ADVERTISEMENT

ಹುಟ್ಟುಗುಣ ಸುಟ್ಟರೂ ಹೋಗದು!

ಭಾನುಶ್ರೀ
Published 24 ಮೇ 2019, 19:30 IST
Last Updated 24 ಮೇ 2019, 19:30 IST
 ಕಲೆ: ವಿಜಯಶ್ರೀ
 ಕಲೆ: ವಿಜಯಶ್ರೀ   

ಅದೊಂದು ಕಾಡು. ಅಲ್ಲೊಂದು ಮುದಿಸಿಂಹ ವಾಸವಾಗಿತ್ತು. ಅದು ಎಷ್ಟು ಮುದಿಯಾಗಿತ್ತು ಎಂದರೆ ಅದಕ್ಕೆ ಬೇಟೆಯಾಡುವ ಶಕ್ತಿಯೇ ಇರಲಿಲ್ಲ. ಹೀಗಾಗಿ ಅದು ಗುಹೆಯ ಒಳಗೇ ಇರಬೇಕಾಯಿತು. ಹಸಿವು ಶುರುವಾಗಿ, ಹೆಚ್ಚುತ್ತ ಹೋಯಿತು. ಏನು ಮಾಡುವುದೆಂದು ತೋಚಲಿಲ್ಲ. ಆಗ ಅದಕ್ಕೊಂದು ಉಪಾಯ ಹೊಳೆಯಿತು.

ಗುಹೆಯ ಹತ್ತಿರದಲ್ಲಿಯೇ ಒಂದು ಮೊಲ ಓಡಾಡುತ್ತಿತ್ತು. ಮುದಿಸಿಂಹ ಅದನ್ನು ಕರೆಯುತ್ತ ‘ಓ ನನ್ನ ಪ್ರೀತಿಯ ಮೊಲವೇ, ಹತ್ತಿರ ಬಾ’ ಎಂದಿತು. ‘ಇಲ್ಲಪ್ಪ! ನಾನು ಬರೋಲ್ಲ. ನಿನ್ನ ಹತ್ತಿರ ಬಂದರೆ ನೀನು ನನ್ನನ್ನು ತಿಂಧುಬಿಡ್ತೀಯಾ’ ಎಂದು ಭಯ ಪಟ್ಟಿತು ಮೊಲ. ‘ಇಲ್ಲ, ನಾನು ನೀನು ಸ್ನೇಹಿತ. ನಾವಿಬ್ಬರೂ ಜೊತೆಯಲ್ಲಿರೋಣ ಬಾ’ – ಹೀಗೆಲ್ಲ ಏನೇನೋ ಹೇಳಿ ಮೊಲವನ್ನು ಅದು ನಂಬಿಸಿತು.

ಸಿಂಹದ ಸಮೀಪ ಮೊಲ ಹೋಯಿತು. ಕೂಡಲೇ ಅದನ್ನು ಕೊಂದ ಸಿಂಹ ತನ್ನ ಹಸಿವನ್ನು ನೀಗಿಸಿಕೊಂಡಿತು.

ADVERTISEMENT

ಇನ್ನೊಮ್ಮೆ ಜಿಂಕೆಯೊಂದು ಸಿಂಹದ ಗುಹೆಯ ಸಮೀಪ ಸುಳಿದಾಡುತ್ತಿತ್ತು. ಸಿಂಹ ಅದಕ್ಕೂ ಮೊಲಕ್ಕೆ ಕೊಟ್ಟಂಥ ಭರವಸೆಯನ್ನು ನೀಡಿ ಹತ್ತಿರ ಕರೆಯಿತು. ಮೊದಲಿಗೆ ಜಿಂಕೆ ಒಪ್ಪಲಿಲ್ಲ. ಆದರೆ ಅದೂ ಸಿಂಹದ ಮಾತುಗಳಿಗೆ ಮರುಳಾಯಿತು. ಸಿಂಹದ ಹತ್ತಿರ ಹೋಯಿತು; ಅದಕ್ಕೆ ಆಹಾರವಾಯಿತು. ಹೀಗೆ ಸಿಂಹ ಎಲ್ಲ ಪ್ರಾಣಿಗಳನ್ನು ಮೋಸದಿಂದ ಕೊಂದು ಆಹಾರವಾಗಿಸಿಕೊಳ್ಳುತ್ತಿತ್ತು.

ಅಂದು ನರಿಯ ಸರದಿ. ಗುಹೆಯ ಹತ್ತಿರ ಬಂದ ನರಿಯನ್ನೂ ಸಿಂಹವು ನಯವಾದ ಮಾತುಗಳಿಂದ ಹತ್ತಿರ ಕರೆಯಿತು. ಆದರೆ ನರಿ ವಾತಾವರಣವನ್ನು ಗಮನಿಸಿತು. ‘ಅಯ್ಯಾ ಮೃಗರಾಜ! ನಿನ್ನ ಬುದ್ಧಿವಂತಿಕೆ ನನಗೆ ಗೊತ್ತಿದೆ. ನೀನು ನನ್ನನ್ನು ಆಹ್ವಾನ ಕೊಡುತ್ತಿರುವುದರ ಗುಟ್ಟು ಕೂಡ ನನಗೆ ಗೊತ್ತಿದೆ. ನಿನ್ನ ಸಮೀಪ ಬಂದರೆ ಏನಾಗುವುದೆಂದೂ ನನಗೆ ಗೊತ್ತಿದೆ. ಪ್ರಾಣಿಗಳುನಿನ್ನ ಗುಹೆಯ ಒಳಗೆ ಹೋಗಿರುವುದು ಕಾಣುತ್ತಿದೆಯೇ ವಿನಾ ಒಳಗಿನಿಂದ ಹೊರಗೆ ಬಂದವುಗಳ ಹೆಜ್ಜೆ ಗುರುತುಗಳು ಕಾಣಿಸು ತ್ತಿಲ್ಲ. ಅವುಗಳ ಪರಿಸ್ಥಿತಿ ಏನಾಗಿರಬಹುದೆಂದು ನಾನು ಊಹಿಸಬಲ್ಲೆ. ನೀನು ಅಲ್ಲೇ ಇರು, ನಾನು ಇಲ್ಲೇ ಇರುವೆ’ ಎಂದು ಅದು ನಗುತ್ತ ಅಲ್ಲಿಂದ ಹೊರಟುಹೋಯಿತು.

* * *

ಮಾಂಸಾಹಾರ ಸಿಂಹಗಳ ಸಹಜ ಆಹಾರ. ಅವುಗಳ ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ಕೂಡ ಅವುಗಳ ಸ್ವಭಾವವೇ. ತುಂಬ ಬಲಶಾಲಿಯಾದ ಸಿಂಹವೊಂದು ಮೊಲ–ಜಿಂಕೆಗಳಂಥ ಚಿಕ್ಕ ಪ್ರಾಣಿಗಳ ಜೊತೆ ಸ್ನೇಹವನ್ನು ಬಯಸದು. ಹೀಗೊಂದು ವೇಳೆ ಬಯಸಿದರೂ ಅದರ ಉದ್ದೇಶ ಬೇರೆ ಇರುತ್ತದೆ ಎಂದು ಗ್ರಹಿಸುವುದೇ ಜಾಣತನ. ನರಿ ಹೀಗೆ ಗ್ರಹಿಸಿ, ಪ್ರಾಣವನ್ನು ಉಳಿಸಿಕೊಂಡಿತು. ಆದರೆ ಮೊಲ–ಜಿಂಕೆಗಳು ಕಪಟದ ಮಾತುಗಳನ್ನು ಕೇಳಿ ಜೀವವನ್ನು ಕಳೆದುಕೊಂಡವು.

ಸ್ನೇಹವೇ ಮುಖ್ಯವಲ್ಲ; ನಾವು ಯಾರೊಂದಿಗೆ ಸ್ನೇಹವನ್ನು ಮಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ನಮಗೆ ಎಲ್ಲ ರೀತಿಯಿಂದಲೂ ಸಮಾನರು ಎಂದೆನಿಸುವವರೊಂದಿಗೆ ಸ್ನೇಹ ಸಹಜವಾಗಿ ಏರ್ಪಡುತ್ತದೆ. ನಮಗಿಂತಲೂ ಎತ್ತರದವರೊಂದಿಗೂ ಕೆಳಗಿನವರೊಂದಿಗೂ ಉಂಟಾಗುವ ಸ್ನೇಹ ಹೆಚ್ಚು ಕಾಲ ಉಳಿಯುವುದು ಕಷ್ಟ. ಸಿಂಹ ಇಡಿಯ ಕಾಡಿಗೇ ರಾಜ. ರಾಜನಾದ ವನು ನಮ್ಮ ಸ್ನೇಹ ಬಯಸುತ್ತಿದ್ದಾನೆ ಎಂದರೆ ನಾವು ಸಂತೋಷ ಪಡುವುದಕ್ಕಿಂತಲೂ ಎಚ್ಚರ ವಹಿಸ ಬೇಕು. ಇಷ್ಟೇ ಅಲ್ಲ, ಯಾರೊಬ್ಬರ ಸಹಜ ಸ್ವಭಾವವನ್ನು ಬದಲಾಯಿಸುವುದು ಸುಲಭವಲ್ಲ. ಇದನ್ನು ತಿಳಿದುಕೊಂಡು ನಮ್ಮ ಸ್ನೇಹವನ್ನು ಎಚ್ಚರಿಕೆ ಯಿಂದ ಮುಂದುವರೆಸಬೇಕಾಗುತ್ತದೆ. ಕಳ್ಳನೊಬ್ಬ ಬದಲಾದ ಎಂದರೆ ನಾವು ಕೂಡಲೇ ನಂಬಬೇಕಿಲ್ಲ. ಸಿಂಹವೊಂದು ಸಾಧುಪ್ರಾಣಿಯಾಯಿತು ಎಂದರೆ ಹೌದೆಂದು ಒಪ್ಪಬೇಕಿಲ್ಲ. ಪರೀಕ್ಷಿಸುವುದು, ಪ್ರಶ್ನಿಸುವುದು, ಸಂದೇಹ ಪಡುವುದು ತಪ್ಪಲ್ಲ. ಇವೆಲ್ಲವೂ ಮುನ್ನೆಚ್ಚರಿಕೆಗೆ ನಮಗೆ ಒದಗುವ ಸಾಧನೆಗಳೇ ಹೌದು ಎನ್ನುವುದನ್ನು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.