ADVERTISEMENT

ಮಹಮ್ಮದ್ ರಫೀಕ್ ಕೊಟ್ಟೂರು ಅವರ ಕಥೆ: ಆಲೆ ಕುಣಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 23:30 IST
Last Updated 17 ಜನವರಿ 2026, 23:30 IST
   

ಮಸೀದಿಯ ಮುಂದೆ ಆಲೆ ಕುಣಿಗೆ ಗುದ್ಲಿ ಹಾಕಿದೊಡನೆ, ಬೆಂಕಿ ಇಮ್ಮಣ್ಣೆಪ್ಪನ ಮನೆಯಲ್ಲಿ ಹತ್ತಿತ್ತು.

ʼಬಾಬಾ ನೀನು ಈ ವರ್ಷದಾಗ ಓದ್ಕಿ ಮಾಡ್ಬ್ಯಾಡ..! ಮಾಡಂಗಿಲ್ಲಾ ಅಷ್ಟಾʼ ಮೊದಲು ವಿನಂತಿಯಂತೆ ಆರಂಭಿಸಿದ ಮಾತು ಖಡಾಖಂಡಿತವಾಗಿ ಆದೇಶದಂತೆ ಮಗ ಫೈಜ್ ಹೇಳಿದಾಗ

‘ಬೇಟಾ.. ಅದು ಆಗ್ಲರ‍್ದ ಮಾತು ನಾನು ಊರ್ ರಿಣದಾಗದೀನಿ... ನಿಮ್ಮನ್ನೆಲ್ಲಾ ಕಟ್ಕೊಂಡ್‌ ಈ ಊರಿಗೆ ಬಂದಾಗ ನನಿಗಿ ನೆಳ್‌ ಕೊಟ್ಟಿದ್ದು, ಅನ್ನ- ನೀರು ಕೊಟ್ಟದ್ದು ಈ ಊರು. ವರ್ಷ ಪೂರ್ತಿ ಊರ್‌ ಮಂದಿ ಕಣದಾಗ ಕಾಳೆತ್ತಿ ನಿಮ್ಮನ್ನ ಸಾಕೀನಿ.. ಜಮಾತ್‌ನವರು ನಿಮಗ ತಾಕೀತು ಮಾಡ್ಯಾರ ಅದ್ಕ ಹೇಳಕತ್ತೀರಂತ ನಂಗೊತ್ತು. ನಾ ಊರಿಗೆ ಕಾಲಿಟ್ಟಾಗ ನಿಮ್ಮ ಜಮಾತ್‌ ಈ ಊರಾಗ್ಲೇ ಇರಲಿಲ್ಲ, ಈ ಊರವ್ರು ನನಿಗೆ ಮಸೀದಿ ಕೆಲಸ ಕೊಡ್ಲಿಲ್ಲಾಂದ್ರ ನಾ ಇನ್ನೇಸ್‌ ಊರು ಅಲಿಬೇಕಾಗ್ತಿತ್ತೋ.. ಅವ್ರ ಮಾತ್‌ ಕಟ್ಕೊಂಡು ನನ್ನ ಜತಿ ಜಗಳಾ ಆಡ್ಬ್ಯಾಡ್ರಿ..' ಕಣ್ಣಾಗ ನೀರ್‌ ತುಂಬ್ಕೊಂಡಿದ್ದನ್ನ ತನ್ನ ವಲ್ಲೀಲಿ ವರ್ಸಿಕೊಳ್ತಾ ಇಮ್ಮಣ್ಣೆಪ್ಪ ಹೇಳಿದಾಗ ‘ಅದೆಲ್ಲಾ ನಂಗೊತ್ತಿಲ್ಲ ಬಾಬಾ, ಜಮಾತ್‌ ಮಾತ್‌ ಮೀರಿ ಓದ್ಕೀ ಮಾಡ್ದೀ ಅಂದ್ರ ನಮ್ಮನಿಗೆ ಬಹಿಷ್ಕಾರದ ಫತ್ವಾ ಹೊರಡಸ್ತೀವಿ ಅನ್ನಾಕತ್ಯಾರಾ, ಹಂಗೇನಾರಾ ಜಾತಿಯಿಂದ ಹೊರಗಾ ಹಾಕಿದ್ರಾ ಮುಂದೇ ಬದುಕಾದ್‌ ಹ್ಯಾಂಗ..'

ADVERTISEMENT

ಸ್ವಲ್ಪ ಹೊತ್ತು ಬಿಟ್ಟು ನಿಟ್ಟುಸಿರು ಹಾಕುತ್ತಾ ʼಫೈಜ್‌ ನಾ ಇರೋರ‍್ಗೂ ನನ್ನ ಪಾಡಿಗೆ ನನ್‌ ಬಿಟ್ಟ ಬಿಡು, ನಾ ಹೋದ್ಮ್ಯಾಲಾ ನಿನ್ನಿಚ್ಚಿʼ ಎಂದ.

‘ಇಲ್ಲ ಬಾಬಾ, ನೀ ಹೋಗ್ಬ್ಯಾಡ ಅಷ್ಟಾ..ʼ 

‘ಅಂಗಂದ್ರ ನಾ ಆ ಮಸೀದ್ಯಾಗ ಇರ್ತಿನಿ. ಮಕ್ಳ ಮರಿ ಜತಿ ನೀನ್ ಇಲ್ಲೇ ಇರು ನನಗ ಮನಿಯಿಂದ ಹೊರಗ್‌ ಹಾಕೀನಿ ಅಂತ ಅವರಿಗೆ ಹೇಳ್ಬಿಡು..ʼ ಎಂದು ಹೊರಬಿದ್ದ ಇಮ್ಮಣ್ಣೆಪ್ಪ ಮತ್ತೆ ತಿರುಗಿ ನೋಡುತ್ತಾ ‘ಫತ್ವಾನಾ ಜಮಾತ್‌ನವರು ನನಗ್‌ ಮಾತ್ರ ಹೊರಡಸನ್ನು.. ನಾ ಹೊಕ್ಕೀನಿ ಆ ಅಲ್ಲಾ ನಿಮ್ಮನ್ನ ಚನ್ನಾಗಿಟ್ಟಿರ‍್ಲಿ..!' ಎಂದಾಗ ಫೈಜ್‌ ಆಗ್ಲೀ, ಆತನ್‌ ಹೆಂಡ್ತಿ ಶರೀಫಾ ಆಗ್ಲಿ ತಡಿಯಾಕೊಗ್ಲಿಲ್ಲ. 

ಎರಡು ಹೆಜ್ಜೆ ಮುಂದಡಿಯಿಟ್ಟು, ಮತ್ತೆ ಹಿಂದಕ್‌ ಬಂದು ‘ಹೋಗಾಕೂ ಮುಂಚಿ ಮತ್ತೊಂದು ಮಾತು... ನಾ ಕುರಾನ್ ಓದಿಲ್ಲ, ಆದ್ರ ನಾ ಕಲ್ತ ನಾಕ್‌ ಅಕ್ಷರದಾಗ ನನ್ನ ಬದುಕು ಬದುಕೀನಿ. ನಿಮ್ಮಂಗ ಮೂರ್‌ ದಿನಾ, ನಲವತ್ತ ದಿನಾ, ಮೂರು ತಿಂಗ್ಳು ಜಮಾತ್ನಾಗ ಹೋಗ್ಬೇಕಂದ್ರ, ನಾ ಕಟ್ಕೊಂಡ ಬದುಕು ನಂಗಾ ಹೋಗಾಕ ಬಿಡ್ಲಿಲ್ಲ. ಆದ್ರ ಒಂದ್‌ ಮಾತ್‌, ನಿಮ್‌ ಜಮಾತ್‌ದವರಿಗೆ ಹೇಳ್ರಿ.. ಮನುಷ್ಯತ್ವ ಅನ್ನೋ ಧರ್ಮದ ಮುಂದ ಯಾವ ಧರ್ಮನೂ ಇಲ್ಲ.. ಇದ್ನ ಕುರಾನ್‌ ಹೇಳಾದು, ಅದ್ನ ತಿಳ್ಕೊಂಡೀನಿ.. ನಮ್ಮ ಈಮಾನ್‌, ಕೇವಲ ನಮಾಜ್‌ ಅಷ್ಟೇ ಅಲ್ಲ, ನಮ್ಮ ಬದುಕೂ ಕೂಡ. ಈಮಾನ್‌ನ ಬದ್ಕಿನ ಒಂದು ಭಾಗ ಅಂತಾನೂ ತಿಳ್ಕೊಂಡಿನಿ. ಇದು ನೀ ನಂಬಿರೋ ಹದೀಸ್‌ಗಳಲ್ಲೇ ಸಿಗ್ತೈತಿ, ಒಮ್ಮೆ ನಿಮ್ಮ ಇಮಾಮ್‌ಗಳಿಗೆ, ಹಾಫೀಜ್ಗಳಿಗೆ, ಆಲಿಮ್ಗಳಿಗೆ ಓದಾಕ್‌ ಹೇಳಿ ನೋಡ್ರಿʼ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಹಿಂದೆ ನೋಡುತ್ತಾ ಮುಂದಡಿ ಇಟ್ಟ ದಾರಿಯ ಕಲ್ಲು ಎಡವಿ ಬೀಳಬೇಕಾದೋನ್‌ ಸಾವರಿಸಿಕೊಂಡು ನಿಂತ. ನೋಡಿಯೂ ನೋಡದಂತಿದ್ದ ಫೈಜ್‌, ಕಣ್ಣಾಗ ನೀರ್‌ ತುಂಬ್ಕೊಂಡಿದ್ದ ಸೊಸಿ ಶರೀಫಾಳನ್ನು ಮತ್ತೊಮ್ಮೆ ನೋಡಿದ. ಆಕಿ ದೃಷ್ಟಿ ತನ್‌ ಕಾಲ್‌ ಕಡಿಗಿದ್ದುದ್ದ್‌ ನೋಡಿ ಎಡವಿದ ಕಾಲ್ ನೋಡ್ಕಂಡ ಹೆಬ್ಬೆರಳಾಗಿನ್‌ ಉಗ್ರು ಕಿತ್ತು ರಕ್ತ ಬರ್ತಿತ್ತು. ಆದ್ರ ಇಮ್ಮಣ್ಣೆಪ್ಪ ಹಂಗಾ ಹೊಂಟಾ.

---

ಊಟಕ್‌ ಮಾತ್ರ ಮನೀ ಕಡಿ ಹೋಗ್ತಿದ್ದ ಇಮ್ಮಣ್ಣೆಪ್ಪ ಉಳದ್‌ ಟೈಮ್ನಾಗ ಇಲ್ಲೇ ಇರ್ತಿದ್ರಿಂದ ಹಾಸ್ಗಿ ಇಲ್ಲೇ ಇರ್ತಿದ್ವು..  ಮೂಲ್ಯಾಗ ಮಡ್ಚಿಟ್ಟಿದ್ದ ಹಾಸ್ಗೀನಾ ಬಿಚ್ಚಿ ಹಾಸಿ ಹಂಗಾ ಅಡ್ಡಾದ. ಪಕ್ಕದೋರು ಯಾರೂ ಮಾತಾಡ್ಸಬರ‍್ದಂತ ಕಣ್ಣು ಮುಚ್ಚಿದ.

ಇಮ್ಮಣ್ಣೆಪ್ಪ, ಕೊಪ್ಪಳದಿಂದ ಈ ಹಳ್ಳಿಗೆ ಹೆಂಡ್ತಿನ್ನ ಸಣ್ಣವೆರಡು ಮಕ್ಕಳನ್ನ ಕರ್ಕೊಂಡು ಬಂದು ಸುಮಾರು ಮೂವತ್‌ ವರ್ಷ ಆಗಿರ‍್ಬೋದು. ಈ ಊರಿಗೆ ಕಾಲಿಟ್ಟಾಗ, ಈತನ್ದೊಂದಾ ಸಾಬ್ರ ಮನಿ. ಈತ ಊರಿಗ್‌ ಬಂದಾಗ ಊರಿಗ್‌ ಊರಾ ಪಕ್ಕದ್‌ ಊರಾಗಿನ್ ಅಲೆದ್ಯಾವರಿಗೆ ಪೂಜಿ ಮಾಡ್ಕೊಂಬರೋರು. ಇದ್ದಂತೋರು ಮಾದ್ಲಿ ಮಾಡ್ಕೊಂಡು, ಅಲೆದ್‌ ಕುಣಿಗೆ ಹಾಕಾಕ ಉಪ್ಪು, ಮರದ ಬಡ್ಡಿ ಇಟ್ಕೊಂಡು ಸವಾರಿ ಬಂಡೀಲಿ ಹೋಗ್ತಿದ್ರು, ಇಲ್ಲದೋರು ಸಕ್ರಿ ಓದಿಸ್ಕೊಂಡು ಇರ್ತಿದ್ರು. 

ಇಮ್ಮಣ್ಣೆಪ್ಪ ಬಂದಿಂದೆ, ಎಲ್ಲಾ ಕಪ್ಮಂದಿ ಸೇರಿ ಇಲ್ಲೇ ಪೀರಲ ದ್ಯಾವರ ಗುಡಿ ಕಟ್ಟಿ ಯಾಕ್‌ ಪೂಜಿ ಮಾಡ್ಬರ‍್ದೂಂತ ಮಾತಾಡ್ಕಂಡು ಇಮ್ಮಣ್ಣೆಪ್ಪನ್ ಕೇಳಿದ್ರ ಅವ್ನೂ ಇದಕ್ಕಾ ಹೂ.. ಅಂದಿದ್ದ. 

ಒಂದಾ ವರ್ಷದಾಗ ಮಸೀದಿ ಕಟ್ಸಿ, ಓದ್ಕಿ ಮಾಡ್ಕೊಂಡೋಗಾಕ ಇಮ್ಮಣ್ಣೆಪ್ಪಗ ಊರ ಪ್ರಮುಖರು ಹೇಳಿದ್ದರು. ವಿಶೇಷ ಅಂದ್ರ ಈ ದೇವರು ವರ್ಷ ಪೂರ್ತಿ ಗುಡ್ಯಾಗಾ ಇರ‍್ತಾವ. ಇಮ್ಮಣ್ಣೆಪ್ಪ, ಜನರಿಗೆ ಹೇಳಿದ್‌ ಪ್ರಕಾರ ಈ ದೇವ್ರನ್ನಾ ಬಾರಾ ಇಮಾಮ್‌ ಅಂತರಂತ. ಇಮ್ಮಣ್ಣೆಪ್ಪ ಗುಡೀಗೆ ಬರೋ ಭಕ್ತರಿಗೆ ನವೀಲ್‌ ಗರೀಲಿ ಆಶಿರ‍್ವಾದ ಮಾಡೋದಲ್ಲದ, ಮನಸ್ಸಿಗೆ ಸಮಾಧಾನ ಆಗಂಗ್‌ ಒಂದೆರಡ್‌ ಮಾತ್‌ ಹೇಳಿ ಕಳ್ಸತಿದ್ದ. ಭಕ್ತರಿಗೆ ಏನೋ ಒಂದ್‌ ನಮೂನಿ ಸಮಾಧಾನ. ಅದ್ರಿಂದ ಗುಡೀಗೆ ಬರೋ ಮಂದಿ ದಿನಕ್‌ ದಿನಾ ಜಾಸ್ತಿನೇ ಆದ್ರು. ಶಾಯಿರ ಸುಣಗಾರ ಹುಸೇನಪ್ಪ ಅದಾ ವರ್ಷದಾಗ ಎಲ್ಡು ಕೆ.ಜಿ. ಬೆಳ್ಳಿ ದ್ಯಾವ್ರ್‌ ಮಾಡ್ಸಿದ್ದ. ಬೆಳ್ಳಿ ದೇವರಿಗೆ ಸುಣಗಾರ್‌ ದೇವರು ಅಂತಾನ ಮಂದಿ ಕರ‍್ಯಾಕತ್ತಿದ್ರು. ಈ ದೇವರು ಉಳಿದ ಹಿತ್ತಾಳಿ ದೇವರಿಗಿಂತ ಪವರ್‌ ಫುಲ್‌ ದೇವರಾತು. ಅದ್ಕ ನಡ್ಕೊಳ್ಳೋ ಮಂದೀನೂ ಜಾಸ್ತಿ ಆತು..

ಗುಡಿ ಬೆನ್ನಿಗಿರೋ ಮನಿಯೆಲ್ಲಾ ಹಿಂದೂ ಮಂದಿವಾ. ಹನುಮಪ್ಪನ್‌ ಗುಡಿ, ಬಸಂದೇರ್‌ ಗುಡಿ, ದುರ‍್ಗಮ್ಮನ್‌ ಗುಡಿಗುಳೆಲ್ಲಾ ಈ ಮನಿಗಳಿಗೆ ಸ್ವಲ್ಪ ದೂರ. ಮುಂಜಾನಿ ಅರ್ಜೆಂಟಿಗೆ ಕೈಮುಗ್ಯಾಕ ಇಮ್ಮಣ್ಣೆಪ್ಪನ ಬಾರಾ ಇಮಾಮ್‌ ಗುಡಿ ಹತ್ರ ಅಂದ್ರ ಹತ್ರ.. ಎಲ್ಲಾದ್ರಾಗೂ ದ್ಯಾವರನ್ನ ಕಾಣೋ ಈ ಮಂದಿಗಿ, ಮುಕ್ಕೋಟಿ ದ್ಯಾವರೂ ಸಾಲ್ದಾಗರ‍್ಬೇಕರ. ಇದೊಂದ್‌ ದ್ಯಾವ್ರು ಹೆಚ್ಚಾಗಲ್ಲ. ಬಾರಾ ಇಮಾಮ್‌ ಅಂದ್ರ, ಗುಡ್ಯಾಗಿರೋ ಅಲೆದ್ಯಾವರು ಮತ್ತೇನೂ ಅಲ್ಲ ಅಂತ ಆ ಮಂದಿಗೆ ಗೊತ್ತಿತ್ತು.

ಈ ಗುಡಿ ಅಂಗ್ಳದಾಗ, ಸಾವಿತ್ರವ್ವ ತರ್ಕಾರಿ ಮರ‍್ತಾಳ. ಗುಡೀಗ್‌ ಬರೋರೆಲ್ಲಾ ಪೂಜಿ ಮುಗ್ಸಕೊಂಡು ಸಾವಿತ್ರವ್ವನ್‌ ಮಾತಾಡ್ಸಕೊಂಡು ಕೊತ್ತಂಬ್ರಿ ಸಿವುಡೋ, ಮೆಂತೇನೋ, ತರಕಾರಿನೋ ಏನಾರಾ ಒಂದ್ ತಗಂಡಾ ಹೋಗಾದ್ರಿಂದ ಸಾವಿತ್ರವ್ವನ್‌ ಯಾಪಾರ ಸಲೀಸಾಗಿ ನಡೀತಿತ್ತು. ಹಂಗಾಗಿ ಗ್ಯಾರಂಟೀ ಗಿರಾಕಿಗಳು ಅಂದ್ರಾ, ಬಾರಾ ಇಮಾಮ ಗುಡಿ ಭಕ್ತರು. ಓಣಿ ಮಂದಿ ಜತಿ ಊರ್‌ ಮಂದೀದೂ ಸೇರಿ ಸಾವಿತ್ರವ್ವಗಾ ಒಳ್ಳೆ ಯಾಪಾರ. ಸಾವಿತ್ರವ್ನೂ ಪಕೀರ್‌ ಸ್ವಾಮಿಗೆ ಎಲ್ಡು ಊದಿನ್ಕಡ್ಡಿ ಹಚ್ಚಿ, ಇಮ್ಮಣ್ಣೆಪ್ಪಗ ಅಡ್ಡ ಬಿದ್ದಾದ್ಮೇಲೆ ಮುಂದಿನ್‌ ಕೆಲಸ ಮಾಡ್ತಿದ್ಲು. 

ಮುಂಜಾನಿ ಐದು ಗಂಟಿಗೆ ಮನ್ಯಾಗಿನ್‌ ತರ್ಕಾರಿನ ಗಾಡ್ಯಾಗ್‌ ತುಂಬ್ಕೊಂಬಂದು, ಸ್ವಾಮಿ ಗುಡಿ ಮುಂದ ಜೋಡ್ಸೋದು ಸಾವಿತ್ರವ್ವನ್‌ ಗಂಡ ಗಿಡ್ಡ ಕೊಟ್ರನ್‌ ಕೆಲ್ಸ. ಮತ್ತೆ ವಾಪಾಸ್ ತಗಂಡೋಗಾದೂ ಅವಂದಾ. ಸಾವಿತ್ರಿ ಅಷ್ಟಕ್‌ ಮಾತ್ರ ಅವನ್‌ ಬಳಸ್ಕೆಂತಿದ್ಲು. ಯಾಪಾರದ್‌ ಗಲ್ಲೇಕ್‌ ಮಾತ್ರ ಕುಂದ್ರುಸ್ತಿದ್ದಿಲ್ಲ.‌ ಬಂದ ಎಲ್ಲರ ಮುಂದೆ ಅವರ ಕೇಳಿದ್ರೇನ್‌ ಬಿಟ್ರೇನ್‌ ಆಕಿ ಗಂಡನ್‌ ಕುರಿತು ಹೇಳ್ತಿದ್ದ ಮಾತು ಒಂದಾ ‘ಅಪ್ಪಿ ತಪ್ಪಿ ಇವನ್ನಾ ಗಲ್ಲೇಕ್ ಕುಂದ್ರಿಸಿದ್ರ ನನ್ನ ಕತಿ ಮುಗೀತಾ.. ಇವನವ್ನ ವಾರ ಪೂರ್ತಿ ದುಡ್ದುದೆಲ್ಲಾ ಹೆಂಡದಂಗ್ಡಿಟ್ ಬಿಡ್ತಾನ. ಪಕೀರ ಸ್ವಾಮಿ ಕೈ ಹಿಡಿಲಿಲ್ಲಾಂದ್ರ ಈ ಕುಡ್ಕನ್‌ ಕಟ್ಕೊಂಡು ಎಲ್ಲೆಲ್ಲಿ ಅಲೀಬೇಕಾಗ್ತಿತ್ತೋ, ಯಾರ್‌ ಮನಿ ಕಸ-ಮುಸುರಿ ಮಾಡ್ಬೇಕಿತ್ತೋ’. ಇದಷ್ಟೇ ಅಲ್ದ, ಮಸೀದಿಯಲ್ಲಿ ಓದಿಕೆ ಮಾಡುತ್ತಿದ್ದ ಇಮ್ಮಣ್ಣೆಪ್ಪನ ಮುಂದೆ, ತರಕಾರಿ ತಗೊಳ್ಳೋರ್‌ ಮುಂದೆನೂ ದಿನಕ್ಕೊಂದ್ಸಲನಾದ್ರೂ ಸಾವಿತ್ರಿ ಇವೇ ಮಾತನ್ನೂ ಸೋ.. ಅನ್ತಿದ್ಲು. ಇಮ್ಮಣ್ಣೆಪ್ಪನೂ ಬದಲಾಗದ ಅದೇ ರಾಗದಿಂದ ʼಅವ್ನ ನೆಳ್ಳೂ ಎಲ್ಲಾ ಕಡಿಗೂ ಐತಿ ಆತನ್ ಕರುಣಾ ಇಲ್ದಿದ್ರಾ ಬದುಕೋದುಂಟಾ ಹುಚ್ಚಿʼ ಎಂದು ನಗುತ್ತಿದ್ದ.

ʼಎಲ್ಲಾ ಮಸೀದಿ ದ್ಯಾವ್ರು ಸತ್ರೂ, ಈ ದ್ಯಾವ್ರ ಮಾತ್ರ ಯಾಕ್‌ ಸಾಯೋದಿಲ್ಲೊ ಯಜ್ಜಾʼ ಎಂದು‌ ದ್ಯಾಮಜ್ಜ ನಗುತ್ತಾ ಇಮ್ಮಣ್ಣೆಪ್ಪನ್‌ ಕೇಳಿದ್ರ.. ʼಹುಚ್ಕೋಡಿ.. ದ್ಯಾವ್ರ ಎಲ್ಯಾದ್ರೂ ಸಾಯ್ತಾವೇನೋ.. ಗಣಪನ್‌ ಸಾಯಿಸ್ತೀವಿ, ಕಾಮಣ್ಣನ್‌ ಸಾಯಿಸ್ತೀವಿ.. ಮತ್ತೆ ಮುಂದಿನ್‌ ವರ್ಷ ಹುಟ್ಟಿಸ್ತೀವಿ.. ಇವೆಲ್ಲಾ ನಮ್ಮ ನಮ್ಮ ತಿಪ್ಲಿಗೆʼ ಎಂದು ನಗ್ತಿದ್ದ.

ಬಾರಾ ಇಮಾಮ್‌ ಗುಡ್ಯಾಗ, ಸುಣುಗಾರ್‌ ಬೆಳ್ಳಿ ದ್ಯಾವರಿಗೆ ನಾವೇನಾರ ಮನಸ್ನಾಗಂದಕಂಡು ನಡ್ಕಂಡ್ರ ಅದು ವರ್ಷ ತುಂಬಾದ್ರಾಗ ಹುಸಿಯಿಲ್ದಂಗ ಕೆಲ್ಸ ಅಕ್ಕಾತಿ ಅಂತಿದ್ರು, ಏನಾರ ರೋಗ-ಪಾಗ ಇದ್ರ ನವಿಲ್‌ಗರಿಲೇ ಆ ದ್ಯಾವರ್‌ ಆಶಿರ‍್ವಾದ ತಗಂಡ್ರ ತಡಾ ಇಲ್ದಾ ಗುಣ ಆಗ್ತಿತ್ತು. ಹಂಗಾಗಿ ಈ ದ್ಯಾವರನ್ನಾ ಪವಾಡದ್‌ ದ್ಯಾವರು ಅಂತಿದ್ರು. ಈ ನಮ್ಮೂರ್‌ ಜನಾ ಅಲ್ದ, ಸುತ್ಮುತ್ತಾ ಹಳ್ಳಿ ಮಂದೀನೂ ಈ ದ್ಯಾವರಿಗೆ ನಡ್ಕೊಂತಿದ್ರು.

ಹಬ್ಬ ಹತ್ರ ಬಂದಿದ್ರಿಂದ ಗುಡಿಯ ಮುಖ್ಯಸ್ಥ ಶಾಯಿರ ಹುಸೇನಪ್ಪನಿಗೆ, ಸಮಿತಿ ಸದಸ್ಯರಿಗೆ ಇಮ್ಮಣ್ಣೆಪ್ಪ ಬರಾಕ ಹೇಳಿದ್ದ. ಹಿಂಗಾಗಿ ಊರ ಹಿರ‍್ಯಾರು ಅವತ್‌ ಗುಡ್ಯಾಗ ಸೇರಿದ್ರು. ಜವಾಬ್ದಾರಿ ಹಂಚಿಕೆ ಸಲ್ವಾಗಿ ಹೊಟ್ಟಿ ಗೌಡ್ರು ವಿಷಯ ಪ್ರಸ್ತಾಪಿಸಿದಾಗ, ಇಮ್ಮಣ್ಣೆಪ್ಪ ಮೊದ್ಲಿಗೇ ರಾಗ ತೆಗೆದ.

'ಗೌಡ್ರ.. ನಿಮ್ಗೆಲ್ಲಾ ಗೊತ್ತಿದ್ದಾ ಐತಿ. ಊರಾಗ ಸಾಬ್ರು ಮನಿ ಈಗ ಬಾಳ ಆಗ್ಯಾವು. ಹಂಗಾಗಿ ನಮ್ಮಂದಿ ಮಸೀದೀನೂ ಕಟ್ಕೊಂಡಾರ. ಕಟ್ಕೊಳ್ಳಾಕ ಜಾಗಾನೂ ದೈವ್ದೋರಾ ಕೊಟ್ಟೀರಿ, ಹಂಗಾಗಿ ಐದೊತ್ತು ನಮಾಜ್‌ ಮಾಡಕ್ಕತ್ಯಾರ. ಈಗ ಮಸೀದಿಗೆ ಜಮಾತ್‌ನವರು ಬರಾದು ಹೋಗಾದು ಮಾಡಕತ್ತಿಂದಾ, ನಮ್ಮ ಜನಗಳ ಮನಸ್ಸು ಸ್ವಲ್ಪ ಬದ್ಲಿ ಆಗ್ಯಾದ. ಇರೋ ಬರೋ ಹುಡುಗರೆಲ್ಲಾ ಜಮಾತಿಗೆ ಕರ್ಕೊಂಡೋಗಿ ತೆಲಿ ಕೆಡ್ಸಿ ಹಸೇನ್‌- ಹುಸೇನ್‌ ಸತ್ತ ದಿನಾನ ನೀವು ಹಬ್ಬ ಮಾಡ್ತಿರ‍್ರಿ, ಅದು ತಪ್ಪು. ಪಂಜೆ ದ್ಯಾವರು ಕೂಡ್ಸೋದು, ಓದ್ಕಿ ಮಾಡಾದು ಯಾವ್‌ ಹದೀಸ್ನಾಗು ಹೇಳಿಲ್ಲ.. ಕುರಾನ್‌ನಾಗೂ ಹೇಳಿಲ್ಲ.. ಅಂತಾ ಹೇಳಿಂದ ಅವರ‍್ಯಾರೂ ಮೊಹರಂ ಮಾಡಕತ್ತಿಲ್ಲ. ನಂಗೂ ನೀ ಓದ್ಕಿ ಮಾಡ್ಬ್ಯಾಡ, ಅದು ತಪ್ಪು ಅಂತ ಜಮಾತ್ನಾಗೂ ಹೇಳ್ಯಾರಾ, ಮನ್ಯಾಗ್‌ ಮಕ್ಳು ಬ್ಯಾಡ ಅನ್ನಾಕತ್ತಾರ.. ಮಾಡಿದ್ರ ಜಮಾತ್‌ನವರು ಬಹಿಷ್ಕಾರನೂ ಹಾಕ್ತೀನಂತ ಹೇಳಕತ್ಯಾರ ಏನ್‌ ಮಾಡ್ಬೇಕೋ ಗೊತ್ತಾಗ್ವಲ್ದು ಗೌಡ್ರ..ʼ ಎಂದು ಇಮ್ಮಣ್ಣೆಪ್ಪ ನಿಟ್ಟುಸುರ್‌ ಹಾಕ್ದ. 

ಹೊಟ್ಟಿ ಗೌಡ್ರಿಗೆ ಈ ವಿಷಯದ ಮಾಹಿತಿ ಇದ್ದದ್‌ರಿಂದ ʼಅದು ಬಿಡು ಇಮ್ಮಣ್ಣೆಪ್ಪ. ನೀನು ಓದ್ಕಿ ಮಾಡಾಕ ಬರ್ತಿಯೋ ಇಲ್ಲೋ.. ಆಟ್ ಹೇಳುʼ ಎಂದ.

ʼಮನ್ಯಾಗ ನಂದೇನು ನಡ್ಯಾಲ್ಲ.. ಮನ್ಯಾರೇನೋ ಬಯ್ಯಾಕತ್ತಾರ.  ಆದ್ರೂ ನಂಗ ದ್ಯಾವರ್‌ ಸೇವಾಕಿಂತಾ, ಈ ಊರ್‌ ಸೇವೇ ಮಾಡಾಕ ಇಷ್ಟ. ನನ್ಗ ಅನ್ನ ಇಕ್ಕಿದ್‌ ಊರಿದು. ಮೂವತ್‌ ವರ್ಷದಿಂದ ಮಾಡ್ಕೊಂತ ಬಂದೀನಿ. ಈಗ ಬಿಡಾದೂ ಸಾಧ್ಯಾನಾ ಇಲ್ಲ..' ಎಂದ ಇಮ್ಮಣ್ಣೆಪ್ಪ. 

'ಶಾಬಾಷ್‌ ಇಮ್ಮಣ್ಣೆಪ್ಪ ಇದು.. ಇದು.. ನಮಗ್‌ ಬೇಕಾಗಿತ್ತುʼ ಹೊಟ್ಟಿ ಗೌಡ್ರು ಎದ್ದು ಇಮ್ಮಣ್ಣೆಪ್ಪನ ಆಲಂಗಿಸಿಕೊಂಡರು.

ʼನೋಡ್ರಿ.. ನಿಮ್ಗೆಲ್ಲಾ ಗೊತ್ತಿದ್ದಾ ಐತಿ, ಸಾಬರ್‌ ಮಂದಿ ಬರಲ್ಲ. ಹಂಗಂತ ನಾವು ಈ ಹಬ್ಬ ನಿಲ್ಸಾದ್‌ ಬ್ಯಾಡ. ಮತ್ಯರ‍್ದಾನ ತಕರಾರಿದ್ರ ಈಗ್ಲ ಹೇಳ್ರಿʼ 

ʼಏನೂ ಇಲ್ಲ ಗೌಡ್ರ.. ಅವರವರ ಕೆಲಸ ಅವರವರ ಮಾಡ್ತಾರ. ಮುಗ್ಸಿ ಬಿಡ್ರಿʼ ಎಂದು ಮ್ಯದಾರ್ ಸೋಮಪ್ಪ ಹೇಳಿದೊಡನೆ ಸುಣುಗಾರ ಹುಸೇನಪ್ಪ‌ ಎದ್ದು ಸಣ್ಣದಾಗಿ ಕೆಮ್ಮಿ ದನಿ ಸರಿ ಮಾಡಿಕೊಂಡು ‘ನೋಡ್ರಿ.. ಇಮ್ಮಣ್ಣೆಪ್ಪ ಒಪ್ಪಿದ್‌ ಮ್ಯಾಲ ಹಬ್ಬ ಆದಂಗಾ. ಈಗ ವಿಷ್ಯಕ್ಕ ಬರಾಣ, ಹೋದ್ಸಾರಿ ಸಕ್ರಿ ಯಲಾಮ ಮಾಡಿದ್ದು ಇಪ್ಪತ್ತೇಳು ಸಾವಿರ ನನ್ನ ಕಡಿ ಜಮಾ ಐತಿ, ಪಟಾಕ್ಷಿ ಸವಾಲ್‌ ಮೂಲಿಮನಿ ರಂಗಪ್ಪಗ ಆಗಿತ್ತು. ಆತ ಹತ್ತು ಸಾವರ ಕೊಟ್ರಾ, ಮೂವತ್ತೇಳು ಸಾವರ ಅಕ್ಕಾತಿ. ಇದು ಹ್ವಾದ ವರ್ಷದ ಲೆಕ್ಕ, ಕಮ್ಮಿ ಬಿದ್ರ ಊರ್‌ ಹಿರೇರ್‌ ನೀವದೀರಿ ಏನಂತೀರಿ ಗೌಡ್ರೆ..ʼ 

‘ಮುಂದಿಂದ್ ಇರ್ಲಿ, ದ್ಯಾವರಿಟ್ಟಂಗ್‌ ಅಕ್ಕಾತಿ..‌ ಈಗ ಎಲ್ಲಾ ಮುಗ್ದಂಗಾ ಏನಂತೀರಪ್ಪಾ..’ ಎಂದು ಗೌಡ್ರು ದೈವದರನೆಲ್ಲಾ ಕೇಳಿದಾಗ ಎಲ್ಲಾರೂ ನಗುತ್ತಾ ‘ಹೌದು ಬುಡ್ರಿ ಹುಸೇನಪ್ಪಂದಾಯೆಲ್ಲಾ..’ ಎಂದು ಎಲ್ಲರೂ ನಗುತ್ತಾ ಎದ್ದು ಹೊರಟರು. 

ಮರುದಿನ ಸಂಜೀಗೆ ಗುದ್ಲೀ ಹಾಕಿ, ಎರಡು ದಿನದಲ್ಲಿ ದೇವ್ರನ್‌ ಕುಂದರಿಸಿ, ಯಾಂತ್ರಿಕವಾಗಿ ಸೂರಹಗಳನ್ನು ಓದಿ ಓದ್ಕಿ ಮಾಡುತ್ತಿದ್ದ ಇಮ್ಮಣ್ಣೆಪ್ಪನ ಮನ್ಸು ಎತ್ತಲೋ ಇತ್ತು.

ಅವತ್ತು ರಾತ್ರಿ ಊರ ಮಂದಿ ಮುಂದ ದೈವ್ದಾರ ಮುಂದೇನೋ ಸುಲಭವಾಗಿ ಒಪ್ಕೊಂಡು ಮನೀನ ಬಿಟ್ಟಿದ್ದ ಇಮ್ಮಣ್ಣೆಪ್ಪಗ ಹಬ್ಬದ ನಂತರ ತಾನು ಎಲ್ಲಿರ‍್ಬೇಕು ಅನ್ನೋದ ನೆನಸ್ಕೊಂಡು ಕಣ್ಣಾಗ ನೀರು ಬರ್ತಿದ್ವು. ಆಲೆ ಕುಣಿಯ ಕಟ್ಟಿಗೆಯ ಬಡ್ಡೆಗಳ ಬೆಂಕಿಗೆ ಜನರು ಸುರಿಯುತ್ತಿರುವ ಉಪ್ಪು ಚಟ್‌ ಪಟ್‌ ಎಂದು ಸಿಡೀತಿದ್ರ, ಮನಸ್ಸೂ ಹಂಗೇ ಕುದೀತಿತ್ತು..

ಅದನ್ನೇ ನೋಡುತ್ತಿದ್ದ ಇಮ್ಮಣ್ಣೆಪ್ಪನ ಕಣ್ಣಾಗಿನ್ ಕಣ್ಣೀರು ಉರಿಯ ಜಳಕ್ಕ ಬತ್ತಿ ಹೋಗಿದ್ದವು. ಮಸೀದಿಯಲ್ಲಿ ಆಡುತ್ತಿದ್ದ ಮೊಮ್ಮಗ ಮೈನು, ಸ್ನೇಹಿತ ಸೀನುವನ್ನು ಕರ್ಕೊಂಬಂದು ತಾತನ ಕೈಹಿಡಿದು, ನಾನೂ ನಿನ್‌ ಜೊತಿ ಇಲ್ಲೇ ಇರ್ಲಾ ದಾದಾ ಅಂದಾಗ ʼಬೇಡ ಬೇಟಾ.. ಇವತ್ತು ಕತ್ಲಾಗೇತಿ ನಾಳೆ ಬಾʼ ಎಂದು ಕೈ ಬಿಡಿಸಿಕೊಂಡ.

ಹಬ್ಬಕ್ಕೂ ಹಿಂದೆ ನಡೆದ ಘಟನೆಗಳೆಲ್ಲಾ ಅವನಿಗೆ ಇನ್ನಿಲ್ಲದ ನೋವು ತಂದಿದವು. ಹಬ್ಬದ ನಂತರ ತನಗೆ ಯಾರೂ ಇಲ್ಲ. ಎಲ್ರೂ ಇದ್ದೂ ನಾ ದಿಕ್ಕಿಲ್ದೋನ್ ಥರಾ ಆಗ್ತೀನಾ..!, ದೇವರಿಗೇನೋ ಗುಡಿ ಐತಿ, ಆತಗೇನು ಊಟ ನೀರು ಒಂದೂ ಬ್ಯಾಡ, ಅವನಿಗೆ ಬ್ಯಾಸ್ಗಿ, ಚಳಿ ಎರಡೂ ಒಂದಾ.. ಆದ್ರ ತಾನು..!‌ ಇಂದು ರಾತ್ರಿ ಕರ್‌ಬಲಾದ ವೀರರ ಕಡೆಯ ರಾತ್ರಿ. ಹಬ್ಬದ ನೆವದಲ್ಲಿ ಮೂರು ದಿನವೇನೋ ಕಳೆಯಿತು, ರಾತ್ರಿ ಕಳೆದರೆ ಬೆಳಕು ಆದರೆ ತನಗೆ..! ಓದ್ಕಿ ಮಾಡಾಕ ಒಬ್ಬ ಹುಡುಗನ್‌ ಕೂಡ್ಸಿ ಊರ್‌ ಹೊರಗ್‌ ನಡ್ಕೊಂಡ್‌ ಬಂದಿದ್ದ ಇಮ್ಮಣ್ಣೆಪ್ಪ, ಏನೋ ನಿರ್ಧಾರ ಮಾಡಿದವನಂತೆ ಗುಡಿಯ ಕಡೆ ನಡೆದ.

ಕತ್ತಲ ರಾತ್ರಿ ದ್ಯಾವ್ರನೆಲ್ಲಾ ಊರ್‌ ತುಂಬಾ ಹೊತ್ಕೊಂಡು ತಿರಗಬೇಕು. ಗುಡಿಯ ಮುಂದೆ ಜನವೋ ಜನ. ಓದ್ಕಿ ಮಾಡ್ಸಕ್ಕೊಳ್ಳೋರು, ಕೆಂಡ ಹಾಯೋರು, ಬೆಂಕಿಗೆ ಉಪ್ಪು ಸುರಿಯೋರು, ಆಲೆ ಕುಣಿಯ ಸುತ್ತಲೂ ಹೊಗೆ, ಮನಸ್ಸಿನಲ್ಲಿ ಅಂದುಕೊಂಡಿದ್ದು ಆಗಿದೆಯೆಂದು ಹರಕೆ ಹೊತ್ತು ಬೇರೆ ಬೇರೆ ವೇಷ ಹಾಕಿಕೊಂಡು ಕುಣಿಯುವವರು, ಜನ ಕಾಣದಂತಿರೋ ಲೋಬಾನದ ಹೊಗೆ ಒಟ್ನಲ್ಲಿ ಒಬ್ಬರ ಮುಖ ಒಬ್ಬರಿಗೆ ಕಾಣದಂಗಿತ್ತು ಅಷ್ಟೊಂದು ಅದ್ದೂರಿ. ಸುರಿಯುತ್ತಿದ್ದ ಕಟ್ಟಿಗೆ, ಎಣ್ಣೆ, ಉಪ್ಪುಗಳಿಂದ ಉರಿಯ ಕೆನ್ನಾಲಿಗೆಗಳು ಕತ್ತಲಿನಲ್ಲಿ ಆಕಾಶವನ್ನು ಚುಂಬಿಸುವಂತೆ ಕಾಣುತ್ತಿದ್ದವು. ಮೈಕ್ನಾಗ.. ಇಮ್ಮಣ್ಣೆಪ್ಪ, ಎಲ್ಲಿದ್ರೂ ಬರ್ಬೇಕು.. ಓದ್ಕಿ ಮಾಡಾಕ ಯಾರೂ ಇಲ್ಲ..ʼ ಒಂದೇ ಸವ್ನೀ ಕೂಗ್ತಾನಾ ಇದ್ರು. ಅಷ್ಟರಾಗ, ಯಾರೋ ಬೆಂಕಿಯಲ್ಲಿ ಬಿದ್ದಾರ‍್ರೆಪ್ಪೋ.. ಕಾಪಾಡ್ರಿ! ಯಾರದೋ ಕೂಗಿಗೆ ಹೊಗೆಯ ಅಂಧಕಾರದಲ್ಲಿ ಮರೆಯಾಗಿದ್ದ ಜನ ಹತ್ತಿರ ಬಂದು ಬಿದ್ದವನನ್ನೂ ಈಚೆಗೆ ಎಳೆಯಲು ಬೆಂಕಿಯ ಕೆಂಡಗಳನ್ನು ಕೋಲಿನಿಂದ ದಬ್ಬಿದರೆ.. ಕೆಲವರು ದೊಡ್ಡ ಕಲ್ಲುಗಳನ್ನು ಕೆಂಡದೊಳಕ್ಕೆ ಉರುಳಿಸಿ ದಾರಿ ಮಾಡಲು ಪ್ರಯತ್ನಿಸುತ್ತಿದ್ದರು. ಕೊನೆಗೆ ಕೆಲ ಯುವಕರು ಧೈರ್ಯದಿಂದ ನುಗ್ಗಿ ಆ ಮನುಷ್ಯನ್ನೇನೊ ಎತ್ತಿಕೊಂಡು ಬಂದರು.‌ ಆದ್ರ ಸಮಯ ಮೀರಿತ್ತು, ದೇಹ ಯಾರ್ದು ಅಂತ ಗೊತ್ತಾಗದ ಹಾಗೆ ಧಗ-ಧಗಿಸಿ ಉರಿದಿತ್ತು. ಗುರುತಿಗಾಗಿಯೋ ಎನ್ನುವಂತೆ ತಲೆಯ ಮೇಲಿದ್ದ ನೈಲಾನ್‌ ಟೋಪಿ ಅರೆ ಬರೆ ಸುಟ್ಟಿದ್ದನ್ನು ನೋಡಿ,  ಅರೆ.. ಇದು ಇಮ್ಮಣ್ಣೆಪ್ಪನಾ ಇರಬೇಕು.. ನೋಡಿ! ಎಂದು ಹೇಳಿದಾಗ. ‘ಅಯ್ಯೋ ಪಾಪ ಇಮ್ಮಣ್ಣೆಪ್ಪ... ಪಾಪ, ಕಾಲು ಜಾರಿ ಬಿದ್ದಿರಬೇಕುʼ ತಲೆಗೊಂದರಂತೆ ಕತೆ ಕಟ್ಟಿ ಮಾಡನಾಡಿಕೊಳ್ಳುತೊಡಗಿದರು. ಆದರೆ ಗುಡಿಯ ಪ್ರಮುಖರ ತಲೆಯಲ್ಲಿ ಸುಳಿದಾಡುತ್ತಿದ್ದ ಅನುಮಾನಗಳೇ ಬೇರೆ. ಸುಣಗಾರ ಹುಸೇನಪ್ಪ ‘ತಪ್ಪು ಮಾಡಿದ್ವೇನೋ.. ಗೌಡಪ್ಪಾ..! ಎಂದಾಗ ಹೊಟ್ಟೆಗೌಡರ ಕಣ್ಣಲ್ಲೂ ನೀರಿತ್ತು..

ಪದಗಳ ಅರ್ಥ: 

ಇಮಾಮ್ = ಮಸೀದಿಯಲ್ಲಿ ನಮಾಜ್‌ ಮಾಡಿಸುವವರು

ಹಾಫೀಜ್ =‌ ಖುರಾನ್‌ ಅನ್ನು ಬಾಯಿ ಪಾಠ ಮಾಡಿದವರು

ಆಲಿಮ್ =‌ ಮುಸ್ಲಿಂ ಧರ್ಮದ ಕಟ್ಟಳೆಗಳನ್ನು ಅರಿತುಕೊಂಡವರು

ಸೂರಾ = ಖರಾನಿನ ಸಾಲುಗಳು

ಹದೀಸ್ = ಪ್ರವಾದಿ ಮಹಮ್ಮದರ ಹೇಳಿದ ಮಾತುಗಳು, ಕೆಲಸಗಳನ್ನು ತಿಳಿಸುವ ಗ್ರಂಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.