ADVERTISEMENT

ಗೂಬೆಯ ನಕಲಿ ಕೊಕ್ಕು

ಮಕ್ಕಳ ಕಥೆ

ಡಿ.ಎನ್.ಶ್ರೀನಾಥ್
Published 18 ಮೇ 2019, 19:30 IST
Last Updated 18 ಮೇ 2019, 19:30 IST
ಚಿತ್ರ: ರಾಮಕೃಷ್ಣ ಸಿದ್ರಪಾಲ
ಚಿತ್ರ: ರಾಮಕೃಷ್ಣ ಸಿದ್ರಪಾಲ   

ಬಹಳ ಹಿಂದೆ ಒಂದು ಕಾಡಿನಲ್ಲಿ ಒಂದು ದೊಡ್ಡ ಗಾತ್ರದ ಗೂಬೆ ಮತ್ತು ಒಂದು ಪುಟ್ಟ ಪಕ್ಷಿ ಸಮೀಪದಲ್ಲಿಯೇ ವಾಸಿಸುತ್ತಿದ್ದವು. ಪಕ್ಷಿ ತನ್ನ ಮರಿಗಳೊಂದಿಗೆ ವಾಸಿಸುತ್ತಿತ್ತು. ಅದು ತುಂಬಾ ಸುಂದರವಾದ ಗೂಡನ್ನು ಕಟ್ಟುತ್ತಿತ್ತು; ಇದರಿಂದಾಗಿ ಅದರ ಕೀರ್ತಿ ದೂರದವರೆಗೂ ಹಬ್ಬಿತ್ತು.

ನೋಡಲು ದೊಡ್ಡದಾಗಿದ್ದ ಗೂಬೆಗೆ ಗೂಡು ಕಟ್ಟುವ ಸಾಮರ್ಥ್ಯವಿರಲಿಲ್ಲ. ಅದೊಂದು ದಿನ ಗೂಬೆಗೆ, ತಾನೇಕೆ ತನ್ನ ಶರೀರದ ಆಕಾರವನ್ನು ತೋರಿಸಿ, ಪಕ್ಷಿಯನ್ನು ಹೆದರಿಸಿ ಅದನ್ನು ಗೂಡಿನಿಂದ ಹೊರ ಹಾಕಿ ಅಲ್ಲಿ ತಾನು ವಾಸಿಸಬಾರದು ಎಂಬ ಯೋಚನೆ ಬಂತು. ಸರಿ, ಅದು ಕೂಡಲೇ ಪಕ್ಷಿಯ ಗೂಡಿನೆದುರು ಬಂದು ಗಟ್ಟಿಯಾಗಿ ಹೇಳಿತು, ‘ಏಯ್ ಪುಟಗೋಸಿ ಪಕ್ಷಿ! ನೀನು ನಿನ್ನ ಗೂಡನ್ನು ಬೇರೆಡೆ ಕಟ್ಟಿಕೋ, ನಾನೀಗ ನಿನ್ನ ಈ ಗೂಡಿನಲ್ಲಿ ವಾಸಮಾಡಬೇಕು. ನೀನು ನನ್ನ ಮಾತನ್ನು ಒಪ್ಪದಿದ್ದರೆ, ನನ್ನ ಕೊಕ್ಕಿನಿಂದ ನಿನ್ನನ್ನು ಮತ್ತು ನಿನ್ನ ಮರಿಗಳನ್ನು ಕುಕ್ಕಿ-ಕುಕ್ಕಿ ಸಾಯಿಸುವೆ.’

‘ಸರಿಯಪ್ಪ, ಈ ಗೂಡಿನಲ್ಲಿ ನೀನೇ ವಾಸಮಾಡು... ಆದರೆ ನನ್ನನ್ನು ಮತ್ತು ನನ್ನ ಮರಿಗಳನ್ನು ಹೊರಹೋಗಲು ಬಿಡು’ ಎಂದು ಪಕ್ಷಿ ಪ್ರಾರ್ಥಿಸಿತು.

ADVERTISEMENT

ಪಕ್ಷಿ ಹೊರಟು ಹೋದ ನಂತರ ಗೂಬೆ ಆ ಗೂಡಿನಲ್ಲಿ ಆರಾಮವಾಗಿ ಇರಲಾರಂಭಿಸಿತು. ಈ ಕ್ರಮ ನೂರಾರು ವರ್ಷಗಳವರೆಗೆ ನಡೆದುಕೊಂಡು ಹೋಯಿತು. ಪಕ್ಷಿ ಹೊಸ ಗೂಡನ್ನು ಕಟ್ಟಿದೆ ಎಂಬ ವಿಷಯ ತಿಳಿಯುತ್ತಲೇ ಗೂಬೆ ಅಲ್ಲಿಗೆ ಬಂದು, ಅದನ್ನು ಹೆದರಿಸಿ, ಓಡಿಸುತ್ತಿತ್ತು. ನಂತರ ಅದರ ಗೂಡನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಿತ್ತು.

ಅಲ್ಲಿಯೇ ಸಮೀಪದಲ್ಲಿ ಗೂಬೆಯಂಥ ದೊಡ್ಡ ಶರೀರವನ್ನು ಮತ್ತು ಪಕ್ಷಿಯಂತೆ ಚಿಕ್ಕ ಶರೀರವನ್ನು ಹೊಂದಿರದ ಮಧ್ಯಮ ಗಾತ್ರದ ನೀಲಿ ಬಣ್ಣದ ಪಕ್ಷಿಯೊಂದಿತ್ತು. ಅದು ಈ ಘಟನಾಕ್ರಮವನ್ನು ಸದಾ ನೋಡುತ್ತಿತ್ತು. ಅದಕ್ಕೆ ಇದನ್ನು ಕಂಡು ಬೇಸರದೊಂದಿಗೆ ದುಃಖವೂ ಆಯಿತು. ಅದಕ್ಕೆ ಯಾರೋ, ‘ಗೂಬೆಗೆ ಕೊಕ್ಕು ಇರುವುದಿಲ್ಲ, ಅದರ ಕಿವಿಗಳು ದೊಡ್ಡದಾಗಿದ್ದು, ಕಿವಿಗಳನ್ನು ದೂರದಿಂದ ನೋಡಿದಾಗ ಅವು ಕೊಕ್ಕಿನಂತೆ ಕಾಣುತ್ತವೆ’ ಎಂದು ಹೇಳಿದ್ದರು. ಆದರೆ ಈ ವಿಷಯ ಖಚಿತವಾಗಿರಲಿಲ್ಲ. ಹೀಗಾಗಿ ಪಕ್ಷಿ ಗೂಬೆಯನ್ನು ಪರೀಕ್ಷಿಸುವ ಧೈರ್ಯ ಮಾಡದಾಯಿತು.

ಆದರೆ, ಅದೊಂದು ದಿನ ಅದಕ್ಕೆ ಅವಕಾಶ ಲಭಿಸಿತು. ಅದು ಅಂದು ತನ್ನ ಗೂಡಿನಿಂದ ಹೊರ ಬಂದಾಗ ಎದುರಿಗೆ ಗೂಬೆ ಕೂತಿರುವುದನ್ನು ನೋಡಿತು. ಪಕ್ಷಿ ಹಿಂದು-ಮುಂದು ನೋಡದೆ ಧೈರ್ಯ ಮತ್ತು ಉದ್ಧಟತನದಿಂದ ಹಾರಿ ಬಂದು ಗೂಬೆಯ ಬೆನ್ನಿನ ಮೇಲೆ ಕೂತಿತು. ನಂತರ ಅದರ ಕಿವಿಯನ್ನು ಮುಟ್ಟಿ ನೋಡಿತು. ಕಿವಿ ಕೊಕ್ಕಿನಂತೆ ಗಡುಸಾಗಿರಲಿಲ್ಲ. ಆಗ ಅದಕ್ಕೆ, ಗೂಬೆಯ ಕಿವಿಗಳು ಮೃದುವಾಗಿರುತ್ತವೆ, ಕೊಕ್ಕಿನಂತೆ ಗಡುಸಾಗಿರುವುದಿಲ್ಲ ಎಂದು ಮನದಟ್ಟಾಯಿತು.

‘ಗೂಬೆಗೆ ಕೊಕ್ಕಿರುವುದಿಲ್ಲ, ಕಿವಿಗಳು ಮಾತ್ರ ಇರುತ್ತವೆ’ –ಎಂಬ ಸಂದೇಶವನ್ನು ಸಾರುತ್ತಾ ನೀಲಿ ಬಣ್ಣದ ಪಕ್ಷಿ ಇಡೀ ಕಾಡಿನಲ್ಲಿ ಹಾರಾಡಿತು. ಇಡೀ ಕಾಡಿನಲ್ಲಿ ಈ ಸುದ್ದಿ ಬೆಂಕಿಯ ಜ್ವಾಲೆಯಂತೆ ಹಬ್ಬಿತು.

ಕೂಡಲೇ ಎಲ್ಲಾ ಪಕ್ಷಿಗಳು ಒಂದು ಜಾಗದಲ್ಲಿ ಸೇರಿದವು. ಗೂಬೆ ಹೆದರಿ ಅಲ್ಲಿಂದ ಓಡಿ ಹೋಗಲು ಹವಣಿಸಿತು, ಆದರೆ ನೀಲಿ ಬಣ್ಣದ ಪಕ್ಷಿ ಸಂದೇಶ ಸಾರುತ್ತಾ ಅದನ್ನೂ ಹಿಂಬಾಲಿಸಿತು. ಅಂದಿನಿಂದ ಗೂಬೆ ಎಷ್ಟೇ ವಿಶಾಲ ಶರೀರವನ್ನು ಹೊಂದಿದ್ದರೂ, ಅದರ ಕೊಕ್ಕಿನ ಬಗ್ಗೆ ಯಾವ ಪಕ್ಷಿಗಳೂ ಹೆದರುವುದಿಲ್ಲ. ದುಷ್ಟ ಗೂಬೆಯ ಭಯ ಅಂದಿನಿಂದ ಕಾಡಿನಲ್ಲಿ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.