ADVERTISEMENT

ಕರ್ಕಿ ಕೃಷ್ಣಮೂರ್ತಿ, ಶ್ರೀದೇವಿ ಕೆರೆಮನೆ ಪ್ರಥಮ

2018ನೇ ಸಾಲಿನ ‘ಪ್ರಜಾವಾಣಿ’ ದೀಪಾವಳಿ ಕಥೆ, ಕವನ ಸ್ಪರ್ಧೆ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 20:00 IST
Last Updated 29 ಅಕ್ಟೋಬರ್ 2018, 20:00 IST
   

ಬೆಂಗಳೂರು: 2018ನೇ ಸಾಲಿನ ಪ್ರತಿಷ್ಠಿತ ‘ಪ್ರಜಾವಾಣಿ’ ದೀಪಾವಳಿ ಕಥಾಸ್ಪರ್ಧೆ ಮತ್ತು ಕವನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕರ್ಕಿ ಕೃಷ್ಣಮೂರ್ತಿ ಅವರ ಕಥೆ ‘ಕಾಣದ ಗೆರೆಗಳು’ ಮೊದಲ ಬಹುಮಾನಕ್ಕೆ ಪಾತ್ರವಾಗಿದೆ.

‘ಕವನ ಸ್ಪರ್ಧೆ’ ವಿಭಾಗದಲ್ಲಿ ಶ್ರೀದೇವಿ ಕೆರೆಮನೆ ಅವರ ‘ಆತ್ಮಾಹುತಿ’ ಕವನಕ್ಕೆ ಮೊದಲ ಬಹುಮಾನ ಸಂದಿದೆ. ದುಡ್ಡನಹಳ್ಳಿ ಮಂಜುನಾಥ ಅವರ ‘ಸಣ್ಣ ಸಾಲ’ ಕಥೆಗೆ ಎರಡನೆಯ ಬಹುಮಾನ, ಎಸ್. ಗಂಗಾಧರಯ್ಯ ಅವರ ‘ಕೋರು’ ಕಥೆಗೆ ಮೂರನೆಯ ಬಹುಮಾನ ದೊರೆತಿದೆ. ಗುರುಪ್ರಸಾದ್ ಕಂಟಲಗೆರೆ ಅವರ ‘ಕಪ್ಪು ಕೆಂಪು ನೀಲಿ’ ಮತ್ತು ಅನಿಲ್ ಗುನ್ನಾಪೂರ ಅವರ ‘ಗಡಿಯಾರದ ಮುಳ್ಳುಗಳು ಚುಚ್ಚುವುದಿಲ್ಲ’ ಕವನ ಸ್ಪರ್ಧೆ ವಿಭಾಗದಲ್ಲಿ ಕ್ರಮವಾಗಿ ಎರಡನೆಯ ಹಾಗೂ ಮೂರನೆಯ ಬಹುಮಾನ ಪಡೆದಿವೆ. ಬಹುಮಾನಿತ ಕಥೆ ಮತ್ತು ಕವನಗಳು ಹಾಗೂ ಮಕ್ಕಳ ವರ್ಣಚಿತ್ರಗಳು ‘ಪ್ರಜಾವಾಣಿ ದೀಪಾವಳಿ ವಿಶೇಷಾಂಕ – 2018’ರಲ್ಲಿ ಪ್ರಕಟವಾಗಿವೆ.

ಮೆಚ್ಚುಗೆ ಪಡೆದ ಕಥೆಗಳು: ಅರ್ಪಣ ಎಚ್.ಎಸ್. (ಸಾಪೇಕ್ಷತೆ), ಹರಿಯಬ್ಬೆ ರಂಗಸ್ವಾಮಿ (ಉಲಾರ), ಶೈಲಜಾ ಗೊರನಮನೆ (ಬಂಧಮುಕ್ತ), ಚೇತನ್ ಎಸ್. ಪೊನ್ನಾಚಿ (ಕೆಂಬರೆ), ಎಂ. ನಾಗರಾಜ ಶೆಟ್ಟಿ (ಕೊನೆಯ ಪ್ರಶ್ನೆ) ಅವರ ಕಥೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ. ಡಾ. ಸಬಿತಾ ಬನ್ನಾಡಿ ಮತ್ತು ಡಾ. ಬಾಳಾಸಾಹೇಬ ಲೋಕಾಪುರ ಅವರು ಕಥಾಸ್ಪರ್ಧೆಯ ತೀರ್ಪುಗಾರರಾಗಿದ್ದರು.

ADVERTISEMENT

ಮೆಚ್ಚುಗೆ ಪಡೆದ ಕವನಗಳು: ಮಂಜುನಾಥ ನಾಯ್ಕ್‌ (ಆತ್ಮ ಹೆಣದೆದುರು ಕುಳಿತಿದೆ), ರಮೇಶ ಅರೋಲಿ (ಕೂತುಂಡು ನೆನೆತೀವಿ ಬೆಳಗಿನ ಜಾವ), ಡಾ. ಪ್ರಸನ್ನ ನಂಜಾಪುರ (ಗಾಯದ ಮಳೆ), ಡಾ.ಕೆ. ಚಿನ್ನಪ್ಪಗೌಡ (ಪರವ ನನ್ನಯ – ಕುರುಡು ಹಸಿವು) ಮತ್ತು ಭುವನಾ ಹಿರೇಮಠ (ಟ್ರಯಲ್‌ ರೂಮಿನ ಅಪ್ಸರೆಯರು) ಕವನಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ. ಡಾ. ಕವಿತಾ ರೈ ಮತ್ತು ಡಾ. ಲೋಕೇಶ ಅಗಸನಕಟ್ಟೆ ಅವರು ಕವನ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಬಹುಮಾನ ಏನು?

ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಮೊದಲ ಮೂರು ಕಥೆಗಳಿಗೆ ಕ್ರಮವಾಗಿ ₹ 20 ಸಾವಿರ, ₹ 15 ಸಾವಿರ ಹಾಗೂ ₹ 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಲಭಿಸಲಿದೆ. ಕವನ ಸ್ಪರ್ಧೆ ವಿಭಾಗದ ಮೊದಲ ಮೂರು ಕವನಗಳಿಗೆ ಕ್ರಮವಾಗಿ ₹ 5,000, ₹ 3,000 ಹಾಗೂ ₹ 2,500 ನಗದು, ಪ್ರಶಸ್ತಿ ಪತ್ರ ದೊರೆಯಲಿದೆ. ಮಕ್ಕಳ ವರ್ಣಚಿತ್ರ ಸ್ಪರ್ಧೆಯ ವಿಜೇತರಿಗೆ ತಲಾ ₹ 2,500 ನಗದು, ಪ್ರಶಸ್ತಿ ಪತ್ರ ದೊರೆಯಲಿದೆ.

ಮಕ್ಕಳ ವರ್ಣಚಿತ್ರ ಸ್ಪರ್ಧೆ

ಅಭಯ್ ಎಂ.ಎಲ್. (ಶಿಗ್ಗಾವಿ), ಸುಮಯ್ (ಕುಷ್ಟಗಿ), ಹರ್ಷಿತ್ ವೈ.ಜೆ. (ಬೆಂಗಳೂರು), ಕೆ.ಜೆ. ವೈಭವಿ (ಕನಕಪುರ), ರಚನಾ ಎಸ್. (ತುಮಕೂರು), ವಿಜಯಕುಮಾರ (ಕುಷ್ಟಗಿ), ಸುರಭಿ ಎನ್. ಅರ್ಕಸಾಲಿ (ಬೆಂಗಳೂರು), ಕೆ.ಆರ್. ರಂಜಿತಾ ಭಟ್ (ಕೊಪ್ಪಳ) ಅವರ ಚಿತ್ರಗಳು ಮಕ್ಕಳ ವರ್ಣಚಿತ್ರ ಸ್ಪರ್ಧೆಯಲ್ಲಿ ಬಹುಮಾನಕ್ಕೆ ಪಾತ್ರವಾಗಿವೆ. ಹಿರಿಯ ಚಿತ್ರ ಕಲಾವಿದ ಚಿ.ಸು. ಕೃಷ್ಣ ಸೆಟ್ಟಿ ಅವರು ತೀರ್ಪುಗಾರರಾಗಿದ್ದರು.

*ಈ ಬಾರಿಯ ಸ್ಪರ್ಧೆಗೆ ಬಂದಿರುವ ಕತೆಗಳ ವಸ್ತು ವೈವಿಧ್ಯದ ಹರಹು ದೊಡ್ಡದಿದೆ. ಕತೆ ಬರೆವ ಹುಮ್ಮಸ್ಸು, ಕತೆಗಳೆಡೆಗಿನ ನಂಬಿಕೆ ಗಾಢವಾಗಿದೆ

-ಡಾ. ಸಬಿತಾ ಬನ್ನಾಡಿ

*ಲೇಖಕನಿಂದ ಬಿಡಿಸಿಕೊಂಡು ಹುಟ್ಟಬೇಕು ಎನ್ನುವುದು ಅಪೇಕ್ಷೆ. ಆದರೆ, ಇವುಗಳು ಕತೆಗಾರರಿಂದ ರಚಿತಗೊಂಡು ಒಂದು ಬಗೆಯ ಕಟ್ಟಿದ ಕತೆಗಳಾಗಿವೆ ಎನ್ನಿಸಿತು

-ಡಾ. ಬಾಳಾಸಾಹೇಬ ಲೋಕಾಪುರ

*ವರ್ತಮಾನದ ಸಮಾಜದಲ್ಲಿ ಎದುರುಗೊಳ್ಳಬೇಕಾದ ಹಲವು ಮಿಶ್ರವಾಸ್ತವಗಳಿಗೆ ಮುಖಾಮುಖಿಗೊಂಡಂತೆ ರಚನೆಗೊಂಡ ಕವನಗಳಿವು

-ಡಾ. ಕವಿತಾ ರೈ

*ಯುವಕರೆಂಬುದು, ಪ್ರಸಿದ್ಧರೆಂಬುದು ಹೊರಗಿನ ಮಾತು. ಕವಿಯ ಹೆಸರಿಲ್ಲದೆ ಕವಿತೆಗಳಲ್ಲಿ ಅವನ ಗುರುತಾಗುವುದು ಕವಿತೆಯ ಅಭಿವ್ಯಕ್ತಿಯಿಂದಲೇ

-ಡಾ. ಲೋಕೇಶ ಅಗಸನಕಟ್ಟೆ

*ಮಕ್ಕಳ ವರ್ಣಚಿತ್ರ ಸ್ಪರ್ಧೆಗೆ ಬಂದ ಹೆಚ್ಚಿನ ಕೃತಿಗಳು ನಿಸರ್ಗ ಕೇಂದ್ರಿತ ಎಂದರೆ ತಪ್ಪಿಲ್ಲ. ನಿಸರ್ಗದ ಸಮಸ್ಯೆಗಳಿಗೆ ಮಕ್ಕಳು ತಮ್ಮದೇ ರೀತಿಯಲ್ಲಿ ಪರಿಹಾರ ಸೂಚಿಸುವುದು ನಿಜಕ್ಕೂ ಕುತೂಹಲಕಾರಿ

-ಚಿ.ಸು. ಕೃಷ್ಣ ಸೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.