದು-ಕುಡಿಯುವುದು ಮಾಡಿದರೂ, ಅವನು ಕೂರುವುದಿಲ್ಲ, ಏಳುವುದಿಲ್ಲ, ತಿನ್ನುವುದಿಲ್ಲ, ಕುಡಿಯುವುದಿಲ್ಲ, ಬರುವುದಿಲ್ಲ, ಹೋಗುವುದಿಲ್ಲವೆಂದು ಅನ್ನಿಸುತ್ತದೆ. ಅವನ ಶಬ್ದಗಳು, ಮಾತುಗಳು ಮತ್ತು ಅವನ ಅಸ್ತಿತ್ವದ ಬಗ್ಗೆ ಯಾವುದೇ ‘ಭಾರ ಅಥವಾ ಹೆಚ್ಚುಗಾರಿಕೆ’ ಯ ಭಾವನೆಗಳು ಮೂಡುವುದಿಲ್ಲ.
ಪಕ್ಷಿ ಹಾರುತ್ತದೆ. ಅವನು ಹಾರಿದ, ಆದರೆ ಅವನು ಬಹುಶಃ ಹಾರಲಿಲ್ಲವೆಂಬಂತೆ ಹಾರಿದನೆಂದು ಭಾವಿಸಿ; ಅವನು ನಕ್ಕಾಗ ಅದನ್ನು ನಗು ಎಂದು ಹೇಳಲು ಮನಸ್ಸು ಒಪ್ಪುವುದಿಲ್ಲ. ಅವನೆಂದೂ ಯಾರನ್ನೂ ಸಹ ಸ್ವತಃ ಹೋಗಿ ಕರೆಯುವುದಿಲ್ಲ, ಆದರೆ ಕರೆದನೆಂದು ತಿಳಿದರೂ, ಕರೆಯುವುದಿಲ್ಲವೆಂದು ಅನ್ನಿಸುತ್ತದೆ. ಅವನು ಬದುಕುತ್ತಾನೆ...ಬದುಕುತ್ತಾನೆ...ಸಾಕಷ್ಟು ವರ್ಷ ಬದುಕುತ್ತಾನೆ...ದೇವರು ಅವನಿಗೆ ದೀರ್ಘಾಯಸ್ಸನ್ನು ಕೊಡಲಿ, ಆದರೆ ಅವನು ಬದುಕುವುದು, ಬದುಕುವುದೆಂದು ಕರೆಯಲ್ಪಡುವುದೋ ಅಥವಾ ಇಲ್ಲವೋ...ಗೊತ್ತಿಲ್ಲ ಸ್ವಾಮಿ!
ಪ್ರಿಯರೇ! ನೀವೇಕೆ ಅನ್ಯಮನಸ್ಕರಾಗುತ್ತಿದ್ದೀರ? ನೀವು ಕೂತಿರುವ ಕುರ್ಚಿಯ ಕಾಲುಗಳು ಅವಶ್ಯವಾಗಿ ಸ್ವಲ್ಪ ಸಡಿಲವಾಗಿವೆ, ಆದರೆ ಅದರ ಕಾಲುಗಳು ಮಜಬೂತಾಗಿವೆ ಎಂಬುವುದನ್ನು ನಂಬಿ-ಆ ಕಾಲುಗಳು ಎಂದಿಗೂ ಮುರಿಯುವದಿಲ್ಲ. ಇಂದಿನ ಮನುಷ್ಯ ಹಾಳಾದರೂ, ಕುರ್ಚಿ ಮಾತ್ರ ಬಹುಶಃ ಹಾಳಾಗುವುದಿಲ್ಲ.
2-
ನಾನು ‘ಹೆಸರಿಲ್ಲ’ ದವನ ಮನೆಗೆ ಹೋದಾಗ, ಅವನು ಗಡ್ಡವನ್ನು ಹೆರೆದುಕೊಳ್ಳುತ್ತಿದ್ದ. ಸ್ವಲ್ಪ ಹೊತ್ತು ಅದು-ಇದು ಮಾತನಾಡಿದ ನಂತರ ನಾನು ಊಟ ಮಾಡಿ, ಸ್ವಲ್ಪ ನಿದ್ರೆ ಮಾಡಿದೆ. ನಂತರ ಎದ್ದಾಗಲೂ ಅವನು ಗಡ್ಡವನ್ನು ಹೆರೆದುಕೊಳ್ಳುತ್ತಲೇ ಇದ್ದ! ನಂತರ ಆಂಬಾವಾಡಿ ಮತ್ತು ಗುಲಬಾಯಿಯಲ್ಲಿದ್ದ ನನ್ನ ಕೆಲವು ಮಿತ್ರರೊಂದಿಗೆ ಹರಟೆ ಹೊಡೆದು ಸಂಜೆ ಮನೆಗೆ ಬಂದಾಗಲೂ ಅವನು ಗಡ್ಡ ಹೆರೆದುಕೊಳ್ಳುತ್ತಿರುವುದನ್ನು ನೋಡಿದೆ. ನನ್ನಿಂದ ತಡೆದುಕೊಳ್ಳಲಾಗಲಿಲ್ಲ, ಅವನಿಗೆ ಕೆಡುಕಾಗಿ ತೋರಬಾರದೆಂದು ವಿಷಯಾಂತರಿಸಿ ಕೇಳಿದೆ, “ನೀನು ತ್ರಿಕಾಲ ಸಂಜೆಯಂತೆ ಗಡ್ಡವನ್ನು ಹೆರೆದುಕೊಳ್ಳುತ್ತೀಯ.”
ಮಾರುತ್ತರದಲ್ಲಿ ‘ಹೆಸರಿಲ್ಲದ’ವನು ನಕ್ಕ; ನಗದಿರುವಂತೆ ನಕ್ಕ. ನಾನು ಚಮತ್ಕಾರವನ್ನು ನೋಡುತ್ತಿರುವಂತೆ, ಇದೀಗ ತಾನೇ ಹೆರೆದುಕೊಂಡಿದ್ದ ಗಡ್ಡದಲ್ಲಿ ಕೆಲವು ಕೂದಲುಗಳು ಬಂದಿರುವುದನ್ನು ನೋಡಿದೆ.
“ಏನು ಮಾಡಲಿ? ಹೀಗಾಗುತ್ತದೆ...ಇದು ದುರ್ಬಲ ಮಾನಸಿಕ ಪ್ರವೃತ್ತಿಯ ಪರಿಣಾಮ. ಈಗ ನಾನು ಗಡ್ಡವನ್ನು ಹೆರೆದುಕೊಳ್ಳುತ್ತಾ ನೋಡುತ್ತಿದ್ದ ಕನ್ನಡಿಯನ್ನು ನೋಡು?” ಎಂದ ಹೆಸರಿಲ್ಲದವ.
ನಾನು ಕನ್ನಡಿಯನ್ನು ನೋಡಿದೆ. ನನ್ನ ಮುಖ ನಾಲ್ಕು ಪಟ್ಟು ದೊಡ್ಡದಾಗಿತ್ತು. ಅವನು ಗಡ್ಡವನ್ನು ಹೆರೆದುಕೊಳ್ಳಲು ಭೂತ-ಕನ್ನಡಿಯನ್ನಿಟ್ಟುಕೊಳ್ಳುತ್ತಿದ್ದ.
“ಈಗ ನೋಡು.”
ನಾನು ಅವನನ್ನು ನೋಡಿದೆ.
“ಕನ್ನಡಿಯಲ್ಲಿ ನೋಡು, ನನ್ನನ್ನಲ್ಲ.”
ನಾನು ಅವನ ಮುಖವನ್ನು ಕನ್ನಡಿಯಲ್ಲಿ ನೋಡಿದೆ. ಏನು ನೋಡಿದೆನೆಂದು ನಿಮಗೆ ಗೊತ್ತೆ? ಅಲ್ಲಿ ಸುಣ್ಣದಂಥ ಬಿಳಿಯ ಕಲೆಯನ್ನಷ್ಟೇ ನೋಡಿದೆ. ನಂತರ ಅವನು ನನಗೆ ಭಯವಾಗುವಂತೆ ನಗುತ್ತಾ ಹೇಳಿದ, “ಅದೆಷ್ಟೋ ಬಾರಿ ಗಡ್ಡವನ್ನು ಹೆರೆದುಕೊಳ್ಳುತ್ತಿರುತ್ತೇನೆ, ಆಗ ನಾನು ಅನೇಕ ಬಾರಿ ಗಡ್ಡವನ್ನು ಹೆರೆದುಕೊಳ್ಳಬೇಕಾಗುತ್ತದೆ-ಈ ನಡುವೆ ಅಕಸ್ಮಾತ್ ಮುಖ ಮಾಯವಾಗಿ ಸುಣ್ಣದಂಥ ಬಿಳಿ ಕಲೆ ಮಾತ್ರ ಕಾಣಿಸುತ್ತದೆ.”
ನಾನು ಹೀಗೆ ಇಡೀ ರಾತ್ರಿ ಒಂದು ಅಪರಿಚಿತ ವಿಚಾರ-ಧಾರೆಯಲ್ಲಿ ಮುಳುಗೇಳುತ್ತಾ ‘ಹೆಸರಿಲ್ಲ’ದವನ ಬಗ್ಗೆ ಯೋಚಿಸುತ್ತಿದ್ದೆ. ಮರುದಿನ ‘ಹೆಸರಿಲ್ಲ’ದವ ಗಡ್ಡವನ್ನು ಹೆರೆದುಕೊಳ್ಳುತ್ತಾ ಇನ್ನೊಂದು ವಿಷಯವನ್ನು ಹೇಳಿದ. ಆ ವಿಷಯವನ್ನು ನಾನು ನಿಮಗೆ ಹೇಳುತ್ತಿದ್ದೇನೆ-ಸ್ವಲ್ಪ ಆಳವಾಗಿ ಯೋಚಿಸಿದರೆ ವಿಷಯ ಗಾಢವಾಗಿ ತೋರುತ್ತದೆ.
ಹಾಂ, ಅದೊಂದು ದಿನ ಬೆಳಿಗ್ಗೆ ‘ಹೆಸರಿಲ್ಲ’ದವನಿಗೆ ಕೆಲಸವೊಂದರ ನಿಮಿತ್ತ ಕಚೇರಿಗೆ ಹೋಗಬೇಕಾಯಿತು. ಅವನು ನೇರವಾಗಿ ದೊಡ್ಡ ಸಾಹೇಬರನ್ನು ಭೇಟಿಯಾಗಲು ನಿರ್ಧರಿಸಿದ್ದ. ಅಕಸ್ಮಾತ್ ಆಕಾಶದಲ್ಲಿ ಮೋಡಗಳು ಕವಿದವು. ಅವನು ಒಂದು ಗಂಟೆಗೆ ಮೊದಲು ಗಡ್ಡವನ್ನು ಹೆರೆದುಕೊಂಡಿದ್ದ, ಆದರೂ ಕೂದಲುಗಳ ಚಿಗುರು ಹೊರಹೊಮ್ಮಿದ್ದವು. ಆದರೆ ‘ಹೆಸರಿಲ್ಲ’ದವನ ನಿಶ್ಚಯ ದೃಢವಾಗಿತ್ತು. ದೊಡ್ಡ ಸಾಹೇಬರನ್ನು ಭೇಟಿಯಾಗದೆ ಅವನಿಗೆ ಶಾಂತಿಯಿರಲಿಲ್ಲ.
‘ಹೆಸರಿಲ್ಲ’ದವ ಕೋಟು ಧರಿಸಿದ, ಛತ್ರಿ ತೆಗೆದುಕೊಂಡ, ಎಂದೂ ಹೊರಡದ ಅವನು ಕಚೇರಿಗೆ ಹೊರಟ. ಮೊದಲು ಮನೆಯ ಹೊಸ್ತಿಲನ್ನು ದಾಟಿ, ಕೆಮ್ಮಿ ಗಂಟಲನ್ನು ಸರಿಪಡಿಸಿಕೊಂಡ. ನಂತರ ದೊಡ್ಡ ಸಾಹೇಬರನ್ನು ಭೇಟಿಯಾಗಲು ಕಚೇರಿಯ ಮಾರ್ಗದಲ್ಲಿ ಹೊರಟ. ‘ಹೆಸರಿಲ್ಲ’ದವನ ನಡಿಗೆ ಸಮರ್ಥವಾಗಿತ್ತು, ಅವನು ತನ್ನ ನಡಿಗೆಯಲ್ಲಿ ಯಾರನ್ನು ಸಹ ಅನುಕರಣೆ ಮಾಡಿರಲಿಲ್ಲ. ಹಾಗಂತ ‘ಹೆಸರಿಲ್ಲ’ದವನಿಗೆ, ಚದುರಂಗ ಆಡುವುದು ಮತ್ತು ಪಂಚಾಂಗ ನೋಡುವುದನ್ನು ಹೊರತು ಪಡಿಸಿ ಬೇರೆ ಯಾವುದೇ ವಿಶೇಷ ಆಸಕ್ತಿಯಿಲ್ಲ. ಯಾರೋ ಒಬ್ಬರು ಒಮ್ಮೆ ಗಂಭೀರವಾಗಿ ಕೇಳಿದರು, “ಮಹಾಶಯರೇ! ಜೀವನದಲ್ಲಿ ನಿಮ್ಮ ಮಹತ್ವಾಕಾಂಕ್ಷೆ ಏನು?”
“ಏನಿಲ್ಲ!”
“ನೀವು ಯಾಕಾಗಿ ಬದುಕುತ್ತಿದ್ದೀರ?”
“ಹೀಗೇ...ಬದುಕುತ್ತಿದ್ದೇನೆ.”
“ನಿಮಗೆ ಯಾವ ವಿಷಯದಲ್ಲಿ ಆಸಕ್ತಿಯಿದೆ?”
“ಯಾವುದರಲ್ಲೂ ಮನಸ್ಸಿಲ್ಲ.”
ಇಂಥ ಪ್ರಶ್ನೆ-ಚಿಹ್ನೆಯಂಥ ವ್ಯಕ್ತಿ ಕಚೇರಿಗೆ ಹೋಗಲು ಹೊರಟಿದ್ದ.
‘ಹೆಸರಿಲ್ಲ’ದವ ಕಚೇರಿಗೆ ಹೋಗಿ, ದೊಡ್ಡ ಸಾಹೇಬರ ಜವಾನನಿಗೆ ತುಂಬು ಆತ್ಮವಿಶ್ವಾಸದಿಂದ ‘ನಿಮ್ಮೊಂದಿಗೆ ತುರ್ತು ಕೆಲಸವಿದೆ. ನೀವು ಎರಡು ನಿಮಿಷ ಅವಕಾಶ ಕೊಟ್ಟರೆ, ಕೃಪೆಯನ್ನು ತೋರಿದಂತಾಗುತ್ತದೆ’ ಎಂದು ಬರೆದು, ಅದರ ಕೆಳಗೆ ವಕ್ರ-ವಕ್ರವಾಗಿ ‘ನಿಮ್ಮ ಆಜ್ಞಾಧಾರಿ –ಹೆಸರಿಲ್ಲ’ ಎಂದು ಸಹಿ ಮಾಡಿ ಅದನ್ನು ಜವಾನನ ಕೈಗೆ ಹಾಕಿದ.
ನಂತರ ಆತ್ಮವಿಶ್ವಾಸದೊಂದಿಗೆ ದೊಡ್ಡ ಸಾಹೇಬರ ಕರೆಯನ್ನು ನಿರೀಕ್ಷಿಸಿದ. ಏಕೆಂದರೆ ಅವನು ಮನೆಯಿಂದ ಹೊರಡುವುದಕ್ಕೆ ಮೊದಲು, ತಾನು ಯಾವಾಗ ಕಚೇರಿಗೆ ಹೋಗುತ್ತೇನೆ, ಆಗ ದೊಡ್ಡ ಸಾಹೇಬರಿಗೆ ಕೆಲಸವಿರುವುದಿಲ್ಲ, ಅವರು ಅಭ್ಯಾಸ ಬಲದಂತೆ ಯಾರನ್ನಾದರು ನಿರೀಕ್ಷಿಸುತ್ತಿರುತ್ತಾರೆ ಎಂದು ಪಂಚಾಂಗವನ್ನು ನೋಡಿ ಹೊರಟಿದ್ದ.
ಹಾಗೆಯೇ ಸಂಭವಿಸಿತು. ಜವಾನ ದೊಡ್ಡ ಸಾಹೇಬರ ಕೈಗೆ ಪತ್ರವನ್ನು ಕೊಡಲು ಹೋದ; ಕಳೆದ ಎರಡು ಗಂಟೆಗಳಿಂದ ಪತ್ರಗಳು ಮತ್ತು ಫೈಲ್‌ಗಳಿಗೆ ಸಹಿ ಮಾಡಿ-ಮಾಡಿ ದಣಿದಿದ್ದ ದೊಡ್ಡ ಸಾಹೇಬರು ಈಗ ಆಕಳಿಸುತ್ತಾ, ಮೈಮುರಿಯುತ್ತಿದ್ದರು. ದೊಡ್ಡ ಸಾಹೇಬರು ಅಭ್ಯಾಸ ಬಲದಂತೆ ಮುಖದಲ್ಲಿ ಸಿಟ್ಟನ್ನು ಪ್ರದರ್ಶಿಸುತ್ತಾ ಜವಾನನಿಂದ ಪತ್ರವನ್ನು ತೆಗೆದುಕೊಂಡು ಓದಿದರು. ಹಸ್ತಾಕ್ಷರವನ್ನು ನೋಡಿದರು. ಹುಬ್ಬುಗಳನ್ನು ಗಂಟಿಕ್ಕಿ, ನಂತರ ಮೆಲ್ಲನೆ ನಗುತ್ತಾ ಜವಾನನಿಗೆ ಹೇಳಿದರು, “ಮಾನ್ಯ ಆಜ್ಞಾನುಕಾರಿ ‘ಹೆಸರಿಲ್ಲ’ದವನನ್ನು ಒಳಗೆ ಕಳುಹಿಸು!”
‘ಹೆಸರಿಲ್ಲ’ದವ ದೊಡ್ಡ ಸಾಹೇಬರ ಕ್ಯಾಬಿನ್ ಒಳಗೆ ಪ್ರವೇಶಿಸಿ, ಎರಡೂ ಕೈಗಳನ್ನು ಮುಗಿದು ನಿಂತ.
“ನಿಮ್ಮ ಹೆಸರೇನು?” ಸಾಹೇಬರು ಕೇಳಿದರು.
3-
“ಹೆಸರಿಲ್ಲ.”
ದೊಡ್ಡ ಸಾಹೇಬರು ಆಶ್ಚರ್ಯದಿಂದ ಎರಡೂ ಕಿವಿಗಳಲ್ಲಿ ಬೆರಳನ್ನು ಹಾಕಿ, ಹೊರಳಿಸಿದರು. ನಂತರ ಶಾಂತಿಯಿಂದ ಹೇಳಿದರು, “ನಿಮ್ಮ ಹೆಸರನ್ನು ಇನ್ನೊಮ್ಮೆ ಹೇಳಿ.”
“ಹೆಸರಿಲ್ಲ.”
“ನಿಮ್ಮ ಕುಲದ ಹೆಸರು?”
“ಹೆಸರಿನಲ್ಲಿಯೇ ಇದೆ.”
“ತಂದೆಯವರ ಹೆಸರು?”
“ಸಾಹೇಬರೇ, ಅವರ ಹೆಸರನ್ನು ಎಂದೂ ಹೇಳುವುದಿಲ್ಲವೆಂದು ನಾನು ಪ್ರತಿಜ್ಞೆ ಮಾಡಿದ್ದೇನೆ.”
“ಕಾರಣ?”
“ಇದು ನಮ್ಮ ಮನೆಯ ವೈಯಕ್ತಿಕ ವಿಷಯ...”
“ಸರಿ-ಸರಿ. ಆದರೆ...ಇಂಥ ‘ಹೆಸರಿಲ್ಲ’ ಎಂಬ ಹೆಸರು ನಿಜವಾಗಿ, ಯಾರಿಗಾದರು ಇರಲು ಸಾಧ್ಯವೇ?”
“ಯಾರಿಗಿಲ್ಲದಿದ್ದರೂ, ನನಗಿದೆಯಲ್ಲ!”
“ಬೈ ದ ವೇ, ನೀವು ಷೇಕ್ಸ್‌ಪಿಯರ್ ಅವರನ್ನು ಓದಿದ್ದೀರ?”
“ಇಲ್ಲ-ಇಲ್ಲ, ಸಾರ್! ಈ ಹೆಸರನ್ನು ಎಲ್ಲೋ ಕೇಳಿದ್ದೇನೆಂದು ನೆನಪಾಗುತ್ತಿದೆ.”
ದೊಡ್ಡ ಸಾಹೇಬರು ಉತ್ಸುಕತೆಯಿಂದ ಹೇಳಿದರು, “ವಾಟ್ಸ್ ದೆ ಆರ್ ಇನ್ ಎ ನೇಮ್...” ಸಾಹೇಬರು ಮತ್ತೆ ಕೇಳಿದರು, “ನೀವು ಹುಟ್ಟಿದ್ದು ಎಲ್ಲಿ?”
“ಅಹಮದಾಬಾದಿನಲ್ಲಿ-ದೂಧೇಶ್ವರ್ ಸ್ಮಶಾನವಿದೆಯಲ್ಲ, ಅದರ ಎದುರಿಗಿರುವ ಮನೆಯಲ್ಲಿ!”
“ನೀವು ಹುಟ್ಟಿದ್ದನ್ನು ಸರ್ಕಾರಿ ರಿಜಿಸ್ಟರ್‌ನಲ್ಲಿ ನೋಂದಾಯಿಸಲಾಗಿದೆಯೇ?”
“ಗೊತ್ತಿಲ್ಲ ಸಾರ್!”
ದೊಡ್ಡ ಸಾಹೇಬರು ತಲೆ ಕೆರೆದುಕೊಂಡರು. ನಂತರ ಇದ್ದಕ್ಕಿದ್ದಂತೆ ಕೇಳಿದರು, “ನಿಮ್ಮ ತಂದೆಯವರಿಗೆ ಎಷ್ಟು ಜನ ಸಹೋದರಿಯರಿದ್ದರು?”
“ಇಬ್ಬರು-ಇಬ್ಬರೂ ವಿಧವೆಯರು!”
“ಓಹೋ! ಹಾಗಾದರೆ ನಿಮ್ಮ ಒಬ್ಬರು ಚಿಕ್ಕಮ್ಮ ನಿಮ್ಮ ಬಾಲ್ಯದಲ್ಲಿ ಹೆಸರನ್ನಿಟ್ಟಿರಬಹುದಲ್ವ?”
“ಗೊತ್ತಿಲ್ಲ ಸಾರ್! ಇಟ್ಟಿರಬಹುದು, ಆದರೆ...”
“ಆದರೇನು?”
“ಆಮೇಲೆ ಏನಾಯ್ತು ಅಂತ ಗೊತ್ತಿಲ್ಲ...”
“ಏನೋ ಗಂಭೀರವಾದದ್ದು ನಡೆದಿರಬಹುದು.”
“ಸಾರ್, ಅಂದಿನಿಂದ ನನಗೆ ನೆನಪಿದೆ...ನನಗೆ ಯಾವ ಹೆಸರೂ ಇಲ್ಲ ಅಂತ...”
“ಎನಿ ವೇ...ಹೆಚ್ಚು ನರ್ವಸ್ ಆಗಬೇಕಾದ ಆವಶ್ಯಕತೆಯಿಲ್ಲ. ನೀವು ನಿಮ್ಮ ನೆನಪಿನ ಶಕ್ತಿಗೆ ಸ್ವಲ್ಪ ಹೆಚ್ಚು ಒತ್ತುಕೊಟ್ಟು, ನೀವು ಎಳೆಯವರಾಗಿದ್ದಾಗ, ನಿಮ್ಮನ್ನು ನಿಮ್ಮ ತಾಯಿ ಏನೆಂದು ಹೇಳಿ ಕರೆಯುತ್ತಿದ್ದರು ಎಂಬುದನ್ನು ಹೇಳಿ.”
ತಾಯಿಯ ನೆನಪಾಗುತ್ತಲೇ ‘ಹೆಸರಿಲ್ಲ’ದವ ಉದಾಸೀನನಾದ. ನಂತರ ತಾಯಿ ಕರೆಯುತ್ತಿದ್ದಂಥ ಧಾಟಿಯಲ್ಲಿ ಮೆಲ್ಲನೆ ಹೇಳಿದ, “ಏಯ್ ಹೆಣವೇ...ಕೋಯಿವಾ...”
ದೊಡ್ಡ ಸಾಹೇಬರು ಎದ್ದು ನಿಂತು ಹೇಳಿದರು, “ಡ್ಯಾಮ್ ಇಂಟರೆಸ್ಟಿಂಗ್.”
ಅವರು ಕೂಡಲೇ ಗಂಟೆ ಒತ್ತಿ ಜವಾನನನ್ನು ಕರೆದು ಹೇಳಿದರು, “ಎರಡು ಕಪ್ ಚಹಾ ತಗೊಂಡ್ ಬಾ!” ನಂತರ ಅವರು ‘ಹೆಸರಿಲ್ಲ’ದವನಿಗೆ ಕುರ್ಚಿಯಲ್ಲಿ ಕೂರಲು ಗೌರವದಿಂದ ಹೇಳಿದರು. ‘ಹೆಸರಿಲ್ಲ’ದವ ಕುರ್ಚಿಯಲ್ಲಿ ಕೂತ, ಆಶ್ಚರ್ಯ...
“ಕೋಯಿವಾ.” ದೊಡ್ಡ ಸಾಹೇಬರು ಕೇಳಿದರು, “ಎಷ್ಟು ಓದಿದ್ದೀರ?”
“ಬ್ರಿಟಿಷರ ಕಾಲದ ಮೆಟ್ರಿಕ್ ಪಾಸು ಮಾಡಿದ್ದೇನೆ-ಇಂಗ್ಲಿಷ್ ಮೀಡಿಯಮ್‌ನಲ್ಲಿ ಓದಿದ್ದೇನೆ, ಸಾರ್!”
ಸ್ವಲ್ಪ ಸುಳಿವು ಸಿಕ್ಕಿತು ಎಂಬ ನಂಬಿಕೆಯಿಂದ ದೊಡ್ಡ ಸಾಹೇಬರು ಟೇಬಲ್ ಮೇಲೆ ಗುದ್ದಿ ಕೇಳಿದರು, “ಆಗಿನ ನಿನ್ನ ಮೆಟ್ರಿಕ್ಯೂಲೇಶನ್ ಸರ್ಟಿಫಿಕೇಟಿನಲ್ಲಿ ಏನು ಹೆಸರಿದೆ?”
“ಇದೇ, ಸಾರ್!”
“ಏನು ಹೇಳ್ತಿದ್ದೀಯ, ಹೆಸರಿಲ್ಲ ಅಂತ...!”
“ಹೌದು, ಸಾರ್!”
“ಈ ಹೆಸರಿನ ಬಗ್ಗೆ ಆಗ ಯಾರೂ ಆಕ್ಷೇಪಣೆ ಮಾಡಲಿಲ್ವ?”
“ಆಕ್ಷೇಪಣೆ ಮಾಡಿದ್ದರು, ಸಾರ್!”
“ಹೂಂ...ಆಗ ಏನಾಯ್ತು?”
“ನಾನು ಹಟ ಮಾಡಿದೆ, ಸಾರ್! ಆಗ ಇದೇ ಹೆಸರನ್ನಿಟ್ಟರು.”
“ಇಂಥ ಹೆಸರು ಇಡುವದರ ಹಿಂದೆ ನಿನ್ನ ಅಭಿಪ್ರಾಯ ಏನಾಗಿತ್ತು?”
“ಅಭಿಪ್ರಾಯ ಏನಿರಲಿಲ್ಲ ಸಾರ್...ಬೇರೆ ಮಾರ್ಗವೇ ಇರಲಿಲ್ಲ, ಈ ‘ಹೆಸರಿಲ್ಲ’ ಎಂಬುವುದನ್ನು ಹೊರತುಪಡಿಸಿ.”
“ಬೇರೆ ಮಾರ್ಗವಿರಲಿಲ್ಲ...ಅಂದರೆ? ನೀವು ಕೋಕಿಲ್, ಕೌರವ್, ಕಮಲಾಶಂಕರ್, ಕರನದಾಸ್...ಹೀಗೆ ಯಾವುದೇ ಹೆಸರನ್ನಿಟ್ಟುಕೊಳ್ಳಬಹುದಿತ್ತು...ನಿಮಗಿಷ್ಟವಾದ ರಾಶಿಯ ಹೆಸರನ್ನು...ಬೇಕಿದ್ದರೆ ಎಲ್ಲಾ ಹೆಸರುಗಳನ್ನು ಬರೆಯಬಹುದಿತ್ತು.”
4-
“ಸಾರ್...ನಾನು ನಿಮಗೆ ನಿಜ ಸಂಗತಿಯನ್ನು ಹೇಗೆ ತಿಳಿಯಪಡಿಸಲಿ?...ಅದೇನೆಂದರೆ ನಾನೇನೋ ಅದೇ ಆಗಿದ್ದೇನೆ...ಅಂದರೆ ‘ಹೆಸರಿಲ್ಲ.’.ದವನಾಗಿದ್ದೇನೆ...”
ಈಗ ದೊಡ್ಡ ಸಾಹೇಬರಿಗೆ ಪ್ರಶ್ನೆ ಮಾಡುವಾಗ ಸಿಟ್ಟು ಬರುತ್ತಿತ್ತು. ಅವರು ಸ್ವಲ್ಪ ಹೊತ್ತು ಗಾಢ ಯೋಚನೆಯಲ್ಲಿ ಮುಳುಗಿದ್ದು, ನಂತರ ಕೇಳಿದರು, “ಸರಿ! ಈಗ ನಿನ್ನ ದೂರು ಏನು? ಹೇಳು.”
“ಇಲ್ಲ-ಇಲ್ಲ, ದೂರು ಏನಿಲ್ಲ. ನಾನೊಂದು ಸಣ್ಣ ವಿನಂತಿಯೊಂದಿಗೆ ಬಂದಿದ್ದೇನೆ, ಸಾರ್!”
“ಹೇಳು, ಕಚೇರಿ ಮುಚ್ಚುವ ಸಮಯವಾಗುತ್ತಿದೆ.”
“ಸಾರ್! ಈಗ ನನಗೆ, ಕಡೆಗಂತೂ ನಾನೇನಾದರೂ ಆಗಿಯೇ ಆಗ್ತೀನಿ ಎಂದು ಅನ್ನಿಸುತ್ತಿದೆ..ಅದಕ್ಕೇ ಸಾರ್, ನಾನು ನನ್ನ ಹೆಸರನ್ನು ಬದಲಾಯಿಸ ಬೇಕಿದೆ.” ಹೀಗೆ ಅವನು ವಿನಂತಿಸಿಕೊಳ್ಳುವಾಗ ‘ಹೆಸರಿಲ್ಲ’ದವನ ಬದಲಾದ ಮುಖವನ್ನು ದೊಡ್ಡ ಸಾಹೇಬರು ನೋಡುತ್ತಲೇ ಇದ್ದರು- ಅಲ್ಲಿ ಏರುಪೇರಿಲ್ಲದ ಸಮತಲ ಮುಖದ ಬದಲು ಸುಣ್ಣದಂಥ ಸ್ವಚ್ಛ ಕಲೆಯಿತ್ತು!
ಅರೇ ಮಾಣಿಕಲಾಲ್! ನೀನೆಲ್ಲಿಗೆ ಹೋದೆ? ಕಥೆಯ ಆರಂಭ ಇದೀಗ ತಾನೇ ಆಗಿದೆ...ಸ್ವಲ್ಪ ಕೇಳು!
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.