ADVERTISEMENT

ಶಬ್ದನಾ ಸಂವಾದದಲ್ಲಿ ಕುವೆಂಪು ಸಾಹಿತ್ಯ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 14:05 IST
Last Updated 27 ಡಿಸೆಂಬರ್ 2018, 14:05 IST
ಕುವೆಂಪು
ಕುವೆಂಪು   

ಸಾಹಿತ್ಯ ಅಕಾಡೆಮಿಯ ಅನುವಾದ ವಿಭಾಗ ‘ಶಬ್ದನಾ’ವು ‘ಕುವೆಂಪು ಅವರ ರೂಪಾಂತರ ಸಾಹಿತ್ಯ’ (Trascreations of kuvempu) ಕುರಿತು ಶುಕ್ರವಾರ ವಿಶೇಷ ಉಪನ್ಯಾಸ ಮತ್ತು ಸಂವಾದ ಹಮ್ಮಿಕೊಂಡಿದೆ.

ಲೇಖಕ ಮತ್ತು ಅನುವಾದಕರಾದ ಕೆ.ಸಿ.ಶಿವಾರೆಡ್ಡಿ ಅವರು ಉಪನ್ಯಾಸ ನೀಡುವರು. ಲೇಖಕ ಕರೀಗೌಡ ಬೀಚನಹಳ್ಳಿ ಅಧ್ಯಕ್ಷತೆ ವಹಿಸುವರು. ವಿಮರ್ಶಕ ಡಾ.ಟಿ.ಎನ್. ವಾಸುದೇವ ಮೂರ್ತಿ ಸಂವಾದದಲ್ಲಿ ಭಾಗವಹಿಸಿ ಪ್ರತಿಕ್ರಿಯೆ ನೀಡುವರು.

ಶೇಕ್ಸ್‌ಪಿಯರ್‌ ಶೈಲಿಯ ವಿಮರ್ಶಾ ಸಾಹಿತ್ಯ ಹಾಗೂ ಕೆಲ ಇಂಗ್ಲಿಷ್‌ ಗೀತಗಳ ಆಧಾರದಲ್ಲಿ ರೂಪಾಂತರಗೊಳಿಸಿ ರಚಿಸಿದ ಕುವೆಂಪು ಸಾಹಿತ್ಯ ಕನ್ನಡ ಚಿಂತನೆಗೆ ಹೊಸ ವಿಚಾರಗಳನ್ನು ನೀಡಿವೆ. ಶೇಕ್ಸ್‌ಪಿಯರ್‌ ರಚನೆಗಳ ಹಿನ್ನೆಲೆಯಲ್ಲಿ ಬಂದ ರಕ್ತಾಕ್ಷಿ, ಬಿರುಗಾಳಿ ಮೊದಲಾದ ನಾಟಕಗಳನ್ನು ಕನ್ನಡ ವಿಮರ್ಶೆ ಚರ್ಚಿಸಿದೆ. ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಕವನ ಮನೆ ಮಾತಾಗಿದೆ.

ADVERTISEMENT

ಕುವೆಂಪು ಅವರು ಕನ್ನಡ ವಿಮರ್ಶೆಗೆ ನೀಡಿದ ತೌಲನಿಕ ವಿಮರ್ಶೆ ಹಾಗೂ ಪ್ರಾಯೋಗಿಕ ವಿಮರ್ಶೆ ಮೊದಲಾದ ಕೆಲವು ಹೊಸ ತಾತ್ಪಿಕತೆಗಳನ್ನು ಇಂಗ್ಲಿಷ್ ವಿಮರ್ಶೆ ಜೊತೆ ಹೋಲಿಸಿ ಅಧ್ಯಯನ ಮಾಡಲು ಸಾಕಷ್ಟು ಅವಕಾಶಗಳಿವೆ. ಕುವೆಂಪು ಅವರ ‘ರಾಮಾಯಣ ದರ್ಶನಂ’ ಕೃತಿ ಕೂಡಾ ಮೂಲ ವಾಲ್ಮೀಕಿ ರಾಮಾಯಣದಿಂದ ಭಿನ್ನವಾದ ಹೊಸ ರಚನೆ.

ಕುವೆಂಪು ಸಾಹಿತ್ಯ ಸಂಪುಟಗಳ ಸಂಪಾದಕರಾದ ಡಾ.ಕೆ.ಸಿ. ಶಿವಾರೆಡ್ಡಿ ಅವರು ಕುವೆಂಪು ಸಾಹಿತ್ಯದಲ್ಲಿ ವಿಶೇಷ ಪರಿಣತರು. ಶಬ್ದನಾ ಅನುವಾದ ವಿಭಾಗವು ಸಾಹಿತ್ಯಾನುವಾದ ಮೀಮಾಂಸೆಗಳ ಹಿನ್ನೆಲೆಯಲ್ಲಿ ಕುವೆಂಪು ಹುಟ್ಟುಹಬ್ಬದ ಅಂಗವಾಗಿ ಈ ಕಾರ್ಯಕ್ರಮ ಏರ್ಪಡಿಸಿದೆ ಎಂದು ‘ಶಬ್ದನಾ’ದ ಗೌರವ ನಿರ್ದೇಶಕ ಎಸ್‌.ಆರ್. ವಿಜಯಶಂಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳ: ಕಾನ್ಫರೆನ್ಸ್‌ ಹಾಲ್‌, ಸಾಹಿತ್ಯ ಅಕಾಡೆಮಿ, ದಕ್ಷಿಣ ಪ್ರಾದೇಶಿಕ ಕಚೇರಿ, ಸೆಂಟ್ರಲ್‌ ಕಾಲೇಜು ಆವರಣ, ಬಿ.ಆರ್‌. ಅಂಬೇಡ್ಕರ್‌ ವೀಧಿ. ಸಂಜೆ 5. ಆಸಕ್ತರೆಲ್ಲರಿಗೂ ಮುಕ್ತ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.