ಪ್ರಸಾದ ಶೆಣೈ ಆರ್ ಕೆ
ನಿಚ್ಚು, ವಾಲಿಕುಂಜ ಬೆಟ್ಟದ ಕೆಳಗಿರುವ ಚಿಂಕರಮಲೆಯ ಕುದುರೆ ಏರು ದಾಟಿ, ದಟ್ಟ ಹಗಲಲ್ಲೂ ಗಾಢಾಂಧಕಾರ ತುಂಬಿದ ಸುರಂಗದಂತೆ ಕಾಣುತ್ತಿದ್ದ ವಾಟೆಹಳ್ಳದ ಹತ್ತಿರತ್ತಿರ ಬಂದಾಗ ಮಳೆ ರೊಯ್ಯೋ ಎಂದು ಸುರಿಯತೊಡಗಿತು. ಹಳ್ಳಕ್ಕೆ ಹಾಕಿದ್ದ ಅಡಿಕೆದಬ್ಬೆಯ ಕಾಲುಸಂಕ ಇನ್ನೊಂದೆರಡು ಗಂಟೆ ಗಟ್ಟಿ ಮಳೆ ಹೊಡೆದರೆ ಪೂರ್ತಿ ಮುಳುಗಲಿತ್ತು.
ಹಳ್ಳ ಒಂದೇ ಸಲಕ್ಕೆ ಉದ್ವೇಗಗೊಂಡು ಬೊಬ್ಬೆ ರಾವಣನಂತೆ ಕಾಡು ತುಂಬಾ ಕಿರುಚುತ್ತಾ ಒತ್ತೊತ್ತಾಗಿ ಪರ್ವತದಂತೆ ನಿಂತಿದ್ದ ಮರಗಳಿಗೆ ಬಡಿದುಕೊಳ್ಳುತ್ತ, ಕಾಡಿನ ಮಣ್ಣೆಲ್ಲವನ್ನು ತೊಳೆದುಕೊಂಡು ಗಾಢ ಕೆಂಪಗಾಗಿ ರಭಸದಿಂದ ಭೋರ್ಗರೆಯುತ್ತಲೇ ಇದ್ದವು.
ಕಂಬಳಿಕೊಪ್ಪೆಯನ್ನು ತಲೆಯಿಂದ ಪಾದದಂಚಿನವರೆಗೂ ಹಾಕಿಕೊಂಡು ಸುಟ ಸುಟ ಹೆಜ್ಜೆ ಹಾಕುತ್ತ ವಾಟೆಹಳ್ಳವನ್ನೊಮ್ಮೆ ನೋಡುತ್ತ ನಿಂತ ನಿಚ್ಚು, ಹಳ್ಳದ ಮಗ್ಗುಲಲ್ಲಿದ್ದ ಕಲ್ಲುಗಳ ಸಂದಿಯಲ್ಲಿ, ನೀರೊಳಗೆ ಬಳ್ಳಿ, ಬಿಳಲು ಚಾಚಿ ಗುಳ್ಳೆ ಎಬ್ಬಿಸುತ್ತಿದ್ದ ಜಾಗದಲ್ಲಿ ಖಂಡಿತ ಐದಾರು ಏಡಿಯಾದರೂ ಸಿಕ್ಕೇ ಸಿಗುತ್ತೆಂದು ಕಣ್ಣಲ್ಲೇ ಖಂಡಿತ ಮಾಡಿಬಿಟ್ಟ. ಪೇಟೆಯಿಂದ ವಾಪಾಸ್ಸು ಬರುವಾಗ ಹಳ್ಳೇಡಿ ಹಿಡ್ಕೊಂಡೇ ಹೋಗುದು ಎಂದು ನಿರ್ಧರಿಸಿದ. ತನ್ನೊಡತಿ ಸೇಸಿ ಕೈಯ ಏಡಿ ಗಸಿ ತಿನ್ನುವ ಆಸೆಯಿಂದ ನಿಚ್ಚುವಿನ ಬಾಯಲ್ಲಿ ಮಳೆ ಜಿನುಗಿದಂತೆ ನೀರು ಒಸರಿತು.
ವಾಟೆಹಳ್ಳದ ಕಾಲುಸಂಕ ಇಳಿದು ತಾನು ಹಿಡಿದಿದ್ದ ಕಲ್ಲಲಾಂಬು ಗೋಳಿಚೀಲದೊಳಗೇನಾದರೂ ಮಳೆ ನೀರು ಹೋಗಿದೆಯಾ ಎಂದು ತಧೇಕಚಿತ್ತನಾಗಿ ಪರೀಕ್ಷಿಸಿದ. ಕಲ್ಲಲಾಂಬುಗಳು ಗೋಣಿಚೀಲದ ಒಳಗೆ ಬೆಚ್ಚಗೆ ಕೂತಿತ್ತು.
ವಾಟೆಹಳ್ಳದ ಕಾಡಿನ ಮರದ ತರಗೆಲೆಗಳು ಕೊಳೆಯುವಾಗಿನ, ಕಾಡಿನ ನೀಲಿ ಹೂವುಗಳು ಗಾಳಿಯಲ್ಲಿ ತೇಲುವಾಗಿನ, ಹಳ್ಳದ ಮಣ್ಣು ಕೊಚ್ಚಿ ಹೋಗುವಾಗಿನ ಘಮ ಇವೆಲ್ಲವೂ ನಿಚ್ಚು, ಕಲ್ಲಲಾಂಬು ಚೀಲವನ್ನು ನೋಡುವಾಗ ಒಂದೇ ಸಮನೆ ಸುತ್ತಲೂ ತುಂಬಿತ್ತಾದರೂ, ಆ ಮಳೆಯಲ್ಲೂ ಗೋಣಿಚೀಲದೊಳಗಿದ್ದ ಕಲ್ಲಲಾಂಬುಗಳ ದೈವಿಕ ಪರಿಮಳಕ್ಕೆ ನಿಚ್ಚುವೇ ಆಹ್ಲಾದಪಟ್ಟನು. ನಿನ್ನೆಗಿಂತಲೂ ಇವತ್ತು ಜಾಸ್ತಿ ಕಲ್ಲಣಬೆ ಸಿಕ್ಕಿದ್ದಕ್ಕೆ, ನಿನ್ನೆ ಅರ್ಧ ಗೋಣಿಯಷ್ಟೇ ಇದ್ದ ಲಾಂಬು, ಇವತ್ತು ಪೂರ್ತಿ ತುಂಬಿದುದಕ್ಕೆ ತನ್ನೊಳಗೇ ರಾಶಿ ಖುಷಿ ಪಟ್ಟನು. ಇವತ್ತು ಅಂಗಡಿ ಕಾಮತಿಯವರು “ಒಳ್ಳೆ ಲಾಂಬು ತಂದಿದ್ದಿ ಮಾರಾಯ ಅಂತ ಖುಷಿಯಾಗಿ ಭಾರೀ ದುಡ್ಡೇ ಕೊಡ್ತಾರೆ” ಎಂದು ನಿಚ್ಚುವಿನ ಕಪ್ಪಗಿನ ಮೋರೆಯಲ್ಲೊಂದು ಖುಷಿಯ ತೊರೆ ಉಕ್ಕಿತು. ಅವನು ಹಾಗೆ ಖುಷಿಗೊಂಡು ಚೂರು ನಕ್ಕಾಗ, ಅವನ ಕವಳ ಹಾಕಿದ್ದ ಬಾಯಿ, ವಕ್ರವಕ್ರವಾಗಿದ್ದ ಅವನ ಹಲ್ಲು, ತುಟಿ, ಎಲ್ಲವೂ ಕೆಂಪಗೆ ಹೊಳೆದು ಅವನು ಕೋಡಂಗಿ ವೇಷದವನಂತೆ ಹ್ಯಾಸ್ಯಾಸ್ಪದವಾಗಿ ಕಾಣುತ್ತಿದ್ದ.
ಕಾಮತರ ಅಂಗಡಿಗೆ ಒಮ್ಮೆ ಕಲ್ಲಲಾಂಬು ಕೊಟ್ಟಾಗ, ಸಿಗುವ ಹಣವನ್ನು ಕಣ್ಣೆದುರು ತಂದುಕೊಳ್ಳುತ್ತ ಬೇಗಬೇಗನೇ ನಡೆದ.
ಚಿಕ್ಕವನಿರುವಾಗ ಅಜ್ಜನಿಂದ, ಸ್ವಲ್ಪ ದೊಡ್ಡದವನಾದ ಮೇಲೆ ಅಪ್ಪನಿಂದ, ಅದಕ್ಕಿಂತಲೂ ಹೆಚ್ಚಾಗಿ ಅಮ್ಮ ಕೊರತಿಯಿಂದ, ಯಾವ ಯಾವ ಕಾಡಲ್ಲಿ ಕಲ್ಲಣಬೆ ಸಿಗುತ್ತದೆ, ಮುತ್ತಿನಂತಿರುವ ಆ ಅಣಬೆ ಕಾಡಲ್ಲಿ ಭಾರೀ ಸಿಡಿಲು ಹೊಡೆದಾಗ ಹೇಗೆ ನೆಲದೊಳಗಿಂದ ಚೂರೇ ಚೂರು ಮೇಲಕ್ಕೇಳುತ್ತದೆ, ಅದು ಮೇಲಕ್ಕೆದ್ದಿರುವುದನ್ನು ಗುರುತಿಸಲಾಗದಿದ್ದರೆ ಹೇಗೆ ಮಣ್ಣನ್ನು ಮೀಟಿ ಅಣಬೆ ಹುಡುಕುವುದು. ಯಾವ ಮಣ್ಣಲ್ಲಿ ಕಲ್ಲಣಬೆ ಜಾಸ್ತಿ ಸಿಗುತ್ತದೆ, ಎಂದೆಲ್ಲಾ ಪರಿಶೀಲಿಸುವ, ಹುಡುಕುವ, ಮಣ್ಣಲ್ಲಿ ಸಿಕ್ಕಿದ್ದ ಕಲ್ಲಣಬೆಗಳನ್ನು ತುಂಡಾಗದಂತೆ ಪುಟ್ಟ ಪುಟ್ಟ ಮೊಟ್ಟೆಗಳಂತೆ ಬುಟ್ಟಿಯಲ್ಲಿ ಸಂಗ್ರಹಿಸುವ ಸೂಕ್ಷ್ಮತೆಗಳನ್ನು ನಿಚ್ಚು ಠಾಕುಠೀಕಾಗಿ ಕಲಿತ್ತಿದ್ದ.
ಮೇ ತಿಂಗಳ ಕೊನೆಯಲ್ಲಿ, ಚಿಂಕರಮಲೆ ಕಾಡಿನಲ್ಲಿ ಸಿಡಿಲು, ಮಿಂಚು, ಮಳೆ ಸಣ್ಣಗೇ ಹೊಡೆಯತೊಡಗಿದ್ದೇ ಪ್ರಕೃತಿ ಮಾತೆಯ ಮುಡಿಯ ಮುತ್ತೆನ್ನುವಂತೆ ಕಲ್ಲಲಾಂಬುಗಳು ಭೂಮಿಯ ಒಡಲಲ್ಲಿ ಹುಟ್ಟಿಕೊಳ್ಳುತ್ತಿತ್ತು. ಜೂನ್ ಬಂದದ್ದೇ ಕಲ್ಲಲಾಂಬುಗಳು ತಮ್ಮ ಬಿಳಿಯ ಮಂಡೆಯನ್ನು ಅಲ್ಲೆಲ್ಲೋ ಹುಲ್ಲಿನ ಮರೆಯಲ್ಲಿ, ಧಾಳಾಗಿದ್ದ ಪೊದೆಗಳ ನಡುವೆ ಕಾಣಿಸುತ್ತಿದ್ದವು. ಅವುಗಳನ್ನು ಗುರುತಿಸಿ ನೆಲದೊಳಗಿಂದ ತೆಗೆಯುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲವಾದರೂ ನಿಚ್ಚುವಿಗೆ ಆ ಕೆಲಸ ಲೀಲಾಜಾಲವಾಗಿತ್ತು. ಆ ಪುಟ್ಟ ಪುಟ್ಟ ಕಲ್ಲಲಾಂಬುಗಳನ್ನು ಹುಡುಕುವುದೆಂದರೆ ನಿಚ್ಚುಗೆ ಯೌವ್ವನದಲ್ಲಿ ಕಾಡಿನಲ್ಲಿ ಕನ್ಯೆಯರನ್ನು ಹುಡುಕಿ, ಅವರ ನಿಗೂಢ ಸೌಂದರ್ಯವನ್ನು ಮೊಗೆದು ತೆಗೆದಷ್ಟೇ ಪುಳಕ ಕೊಡುತ್ತಿತ್ತು. ಹಾಗೆ ಪ್ರತೀ ಮಳೆಗಾಲದಲ್ಲೂ ತನ್ನೊಳಗೆ ಘೋರ ಯೌವ್ವನ ತುಂಬಿದಂತೆ ಕಲ್ಲಲಾಂಬುಗಳನ್ನು ಹುಡುಕುತ್ತ, ಅವುಗಳನ್ನು ಗೋಣಿಚೀಲಗಳಲ್ಲಿ ತುಂಬಿಕೊಂಡು ಕುಚ್ಚೂರು ಪೇಟೆ ಶಿನ್ನು ಕಾಮತರ ಅಂಗಡಿಗೆ ಮಾರುತ್ತಿದ್ದ ನಿಚ್ಚು.
ತನ್ನೊಳಗಿನ ಯೌವ್ವನ ಒಂದಷ್ಟು ಕರಗಿ ತಾನೀಗ ನಲುವತ್ತರ ಸನಿಹದಲ್ಲಿರುವ ಗಟ್ಟಿ ಗಂಡಸು ಎನ್ನುವ ಪ್ರಜ್ಞೆ ಬರದಂತೆ ಈ ಕಲ್ಲಲಾಂಬುಗಳು, ಚಿಂಕರಮಲೆಯ ನಿಗೂಢ ಕಾಡು, ವಾಟೆ ಹಳ್ಳದ ಏಡಿಗಳು, ಕುದುರೆಏರಿನ ಬಿದಿರು ಹಿಂಡಲುಗಳು, ಯಾವಾಗಲೂ ಹೆಣೆಯುತ್ತಿದ್ದ ಬಿದಿರ ಬುಟ್ಟಿ, ಮರಿಗೆಗಳು ಅವನನ್ನು ಯೌವ್ವನ್ನಸ್ಥನನ್ನಾಗಿಯೇ ಇಟ್ಟಿದ್ದವು.
ನಿಚ್ಚುವಿಗೆ ಹುಟ್ಟುತ್ತಲೇ ಕಿವಿ ಸ್ವಲ್ಪ ಮಂದವಾಗಿದ್ದರೂ ಚಿಂಕರಮಲೆಯಲ್ಲಿ ಮಳೆ ಹೊಡೆಯುವ ಮೊದಲು ದೂರದ ಘಟ್ಟದಲ್ಲಿ ಸಣ್ಣಗೇ ಬೀಸುವ ಗಾಳಿ ಸದ್ದು, ಬೇಸಿಗೆ ಗಾಳಿಗೆ ಮನೆ ಮಾಡಿನ ಆಚೆಗೆಲ್ಲೋ ಬೀಳುವ ಕಾಡು ಮಾವಿನ ಗೊಂಚಲು, ಕೊಕ್ ಕೊಕ್ ಎಂದು ಇರುಳಿನಲ್ಲಿ ಕಾಡಿನೊಳಗೆ ಮರೆಯಾಗುವ ಹುಂಡುಕೋಳಿಯ ಸದ್ದುಗಳೆಲ್ಲಾ ಅವನಿಗೆ ಕೇಳಿಸಿಯೇ ಕೇಳಿಸುತ್ತಿದ್ದವು. ಅವುಗಳು ಅವನನ್ನೇ ಕರೆದಂತನ್ನಿಸಿ ಆ ಸದ್ದಿಗೆಲ್ಲಾ ಅವನು ಅವನದ್ದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದ. ಆದರೆ ಮಳೆಗಾಲಕ್ಕೆ ಮೊರೆಯುವ ಗುಡುಗು ಸಿಡಿಲಿನ ಸದ್ದು ಕೇಳಿದಾಗ ಮಾತ್ರ ಅವನು ಹುಚ್ಚನಂತೆ ಕುಣಿದುಕುಪ್ಪಳಿಸುತ್ತಿದ್ದ. ಆ ಸಿಡಿಲಿಗೆ ಕಾಡೊಳಗೆ ಇನ್ನೇನು ಹುಟ್ಟಲಿದ್ದ ಕಲ್ಲಲಾಂಬುಗಳು ತನ್ನೊಳಗೇ ಚಿಗುರಿಕೊಂಡಂತಾಗುತ್ತಿತ್ತು ಅವನಿಗೆ. ನೂರಾರು ಬುಟ್ಟಿ ಕಲ್ಲಲಾಂಬುಗಳು ಅವನಿಗೆ ಆ ಸಿಡಿಲಿನ ಹಿನ್ನೆಲೆಯಲ್ಲಿ ಕುಣಿದಂತಾಗುತ್ತಿದ್ದವು.
ಪ್ರತೀ ಮಳೆಗಾಲದಲ್ಲೂ ಚಿಂಕರಮಲೆಯೊಳಗಿದ್ದ, ಮುಂಡಾಣಿ ಗುಡ್ಡ, ಅರ್ಬಿಮಲೆಯ ಮೂಲೆ ಮೂಲೆಗೂ ಹೊಕ್ಕಿ, ಕಲ್ಲಲಾಂಬು ಹುಡುಕಿ, ಗೋಣಿ ಚೀಲದ ತುಂಬಾ ತುಂಬಿ ಅವನ್ನು ಕುಚ್ಚೂರು ಪೇಟೆಗೊಯ್ದು ಮಾರಿ, ಬರುವ ಒಂದಷ್ಟು ದುಡ್ಡಲ್ಲಿ ಮನೆಗೆ ಬೇಕಾದ ಸಾಮಾನೋ, ಅವನೊಡತಿ, ಸೇಸಿಗೆ ಇಷ್ಟ ಅಂತ ಶುಂಠಿ ಬೆಲ್ಲದ ಮಿಠಾಯಿಯನ್ನೋ ತರುವುದು, ಅವನು ಪ್ರೀತಿಯಿಂದ ತಂದ ಮಿಠಾಯಿಗೆ ಪ್ರತಿಯಾಗಿ ಸೇಸಿ ಗಟ್ಟಿ ತಬ್ಬಿಕೊಂಡು ಮಿಠಾಯಿ ತಿಂದ ಚೆಂದುಟಿಯನ್ನು ನಿಚ್ಚುವಿನ ತುಟಿಗಳಿಗೆ ಒತ್ತುವುದು ಇವೆಲ್ಲವೂ ಕಲ್ಲಲಾಂಬುವಿನ ದೆಸೆಯಿಂದ ನಿಚ್ಚುವಿಗೆ ಸಿಗುತ್ತಿದ್ದ ಮಳೆಗಾಲದ ಅಮೃತ ಘಳಿಗೆಗಳಾಗಿತ್ತು.
ಆಗಾಗ ಒಮ್ಮೆ ಜೋರಾಗಿ, ಮತ್ತೊಮ್ಮೆ ಸಣ್ಣದಾಗಿ ಸುರಿಯುತ್ತಿದ್ದ ಮಳೆಗೆ ತಾನು ಒದ್ದೆಯಾಗದಂತೆ ಕಂಬಳಿಕೊಪ್ಪೆಯನ್ನು ಜಾರದಂತೆ ಎತ್ತಿಕಟ್ಟುತ್ತಾ, ಅಣಬೆಯ ಗೋಣಿಯನ್ನು ಕಂಬಳಿಕೊಪ್ಪೆಯೊಳಗೆ ಪೂರ್ತಿ ಒದ್ದೆಯಾಗದಂತೆ ಮರೆಮಾಚುತ್ತ, ನಡೆದು ನಡೆದು ಏಕತಾನತೆ ಆವರಿಸದಂತೆ ಲುಂಗಿಯ ಮರೆಯಲ್ಲೆಲ್ಲೋ ಸಿಕ್ಕಿಸಿದ್ದ ಎಲೆ ಅಡಿಕೆಯನ್ನು ಬಾಯಿಗೆ ಹಾಕಿಕೊಳ್ಳತ್ತ ನಿಚ್ಚು, ಭಾರೀಮಲೆ ದಾಟಿ ಕುಚ್ಚೂರು ಪೇಟೆಯ ಹಾದಿ ಹಿಡಿದ.
ಮಳೆ ಕಡಿಮೆಯಾಗಿ ಈಗ ಜಿಟಿ ಜಿಟಿ ಎಂದಷ್ಟೇ ತೊಟ್ಟಿಕ್ಕುತ್ತಿದ್ದವು. ಕಾಡುದಾರಿಗಳನ್ನೆಲ್ಲಾ ದಾಟಿ, ಸುರಿದ ಮಳೆಗೆ ತೆಪ್ಪಗೇ ಕೂತಿದ್ದ ಕುಚ್ಚೂರು ಪೇಟೆಯ ರಸ್ತೆಗೆ ಬಂದದ್ದೇ, ಅಲ್ಲೇ ರಸ್ತೆ ಪಕ್ಕದ ಅಂಗಡಿಯ ದಿನಸಿ ವ್ಯಾಪಾರಿ ಮಾಧವೇಂದ್ರರು, “ನಿಚ್ಚು ಎಂತದಾ ಅದು ಬುಟ್ಟಿಯಲ್ಲಿ? ಕಲ್ಲಲಾಂಬು ಏನಾದ್ರೂ ತಂದಿದ್ಯನಾ?”ಎಂದು ನಗುತ್ತ ಕೇಳಿದರು.
ನಿಚ್ಚುವಿನ ಏಕಾಂತಕ್ಕೆ ಅವರ ಮಾತಿಂದ ಭಂಗವಾದಂತಾಗಿ, ಕವಳ ಹಾಕಿದ್ದ ಬಾಯನ್ನು ತೆರೆಯದೇ, ಕಂಬಳಿ ಕೊಪ್ಪೆಯ ಕಾಲೊಳಗೆ ಗೋಣಿಯನ್ನು ಮರೆಮಾಚುತ್ತ ಅವರತ್ತ ಚೂರೂ ದೃಷ್ಟಿ ಹಾಯಿಸದೇ, “ಇಲ್ಲೇ ನಿಂತ್ರೆ ಈ ಮನುಷ್ಯ ಲಾಂಬು ಕಸಿದೇ ಬಿಡ್ತಾನೆ” ಎಂದು ಸೀದಾ ಅಲ್ಲಿಂದ ತರಕಾರಿ ವ್ಯಾಪಾರಿ ಕಾಮತಿಯ ಅಂಗಡಿಯತ್ತ ವೇಗದಿಂದ ಹೊರಟೇಬಿಟ್ಟ ನಿಚ್ಚು. ಮೊದಮೊದಲು ಇದೇ ಮಾಧವೇಂದ್ರರು “ನಿಚ್ಚು, ನಿನ್ ಕಾಡಿಂದ ಕಲ್ಲಲಾಂಬು ತಾರಾ ಸ್ವಲ್ಪ” ಎಂದು ನಿಚ್ಚುವಿನಲ್ಲಿ ಹೇಳುವುದಿತ್ತು. ನಿಚ್ಚು, ಐದಾರು ಸೇರು ಕಲ್ಲಲಾಂಬು ತಂದೂ ಕೊಟ್ಟಿದ್ದ. ಲಾಂಬು ಕೊಟ್ಟರೆ ಮಾಧವೇಂದ್ರರು ಏನಾದ್ರೂ ಕೊಟ್ಟೇ ಕೊಡ್ತಾರೆ ಎಂದು ನಿಚ್ಚು ಆಸೆಪಟ್ಟಿದ್ದೇ ಬಂತು. ಅವರು ಆಸೆತುಂಬಿದ ಕಣ್ಣುಗಳಿಂದ ನಿಚ್ಚುವಿನಿಂದ ಕಲ್ಲಲಾಂಬುವನ್ನು ಅವನು ತಂದಿದ್ದ ಗೋಣಿ ಚೀಲದಿಂದ ತನ್ನ ಪಾತ್ರೆಗೆ ಸುರಿದುಕೊಂಡು, ನಿಚ್ಚುವಿಗೆ ಕನಿಷ್ಠ ಪಕ್ಷ ಒಂದು ಮೆಚ್ಚುಗೆಯನ್ನೂ ಸೂಚಿಸದೇ, ತಗೋ ನಿಚ್ಚು ಎಂದು ಕೊಟ್ಟ ಅಣಬೆಗೆ ಪ್ರತಿಯಾಗಿ ಏನನ್ನೂ ಕೊಡದೇ ಇದ್ದುದು, ನಿಚ್ಚುವಿನ ಆಸೆಕಣ್ಣುಗಳಲ್ಲಿ ತುಂಬಿಸಿದ್ದ ನಿರಾಶೆ ಅಷ್ಟಿಷ್ಟಲ್ಲ. ತಾನಾಗಿಯೇ, ಏನಾದ್ರೂ ಕೊಡಿ ಧಣಿಗಳೇ ಎಂದು ಕೇಳಲು ನಿಚ್ಚುವಿಗೆ ಬಾಯಿ ಮುಂದೆ ಬರಲೇ ಇಲ್ಲ. ಇದೇ ಅಣಬೆಯನ್ನು ತರಕಾರಿ ಅಂಗಡಿಗಾದ್ರೂ ಕೊಟ್ಟಿದ್ರೆ ಒಳ್ಳೆ ಹಣ ಆದ್ರೂ ಸಿಗುತ್ತಿತ್ತು ಎನ್ನುವ ಬೇಸರದಲ್ಲಿಯೇ ಆವತ್ತು ಚಿಂಕರಮಲೆಯ ಹಾದಿ ಹಿಡಿದಿದ್ದ ನಿಚ್ಚು.
ಅವನು ಶಿನ್ನು ಕಾಮತರ ಅಂಗಡಿ ತಲುಪಿದವನೇ ಅಲ್ಲೇ ಇದ್ದ ಅಂಗಡಿ ಕಟ್ಟೆಯ ಕೆಳಗಿದ್ದ ಕಲ್ಲಚಪ್ಪಡಿಯ ಮೇಲೆ ದೊಬ್ ಎಂದು ಕೂತುಬಿಟ್ಟ. ಹಾಗೆ ಕೂತಾಗ ಅವನ ಕಂಬಳಿಕೊಪ್ಪೆಯ ಮೇಲೆ ನೆರೆದಿದ್ದ ಮಳೆ ಹನಿಗಳೆಲ್ಲವೂ ದೊಪ್ ಎಂದು ನೆಲಕ್ಕೆ ಬಿದ್ದುವು. ಮತ್ತೆ ಎದ್ದು ಕಂಬಳಿ ಕೊಪ್ಪೆಯನ್ನು ತೆಗೆದು, ಅಣಬೆ ಗೋಣಿಯನ್ನು ಜೋಪಾನವಾಗಿ ಅಲ್ಲೇ ಕಟ್ಟೆಯ ಮೇಲಿಟ್ಟ. ಉದ್ದಕ್ಕೆ ಜೊಂಡು ಹುಲ್ಲಿನಂತೆ ಬೆಳೆದಿದ್ದ ಅವನ ಕೇಶರಾಶಿಯ ಮೇಲೂ ಒಂದೆರಡು ಮಳೆ ಹನಿಗಳು ಮುಂಜಾನೆ ಹುಲ್ಲ ಮೇಲೆ ಮಿನುಗುತ್ತ ಕೂರುವ ಇಬ್ಬನಿಗಳಂತೆ ಕಂಡವು. ಅದುವರೆಗೆ ಕಂಬಳಿಕೊಪ್ಪೆಯ ಮರೆಯಲ್ಲಿ ತನ್ನ ಅಸ್ತಿತ್ವವನ್ನೇ ಮರೆತಿದ್ದ ಅವನ ಕಂದುಬಣ್ಣದ ಅರ್ಧ ಲುಂಗಿ, ಮೈಗೆ ಸುತ್ತಿದ್ದ ಹಳೆಯ ಅಂಗಿ, ಕಂಬಳಕೊಪ್ಪೆ ತೆಗೆದದ್ದೇ, ಆಗಷ್ಟೇ ತಮಗೆ ಬೆಳಗಾಯಿತು ಎಂದು ಎದ್ದವರಂತೆ ಕಂಡವು. ಅವು ಮಳೆ ನೀರಿನಲ್ಲಿ ಸ್ವಲ್ಪ ಒದ್ದೆಯಾದ್ದರಿಂದ, ನಿಚ್ಚುವಿನ ಮೈಗೆ ಇನ್ನಷ್ಟು ಅಂಟಿಕೊಂಡು ಅವನ ಕಪ್ಪಗಿನ ಸದೃಢ ಮೈಕಟ್ಟನ್ನು ಸಾಂದ್ರವಾಗಿ ಎದ್ದು ಕಾಣಿಸಿದವು. ಕಾಮತರು ಮೊದಲ ಸಲ ನೋಡುವ ಹಾಗೆ ಅವನ ಮೈಕಟ್ಟನ್ನುಅಚ್ಚರಿಯಿಂದ ನೋಡಿದರು.
ನಿಚ್ಚು, ಕಟ್ಟೆ ಮೇಲಿಟ್ಟಿದ್ದ ಅಣಬೆ ಗೋಣಿಯನ್ನು ಬಿಚ್ಚತೊಡಗಿದ.
“ಏ ನೋಡಾ, ನಿಚ್ಚು, ನೀ ಹೋದ ಸರ್ತಿ ಕೊಟ್ಟಿದ್ದ ಲಾಂಬುಗಳಲ್ಲಿ ಪೊಟ್ಟು ಲಾಂಬುಗಳೇ ತುಂಬಾ ಇತ್ತು ಮಾರಾಯ, ಕೆಲವು ಲಾಂಬುಗಳು ಒಳಗಡೆ ಪೂರಾ ಕಪ್ಪಾಗಿತ್ತು”ಎಂದು ಕಾಮತರು ನಿಚ್ಚು, ಲಾಂಬು ಗೋಣಿ ಬಿಚ್ಚುವುದನ್ನು ನೋಡುತ್ತಾ ಸುಳ್ಳು ಸುಳ್ಳೇ ಹೇಳಿದರು.
ನಿಚ್ಚು, ಗೋಣಿಚೀಲವನ್ನು ಬಿಚ್ಚಿ, “ನೋಡಿ ಧಣಿ, ಈ ಸರ್ತಿ ಹೇಗುಂಟು ನೋಡಿ” ಎಂದು ಗೋಣಿ ಒಳಗಿದ್ದ ಕಲ್ಲಲ್ಲಾಂಬು ರಾಶಿಯನ್ನು ಕಾಮತರ ಎದುರು ತಂದು ಗಲ ಗಲ ಅಲ್ಲಾಡಿಸಿದ. ಅಚ್ಚಬಿಳಿಯ ಆಕಾಶದಲ್ಲಿ ಕೆಂಪು ಮೋಡಗಳು ಮುತ್ತಿಕೊಂಡಂತೆ ಒಂದಷ್ಟು ಬಿಳಿಯ ಲಾಂಬುಗಳಿಗೆ ಮಣ್ಣು ಮೆತ್ತಿಕೊಂಡಿತ್ತು. ಇವತ್ತು ಬೆಳಗ್ಗಷ್ಟೇ ಹೆಕ್ಕಿದ ಲಾಂಬಿದು ಎಂದು ಅಣಬೆಗಂಟಿದ್ದ ಆ ಸಾರವತ್ತಾದ ಮಣ್ಣೇ ಸಾಕ್ಷಿ ಹೇಳುವಂತೆ ಗೋಣಿಯೊಳಗೆ ಕಲ್ಲಲ್ಲಾಂಬುಗಳು ಸುಖದಿಂದ ಕೂತಿದ್ದವು. ಅಣಬೆಯ ಸಾವಯವ ಪರಿಮಳದ ಜೊತೆಜೊತೆಗೆ ಚಿಂಕರಮಲೆ ಕಾಡಿನ ಮಣ್ಣಿಗಷ್ಟೇ ಇರಬಹದಾದ ಮಣ್ಣಿನ ಚುಂಬಕ ಪರಿಮಳವೆಲ್ಲವೂ ಆ ಗೋಣಿಚೀಲದೊಳಗೇ ಸೇರಿಕೊಂಡುಬಿಟ್ಟಿದೇನೋ ಅನ್ನಿಸಿ ಆ ಲಾಂಬುಗಳೆಲ್ಲಾ ಸ್ವರ್ಗದ ತುಣುಕುಗಳಂತೆ ಕಾಣುತ್ತಿದ್ದವು.
“ಆಹಾ ಭಾರೀ ಫ್ರೆಶ್ ಲಾಂಬು, ಎಂದು ತನ್ನೊಳಗೊಂದು ಉದ್ಗಾರ ತೆಗೆದು “ಆದಷ್ಟು ಕಮ್ಮಿ ರೇಟು ಕೊಟ್ಟು ಇವನನ್ನ ಸಾಗ ಹಾಕ್ಬೇಕು” ಎಂದು ಕಾಮತರು ವ್ಯಾಪಾರಿ ಬುದ್ದಿಯಲ್ಲಿ ಯೋಚಿಸುತ್ತ ಕನ್ನಡಕವನ್ನು ಮೂಗಿಗೊತ್ತಿಕೊಳ್ಳುತ್ತ ನಾಟಕೀಯವಾಗಿ ನಿಚ್ಚುನೆದುರು ‘‘ಸಾಧಾರಣವಾಗಿದೆ”ಎನ್ನುವಂತೆ ತಲೆ ಅಲ್ಲಾಡಿಸಿದರು.
ಕಾರ್ಕಳ, ಕಾಡುಹೊಳೆ, ಕುಚ್ಚೂರು, ಪೆರ್ಡೂರು, ಅಜೆಕಾರು, ಹೆಬ್ರಿ, ಸೋಮೇಶ್ವರ ಮೊದಲಾದ ಪೇಟೆ ಊರುಗಳ ಜನರಿಗೆ ಕಲ್ಲಲಾಂಬು ಎಂದರೆ ಜೀವ. ಪುಟ್ಟ ಮೊಟ್ಟೆಯಂತೆ ದುಂಡಗಿರುವ ಕಲ್ಲಂಲಾಂಬಿನ ಸಿಪ್ಪೆ ತೆಗೆದರೆ ಒಳಗಿರುವ ಮೃದುವಾದ ತಿರುಳಿನ ಗಸಿ, ಸುಕ್ಕ, ಸಾರು ಮಾಡಿ ನೀರುದೋಸೆಯ ಜೊತೆಗೆ ತಿನ್ನುವ ಸಂಪ್ರದಾಯ ಎಷ್ಟೋ ಮಳೆಗಾಲಗಳಿಂದ ಇಲ್ಲಿ ಚಾಲ್ತಿಯಲ್ಲಿತ್ತು. ಇಲ್ಲಿನ ಜನಗಳಿಗೆ ಮಳೆಗಾಲಕ್ಕೆ ಮೀನು ಏಡಿ ಸಿಗದಿದ್ದರೂ ಚಿಂತೆಯಿಲ್ಲ. ಆದರೆ ಕಲ್ಲಲಾಂಬು ಮಳೆಗಾಲದಲ್ಲಿ ಸಿಗಲೇಬೇಕಿತ್ತು.
ಮೇ ತಿಂಗಳು ಶುರುವಾದದ್ದೇ ಊರಿನ ಪ್ರತಿಷ್ಠಿತ ತರಕಾರಿ ಅಂಗಡಿಕಾರರು, ಇನ್ನೇನು ಲಾಂಬು ಬರ್ತದೆ ಎಂದೂ, ಈ ಮಳೆಗಾಲಕ್ಕೆ ಒಳ್ಳೆ ದುಡ್ಡು ಎಣಿಸಬಹುದೆಂದೂ ಲೆಕ್ಕ ಹಾಕತೊಡಗುತ್ತಿದ್ದರು. ಲಾಂಬು ಬಂದಿದಾ ಕಾಮತ್ರೆ? ಯಾವಾಗ ಬರ್ತದೆ ಎಂದು ಒಂದೆರಡು ಗುಡುಗು ಮೊಳಗಿದ್ದೇ ಲಾಂಬಿಗಾಗಿ ಮೊರೆಯಿಡುವವರು ಕುಚ್ಚೂರು ಕಾಮತ್ರ ಅಂಗಡಿಗೆ ಬಂದೇ ಬರುತ್ತಿದ್ದರು. ಅವರ ಬೇಡಿಕೆಗಳನ್ನು ಕೇಳಿದ ಕಾಮತರು, ಬಾಯಿಮಾತಿನಲ್ಲೇ ಡಿಮ್ಯಾಂಡು ಸೃಷ್ಟಿ ಮಾಡುತ್ತಾ “ಮಾಳ, ಕೆರ್ವಾಶೆ, ಮುನಿಯಾಲು ಕಾಡುಗಳಲ್ಲಿ ನಮ್ಮದೇ ಜನ ಉಂಟು, ನಾನು ಸ್ಪೆಷಲ್ಲಾಗಿ ಹೇಳಿಸಿ ಲಾಂಬು ತರಿಸುತ್ತೇನೆ. ನಮ್ಮ ಲಾಂಬಿನ ಸೈಜು, ರುಚಿಯೇ ಬೇರೆ, ಆದ್ರೆ ಅಷ್ಟು ಸುಲಭಕ್ಕೆಲ್ಲಾ ಸಿಗುದಿಲ್ಲ, ಮುಂದಿನ ವಾರ ಬನ್ನಿ” ಎಂದು, ತನ್ನದು ದೇವಲೋಕದಿಂದಲೇ ಬರುವ ಲಾಂಬು ಎನ್ನುವಂತೆ ಬಿಂಬಿಸಿಕೊಳ್ಳುವುದರಲ್ಲಿ ಕಾಮತರು ನಿಸ್ಸೀಮರಾಗಿದ್ದರು. ಕಲ್ಲಲಾಂಬು ಹೇಗೆ ಹೆಕ್ಕುದೆಂದು, ಕಾಡಲ್ಲಿ ನಿಚ್ಚು ಅದನ್ನು ಜೋಪಾನದಿಂದ ಅದು ಹುಡಿಯಾಗದ ಹಾಗೆ ಹೆಕ್ಕಿ, ಗೋಣಿಗೆ ತುಂಬಿಕೊಂಡು, ಹಳ್ಳ,ಕೊಳ್ಳ ದುರ್ಗಮ ಕಾಡೇ ತುಂಬಿದ ದಾರಿಯಲ್ಲಿ ಎಷ್ಟೇ ಕಷ್ಟವಾದರೂ ಹೇಗೆ ಹೊತ್ತುಕೊಂಡು ಬರುತ್ತಾನೆನ್ನುವ ಕಲ್ಪನೆಯೇ ಇರದ ಕಾಮತರು, ಗ್ರಾಹಕರೆದುರು ಮಾತ್ರ ತಾನೇ ಅದನ್ನು ತಂದದ್ದೆನ್ನುವಂತೆ ಲೊಟ್ಟೆ ಬಿಡುತ್ತಿದ್ದರು. ಲಾಂಬು ಬಂದ ಕೂಡ್ಲೇ ನಂಗೊಂದು ಎತ್ತಿಡಿ, ಬಂದ ಕೂಡ್ಲೇ ಫೊನ್ ಮಾಡಿ ಎಂದು ಲಾಂಬನ್ನು ಮುಂಗಡ ಬುಕ್ಕಿಂಗ್ ಮಾಡಿಕೊಂಡು ಹೋಗುವವರೂ ಇದ್ದರು.
ಇವತ್ತು ನಿಚ್ಚು ತಂದ ಲಾಂಬು ನೋಡುತ್ತಾ, ಇದು 10 ಕೆಜಿ ಆದ್ರೂ ಉಂಟು, ಎಂದು ಕಣ್ಣಲ್ಲೇ ಒಮ್ಮೆ ತೂಕ ಮಾಡಿದವರು, ಕೆಜಿಗೆ 700-800 ಕ್ಕೆ ಮಾರ್ಬೋದು, ಮಂಗಳೂರಿಗೆ ಬಸ್ಸಲ್ಲಿ ಕಳಿಸುದಾದ್ರೆ ಸಾವಿರ ಹೇಳಿದ್ರೂ ಆಯ್ತು. ಹೇಗೂ ಲಾಂಬು ಇವತ್ತು ರಾತ್ರಿಯೊಳಗೇ ಖಾಲಿಯಾಗ್ತದೆ ಎಂದು ಖಾತ್ರಿಪಟ್ಟುಕೊಂಡರು.
ಆದ್ರೂ ನಿಚ್ಚುವಿನ ಎದುರು ವ್ಯಾಪಾರಿ ಗುಟ್ಟನ್ನು ಬಿಚ್ಚಿಡದೇ “ಲಾಂಬು ತಿನ್ನುವವರೇ ಕಡಿಮೆ ಆಗಿದ್ದಾರೆ ನಿಚ್ಚು, ದುಡ್ಡು ಕೊಟ್ಟು ತಗೊಳ್ಳಿಕ್ಕೆ ಹಿಂದೆ ಮುಂದೆ ನೋಡ್ತಾರೆ ಜನ, ಆದ್ರೂ ಇಟ್ಟಿರು ನೋಡುವ, ಹೋದ್ರೂ ಹೋಗ್ಬೋದು” ಎಂದು ಲಾಂಬಿಗೆ ಡಿಮ್ಯಾಂಡೇ ಇಲ್ಲ ಎನ್ನುವಂತೆ ಸಪ್ಪೆ ಮೋರೆ ಹಾಕಿದರು ಕಾಮತರು.
ಅಣಬೆಯನ್ನು ತೂಕ ಮಾಡಿ “ನೋಡು ನಿಚ್ಚು, ಹನ್ನೊಂದು ಕೆ.ಜಿ ಉಂಟು ಲಾಂಬು, ಕೆ.ಜಿ ಗೆ 100 ರ ಹಾಗೆ ಕೊಡುವ ನಿಂಗೆ, ಎಂದು ಸಾವಿರದ ನೂರು ಎಣಿಸಿ ನಿಚ್ಚುವಿಗೆ ಕೊಟ್ಟರು. ಕೈಗೆ ಒಮ್ಮೆಲೇ ಐನೂರರ ದೊಡ್ಡ ದೊಡ್ಡ ನೋಟುಗಳು ಸಿಕ್ಕಿದಾಗ ನಿಚ್ಚು ಒಮ್ಮೆಲೇ ಹಿಗ್ಗಿದ. ಕಾಮತರು ಒಳಗೊಳಗೆ ತನಗೆ ಭರ್ಜರಿ ಲಾಭವಾಯ್ತೆಂದು ಅರಳಿದರು.
“ಆಯ್ತು ಧಣಿಗಳೇ ನಾನು ಬರ್ತೇನೆ” ಎಂದು ಮತ್ತೆ ಕಂಬಳಿಕೊಪ್ಪೆ ಏರಿಸಿದ ನಿಚ್ಚು, ಅಲ್ಲೇ ರೋಜನ ಅಂಗಡಿಯಲ್ಲಿ ಶುಂಠಿ ಮಿಠಾಯಿ, ಮನೆಗೆ ಬೇಕಾದ ಕೆಲವು ದಿನಸಿ ಸಾಮಾನು, ಶೇಸಿಗೆ ಇಷ್ಟ ಅಂತ ಹಮಾಮು ಸಾಬೂನು ಕೊಂಡುಕೊಂಡ.
ಮತ್ತೆ ಅವನು ಚಿಂಕರಮಲೆಯ ಕಾಡು ದಾರಿ ಹಿಡಿಯುವ ಹೊತ್ತಿಗೇ ದೂರದಲ್ಲಿ ವಾಲಿಕುಂಜ ಬೆಟ್ಟದ ತಪ್ಪಲ ಆಕಾಶ ಟಾರು ಮೆತ್ತಿಕೊಂಡಂತೆ ಮೋಡಗಳಿಂದ ಅದೆಷ್ಟು ಕಪ್ಪಗಾಗಿ ಕಾಣುತ್ತಿತ್ತೆಂದರೆ, ಆಕಾಶದ ಕಪ್ಪನ್ನು ನೋಡುತ್ತ, ಇನ್ನೇನು ಒಮ್ಮೆಲೇ ಭಯಂಕರ ಮಳೆ ಹೊಡೆದರೆ ವಾಟೆಹಳ್ಳದ ಕಾಲುಸಂಕ ಮುರಿದು ಹಳ್ಳವೆಲ್ಲಾ ತುಂಬಿ ತಾನು ಈಜಿಯೇ ಮನೆ ತಲುಪಬೇಕೇನೋ ಎಂದು ಗಾಬರಿಯಾಯಿತು ನಿಚ್ಚುವಿಗೆ. ಸಾಮಾನು ಹಿಡಿದುಕೊಂಡು ಹೇಗೆ ಈಜುದು ಎನ್ನುವುದೇ ಅವನ ಚಿಂತೆಗೆ ಬಹುಮುಖ್ಯ ಕಾರಣವಾಯ್ತು.
ಮಳೆ ಜೋರು ಹೊಡೆಯುವ ಮೊದಲು ಮನೆ ತಲುಪಿಬಿಡೋಣ ಎಂದು ದೊಡ್ಡ ದೊಡ್ಡ ಹೆಜ್ಜೆ ಹಾಕಿದ. ಆ ದುರ್ಗಮ ಕಾಡು ದಾರಿಯಲ್ಲಿ ಕಾಡಿಗೆ ಹುಲ್ಲು ತಿನ್ನಲಿಕ್ಕೆಂದು ಅಟ್ಟಿದ ಒಂದೆರಡು ದನಗಳು ಅಂಬಾ ಎಂದು ಕೂಗಿದ ಸದ್ದು, ಕಾಕರಣೆ ಹಕ್ಕಿಗಳು ನೇರಳೆ ಮರಗಳ ಕೊಂಬೆಯಲ್ಲಿ ರೆಕ್ಕೆ ಬಡಿದು ಕೂತ ಸದ್ದು, ಮಳೆ ಸಣ್ಣಗೇ ಹಾಡುವ ಸದ್ದು, ಚೀ ಚೀ ಚೀ ಎಂದು ಜೀರುಂಡೆಗಳು ಅನಿಯಮಿತವಾಗಿ ಕೂಗುವ ಸದ್ದು, ಪೊಟ್ಟು ಚಪ್ಪಲಿಯೊಂದನ್ನು ಹಾಕಿಕೊಂಡು ನಿಚ್ಚು ಬಿರಬಿರನೇ ನಡೆಯುತ್ತಿರುವ ಸದ್ದುಗಳು ಆ ಘೋರ ಕಾಡಿನಲ್ಲಿ ಮತ್ತೆ ಮತ್ತೆ ಮಾರ್ದನಿಗೊಳ್ಳುತ್ತಿದ್ದವು.
ಅದ್ಯಾಕೋ ನಿಚ್ಚುವಿಗೆ ಏಕಾಂತದಲ್ಲಿ ನಡೆಯುತ್ತಿದ್ದಾಗ ತನ್ನೊಡತಿ ಸೇಸಿ, ಮತ್ತೆ ಮತ್ತೆ ನೆನಪಾದಳು. ತಾವಿಬ್ಬರೂ ಮದುವೆಯಾಗಿ ಆಗಲೇ ಎರಡು ಮಳೆಗಾಲವಾದವು. ಆದರೆ ಸೇಸಿಯ ಆ ಆಸೆಯ ಕಣ್ಣುಗಳು, ತಾನು ಏನು ಮಾಡಿದರೂ ಸಹಿಸಿಕೊಳ್ಳುವ ಅವಳ ಗುಣ, ತನಗೆ ಬೇಕಾದಾಗೆಲ್ಲಾ ಮುದ್ದು ಮಾಡುವ ಅವಳ ಮೈಯ ಬಿಸುವು, ಕೇರೆಹಾವಿನಂತೆ ಬಳುಕುವ ಅವಳ ಜಡೆ, ವಾಟೆಹಳ್ಳದಂತೆ ಚಂದದ ಗುಳಿ ಬೀಳುವ ಅವಳ ಮೃದುಕೆನ್ನೆ ಅವೆಲ್ಲಾ ಇನ್ನೂ ಮದುವೆಯಾಗುವಾಗ ಹೇಗಿತ್ತೋ ಹಾಗೇ ಇದ್ದಾವಲ್ಲ ಎಂದು ಯೋಚಿಸುತ್ತ ಪುಳಕಗೊಂಡ.
ಅಷ್ಟೊತ್ತಿಗೆ ಭಾರೀಮಲೆಯ ಏರು ಮುಟ್ಟಿದ. ಏರಿನಾಚೆಗೆ ಉದ್ದಕ್ಕೆ ಸಣ್ಣದ್ದೊಂದು ಹಳ್ಳ ಹರಿಯುತ್ತಿತ್ತು. ಅಲ್ಲೇ ನಿಂತವನಿಗೆ ತಾನು ಮೊದಲು ಸೇಸಿಯನ್ನು ಸಂಧಿಸಿದ್ದು, ಅವಳನ್ನು ಪ್ರೀತಿಸಲು ಶುರುಮಾಡಿದ್ದು ಇದೇ ಜಾಗದಲ್ಲಲ್ಲವಾ ಎನ್ನುವ ನೆನಪಿನಿಂದ ನಿಚ್ಚುವಿನ ಎದೆಯೊಳಗೆ ಕಚಕುಳಿ ಎಬ್ಬಿದವು.
ಅಂದು ತಾನು ಇಲ್ಲೇ ಕಲ್ಲಲಾಂಬು ಹೆಕ್ಕುತ್ತಿದ್ದಾಗಲೇ ಅಲ್ಲವಾ ಸೇಸಿ ನಂಗೆ ಅದೇ ಮಣ್ಣಿನಿಂದ ಎದ್ದು ಬಂದ ಅಚ್ಚ ಬಿಳಿ ಲಾಂಬಿನಂತೆ ದುಂಡುಗೆ ಕಂಡಿದ್ದು, ಬಾಳಿದರೆ ಈ ಲಾಂಬಿನ ಜೊತೆಯೇ ಬಾಳಬೇಕು ಅನ್ನಿಸಿದ್ದು ಇದೇ ಜಾಗದಲ್ಲಲ್ಲವಾ? ಎಂದು ಹಳೆದಿನಗಳನ್ನು ಯೋಚಿಸುತ್ತ ಅಲ್ಲೇ ತುಂಬಾ ಹೊತ್ತು ಕೂತುಕೊಂಡ. ಇವತ್ತು ಅದೇ ಲಾಂಬಿನ ಜೊತೆಗೇ ಬಾಳುತ್ತಿರುವೆನಲ್ಲಾ ಎಂದು ಒಳಗೊಳಗೇ ಹೆಮ್ಮೆಪಟ್ಟುಕೊಂಡ. ಅವನ ಬಾಯಿಂದ ಖುಷಿಯ ಉದ್ಗಾರವೊಂದು ಅವನಿಗೇ ಅರಿವಿಲ್ಲದಂತೆ ಹೊಮ್ಮಿತ್ತು.
ಮತ್ತೆ ಲಾಂಬು ನೆನಪಾದವನಿಗೆ ಸೇಸಿ, ಆವತ್ತೊಂದಿನ ತಾನು ಪೇಟೆಗೊಯ್ಯುತ್ತಿದ್ದ ಲಾಂಬಿನ ಬುಟ್ಟಿ ನೋಡಿ ಹೇಳಿದ್ದು ಪಟ್ಟಂತ ಮಳೆಯ ಸಣ್ಣಗಿನ ಬೀಸಿನಲ್ಲಿ ನೆನಪಾಯಿತು, ತಾನು ಲಾಂಬು ಇಷ್ಟೇ ಸಣ್ಣವಳಿದ್ದಾಗ ತಿಂದಿದ್ದೆಂದೂ, ಮತ್ತೆ ಮುಟ್ಲೇ ಇಲ್ಲ, ಕಲ್ಲಲಾಂಬು ನಾವು ತಿನ್ನುದಲ್ಲ ದೊಡ್ಡವರು ತಿನ್ನುದು, ಪೇಟೆಗೆ ಮಾರಿದ್ರೆ ಒಳ್ಳೆ ದುಡ್ಡುಂಟು ಎಂದು ಅಪ್ಪ ಬೈತ್ತಿದ್ದರೆಂದೂ ಸೇಸಿ ಆವತ್ತು ಮುಖ ಸಣ್ಣಗೇ ಮಾಡಿ ತನ್ನ ಕೈಯಲ್ಲಿರುವ ಲಾಂಬು ಬುಟ್ಟಿಯನ್ನೇ ಆಸೆಯಿಂದ ನೋಡುತ್ತಾ ಹೇಳಿದ್ದು ಅವನಿಗೆ ನೆನಪಾಗಿದ್ದೇ, ಇದುವರೆಗೆ ಏಡಿ, ಹಳ್ಳೇಡಿ, ಮೀನು, ಕಾಡುಕೋಳಿ, ನರ್ತೆ, ಕಣಿಲೆ, ಎಲ್ಲವನ್ನೂ ತಂದುಕೊಟ್ಟವನು ಒಂದಿವಸವೂ ಸೇಸಿಗೆ ಕಲ್ಲಲಾಂಬು ತಂದುಕೊಡಲೇ ಇಲ್ಲವಾ ನಾನು? ಎಂದು ಬೇಸರದಿಂದ ಸೇಸಿಯ ಮೋರೆಯನ್ನೇ ಕಣ್ಣೆದುರು ತಂದುಕೊಂಡು ತನ್ನನ್ನೇ ಪ್ರಶ್ನಿಸಿದ ನಿಚ್ಚು.
ಇಷ್ಟು ದಿನ ತಾನು ಕಲ್ಲಲ್ಲಾಂಬು ಕೊಯ್ದು ಗೋಣಿಗೆ ತುಂಬಿಸಿ ಪೇಟೆಗೊಯ್ಯುವಾಗಲೂ ಸೇಸಿ ಕಲ್ಲಲ್ಲಾಂಬು ತಿನ್ನುವ ಆಸೆ ಇದ್ರೂ, ಯಾಕೆ ನನ್ನ ಬಳಿ ಹೇಳ್ಲೇ ಇಲ್ಲ? ತನ್ನ ಆಸೆಗೆ, ಕೈಗೆ ಸಿಕ್ಕುವ ಒಂದಷ್ಟು ದುಡ್ಡೂ ಜಾರಿಹೋಗ್ತದೆ ಎನ್ನುವ ಭಯದಿಂದ ಸುಮ್ಮನಾಗ್ತಿದ್ದಳಾ, ಅಬ್ಬಾ ಹೆಣ್ಣೇ, ಎಂದು ಸೇಸಿಯನ್ನು ಮೈ ತುಂಬಾ ನೆನೆದ ನಿಚ್ಚು.
ಅವಳ ಪ್ರೀತಿಯ ಅಪ್ಪುಗೆ, ಅವಳ ನಗು, ಅವಳ ಪ್ರೀತಿಯ ಮುಂದೆ ಲಾಂಬಿಗೆ ಸಿಗುವ ದುಡ್ಡು ನನಗೆ ಹೆಚ್ಚೇ? ಎಂದು ತನ್ನಲ್ಲೇ ಕೇಳಿಕೊಂಡ. ಸೇಸಿಗೆ ಸಾಕಾಗುವವರೆಗೂ ಇವತ್ತು ಲಾಂಬು ತಿನ್ನಿಸ್ತೇನೆ, ಎಂದು ಶಪಥ ಮಾಡುತ್ತ ಹಳ್ಳದ ಆಚೆಗೆ ಓಡಿದ. ಗದ್ದೆಯಂತಿದ್ದ ಜಾಗಕ್ಕೆ ಬಂದವನು ಕೈಬೆರಳುಗಳನ್ನು ನೆಲಕ್ಕೆ ತಿಕ್ಕುತ್ತ ಲಾಂಬು ಹುಡುಕತೊಡಗಿದ. ಸೇಸಿ ತನಗೆ ಮೊದಲು ಸಿಕ್ಕಿದ್ದ ಜಾಗದಿಂದಲೇ ಅವಳಿಗೆ ಲಾಂಬು ತಗೊಂಡು ಹೋಗ್ತೇನೆ ಎನ್ನುವ ಹುರುಪಿನಿಂದ ಇಡೀ ಹಸಿರ ನೆಲದಲ್ಲೆಲ್ಲಾ ಖುಷಿಯಿಂದ ನೆಗೆದ. ಅವನ ದಪ್ಪಗಿನ ಬೆರಳು ಪುಟ ಪುಟನೇ ನೆಲವನ್ನು ತಿಕ್ಕುತ್ತ ಹೋದಂತೆಲ್ಲಾ, ಲಾಂಬುಗಳು, ಸೇಸಿ ಅವನನ್ನೇ ನೋಡಿ ಗುಳಿಕೆನ್ನೆ ಮೂಡಿಸಿ ನಗುತ್ತಿರುವಂತೆ ಮೂಡುತ್ತಲೇ ಹೋದವು.
ನೆಲದೊಳಗೆ ಅವಿತಿದ್ದ ಲಾಂಬುಗಳನ್ನು ಹೊರಗೆ ತೆಗೆಯುತ್ತ ನಿಚ್ಚುವಿನ ಕೈಗಳು ಸ್ವರ್ಗವೇ ಬೊಗಸೆಗೆ ಸಿಕ್ಕಂತೆ ತುಂಬಿಕೊಂಡವು. ಅವನ ಕೆಂಪಗಿನ ಕಣ್ಣುಗಳು, ಕಗ್ಗಾಡಿನಂತೆ ಪೊಗದಸ್ತಾಗಿ ಬೆಳೆದ ಅವನ ಗಡ್ಡ, ಮೀಸೆ, ಮೈ ಮೇಲಿನ ಕೂದಲುಗಳು, ದಟ್ಟ ಭುಜ, ಎಲೆ ಅಡಿಕೆ ಜಗಿದು ಕೆಂಪಗಾಗಿದ್ದ ತುಟಿಯ ಅಂಚು, ನಿಚ್ಚು ತನ್ನೊಡತಿಗೋಸ್ಕರ ಚೊಚ್ಚಲ ಬಾರಿಗೆ ಲಾಂಬು ಹೆಕ್ಕುತ್ತಿರುವ ಸನ್ನಿವೇಶಕ್ಕೆ ಸಾಕ್ಷಿಯಾಗಿ ರೋಮಾಂಚನಗೊಂಡವು. ಅವನ ಕಿವಿಯ ಒಂಟಿ, ಕೊರಳಿಗೆ ಸೇಸಿ ಬಿಗಿದಿದ್ದ ನಸುಹಳದಿ ಬಣ್ಣದ ತಾಯಿತ ಹೊಳೆದವು. ಒದ್ದೆ ನೆಲದ ಮೇಲೆ ಬೆರಳಾಡಿಸಿದಂತೆಲ್ಲಾ ಕಲ್ಲಲಾಂಬುಗಳು ಲೀಲಾಜಾಲವಾಗಿ ದಕ್ಕಿದವು. ನಿಚ್ಚುವಿನ ಗೋಣಿಚೀಲದೊಳಗೆ ಅಣಬೆಗಳು ಮುತ್ತಿನಂತೆ ತುಂಬುತ್ತಾ ಹೋದವು.
ಸಾಮಾನು ಚೀಲ, ಗೋಣಿ ಚೀಲ ಎಲ್ಲವನ್ನೂ ಹೊತ್ತುಕೊಂಡು ಭಾರೀಮಲೆ ಏರು ಏರಿದ. ಮತ್ತೆ ಸಿಕ್ಕಿದ ಇಳಿಜಾರಿನಲ್ಲಿ ಬೆಣ್ಣೆಯಂತೆ ಇಳಿದ. “ಅಲ್ಲ, ಸೇಸಿ, ಪುಟ್ಟಿಯಿದ್ದಾಗ ಲಾಂಬು ತಿಂದಿದ್ದೆ ಅಷ್ಟೇ ಎಂದಿದ್ದಳು. ನಾನು ಚಿಕ್ಕವನಿದ್ದಾಗ ಇರ್ಲಿ, ದೊಡ್ಡವನಾದ ಮೇಲೂ ಇದುವರೆಗೇ ಲಾಂಬಿನ ಪಲ್ಯವನ್ನೇ ತಿಂದಿಲ್ಲವಲ್ಲ ಎಂದು ಮೊದಲ ಸಲ ತಾನು ಲಾಂಬೇ ತಿಂದಿಲ್ಲವೆನ್ನುವ ನೆನಪಾಗಿ ನಿಚ್ಚು ಅಚ್ಚರಿಪಟ್ಟ. ಲಾಂಬಿನಿಂದ ಹಣ ಬರ್ತದೆ, ಆದ್ರೆ ಹಣ ತಿನ್ಲಿಕ್ಕಾಗ್ತದಾ, ತನಗ್ಯಾಕೆ ಇದುವರೆಗೆ ಲಾಂಬು ತಿನ್ನಬೇಕು ಅಂತ ಅನ್ನಿಸಲೇ ಇಲ್ಲ ಎಂದು ಪ್ರಶ್ನಿಸುತ್ತ ತನ್ನನ್ನೇ ಕೇಳಿ ನಕ್ಕ. ಇವತ್ತು ಮಾತ್ರ ಸೇಸಿಯ ಜೊತೆಗೆ ಸೇರಿ ಗಡದ್ದಾಗಿ ಲಾಂಬು ಸಾರು ಮಾಡಿ ಮುಕ್ಕುವವನೇ, ಎಂದು ಬಾಯಿಚಪ್ಪರಿಸಿದ.
ನಿಚ್ಚು, ವಾಟೆಹಳ್ಳ ತಲುಪುವ ಹೊತ್ತಿಗೆ ಮಳೆ ಮತ್ತೆ ಮತ್ತೆ ಧಾರೆಯಾಗಲು ಶುರುವಾಯ್ತು. ಕಾಲುಸಂಕದ ಮೇಲಿನವರೆಗೂ ನೀರು ಬಂದಿದ್ದರೂ ಸಂಕ ಕುಸಿಯದೇ ಹಳ್ಳದ ಜೊತೆ ಒಪ್ಪಂದ ಮಾಡಿಕೊಂಡಂತೆ ಗಟ್ಟಿಯಾಗಿಯೇ ನಿಂತಿತ್ತು.
ದೂರದಲ್ಲೆಲ್ಲೋ ಗುಡುಗೂ ಮೊಳಗತೊಡಗಿತು. ಮತ್ತೆ ಕೆಲವೇ ಕ್ಷಣದಲ್ಲಿ ಒಮ್ಮೆಗೊಮ್ಮೆಲೇ ಚಟ್ ಚಟ್ ಚಟಾರ್ ಎಂದು ಸಿಡಿಲು ಹೊಡೆದಾಗ ಕಾಲುಸಂಕದ ಮೇಲೆ ನಡೆದುಕೊಂಡು ಬರುತ್ತಿದ್ದ ನಿಚ್ಚು, ಸಿಡಿಲು ಕಾಲುಸಂಕಕ್ಕೇ ಹೊಡೆಯಿತೇನೋ ಎಂದು ಒಮ್ಮೆ ಅಧೀರನಾಗಿಬಿಟ್ಟ. ಕಾರ್ಗತ್ತಲನ್ನೇ ತನ್ನೊಡಲಲ್ಲಿ ತುಂಬಿಕೊಂಡಿದ್ದ ಆ ಕಾಡಿನ ದಿಗಂತದೆತ್ತರ ಮರಗಳ ಮೇಲೆ, ಹರಿಯುತ್ತಲೇ ಇದ್ದ ಹಳ್ಳದ ಮೇಲೆ, ಕೋಟಿ ಕೋಟಿ ಮಿಂಚಿನ ಕಿರಣಗಳು ಹೊಳೆದಂತಾಯಿತು. ಇಡೀ ಕಾಡಿಗೇ ಕಾಡೇ, ಹಳ್ಳಕ್ಕೆ ಹಳ್ಳವೇ ಬೊಬ್ಬಿಟ್ಟಂತೆ ಕೇಳಿಸಿತು.
ಜೋರಾಗಿ ಬೀಸಿದ ಗಾಳಿಮಳೆಗೆ ನಿಚ್ಚುವಿನ ಕಂಬಳಿಕೊಪ್ಪೆ ಜಾರಿದ್ದರಿಂದ ನಿಚ್ಚು, ಅರ್ಧ ಚಂಡಿಯಾಗಿಹೋದ. ಸಾಲದಕ್ಕೆ, ಕುದುರೆ ಏರಿನಿಂದ ಮಣ್ಣು, ಮಳೆಯ ರಭಸಕ್ಕೆ ಕೊಚ್ಚಿಕೊಂಡು ಬಂದಿದ್ದರಿಂದ ಮಣ್ಣ ಮುದ್ದೆಯೊಂದು ಕಾಲಿಗೆ ಅಡರಿ ಒದ್ದೆಗಟ್ಟಿದ್ದ ಮಣ್ಣಲ್ಲೇ ಜಾರಿ ಬಿದ್ದ. ಲಾಂಬು ಗೋಣಿಯನ್ನು ಗಟ್ಟಿಯಾಗಿ ಹಿಡಿದದ್ದರಿಂದ ಗೋಣಿಗೆ ಒಂದಷ್ಟು ಕೆಸರು ಮೆತ್ತಿತ್ತು ಬಿಟ್ಟರೆ, ಗೋಣಿಯೊಳಗೆ ಬೆಚ್ಚಗೆ ಪವಡಿಸಿದ್ದ ಲಾಂಬುಗಳು ಎಚ್ಚರಾಗಲಿಲ್ಲ.
ಕೆಸರಿನಿಂದ ಎದ್ದವನು ಹಾಗೇ ಕೆಸರಲ್ಲೇ ಮುನ್ನಡೆದಾಗ ಅಜ್ಜಿಕುಂಜ ಬೆಟ್ಟದ ಕೆಳಗಿರುವ ಅವನ ಪುಟ್ಟ ಹೆಂಚಿನ ಮನೆ ಜಿಟಿಜಿಟಿ ಮಳೆಯ ಜೊತೆಗೆ ಸುತ್ತಲೂ ತೇಲುವ ಮಂಜಿನ ಕೋಟೆಯನ್ನೇ ಹಿಡಿದುಕೊಂಡು ನಿಂತಂತೆ ಕಂಡಿತು. ಮನೆಗೆ ಹತ್ತಿರಾದದ್ದೇ ಮೀಸೆ, ಗಡ್ಡ, ಮೈ ತುಂಬಾ ಕೆಸರು ಮೆತ್ತಿಕೊಂಡು ಕೆಸರಿನ ಮುದ್ದೆಯೇ ಆಗಿಹೋಗಿದ್ದ ನಿಚ್ಚುವಿನ ಅವಸ್ಥೆ ನೋಡಿ ಅಂಗಳದಲ್ಲಿ ಅವನನ್ನೇ ಕಾದು ನಿಂತಿದ್ದ ಸೇಸಿ, ಗೊಳ್ ಎಂದು ನಕ್ಕಳು.
ಸೇಸಿಯನ್ನೇ ನೋಡಿ ಹತ್ತಿರಾದಾಗ ನಿಚ್ಚುವಿಗೆ ಅವಳು ಆಗತಾನೇ ಮೂಡಿದ ಮೋಹಕ ಲಾಂಬುವಿನಂತೆ ಕಂಡಳು. ಗೋಣಿ ಚೀಲದೊಳಗಿದ್ದ ಕಲ್ಲಲಾಂಬುಗಳು ಎಚ್ಚರಾಗಿ ನಮ್ಮಂತೆಯೇ ನಕ್ಕ ಈ ಹೆಣ್ಣು ಅಣಬೆ ಎಲ್ಲಿದೆ? ಎಂದು ಗೋಣಿಚೀಲದ ಪುಟ್ಟ ಪುಟ್ಟ ತೂತುಗಳಿಂದ ಸೇಸಿಯನ್ನೇ ಇಣುಕಿ ನೋಡಿದವು. ನಿನಗೇನು ತಂದಿದ್ದೇನೆ ನೋಡು ಎನ್ನುವಂತೆ ನಿಚ್ಚು, ಕಲ್ಲಲಾಂಬು ಚೀಲವನ್ನು ಮುಂದಕ್ಕೊಡ್ಡಿ ಚೂರೇ ಬಿಚ್ಚಿದಾಗ, ಸೇಸಿ ಬೆರಗಿನಿಂದ ಒಳಗಿಣುಕಿದಳು. ಸ್ವರ್ಗದ ತುಣಕುಗಳಂತೆ ಬೆಳ್ಳಗೇ ಬೆಳಗುತ್ತಿದ್ದ ಕಲ್ಲಲಾಂಬುಗಳನ್ನು ನೋಡಿದ ಸೇಸಿಯ ಕಣ್ಣು ಹಿಂದೆಂದೂ ಹೊಳೆದಿರದಂತಹ ತೇಜಸ್ಸಿನಲ್ಲಿ ಜಿಗ್ ಎಂದು ಮಿಂಚಿದವು.
ಪ್ರಸಾದ ಶೆಣೈ ಆರ್ ಕೆ
ಉಡುಪಿ ಜಿಲ್ಲೆಯ ಕಾರ್ಕಳ ಹುಟ್ಟೂರು. ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರ. ಕಾರ್ಕಳದಲ್ಲಿ ಉಪನ್ಯಾಸಕ. 2019 ರ ಕನ್ನಡ ಕ್ರಿಯಾಶೀಲ ಬರವಣಿಗೆಯಲ್ಲಿ ಟೋಟೋ ಫಂಡ್ಸ್ ಆಫ್ ಆರ್ಟ್ ನೀಡುವ ಟೋಟೋ ಪುರಸ್ಕಾರ ಲಭಿಸಿದೆ. ವಿವಿಧ ಪತ್ರಿಕೆಗಳ ಕಥಾ ಸ್ಪರ್ಧೆಗಳಲ್ಲಿ ಬಹುಮಾನ, 2014 ಪ್ರಜಾವಾಣಿ ಕಥಾ ಸ್ಪರ್ಧೆಯ ವಿದ್ಯಾರ್ಥಿಯ ವಿಭಾಗದ ಬಹುಮಾನ. ‘ಲೂಲು ಟ್ರಾವೆಲ್ಸ್’ ಪ್ರಕಟಿತ ಕಥಾ ಸಂಕಲನ. ‘ಒಂದು ಕಾಡಿನ ಪುಷ್ಪಕ ವಿಮಾನ’ ಪ್ರಕಟಿತ ಪರಿಸರ ಬರಹಗಳ ಕೃತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.