ADVERTISEMENT

ವೇಗ

ಸವಿತಾ ನಾಗಭೂಷಣ್
Published 20 ಏಪ್ರಿಲ್ 2019, 19:45 IST
Last Updated 20 ಏಪ್ರಿಲ್ 2019, 19:45 IST
ಚಿತ್ರ: ಶಿಲ್ಪಾ ಕಬ್ಬಿಣಕಂತಿ
ಚಿತ್ರ: ಶಿಲ್ಪಾ ಕಬ್ಬಿಣಕಂತಿ   

ಚೌಡಮ್ಮ ದೇವಿಯ ದೇಗುಲದ ಸಮೀಪದಲ್ಲಿದ್ದ ಅರಳೀ ಕಟ್ಟೆಯ ಮೇಲೆ ಕುಳಿತು ಎದುರಿಗಿದ್ದ ಬೃಹತ್ ಬಹು ಮಹಡಿ ಕಟ್ಟಡವನ್ನು ನೋಡುತ್ತಾ ಕುಳಿತಿದ್ದ ನಿಂಗಪ್ಪನಿಗೆ ಹಗಲು ರಾತ್ರಿ ಎನ್ನದೆ ಎರಡು ವರ್ಷಗಳ ಕಾಲ ಆ ಕಟ್ಟಡದ ಕೆಲಸಗಾರನಾಗಿ ದುಡಿದದ್ದು ನೆನಪಾಯಿತು...

ಆ ಸಮಯದಲ್ಲೇ ಅವನು ಇಸ್ಕೋಲಿಗೆ ಹೋಗುತಿದ್ದ ಮಗ ಮಂಜನನ್ನು ಇಸ್ಕೋಲು ಬಿಡಿಸಿ ತನ್ನ ಜತೆಯಲ್ಲಿ ಕೆಲಸಕ್ಕೆ ಹಾಕಿಕೊಂಡಿದ್ದನು. ಹೆಂಡತಿ ಶಿವಿ ಕಿವಿಮಾತು ಹೇಳಿದ್ದರೂ ಮಗ ಮಂಜ ತನಗೆ ಇಸ್ಕೋಲು ಇಷ್ಟ ಅಂದಿದ್ದರೂ ಮಂಜನ ಶಾಲೆಯ ಹೆಡ್ ಮಾಸ್ತರ ಗಂಗಪ್ಪನವರ ಮಾತು ತಳ್ಳಿ ಹಾಕಿ ಮಂಜನನ್ನು ತನ್ನೊಡನೆ ಕರೆದೊಯ್ಯುವ ನಿರ್ಧಾರ ಏಕಾಏಕಿ ತೆಗೆದುಕೊಂಡಿದ್ದನು. ಮಂಜ ಮೊದ ಮೊದಲು ಕೊರಕರ ಅಂದರೂ ಗಾರೆ ಕೆಲಸವನ್ನೂ ಜತೆಜತೆಗೆ ಪ್ಲಂಬರ್ ಸೋಮಯ್ಯನವರ ಹೆಗಲಿಗೆ ನಿಂತು ಪ್ಲಬಿಂಗ್ ಕೆಲಸವನ್ನೂ ಶ್ರದ್ಧೆಯಿಂದ ಕಲಿತು, ಕಳೆದ ಒಂದು ವರುಷದಿಂದ ಸಣ್ಣಪುಟ್ಟ ಮನೆ -ಕಟ್ಟಡಗಳ ಕೆಲಸವನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿದ್ದನು. ಸೋಮಯ್ಯನವರೂ ಅವನಿಗೆ ತಾವು ಹಿಡಿದ ದೊಡ್ಡ ಕೆಲಸ ಕಾರ್ಯಗಳಿಗೆ ಅವನನ್ನು ಸಹಾಯಕನನ್ನಾಗಿ ಮಾಡಿಕೊಳ್ಳುತ್ತಿದ್ದರು. ಅವನ ಚುರುಕುತನ ಅಚ್ಚುಕಟ್ಟು ನೀಯತ್ತು ಬದ್ಧತೆ ಮಿತವಾದ ಮಾತು ಸಮಯಪಾಲನೆಯಿಂದಾಗಿ ಮಂಜ ಎಂದರೆ ಎಲ್ಲರಿಗೂ ಬೇಕಾದವನಾಗಿ ಸುತ್ತ ಮುತ್ತಲಿನ ಮನೆಯವರೂ ಫೋನಾಯಿಸಿ ಸಣ್ಣಪುಟ್ಟ ನಲ್ಲಿ ರಿಪೇರಿಗಳಿಗೆ ಮಂಜನನ್ನೇ ಕರೆಯುತ್ತಿದ್ದರು. ಅಷ್ಟೇ ಅಲ್ಲ ಬೇರೆಯವರಿಗೂ ಮಂಜನ ಫೋನು ನಂಬರು ಕೊಟ್ಟು ಶಿಫಾರಸು ಮಾಡುತ್ತಿದ್ದರು. ಒಮ್ಮೆ ತಾಲ್ಲೂಕಿನ ಶಾಸಕರಾದ ಕದರಪ್ಪನವರ ಮನೆಯ ಪೈಪು ರಾತ್ರಿ ಒಡೆದುಹೋಗಿ ನೀರು ಸೋರತೊಡಗಿದಾಗ ಮಧ್ಯರಾತ್ರಿ ಧಾವಿಸಿ ಬಂದು ಚಾಕಚಕ್ಯತೆಯಿಂದ ಏಕಾಂಗಿಯಾಗಿ ಅದನ್ನು ದುರಸ್ತಿ ಮಾಡಿ ಇತ್ತೀಚಿನ ದಿನಗಳಲ್ಲಿ ಅವರಿಗೂ ಬೇಕಾದವನಾಗಿದ್ದನು.

ಸಿಮೆಂಟಿನ ದೂಳು ಕುಡಿದೂ ಕುಡಿದು ನಿಂಗಪ್ಪ ಕೆಮ್ಮು ದಮ್ಮಿಗೆ ಈಡಾಗಿ ನೆಲ ಕಚ್ಚಿದ ಮೇಲೆ ಅವನನ್ನು ಯಾವ ಕೆಲಸಕ್ಕೂ ಕಳಿಸದೆ ಮನೆಯಲ್ಲೇ ಇರುವಂತೆ ಮಾಡಿದ್ದನಲ್ಲದೇ ಶಾಸಕರಾದ ಕದರಪ್ಪನವರ ನೆರವಿನೊಂದಿಗೆ ಊರಾಚೆಯಿದ್ದ ತನ್ನ ವಾಸ್ತವ್ಯವನ್ನು ಊರ ನಡುವೆ ಚಂದಾದ ಮನೆಗೆ ಸ್ಥಳಾಂತರಿಸಿದ್ದನು. ಕ್ರಮೇಣವಾಗಿ ಸೈಕಲ್ಲಿನಿಂದ ಬೈಕಿಗೆ...ಮತ್ತು ಕಳೆದ ಚುನಾವಣೆಯಲ್ಲಿ ಕದರಪ್ಪನವರು ಶಾಸಕರಾಗಿ ಮತ್ತೆ ಗೆದ್ದು ಬೆಂಗಳೂರಿಗೆ ಪದೇ ಪದೇ ಓಡಾಡಲು ತೊಡಗಿ ಫಲವತ್ತಾದ ನಿಗಮ-ಮಂಡಳಿಯ ಅಧ್ಯಕ್ಷರಾದ ಮೇಲೆ ಅವರದೊಂದು ಕಾರನ್ನು ತಾನೇ ಓಡಿಸತೊಡಗಿ ಇತ್ತೀಚೆಗೆ ಹಲವು ಸಲ ಅವರು ಬೆಂಗಳೂರಿಗೆ ಹೋಗುವ ಸಮಯದಲ್ಲಿ ಅವರಿಗೆ ಬೆಂಗಾವಲಾಗಿ ಹೋಗುವನು. ಎಷ್ಟೋ ಸಮಯ ಅಲ್ಲೇ ಇರುವನು. ಈ ದಿನಗಳಲ್ಲಿ ಮಂಜನ ಫೋನಿಗೆ ಹಗಲೂ ರಾತ್ರಿ ಬಿಡುವಿಲ್ಲದ ಕರೆಗಳು ಬರುವವು. ಜತೆಗೆ ಅವನನ್ನು ಕಾಣಲು ಬರುವವರ ಸಂಖ್ಯೆಯೂ ಹೆಚ್ಚಾಗಿದ್ದಿತು. ಇದೆಲ್ಲದರ ನಡುವೆ ಮಂಜ ಕದರಪ್ಪನವರ ಕೋರಿಕೆಯ ಮೇರೆಗೆ ಬೆಂಗಳೂರಿಗೆ ನಿಂಗಪ್ಪ ಶಿವಮ್ಮನೊಡನೆ ತನ್ನ ಬಿಡಾರ ಎತ್ತಿಕೊಂಡು ಹೋಗಿ ನೆಲೆಸುವಂತಾಯಿತು ಈಗ ಯಾರೂ ಅವನನ್ನು ಮಂಜ ಎನ್ನುವುದಿಲ್ಲ. ಎಲ್ಲರಿಗೂ ಆತ ಮಂಜಣ್ಣ.

ADVERTISEMENT

ಇತ್ತೀಚಿನ ದಿನಗಳಲ್ಲಿ ಆತ ಗರಿಗರಿಯಾದ ಬಿಳಿಬಟ್ಟೆ ತೊಟ್ಟು ಓಡಾಡುತ್ತಿರುವನು. ಮದುವೆ ಕೂಡ ಆಗಿರುವನು. ಕೈಬೆರಳುಗಳಿಗೆ ಉಂಗುರಗಳು, ಕತ್ತಿಗೆ ದಪ್ಪನೆಯ ಬಂಗಾರದ ಸರ ಹಿಂದೆ ಮುಂದೆ ಲಗುಬಗೆಯಿಂದ ಓಡಾಡುವ ಮಂದಿ, ಒಂದು ಕಾಲದಲ್ಲಿ ಕಪ್ಪಗಿದ್ದವ ಕಳೆ ಕಳೆಯಾಗಿ ಕೆಂಪಗೆ ಹೊಳೆಯತೊಡಗಿದ್ದನು. ಸದ್ಯದಲ್ಲೇ ನಡೆಯುವ ಚುನಾವಣೆಯಲ್ಲಿ ತಿಕೀಟು ಪಡೆಯುವ ನಿರೀಕ್ಷೆ ಇದ್ದು ತನ್ನೂರಿನ ಚೌಡಮ್ಮ ದೇವಿಯ ಆಶೀರ್ವಾದ ಪಡೆಯಲು ತನ್ನ ತಂದೆ ತಾಯಿ ಹೆಂಡತಿ ಮಗಳೊಂದಿಗೆ ಬಂದಿರುವನು.

ಇದೀಗ ಚೌಡಮ್ಮ ದೇವಿಯ ದೇಗುಲದ ಸಮೀಪದ ಅರಳಿ ಕಟ್ಟೆಯ ಮೇಲೆ ಕುಳಿತು ಎದುರಿಗಿದ್ದ ಕಟ್ಟಡ ನೋಡುತ್ತಾ ಕುಳಿತಿದ್ದ ನಿಂಗಪ್ಪನಿಗೆ ಅಂದು ಮಗ ಮಂಜನನ್ನು ಇಸ್ಕೋಲು ಬಿಡಿಸಿದ್ದು ಒಳ್ಳೆಯದಾಯಿತೋ...ತಪ್ಪಾಯಿತೋ...ತಿಳಿಯದೆ ಗೊಂದಲಗೊಂಡಿದ್ದನು. ಪೂಜೆ ಮಾಡಿಸಿಕೊಂಡು ಬಂದು ಸಂಭ್ರಮದಲ್ಲಿದ್ದ ಶಿವಿಗೆ 'ಏನೋಪಾ... ದೊಡ್ಡ ಮನುಸರ ಸವಾಸ ಕಷ್ಟ, ಏನೂ ತಿಳಿವಲ್ದು' ಎಂದನು.

ಶಿವಮ್ಮ ಅರ್ಥಮಾಡಿಕೊಂಡವಳಂತೆ ದುಗುಡದಿಂದ ತಲೆ ಆಡಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.