ADVERTISEMENT

ಕೇಳದಿರು ಪುರಾವೆಗಳನು ಹೀಗೆ...

ರಮೇಶ ಅರೋಲಿ
Published 14 ಸೆಪ್ಟೆಂಬರ್ 2019, 19:30 IST
Last Updated 14 ಸೆಪ್ಟೆಂಬರ್ 2019, 19:30 IST
ಕಲೆ: ಸೃಜನ್‌
ಕಲೆ: ಸೃಜನ್‌   

ಮುಕ್ಕಾದ ಶಿಲಾಶಾಸನದ ಸುಂದರಿಯೇ
ನಿನ್ನ ಹಣೆ ಮೇಲಿನ ಆ ಹಚ್ಚೆ ಗುರುತಿಗೆ
ನನ್ನ ತುದಿ ಬೆರಳು ತುಂಡಾದ ದಿನ
ನಿಲ್ಲಿಸು ನೀನು ನಮ್ಮ ಜನುಮ ರಹಸ್ಯಕೆ
ಪುರಾವೆ ಕೇಳುವುದನು

ಗಲ್ಲಕ್ಕೆರಗಿದ ಬೊಟ್ಟು ಮೆಲ್ಲಗೆ ಮಾಸುವ ಮೊದಲು
ನನ್ನ ಬೆರಳಂಚಿನ ತುದಿಗೆ ಗುಂಡು ಪಿನ್ನೊಂದು ಚುಚ್ಚಿ
ನೆತ್ತರಿನ ಕುಲ ತಪಾಸಣೆಗೆ ಆದೇಶಿಸಿದವರ ನಡುವೆ
ನಿಲ್ಲಿಸು ನೀನು ನನ್ನ ಬಿಕ್ಕಳಿಕೆಗಳಿಗೆ
ಪುರಾವೆ ಕೇಳುವುದನು

ನಿಶ್ಚಲ ನಿನ್ನ ತುಂಬು ಎದೆಯ ಮೇಲೆ
ವಾಲಿದ ಚಿಟ್ಟೆಗಳು ಧ್ಯಾನಕ್ಕೆ ಕೂತ ದಿನ
ಬೂದಿ ಉಂಡೆಗಳಂತೆ ಉದುರಿದ ನನ್ನ ಕಣ್ಣುಗಳ ಕಂಡು
ನಿಲ್ಲಿಸು ನೀನು ನೀರೊಡೆಯದಿದ್ದಕ್ಕೆ
ಪುರಾವೆ ಕೇಳುವುದನು

ADVERTISEMENT

ಮಳೆಗೆ ನೆನೆದವನನ್ನು ಸುಡು ಚಿಮಣಿಗಳು
ಕಡೆಗಣಿಸಿದ ಸಂಜೆ, ಕಪ್ಪೆಗಳ ಧಿಕ್ಕಾರದ ಕೂಗಿಗೆ
ಹಾರ, ದಾರಗಳು ಬಂಧಿಸಲಾರದನು ನೆನೆದು
ನಿಲ್ಲಿಸು ನೀನು ಹುಟ್ಟು ಮಚ್ಚೆಗಳ ಹುಟ್ಟಿಗೆ
ಪುರಾವೆ ಕೇಳುವುದನು

ತುಟಿ ದಾಟದ ನುಡಿಗೆ ಗಡಿ ಎಲ್ಲೆಗಳಿವೆ ಇಲ್ಲಿ
ನಾನು ಗುಡಿ ತಲುಪದ ಹರಕೆ; ನೀನು ಮುಡಿಗೇರಿದ ಹೂವು
ಆಡಿ ಮುಗಿಸಿದ ಮಾತು ಉಳಿದು ಬಿಟ್ಟಿದ್ದಕ್ಕೆ
ನಿಲ್ಲಿಸು ನೀನು ಆಡದಿರುವುದಕ್ಕೆ
ಪುರಾವೆ ಕೇಳುವುದನು

ಸಾಕಿನ್ನು ನಿಲ್ಲಿಸು ಈ ಸ್ವಪ್ನ ಸರಣಿಯನು ಇಲ್ಲಿಗೆ
ನಿದ್ದೆ ನಿಷೇಧಿತ ನನ್ನ ಕಣ್ಣುಗಳಿಗೆ ಕನಸು ಸುಳಿಯುವ ರಾತ್ರಿ
ಆಕಾಶವನ್ನು ದಿಟ್ಟಿಸುವ ಗೋರಿ ಮೇಲಿನ ಹಣತೆ ಕಂಡು
ನಿಲ್ಲಿಸು ನೀನು ನನ್ನ ನಿಟ್ಟುಸಿರಿಗೆ
ಪುರಾವೆ ಕೇಳುವುದನು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.