ನೀರುಳ್ಳಿಯ ಚಿಗುಳುಗಡ್ಡೆ ನಾಯಿಗಡ್ಡೆಗಳು ಪಾಟಿನಮೇಲೆ ಬಿಸಿಲಿಗೆ ಮೈಯೊಡ್ಡಿದ್ದವು.
‘ಭೋಜನಮು ಆಯ್ತೇನಕ್ಕಾ’
‘ಅದು’ ನಾಲಿಗೆ ಹೊರಗಾಕಿ ಜೊಲ್ಲು ಸುರಿಸುತ್ತ ಎರಡು ಕಣ್ಣನ್ನು ಎರಡು ದಿಕ್ಕಿಗೆ ಒಗೆದಿತ್ತು.
ನೀರುಳ್ಳಿಯಲ್ಲಿ ಕೈ ಆಡಿಸುತ್ತಿದ್ದ ಹೊನ್ನಕ್ಕ ಎದುರಿಗೆ ನಿಂತಿದ್ದ ಆಂಧ್ರಕಡೆಯ ಗೋಪಮ್ಮನನ್ನು ತಲೆಯೆತ್ತಿ ನೋಡಿ ‘ಹ್ಞುಂ, ಆತವ್ವ’ ಅಂದಳು.
‘ಇದುನ್ನ ನೀನಿಟ್ಕಂಬಾರ್ದಿತ್ತು, ಆ ಬಾಡ್ಯನ ತಲೀಗೆ ಕಟ್ಬೇಕಿತ್ತು’ ಮತ್ತೆ ಧಡಕ್ಕನೆ ಅಂದಳು ಹೊನ್ನಕ್ಕ ಗೋಪಮ್ಮನ ಸೊಂಟದಲ್ಲಿದ್ದ ಐದುವರುಷದ ‘ಅದನ್ನು’ ಅದರ ಜೊಲ್ಲನ್ನು ದಿಟ್ಟಿಸಿ.
‘ಏಮಿ ಸೇಯದಕ್ಕಾ… ನಾಕಿ ಹಿಂದುಮುಂದು ಲೇದು ಮೋಸಮು ಸೇಸಿ ಹೋಗಿಬಿಟ್ಟ’
‘ಇಂಥ ಹೆಣ್ಣುಹುಡುಗೀನ ಇಟ್ಕಂದು ಬಾಡಿಗೆ ಕಟ್ಕಂದು ಈ ಪರಸ್ಥಳದಾಗೆ ಹೆಂಗೆ ಕಾಪ್ರ ಮಾಡ್ತೀಯೋ ಏನೋ…?’
ಏನು ಅರ್ಥವಾಯಿತೊ ಏನೋ ಗೊತ್ತಿಲ್ಲ, ಪೆಚ್ಚುಪೆಚ್ಚಾಗಿ ನಗುತ್ತ ಗೋಪಮ್ಮ ಮಗಳಿಗೆ ಲೊಚಕ್ಕೆಂದು ಮುತ್ತುಕೊಡುತ್ತ ಕುಕ್ಕರಗಾಲಲ್ಲಿ ಅವಳೂ ಈರುಳ್ಳಿಯಲ್ಲಿ ಕೈಯಾಡಿಸುತ್ತ ಕೂತಳು. ಹುಚ್‌ಪ್ಯಾಲೆಯಂಥದ್ದು, ಇಕಿ ಹಿಂಗಿರೋದಕ್ಕೆ ಕೂಸೂ ಹಂಗಾಗೇತಿ ಅಂದುಕೊಳ್ಳುತ್ತ ಕೊಳೆತ ಈರುಳ್ಳಿ ಹುಡುಕಿ ಎಸೆಯುತ್ತ ಇವತ್ತೇನರಾ ಕೂಲಿಗೋಗಿದ್ರೆ ಇನ್ನೊಂದಿಷ್ಟು ನೀರುಳ್ಳಿ ಸಿಗ್ತಿದ್ವು…. ಅಂದುಕೊಳ್ಳುತ್ತ ‘ಚು’ ಎಂದು ಲೊಚಗುಟ್ಟಿದಳು ಹೊನ್ನಮ್ಮ.
‘ಇಂದು ಎಂದುಕು ಪನಿಗೆ ಹೋಗಿಲ್ಲಕ್ಕಾ…?’
‘ಚೂರು ಜಡ್ಡಾಗಿತ್ತು, ಅದುಕೆ ಮನೆಗಾದೆ’. ಕೂತಲ್ಲೆ ಅಂಗಳದಲ್ಲಿ ಕಾಲುಚಾಚಿ ಮಂಡಿ ನೀವಿಕೊಂಡಳು.
‘ಹೇಮರ ಪನಿ ಉಂಟೆ ನಾಕಿ ಹೇಳಕ್ಕ’
‘ಪಡಸೆಂಟಂತಾಕಿ ನೀನು. ಒಂದ್ ಕಳೆ ಕೀಳಕ್ಕೆ ಬರಲ್ಲ ಒಂದ್ ಬೀಜ ಬಿತ್ತಕ್ಕೆ ಬರಲ್ಲ ನಿನ್ಕರ್ಕಕಂದೋಗಿ ಹೊಲ್ದರತ್ರ ನಾನ್ ಬೈಸ್ಕಂಬೇಕು’
‘ಅಂತಾ ಸೇಸ್ತನಕ್ಕಾ ಅಂತಾ ಪನಿ ಕಲ್ತಿನಕ್ಕಾ’
‘ಏನ್‌ಮಾಡ್ತೀಯವ್ವಾ… ಅದ್ನೋಡಿದ್ರೆ ಕುತ್ಕಂತಕೆ ಎಲ್ಲ ಉಚ್ಕಂತಿರ್ತತಿ, ಅದರದ್ದು ತೊಳೆಯೋದು, ಬಳಿಯೋದೇ ಆಕತಿ…’
ಎರಡು ವರುಷದ ಹಿಂದೆ ನೆಲಕ್ಕೆ ಕಲ್ಲುಹಾಕುವ ಕೆಲಸಕ್ಕೆಂದು ಗಂಡನ ಜತೆ ರಾಯದರ್ಗದ ಹಳ್ಳಿಯಿಂದ ಇಲ್ಲಿಗೆ ಬಂದ ಗೋಪಮ್ಮನನ್ನು ಅವಳ ಗಂಡ ಕೆಲತಿಂಗಳ ಹಿಂದೆ ಬಿಟ್ಟು ಸಾಲುಬಾಳಿನ ಹೇಮಿಬಾಯಿ ಜತೆ ಲಕ್ಕವಳ್ಳಿ ಕಡೆ ಪರಾರಿಯಾಗಿದ್ದ. ನೆಲಕ್ಕೆ ಗ್ರಾನೈಟ್ ಹಾಕೊ ಕೆಲಸ ಮಾಡಿಕೊಂಡಿದ್ದ ಈ ಆಂಧ್ರದವರಿಗೆ ಈ ಹೊಲಮನೆ ಕೆಲಸವೆಲ್ಲ ಹೊಸದು. ಭಾಷೆನೂ ಅರ್ಥವಾಗದ ಕೆಲಸನೂ ಬಾರದ ಈ ಗೋಪಮ್ಮ ಎಲ್ಲರ ಹತ್ತಿರನೂ ಬೈಸಿಕೊಳ್ಳುತ್ತಾ ಪೆಚ್ಚುಪೆಚ್ಚಾಗಿ ನಗುತ್ತ ಸಿಟ್ಟು ಕರುಣೆ ಎರಡೂ ತರಿಸುತ್ತಿದ್ದಳು.
‘ಅಟ್ಲು ಸೆಪ್ಪೊದ್ದಕ್ಕಾ ಅಂತಾ ಪನಿ ಮಾಡ್ತಿನಕ್ಕ’ ಅಂತ ಕಾಲುಕಾಲಿಗೆ ಮುಗಿಯಲು ಹೋದಳು.
‘ನೋಡನ ತಗಳವ್ವ ಹೇಳ್ತಿನಿ ಯಾರರ ಕೂಲಿಗೆ ಕರದ್ರೆ’ ಅಂದಮೇಲೆ ಅಲ್ಲಿಂದ ಕೇರಿ ಕೊನೆಗಿದ್ದ ಒಂಟಿ ಸಣ್ಣ ಕಟ್ಟುನೆರೆಕೆ ಮನೆಗೆ ಹೋದಳು ಗೋಪಮ್ಮ.
ಗದ್ದಿಕೇರಿಗೆ ಹೋಗಿದ್ದ ಚೌಡ ಬಂದವನೆ ಹೊನ್ನಕ್ಕನ ಕೈಗೆ ದುಡ್ಡು ಇಟ್ಟು ಆಕಿಗೆ ಅಂಟಿಕುಂತ. ‘ಯಾಕೀಟೆನಾ.. ಬರಿ ಅದ್ನೈದೈತಿ’ ಅಂದದ್ದಕ್ಕೆ ಅವಳ ಪಾಸಿ ಕಾಲುಚೈನೊಳಗೆ ಬೊಟ್ಟುತೂರಿ ತಿರುವುತ್ತ ‘ಇವತ್ಯಾಕೊ ಯಣೂಕೆ ಆಟೇನು ರೊಕ್ಕ ಬಿಳ್ಲಿಲ್ಲ ಕಣವೊ’ ಅಂದ. ಬುಡ್ಚೀಲದೊಳಗೆ ದುಡ್ಡಿಳಿಸುತ್ತ ‘ಉಂತಗ ಯೆನಾರ ತಿನ್ಕ’ ಅಂತ ಅದರಲ್ಲೆ ಐದ್ರುಪಾಯಿ ಮಗನಿಗೆ ಕೊಟ್ಟಳು.
ಚೌಡ ಜೀರುಗುಂಗೆಯಂಥ ಹುಡುಗ. ಮಾದೇನಹಳ್ಳಿ ಯಾವ ಕೇರಿಯಲ್ಲಿ ಯಾರ ಹೆಣ ಬಿದ್ದರೆ ನಾಣ್ಯದ ಸುರಿಮಳೆಯಾಗುತ್ತದೆ, ಹೆಣ ಎಲ್ಲೆಲ್ಲಿ ಹಾದುಹೋಗುತ್ತದೆ, ಯಾವಾಗ ಎಲ್ಲಿ ನಿಂತರೆ ಜನ ದುಡ್ಡು ಒಗಿತಾರೆ ಎಲ್ಲದರ ಅಂದಾಜು ಇದೆ ಅವನಿಗೆ. ‘ಜೀವೋತು’ ಅನ್ನುವ ಸೊಲ್ಲು ಕೇಳಿಯೇ ಹುರುಪೇಗೇಳುವು ಚೌಡ ಪಾಟಿಚೀಲ ಶಾಲೆ ಎಲ್ಲಾ ಮನೆಗೂಟಕ್ಕೆ ನೇಣಾಕಿ ಹೆಣದಮನೆ ಸುತ್ತಲೆ ಸುತ್ತಾಡಿ ಯಾವಾಗ ಎತ್ತುತ್ತಾರೆ ಅಂತ ಕಾಯುತ್ತಾನೆ. ಅಷ್ಟೊತ್ತಿಗಾಗಲೆ ಅವನಪ್ಪ ಹೆಣದಮನೆಯವರ ಹತ್ತಿರ ‘ಇಷ್ಟು ಕೊಟ್ರೆನೆ ಗುಂಡಿಕಡಿಯೋದು... ಇಲ್ಲಂದ್ರೆ ಅಗಲ್ಲ’ ಅಂತ ಜಗಳ ತೆಗೆದಿರುತ್ತಾನೆ. ಚಟ್ಟ ಗದ್ದಿಕೇರಿಗೆ ಹೋಗುತ್ತಿದ್ದಂತೆ ‘ಗೋವಿಂದ ಗೋವಿಂದ’ ಅಂತಲೊ ‘ಹರಹರ ಮಹಾದೇವ’ ಅಂತಲೊ ಜನ ಹೆಣದಮೇಲೆ ನಾಣ್ಯ ಎಸೆಯುತ್ತಿದ್ದರೆ ಮೈಯಲ್ಲಿ ಹೆಣನೇ ಹೊಕ್ಕಂತಾಗಿ ಚೌಡ ರಾಪಾಡಿ ನಾಣ್ಯಗಳನ್ನೆಲ್ಲ ಬಳಿದು ತನ್ನಕೇರಿಯ ಬೇರೆ ಹುಡುಗರಿಗೆ ಕಿಲುಬುಕಾಸೂ ಸಿಗದಂತೆ ರ‍್ಭಟಿಸಿ ಬಕ್ಕಣದಬಾಯಿಗೆ ತುರುಕುತ್ತಾನೆ.
ಅವ್ವಕೊಟ್ಟ ಐದ್ರುಪಾಯಿಗೆ ಕಡ್ಲೆಮಿಠಾಯಿ ತಂದು ತಂಗಿಯರೆದುರು ಚೀಪುತ್ತ ಅವರಿಗೆ ಕೊಡದೆ ಚೌಡ ಒಂದಿಷ್ಟು ಗೋಳಾಡಿಸಿ, ನಂತರ ಬುಗರಿ ಜತೆ ಜಿಗಿದು ಮಾಯಾವಾದ. ಮೈಸೂರುಗುನ್ನ ಆಡೋಣ ಅಂತ ಹುಡುಗರನ್ನೆಲ್ಲ ಸೇರಿಸಿಕೊಂಡು ಆಟವಾಡುತ್ತಿದ್ದವನು ಸ್ವಲ್ಪಹೊತ್ತಿಗೇ ಅವರತ್ತಿರ ಜಗಳಕ್ಕೆಬಿದ್ದು ಅವರ ಬುಗರಿಯನ್ನೆಲ್ಲ ಸೀಳಿ ಅವರಿಂದ ತಪ್ಪಿಸಿಕೊಂಡು ಮನೆಗೆ ಓಡಿಬಂದ.
ಅದೇ ವೇಳೆಗೆ ಅಪ್ಪನೂ ಹೆಣದ ಕೆಲಸಮುಗಿಸಿ ಟವೆಲ್ಲಲ್ಲಿ ಕಾಯೊಳಿಕೆಗಳನ್ನು ಕಟ್ಟಿಕೊಂಡು ಹೆಗಲಿಗೆ ಹಾಕಿಕೊಂಡು ಬಂದ. ಹೊನ್ನಕ್ಕ ಸಾಬಜ್ಜಿ ಮನೆಗೆ ಹೋಗಿದ್ದಳು. ಖುಷಿಯೇರಿದಾಗೆಲ್ಲೆಲ್ಲ ಮಾಡುತ್ತಿದ್ದಂತೆ ಅಪ್ಪ ಚೌಡನ್ನ ತೊಡೆಮೇಲೆಳೆದುಕೊಂಡು ಕುರುಚಲು ಗದ್ದದಿಂದ ಮೈತೀಡಿ ಮುಸುಡಿಗೆ ಮುಸುಡಿತಂದು ಮುತ್ತಿಟ್ಟು ಮುದ್ದಾಡಿದ. ಹೆಣ್ಣುಡುಗರನ್ನು ಕರೆದು ‘ಏನಾರ ತಕಂದು ತಿನ್ರಿ’ ಅಂತ ಚಿಲ್ಲರೆ ಕೊಟ್ಟ ಅಡುಗೆಮನೆಯಿಂದ ಗಿಲಾಸು ತರಲೇಳಿದ. ಅವನ ಕುಡಿತಲೆ ನಡೆಯುತ್ತಿರುವಾಗಲೆ ಮನೆಬಾಗಲಾಸಿ ಹೋಗುತ್ತಿದ್ದ ಕುಲ್ಡಜ್ಜನಕಂಡು ಅವನ ಪಂಚೆಯೆಳೆಯುವಂತೆ ಮಗನಿಗೆ ಕಣ್ಮಿಟುಕಿಸಿ ಪುಸಲಾಯಿಸಿದ. ಚೌಡ ಕೇಳಬೇಕೆ, ಓಡಿದವನೆ ಕುಲ್ಡಜ್ಜನ ಪಂಚೆ ಹಿಡಿದೆಳೆದಿದ್ದೆ ಅಪ್ಪನ ಮುಂದೆಸೆದು ಬಾಗಿಲಿಂದೆ ಬಚ್ಚಿಟ್ಟುಕೊಂಡ. ಅಪ್ಪನೊ ವಿಚಿತ್ರವಾಗಿ ನಗಲತ್ತಿದ. ಮುದುಕನೊ ತಡವರಿಸುತ್ತ ಹೊಡೆಯಲು ದೊಣ್ಣೆಯೆತ್ತಿ ಬೈಯುತ್ತ ಅಲುಗಾಡುತ್ತ ಮನೆಯೊಳಗೇ ನುಗ್ಗಿದ.
‘ಬಾರ‍್ಲಾ ಕುಲ್ಡಿ, ಏನೊ ನಗೆಸಾಟ್ಲಿಗೆ ಹುಡ್ಗ ಅಂಗಮಾಡ್ತಾನೆ... ಇಗ್ಲೂ ಗಳಗಂಟೆ ಸವುಂಡ್ಮಾಡ್ತತ’ ಅಂತ ಅದಕ್ಕೊಂದು ಬಾರಿಸಿದ. ‘ಮೆಟ್‌ತಗಂತಿನಿ ನೋಡೀಗ್ ಬಡ್ಡಿಮಗ್ನೆ, ನೀನೆಟ್ಟುಗಿದ್ರೆ ಆ ನಿನ್ಮಗ ನೆಟ್ಟುಗಿರೋನು. ಕೈಗ್ಸಿಗಿಲಿ ಕುಂಡಿಗೆ ದೊಣ್ಣೆ ತುರುಕ್ತೀನಿ...’ ಅನ್ನುತ್ತಲೆ ಪಂಚೆ ಉಡುಕೊಂಡ.
‘ಹೋಗ್ಲಿಬಾರ ಮುದಿಯ, ನೋಡಿನ್ನಿಂದ. ಇಗ್ಲೂ ಆ ಮುದ್ಕಿತಕೆ ಹೋಕ್ತಿಯೇನೊ... ಹೋಗ್ಲಿ ಒಂದೀಟು ಬಿಟ್ಕಂಬಾ ಎಣ್ಣೇನ..’ ಅಂತ ಕುಂದರಿಸಿ ಇನ್ನೊಂದು ಗಿಲಾಸಿಗೆ ಮಗನ್ನ ಕೂಗಿದ. ಎಣ್ಣೆವಾಸನೆಗೆ ತಣ್ಣಗಾಗಿದ್ದರೂ ಕುಲ್ಡಜ್ಜ ಚೌಡನಕಂಡು ಬುಸುಗುಟ್ಟುತ್ತಲೆ ಲೋಟ ಬಾಯಿಗಿಟ್ಟ. ಅಪ್ಪ ಟವೆಲೊಳಗಿದ್ದ ಹೆಣಕ್ಕೊಡೆದ ಕಾಯೊಳಿಕೆನ ಕೃಷ್ಣನಂಗಡಿಗಾಕಿ ದುಡ್ಡು ಇಸಿದುಕೊಂಡು ಬರಲು ಚೌಡಗೆ ಹೇಳಿದ. ಅವನು ಗಂಟೆತ್ತಿಕೊಂಡವನೆ ಕುಲ್ಡಜ್ಜನ ಬೆನ್ನಿಗೊಂದು ಗುದ್ದಿ ಓಡಿದ.
ದೂರದಿಂದಲೆ ಅಂಗಡಿ ಬಳಿ ಸಿಗರೇಟು ಸೇದುತ್ತ ನಿಂತಿದ್ದ ಮುರಿಗೆಪ್ಪನ ಕಂಡವನೆ ಒಂದು ಕ್ಷಣ ಜಲಜಲ ಬೆವೆತು ತನ್ನ ನಡಿಗೆ ನಿಲ್ಲಿಸಿದ. ಅವತ್ತು ಇದೇ ಮುರಿಗೆಪ್ಪನ ಸುದ್ದಿಗೆ ಹೋಗಿ ಚೌಡ ಹಣ್ಣುಗಾಯಿ ನೀರುಗಾಯಿ ಆಗಿದ್ದ. ತನ್ನ ಕೇರಿ ಹುಡುಗರ ಕಟ್ಟಿಕೊಂಡು ಬಂದ ಚೌಡ ಇದೇ ಅಂಗಡಿ ಹತ್ತಿರ ನಿಂತಿದ್ದವರ ಬಳಿ ಗಣಪತಿ ಇಡಲು ರೊಕ್ಕ ಕೇಳಿದ್ದ. ಆಗ ಅಲ್ಲೆ ಇದ್ದ ಮುರಿಗೆಪ್ಪ ‘ಇಲ್ಲೇ ಅಗ್ಸಿಬಾಕ್ಲಾಗೆ ಊರೊಟ್ಟಿಂದು ಕುಂದ್ರಿಸ್ತಿವಲ್ಲ, ಕೇರಿ ಕೇರೆಗ್ಯಲ್ಲ ಯಾಕ್ಲಾ ನೂರೊಂದು ಗಣಪತಿ, ಸಾಕು ಊರಿಗೊಂದು ಗಣಪತಿ’ ಅಂದ. ತಟ್ಟಕ್ಕನೆ ಚೌಡ ‘ನಿನ್ನ ಮನ್ಯಗೊಂದ್ ಹೆಣ್ತಿದ್ರು ನಮ್‌ಕೇರಿಯಾಗೊಂದ್ ಯಾಕಿಟ್ಕಂದೀ ನೀನು’ ಅಂದೇಬಿಟ್ಟ! ಅಷ್ಟೆ, ಅಲ್ಲಿದ್ದವರೆಲ್ಲ ಕೈಗೆ ಸಿಕ್ಕಸಿಕ್ಕ ಕೆರ ಕೋಲು ತೆಗೆದುಕೊಂಡು ನೀರ‍್ನೀರು ಅನ್ನುವರಿಗು ಬಡಿದುಹಾಕಿದರು. ಹಿಂದಕ್ಕೆ ತಿರುಗೋದರಲ್ಲೆ ಜತೆಗಿದ್ದ ಹುಡುಗರು ಪರಾರಿ! ಸುದ್ದಿ ತಿಳಿದ ಹೊನ್ನಕ್ಕ ಹೊಯ್ಕಂತಬಂದು ಮಗನನ್ನ ಹೆಗಲಿಗೆ ಹಾಕಿಕೊಂಡು ಶಾಪಳಿಸುತ್ತಾ ಮನೆಕಡೆ ನಡೆದಳು.
ಮನಸ್ಸುಬಂದಾಗ ಮಾತ್ರ ಚೌಡ ಶಾಲೆಗೆ ಹೋಗುತ್ತಿದ್ದ. ಹೋದಾಗ ‘ಅವನಪ್ಪ ಸರಿ ಇಲ್ರೀ ಜಗಳಕ್ಕೇ ಬರ್ತಾನೆ’, ‘ಇನ್ನೇನು ಅವನ್ದು ಏಳನೆ ಕ್ಲಾಸ ಮುಗಿತತಿ. ಟೀಸಿ ಕೊಟ್ಟು ಕತ್ತಿಗೆ ಹೈಸ್ಕೂಲಿಗೆ ದಬ್ಬಿ ಕೈಮುಗಿಯೋಣ’,‘ಸ್ವಲ್ಪ ದಿನ ಸುಧಾರಿಸಿಕೊಂಡು ಹೋಗ್ರಿ’ ಅಂತ ಮೇಷ್ಟ್ರು ಹೆಡ್‌ಮೇಷ್ಟ್ರುಗಳು ಚೌಡನ ತರ‍್ಲೆಗೆ ಬೇಸತ್ತು ಮಾತಾಡಿಕೊಳ್ಳುತ್ತಿದ್ದರು. ‘ಮೇಡಂ, ಚೌಡ ನನ್ನ ಲಂಗ ಎತ್ತಿ ಓಡೋದ’, ‘ಸಾರ್, ಚೌಡ ನನ್ ಜೀರುಂಡೆ ರೆಕ್ಕೆ ಕಿತ್ತಾಕಿದ’, ‘ಸಾರ್ ಚೌಡ ಹಳದಗೆ ರಕ್ತ ಬರಂಗೆ ಹೊಡೆದು ಓಡೋದ’- ಇವೇ ಕೇಳಿಕೇಳಿ ಸಾಕಾಗಿಹೋಗಿದ್ದರು.
ನಿಧಾನಕ್ಕೆ ಗೋಪಮ್ಮನ ಬಾಯಲ್ಲಿ ಕನ್ನಡ ಸ್ವಲ್ಪ ಸಲೀಸಾಗುತ್ತಿದ್ದಂತೆ ಚೌಡ ಮತ್ತು ಅವನ ಸಹಪಾಠಿಗಳು ಮಾದೇನಹಳ್ಳಿ ಪ್ರೈಮರಿ ಸ್ಕೂಲಿಂದ ಅಲ್ಲೆ ಸಮೀಪ ಎರಡು ಕಿಲೊಮೀಟರ್‌ನ ಕತ್ತಿಗೆ ಹೈಸ್ಕೂಲಿಗೆ ತೇರ್ಗಡೆಯಾದರು. ಅವರತ್ತ ಹೋಗುತ್ತಿದ್ದಂತೆ ಗೋಪಮ್ಮಗೆ ಮಗಳು ಪ್ರಿಯಾಂಕಳನ್ನು ಶಾಲೆಗೆ ಸೇರಿಸುವ ಮನಸ್ಸಾಗಿ ಅವರಿಬ್ಬರು ಇತ್ತ ಶಾಲಾ ಕಾಂಪೌಂಡಳೊಗೆ ಬಂದರು. ಎಲ್ಲ ಮಕ್ಕಳು ‘ಹೊಯ್ ಹೇಮಂಡಿ ಬಂದಾಳೆ ಹೇಮಂಡಿ’ ಅನ್ನುತ್ತ ಪ್ರಿಯಾಂಕಳನ್ನು ಮುದರಿಕೊಂಡರು. ಗೋಪಮ್ಮ ಹಂಗೆ ಅನ್ನಬ್ಯಾಡ್ರಿ ಅನ್ನುವಂತೆ ಆ ಮಕ್ಕಳನ್ನು ನೋಡಿ ಗದರಿ ಪ್ರಿಯಾಂಕಳ ಕೈಹಿಡಿದು ಎಲ್ಲಿ ಹೋಗುವುದು ಎಂಬಂತೆ ಆಕಡೆ ಈಕಡೆ ನೋಡುವಾಗ ಹೆಡ್‌ಮೇಷ್ಟ್ರು ಏನೊ ಗಲಾಟೆಯಾಗುತ್ತಿದೆ ಎಂದು ಎದ್ದುಬಂದು ಮಾತಾಡಿಸಿದರು.
‘ನೋಡು ಇಲ್ಲಿರೊ ಹುಡುಗ್ರು ಮಾ ತರ‍್ಲೆಗಳು. ಇಂಥ ಹುಡುಗಿ ಸಿಕ್ರೆ ಗೋಳೊಯ್ಕಂತಾರೆ, ಸಿಟೀಲಿ ಇಂಥ ಹುಡುಗರಿಗಂತಾನೆ ಬುದ್ಧಿಮಾಂದ್ಯ ಸ್ಕೂಲು ಇರ್ತಾವೆ. ಸುಮ್ಕೆ ಅಲ್ಲಿಗೊಯ್ದು ಸೇರ್ಸು’ ಅಂತ ಪುಸಲಾಯಿಸಿ ಕಳಿಸಿದರು. ಅವಳೆಷ್ಟೆ ಗೋಗರೆದರೂ ಅವರು ಒಪ್ಪದಿದ್ದರಿಂದ ತೆಪ್ಪಗೆ ಗೋಪಮ್ಮ ಮನೆಕಡೆ ನಡೆದಳು. ಶಾಲೆಮಾತ್ರ ‘ಹೇಮಂಡೀ’ ಅಂತ ಕೂಗತ್ತಲೇ ಇತ್ತು.
ಹೊಸ ಹೈಸ್ಕೂಲು ಮೊದಮೊದಲು ಒಂದಿಷ್ಟು ಹೊಸತನ ನೀಡಿ ಚೌಡನನ್ನು ಒಂದಿಷ್ಟು ಹತ್ತಿರ ಸೆಳೆಯಲು ನೋಡಿದರೂ ಸ್ವಲ್ಪ ದಿನದಲ್ಲಿ ಅದೂ ಸುಸ್ತಾಗಿ ಮಂಕಾಯಿತು. ಮಗ ಎರಡು ಕಿಲೊಮೀಟರ್ ನಡೆದುಕೊಂಡು ಹೋಗುತ್ತಾನೆ ಎಂದು ಅವ್ವನೊ ಅಪ್ಪನೊ ಕೊಡುತ್ತಿದ್ದ ಐದೊ ಹತ್ತೊ ರುಪಾಯಿ ಮಾತ್ರ ಅವನಲ್ಲಿ ಒಂದಿಷ್ಟು ಆಸಕ್ತಿ ಉಳಿಸಿತ್ತು ಅಷ್ಟೆ.
ಅವತ್ತೊಂದಿನ ಕುಸುಮ ಮೇಡಮ್ಮು ಕ್ಲಾಸ್‌ರೂಮನ್ನು ಕ್ಲೀನ್‌ಮಾಡಲು ಎಂಟನೆಕ್ಲಾಸು ಹುಡುಗರಿಗೆ ಹೇಳಿ ಸ್ಟಾಫ್‌ರೂಮಿಗೆ ಹೋದರು. ಆ ಗಾಡ್ರೇಜ್ ಕೆಳಗೆ ಕಸನ ಪೊರಕೆಯಿಂದ ಎಳೆಯುವಾಗ ತುದಿಗೆ ಏನೊ ಅಟೆದಂತಾಗಿ ‘ಚಿಂಯ್ಚಿ’ ಅನ್ನೊ ಶಬ್ದಕೇಳಿಸಿತು. ಚಂಡೆಟ್ಟಿ ಕೆಳಗೆನೋಡಿದ ಚೇತ ‘ಅಲೆ ಇಲ್ಲಿ ಇಲಿಮರ ಐದವ್ರಲೇ’ ಅಂತ ಕೇಕೆಹಾಕಿದ. ಹುಡುಗರೆಲ್ಲ ಬಗ್ಗಿಬಗ್ಗಿನೋಡಿ ಗದ್ದಲವೆಬ್ಬಿಸಿದರು. ಚೌಡ ಪೊರಕೆನ ಚೇತನಿಂದ ಕಿತ್ತುಕೊಂಡು ಜಾರಿಕೊಳ್ಳುತ್ತಿದ್ದ ಅವನ್ನು ಗಾಡ್ರೇಜ್ ಕೆಳಗಿಂದ ಎಳೆದುಕೊಂಡ. ನೋಡಿದರೆ ಅವು ಇಲಿಮರಿಯಲ್ಲ, ಅಳಿಲುಮರಿ, ಎರಡಿದ್ದವು. ಒಂದರೆಡು ದಿನವಾಗಿರಬೇಕು ಹುಟ್ಟಿ. ಒಂದಿಷ್ಟುದ್ದದ ನುಣುಪುಮೈನ ಅವು ತಮ್ಮ ಪಾರ್ಶ್ವ ಕಣ್ಣುಗಳನ್ನ ಹೌದೋಇಲ್ಲೊ ಅನ್ನುವಂತೆ ತೆರೆದು ನೋಡುತ್ತಿದ್ದವು. ಈಟೀಟೆ ಇರುವ ತಮ್ಮ ಕೈಕಾಲೀಚಿ ಸಣ್ಣಗೆ ಜಾರುತ್ತಿದ್ದವು. ಹುಡುಗಿಯರೆಲ್ಲ ಕೈಯಿಂದ ಅವಕ್ಕೆ ಮುತ್ತುಕೊಡುಲು ಹೋದರೆ ಚೌಡ ಅವನ್ನು ಮುಟ್ಟಲೂ ಬಿಡದೆ ಅವು ತನ್ನವೆ ಎಂಬಂತೆ ಕಣ್ಣಕೆಕ್ಕರಿಸಿ ತಡೆಯುತ್ತಿದ್ದ. ಅಷ್ಟರಲ್ಲೆ ಬಾಲತುಂಡಾದ ತಾಯಿ ಅಳಿಲು ಹಂಚಿನಸೂರಿಂದ ನುಸಿದುಬಂದು ರೂಮುತುಂಬ ಎಗರಾಡಿ ‘ಚಿಂಯ್ಚಿಂಯ್ʼ ಅಂತ ಕೂಗುತ್ತ ಈ ಮರಿಗಳನ್ನ ನೋಡಿ ಆರ್ಭಟಿಸತೊಡಗಿತು. ಮರಿಗಳ ಹತ್ತಿರ ಅದು ಹೆದರಿಕೊಂಡು ಬರುತ್ತಿದ್ದಂತೆ ಹುಡುಗರು ಅದರ ಗೆರೆಮುಟ್ಟಲು ಬೆನ್ನಟ್ಟಿದರು. ಅದು ಟೇಬಲ್ ಡೆಸ್ಕ್ ಗೋಡೆ ಮೇಲೆಲ್ಲ ಕುಪ್ಪಳಿಸಿ ಕೊನೆಗೆ ಕಿಟಕಿಯಿಂದ ತಪ್ಪಿಸಿಕೊಂಡು ಹೋಯಿತು.
ಚಂಪನ ಹೋಗಿ ಸ್ಟಾಫ್‌ರೂಮಿನಲ್ಲಿ ಲೆಸನ್‌ಪ್ಲ್ಯಾನ್ ಬರೆಯುತ್ತಿದ್ದ ಕುಸುಮ ಮೇಡಮ್ಮಿಗೆ ಎಲ್ಲ ವಿಷಯ ತಿಳಿಸಿ ಕರೆತಂದಳು. ಬಂದದ್ದೆ ಅಳಿಲುಮರಿಗಳನ್ನ ಹಿಂಡಿಹಿಪ್ಪೆ ಮಾಡುತ್ತಿದ್ದ ಗಂಡುಹುಡುಗರನ್ನೆಲ್ಲ ಗದರಿಸರಿಸಿ, ಕೋಲಿಂದ ನಾಕುಬಾರಿಸಿದರು ಮೇಡಮ್ಮು. ಏಟುತಿಂದ ಚೌಡ ಚಂಪನಳನ್ನು ದುರುಗುಟ್ಟುತ್ತ ಹಿಂದೆಸರಿದ. ಹೈರಾಣಾಗಿ ಮಗ್ಗಲಮೇಲೆ ಮಲಗಿಕೊಂಡ ಮರಿಗಳ ದೈನೇಸಿಮುಖನೋಡಿ ಮೇಡಮ್ಮಿಗೆ ಕರುಳುಕಿತ್ತುಬಂತು.
ಅವುಗಳನ್ನು ಸವರುತ್ತ ಯಾವುದೊ ಹಿತಾನುಭವವದಲ್ಲಿ ಕಳೆದುಹೋದ ಮೇಡಮ್ಮಿನ ಎದೆಯಲ್ಲಿ ತಾಯಿರಸ ಜಿನುಗಿ ತಮ್ಮ ಉಬ್ಬಿದಹೊಟ್ಟೆ ಸವರಿಕೊಳ್ಳುತ್ತ ಮರಿಗಳಿಗೆ ರಟ್ಟಿನಬಾಕ್ಸಿನ ಗೂಡುಮಾಡಿ ಸಲಹುವ ಇರಾದೆ ಹುಟ್ಟಿತು.
ಮೇಡಮ್ಮು ಹೇಳಿದ್ದೆ ಚಂಪನ ಅಡುಗೆಮನೆಗೋಡಿ ರಟ್ಟಿನಪೆಟ್ಟಿಗೆ ತಂದರೆ ಕಾವ್ಯ ತನ್ನ ಮನೆಯ ಬಣವೆಯಿಂದ ಒಣಹುಲ್ಲ ತಂದಳು. ಮೇಡಮ್ಮು ಬಾಕ್ಸಿನಲ್ಲಿ ಹುಲ್ಲುಹರಡಿ ಅದರಮೆಲೆ ಹತ್ತಿಯುಂಡೆ ಹಿಂಜಿ ತಳ್ಳಗೆಹಾಸಿ ಅಲ್ಲಲ್ಲಿ ಸಣ್ಣಕಿಂಡಿಮಾಡಿ ಮರಿಗಳನ್ನು ಬಿಟ್ಟರು.
ಚಂಪನ ‘ಮೇಡಂ ಇದೇನುಣ್ತತಿ’ ಅಂತ ಕೇಳಿದಳು. ಮೇಡಂ ಇಂಟರ್‌ನೆಟ್ ತೆಗೆದುನೋಡಿ ಏನೊ ಓದಿ ತಕ್ಷಣ ಅಡುಗೆಮನೆಯಿಂದ ಹಾಲು ತರಲೇಳಿದರು. ಅಂಗೈಯನ್ನೆ ತೊಡೆಯಂತೆ ಮಾಡಿಕೊಂಡು ಅದರಲ್ಲಿ ಒಂದೊಂದೆ ಮರಿ ಮಲಗಿಸಿಕೊಂಡು ಹತ್ತಿಯಲ್ಲಿ ಹಾಲುನೆನೆಸಿ ಅವುಗಳ ಬಾಯಿಗೆ ತೊಟ್ಟಿಕ್ಕಿದರು. ಅವು ಲೊಚಲೊಚ ಅಂತ ಚಪ್ಪರಿಸಿದ ನೋಡಿ ಹುಡುಗಿಯರೆಲ್ಲ ಚಪ್ಪಾಳೆತಟ್ಟಿ ಕುಣಿದರು. ಮೇಡಮ್ಮಿಗೆ ಎದೆ ಹಗುರವೆನಿಸಿತು. ಅವುಗಳಿಗೆ ಯಾವಾಗ್ಯಾವಾಗ ಯಾರು ಹಾಲು ನೀರುಣಿಸಬೇಕೆಂದೇಳಿ ಆ ಬಾಕ್ಸನ್ನು ಗಿಡ್ಡಗಾಡ್ರೇಜ್ ಮೇಲಿರಿಸಿ ಗಂಡುಹುಡುಗರಿಗೆ ಅವುಗಳ ತಂಟೆಗೆ ಹೋಗದಂತೆ ತಾಕೀತುಮಾಡಿದರು. ಹಂಚಿನಸೂರಿನಿಂದ ನೋಡುತ್ತಿದ್ದ ಬಾಲವಿಲ್ಲದ ತಾಯಿಅಳಿಲು ‘ಚಿಂಯ್ಚಿಂಯ್ʼ ಅನ್ನುವದನ್ನೀಗ ನಿಲ್ಲಿಸಿತ್ತು.
ದಿನಾಲು ಪೆಟ್ಟಿಗೆ ತೆರೆಯುವುದು; ಮರಿ ಎತ್ತಿಕೊಂಡು ಮುದ್ದಿಸುವುದು; ಮನೆಯಿಂದ ತಂದ ಹಾಲುಣಿಸುವುದು. ಹುಡುಗಿಯರಿಗೆ ಶಾಲೆ ತವರುಮನೆಯಂತೆ ಅನಿಸತೊಡಗಿತು. ಈನಡುವೆ ಅವರಿಗೆ ನಾಕುದಿನ ಕಳೆದು ಭಾನುವಾರ ಬಂದಿದ್ದೂ ತಿಳಿಯಲಿಲ್ಲ.
ಕೇರಿಮೈಯೊಳಗೆ ನಿಧಾನಕ್ಕೆ ಸಂಜೆ ಇಳಿಯುತ್ತಿತ್ತು. ಹೊಸಿಲ ನೆತ್ತಿಯದುಮಿ ಚೌಡನ ಕಾಲುಗಳು ಹಾರಿದ್ದೆ ಶಾಲೆಕಡೆ ಹೊಂಟವು. ಒಂದು ಪಿಳ್ಳೆಯೂ ಇರಲಿಲ್ಲ. ಸೀದಾ ತನ್ನ ಕ್ಲಾಸ್‌ರೂಮಿಗೆ ಹೋದವನೆ ಜೋರಾಗಿ ಕದ ಒದ್ದ. ಹುಸೇವುಕ್ಕೆ ಹಿಡಕೊಂಡಿದ್ದ ಚಿಲಕಹಾರಿ ಕದ ತೆರೆದುಕೊಂಡಿತು. ತಡವರಿಸುತ್ತ ಗಾಡ್ರೇಜ್ ಹತ್ತಿರಹೋಗಿ ಬಾಕ್ಸ್ ಎತ್ತಿಕೊಂಡು ಹೊರಬಂದು ಮತ್ತೆ ಕದಮುಚ್ಚಿ ಅಡ್ಡದಾರಿಗುಂಟ ನಡೆದು ಮನೆಹಿಂತಲ ಸೇರಿದ. ಇನ್ನು ಬೆಳಕಿತ್ತು. ಬಂದವನೆ ಬಾಕ್ಸ್ ಎತ್ತಿ ನೆಲಕ್ಕೊಗೆದ. ಬಾಕ್ಸೆಲ್ಲ ಕಿತ್ತೋಗಿ ಹುಲ್ಲೆಲ್ಲ ತೂರಾಡಿಚೆಲ್ಲಿತು. ಆ ಹುಲ್ಲ ಸರಿಸಿಕೊಂಡು ಚಪ್‌ಚಪ್ ಅನ್ನುತ್ತ ಕಾಲೆಳೆದುಕೊಂಡು ಮರಿಗಳು ಹೊರಬಂದವು. ಅಲ್ಲೆ ಪಾತ್ರೆಮೇಲೆ ಕುದಿಯುತ್ತಿದ್ದ ಸುಡೋ ನೀರು ಕಂಡಿತು. ತೆಗೆದುಕೊಂಡವನೆ ಅವುಗಳ ಮೇಲೆ ಸುರಿದ. ಅವು ಕಿಚಪಚ ಅಂತ ಕುಪ್ಪಳಿಸಿ ಒದ್ದಾಡಿ ದಾಸವಾಳ ಗಿಡದತ್ತ ಸಣ್ಣಗೆ ಸರಿದು ಸುಸ್ತಾಗಿ ತೇಲುಗಣ್ಣು ಮಾಡಿದವು.
ಮಾರನೆದಿನ ಮನೆಯಲ್ಲೆ ಮೊಬೈಲಿಡಿದು ಕುಂತಿದ್ದ ಚೌಡ ಅವ್ವ ಇಸ್ಕೂಲಿಗೆ ಹೋಗು ಎಂದು ಜಬರಿಸಿದರೂ ಕದಲಲಿಲ್ಲ. ಸಂಜೆ ಚೇತ ಸಿಕ್ಕು ಶಾಲೆಯಲ್ಲಿ ಚಂಪನ ಹಾಗು ಹುಡುಗಿಯರೆಲ್ಲ ಗೋಳೋ ಎಂದು ಅತ್ತಿದ್ದು, ಕುಸುಮ ಮೇಡಮ್ಮು ಚೌಡ ಬರಲಿ ಚರ್ಮ ಸುಲಿತೀನಿ ಎಂದಿದ್ದು ಎಲ್ಲ ಹೇಳಿದ. ‘ಹೋಗಲೆ ಆ ಮೇಡಮ್ಮು ನಂಗೇನು ಮಾಡ್ತಾಳೆ, ನಾನ್ ಶಾಲಿಗೋದ್ರಲಾ ಆಕಿ ಕೈಗೆ ಸಿಗೋದು’ ಅಂದವನೆ ಬಸ್‌ಸ್ಟ್ಯಾಂಡ್ ಕಡೆ ಹೋದ.
ಗೋಪಮ್ಮನ ಮಗಳು ಪ್ರಿಯಾಂಕಳ ಬುದ್ಧಿ ಬೆಳೆಯದೆ ಮೈಯಿ ಮಾತ್ರ ಬೆಳೆಯುತ್ತಿದ್ದಂತೆ ಒಂಬತ್ತನೆ ತರಗತಿಯಲ್ಲಿರಬೇಕಿದ್ದ ಚೌಡ ಶಾಲೆಬಿಟ್ಟು ಬಾಯಲ್ಲಿ ವಿಮಲ್ ತುರುಕಿಕೊಂಡು ಚಂದ್ರಣ್ಣನ ಗಾರೆ ಟೀಮಲ್ಲಿ ಇಟ್ಟಿಗೆ ಬಾಂಡಲಿ ಹಿಡಿದುಕೊಂಡಿದ್ದ.
ವಾರಪೂರ್ತಿ ಮೈಮುರಿದು ದುಡಿಯುತ್ತಿದ್ದ ಚೌಡನಿಗೆ ಶುಕ್ರವಾರ ಬಂತೆಂದರೆ ಹಬ್ಬ. ಅವತ್ತು ಸಂತೆ, ಬಟವಾಡೆ ದಿನ. ಕೆಲಸಕ್ಕೆ ರಜೆ. ಮೇಸ್ತ್ರಿಕೊಟ್ಟ ದುಡ್ಡಲ್ಲಿ ಹೊನ್ನಕ್ಕನ ಕೈಗೊಂದಿಷ್ಟಿಟ್ಟು ಉಳಿದಿದ್ದರಲ್ಲಿ ಸಿನಿಮಾ ಹೋಟೆಲ್ಲು ಹೊಸಗೆಳೆಯರೆಂದು ಇಡೀವಾರದ ದಣಿವನ್ನು ಆರಿಸಿಕೊಳ್ಳುವನು.
ಗೋಪಮ್ಮಗೆ ಸೊಸೈಟಿಕಾರ್ಡು ಸಿಕ್ಕಿ ನಿಧಾನಕ್ಕೆ ಇಲ್ಲಿಯವಳೇ ಆಗುತ್ತಿದ್ದಳು. ಪ್ರಿಯಾಂಕಳನ್ನು ಅಲ್ಲೆ ಮರದ ಬುಡದಲ್ಲಿ ಕೂರಿಸಿ ಕೆಲಸಕ್ಕೂ ತೊಂದರೆಯಾಗದಂತೆ ಅವಳ ದೇಕರೇಕೆ ಮಾಡುತ್ತ ಸರಸರನೆ ಕಳೆ ಕೀಳುವುದು ಗೊಬ್ಬರ ಹಾಕುವುದು ಮೆಣಸಿನಕಾಯಿ ಕೀಳುವುದು ಹೀಗೆ ಎಲ್ಲ ಕೆಲಸದಲ್ಲೂ ಪಳಗಿದ್ದಳು. ಕೆಲ್ಸ ಸರಿಮಾಡಲ್ಲ ಎಂದು ಮೊದಮೊದಲು ಆಕಿಯನ್ನ ಕೂಲಿಗೆ ಕರೆಯಲು ಹಿಂದುಮುಂದು ನೋಡುತ್ತಿದ್ದ ಹೊಲದವರು ಈಗ ಅವಳನ್ನೆ ಹುಡುಕಿಕೊಂಡು ಬರುತ್ತಿದ್ದರು. ಎಂದೂ ರಜೆಮಾಡದ ಆಕೆ ಸೊಸೈಟಿಯಲ್ಲಿ ಏನಾದರು ಅಕ್ಕಿ ಗೋದಿ ಕೊಡುವ ದಿನ ಮಾತ್ರ ಕೂಲಿಗೆ ಹೋಗುತ್ತಿರಲ್ಲಿಲ್ಲ. ಆಗ ಮನೆಯಲ್ಲೆ ಪ್ರಿಯಾಂಕಳನ್ನು ಮಲಗಿಸಿ ಸೊಸೈಟಿಯಲ್ಲಿ ಕಾದಿದ್ದು ಪಡಿತರ ತರುತ್ತಿದ್ದಳು.
ಅವತ್ತು ಶುಕ್ರವಾರ ಹೀಗೆಯೆ ಸೊಸೈಟಿಗೆ ಹೋಗಿದ್ದಾಗ ಸೊಸೈಟಿ ಮಂಜಪ್ಪ ಮಧ್ಯಾಹ್ನ ಉಣ್ಣಲೆಂದು ಮನೆಗೆ ಹೋಗಿದ್ದವನು ಮೂರು ಗಂಟೆಯಾದರು ಬರಲಿಲ್ಲ. ಗೋಪಮ್ಮನಿಗೆ ಆತಂಕ, ಮಗಳು ಒಬ್ಬಳೆ ಮನೆಯಲ್ಲಿ ಇದ್ದಾಳೆಂದು. ಅಕ್ಕಪಕ್ಕ ಯಾವ ಮನೆಯಿಲ್ಲ. ಕೇರಿಯ ಕೊನೆಮನೆ ಬೇರೆ. ಕಾದೂಕಾದು ಸಾಕಾಗಿ ಇನ್ನೇನು ಮನೆಗೆ ಹೊಂಟುನಿಂತಾಗ ಅವನ ಬೈಕು ಬಂದಿತು. ಗೋಪಮ್ಮ ಒಂದು ಕಿಲೊಮೀಟರ್ ದೂರವಿರುವ ಸೊಸೈಟಿಯಿಂದ ಅಕ್ಕಿಗಂಟು ಹೊತ್ತುಕೊಂಡು ಎದ್ದೆನೊ ಬಿದ್ದೆನೊ ಎಂದು ದಡಬಡಿಸಿ ಬಂದಳು. ಬಂದವಳೆ ನೋಡುತ್ತಾಳೆ! ಪ್ರಿಯಾಂಕ ಮೇಲುಸಿರು ಮೇಲೆ ಕೆಳಉಸಿರು ಕೆಳಗೆ ಮಾಡುತ್ತಿದ್ದಾಳೆ. ಜೊಲ್ಲೆಲ್ಲ ಸುರಿದು ಚಾಪೆಪಕ್ಕ ನಿಂತಿದೆ. ಗೋಪಮ್ಮನಿಗೆ ಕೈಕಾಲು ಆಡದಂತಾಯಿತು. ತಕ್ಷಣ ಎತ್ತಿಕೊಂಡು ವಸಂತ ಡಾಕ್ಟರ್ ಹತ್ತಿರ ಹೊಯ್ಕಂತ ಓಡಿದಳು. ಇವಳ ಗದ್ದಲ ಕೇಳಿ ಹೆಂಗಸರು ಸೇರುವುದರೊಳಗೆ ಅವಳು ಆಸ್ಪತ್ರೆ ಮೆಟ್ಟಿಲ ಮೇಲಿದ್ದಳು.
ಒಂದು ಇಂಜೆಕ್ಷನ್ ಮಾಡಿಸಿಕೊಂಡು ಆಸ್ಪತ್ರೆಯಿಂದ ಬಂದಮೇಲೆ ಹೆಂಗಸರೆಲ್ಲ ಮುದುರಿದರು. ಹುಡುಗಿ ಸ್ವಲ್ಪ ಸುಧಾರಿಸಿಕೊಂಡಂತೆ ಕಂಡರೂ ಉಸಿರನ ಆವೇಗ ಜೊಲ್ಲಿನ ಪ್ರಮಾಣ ಕಡಿಮೆ ಆಗಿರಲಿಲ್ಲ. ಎಲ್ಲರು ‘ಹುಡ್ಗಿನ ಒಂದೇ ಯಾಕೆ ಬಿಟ್ಟೋಗ್ತೀಯ, ಆಕಿನ್ನೂ ಕರ್ಕಂದು ಹೋಗಾಕೆ ಏನಾಗಿತ್ತು ನಿಂಗೆ’ ಅಂತ ಗೋಪಮ್ಮನಿಗೇ ಬೈದು ಮನೆಕಡೆ ಹೋದರು. ಒಂದಿಷ್ಟು ಗಂಜಿ ಮಾಡಿ ಅದಕ್ಕೆ ಉಣಿಸಿ, ಗುಳಿಗೆ ನುಂಗಿಸುವುದರಲ್ಲಿ ಗೋಪಮ್ಮನಿಗೆ ಸಾಕುಸಾಕಾಯಿತು. ಪ್ರಿಯಾಂಕನ ತೊಡೆಮೇಲೆ ಹಾಕಿಕೊಂಡು ತಟ್ಟುತ್ತ ಮಲಗಿಸುತ್ತಿದ್ದಾಗ, ಹಾಗೆ ಮಗಳ ಹೊಟ್ಟೆಯನ್ನು ಸವರುತ್ತ ಕೈ ಕೆಳಗೆ ಹೋದೊಡನೆ ತಕ್ಷಣ ಏನೊ ಹೊಳೆದು ಲಂಗ ಎತ್ತಿ ನೋಡಿದಳು. ಬೆಳಗ್ಗೆ ಹಾಕಿಹೋಗಿದ್ದ ಅವಳ ಚಡ್ಡಿ ಇರಲಿಲ್ಲ! ‘ಆ’ ಭಾಗದಲ್ಲಿ ಪರಚಿದ ಗುರುತಿತ್ತು! ಗಾಬರಿಬಿದ್ದು ಸುತ್ತ ಕಣ್ಣಾಡಿಸಿ ನೋಡಿದರೆ ಆ ಮೂಲೆಯಲ್ಲಿ ಚಡ್ಡಿ ಬಿದ್ದಿದೆ! ಬೇರೆ ಏನೊ ಆಗಿದೆ ಎಂದು ಅವಳು ಮನಸ್ಸು ಹೇಳಿದ್ದೆ ತಡ ಮಗಳನ್ನು ಎತ್ತಿಕೊಂಡು ತುಸುದೂರದಲ್ಲಿದ್ದ ಲಕ್ಷ್ಮಕ್ಕನ ಮನೆಗೆ ಹೋಗಿ ಅವಳನ್ನು ಕರೆದು ಮಗಳ ಲಂಗವೆತ್ತಿ ತೋರಿಸಿ ‘ನನ್ ಕೂಸನ್ನ ಯಾರೊ ಕೆಡ್ಸಿ ಹೋಗಿದ್ದಾರೆ’ ಅಂತ ಒಂದೆ ಸಮನೆ ಹೊಯ್ಕಂದಳು. ಈ ಗದ್ದಲ ಕೇಳಿ ಅಕ್ಕಪಕ್ಕದ ನಾಕೈದು ಹೆಂಗಸರು ಸೇರಿಕೊಂಡರು.
‘ನಮ್ ಕೇರಿ ಅಂತದ್ದಲ್ಲ, ನೀನು ಸುಮ್‌ಸುಮ್ಕೆ ಏನಾರ ಹೇಳಕ್ಕೋಗಬ್ಯಾಡ. ಏನೊ ಒಂದಿಷ್ಟು ಕುಡಿತಾರೆ, ಅದ್ ಬಿಟ್ರೆ ಇಂಥವುಕ್ಕೆಲ್ಲ ಹೋಗಲ್ಲ. ನಾವ್ ಎಷ್ಟು ವರ್ಷದಿಂದ ನೋಡ್ತಾ ಐದಿವಿ. ನೀನೇನಾರ ಸುಮ್‌ಸುಮ್ನೆ ಗುಲ್ಲು ಎಬ್ಬಿಸಿದ್ರೆ ನಮ್ ಕೇರಿ ಗಂಡಸ್ರು ನಿನ್ನ ಕಡ್ದೇ ಹಾಕ್ತಾರೆ’ ಎಂದು ಅವಳಿಗೇ ಛೀಮಾರಿ ಹಾಕಿದರು. ಆಕಿ ಮತ್ತೇನೇನೊ ತೊದಲಿಸುವಾಗ ‘ಎಲ್ಲೆಲ್ಲಿಂದನೊ ಬಂದು ನಮ್ ಕೇರಿನ ಹೊಲಸೆಬ್ಸತಾವೆ, ಅದುಕೆ ನಿನ್ ಗಂಡ ಬಿಟ್ಟೋಗಿರೋದು, ಏ ನಡಿನಡೀರೆ ಈ ಹುಚ್ಚು ಪ್ಯಾಲೆತಕೆ ಏನು…’ ಎಂದು ಮನೆಗೆ ಹೊರಟರು.
ಕಣ್ಣಲ್ಲಿ ನೀರು ತುಂಬಿಕೊಂಡು ತೊಡೆಮೇಲೆ ಮಗಳನ್ನು ಮಲಗಿಸಿಕೊಂಡು ರಾತ್ರಿ ಎಷ್ಟೊ ಹೊತ್ತಿನತನಕ ಹಾಗೆಯೇ ಕೂತಿದ್ದಳು. ಪ್ರಿಯಾಂಕ ಬಾಯಿಂದ ಜೊಲ್ಲು ಸುರಿಯತ್ತಲೇ ಇತ್ತು. ಆಗಾಗ ಅವಳು ನಿಟ್ಟುಬೀಳುತ್ತಿದ್ದಳು. ಮದ್ಯರಾತ್ರಿ ದಾಟುತ್ತಿತ್ತು. ಗೋಪಮ್ಮನ ತಲೆಯಲ್ಲಿ ಏನೊ ಹೊಳೆದು ಮಗಳನ್ನು ಚಾಪೆಮೇಲೆ ಹಾಕಿದಳು. ಇದ್ದಕ್ಕಿದ್ದಂತೆ ಸಾಮಾನೆಲ್ಲ ಜೋಡಿಸಿ ಗೋಣಿಚೀಲಕ್ಕೆ ತುಂಬತೊಡಗಿದಳು. ಅದನ್ನು ಕಟ್ಟಲು ಹುರಿಗಾಗಿ ಮನೆಯನ್ನೆಲ್ಲ ಹುಡುಕಿದರೆ ಎಲ್ಲೂ ಸಿಗದೆ ಹಿತ್ತಲಿಗೆ ಬಂದು ನಿಂತಾಗ ಅಲ್ಲೆ ಬಾಗಿಲ ಹತ್ತಿರ ಬಿದ್ದಿದ್ದ ಹಳೆಯ ಉಡುದಾರವೊಂದು ಕಂಡು ಅದನ್ನೆ ತಂದು ಕಟ್ಟಿದಳು. ಆಮೇಲೆ ಪಾತ್ರೆಸಾಮಾನೆಲ್ಲ ಗಂಡಂದು ಅನಿಸಿ ಅವನ್ನು ಅಲ್ಲೆಬಿಟ್ಟಳು. ಮಧ್ಯಾಹ್ನ ತಂದ ಅಕ್ಕಿ ಗೋದಿ ಗಂಟಿಗೆ ಕೈಹಾಕಲು ಹೋಗಿ ಅದೂ ಯಾಕೊ ಈ ಊರಿಂದು ಅನಿಸಿ ಅದೂ ಬೇಡವೆನಿಸಿತು. ಕೊನೆಗೆ ಚಾಪೆ ಮೇಲೆ ಬಿದ್ದಿದ್ದ ಮಗಳು ಮಾತ್ರ ತನ್ನದು ಅನಿಸಿ ಅದನ್ನು ಎತ್ತಿಕೊಂಡು ಮನೆಯಿಂದ ಹೊರಬಿದ್ದಳು.
ಇದಾಗಿ ತಿಂಗಳಿಗೆ ದೀಪಾವಳಿಯೂ ಬಂತು. ಅಷ್ಟೊತ್ತಿಗಾಗಲೆ ಕೇರಿ ಗೋಪಮ್ಮನನ್ನು ಮರೆತಾಗಿತ್ತು. ಹೊನ್ನಕ್ಕ ಎಲ್ಲೊ ಹೊಂಟಿದ್ದ ಚೌಡನಿಗೆ ಹೊಸ ಉಡುದಾರ ಕೊಟ್ಟು ‘ಹಳೆ ಉಡ್ದಾರ ಕೊಡು ಅದನ್ನ ಮನೆ ಸೂರಿನ್ಮೇಲೆ ಎಸಿಬೇಕು’ ಎಂದಳು. ಸೊಂಟಕ್ಕೆ ಕೈಹಾಕಿ ನೋಡಿದ ಚೌಡ ‘ಹೋಗವ್ವ ಅದ್ಯಾವಾಗ್ಲೊ ಉದುರೋಗಿತಿ’ ಅನ್ನುತ್ತ ಹೊಸ ಉಡುದಾರ ಕಟ್ಟಿಕೊಳ್ಳುತ್ತ ಹೊರನಡೆದ.
ಸಂಜೆ ಕೇರಿಯೆಲ್ಲ ಜಗಮಗ ಎನ್ನುತ್ತಿತ್ತು. ಅದಾಗಲೆ ಫುಲ್ ಆಗಿದ್ದ ಚೌಡನ ಅಪ್ಪ ಅಂಗಳದಲ್ಲಿ ಚಾಪೆ ಹಾಸಿಕೊಂಡು ಮೊಬೈಲಲ್ಲಿ ಜೋರಾಗಿ ‘ನ್ಯಾಯ ಎಲ್ಲಿದೆ?...ʼ ಅನ್ನೊ ರಿಕಾರ್ಡನ್ನು ಹಾಕಿ ಎದುರಗಡೆ ಮನೆಯಲ್ಲಿದ್ದ ಅವನಣ್ಣನನ್ನು ಕೆಣಕಿದ. ನಾಕು ವರ್ಷದಿಂದೆ ಎಮ್ಮೆಕೊಯ್ದು ಪಾಲುಮಾಡುವಾಗ ಹತ್ತಿದ ತಿಕ್ಕಾಟ ಇಬ್ಬರ ನಡುವೆ ಹಾಗೆಯೆ ಉಳಿದಿತ್ತು.
ಅವನ ಅಣ್ಣ ‘ಮನ್‌ಶಾ ರೂಟ್ ತಪ್‌ಬಾರ್ದು, ಅಯಾಮ್ ಡ್ರಿಂಕ್, ಬಟ್ ನಂದೀ ನಾಲ್ಗೆ ಐತಲ್ಲ ಭಾರಿ ಪಿವರ್‌ಪುಲ್. ಒಂದ್ಪಟ ಏನಾರ ಶಾಪಾಕ್ತು ಅಂದ್ರೆ ಮಗ ಪಿನೀಸ್....’.
‘ಏ ನೋಡೀನಿ ತಗಳ ನಿಂದು, ಮುಂದಿನ ಅಮಾಸೆ ತಂಕ ಕಾಯಿ, ಉಡುಸ್ಲವ್ವುಗೆ ಕೈಮುಕ್ಕಂದಿನಿ, ನಿನ್ ಬಾಯಿ ಸೇದುಹೋಗ್ದಿದ್ರೆ ನೋಡು’ - ಹೀಗೆ ವಾಚಾಟದಲ್ಲಿ ಸಂಜೆ ಕಳೆದು ರಾತ್ರಿಬಂತು.
ಮಾರನೆ ದಿನ ಹಬ್ಬದ ಸುಸ್ತಿನಲ್ಲಿ ಮಧ್ಯಾಹ್ನದ ನಿದ್ದೆ ಸದ್ದಿಲ್ಲದೆ ಹೊನ್ನಕ್ಕನ ಕಣ್ಣಹೊಕ್ಕಿತ್ತು.
ಗದ್ದಿಕೇರಿಯಲ್ಲಿ ಯಾರೊ ಗುಂಡಿಯಲ್ಲಿನ ಹೆಣಗಳನ್ನ ಕಿತ್ತುಕಿತ್ತು ತೆಗೆದು ಏನನ್ನೊ ಹುಡುಕುತ್ತಿದ್ದರು. ಯಾವುದೊ ಹೆಣದ ಚೊಣ್ಣದಲ್ಲಿ ಬ್ರಾಂದಿಬಾಟಲಿಯೊಂದು ಸಿಕ್ಕು ಗಟಗಟ ಕುಡಿದವನೆ ಅದೆ ಗುಂಡಿಯಲ್ಲಿ ಅಂಗಾತಬಿದ್ದ. ಹತ್ತಿರಹೋಗಿ ಅವನ ಕಣ್ಣ ದಿಟ್ಟಿಸಿನೋಡಿದರೆ ಅವು ಯಾವಾಗಲು ತನಗೆ ಕಣ್ಮಿಟುಕಿಸುತ್ತಿದ್ದ ತನ್ನ ಗಂಡನ ಕಣ್ಣುಗಳೆ! ನೋಡುನೋಡುತ್ತಿದ್ದಂತೆ ಅವು ಬೇರೆ ಯಾರದ್ದೊ ಕಣ್ಣುಗಳಾಗಿ ಬದಲಾದವು. ಇನ್ನುಹತ್ತಿರ ಹೋಗುತ್ತಿದ್ದಂತೆ ತಟ್ಟನೆ ಎಚ್ಚರವಾಯಿತು. ಗಂಡ ಕುಸ್ತಿನೋಡಲು ಹೊನ್ನಾಳಿಗೆ ಹೋಗಿದ್ದು ನೆಪ್ಪಾಗಿ ನಿಟ್ಟುಸಿರುಬಿಟ್ಟಳು.
ಹಗಲುಗನಸಿಸಿಂದ ಗಾಬರಿಗೊಂಡು ಸೆರಗಿಂದ ಬೆವತಮುಖ ಒರೆಸುತ್ತ ಹೊನ್ನಕ್ಕ ಮನೆ ಹೊರಗೆ ಬರುತ್ತಿದ್ದಂತೆ ಚೌಡನ ದೊಡ್ಡಪ್ಪ ಬೊಬ್ಬೆಹಾಕುತ್ತ ಓಡಿಬಂದವನೆ ‘ನಿನ್ಮಗ ಚೌಡನ್ನ ಆ ಕೆರೆ ನುಂಕಂತಂತೆ ಕಣವಾ... ಆಡುಂಡು ಬೆಳೆಯೋ ಮಗೂನ ನೀರು ಯಣಮಾಡೊಗಸ್ತಂತೆ ಕಣವಾ..’ ಅಂತ ಹೊಯ್ಕಂತ ಹೊಯ್ಕಂತ ‘ಬಂಗಾರ‍್ರದಂತ ಮಗೂನ್ ನೀರಾಗಿಟ್ರಲ್ರೇ... ನಿಮ್‌ಕೈಯಾಗಿ ಆಗ್ದಿದ್ರೆ ನಾನ್ ರಾಜ್ನಂಗೆ ಸಾಕಂತಿದ್ನಲ್ರೇ...’ ಅಂತ ಅಬ್ಬರಿಸತೊಡಗಿದ. ಹೊನ್ನಕ್ಕನಿಗೆ ಏನಾಯಿತು ಎಂದು ಸಣ್ಣಗೆ ನಿಚ್ಚಳವಾಗುತ್ತಿದ್ದಂತೆ ಇಡೀ ಕೇರಿಕರುಳೆ ಕಿತ್ತುಬರುವಂತೆ ರೋದಿಸುತ್ತ ಓಡಿಬಂದು ಹಟ್ಟಿಬಾಗಿಲಿಗೆ ಬೊಕ್ಕಬೋರಲು ಬಿದ್ದಳು.....
****
ಉಮಣ್ಣನ ಮಗ ಕೆರೆಗೆ ಎಮ್ಮೆ ಹೊಡ್ಕೊಂಡು ಹೋದವನು ಅಪ್ಪ ಫೋನ್ ಮಾಡಿದ ಅಂತ ಅದನ್ನ ಅಲ್ಲೆ ಬಿಟ್ಟು ತಗ್ಗಿನ ತೋಟಕ್ಕೆ ಮೋಟಾರು ಆನ್ ಮಾಡಲು ಹೋದ. ಈ ಚೌಡ, ಚೇತ ಬಾಯಲ್ಲಿ ವಿಮಲ್ ತುಂಬಿಕೊಂಡು ಹೀಗೆ ಸುಮ್ಮನೆ ಅವರೂ ಅಲ್ಲಿಗೆ ಬಂದಿದ್ದರು. ಉಮ್ಮಣ್ಣನ ಮಗ ಹೋದೊಡನೆ ಆ ಎಮ್ಮೆ ನೋಡುನೋಡುತ್ತಿದ್ದಂತೆ ಕೆರೆ ನಡುವಿನ ಛಬ್ಬೆ ಹತ್ತಿರ ಈಜಿಕೊಂಡು ಹೋಯಿತು. ಅದನ್ನು ನೋಡಿದ್ದೇ ಚೌಡ ಮತ್ತು ಚೇತ ನೀರಲ್ಲಿ ನಡೆದುಕೊಂಡುಹೋಗಿ ಅದಕ್ಕೆ ನೀರುಗ್ಗಿ ಬೊಬ್ಬೆಹಾಕಿ ಈ ಕಡೆ ಓಡಿಸಿಕೊಂಡುಬಂದರು. ಅದೇನು ಅನಿಸಿತೊ ಚೇತ ಅಲ್ಲೆ ಛಬ್ಬೆಮೇಲೆ ದಢಕ್ಕನೇ ನಿಂತ. ಆದರೆ ಚೌಡ ನಿಲ್ಲದೆ ಅದನ್ನು ಬೆನ್ನಟ್ಟಿಹೋದ. ಆದರೆ ಎಲ್ಲರು ಓಡಾಡುತ್ತಿದ್ದ ಮಾಮೂಲು ನೀರಹಾದಿಯಲ್ಲಿ ಆ ಎಮ್ಮೆ ಹಿಂದಿರುಗದೆ ಕೆರೆಯಲ್ಲಿದ್ದ ಆ ಮಡುವಿನ ಮೂಲಕ ಬರಲೊರಟಿತು. ಚೌಡನೂ ಹಟಕ್ಕೆ ಬಿದ್ದವನಂತೆ ಆ ಮಡುವಿನ ಮೂಲಕನೇ ಆ ಎಮ್ಮೆ ಹಿಂದೆ ಬರಲು ಹೊರಟ. ಅದು ಮಡು ಇಳಿಯುತ್ತಿದ್ದಂತೆ ಅವನು ಅದರ ಬಾಲವಿಡಿದು ನೇತಾಡುತ್ತ ಮಡುವಿನ ಬಾಯೊಳಗೆ ನುಗ್ಗಿದ! ಆ ಎಮ್ಮೆ ಸ್ವಲ್ಪದೂರ ಈಜಿ ಇದ್ದಕ್ಕಿದ್ದಂತೆ ಮಡುವಿನಲ್ಲಿ ಮುಳುಗಿಬಿಟ್ಟಿತು! ಮುಳುಗಿದೊಡನೆ ಇವ ಹಿಡಿದಬಾಲ ಕೈಬಿಟ್ಟು ಕೈಕಾಲು ಬಡಿಯಲತ್ತಿದ. ಎಮ್ಮೆ ಒಂದು ನಿಮಿಷದನಂತರ ಮತ್ತೆ ತೇಲಿ ಏನೂ ಆಗಿಲ್ಲ ಎಂಬಂತೆ ದಡಸೇರಿತು.
ಈಜುಬಾರದ ಚೌಡನ ಕಣ್ಣಿಗೆ ಮಂಜು ಕವಿಯುತ್ತ ಬಂದಿತು. ದೂರದಲ್ಲಿ ಕೂಗುತ್ತ ನಿಂತಿದ್ದ ಚೇತನ ನಿಲುವು ಮಸುಕು ಮಸುಕಾಗುತ್ತ ಹೋಗಿ ಕೊನೆಗೆ ಚೇತ ಮಾಯವಾಗಿ ಅಲ್ಲಿ ‘ಪೆ ಪೆ’ ಎನ್ನುವ ಪ್ರಿಯಾಂಕ ಮೂಡಿಬಂದಳು. ಅವಳ ಸೊಂಟದಲ್ಲಿ ತನ್ನ ಹಳೆ ಉಡುದಾರ! ಎತ್ತಿತೋರಿಸುತ್ತಿದ್ದಾಳೆ. ಅವಳ ಕೈಯಲ್ಲಿ ಹನಿಹನಿಯಾಗಿ ಹಾಲು ಕುಡಿಯುತ್ತಿರುವ ಅಳಿಲುಮರಿಗಳು! ಆ ದೃಶ್ಯವೂ ನಿಧಾನಕ್ಕೆ ಕರುಗುತ್ತ ಇಡೀ ಕೆರೆಯ ಗದ್ದಿಕೇರಿಯಾಯಿತು.
ಅಯ್ಯೋ ಉಡುದಾರವಿಲ್ಲದ ನನ್ನ ಸೊಂಟ ಕರಗಿಹೋಗುತ್ತಿದ್ದೆ….
ಅದೊ ಯಾರೋ ಹುಡುಗರು ಸೊಂಟವಿಲ್ಲದ ನನ್ನ ಹೆಣದಮೇಲೆ ಎಸೆಯುವ ನಾಣ್ಯಗಳಿಗಾಗಿ ಜಗಳವಾಡುತ್ತಿದ್ದಾರೆ….
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.