ಕಥೆ
ಶನಿವಾರ ಮಧ್ಯಾಹ್ನ ಎರಡು ಗಂಟೆ. ‘ದಿನವಾಣಿ ದಿನಪತ್ರಿಕೆ’, ಎಂಜಿ ರಸ್ತೆ, ಬೆಂಗಳೂರು.
ಕ್ರೈಂ ರಿಪೋರ್ಟಿಂಗ್ ವಿಭಾಗದ ಲ್ಯಾಂಡ್‌ಲೈನ್ ಫೋನ್ ನಿಲ್ಲದ ಸದ್ದು. ಹೊಸ ರಿಪೋರ್ಟರ್ ಹೊಸದಾಗಿ ಮದುವೆಯಾಗಿ ಮೊಬೈಲಿನಲ್ಲೇ ಇದ್ದ. ಉಳಿದಿಬ್ಬರು ಲಂಚ್‌ಗೆ ಹೋಗಿದ್ದರು. ಅಂತೂ ನಾನೇ ಡಾಕ್ಯುಮೆಂಟ್ಸ್ ಕತ್ತಲರೂಮಿನಿಂದ ಧೂಳಿನಿಂದ ಸೆಖೆಯಿಂದ ಹೊರಬಂದು ಎತ್ತಿದರೆ, ‘ಕೊ...ನೆ..’ ‘ಕೋಣೆ’ ‘ಕೊ...ಲೆ!’ ಅಂತನ್ನುವ ಅಪರಿಚಿತರ ಆತಂಕಿತ ಕರೆ. ಅಷ್ಟೇ. ಕರ್ಕಶ ಸದ್ದಿನ ನೆಟ್‌ವರ್ಕ್ ತೊಂದರೆಯ ಟೆಲಿಫೋನ್ ದನಿ ಕಟ್ಟಾಯಿತು. ಅಷ್ಟರಲ್ಲಿ ಮೊಬೈಲಿಗೆ ಅಪರಿಚಿತ ಕರೆ, ಬಹಳಷ್ಟು ಜೀರೋಗಳಿರುವ ನಂಬರು. ಮೊಬೈಲ್ ಕಿವಿಗಿಟ್ಟು ‘ಹಲೋ’ ಅಂದೆ.
‘ನಾನು...’
ಹೆಣ್ಣಿನ ಧ್ವನಿ. ಆತಂಕವಿಲ್ಲದ ಧ್ವನಿ. ಪರಿಚಿತ ಭಾವದ ಅಪರಿಚಿತ ಧ್ವನಿ.
ಸೆಖೆಯೇರುತ್ತ ಸದ್ದುಗದ್ದಲಗಳೇರುತ್ತ ಜನ ವಿಚಿತ್ರವಾಗಿ ವರ್ತಿಸುತ್ತ ಹೆಂಡತಿ ಮಕ್ಕಳು ಸಹೋದ್ಯೋಗಿಗಳು ಬಾಸ್ ಅಂಗಡಿಯವರು ವಾಚ್‌ಮನ್‌ಗಳೂ ಕಿರಿಕಿರಿ ಮಾಡುವ ಉದ್ವೇಗದ ದಿನಗಳು... ಬಾಸೂ ಗರಂ, ಮೇಲ್ಛಾವಣಿಯೂ ಗರಂ. ಕಟ್ಟಿಕೊಂಡ ಟಾಯ್ಲೆಟ್, ಗುಣಿತಾಕ್ಷರವೇ ಬಾರದ ಹೊಸ ರಿಪೋರ್ಟರ್, ಕೆಟ್ಟುಹೋದ ಲಿಫ್ಟ್, ಸದ್ದುಮಾಡುವ ಎಸಿ, ಗಬ್ಬೆದ್ದು ನಾರುವ ಪಕ್ಕದ ಚರಂಡಿ...
ಅರೆಮಂಪರಿನಲ್ಲಿ ಅರೆತೂಕಡಿಕೆಯಲ್ಲಿ ಅಸ್ವಸ್ಥನಂತೆ ಸುಸ್ತಾಗಿದ್ದ ಇದೇ ದಿನ..
‘ಕೊಲೆ’ ಎಂಬ ಆತಂಕದ ಕರೆ ಲ್ಯಾಂಡ್‌ಲೈನಿಗೆ.
‘ನಾನು’ ಎಂಬ ಸರ್ವಸಮಾಧಾನದ ಸರ್ವನಾಮದ ಕರೆ ನನ್ನ ಮೊಬೈಲಿಗೆ.
ಏನು ಮಾಡಲಿ?
ವಾರವಷ್ಟೆ ಆದದ್ದು. ಹದಿಮೂರರ ಬಾಲೆ ಬೆತ್ತಲಾಗಿ ಚರಂಡಿಯಲ್ಲಿ ಸಿಕ್ಕಿದ್ದು. ತಲ್ಲಣಿಸಿ ಹೋಗಿತ್ತು ನಗರ. ಎದೆಯೊಡೆದಿದ್ದರು ಹೆಣ್ಣುಹೆತ್ತವರು. ಎಲ್ಲ ಪತ್ರಿಕೆಗಳಲ್ಲೂ ಅದೇ ಸುದ್ದಿ. ತಿರುಗಾಮುರಗಾ. ಹತ್ತು ಟಿವಿ ನ್ಯೂಸ್‌ಚಾನೆಲ್ಲಿನವರು ಹನ್ನೆರಡು ತರಹ ಗಂಟಲರಚಿಕೊಳ್ಳುತ್ತಿದ್ದರು.. ನಮ್ಮ ಪತ್ರಿಕೆಯಲ್ಲಿ ಏನೂ ಇಲ್ಲ! ನನ್ನ ಕೈಲಿ ಆಗುತ್ತಿಲ್ಲ... ‘ಡೀಲ್ ಮಾಡಿಕೊಂಡಿದ್ದೀರ?’ ಅನಾಮಿಕ ಕರೆಯೂ ಬಂದುಹೋಯಿತು. ಕಪಾಳಕ್ಕೆ ಹೊಡೆದಂತಾಯಿತು. ‘ಬರ್ನಿಂಗ್ ನ್ಯೂಸ್ ಯಾಕೆ ಬರೀತಿಲ್ಲ ರಾಮಚಂದ್ರಾ?’ ಸಣ್ಣವಯಸ್ಸಿನ ಬಾಸ್‌ನ ಏಕವಚನದ ಮೇಲೊತ್ತಡವೂ.
‘ನಗರದಲ್ಲಿ ಇತ್ತೀಚೆಗೆ ನಡೆದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಅತ್ಯಾಚಾರ...’
ಟೈಪಿಸಿದೆ, ಅಳಿಸಿದೆ. ಹತ್ತು ಬಾರಿಯೇ ಆಗಿಹೋಯಿತು. ಏನಂತ ಬರೆಯಲಿ ಕಾಣದವನ. ಸಿಗದವನ. ಕ್ಷುದ್ರಮನಸ್ಥಿತಿಯ ಆ ಅನಿಷ್ಟ ಮನುಷ್ಯನ.. ಡ್ರಾನಲ್ಲಿನ ಆ ಕ್ರೈಂನ ನಾಲ್ಕು ಫೋಟೋ. ನಗ್ನಶವ. ಅಮಾಯಕ ವಯಸ್ಸು. ಎಳೆಯ ಹೆಣ. ನೋಡಿದಂತೆ ಉಮ್ಮಳಿಕೆ. ಒಂದು ಮಗ್ಗುಲಿನಲ್ಲಿ ನನ್ನ ಮಗಳಂತೆಯೇ.. ಅದೇ ಅದೇ ನನ್ನ ಕೈಕತ್ತರಿಸಿದೆ. ಒಳಗೆ ಖಾಲಿತನ ತಂದೊಟ್ಟಿದೆ.
‘ನಾನು ಬರೆಯದೆ ಬಿಟ್ಟರೆ ಈ ಕ್ರೈಂ ನಿಲ್ಲಬಹುದೇ..’ ಒಬ್ಬನೇ ಮಾತನಾಡುತ್ತಿದ್ದೆ.
ಗೂಗಲ್ ರಿಸರ್ಚ್‌ನ ಪುಟವೊಂದು ವಿಕೃತಕಾಮ ಅನುವಂಶೀಯ ಅನ್ನುತ್ತಿತ್ತು.
ವರದಿ ಹೇಗೆ ರೆಡಿ ಮಾಡುವುದು.. ವಿಕೃತ ಕಾಮದಲ್ಲಿ ಕಂದಮ್ಮನ ಅಂಗಾಗಗಳ ಸ್ವೇಚ್ಛೆಯಲ್ಲಿ ಭೋಗಿಸಿ ವಿಭಾಗಿಸಿ ಹರಿದು ಹಂಚಿರುವುದ? ಹತ್ತು ಫೋಟೋಗಳಲ್ಲಿ ಸೂಕ್ತವಾಗಿರುವುದನ್ನೂ ಆರಿಸಬೇಕಿತ್ತು.. ಅದು ಇನ್ನೂಕಷ್ಟ. ಪರಮಕಷ್ಟ.
ರೇಪ್ ಅನ್ನು ಕಥೆಯಾಗಿ ಕಟ್ಟಬೇಕಂತೆ.. ಹೊಸತರಹದ ಮಸಾಲಾ ವರದಿಯ ಹುಚ್ಚು ಶುರುವಾಗಿದೆ. ಆಗದು. ನನ್ನಿಂದಾಗದು. ಕಲಾವಿದರ ಬಳಿ ಘಟನಾವಳಿಯ ನಾಲ್ಕು ಚಿತ್ರಾನೂ ಬರೆಸಿಟ್ಟಿದ್ದಾರೆ... ಅಯ್ಯೊ.. ನಾನೇ ಮೇಲಿಂದ ಕೆಳಗೆ ಹಾರಿಬೀಳುವಂತಹ ಉದ್ವೇಗ. ಕಿಟಕಿ ಬಳಿ ನಿಂತೆ. ಉಕ್ಕಿ ಹರಿಯುವ ಚರಂಡಿ ಮತ್ತು ರಸ್ತೆ ಒಂದೇ ಆದ ಸಮಯ. ಮಾನುಷ ಸಂವೇದನೆಯೂ ಹೀಗೇ ಆಗಿದೆ. ಇವತ್ತು ಕೆಳಗೆ ಹಾರಿ ಬೀಳುವಂತಿಲ್ಲ. ಮಕ್ಕಳ ಮೂವಿಗೆ ಕರೆದುಕೊಂಡು ಹೋಗಲೇಬೇಕಿದೆ. ಹೊರಳಿದೆ ಡೆಸ್ಕಿಗೆ.
ಮನೆಯಲ್ಲಿ ಡರ್ಟಿಹ್ಯಾಂಡ್ ಹೋಮ್‌ಮೇಕರ್, ಆಫೀಸಲ್ಲಿ ‘ಕ್ಲೀನ್‌ಹ್ಯಾಂಡ್’ ಕ್ರೈಂ ರಿಪೋರ್ಟರ್.. ಹೇಗೆ ಕ್ಲೀನಾಗುವುದು ಇಂಥವನ್ನೇ ನೋಡಿ ನೋಡಿ ನೋಡಿ... ಯೋನಿಯೊಳಗೆ ಪೇರಿಸಿಟ್ಟ ಮೇಣದಬತ್ತಿ ಎರಡು ಹೋಳಾಗಿಸಿದ ಸ್ತನ ಸೊಂಟದ ಬಳಿ ಮೂಡಿದ ಅಷ್ಟೂ ಹಲ್ಲುಗಳು ತುಟಿಯನ್ನಷ್ಟೇ ಕತ್ತರಿಸಿ ತೆಗೆದ ಚಿತ್ರ..ಸುದ್ದಿ ಸದ್ದಿಲ್ಲದೇ ಸಾಯಿಸುತಿದೆ..
ಧುತ್ತನೆ ಕರೆಂಟು ಬಂತು. ಬೆಳಕಾಯಿತು ಕ್ರೈಂ ವರದಿಯ ಪ್ರೈಮ್ ಲೋಕ. ಹಳೆ ಫ್ಯಾನು ಹೊಸ ಗಾಳಿ ಬೀಸಿತು. ಹಳೆ ಧೂಳಿಡಿದ ಫೈಲುಗಳ, ದಿನಪತ್ರಿಕೆ ಬಂಡಲ್‌ಗಳ ಮೇಲೆ. ಬ್ರೇಕಿಂಗ್ ನ್ಯೂಸಿನ ಟಿವಿ ಚಾನೆಲ್ಲು, ಝೆರಾಕ್ಸ್ ಮಶಿನ್, ಪ್ರಿಂಟರ್‌ಗಳು, ಬೈಂಡರ್, ಕಟರ್, ಸ್ಟ್ರಿಪರ್, ಫೋಲ್ಡರ್, ಕನ್ವೇನರ್ ಬೆಲ್ಟ್ ಎಲ್ಲ ಚಾಲೂ ಆದವು. ಬೆಳಗಿನ ಚಡಪಡಿಕೆ ಏದುಸಿರು ಕಮ್ಮಿಯಾಯಿತು. ಕಟ್ಟಿಕೊಂಡದ್ದೆಲ್ಲ ಕಿತ್ತುಕೊಂಡು ಸಲೀಸಾದಂತೆ.. ಈಗ ಆ ಕ್ರೈಂ ರಿಪೋರ್ಟು ಬರೆಯಬೇಕು. ಇಲ್ಲಾ ಈ ಕೆಲಸ ಬಿಡಬೇಕು.
‘ನಾನು’ ಆಪ್ತಭಾವದ ಹೊಸಧ್ವನಿ. ಪರಿಚಯವೂ ಅಲ್ಲದ ಪ್ರತ್ಯುತ್ತರವೂ ಅಲ್ಲದ, ಸ್ಟೇಟ್‌ಮೆಂಟ್. ಏದುಸಿರಿನ, ಅಳುವಿನ, ಆಪಾದನೆಯ, ಆಕ್ಷೇಪಣೆಯ, ಧಮಕಿಯ, ಬೈಗುಳದ ಕರೆ ಸ್ವೀಕರಿಸಿದ ಕಿವಿಗಳಿಗೆ ಇದು ವಿಚಿತ್ರವೆನಿಸಿತು.
‘ಹೇಳಿ, ಏನಾಗಬೇಕು?’ ಅಂದೆ. ಮೌನ. ‘ಕಾಣುವ ಹಂಬಲವಿದ್ದರೆ ಬನ್ನಿ, ಮಿಸ್ಟರ್ ರಾಮದಾಸ್.’ ಅಂದ ಕರೆ ತುಂಡಾಯಿತು. ಅಷ್ಟೇ. ನಾನು ತುಂಡುತುಂಡಾದೆ.
ರಾಮದಾಸ ಅನ್ನುವ ಹೆಸರು ಹಳೆಯದು, ತುಂಬಾ ಹಳೆಯದು, ತಿಳಿವಳಿಕೆಯ ಅನುಭವದ ಬದುಕಿನ ಪ್ರಾರಂಭದ್ದು. ನನಗೇ ಸಂಬಂಧಿಸಿದ್ದು, ಅಜ್ಜಿಯೂರಿನದ್ದು. ಪತ್ತೇದಾರಿ ಕಾದಂಬರಿಯದ್ದು. ಕೊಲೆಗಳನ್ನು ಕಂಡುಹಿಡಿಯುವ ಚಾಣಕ್ಷನದ್ದು.. ಆ ಲೋಕ ಕೊನೆಗೊಂಡು ದಶಕಗಳೇ ಆದವಲ್ಲ...
ಇಪ್ಪತ್ತು ನಿಮಿಷಗಳನ್ನು ಎಣಿಸೆಣಿಸಿ ಕಳೆದೆ. ಕೊನೆಗೂ ಬಂದು ಕಾಣುವ ಹಂಬಲದ ಆ ಮನೆಯ ವಿಳಾಸವಿದ್ದ ಮೆಸೇಜ್ ಬಂತು. ತುದಿಕುರ್ಚಿಗೆ ಅರ್ಧಕುಂಡೆಯಲ್ಲೂ ಕೂರಲಾಗಲಿಲ್ಲ. ಕಂಪ್ಯೂಟರ್ ಸ್ಕ್ರೀನ್‌ನಲ್ಲಿ ಬರೆಯುತ್ತಿದ್ದ ಬಲಾತ್ಕಾರದ ಶುಷ್ಕವರದಿಯನ್ನು ಫೈಲನ್ನು ಬಲವಂತದಿಂದ ಮುಚ್ಚಿಟ್ಟು, ಎದ್ದೆ. ಪಟ್ಟನೆ ಎದ್ದು ನಿಂತ ಹೊಸ ವರದಿಗಾರನಿಗೆ ‘ಡೆಸ್ಕ್ ನೋಡಿಕೊಳ್ಳುತ್ತಿರು, ನನಗೆ ಕೆಲಸವಿದೆ’ ಅಂದೆ. ಸರಸರನೆ ಮೆಟ್ಟಿಲಿಳಿದೆ. ಲಂಚ್‌ಬ್ಯಾಗು, ಆಫೀಸ್‌ಬ್ಯಾಗೂ ಇಲ್ಲದೇ...
ಶನಿವಾರ ಸಂಜೆ ಮೂರೂವರೆ. ನಿತ್ಯ ನಡೆವ ದಾರಿಯಲ್ಲೇ ಎಡವಿದೆ. ಎತ್ತಲೆತ್ತಲೋ ಹೊರಳಿದೆ. ಅಂತೂ ಕನಸಿನಲ್ಲೆಂಬಂತೆ ಹೊಯ್ದಾಡಿ ನಡೆದು ಮುಖ್ಯರಸ್ತೆ ಮುಟ್ಟಿ ಕಾಣುವ ತಿರುವಿನ ಎಂದೂ ಕಂಡಿರದ ಬಿಲ್ಡಿಂಗಿನ ಮುಂದೆ ಹೋಗಿ ನಿಂತೆ. ಬಿರುಕಿನ ಗೋಡೆಗಳು ಒಡೆದ ಪೈಪುಗಳ, ಹೂಕುಂಡಗಳ ಕಿಟಕಿಗಳು ಬಟ್ಟೆ ಒಣಗಲು ಹಾಕಿದ ಬಾಲ್ಕನಿಗಳು. ಆಡುವ ಮಕ್ಕಳು, ಓಡಾಡುವ ಮುದುಕಿಯರು. ಹತ್ತಾರು ಬೈಕುಗಳು. ಕಾಫಿ ಆಯ್ತ, ವಾಕ್ ಹೊರಟಿರ ಕೇಳುವ ದನಿಗಳು.. ಸಂಜೆಯ ತಿಂಡಿಗಳ ಮಿಶ್ರವಾಸನೆ...
ಒಮ್ಮೆಲೆ ಮುಜುಗರವಾಗಿ ಹೊರಳಿದೆ. ಮೇಲಿನ ಯಾವುದೋ ಕಿಟಕಿ ತೆರೆದುಕೊಂಡ ಸದ್ದು. ಹೊರಳಿದೆ.
‘ರಾಮದಾಸ...’
ಅದೊಂದೇ ನನಗೆ ಪರಿಚಿತ ಕನೆಕ್ಷನ್. ಬಹುಮುಖ್ಯ ಕೆಲಸ ಬಿಡಿಸಿ ಕರೆಸಿಕೊಂಡಿದೆ. ಆರು ಅಂತಸ್ತಿನ ಹಳೆಬಿಲ್ಡಿಂಗಿಗೆ ಡಬ್ಬಿಯಂತಹ ಹಳೆಯ ಮಾದರಿಯ ಲಿಫ್ಟ್. ಲಿಫ್ಟ್ ಹೊಕ್ಕು ಗ್ರಿಲ್‌ಗೇಟು, ಲಿಫ್ಟ್ ಬಾಗಿಲು ನಾನೇ ಹಾಕಿಕೊಂಡು ಮೂರನೆಯ ನಂಬರ್ ಒತ್ತಿ ಕೈಕಟ್ಟಿ ನಿಂತೆ. ಹೆದರಿಯೇ ಏರಿಕೊಂಡು ಗ್ರಿಲ್‌ಗೇಟು ತೆರೆದು, ಈ ಮನೆ ಬಾಗಿಲುತಟ್ಟಿದ್ದೆ.
ನಾನು ಈ ಕ್ಷಣ ನಾನಾಗಿಲ್ಲ ಎನ್ನುವುದು ನನಗೇ ಸ್ಪಷ್ಟ.
‘ನಾನು’ ಎಂಬ ಕರೆಯ ದನಿ, ಗುಲಾಬಿಬಣ್ಣದ ನೈಟಿಯಲ್ಲಿ ಬಾಗಿಲು ತೆರೆಯಿತು. ಮುಖವರಳಿಸಿ ಬರಮಾಡಿಕೊಂಡಿತು. ಉದ್ದಕೂದಲ ಬಿಳಿಹೆಂಗಸಿನ ಹಿಂದೆ ಹಿಂಬಾಲಿಸಿದೆ ಗೊಂಬೆಯಂತೆ. ತಪ್ಪಿನ ಭಾವನೆಯ ತಣ್ಣೀರು ಮುಖಕ್ಕೆ ರಾಚಿದಂತಾಯಿತು. ಅಂತೂ ‘ಕಾಣುವ ಹಂಬಲವಿದ್ದರೆ ಬನ್ನಿ, ಮಿಸ್ಟರ್ ರಾಮದಾಸ್.’ ಅಂದಿದ್ದವಳ ಕಂಡೆ, ಹಂಬಲ ಮುಗಿಯಿತು. ಹೊರಳಿ ಹೊರಡಬೇಕು. ಆದರೆ ಒಳಗೆ ಹೋದೆ. ಏಕೆ.. ಆ ‘ರಾಮದಾಸ’ನ ಎಲ್ಲಿಂದ ಕರೆ ತಂದಿದ್ದಳು ಕೇಳಬೇಕಿತ್ತು..
ಮೊಬೈಲಿನಲ್ಲಿ ವಿಳಾಸ ನೋಡಿಕೊಂಡೆ. ‘ಇದೇ ಮನೀನೇ, ಸರಿ ಹುಡ್ಕ ಬಂದದ್ದ್. ಆರಾಮ್ ಕೂತ್ಕ ರ‍್ರಿ. ನಾನೇ ಕೋಲ್ ಮಾಡಿದೋಳು’ ಅಂದಳು. ‘ಸುಮಾರ್ ವರ್ಷವೇ ಆಗೋಯ್ತಲ್ಲ’ ಅಂದಳು. ಕರ್ಟನ್ ಸರಿಸಿ ಒಳಗೆ ಹೋದಳು. ಆಕರ್ಷಕ ಬೆನ್ನು, ತುಂಬು ನಿತಂಬವೂ ಸುಳಿವು ಕೊಡಲಿಲ್ಲ. ‘ಇಪ್ಪತ್ತೊಂದು ವರ್ಸಾ ಆದ್ದ್ ಸುಳ್ಳು’ ಅಂದಳು ಒಳಗಿಂದ. ಮಾಸಪತ್ರಿಕೆಗಳಲ್ಲಿ ಬರುತ್ತಿದ್ದ ಡಿಟೆಕ್ಟಿವ್ ಧಾರಾವಾಹಿ ಓದುತ್ತಿದ್ದ ಕಾಲ. ರಾಮದಾಸ್ ಅನ್ನುವವ ಡಿಟೆಕ್ಟಿವ್. ಕದ್ದು ಓದುವ, ಸಾಲ ಮಾಡಿ ಖರೀದಿಸಿ ಓದುವ ಮುಗ್ಧ ಕಾಲವದು. ಈಗ ನಾನೇ ಆ ರಾಮದಾಸನಾಗಿ ಇವಳ ಕರೆಗೆ ಪುಂಗೀದಾಸನಾಗಿ ಬಂದು ಕೂತಿದ್ದೇನೆ. ಸುತ್ತಲೂ ನೋಡಿದೆ. ಏನೂ ಹೊಳೆಯಲಿಲ್ಲ. ಸುಳಿವಿದ್ದರೆ ಹೊಳೆಯುವುದು. ಸುಳಿವೇ ಇರದೇ ಪರಿಚಯವೇ ಇರದೆ ಕೆಲಸಬಿಡಿಸಿ ಕರೆಸಿಕೊಂಡಿದ್ದಾಳೆ. ಸುಖವಿದ್ದಂತಿತ್ತು. ಮೆತ್ತನೆಯ ಸೋಫಾ ಪ್ರಫುಲ್ಲ ನಗು ತಣ್ಣನೆಯ ಗಾಳಿ ಕಾಫಿಯ ಪರಿಮಳ... ರಾಮದಾಸ್ ಧಾರಾವಾಹಿಯ ಒಳ್ಳೆಯ ಬಾಲ್ಯ-ಯೌವನದ ದಿನಗಳು ನೆನಪಾದವು. ಆ ಮ್ಯಾಗಝೀನ್ ಪ್ರತಿಗಳು ಸಿಗಬಹುದೇನೋ.. ಅವಳು ಹೊರಗೆ ಬಾರದಂತೆ ಕಿಚನ್ನಿನಲ್ಲಿ ಬ್ಯುಸಿಯಾದಂತೆ ಮೆಲ್ಲಗೆ ಯೋಚನೆಯಲ್ಲಿ ವಾಪಸ್ಸು ವಾಪಸ್ಸು ವಾಪಸ್ಸು ಹೋದೆ. ಅರೆಬಿಳಿ ಮೀಸೆಯಿಂದ ಕರಿಮೀಸೆಗೆ ಅಲ್ಲಿಂದ ಚಿಗುರುಮೀಸೆಗೆ ಹೋಗಿ ತಲುಪಿದಂತಾಯಿತು.
‘ಮೂವಿ ಕ್ಯಾನ್ಸಲ್! ಅಜ್ಜಿಮನೆಗೆ ಹೋಗ್ತಾ ಇದೀವಿ. ಬೀಗದ ಕೈ ಫುಟ್‌ರಗ್ ಕೆಳಗೆ. ಬೈ’
ಮೆಸೇಜ್. ಮಗಳೇ ಟೈಪ್ ಮಾಡಿದಂತಿತ್ತು.
ನಾಳೆ ಭಾನುವಾರ. ನಾಳಿದ್ದು ಹಬ್ಬ. ಆಚೆನಾಳಿದ್ದು ಮತ್ತೊಂದು ಹಬ್ಬ. ಅಲ್ಲಿಗೆ ಬುಧವಾರ ಬೆಳಗ್ಗೆ ಹೆಂಡತಿ ಮಕ್ಕಳಿಗೆ ಈ ಲೋಕವಿರುವ ಜ್ಞಾನೋದಯವಾಗುವುದು. ಅಲ್ಲಿಯವರೆಗೆ ತಪ್ಪಿಯೂ ನನಗೆ ಕರೆ ಮಾಡುವುದಿಲ್ಲ.
ಸೊ...
ಈಗ ನಾನು ಎರಡು-ಮೂರು ದಿನ ನಿರಾಳ. ಅತಿಅವಸರದಲ್ಲಿ ಹೊಕ್ಕವನಿಗೆ ಈಗ ಅತಿಸಮಯ ಹುಟ್ಟಿಕೊಂಡುಬಿಟ್ಟಿತ್ತು. ಮಗಳ ಮೆಸೇಜಿನಿಂದ.
ಮಗಳ ಮೆಸೇಜ್ ಮತ್ತೆ ನೋಡಿದೆ. ‘ಓಕೆ. ಟೇಕ್‌ಕೇರ್’ ಅಂತ ರಿಪ್ಲೈ ಮಾಡಿ, ನಿಡುಸುಯ್ದೆ. ಎದುರಿಗೇ ನಿಂತಿದ್ದವಳು ಮುಖ ನೋಡಿ ‘ಪರ್ಮಿಶನ್ ಸಿಕ್ತು ಹೇಳಿ ಆಯ್ತಲ್ಲ..?’ ಅಂದಳು. ‘ಯಾವುದಕ್ಕೆ..’ ಅಂದೆ. ಎದುರು ಕೂತು, ‘ನಮ್ಮ ಇವತ್ತಿನ ಕ್ರೈಂ ರಿಪೋರ್ಟ್ ಮಾಡದ್‌ಹಾಂಗ್ ಇರೂದಕ್ಕೆ..’ ಅಂದಳು. ನಕ್ಕಳು. ಇದ್ದಕ್ಕಿದ್ದಂತೆ ಮೌನವಾದಳು.
ಸಾಲುಸಾಲು ರಜೆ ಬಂದಾಗೆಲ್ಲ ಒಂಥರ ಬಿಡುಗಡೆ. ನಿಧಾನ ನಡೆದು ರಸ್ತೆಬದಿಯ ಖಾನಾವಳಿಯಲ್ಲಿ ನಿಧಾನ ಉಂಡು ನಿಧಾನ ಮೆಟ್ಟಿಲೇರಿ ಹಾಲಿನ ಸೋಫಾಮೇಲೆ ಅಂಗಾತ ಮಲಗಿ ಛಾವಣಿ ನೋಡುವುದು. ಟಿವಿ ಹಾಕಲಾರೆ, ಮೊಬೈಲ್ ನೋಡಲಾರೆ, ದಿನಪತ್ರಿಕೆ ನೋಡಲಾರೆ.. ಯೋಚನೆ ಆಲೋಚನೆ ನಿಂತು, ಉಸಿರು ನಿಧಾನವಾಗಿ ನಲವತ್ತೈದರವನು ಮೂವತ್ತೈದರವನಾಗಿ ಇಪ್ಪತ್ತೈದರವನಾಗಿ ಹದಿನೈದನೆಯ ವಯಸ್ಸಿನ ಚಿಗುರು ಮೀಸೆಯ ಹುಡುಗನಾಗಿ ನಿಲ್ಲುತ್ತೇನೆ. ತಂದೆಯಿರದ ಮಗ, ತಾಯಿ ಹಾಸಿಗೆ ಹಿಡಿದಾಳೆ ಅಂತೆಲ್ಲ ಮರುಕದ ಮಳೆ ಅಜ್ಜಿಯಿಂದ...
ನನ್ನ ಅಜ್ಜಿಯೂರಿನ ಮಳೆಕಾಡಿನ ಬೆಟ್ಟಗಳಲ್ಲಿ ಮನಸೋಯಿಚ್ಛೆ ಓಡಾಡಲಿಚ್ಛಿಸುತ್ತೇನೆ. ಮಿಡಿಗಾಯಿಯವರ ಮನೆ, ಆಲೆಮನೆ, ಜೇನುಕೀಳುವ, ಹೊಂಡ ತೋಕುವ, ಅಣಬೆ ಹುಡುಕುವ, ಕೆರೆಯ ಏಡಿ ಹಿಡಿಯುವ, ಕದ್ದು ಬೀಡಿಸೇದುವ, ಪೋಲಿಪುಸ್ತಕ ಓದುವ, ಬಚ್ಚಿಟ್ಟು ಹುಡುಕುವ ಆಟಗಳು.. ಆ ಬದಿಬೆಟ್ಟದ ದೊಡ್ಡಮನೆಯವರ ಹುಡುಗನ ಹುಡುಗಿಯ ಜೊತೆ ಕತ್ತಲಾಗುವವರೆಗೆ ತಿರುಗಾಟ.. ಬೆಂಕಿಹುಳ ಕಾಣಿಸಿದ್ದೆ ಕಿರ್‌ಕಿರ್ ಹುಳು ಕೂಗತೊಡಗಿದ್ದೇ ಅಜ್ಜಿಮನೆಯ ಕತ್ತಲ ಬೆಚ್ಚಲೊಲೆಯಲ್ಲಿನ ಹಂಡೆ ಮುಂದೆ.. ಹಳದಿ ಬೆಳಕಲ್ಲಿ ಬೆತ್ತಲಾಗಿ.. ಹುಡುಗನಿಂದ ಯುವಕನಾಗುವ ಲಕ್ಷಣಗಳ ನೋಡಿಕೊಳ್ಳುತ್ತ... ನರನಾಡಿಯ ಹಿತವರಿಯುತ್ತ...
ಇಲ್ಲಿ ನಾನು ಕೂರಬಹುದು. ಕಾಫಿ ಕುಡಿಯಬಹುದು. ತಿಂಡಿ ತಿನ್ನಬಹುದು. ಊಟವನ್ನೂ ಮಾಡಬಹುದು. ಯಾವುದೂ ಕ್ರೈಂ ಅಲ್ಲ. ಅನೈತಿಕವೂ ಅಲ್ಲ. ಇವಳು ಪ್ರೌಢಳು ಇವಳಿಗೆ ಸ್ವಂತ ನಿರ್ಧಾರದ ಹಕ್ಕಿದೆ. ನನಗೂ. ಒಳಗೇ ಒಂದೊಂದೇ ಸಮಾಧಾನದ ಕನ್‌ಫೆಷನ್ ಮಾತುಗಳ ಹೇಳಿಕೊಳ್ಳುತ್ತಿದ್ದೆ.
ಕರೆಯೊಂದು ಕರೆದು ತಂದು ನಿಗೂಢ ಲೋಕದಲ್ಲಿ ಕೂಡಿಹಾಕಿದ ಹಾಗೆ. ಎಲ್ಲ ಅಯೋಮಯ. ಅಲ್ಲ ಎಲ್ಲ ಮಾಯ ಮಾಯ.
ಅರ್ಥವಾಗಲು ಅರ್ಥ ಮಾಡಿಸಲು ಅವಳ ಮನೆಯ ಯಾವ ವಸ್ತುಗಳೂ ಸಹಾಯ ಮಾಡಲಿಲ್ಲ. ಅವಳು ಒಂದಾದ ಮೇಲೊಂದು ಕೆಲಸ ಮಾಡತೊಡಗಿದಳು. ಸಮಯ ದೂಡುತ್ತಿರುವಳೇ, ಯಾರನ್ನೋ ಕಾಯುತ್ತಿರುವಳೇ, ನನ್ನ ಸತಾಯಿಸುತ್ತಿರುವಳೇ... ಇದು ಒಂದು ರೀತಿಯ ಬಲೆಯೆ, ಈಕೆ ನಿಜಕ್ಕೂ ಅಬಲೆಯೆ.. ಯಾರಿವಳು... ಏನೂ ನೆನಪಾಗದು.
ಎಲ್ಲ ಮರೆಸಲ್ಪಟ್ಟಿರುವೆ.
ಒಂಥರ ಅಯೋಮಯ ಪ್ರಪಂಚ ಈಗಿನದು. ಈ ಮನೆಯದ್ದು. ಗಂಡನಂತೆ ಕೂತುಬಿಟ್ಟಿದ್ದೇನೆ. ಎಲ್ಲಿಯೂ ಪ್ಯಾಂಟು ಸಿಗರೇಟು ಬೆಲ್ಟು ಬೂಟು ಕಾಣಿಸುತ್ತಿಲ್ಲ. ಹತ್ತಿರತ್ತಿರ ಅಂಟಿಕೊಂಡ ಕಟ್ಟಡ. ಯಾರದ್ದೋ ಮನೆ ಸೀಟಿ, ಕಾಲಿಂಗ್ ಬೆಲ್, ನಾಯಿ ಬೊಗಳುವಿಕೆ, ಗ್ಲಾಸ್ ಬಿದ್ದರೆ ನಾನೇ ಬೆಚ್ಚಿಬೀಳುತ್ತಿದ್ದೆ. ಎದ್ದೆ. ಕೈಕಟ್ಟಿ ಓಡಾಡಿದೆ. ಗೋಡೆಸವರಿದೆ. ಕರ್ಟನ್ನು ಹಿಸುಕಿದೆ. ಹೂದಾನಿ ಮೂಸಿದೆ.
ಮತ್ತೆ ಗೂಡುಗಳು. ಕಪಾಟುಗಳು. ಬಾಕ್ಸುಗಳು ಖಾನೆಗಳು ಕಾಲಂಗಳು. ಬಾಕ್ಸ್ ಕೈಗೆತ್ತಿಕೊಂಡೆ. ಕಿಚನ್ ಕರ್ಟನ್‌ನಿಂದ ಏನೋ ತೊಳೆಯುತ್ತಲೇ ಹೊರಳಿದಳು. ‘ಅಯ್ಯೋ. ಅದು ನನ್ ನೆಮ್ಮದಿ ಬಾಕ್ಸು.’ ಅಂದಳು. ಧ್ವನಿಯಲ್ಲಿ ಎಂತಹ ಮಾದಕತೆ.
‘ಬಹಳ ಮಾತ್ರೆ ಇವೆ!’ ಅಂದೆ. ಹಸಿ ಕೈಯೊರೆಸಿಕೊಂಡು ಬಂದು ಎದುರು ಕೂತಳು. ಬಿಡಿಗೂದಲು ಎರಡೂ ಭಾಗಗಳಿಂದ ಇಳಿಬಿದ್ದು ಅವಳ ಸುಪುಷ್ಟ ವಕ್ಷಸ್ತಲವನ್ನು ಆವರಿಸಿದ್ದವು. ಡೀಪ್‌ನೆಕ್ ಡೀಪಾಗಿ ಭ್ರಷ್ಟನ ಮಾಡತೊಡಗಿತು. ಅವಯವಗಳ ಗಾತ್ರ ವಿಕಸಿತವಾದಂತೆ ವಿಚಿತ್ರ ಪ್ರಫುಲ್ಲತೆಯ ಗಾಳಿ ಸಂದಿಗೊಂದಿಗಳಲ್ಲಿ ಆಡತೊಡಗಿತು.
‘ಈ ಮಾತ್ರೆಗಳು ಮಿಕ್ಸ್ ಆಗಿವೆ.’ ಮಾತುಗಳು ಹೊಯ್ದಾಡತೊಡಗಿದವು. ನೆಮ್ಮದಿ ಬಾಕ್ಸಿನ ಒಡತಿಯ ಮನೆಗಾಳಿಯ ಮನದವಾಸನೆಯ ಕಣ್ಣಕಾಮನೆಯ ನೆಮ್ಮದಿ. ಎಲ್ಲಿದ್ದಳು ಇಷ್ಟು ದಿನ..
‘ಅದು ನನ್ನ ನೆಮ್ಮದಿ ಬಾಕ್ಸು ಕಣ್ರೀ’ ಎಲ್ಲ ಜೋಡಿಸಿಟ್ಟಳು..
ನಾನು ಮೃದುವಾಗುತ್ತಿದ್ದೇನಾ ಮಲಿನವಾಗುತ್ತಿದ್ದೇನಾ.. ಎರಡೂ ಜೊತೆಜೊತೆಯಾಗೇ ಆಗುತ್ತಿದ್ದೇನಾ..
ದೂರದಲ್ಲಿನ ಮೊಬೈಲ್ ನೋಡಿದೆ. ತಣ್ಣಗಿದ್ದಂತಿತ್ತು. ಹೊಸ ರಿಪೋರ್ಟರ್, ಮಕ್ಕಳೂ, ಪರಿಚಿತರೂ, ಕ್ರೆಡಿಕ್ ಕಾರ್ಡು, ಲೋನಿನವರೂ ಕರೆ ಮಾಡದ್ದು ಅಚ್ಚರಿಯೇ. ಈ ಲೋಕ ವಿಸ್ತರಿಸಿಕೊಳ್ಳಲು ಅವಕಾಶ ಕೊಟ್ಟಂತಿತ್ತು. ಮೌನ ಆವರಿಸಿತು. ಒಳಕೋಣೆಯಲ್ಲಿ ಸಣ್ಣ ಸದ್ದು. ಚಡಪಡಿಸಿದೆ.
‘ಬೆಕ್ಕು ಬೆಕ್ಕು’ ಅಂದಳು. ಎದ್ದು ಕಿಚನ್‌ಗೆ ಹೋದಳು. ಈವರೆಗೆ ಘಮಗುಡುವುದನ್ನು ತಟ್ಟೆಯಲ್ಲಿ ಹಿಡಿದು ಬಂದಳು.
‘ಇದು ಓಡುಪಾಳೆ, ಕಾಯಿಹಾಲು. ನಮ್ ಬದೀದು ತಿಂಡಿ ತಿನ್ನಿ.’
ಮಳೆ, ಬೆಚ್ಚಲೊಲೆ, ಹೊಗೆ, ದೊಣಪೆ, ಸಂಕ, ಇಂಬಳ, ಅಣಬೆ ಎಲ್ಲ ಎದುರಿಗೆ ತಂದಿರಿಸಿದಂತಾಯಿತು.
‘ಓಹ್ ನೀವು ಆ ಬದಿಯೋರೇ ಅಲ್ದಾ?’ ಅಂದಳು. ಗಪಗಪನೆ ತಿಂದು ಮುಗಿಸಿದೆ. ಬೆರಳು ನೆಕ್ಕಿದೆ.
‘ಕೈತೊಳಕೊಳ್ಳಿ ಕ್ಲೀನ್‌ಹ್ಯಾಂಡ್ ಕ್ರೈಂ ರಿಪೋರ್ಟರ್ ರಾಮನಾಥ.. ಅಲ್ಲಲ್ಲ ರಾಮಚಂದ್ರ ಸೊಪ್ಪಣಗುಡ್ಡೆ’ ಟವೆಲ್ ಹಿಡಿದು ನಿಂತಳು. ತನ್ನ ಕುತ್ತಿಗೆಗೇ ಬಿಗಿದುಕೊಂಡು ಸತ್ತವಳಂತೆ ನಟಿಸಿದಳು. ಜಡವಾಗಿರಲು ಯತ್ನಿಸುತ್ತಿದ್ದೆ. ನೋಡುತ್ತಲೇ ಇನ್ನಷ್ಟು ಬಿಗಿಗೊಳಿಸಿಕೊಂಡಳು. ಸಾವಿನ ಆಟ, ಸಾವಿನ ಸಮೀಪಕ್ಕೆ ಕೊಂಡೊಯ್ದಂತೆ ಅವಳ ಮುಖ ಕೆಂಪೇರಿತು... ಕುತ್ತಿಗೆಯ ನರ ಉಬ್ಬಿದವು... ಓಡಿಹೋಗಿ ಕಿತ್ತುಕೊಳ್ಳಲು ಏಳಬೇಕೆನ್ನುವಷ್ಟರಲ್ಲಿ
‘ನನ್ನ ಕಾಪಾಡೋದಿಲ್ಲ ಅಲ್ವಾ ರಾಮದಾಸ?’ ಅಂದಳು. ‘ಅವತ್ತೂ ಕಾಪಾಡಲಿಲ್ಲ.. ಇವತ್ತೂ..’ ಅತ್ತಳು. ಸದ್ದಿಲ್ಲದೇ ಅತ್ತಳು. ಇನ್ನೂ ಹತ್ತಿರವಾದವಳ ಹತ್ತಿರ ಕೂತು ಮುಖ ಸ್ಪಷ್ಟವಾಗಿ ದಿಟ್ಟಿಸುತ್ತಿದ್ದವಳ ಕಣ್ಣುಗಳೊಳಗಿನ ಕೆಂಪನೆಯ ನರಗಳು.
‘ನನ್ನ ಕರೆದದ್ದೇಕೆ?’ ಅಂದೆ. ನಗುಮುಖ ಗಡುಸಾಯಿತು.
ರಪ್ಪನೆ ಕೆನ್ನೆಗೆ ಹೊಡೆದಳು. ದಿಗ್ಭ್ರಮೆಯಲ್ಲಿ ನಡೆದದ್ದು ಸತ್ಯವೇ ಅಂದುಕೊಳ್ಳುವಷ್ಟರಲ್ಲಿ ನನ್ನ ಕೈತೆಗೆದು ತನ್ನ ಕೆನ್ನೆಗೆ ಪಟಾರನೆ ಇನ್ನೂ ಜೋರಾಗಿ ಹೊಡೆದುಕೊಂಡಳು. ‘ಏನಾಗಿದೆ ನಿನಗೆ?’ ಅಂದೆ. ‘ತಪ್ಪಿಗೆ ತಪ್ಪು, ಈಗ ಸರಿ ಹೋಯ್ತು ಅಲ್ವಾ...?’ ಅಂದಳು. ಎರಡೂ ಕೈಜೋಡಿಸಿ ಮುಗಿದಳು. ಅತ್ತಳು. ಕಾಲು ಮುಟ್ಟಿ ನಮಸ್ಕರಿಸಿದಳು. ಮುಂದೆ ಎಂತಹ ತಪ್ಪು ಮಾಡಬಹುದು ಇವಳು.. ಉಗುಳು ನುಂಗಿದೆ. ಕೋಣೆಯಲ್ಲಿ ಬೆಕ್ಕಿನ ಸದ್ದು.
ವರದಿಗಾರನ ಕೆಚ್ಚು ಇಲ್ಲದಿದ್ದರೆ ಆ ಕ್ಷಣವೇ ಎದ್ದು ಹೋಗುತ್ತಿದ್ದೆನೇನೋ.. ಇದೇನಿದೆಯೋ ಪೂರ್ತಿ ನೋಡಲೇಬೇಕು.. ಗಟ್ಟಿಯಾಗಿ ಕೂತೆ. ಈ ವೀಕೆಂಡಿನಲ್ಲಿ ಲೈಫ್ ಎಂಡ್ ಆಗುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿದವು.
‘ಹೋದಾ ಹೋದಾ!! ಹಿಂಗೇ ಹೋದ. ಬೇಗ ಬಂದಿದ್ರೆ ಹಿಡೀಬೌದಿತ್ತು!’
ಹೊರಗೆ ಜೋರು ಮಾತಿನ ಸದ್ದು. ಇಬ್ಬರು ದಢೂತಿ ಹೆಂಗಸರು. ಕರ್ಟನ್ ಸರಿಸಿ ಕಿಟಕಿಯಾಚೆ ಬಗ್ಗಿ ನೋಡಿದೆ. ಕಪಾಳಮೋಕ್ಷ ಮೋಕ್ಷವನ್ನೇ ತಂದಂತೆ ವಿಚಿತ್ರ ಸಲಿಗೆಯಲ್ಲಿ ದೇಹವಿತ್ತು. ಅವಳೂ ನನ್ನ ಭುಜಕ್ಕೆ ಕೈಹಾಕಿ ಊರಿ ಬಗ್ಗಿ ನೋಡಿದಳು.
‘ಯಾರೋ ಕಳ್ಳ ಇರಬೇಕು.’ ಅಂದಳು. ಟವೆಲ್ಲಿನಲ್ಲಿ ಸಾಯಹೊರಟವಳಲ್ಲ, ಕಪಾಳಕ್ಕೆ ಹೊಡೆದವಳಲ್ಲ.. ಈಗ ಇವಳು ತೀರಾ ಹೊಸಬಳು. ಪ್ರತಿಕ್ರಿಯಿಸಲೇಬೇಕಿತ್ತು. ಚಕ್ರವ್ಯೂಹದಿಂದ ಹೊರಬರಲೇಬೇಕಲ್ಲ.
‘ಕಳ್ಳಾನಾ!’ ಅಂದೆ.
‘ನೀವೇನು ಕಳ್ಳನಾ. ನಿಮಗೆ ಕೊಟ್ಟರೂ ಕದಿಯಲಿಲ್ಲ ನೀವು ಆಗ. ಅಥವಾ ನನಗೆ ಗೊತ್ತಾಗದೇ ಎಲ್ಲ ದೋಚಿಬಿಟ್ಟಿರೇನೋ!’
‘ಯಾವಾಗ?’
‘ಇಬ್ಬರೂ ಒಬ್ಬರಾಗಿದ್ದಾಗ..’ ಅಂಗೈಗೆ ಅಂಗೈ ಪೋಣಿಸಿದಳು. ಎದೆಯ ಬಳಿ ಒಯ್ದಳು. ಕೊಸರಿಕೊಂಡೆ.
‘ಆ ಕಳ್ಳ ಏನು ಕದ್ದು ಹೋಗಿದ್ದಾನಂತೆ?’ ವಿಷಯಾಂತರಿಸಲು ನೋಡಿದೆ.
‘ಹೋಗಲಿ ಬಿಡಿ. ಅವನಿಗೆ ಬೇಕಾದ್ದು ತೆಗೆದುಕೊಂಡು ಹೋಗಿರುತ್ತಾನೆ. ಇಲ್ಲಿನವರಿಗೆ ಎಲ್ಲದೂ ಹೆಚ್ಚಾಗಿರುತ್ತದೆ ಇಲ್ಲ ಬೇಡವಾಗಿರುತ್ತದೆ. ಒಟ್ಟಿಗೆ ಕಳ್ಳನ ಹಿಡಿಯುವುದೊಂದು ಏಕಮಾತ್ರ ಮನರಂಜನೆ ಇವರಿಗೆ.’
‘ಮೂರುಗಂಟೆಗೆ ನಾಲ್ಕು ಬ್ರಾ ಒಣಗೋಕೆ ಹಾಕಿದ್ದೆ ಕಣ್ರೀ. ಐದಕ್ಕೆ ನೋಡಿದರೆ ಒಂದೂ ಇಲ್ಲ ನೋಡ್ರೀ!’
ಹೊರಗೆ ಮಾತಿಗೆ ನಿಂತವರು ಕಿವಿಯಲ್ಲೇ ಬಂದು ಹೇಳಿದಂತಾಯಿತು. ಕರ್ಟನ್ ಸರಿಸಿದೆ.
ಕಳುವಿನ ಮಾಲು ಅಪಾಯಕಾರಿಯಾದುದು. ವಿಲಕ್ಷಣ ಮೌಲ್ಯದ್ದು. ನಾನು ಕೇಳಿಸಿಕೊಂಡದ್ದನ್ನು ಅವಳೂ ಕೇಳಿಸಿಕೊಂಡು ನನ್ನ ಮುಖ ನೋಡಿದಳು. ನೀನೇದರೂ ಕದ್ದೆಯಾ ಅನ್ನುವಂತೆ ಹುಬ್ಬು ಹಾರಿಸಿದಳು. ನಾನು ಹೆದರಿಹೋದೆ. ನಕ್ಕಳು. ಭುಜ ತಟ್ಟಿದಳು.
‘ಥ್ಯಾಂಕ್ಸ್’ ಅಂದಳು. ‘ಯಾಕೆ?’ ಅಂದೆ. ‘ಬಂದದ್ದಕ್ಕೆ’ ಅಂದು ತೊಡೆ ಮುಟ್ಟಿದಳು. ಗಡಗಡಗಡ ಅಲ್ಲಾಡುವ ತೊಡೆಗಳನ್ನು ಒತ್ತಿ ಹಿಡಿದಳು. ‘ಕು...ಕುಡಿಯಲು ನೀರು ಬೇಕು’ ಅಂದೆ. ‘ಬೇಕಾ?’ ಅಂದಳು. ‘ನೀರು ಬೇಕು’ ಅಂದೆ. ಪಟ್ ಅಂತ ಕೆನ್ನೆಗೆ ಮುತ್ತು ಕೊಟ್ಟು ಎದ್ದು ಹೋದಳು ನೀರು ತರಲು.
ಯಾವುದು ಕ್ರೈಂ...
ಮನಸ್ಸು ಒಂದೊಂದೇ ಮೆಟ್ಟಿಲು ಇಳಿಯತೊಡಗಿತ್ತು.
ನೀರು ಮೈಮೇಲೆ ಸುರಿಸಿಕೊಂಡು ಕುಡಿದೆ. ಕೈಯಲ್ಲಿ ಒರೆಸಿದಳು. ಮೈಮೇಲೆ ಬಿದ್ದಳು ಕೊರಡಿನಂತೆ. ತಳ್ಳಿ ಕೂತೆ. ತೋಳಲ್ಲಿ ತೋಳುಹಾಕಿ ಕೂತಳು. ದಡಾರನೆ ಮತ್ತೊಂದು ಕೋಣೆಯಲ್ಲಿ ಏನೋ ಬಿದ್ದ ಸದ್ದು. ಅವಳ ಕೊಸರಿಕೊಂಡು ಎದ್ದು ಚಿಲಕ ಹಾಕಿದ್ದ ಕೋಣೆ ತೆರೆದು ನೋಡಿದೆ.
ಯಾರೋ ಒಬ್ಬನು ಮಲಗಿದ್ದ!
ಮೆಸೇಜು ಬಂದಾಗಿನಿಂದ ಈ ಕ್ಷಣದವರೆಗೆ ಅರ್ಧ ದಿನವೂ ಆಗಿರಲಿಲ್ಲ, ನಾನು ಸೊನ್ನೆಯೇ ಆಗಿಹೋಗಿದ್ದೆ.
‘ಅಯ್ಯೋ ಇವನು ಇಲ್ಲೆ ಇದ್ದನಾ ಕಳ್ಳನ ತರಹ!’ ಅಂದೆ. ಸಹಜ ಉಸಿರಾಟ ಕಷ್ಟವಾಗಿತ್ತು ನನಗೆ. ಅವಳು ಸುಮ್ಮನಿದ್ದಳು. ‘ಇವನೇ ಆ ಕಳ್ಳ.’ ಅಂದೆ. ಹೊರಗೆ ಹೋಗಿ ಆ ಹೆಂಗಸರಿಗೆ ಹೇಳುವ ಅವಸರದಲ್ಲಿದ್ದವನ ಕೈ ಹಿಡಿದಳು. ‘ಅಲ್ಲ.’ ಅಂದಳು. ಉದ್ವೇಗವೇ ಇರಲಿಲ್ಲ ಅವಳಿಗೆ.
‘ಅವನು ಕಳ್ಳ.’ ಅಂದೆ. ‘ಅಲ್ಲ.’ ಅಂದಳು.
‘ಅವನು ಇಷ್ಟುಹೊತ್ತಿನವರೆಗೆ ಇಲ್ಲೇ ಬಚ್ಚಿಟ್ಟುಕೊಂಡಿದ್ದ.’
‘ಬಚ್ಚಿಟ್ಟುಕೊಂಡಿಲ್ಲ. ಮಲಗಿದ್ದಾನೆ. ಎದ್ದರೆ ಗದ್ದಲ ಮಾಡುತ್ತಾನೆ.’
‘ಯಾರಿವನು?’
‘ನನ್ನ ತಮ್ಮ ಶಂಕರ’
‘ಅಲ್ಲ’ ಅಂದಳು. ಅವಾಕ್ಕಾಗಿ ಅವಳ ನೋಡಿದೆ. ‘ನನಗೆ ಒಬ್ಬನೇ ಮಾತನಾಡುವ ಅಭ್ಯಾಸ ಯಾವಾಗಲೋ ಶುರುವಾಗಿದೆ.’ ಅಂದೆ.
‘ಆಗಲೂ ಇತ್ತಲ್ಲ. ಗೊತ್ತು ಬಿಡು.’ ಕೈಕಟ್ಟಿ ಮಗುವಂತೆ ಮಲಗಿದ್ದ ಹದಿನೆಂಟರ ಪ್ರಾಯದವನ ಪಕ್ಕ ಗೋಡೆಗೆ ಆನಿಕೊಂಡು ಕೂತಳು. ನಾನು ಒಂಟಿಕಾಲಿನಲ್ಲಿ ಗೋಡೆಗೊರಗಿ ನಿಂತೇ ಇದ್ದೆ.
‘ಯಾವಾಗ...?’
‘ನಾನೂ ನೀನು ಆಡುವಾಗ.’
‘ಯಾವ ಆಟ’
‘ಅಪ್ಪ ಅಮ್ಮ ಆಟ. ಡಾಕ್ಟರು ಪೇಷಂಟು ಆಟ. ನಿನ್ನ ಆ ಪುಸ್ತಕ ಓದೋ ಆಟ..’
‘ಎಲ್ಲಿ?’
‘ಪಶ್ಚಿಮ ಘಟ್ಟದ ಸೊಪ್ಪಣಗುಡ್ಡೆ ಬೆಟ್ಟದ ತಪ್ಪಲಲ್ಲಿ...’
‘ನೀನು ಆ ದೊಡ್ಡಮನೆಯವರ ಹುಡುಗಿಯಾ..’
‘ನೀನು ಅಜ್ಜಿಮನೆಗೆ ಬಂದು, ನನ್ನ ಒಳಗೆ ಉಳಿದುಹೋದ ಹುಡುಗ’
‘ಹೌದು.’ ಅವಳ ತಮ್ಮನೊಬ್ಬನಿದ್ದ ಅರೆಮಳ್ಳ ನೆನಪಾದಂತೆ ಭಯವಾಗತೊಡಗಿತು.
‘ನಿನ್ನ ಬುದ್ಧಿಮಾಂದ್ಯನೆಂದು ಅಜ್ಜಿಯೂರಿನಿಂದ ಸಾಗಹಾಕಿದರಂತೆ.’
ನೆನಪುಮಾಡಿಕೊಂಡು ನೊಂದುಕೊಳ್ಳುತ್ತಿದ್ದ ಎಲ್ಲ ವಿವರಗಳ ಜೀವಂತ ಸಾಕ್ಷಿ ಇವಳು!
‘ಇವನನ್ನೂ ಹಾಗೇ..’
‘ನನ್ನ ಮಳ್ಳತಮ್ಮ ಶಂಕರ.’ ಅತ್ತಳು. ಹಳೆಯ ಮುಖ ನೆನಪಾಗದಿದ್ದರೂ ಈ ಮುಖ ಪರಿಚಿತ ಅನ್ನಿಸಿತು. ಪ್ರತಿಬಾರಿ ಇವಳ ನನ್ನ ಜೊತೆ ಆಡಲು ಕರೆದು ತರುತ್ತಿದ್ದವ ಇವನೇ.. ಘನಘೋರ ಜಂಗಲಿನಲ್ಲಿ ಒಂದು ಗಂಡು ಜೊತೆಗೆ ಧೈರ್ಯಕ್ಕೆ. ಉಚ್ಚೆ ಹೊಯ್ಯಲೂ ಅವಳೇ ಚಡ್ಡಿ ಇಳಿಸಿ ಪಕ್ಕವೇ ನಿಲ್ಲಬೇಕಿತ್ತು. ಅವಳ ಜೊತೆಗೆ ಬಂದಾಗಲೆಲ್ಲಾ ತಾನು ತಿನ್ನಲ್ಲು ತಂದದ್ದನ್ನೆಲ್ಲ ನನ್ನ ಅಂಗಿಗೆ ಸುರಿದು ಹೋಗುವವ. ಪಾಪ ಅನ್ನಿಸಿತು, ನಾನು ಪಾಪಿ ಅಂತಲೂ.
‘ದೋಚಲಿಲ್ಲ ದೋಚಲು ಬಿಟ್ಟೆ ಅಂದುಕೊಂಡೆ, ಇವನ ನೋಡಿದರೆ ದೋಚಿದ್ದು ನೀನೇ ಅನ್ನಿಸುತ್ತದೆ’
‘ಹೇಗೆ?’
‘ಅವನು ನಿನ್ನಂತಾಗಿದ್ದಾನೆ.. ಈಗ’
‘ನಾನು ಏನಾಗಿದ್ದೇನೆ..’
‘ಮಾವಿನ ತೋಪಿಗೆ ಹಣ್ಣು ಕದಿಯಲು ಹೋದ ಕೊನೆಯ ನೆನಪು ಮರೆತೆಯ?’
‘ನೆನಪಿದೆ.’
‘ಹಣ್ಣು ಕದ್ದು ತಿಂದು, ಮೈಕೈ ಮಾಡಿಕೊಂಡು, ತೋಪಿನವರದ್ದೇ ಬಾವಿಯಲ್ಲಿ ಮೈತೊಳೆದುಕೊಳ್ಳುತ್ತಿದ್ದಾಗ ನನ್ನ ಬಟ್ಟೆ ಕದ್ದು ಓಡಿದೆಯಲ್ಲ.. ಬೆತ್ತಲೆ ಓಡಿಬರುವಂತೆ ಮಾಡಿದೆಯಲ್ಲ.. ಇದ್ದಕ್ಕಿದ್ದಂತೆ ಕುಸಿದು ಬಿದ್ದವಳ ಎಬ್ಬಿಸಿದ್ದು ತೋಪಿನವನು. ಕದ್ದ ತಪ್ಪಿಗೆ ಶಿಕ್ಷೆ ಕೊಡದೇ ಇರುತ್ತಾನೆಯೇ..’
‘ದೇವರೇ...’
‘ಹೌದು. ಆ ಸೊಪ್ಪಣಗುಡ್ಡೆ ಆದಿಶಕ್ತಿಯಾಣೆಗೂ ನಾನು ಹೇಳುವುದು ನಿಜ. ನನ್ನ ಎಡಮೊಲೆಯ ಮೇಲಿನ ಮಚ್ಚೆ ಸುಳ್ಳು ಎಲ್ಲಿ ತೋರಿಸು, ಅಂದವನು ನಾನು ಮೈತೊಳೆದುಕೊಳ್ಳುವಾಗ ಬಟ್ಟೆ ಕದ್ದು ನೋಡಿದ್ದು, ಕದ್ದು ಓಡಿದ್ದು ನಿಜ. ಹಿಂದೆಯೇ ಕೂಗುತ್ತ ಬಂದವಳು ಕುಸಿದು ಬಿದ್ದಿದ್ದೆ. ಬೇಲಿಯಲ್ಲಿ ಇರಲಿಲ್ಲ ಶಂಕರ. ರಕ್ತ ಶಂಕರನದ್ದೋ ತೋಪಿನವನದ್ದೋ ನಿನ್ನದೋ ಅಥವಾ ನನ್ನದೋ. ಅಸ್ಪಷ್ಟ.’
‘ಇಷ್ಟು ದಿನ...’
‘ಸೊಪ್ಪಣಗುಡ್ಡೆ ಭೂಕುಸಿತದಲ್ಲಿ ಆರುತಿಂಗಳ ಹಿಂದೆ ಕುಸಿಯುವವರೆಗೂ ಇದ್ದೆ. ಇವನ ಜೊತೆಗಿಟ್ಟುಕೊಂಡೇ. ಸೊಪ್ಪಣಗುಡ್ಡೆ ಹೆಸರಿನ ಈ ಮಹಾಲೇಖಕನ ಕ್ರೈಂ ವರದಿಗಳ ಓದುತ್ತ... ಆ ಲೋಕವೇ ಇಲ್ಲ ಈಗ! ನಾನು ನೀನು ಆಡಿದ, ನಮ್ಮನು ಆಡಿಸಿದ, ನಮ್ಮನ್ನು ಬೆತ್ತಲು ಮಾಡಿದ ಇಡಿ ಕಾನು ಮಾಯ. ಈ ಹೊಸ ಲೋಕದಲ್ಲಿ ನೀನು ನಮ್ಮ ಜೊತೆಯಲ್ಲೇ ಇರಬೇಕು. ನಿನ್ನ ರಾಮದಾಸನ ಎಲ್ಲ ಹಳೆಯ ಮ್ಯಾಗಝೀನ್‌ಗಳ ಕಾಪಿಟ್ಟಿದ್ದೀನಿ.’
‘ಇವನ ಯಾಕೆ ಬಚ್ಚಿಟ್ಟಿದಿಯ?’
‘ಇವನೂ ನಿನ್ನ ಹಾಗೆ ಆಗಬಾರದು ಅಂದುಕೊಂಡೆ. ಒಂದು ಸುತ್ತು ಕಡಿಮೆಯಿರುವವನು ಹಾಗೆ ಆಗುವುದೂ ಇಲ್ಲವೆಂದುಕೊಂಡೆ. ಆದರೆ ನಿನ್ನಂತೆಯೇ ಆಗಿಬಿಟ್ಟ. ಕದಿಯುವುದು. ಇವತ್ತು ಕದ್ದು ಹೊಡೆತ ತಿಂದು ಬಂದಿದ್ದಾನೆ.. ಇವನಿಗೆ ನಿನ್ನ ಹಾಗೆಯೇ. ನಿದ್ರೆಯೇ ಇಲ್ಲ.. ನಿದ್ರೆ ತರಿಸಬೇಕು.. ಬಲವಂತದ ಮಾತ್ರೆಗಳ ನಿದ್ರೆಯಲ್ಲಿ ನೆನಪುಗಳು ಕರಗಿ ಮಾಯವಾಗುತ್ತವಂತೆ. ಹಾಗಾಗಿಯಾದರೂ ಇವನು ನನ್ನ ಬೆತ್ತಲು ರಕ್ತಮಯವಾಗಿ ಕಂಡದ್ದನ್ನು ಮರೆಯಲಿ ಅಂತ..’
ಕ್ರೈಂ ಕಟ್ಟಿಕೊಳ್ಳತೊಡಗಿತು.. ಬಚ್ಚಲಿನ ಕೊಳೆಯಂತೆ, ಮನಸ್ಸಿನ ಕಾಯಿಲೆಯಂತೆ, ಕರಗದ ಗಡ್ಡೆಯಂತೆ.
ಕಾಮರಸಗಳ ಸಿಂಚನಕ್ಕಾಗಿ ಕಳ್ಳಮನಸ್ಸು ಮಳ್ಳಾಟ ಆಡುತ್ತ ಹೊಂಚುಹಾಕುತ್ತಿತ್ತೇನೋ. ರಕ್ತದ ಅಭಿಷೇಕವೇ ಆಗಿಹೋಗಿತ್ತು. ಅವಸರದಲ್ಲಿ ಲಿಫ್ಟ್ ಹೊಕ್ಕಲು ಹೆದರಿ ಮೆಟ್ಟಿಲಿಳಿಯಲು ಹೋಗಿ ಉರುಳುರುಳಿ ಬಿದ್ದಿದ್ದೆ.
‘ರಾಮದಾಸ್...’ ಕರೆ. ‘ರಾಮದಾಸ್...’ ಕೂಗು. ‘ರಾಮಚಂದ್ರ ಸೊಪ್ಪಣಗುಡ್ಡೆ...’ ಆವೇಶದ ಅರಚಾಟ. ತಲೆಯೆತ್ತಿ ನೋಡಲಾರದೆ ಚಪ್ಪಲಿಗಳಿಲ್ಲದ ಕಾಲಿನಲ್ಲಿ ಸರಸರನೆ ನಡೆಯತೊಡಗಿದೆ. ಬೆಳಗ್ಗೆ ಬಂದ ಅಸ್ಪಷ್ಟ ದನಿಯ ‘ಕೊಲೆ’ ಅನ್ನುವ ಕರೆ ಈ ಬಿಲ್ಡಿಂಗಿನ ಆ ದಿನ ಭವಿಷ್ಯದ ಹೆಂಗಸರೇ ಮಾಡಿರಬೇಕೆಂದೆನಿಸಿತು. ಕೋಣೆಯಲ್ಲಿ ಮಲಗಿದ್ದ ನನ್ನ ಬಾಲ್ಯದ ಗೆಳೆಯ ಅಪ್ರಾಪ್ತ ಬಾಲಕಿಯ ಅತ್ಯಾಚಾರದ ಕೊಲೆಯ ಆರೋಪಿಯಂತಿದ್ದ! ಈಗ ನೆನಪಾಯಿತು. ಆ ರಾಮದಾಸನ ಇಷ್ಟಪಡಬಾರದಿತ್ತು, ಆಗಲೂ ಈಗಲೂ. ಎಷ್ಟೋ ಕ್ರೈಂಗಳ ಕಂಡುಹಿಡಿಯುವುದ ಕಲಿಸಿದವ, ಇಂದಿನ ಕ್ರೈಂಗೆ ಕಾರಣನೇ ಆದ. ಆಕೆ ಅವಳ ತಮ್ಮನ ಸಾಯಿಸಿ ಮಲಗಿಸಿರಬಹುದೇ...
ಮೊಬೈಲಿಗೆಷ್ಟು ಕರೆಗಳೋ.. ಮೊಬೈಲ್ ತೆರೆದು ನೋಡಿಕೊಂಡೆ. ಮೊಬೈಲ್ ಬಂದ್ ಮಾಡಿಟ್ಟಿದ್ದಳು ಯಾವಾಗಲೋ... ಛೆ!ಛೆ!ಛೆ! ಗಡಬಡಾಯಿಸಿ ನಡೆಯುತ್ತಿದ್ದ ಕಾಲುಗಳು ನಿಂತವು. ಮೊಬೈಲ್ ಆನ್ ಮಾಡಿದೆ. ಹದಿನೇಳು ಮಿಸ್ಡ್ ಕಾಲ್‌ಗಳು. ಹೆಂಡತಿಯಿಂದ ನಾಲ್ಕು ಮೆಸೇಜ್.
‘ಮಗಳು ಅಜ್ಜಿ ಮನೇಲಿ ಅಳ್ತಾ ಇದಾಳೆ. ಸ್ಕೂಲಲ್ಲಿ ಏನೋ ಆಯಿತಂತೆ. ಏನೂಂತ ಹೇಳ್ತಿಲ್ಲ. ಮನೆಗೆ ವಾಪಸ್ ಬರ‍್ತಿದೀವಿ.’ ಹೆಂಡತಿ.
ಸ್ಕೂಲಿನ ಹೆಡ್‌ಮೇಡಮ್‌ದು ಮೂರು ಮಿಸ್ಡ್ ಕಾಲ್.. ಏನಾಗಿರಬಹುದು..
ಜೇಬು ತಡಕಾಡುತ್ತ ಹಣೆಯರಕ್ತ ಒರೆಸಿಕೊಳ್ಳುತ್ತ ಮುಖ್ಯರಸ್ತೆಗೆ ಹೊರಳಿದೆ. ಕತ್ತಲಿನಿಂದ ಬೆಳಕಿಗೆ ಬಂದ ಕಥೆಯಾದೆ, ಅಲ್ಲ ಕಳ್ಳನಾದೆ. ಹಣ, ಪರ್ಸು, ಐಡಿಕಾರ್ಡು ಎಲ್ಲ ಇತ್ತು. ಇನ್ನೊಂದು ಬದಿಯ ಜೇಬೂ ಒತ್ತುತ್ತಿತ್ತು. ಆತಂಕ ಅನುಮಾನವಾಗಿ, ಮುಟ್ಟಿನೋಡಿಕೊಂಡಂತೆ ಸ್ಪಷ್ಟವಾಯಿತು. ಕಳೆದುಹೋಯಿತೆಂದು ಬೊಬ್ಬೆಯಿಡುತ್ತಿದ್ದ ಆ ಹೆಂಗಸರ ಎರಡೂ ವಸ್ತುಗಳು ಕೋರೈಸುವ ಬೆಳಕಿನ ರಸ್ತೆಯಲ್ಲಿ ಜನನಿಬಿಡ ರಸ್ತೆಯಲ್ಲಿ ಹೊರಬಂದವು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.