ADVERTISEMENT

ಪ್ರೇಮಕುಮಾರ್‌ ಹರಿಯಬ್ಬೆ ಅವರ ಕಥೆ: ಬಿಡುಗಡೆ

ಪ್ರೇಮಕುಮಾರ್ ಹರಿಯಬ್ಬೆ
Published 22 ಫೆಬ್ರುವರಿ 2025, 23:55 IST
Last Updated 22 ಫೆಬ್ರುವರಿ 2025, 23:55 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಪುಟ್ಟಣ್ಣಯ್ಯನ ತಾಯಿಯ ಮುಖ ನೋಡುತ್ತಿದ್ದಂತೆ ಗುರುಮೂರ್ತಿ ಡಾಕ್ಟರಿಗೆ ಅಯ್ಯೋ ಅನ್ನಿಸಿತು. ‘ಅಲ್ರೀ ಇಷ್ಟು ದೊಡ್ಡ ಮನೆಯಲ್ಲಿದ್ದೀರ. ನಿಮ್ಮ ತಾಯಿಯವರನ್ನು ಗಾಳಿ, ಬೆಳಕು ಬರೋ ಜಾಗದಲ್ಲಿ ಮಲಗಿಸೋಕೆ ಏನಾಗಿದೆ? ಕಿಮಟು ವಾಸನೆ ಬರ್ತಿರೋ ಕತ್ತಲು ಕೋಣೆಯಲ್ಲಿ ಮಲಗಿಸಿದ್ದೀರಲ್ಲ. ಆಯಮ್ಮ ಉಸಿರಾಡೋಕೆ ಕಷ್ಟಪಡ್ತಿದ್ದಾರೆ ನೋಡಿ. ಮೊದಲು ಇಲ್ಲಿಂದ ಎತ್ಕಂಡೋಗಿ ಪಡಸಾಲೆಯಲ್ಲೋ ಇಲ್ಲವೇ ಜಗುಲಿ ಮೇಲೋ ಮಲಗಿಸಿ...’ ಎಂದು ಸ್ವಲ್ಪ ಜೋರು ಧ್ವನಿಯಲ್ಲಿ ಹೇಳಿದರು. ‘ಐದಾರು ದಿನಗಳಿಂದ ನಿಮ್ತಾಯಿ ಏನೂ ತಿಂದಿಲ್ಲ,. ನೀರೂ ಕುಡಿದಿಲ್ಲ ಅಂತೀರಿ. ಮಾತಾಡೋಕೆ, ಎದ್ದು ಓಡಾಡೋಕೆ ಅವರಿಗೆ ಶಕ್ತಿ ಬೇಡವೇನ್ರಿ?...’ ಎಂದು ಡಾಕ್ಟರು ಕೇಳಿದ್ದನ್ನು ಕೇಳಿಸಿಕೊಂಡ ಮೇಲೂ ಪುಟ್ಟಣ್ಣಯ್ಯ ಮತ್ತು ಅವನ ಮನೆಯ ಜನರಿಗೆ ಆತಂಕವೇನೂ ಆಗಲಿಲ್ಲ!

‘ಅಜ್ಜಮ್ಮಾ ಒಂದ್ಸಲ ಕಣ್‌ ಬಿಟ್ಟು ನೋಡಿ..’ ಎನ್ನುತ್ತ ಡಾಕ್ಟರು ಅಜ್ಜಿಯ ಮೈ ಅಲುಗಾಡಿಸಿದರು. ಅಜ್ಜಿ ಕಣ್ಣು ತೆರೆಯಲಿಲ್ಲ. ಡಾಕ್ಟರು ಪುಟ್ಟಣ್ಣಯ್ಯನ ಕಡೆ ನೋಡುತ್ತ ನಿಮ್ಮ ತಾಯಿಯವರ ಟೈಮು ಮುಗೀತಾ ಬಂದಿದೆ ಅನ್ಸುತ್ತೆ...’ ಅವರ ಜೀವ ಬಿಡುಗಡೆಗೆ ಕಾಯ್ತಿದೆ. ಮನೆಯಲ್ಲಿ ಗಂಗಾಜಲವೋ, ಮತ್ತೊಂದೋ ಇದ್ದರೆ ತಂದು ಬಾಯಿಗೆ ಬಿಡಿ. ಮಾತ್ರೆ ಗೀತ್ರೆ ಏನೂ ಬೇಡ. ನುಂಗಿಸಿದರೆ ಪ್ರಯೋಜ್ನ ಇಲ್ಲ. ಮೂರು ಗಂಟೆಗೊಂದಪ ಎಳ್ನೀರೋ, ಮಜ್ಗೆನೋ ಕುಡ್ಸಿ. ಅವರೇ ಕೇಳಿದರೆ ಕಾಫಿ ಕೊಡಿ. ಹೆಚ್ಚೆಂದರೆ ಇನ್ನೊಂದೆರಡು ದಿನ ಬದುಕಿದ್ದರೆ ಹೆಚ್ಚು ಎಂದು ಹೇಳಿ ಅಂಗಳದಲ್ಲಿ ಇರಿಸಿದ್ದ ಬಿಸಿನೀರಲ್ಲಿ ಕೈತೊಳೆದುಕೊಂಡು ಆಸ್ಪತ್ರೆ ಕಡೆಗೆ ಹೋದರು.

ADVERTISEMENT

ಡಾಕ್ಟರು ಹೋಗಿದ್ದೇ ತಡ ಪುಟ್ಟಣ್ಣಯ್ಯನ ಹೆಂಡತಿ ಗಾಯತ್ರಮ್ಮ, ನಾನು ಹೇಳಿದ್ನಲ್ಲ. ನಮ್ಮಜ್ಜಿನೂ ಹಿಂಗೇ ಅನ್ನ, ನೀರು ಬಿಟ್ಟ ಮೇಲೂ ಏಳೆಂಟು ದಿನ ಬದುಕಿತ್ತು! ಎನ್ನುತ್ತ ಅಲ್ಲೇ ಇದ್ದ ಮೈದುನರು, ಓರಗಿತ್ತಿಯರ ಮುಖ ನೋಡಿದಳು. ‘ಹೋಗ್ರಪ್ಪ, ಯಾರಾದರೂ ಹೊಸಳ್ಳಮ್ಮನ ಗುಡಿಗೋಗಿ ತೀರ್ಥಗಾಯಿ ಮಾಡ್ಡಿಸ್ಕಂಡ್‌ ಬರ್ರಿ. ದೇವರಮನೆಯಲ್ಲೇ ಕಾಯಿ ಒಡ್ದು ತೀರ್ಥ ಕುಡಿಸಣ...’ ಎಂದಳು.

ಅತ್ತಿಗೆ ಮಾತುಗಳು ತಮಗೆ ಕೇಳಿಸಲಿಲ್ಲ ಎಂಬಂತೆ ಇಬ್ಬರೂ ಮೈದುನರು ಅಮ್ಮನ ಮುಖ ನೋಡುತ್ತ ನಿಂತಿದ್ದರು. ಅಮ್ಮಯ್ಯನ್ನ ಹಾಸಿಗೆ ಸಮೇತ ಎತ್ಕಂಡ್‌ ತಂದು ಪಡಸಾಲೆಯಲ್ಲಿ ಮಂಚದ ಮೇಲೆ ಅಥವಾ ಹೊರಗೆ ಜಗುಲಿ ಪಕ್ಕ ಇರೋ ರೂಮಿನಲ್ಲೋ ಮಲಗಿಸುವ ಬಗ್ಗೆ ಅವರು ಯೋಚಿಸುತ್ತಿದ್ದಂತೆ ಕಂಡು ಬಂತು. ಮಂಚದ ಸುತ್ತ ನಿಂತು ಅಜ್ಜಿಯನ್ನೇ ನೋಡುತ್ತಿದ್ದ ಮೊಮ್ಮಕ್ಕಳ ಕಣ್ಣುಗಳಲ್ಲಿ ನೀರು ತುಂಬಿತ್ತು. ಗಂಗಜ್ಜಿ ಇದ್ಯಾವುದರ ಪರಿವೆಯಿಲ್ಲದೆ ನಿಶ್ಚಲವಾಗಿ ಮಲಗಿತ್ತು!. ಡಾಕ್ಟರನ್ನು ಕಳಿಸಿ ಮನೆಯೊಳಕ್ಕೆ ಬಂದ ಪುಟ್ಟಣ್ಣಯ್ಯ ತಮ್ಮಂದಿರ ಕಡೆಗೆ ನೋಡುತ್ತ ಊರಲ್ಲೇ ಇರೋ ಕಳ್ಳುಬಳ್ಳಿಗೆ ಅಮ್ಮಯ್ಯ ಬದುಕಿರುವಾಗ್ಲೇ ಬಂದು ಮಕ ನೋಡಿಕಂಡ್‌ ಹೋಗ್ರಿ ಅಂತ ಹೇಳಿ ಕಳಿಸಿ ಅಂದ. ಅಮ್ಮಯ್ಯನ ತೌರು ದೊಡ್ಡಗ್ರಹಾರದ ನೆಂಟರಿಗೆ ಸುದ್ದಿ ಮುಟ್ಟಿಸಿ ಬಾ ಅಂತ ಸಂಬಳದಾಳು ಯಂಕ್ಟಪ್ಪನಿಗೆ ಹೇಳಬೇಕು. ಈ ಸಲ ಯಾರಿಗೂ ಪೋನು ಮಾಡಬ್ಯಾಡ್ರಿ ಎಂದು ಪುಟ್ಟಣ್ಣಯ್ಯ ತಮ್ಮಂದಿರಿಗೆ ತಾಕೀತು ಮಾಡಿದ. ಅಣ್ಣಯ್ಯ ಹೇಳಿದ್ದು ಸರಿ ಅನ್ನಿಸಿದರೂ, ಅಮ್ಮಯ್ಯ ಇನ್ನೂ ಸತ್ತಿಲ್ಲ. ಈಗ್ಲೇ ಅವಸ್ರ ಮಾಡದು ಬ್ಯಾಡಣ್ಣ ಎಂದು ಪುಟ್ಟಣ್ಣಯ್ಯನ ಕೊನೇ ತಮ್ಮ ಗೋಪಾಲಿ ಹೇಳಿದ.

‘ಬದುಕಿರುವಾಗಲೇ ಸತ್ತರು ಅಂತ ಸುದ್ದಿ ಕೊಡಬಾರದಂತೆ. ಹಂಗೆ ಮಾಡಿದ್ರೆ ಯಮರಾಯ ಹತ್ತಿರಕ್ಕೆ ಬರಲ್ವಂತೆ! ಬಾಳಿ ಬದುಕ ಬೇಕಾಗಿರೋ ಮಕ್ಳು ಮರಿಗಳಿಗೆ ಒಳ್ಳೆಯದಾಗಲ್ಲ...’ ಎಂದು ಗೋಪಾಲಿ ಹೇಳಿದ್ದನ್ನು ಒಳ ಮನೆಯಲ್ಲೇ ಇದ್ದು ಕೇಳಿಸಿಕೊಂಡ ಮನೆಯ ಹೆಂಗಸರಿಗೆ ಸರಿ ಅನ್ನಿಸಿತು.

‘ಅತ್ತೆಮ್ಮನ ಜೀವ ಇವತ್ತು ಹೋಗುತ್ತೆ, ನಾಳೆ ಹೋಗುತ್ತೆ ಅಂತ ತಿಂಗಳಿಂದ ಹೇಳ್ತ ಇದೀವಿ. ಅವರ ಆಯಸ್ಸು ಮುಗಿದಿಲ್ಲ. ಮನೆಯಲ್ಲೇ ಎಲ್ಲೋ ಬಚ್ಚಿಟ್ಟಿರೋ ಒಡವೆಗಳನ್ನ ತಮ್ಮ ಹೆಣ್ಮಕ್ಕಳಿಗೆ ಹಂಚಿ ಕೊಡೋವರೆಗೂ ಅವರ ಜೀವ ಹೋಗಲ್ಲ ಅನ್ಸುತ್ತೆ. ಮೊದ್ಲು ಹೆಣ್ಮಕ್ಕಳಿಗೆ ಹೇಳಿ ಕಳ್ಸಿ. ಅವರು ಬಂದು ಮಕ ನೋಡಲಿ. ಒಡವೆಗಳನ್ನ ಅವರಿಗೆ ಕೊಟ್ಟ ಮೇಲೆ ಅತ್ತೆಮ್ಮ ಜೀವ ಬಿಡಬಹುದು...’ ಎಂದು ಗಾಯತ್ರಮ್ಮ ಸಹಜವಾಗಿ ಹೇಳಿದ್ದನ್ನು ಕೇಳಿ ಇಬ್ಬರೂ ಮೈದುನರ ಮೈ ಉರಿದುಹೋಯ್ತು. ಪ್ರಜ್ಞೆ ಕಳಕೊಂಡು ಮಲಗಿರೋ ಅಮ್ಮಯ್ಯನ ಬಗ್ಗೆ ಈ ಹೊತ್ತಲ್ಲಿ ಕೊಂಕು ಮಾತುಗಳ್ನ ಆಡದು ಬೇಕಿತ್ತ? ಬಂಗಾರದ ಒಡವೆಗಳನ್ನು ಬಚ್ಚಿಟ್ಕಂಡ್‌ ಹೆಣ್ಮಕ್ಕಳಿಗೆ ಕೊಡೋಕೆ ಅಂತ ಅಮ್ಮಯ್ಯ ಜೀವ ಹಿಡ್ಕಂಡಿದೆ ಅನ್ನಂಗೆ ಮಾತಾಡ್ತಾರಲ್ಲ ಗಾಯತ್ರತ್ತಿಗೆ? ಅವರ ಸಣ್ಣತನಕ್ಕೆ ಏನೇಳನ ಎಂದು ಗೋಪಾಲಿ ತನ್ನ ಮನಸ್ಸಿನಲ್ಲೇ ಹೇಳಿಕೊಂಡ. ಅಮ್ಮಯ್ಯನ ಕತ್ತಲ್ಲಿರೋ ಒಂದೆಳೆ ಸರ ಇಪ್ಪತ್ತು ಪೈಸೆ ಕಾಯಿನ್ನುಗಳನ್ನು ಕರಗಿಸಿ ಮಾಡಿಸಿದ್ದು. ಕೈಯಲ್ಲಿರೋ ಬಳೆಗಳು ಒನ್‌ ಗ್ರಾಂ ಚಿನ್ನದವು. ಅಮ್ಮಯ್ಯನ ನಗಗಳನ್ನು ಅಣ್ಣಯ್ಯ ನುಂಗಿ ನೀರು ಕುಡ್ದಿರೋ ವಿಷ್ಯ ಗೊತ್ತಿದ್ದರೂ ಅತ್ತಿಗೆ ಹಿಂಗೆ ಹೇಳಬಾರದಿತ್ತು ಎಂದು ಮೈದುನರು ಮನಸ್ಸಿನಲ್ಲೇ ಹೇಳಿಕೊಂಡರು. ಅಷ್ಟರಲ್ಲಿ ಪುಟ್ಟಣ್ಣಯ್ಯ ಬಂದು ಹೆಂಡತಿಯ ಕಡೆ ಕೆಕ್ಕರಿಸಿ ನೋಡುತ್ತ, ಮುಚ್ಕಂಡ್‌ ಎದ್ದೋಗಿ ಕೆಲಸ ನೋಡು ಎಂದು ಗದರಿದ!

‘ಅತ್ತೆಮ್ಮಾರು ಒಡವೆಗಳನ್ನು ಎಲ್ಲೋ ಬಚ್ಚಿಟ್ಟಿದ್ದಾರೆ ಅಂದ್ರಲ್ಲಕ್ಕ. ಅವನ್ನು ಪುಟ್ಟಣ್ಣ ಭಾವ ನಿಮ್ಮ ಸವತಿ ಟೀಚರಮ್ಮನಿಗೆ ಕೊಟ್ಟಿರೋದು ನಿಮಗೂ ಗೊತ್ತಲ್ಲ...’ ಎಂದು ಎರಡನೇ ಸೊಸೆ ಕಲಾವತಿ ಹೇಳಿದ್ದನ್ನು ಕೇಳಿ ಗಾಯತ್ರಮ್ಮನ ಮೈ ಉರಿಯಿತು. ಒಡವೆಗಳನ್ನು ತನ್ನ ಗಂಡ ಯಾವಳಿಗೋ ಕೊಟ್ಟಿದ್ದಾನೆ ಅನ್ನೋ ಕೊಂಕು ಮಾತು ಕಲಾವತಿ ಬಾಯಿಂದ ಬಂದದ್ದೇ ತಡ ಗಾಯತ್ರಮ್ಮನಿಗೆ ಥತ್‌ ಅನ್ನಿಸಿ ಮಾಡುತ್ತಿದ್ದ ಕೆಲಸ ಬಿಟ್ಟು ಅಡುಗೆ ಮನೆಯಿಂದ ಎದ್ದು ಸರಸರನೆ ಹಿತ್ತಲ ಕಡೆಗೆ ಹೋಗಿಬಿಟ್ಟಳು.

‘ಐದಾರು ತಿಂಗಳ ಹಿಂದೆ ಗಾಯತ್ರಮ್ಮನ ಕೊನೇ ತಮ್ಮ ಹನುಮಂತರಾಯ ಅಕ್ಕನಿಗೆ ಫೋನ್‌ ಮಾಡಿ ಪುಟ್ಟಣ್ಣ ಮಾಮನಿಗೆ ಹೊಸಳ್ಳಿ ಪಾಳ್ಯದ ಸ್ಕೂಲ್‌ ಟೀಚರೊಬ್ಬಳ ಜತೆ ಸಂಬಂಧ ಐತೆ ಅಂತ ನಿಮ್ಮೂರ ಜನ ಮಾತಾಡ್ತಾರೆ! ನೀನು ಗೊತ್ತೇ ಇಲ್ಲದವಳಂತೆ ಸುಮ್ಮನಿದ್ದೀಯಲ್ಲಕ್ಕ...’ ಎಂದು ಕೇಳಿದ್ದ. ಅವನು ಹೇಳುವವರೆಗೆ ಗಾಯತ್ರಮ್ಮನಿಗೆ ವಿಷಯ ಗೊತ್ತಿರಲಿಲ್ಲ. ಸುದ್ದಿ ಕ್ರಮೇಣ ಮನೆ ಮಂದಿಗೆ ಗೊತ್ತಾಗಿತ್ತು. ಗಂಡ ಇಟ್ಕಂಡಿರೋ ಆ ಟೀಚರ್‌ ಯಾರು? ಅವಳು ರಂಭೆಯೊ, ಊರ್ವಶಿಯೊ ಅಥವಾ ಮೂರೂ ಬಿಟ್ಟು ನಿಂತಿರೊ ಬೀದಿ ಬಸವಿಯೋ ಎಂದು ಗಾಯತ್ರಮ್ಮ ಮನಸ್ಸಿನಲ್ಲೇ ಹೇಳಿಕೊಂಡು ಸಿಡಿಮಿಡಿಗೊಂಡಿದ್ದಳು. ಗಂಡನ ಕಚ್ಚರುಕತನದ ಕಳ್ಳಾಟ ಎಷ್ಟು ದಿನಗಳಿಂದ ನಡೀತಿದೆ? ಅತ್ತೆಮ್ಮನ ಒಡವೆಗಳನ್ನು ಗಂಡ, ಟೀಚರಮ್ಮನಿಗೆ ಕೊಟ್ಟಿರಬೌದೇ ಎಂದು ಮತ್ತೆ ಮತ್ತೆ ಯೋಚಿಸಿ ಅವಳ ತಲೆ ಕೆಟ್ಟುಹೋಗಿತ್ತು. ಟೀಚರಮ್ಮನ ಜತೆಯಲ್ಲಿ ಗಂಡ ಎಲ್ಲೆಲ್ಲಿಗೆ ಹೋಗಿ ಬಂದಿರಬಹುದು ಎಂದು ಯೋಚಿಸಿದಳು. ಹನುಮಂತರಾಯ ಹೇಳಿದ್ದು ಸುಳ್ಳಾಗಲಿ ಎಂದು ತೌರು ಮನೆಯ ದೇವರು ಹೇಮಾವತಿಯ ಹೆಂಜೇರಪ್ಪ ದೇವರಿಗೆ ಹರಕೆ ಕಟ್ಟಿಕೊಂಡಿದ್ದಳು. ದೇವರನ್ನು ನೆನಪು ಮಾಡಿಕೊಂಡ ಸಮಯದಲ್ಲಿ ಚಣ ಹೊತ್ತು ಅವಳ ಮನಸ್ಸು ತಹಬಂದಿಗೆ ಬರುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಮತ್ತೆ ಏನೇನೋ ನೆನಪಾಗಿ ಮನಸ್ಸು ಪ್ರಕ್ಷುಬ್ಧವಾಗುತ್ತಿತ್ತು. ಅಂಥ ಸಮಯದಲ್ಲಿ ಕಾರಣವೇ ಇಲ್ಲದೆ ಗಂಡನ ಜತೆ ಜಗಳಕ್ಕೆ ಇಳಿಯುತ್ತಿದ್ದಳು. ಕೆಲವು ಸಲ ಮುನಿಸಿಕೊಂಡು ಮಾತು ಬಿಟ್ಟಿದ್ದಳು. ಒಂದು ಸಲ ಜಗಳ ತಾರಕಕ್ಕೆ ಹೋಗಿ ಮನೆ ಬಿಟ್ಟು ತೌರು ಸೇರಿಕೊಂಡಿದ್ದಳು.

‘ಯಾವನೋ ತಲೆ ಮಾಸಿದೋನು ಏನೋ ಹೇಳ್ದ ಅಂತ ನನ್ನ ಮ್ಯಾಲೆ ಅನುಮಾನ ಪಡ್ತೀಯಲ್ಲೇ ಗಾಯತ್ರಿ, ನಿನ್ನ ಬುದ್ದಿಗೆ ಏನಾಗಿದೆ? ಅದ್ಯಾವಳು ಟೀಚರು ಅಂಬದನ್ನಾದರೂ ಹೇಳು. ನಾನು ಯಾವಳ ಜತಿಗೂ ಸಂಬಂಧ ಇಟ್ಕಂಡಿಲ್ಲ. ಪಾಳ್ಯದ ತಿಮ್ಮಪ್ಪ ಮೇಷ್ಟರ ಮಗಳು ರಂಗಲಕ್ಷ್ಮಿ ಅಂತ ಒಬ್ಬಳು ಹೈಸ್ಕೂಲಲ್ಲಿ ಹಿಂದಿ ಟೀಚರಾಗಿದ್ದಾಳೆ. ಮೇಷ್ಟರು ಹೆಂಗಿದ್ದಾರೆ ಅಂತ ಒಂದೆರಡ್ಸಲ ಅವಳನ್ನು ಕೇಳಿದ್ದನ್ನು ಬಿಟ್ಟರೆ ನಂಗೂ ಅವಳಿಗೂ ಮಾತೇ ಇಲ್ಲ. ಅವಳಿಗೆ ಮದ್ವೆ ಆಗಿದೆ. ಅವಳ ಗಂಡ ನಮ್ಮ ದೂರದ ಸಂಬಂಧಿಕ. ಶಿರಾ ತಾಲ್ಲೂಕಿನ ಯಾವುದೋ ಹೈಸ್ಕೂಲಲ್ಲಿ ಮೇಷ್ಟರಾಗಿದ್ದಾನೆ. ಚಾಡಿ ಮಾತು ಕೇಳಿ ಜೀವನ ಹಾಳು ಮಾಡ್ಕಬೇಡ. ಮಕ್ಕಳ ಮಕ ನೋಡು, ಮನೆಗೆ ಬಾ...’ ಎಂದು ಪಟ್ಟಣ್ಣಯ್ಯ ಹೆಂಡತಿಯ ತೌರಿಗೆ ಹೋಗಿ ಗೋಗರೆದು ಹೆಂಡತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ. ಮಕ್ಕಳ ಮುಖ ನೆನಪಾಗಿ ಗಾಯತ್ರಮ್ಮ ಗಂಡನ ಜತೆ ಬಂದಿದ್ದಳು. ನನ್ನ ಗಂಡ ಅಂಥವನಲ್ಲ ಎಂದು ಪದೇ ಪದೇ ಮನಸ್ಸಿನಲ್ಲೇ ಹೇಳಿಕೊಂಡು ಸುಮ್ಮನಾಗಿದ್ದಳು. ಈಗ ಕಲಾವತಿ ಆಡಿದ ಕೊಂಕು ಮಾತಿನಿಂದ ಅವಳಿಗೆ ಅಸಾಧ್ಯ ಸಿಟ್ಟು ಬಂದಿತ್ತು.

ವರ್ಷದ ಹಿಂದೆ ಅತ್ತೆಮ್ಮನ ನಗಗಳು ಕಾಣ್ತಿಲ್ಲ ಅನ್ನೋದು ಗೊತ್ತಾದಾಗ ಮನೆಯಲ್ಲಿ ದೊಡ್ಡ ರಾದ್ಧಾಂತ ನಡೆದು ಹೋಗಿತ್ತು. ‘ಅಮ್ಮಯ್ಯನ ಒಡವೆಗಳನ್ನು ನಾನೇ ಶಿರಾದ ಸುಬ್ಬಯ್ಯಶೆಟ್ಟರ ಸರಾಫ್‌ ಅಂಗಡಿಯಲ್ಲಿ ಮಾರಿ, ಬಂದ ದುಡ್ಡಲ್ಲಿ ಬರಗೂರು ಗ್ರಾಮೀಣ ಬ್ಯಾಂಕಿನಲ್ಲಿ ಅಪ್ಪಯ್ಯ ಮಾಡಿದ್ದ ತೆಂಗಿನ ಮರದ ಲೋನನ್ನು ಬಡ್ಡಿ ಸಮೇತ ತೀರಿಸಿದೆನಲ್ಲ...’ ಎಂದು ಪುಟ್ಟಣ್ಣಯ್ಯ ಹೇಳಿದ್ದ.

‘ಅಣ್ಣಯ್ಯಾ, ನೀನೇಳ್ತಿರೋದು ಅಪದ್ಧ. ಅಪ್ಪಯ್ಯ ಬ್ಯಾಂಕಿನಲ್ಲಿ ಲೋನು ಮಾಡಿರಲಿಲ್ಲ...’ ಎಂದು ತಮ್ಮಂದಿರು ಎಷ್ಟೇ ವಾದಿಸಿದರೂ ಪುಟ್ಟಣ್ಣಯ್ಯ ಹೇಳಿದ್ದನ್ನೇ ಹೇಳಿ ಅವರ ಬಾಯಿ ಮುಚ್ಚಿಸಿದ್ದ. ಪುಟ್ಟಣ್ಣಯ್ಯನ ತಮ್ಮಂದಿರು ಬರಗೂರಿನ ಗ್ರಾಮೀಣ ಬ್ಯಾಂಕಿಗೆ ಹೋಗಿ ನಮ್ಮಪ್ಪಯ್ಯ ತೆಂಗಿನಮರದ ಸಾಲ ತಗಂಡಿದ್ದರಂತೆ ನಿಜವೇ? ಎಷ್ಟು ತಗಂಡಿದ್ದರು. ನಮ್ಮಣ್ಣಯ್ಯ ಸಾಲ ಚುಕ್ತಾ ಮಾಡಿದ್ದು ನಿಜವೇ ಎಂದು ವಿಚಾರಿಸಿದ್ದರು. ಬ್ಯಾಂಕಿನವರು ಸರಿಯಾದ ಮಾಹಿತಿ ಕೊಡಲಿಲ್ಲ. ಅಮ್ಮಯ್ಯನ ಒಡವೆಗಳನ್ನು ಅಣ್ಣಯ್ಯನೇ ಮಾರಿ ಕಳ್ಳಗಂಟು ಮಾಡಿಕೊಂಡಿರಬಹುದು ಎಂಬ ತೀರ್ಮಾನಕ್ಕೆ ಬಂದು ಸುಮ್ಮನಾಗಿದ್ದರು.

ಅಡಿಗೆ ಮನೆಯಿಂದ ಬುಸುಗುಡುತ್ತಲೇ ಹೊರಕ್ಕೆ ಬಂದ ಗಾಯತ್ರಮ್ಮ ಹಿತ್ತಲಿಗೆ ಹೋಗಿ ಜುವ್ವೆ ಮರದ ಕೆಳಗೆ ನಿಂತು ಸ್ವಲ್ಪ ಹೊತ್ತು ಸುಧಾರಿಸಿಕೊಂಡಳು. ಕ್ರಮೇಣ ಅವಳ ಮನಸ್ಸಿನ ಹೊಯ್ದಾಟ ಮತ್ತು ಉಸಿರಾಟ ಸ್ಥಿಮಿತಕ್ಕೆ ಬಂತು. ಮೈ ಕೈ ತುಂಬ್ಕಂಡಿರೋ ಹೆಂಗಸರು ಕಂಡರೆ ಸಾಕು ಜೊಲ್ಲು ಸುರಿಸುತ್ತ ಬೆದೆ ಹತ್ತಿದ ನಾಯಿಯಂತಾಡುತ್ತಿದ್ದ ಗಂಡನಿಂದಾಗಿ ಓರಗಿತ್ತಿಯ ಬಾಯಲ್ಲಿ ಕೇಳಬಾರದ ಮಾತುಗಳನ್ನು ಕೇಳಬೇಕಾಯ್ತು ಎಂದು ಗಾಯತ್ರಮ್ಮ ನೊಂದುಕೊಂಡಳು.

‘ದೊಡ್ಡ ಮನೆ, ದೊಡ್ಡ ಮನೆತನ. ತೆಂಗಿನ ತೋಟ, ಉಪವಾಸಪುರದ ಕೆರೆ ಹಿಂದೆ ಹತ್ತೆಕೆರೆ ಗದ್ದೆ. ಐವತ್ತೆಕರೆ ಕೆಂತರಲು ಹೊಲ ಇರೋ ಬಿದರಳ್ಳಿಯ ಮೂಡಲಗಿರಿಯಪ್ಪನ ಹಿರೀ ಸೊಸೆ ಅಂತ ಕರೆಸಿಕೊಳ್ಳೋ ಅದೃಷ್ಟ ಎಲ್ಲರಿಗೂ ಸಿಗಲ್ಲಮ್ಮಣ್ಣಿ. ನಿಮ್ಮತ್ತೆ ಸತ್ತಮೇಲೆ ನೀನೇ ಮನೆಗೆ ಯಜಮಾನ್ತಿ ಆಗ್ತೀಯ. ಪುಟ್ಟಣ್ಣಯ್ಯ ಕೆಂಪಗೆ ನೋಡಕೆ ಥೇಟ್‌ ಮೈಸೂರು ಮಾರಾಜನಂಗಿದ್ದಾನೆ. ನೀನು ಸುಖವಾಗಿರ್ತೀಯ...’ ಎಂದು ಅವಳಪ್ಪ ಒತ್ತಾಯ ಮಾಡಿದ್ದರಿಂದ ಗಾಯತ್ರಮ್ಮ, ಪುಟ್ಟಣ್ಣಯ್ಯನನ್ನು ಮದುವೆ ಆಗಲು ಒಪ್ಪಿದ್ದಳು. ಮದುವೆ ಆದ ಮೂರೇ ತಿಂಗಳಿಗೆ ಗಂಡ ನೆಕ್ಕುಜೋರಲು ಆಸಾಮಿ. ಅವನ ಮೈನ ಸೊಕ್ಕು ಇಳಿಸೋದು ನನ್ನಿಂದ ಆಗಲ್ಲ ಅನ್ನೋದು ಅವಳ ಅನುಭವಕ್ಕೆ ಬಂದಿತ್ತು. ಪಾವಗಡದ ತಾಲ್ಲೂಕಾಫೀಸಿನಲ್ಲಿ ಸೆಕೆಂಡ್‌ ಡಿವಿಜನ್‌ ಕ್ಲರ್ಕ್‌ ಆಗಿರುವ ದೂರದ ಸಂಬಂಧಿಕ ರಂಗಸಮುದ್ರದ ವಸಂತಕುಮಾರನನ್ನು ಮದುವೆ ಆಗಿದ್ದರೆ ಸುಖವಾಗಿರುತ್ತಿದ್ದೆ ಎಂದು ಗಾಯತ್ರಮ್ಮನಿಗೆ ಆಗಾಗ ಅನ್ನಿಸಿ ಪೇಚಾಡಿಕೊಳ್ಳುತ್ತಿದ್ದಳು. ಉದ್ದಕ್ಕೆ ಪಟ್ಲಕಾಯಿ ಥರ ಸಪೂರವಾಗಿದ್ದ ಗಾಯತ್ರಮ್ಮನ ಬಗ್ಗೆ ಪುಟ್ಟಣ್ಣಯ್ಯನಿಗೆ ಏನೇನೂ ಆಸಕ್ತಿ ಇರಲಿಲ್ಲ. ಎರಡು ಮಕ್ಕಳಾದ ಮೇಲೆ ಅವಳು ಇನ್ನಷ್ಟು ತೆಳ್ಳಗಾಗಿದ್ದಳು!

ಬಿತ್ನೆ ಬೀಜ, ಗೊಬ್ರ ತರಬೇಕು, ಕಂದಾಯ ಕಟ್ಟಬೇಕು, ಕಾಯಿ ಮಂಡಿಯವನು ಬಾಕಿ ಕೊಡ್ತೀನಿ ಬಂದು ತಗಂಡು ಹೋಗಿ ಅಂತ ಹೇಳಿ ಕಳ್ಸಿದ್ದಾನೆ. ಹೋಗಿ ಇಸ್ಕಂಡು ಬರಬೇಕು ಎಂದು ಪುಟ್ಟಣ್ಣಯ್ಯ ಒಂದಲ್ಲ ಒಂದು ಸಬೂಬು ಹೇಳಿ ಬರಗೂರು, ಶಿರಾ, ತುಮಕೂರಿಗೆ ಅಂತ ಆಗಾಗ ಹೋಗ್ತಿದ್ದ. ಹೊತ್ಮುಳುಗೋವತ್ತಿಗೆ ಬರ್ತೀನಿ ಅಂತ ಹೇಳಿ ಹೋದವನು ಮರುದಿನ ಸಂಜೆ ಹೊತ್ತಲ್ಲಿ ಬರ್ತಿದ್ದ. ರಾತ್ರಿ ಗಂಡ ಎಲ್ಲಿದ್ದ? ಅವನ ಜತೆ ಯಾರಿದ್ದರು ಇತ್ಯಾದಿ ಏನೇನೋ ಊಹಿಸಿಕೊಂಡು ಗಾಯತ್ರಮ್ಮ ಮೈಪರಚಿಕೊಳ್ಳುತ್ತಿದ್ದಳು. ಗಂಡ ಮನೆಗೆ ಬರುತ್ತಿದ್ದಂತೆ ಜಗಳ ತೆಗೆಯುತ್ತಿದ್ದಳು. ಸಿಟ್ಟು ಹೆಚ್ಚಾದಾಗ ಎದುರಿಗೆ ಸಿಕ್ಕ ತನ್ನ ಮಕ್ಕಳನ್ನು ಹಿಡಿದು ಹಿಗ್ಗಾಮುಗ್ಗಾ ತದುಕಿ ರಂಪಾಟ ಮಾಡುತ್ತಿದ್ದಳು. ‘ಈ ಮನೆಯ ಹಿರೇಸೊಸೆ ಪಟ್ಟವೂ ಬೇಡ. ಮನೆ ಮಂದಿಗೆಲ್ಲ ಬೇಯಿಸಿ, ಬಸಿಯೋ ಕಷ್ಟವೂ ಬೇಡ...’ ಎಂದು ಗಾಯತ್ರಮ್ಮ ಆಗಾಗ ಮನೆಯವರಿಗೆಲ್ಲ ಕೇಳಿಸುವಷ್ಟು ದೊಡ್ಡ ಧ್ವನಿಯಲ್ಲಿ ಹೇಳುತ್ತಿದ್ದಳು. ಮಾವಯ್ಯ ಸಾಯೊ ಮೊದಲು ಆಸ್ತಿಯನ್ನು ಹಂಚಿಕೊಟ್ಟಿದ್ದರೆ ತನಗೆ ಇಂತ ಕಷ್ಟಗಳು ಬರ್ತಿರಲಿಲ್ಲ ಎಂದು ಅವಳಿಗೆ ಆಗಾಗ ಅನ್ನಿಸ್ತಿತ್ತು.

ಮಾವ ಮೂಡಲಗಿರಿಯಪ್ಪ ತಮ್ಮ ಆಸ್ತಿಯನ್ನು ಗಂಡು ಮಕ್ಕಳ ಹೆಸರಿಗೆ ಬರೆದು ವಿಲ್‌ ಮಾಡಿಸಿದ್ದರು. ‘ನಿಮ್ಮಮ್ಮಯ್ಯ ಬದುಕಿರೋವರೆಗೆ ಆಸ್ತಿಗಳು ಜಂಟಿ ಖಾತೆಯಲ್ಲೇ ಇರಬೇಕು. ಮನೆಯ ದುಡ್ಡುಕಾಸಿನ ವ್ಯವಹಾರಗಳನ್ನು ಪುಟ್ಟಣ್ಣಯ್ಯ ನೋಡಿಕೊಳ್ಳಬೇಕು. ಅಮ್ಮಯ್ಯ ಸತ್ತ ಮೇಲೆ ನೀವು ನಿಮ್ಮ ಪಾಲಿಗೆ ಬಂದ ಆಸ್ತಿ ತಗಂಡು ಬ್ಯಾರೆ ಹೋಗಬೌದು ಅಥವಾ ಒಟ್ಟಿಗೆ ಇರಬೌದು ಎಂದು ವಿಲ್‌ನಲ್ಲಿ ಬರೆಸಿದ್ದರು.

ಅಮ್ಮಯ್ಯ ಸಾಯೋವರೆಗೆ ನಮಗೆ ಆಸ್ತಿ ಸಿಗಲ್ಲ ಅನ್ನೋದು ಖಚಿತವಾದ ಮೇಲೆ ಮೂವರೂ ಮಕ್ಕಳಿಗೂ ಒಟ್ಟಿಗೆ ಇರುವ, ಒಟ್ಟಿಗೆ ದುಡಿಯುವ ಕಷ್ಟ ತಪ್ಪಿರಲಿಲ್ಲ! ಅತ್ತೆಮ್ಮನಿಗೆ ಈಗ ಎಂಬತ್ತಾರು. ಅವರನ್ನು ನೋಡಿದರೆ ಸದ್ಯಕ್ಕೆ ಸಾಯುವ ಲಕ್ಷಣಗಳು ಕಾಣುತ್ತಿಲ್ಲ! ಇನ್ನೂ ಹತ್ತು ವರ್ಷ ಬದುಕಿರ್ತಾರೆ ಅನ್ನಿಸಿ ಮೂರೂ ಸೊಸೆಯಂದಿರು ಮಿಟ್ಟಾಣಿ ಮುದುಕಿ ಸಾಯೋವರೆಗೆ ನಮಗೆ ಬಿಡುಗಡೆ ಇಲ್ಲ ಎಂದು ಮನಸ್ಸಿನಲ್ಲೇ ಹೇಳಿಕೊಂಡು ಹಳಹಳಿಸುತ್ತಿದ್ದರು. ಬೆಳಿಗ್ಗೆ ಗುರುಮೂರ್ತಿ ಡಾಕ್ಟರ ಮಾತು ಕೇಳಿಸಿಕೊಂಡ ಮೇಲೆ ಮೂವರಿಗೂ ತಂಗ್ಳುಹೋಳಿಗೆ ತುಪ್ಪ ತಿಂದಷ್ಟು ಸಂತೋಷವಾಗಿತ್ತು. ಆ ಸಂತೋಷವನ್ನು ಕಷ್ಟಪಟ್ಟು ಹತ್ತಿಕ್ಕಿಕೊಂಡಿದ್ದರು. ನಮ್ಮ ಕಷ್ಟಗಳು ಕೊನೆಯಾಗೋ ಕಾಲ ಕೊನೆಗೂ ಬಂತು ಎಂದು ಸಂಭ್ರಮಿಸಿದ್ದರು.

ಪ್ರತಿ ವರ್ಷ ಉಗಾದಿ ಹುಣ್ಣಿಮೆಯ ದಿನ ಮರಡಿ ರಂಗಪ್ಪನ ಜಾತ್ರೆಯಲ್ಲಿ ದೇವರಿಗೆ ಅಕ್ಕಿತಂಬಿಟ್ಟಿನ ಆರತಿ ಎತ್ತುವಾಗ ಅತ್ತೆಮ್ಮ ಈ ವರ್ಷವಾದರೂ ಸಾಯಲಿ ಎಂದು ಮೂವರೂ ಪ್ರತ್ಯೇಕವಾಗಿ ಬೇಡಿಕೊಳ್ಳುತ್ತಿದ್ದರು. ಆದರೆ ದಿನಕ್ಕೆ ಮೂರು ಸಲ ಉಂಡು, ಹಗಲು ಹೊತ್ತಲ್ಲೂ ಗೊರಕೆ ಹೊಡೆಯುತ್ತ ಗಡದ್ದು ನಿದ್ದೆ ಮಾಡುತ್ತಿದ್ದ ಗಂಗಮ್ಮಜ್ಜಿ ಮನೆ, ಹಿತ್ತಲು ಅಂತ ಸಲೀಸಾಗಿ ಓಡಾಡಿಕೊಂಡು ಮಕ್ಕಳು, ಸೊಸೆಯರನ್ನು ಗದರಿಸುತ್ತ, ಮೊಮ್ಮಕ್ಕಳನ್ನು ಕೂರಿಸಿಕೊಂಡು ಕಥೆ ಹೇಳುತ್ತ ಗೆಲುವಾಗಿರುತ್ತಿದ್ದರು. ಕರೋನ ಬರೋವರೆಗೆ ಚೆನ್ನಾಗಿದ್ದ ಅಜ್ಜಿಗೆ ಎರಡನೇ ಅಲೆಯ ಸಮಯದಲ್ಲಿ ಎರಡು ದಿನ ಜ್ವರ ಬಂದಿತ್ತು. ಚೇತರಿಸಿಕೊಂಡ ಮೇಲೆ ನಿಶ್ಶಕ್ತಿ ಹೆಚ್ಚಾಯಿತು. ಕ್ರಮೇಣ ಓಡಾಟ ಕಡಿಮೆಯಾಗಿ ಕೋಣೆ ಸೇರಿಕೊಂಡಿದ್ದರು. ಒಂದೂವರೆ ವರ್ಷ ಅಜ್ಜಿ ಕೋಣೆ ಬಿಟ್ಟು ಹೊರ ಬಂದಿರಲಿಲ್ಲ. ಅತ್ತೆಮ್ಮ ಇವತ್ತು ಬೆಳಿಗ್ಗೆ, ಇಲ್ಲವೇ ಮುಸ್ಸಂಜೆ ಹೊತ್ತಿಗೆ ಸಾಯಬೌದು ಎಂದು ಹೆಚ್ಚುಕಡಿಮೆ ಪ್ರತಿ ದಿನ ಅನ್ನಿಸಿದರೂ, ಅದು ನಿಜವಾಗದೆ ಮೂವರೂ ಸೊಸೆಯರು ಹತಾಶರಾಗಿದ್ದರು.

*

‘ಅಮ್ಮಯ್ಯನ್ನ ಚೆನ್ನಾಗಿ ನೋಡ್ಕಳ್ಳಿ. ಅವರು ಏನು ತಿನ್ನಬೇಕು ಅಂತ ಕೇಳ್ತರೋ ಅದ್ನೆಲ್ಲ ಮಾಡ್ಕೊಡಿ. ಕೊನೆಗಾಲದಲ್ಲಿ ಅಮ್ಮಯ್ಯ ನೆಮ್ಮದಿಯಾಗಿರಬೇಕು ಎಂದು ಪುಟ್ಟಣ್ಣಯ್ಯ ಹೆಂಡತಿ ಮತ್ತು ನಾದಿನಿಯರಿಗೆ ತಾಕೀತು ಮಾಡಿದ್ದ. ಗಂಡಸರು ಮನೆಯಿಂದ ಹೊರ ಹೋಗುತ್ತಿದ್ದಂತೆ ಸೊಸೆಯರು ಅತ್ತೆಯ ಬಗ್ಗೆ ಉಪೇಕ್ಷೆ ತೋರುತ್ತಿದ್ದರು. ಬೆಳಿಗ್ಗೆ ಒಂಬತ್ತರ ಹೊತ್ತಿಗೆ ಮನೆಯಲ್ಲಿ ಏನು ಮಾಡಿರ್ತಾರೋ ಅದನ್ನು ತಂದು ಕೊಡುತ್ತಿದ್ದರು. ಖಂಡೇನಳ್ಳಿ ತಿಪ್ಪೇಸ್ವಾಮಿ ಬಸ್ಸು ಬರೋ ಹೊತ್ತಿಗೆ ಒಂದು ಮುದ್ದೆ, ಎರಡು ಸೌಟು ಸಾರು, ಒಂದು ಹಿಡಿ ಅನ್ನ, ನೀರು ಮಜ್ಜಿಗೆ ತಂದು ಅಜ್ಜಿಯ ಮುಂದೆ ಬಡಿಯುತ್ತಿದ್ದರು. ರಾತ್ರಿ ಹೊತ್ತಲ್ಲಿ ಕೊನೆಯ ಸೊಸೆ ಅಕ್ಕಿರವೆ ಉಪ್ಪಿಟ್ಟು ಮಾಡಿ ಕೊಡುತ್ತಿದ್ದಳು. ಮೂರು ದಿನಕ್ಕೊಮ್ಮೆ ಸ್ನಾನ ಮಾಡಿಸಲು ಸಂಬಳದಾಳು ಯಂಕ್ಟಪ್ಪನ ಹೆಂಡ್ತಿ ನರಸಮ್ಮ ಬರುತ್ತಿದ್ದಳು. ಇಷ್ಟೇ ಉಪಚಾರ ಮಾಡಿಸಿಕೊಂಡು ಅಜ್ಜಿ ಬದುಕಿತ್ತು. ಈಚೆಗೆ ಒಂದು ವಾರದಿಂದ ತಿನ್ನೋದನ್ನು ನಿಲ್ಲಿಸಿತ್ತು! ಬೆಳಿಗ್ಗೆ, ಸಂಜೆ ಮೊಮ್ಮಕ್ಕಳು ಪಾನಕವನ್ನೋ, ಇಲ್ಲವೇ ಕಾಪಿಯನ್ನೂ ತಂದು ಕುಡಿಸುತ್ತಿದ್ದರು.

*

‘ಅಮ್ಮಯ್ಯನ ಮಣ್ಣಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಕಳ್ಳುಬಳ್ಳಿ, ಬೀಗರು ಬಿಜ್ಜರೆಲ್ಲ ಹತ್ತಿರದಲ್ಲೇ ಇದ್ದಾರೆ. ದೇವ್ರಳ್ಳದ ಪಕ್ಕ ನಮ್ಮ ತೋಟದಲ್ಲಿ ಅಪ್ಪಯ್ಯನ ಗುಡ್ಡೆ ಪಕ್ಕವೇ ಮಣ್ಣು ಮಾಡನ...’ ಎಂದು ಪುಟ್ಟಣ್ಣಯ್ಯ ತಮ್ಮಂದಿರಿಗೆ ಹೇಳಿದ. ಇವತ್ತು ಹೊತ್ತು ಮುಳುಗೋವತ್ತಿಗೆ ಉಸಿರು ನಿಂತರೆ ಮೂರನೇ ದಿನಕ್ಕೆ ಹಾಲು ತುಪ್ಪ. ಹನ್ನೊಂದನೆ ದಿನ ಯಾವತ್ತು ಬರುತ್ತೆ ಅಂದುಕೊಳ್ಳುತ್ತ ಕ್ಯಾಲೆಂಡರು ನೋಡಿದ. ಹನ್ನೊಂದನೆ ದಿನ ಅಮಾಸೆ. ಅವತ್ತು ದಿವಸ ಮಾಡಕಾಗಲ್ಲ. ಸಾಯದು ಒಂದು ದಿನ ತಡವಾದರೆ ಅಮಾಸೆಯ ಅನಿಷ್ಟವೂ ಕಳೆದು ಹೋಗುತ್ತೆ ಅಂದುಕೊಂಡ. ಸಾಯೋ ಗಳಿಗೆಯನ್ನು ನೆನಪಿಟ್ಟುಕೊಂಡು ಬ್ರಮ್ಮಾಚಾರಿ ಮನೆಗೋಗಿ ಅಮ್ಮಯ್ಯ ಸತ್ತ ಗಳಿಗೆ ಚೆನ್ನಾಗಿದೆಯೋ, ಇಲ್ಲವೋ ಕೇಳಬೇಕು. ಚೆನ್ನಾಗಿಲ್ಲ ಅಂದರೆ ಮನೆಗೆ ಶಾಂತಿ ಮಾಡಿಸಬೇಕಾಗುತ್ತೆ ಎಂದು ಯೋಚಿಸಿದ. ದಿವಸದ ಊಟಕ್ಕೆ ಏನೇನು ಪದಾರ್ಥ ಮಾಡಿಸಬೇಕು? ಅಮರಾಪುರದಿಂದ ಅಡಿಗೆಯವರನ್ನು ಕರೆಸಬೇಕು ಇತ್ಯಾದಿ ಕುರಿತು ಮೂವರು ಮಕ್ಕಳು ವಿವರವಾಗಿ ಮಾತಾಡಿಕೊಂಡರು. ಅಮ್ಮಯ್ಯನ ಸದ್ಗತಿಗಾಗಿ ಮನೆದೇವರು ಮರಡಿ ರಂಗಪ್ಪನಿಗೆ ಹನ್ನೊಂದನೆ ದಿನ ಅಭಿಷೇಕ ಮಾಡಿಸಬೇಕು ಎಂದು ನಿರ್ಧರಿಸಿದರು.

ಇಡೀ ದಿನ ಮನೆಯಲ್ಲಿ ಸೂತಕದ ಛಾಯೆ ಇತ್ತು. ಕೈ ಬಿಡುವಾದಾಗಲೆಲ್ಲ ಮನೆಯ ಹೆಂಗಸರು ಪಡಸಾಲೆಗೆ ಬಂದು ಮಲಗಿದ್ದ ಅತ್ತೆಯನ್ನು ದಿಟ್ಟಿಸಿ ನೋಡುತ್ತಿದ್ದರು. ಉಸಿರಾಡುತ್ತಿದ್ದಾರೋ ಇಲ್ಲವೋ ಎಂದು ಉಸಿರು ಬಿಗಿಹಿಡಿದು ಗಮನಿಸುತ್ತಿದ್ದರು. ತೆರೆದುಕೊಂಡೇ ಇದ್ದ ಅವರ ಬಾಯಿಗೆ ಗುಟುಕು ನೀರು ಬಿಡುತ್ತಿದ್ದರು. ಕೆಲವು ಸಲ ನೀರು ಗಂಟಲೊಳಕ್ಕೆ ಇಳಿದರೆ, ಉಳಿದಂತೆ ಹೊರಬರುತ್ತಿತ್ತು. ಇವತ್ತು ಸಂಜೆ ಅಥವಾ ನಡುರಾತ್ರಿ ಅತ್ತೆಮ್ಮ ನಮ್ಮನ್ನು ಬಿಟ್ಟು ಹೋಗೋದು ಗ್ಯಾರಂಟಿ ಎಂದು ಮೂವರಿಗೂ ಅನ್ನಿಸಿತು.

ಅವತ್ತು ಮುಸ್ಸಂಜೆ ಹೊತ್ತಲ್ಲಿ ಮನೆಯ ಹಿಂದೆ ದೂರದಲ್ಲಿ ಶಕುನದ ಹಕ್ಕಿ ಕೂಗುವ ಸದ್ದು ಕೇಳಿಸಿತು. ಅದು ಅಲ್ಲೆಲ್ಲೋ ಕೂಗೋ ಬದಲಿ ನಮ್ಮನೆ ಮುಂದಿನ ಮರದ ಮೇಲೆ ಕುಂತು ಕೂಗಬಾರದೇ ಎಂದು ಸೊಸೆಯರು ಮನಸ್ಸಿನಲ್ಲೇ ಹೇಳಿಕೊಂಡರು. ಮೂರು ದಿನ ಹಕ್ಕಿ ಆಗಾಗ ಕೂಗು ಹಾಕುತ್ತಲೇ ಇತ್ತು.

*

ನಿಮ್ಮಮ್ಮಯ್ಯನ ದಿವಸ ಮುಗಿದ ಮೇಲೆ ಕಬ್ಬಿಣ ಪೆಟ್ಟಿಗೆಯಲ್ಲಿರೋ ವಿಲ್‌ ತೆಗೆದು ಓದಬೇಕು ಎಂದು ಮೂಡಲಗಿರಿಯಪ್ಪ ಸಾಯುವ ಮೊದಲು ಮೂವರೂ ಮಕ್ಕಳಿಗೆ ಹೇಳಿದ್ದರು. ವಿಲ್‌ನಲ್ಲಿ ಏನು ಬರೆದಿದ್ದಾರೆ ಅನ್ನೋ ಬಗ್ಗೆ ಮೂವರು ಮಕ್ಕಳಿಗೂ ಕುತೂಹಲ ಇತ್ತು. ನೀವಿಬ್ಬರೂ ಒಪ್ಪೋದಾದರೆ ಇವತ್ತೇ ವಿಲ್‌ ಒಡ್ದು ನೋಡನ ಎಂದು ಪುಟ್ಟಣ್ಣಯ್ಯ ತಮ್ಮಂದಿರನ್ನು ಕೇಳಿದ. ಇಷ್ಟು ದಿನವೇ ಕಾದಿದ್ದೀವಂತೆ. ಆತುರ ಮಾಡದು ಬ್ಯಾಡಣ್ಣ. ವಿಲ್‌ ಬರೆದು ರಿಜಿಸ್ಟರು ಮಾಡಿಸಿದ ಲಾಯರಿಗೆ ಹೇಳದೆ ವಿಲ್‌ ಒಡೆಯೋದು ಬೇಡ ಎಂದು ಗೋಪಾಲಿ ಹೇಳಿದ. ಅಮ್ಮಯ್ಯ ಸತ್ತ ಮೇಲೆ ಒಡೆದು ನೋಡ್ರಿ ಅಂತ ಅಪ್ಪಯ್ಯನೇ ಹೇಳಿದ್ರಲ್ಲ. ಅವರಿಗೆ ಮಾತು ಕೊಟ್ಟಿದ್ದೀವಿ ಅನ್ನೋದನ್ನು ನೆನಪು ಮಾಡಿದ.

‘ಅತ್ತೆಮ್ಮಾರು ಸಾಯದು ಕಾಯಂ ಅಂತ ಗುರುಮೂರ್ತಿ ಡಾಕ್ಟರೇ ಹೇಳಿದ್ರಲ್ಲ. ನೀವೇ ವಿಲ್‌ ಒಡೆದು ನೋಡ್ರಿ. ನಮ್ಮ ಪಾಲಿಗೆ ಏನು ಬರುತ್ತೋ ಅದನ್ನು ಈಗಿನಿಂದಲೇ ಜೋಪಾನ ಮಾಡಿಕೊಳ್ಳಭೌದು ಎಂದು ರಾತ್ರಿ ಗಾಯತ್ರಮ್ಮ ಪಕ್ಕದಲ್ಲಿ ಮಲಗಿ ಏನನ್ನೋ ಯೋಚಿಸುತ್ತಿದ್ದ ಗಂಡನ ಕಿವಿಯಲ್ಲಿ ಪಿಸುಗುಟ್ಟಿದ್ದಳು. ದುರ್ಗದ ರಸ್ತೆ ಪಕ್ಕದಲ್ಲಿರೋ ನಾಕೆಕರೆ ಬೆದ್ದಲು ಹೊಲ ನಮಗೆ ಬಂದರೆ ಸಾಕು. ಸೈಟುಗಳನ್ನಾಗಿ ಮಾಡ್ಸಿ ಮಾರಿದರೆ ಹತ್ತನ್ನೆರಡು ಕೋಟಿ ಸಿಗುತ್ತೆ. ತುಮಕೂರಲ್ಲಿ ತಗಂಡಿರೋ ಸೈಟಿನಲ್ಲಿ ಮನೆ ಕಟ್ಟಿಸಿ ಅಲ್ಲಿಗೇ ಹೋಗಿ ಇದ್ದು ಬಿಡನ. ಮಕ್ಕಳ ಓದಿಗೆ ತುಮಕೂರು ಸರಿಯಾದ ಊರು ಎಂದು ಪುಟ್ಟಣ್ಣಯ್ಯ ಯಾವಾಗಲೋ ಹೇಳಿದ್ದು ಅವಳಿಗೆ ನೆನಪಾಗಿತ್ತು.

ಅರ್ಧ ಎಕರೆಯಲ್ಲಿರೊ ದೊಡ್ಡಮನೆ, ಒಂದೂವರೆ ಎಕರೆಯಷ್ಟು ಕಣ ಮತ್ತು ಜಮೀನುಗಳು. ಊರಲ್ಲೇ ಇರೋ ಮೂರು ಸೈಟುಗಳನ್ನು ಯಾರ ಹೆಸರಿಗೆ ಬರೆದಿದ್ದಾರೆ ಅನ್ನೋ ಬಗ್ಗೆ ಮಕ್ಕಳಿಗೆ ಕುತೂಹಲ ಇತ್ತು. ಅಪ್ಪನ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕೊಡಬೇಕು ಅಂಬೋ ಹೊಸ ರೂಲ್ಸು ಬಂದಿದೆಯಂತೆ! ಆಸ್ತಿಯಲ್ಲಿ ನಮಗೂ ಪಾಲುಬೇಕು ಎಂದು ತಂಗಿಯರು ಕೇಳಿದರೆ ಏನೇಳದು? ಕೊಡಲ್ಲ ಅಂದ್ರೆ ಅವರು ಏನು ಮಾಡಬೌದು? ತಂಗಿಯರು ಸುಮ್ಮನಿದ್ದರೂ ಮನೆಹಾಳ ಭಾವಂದಿರು ಸುಮ್ಮನಿರಲ್ಲ. ಅವರು ಸುಮ್ಮನಿದ್ದರೂ ಹೇಳಿ ಕೊಡೋ ಜನ ಇದ್ದೇ ಇರ್ತಾರಲ್ಲ ಎಂದು ಮೂವರೂ ಸೊಸೆಯರು ಪ್ರತ್ಯೇಕವಾಗಿ ಯೋಚಿಸಿದರು.

ವಿಲ್‌ ಪತ್ರವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿರೊ ಸಣ್ಣ ಖಜಾನೆಯಲ್ಲಿಟ್ಟು ಮಕ್ಕಳ ಎದುರಲ್ಲಿ ಅಪ್ಪಯ್ಯ ಬೀಗ ಹಾಕಿ ಅದರ ಮೇಲೆ ಅರಗಿನ ಮುದ್ರೆಯನ್ನು ಹಾಕಿಸಿದ್ದರು. ಅಪ್ಪಯ್ಯ ಸತ್ತ ಮೇಲೆ ವರ್ಷಕ್ಕೊಮ್ಮೆ ಪುಟ್ಟಣ್ಣಯ್ಯ ತನ್ನ ಇಬ್ಬರೂ ತಮ್ಮಂದಿರನ್ನು ಕರೆದು ನೋಡ್ರಪ್ಪ, ಸೀಲು ಹಂಗೇ ಐತೆ, ನೋಡ್ಕಳಿ. ನಾನು ವಿಲ್‌ ನೋಡಿದ್ದೀನಿ ಅಂಬೋ ಮಾತು ನಾಳೆ ನಿಮ್ಮಿಂದ ಬರಬಾರದು ಎಂದು ಹೇಳುತ್ತಿದ್ದ. ಉಳಿದಂತೆ ಮನೆಯ ಹೆಂಗಸರ ನಗಗಳು, ತೆಂಗಿನಕಾಯಿ, ಬತ್ತ, ರಾಗಿ, ಕಡ್ಲೇಕಾಯಿ ಮಾರಿ ಬಂದ ದುಡ್ಡು ಪುಟ್ಟಣ್ಣಯ್ಯನ ಸುಪರ್ದಿನಲ್ಲೇ ಇದ್ದವು. ದೀಪಾವಳಿ ಅಮಾಸೆಯ ಲಕ್ಷ್ಮಿ ಪೂಜೆ ದಿನ ಮೂವರೂ ಕೂತು ವರ್ಷದ ಲೆಕ್ಕ ನೋಡುತ್ತಿದ್ದರು. ಇಷ್ಟಾದರೂ ಅಮ್ಮಯ್ಯನ ನಗಗಳು ಕಾಣೆಯಾದ ಮೇಲೆ ತಮ್ಮಂದಿರಿಗೆ ಪುಟ್ಟಣ್ಣಯ್ಯನ ಮೇಲೆ ನಂಬಿಕೆ ಹೋಗಿತ್ತು. ಅಪನಂಬಿಕೆಗೆ ಹೆಚ್ಚಾಗಲು ಅವರ ಹೆಂಡತಿಯರೇ ಕಾರಣ. ಅತ್ತೆಮ್ಮ ಒಡವೆಗಳನ್ನು ಮನೆಯಲ್ಲೇ ಎಲ್ಲೋ ಬಚ್ಚಿಟ್ಟಿದ್ದಾರೆ. ಅವನ್ನು ತಮ್ಮ ಹೆಣ್ಣು ಮಕ್ಕಳಿಗೆ ಹಂಚಿ ಕೊಡಬೌದು ಎಂದು ಹಿರೇಸೊಸೆ ಭಾವಿಸಿದ್ದರೆ, ಕಿರಿಯ ಸೊಸೆಯರು ಇನ್ನೆಲ್ಲಿಯ ಒಡವೆಗಳು? ಪುಟ್ಟಣ್ಣ ಭಾವನ ಸೂಳೆ ಹಾಕ್ಕಂಡ್‌ ಮೆರೀತಿದ್ದಾಳಲ್ಲ ಅಂತ ಮನಸ್ಸಿನಲ್ಲೇ ಹೇಳಿಕೊಳ್ಳುತ್ತಿದ್ದರು.

*

ಬೆಳಗಿನ ಜಾವದ ನಾಲ್ಕು ಗಂಟೆಗೆ ಹೊತ್ನಲ್ಲಿ ಕಣಜನಹಳ್ಳಿ ದಿಕ್ಕಿನಲ್ಲಿ ಧೂಮಕೇತು ಕಾಣಿಸಿತು ಎಂದು ಯಾರೋ ಹೇಳಿದ್ದನ್ನು ಕೇಳಿ ಊರ ಜನ ಹೆದರಿದರು. ಧೂಮಕೇತು ಕಾಣದು ಒಳ್ಳೆಯ ಲಕ್ಷಣ ಅಲ್ಲ ಎಂದು ಅನೇಕರಿಗೆ ಅನ್ನಿಸಿತು. ಈ ವರ್ಷ ದೇಶಕ್ಕೇನೋ ಗಂಡಾಂತರ ಕಾದಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಊರಿನ ದೊಡ್ಡ ತಲೆ ಬಿದ್ದು ಹೋಗುತ್ತೆ ಅಂದರು. ಆ ಹಿರೀತಲೆ ಯಾವುದು ಎಂದು ಲೆಕ್ಕ ಹಾಕುತ್ತಿರುವಾಗ ಯಾರೋ ಪುಟ್ಟಣ್ಣಯ್ಯನ ತಾಯಿ ಗಂಗಮ್ಮಜ್ಜಿ ಹಾಸಿಗೆ ಹಿಡಿದು ಮಲಗಿರೋ ವಿಷಯ ಹೇಳಿದರು. ಅಜ್ಜಿ ಹೆಚ್ಚು ದಿನ ಬದುಕಿರಲ್ಲ ಅಂತ ಗುರುಮೂರ್ತಿ ಡಾಕ್ಟರೇ ಪರೀಕ್ಷೆ ಮಾಡಿ ಹೇಳಿದರಂತೆ ಎಂದು ಮಾತಾಡಿಕೊಂಡರು. ಪುಟ್ಟಣ್ಣಯ್ಯನ ತಾಯಿ ಸಾಯೋದು ಖಚಿತ ಎಂದು ಊರು ಭಾವಿಸಿತು.

ಮರು ದಿನ ಬೆಳಿಗ್ಗೆಯೇ ಗಂಗಜ್ಜಿಯನ್ನು ನೋಡಲು ಜನ ಬರತೊಡಗಿದರು. ಗಂಗಮ್ಮಜ್ಜಿಗೆ ಈಗ ನೂರಾಮೂರು ವರ್ಷವಂತೆ ಎಂದು ಯಾರೋ ಹೇಳಿದನ್ನು ಊರು ನಂಬಿತು. ಈ ಕಾಲದಲ್ಲಿ ಅರವತ್ತು ವರುಷ ಬದುಕಿರೋದೇ ಹೆಚ್ಚು. ಅಂಥದ್ದರಲ್ಲಿ ಗಂಗಮ್ಮಜ್ಜಿಗೆ ನೂರಾಮೂರು ಅಂದರೆ ಅದು ಮರಡಿ ರಂಗಪ್ಪನ ಪವಾಡವಲ್ಲದೆ ಮತ್ತೇನು ಎಂದು ಮಾತಾಡಿಕೊಂಡರು. ಶತಾಯುಷಿ ಗಂಗಜ್ಜಿಯ ಕಾಲು ಮುಟ್ಟಿ ನಮಸ್ಕಾರ ಮಾಡಿ ಆಶೀರ್ವಾದ ಪಡೆಯಬೇಕು ಎಂದು ಊರ ಹೆಂಗಸರಿಗೆ ಅನ್ನಿಸಿತು. ಪುಟ್ಟಣ್ಣಯ್ಯನ ಮನೆಗೆ ಬರುವವರು ಹೆಚ್ಚಾದರು. ಬಂದವರು ಅಜ್ಜಿಯನ್ನು ನೋಡಿದ ಮೇಲೆ ಪುಣ್ಯಾತ್‌ಗಿತ್ತಿ ನೂರಾಮೂರು ಉಗಾದಿ ಮಾಡಿದಳು ಎಂದು ಹೇಳುತ್ತಿದ್ದರು. ಇಷ್ಟು ವರ್ಷ ಬದುಕಬೇಕು ಅಜ್ಜಿ ಊಟ ತಿಂಡಿಯಲ್ಲಿ ಎಷ್ಟು ನೇಮ ಮಾಡಿರಬೇಕು? ಹಂಗೆ ಇರೋಕೆ ನಮ್ಮಿಂದ ಸಾಧ್ಯವ ಎಂದು ಹೇಳುತ್ತ ನಿಮ್ಮತ್ತೆ ಏನೇನು ತಿಂತಿದ್ದರು? ಎಷ್ಟು ತಿಂತಿದ್ದರು ಎಂದೆಲ್ಲ ಮನೆಯ ಹೆಂಗಸರ ಬಳಿ ವಿಚಾರಿಸುತ್ತಿದ್ದರು. ಕೆಲವರು ಪ್ರತಿ ದಿನವೂ ಬರುತ್ತಿದ್ದರು. ಕ್ರಮೇಣ ಮನೆಯವರ ಅದರಲ್ಲೂ ಹೆಂಗಸರ ನೆಮ್ಮದಿ ಹಾಳಾಯಿತು. ಹೊತ್ತಲ್ಲದ ಹೊತ್ತಲ್ಲಿ ಬಂದು, ಅರ್ಧಗಂಟೆಯಷ್ಟು ಹೊತ್ತು ಪಡಸಾಲೆಯಲ್ಲೇ ಕುಂತಿದ್ದು ತಾವೇ ತಂದ ಕುಟ್ಟಣಿಗೆಯಲ್ಲಿ ಎಲೆಅಡಿಕೆ ಹಾಕಿ ಕುಟ್ಟುತ್ತ ಹರಟುತ್ತಿದ್ದ ಊರಿನ ಮುದುಕಿಯರನ್ನು ಕಂಡು ಮನೆಯ ಸೊಸೆಯರಿಗೆ ರೇಗಿಹೋಯಿತು. ಪಡಸಾಲೆಯಲ್ಲಿ ಅತ್ತೆಯೊಬ್ಬರನ್ನೇ ಬಿಟ್ಟು ಒಳ ಮನೆಯಲ್ಲಿ ಇರುವಂತಿಲ್ಲ. ಹಗಲು ಹೊತ್ತು ಊಟವಾದ ಮೇಲೆ ಚಣವೊತ್ತು ಮಲಗುವಂತಿಲ್ಲ. ಅತ್ತೆಯನ್ನು ನೋಡಲು ಬಂದವರು ಕುಡಿಯಲು ನೀರು ಕೊಡಿ ಅಂತಲೋ, ಎಲೆ,ಅಡಿಕೆ, ಸುಣ್ಣ, ಹೊಗೆಸೊಪ್ಪು ಕೊಡಿ ಅಂತ ಕೇಳುತ್ತ ತಲೆ ತಿನ್ನ ತೊಡಗಿದರು. ಗುರುಮೂರ್ತಿ ಡಾಕ್ಟರು ಬೆಳಗಾಗುವವರೆಗೆ ಬದುಕಿದ್ದರೆ ಹೆಚ್ಚು ಅಂತೇಳಿ ಹತ್ತು ದಿನಗಳಾದ್ವಂತೆ. ಅನ್ನ ನೀರು ಇಲ್ಲದೆ ಬರೀ ಗಾಳಿ ಕುಡಕಂಡು ದಿನಗಟ್ಟಲೆ ಬದುಕಿರುವ ಚೋಜಿಗ ಎಲ್ಲಾದರೂ ಉಂಟೇ ಎಂದು ಊರ ಹೆಂಗಸರು ತಮ್ಮ ತಮ್ಮಲ್ಲೇ ಮಾತಾಡಿಕೊಂಡರು.

‘ಮೊದಲು ನಿಮ್ಮ ತಂಗಿಯರಿಗೆ ಹೇಳಿ ಕಳಸಪ್ಪ. ಹೆಣ್ಮಕ್ಕಳನ್ನು ನೋಡಬೇಕು ಅಂತ ನಿಮ್ಮಮ್ಮಯ್ಯ ಜೀವ ಹಿಡ್ಕಂಡಿರಬಹುದು...’ ಎಂದು ಯಾರೋ ಪುಟ್ಟಣ್ಣಯ್ಯನಿಗೆ ಹೇಳಿದರು. ಅಮ್ಮಯ್ಯ ಸಾಯೋವರೆಗೆ ಯಾರಿಗೂ ಹೇಳಿ ಕಳಿಸಬಾರದು ಎಂದು ಪುಟ್ಟಣ್ಣಯ್ಯ ನಿರ್ಧರಿಸಿದ್ದ.

‘ಅಪ್ಪನ ಆಸ್ತಿಯಲ್ಲಿ ಹೆಣ್ಮಕ್ಕಳಿಗೆ ಸಮಪಾಲು ಕೊಡಬೇಕು ಅಂತ ರೂಲ್ಸು ಬಂದಿರೋದು ನಮಗೆ ಗೊತ್ತಿದೆ. ಆಸ್ತಿಯಲ್ಲಿ ಪಾಲು ಕೊಡದಿದ್ರೆ ನಾವು ಕೋರ್ಟಿಗೆ ಹೋಗ್ತೀವಿ...’ ಎಂದು ಕೊನೇ ತಂಗಿ ಕಲ್ಪನಾಳ ಗಂಡ ರಾಜಣ್ಣ ಯಾರ ಬಳಿಯೋ ಹೇಳಿದ್ದ ಎನ್ನುವುದು ಪುಟ್ಟಣ್ಣಯ್ಯನಿಗೆ ಗೊತ್ತಿತ್ತು. ರಾಜಣ್ಣ ಭಾವನಿಗೆ ಲಾಯರುಗಳು, ಕಾನೂನು ಗೊತ್ತಿದೆ. ಅವನೇ ಐದಾರು ವರ್ಷಗಳಿಂದ ಒಂದೆರಡು ಕೇಸುಗಳಿಗೆ ಶಿರಾ, ತುಮಕೂರು ಕೋರ್ಟಿಗೆ ಹೋಗಿ ಬರ್ತಿದ್ದಾನೆ ಅನ್ನೋದೂ ಗೊತ್ತಿತ್ತು. ಮೊದಲು ಅವನನ್ನು ಸರಿ ಮಾಡಿಕೊಳ್ಳಬೇಕು. ದೊಡ್ಡ ತಂಗಿ ಗಂಡ ವೆಂಕ್ಟಪ್ಪನಿಗೆ ಬೇಕಾದಷ್ಟು ಆಸ್ತಿ ಪಾಸ್ತಿ ಇದೆ. ಅವನು ಹೆಂಡತಿ ತೌರಿನ ಆಸ್ತಿಗೆ ಆಸೆಪಡೋನಲ್ಲ ಎಂದು ಪುಟ್ಟಣ್ಣಯ್ಯ ಲೆಕ್ಕ ಹಾಕಿದ್ದ.

‘ನಾಳೆ ವತ್ತಾರೆವರೆಗೆ ನೋಡನ. ಅಮ್ಮಯ್ಯನ ಸ್ಥಿತಿ ಹಿಂಗೇ ಇದ್ರೆ ಇಬ್ಬರಿಗೂ ಫೋನ್‌ ಮಾಡಿ ಬಂದು ನೋಡ್ಕಂಡ್‌ ಹೋಗಿ ಅಂತ ಹೇಳಿದರಾಯ್ತು...’ ಎಂದು ಪುಟ್ಟಣ್ಣಯ್ಯ ನಿರ್ಧರಿಸಿದ. ರಾತ್ರಿ ಹತ್ತರ ಹೊತ್ತಿಗೆ ಗಂಗಮ್ಮಜ್ಜಿ ಏದುಸಿರು ಬಿಡ ತೊಡಗಿತು. ಜತೆಗೆ ಬಿಕ್ಕಳಿಕೆ ಶುರುವಾಯಿತು. ಎದುರು ಬಿಕ್ಕಳಿಕೆ ಒಳ್ಳೆಯದಲ್ಲ ಎಂದು ಮಕ್ಕಳಿಗೆ ಖಚಿತವಾಯಿತು. ಅದನ್ನು ತಮ್ಮ ಹೆಂಡತಿಯರಿಗೆ ಬಾಯಿಬಿಟ್ಟು ಹೇಳಿದರು. ಅವರ ಮಾತಿಗೆ ಹೆಂಡತಿಯರು ತಲೆ ಕೆಡಿಸಿಕೊಳ್ಳಲಿಲ್ಲ. ಮರುದಿನ ಬೆಳಿಗ್ಗೆ ಪುಟ್ಟಣ್ಣಯ್ಯ ಇಬ್ಬರೂ ತಂಗಿಯರಿಗೆ ಫೋನ್‌ ಮಾಡಿ, ಅಮ್ಮಯ್ಯನಿಗೆ ಆರೋಗ್ಯ ಸರಿ ಇಲ್ಲ ಬಂದು ನೋಡ್ಕಂಡ್‌ ಹೋಗ್ರಿ ಎಂದು ಫೋನ್‌ ಮಾಡಿದ. ತಂಗಿಯರು ಬಂದ ಮೇಲೆ ಅಮ್ಮಯ್ಯ ಸಾಯಬಹುದು ಎಂದು ಅವನಿಗೆ ಅನ್ನಿಸಿತು.

*

ಅಣ್ಣಯ್ಯ ಈಚೆಗೆ ಮನಸ್ನಲ್ಲೇ ಲೆಕ್ಕಾಚಾರ ಹಾಕ್ತ ಇರ್ತಾನೆ ಎಂದು ತಮ್ಮಂದಿರಿಗೆ ಅನುಮಾನ ಬಂತು. ಈಚೆಗೆ ಅವನು ಕಬ್ಬಿಣದ ಪೆಟ್ಟಿಗೆ ಬಾಗಿಲು ತೆರೆದಿರಲಿಲ್ಲ. ಇವತ್ತು ಬೆಳಿಗ್ಗೆ ಎರಡು ಸಲ ತೆಗೆದಿದ್ದ ಅನ್ನೋದು ಗೊತ್ತಾದ ಮೇಲೆ ತಮ್ಮಂದಿರ ಅನುಮಾನ ಹೆಚ್ಚಾಯಿತು. ಮನೆಯ ಖರ್ಚಿಗೆ, ಕೂಲಿಗಳ ಬಡವಾಡೆಗೆ ಅಂತ ಸ್ವಲ್ಪ ಹಣವನ್ನು ಬ್ಯಾಂಕಿನಿಂದ ತಂದು ಅವನ ಕೋಣೆಯ ಬೀರುನಲ್ಲಿ ಇಟ್ಟುಕೊಳ್ಳೋದು ತಮ್ಮಂದಿರಿಗೆ ಗೊತ್ತಿತ್ತು. ಅಮ್ಮಯ್ಯ ಸಾಯೋ ಮೊದಲೇ ಅಣ್ಣಯ್ಯ ವಿಲ್‌ ಒಡೆದು ನೋಡಿರಬಹುದೇ? ಮೊದಲೇ ಶಕುನಿಯಂಥ ಆಸಾಮಿ. ವಿಲ್ಲನ್ನು ತನಗೆ ಅನುಕೂಲ ಆಗುವಂತೆ ತಿದ್ದಲು ಹೇಸೋದಿಲ್ಲ ಎಂದು ಅನುಮಾನಿಸಿದರು. ಅಣ್ಣಯ್ಯನ ನಡವಳಿಕೆ ಬಗ್ಗೆ ಅನುಮಾನ ಬರ್ತಿದೆ ಎಂದು ಗೋಪಾಲಿ ತನ್ನ ಹೆಂಡತಿ ಬಳಿ ಹೇಳಿದ. ಮರುದಿನವೇ ಅವಳು ಹಿರಿಯೂರು ತಾಸೀಲ್ದಾರ್‌ ಆಫೀಸಿನಲ್ಲಿ ಗುಮಾಸ್ತೆ ಆಗಿರೋ ತನ್ನಣ್ಣನಿಗೆ ಫೋನ್‌ ಮಾಡಿ ವಿಲ್ಲನ್ನು ತಿದ್ದಕೆ ಆಗುತ್ತಾ ಎಂದು ಕೇಳಿದಳು.

‘ರಿಜಿಸ್ಟರ್‌ ಆಗಿರೋ ವಿಲ್ಲನ್ನು ತಿದ್ದಕಾಗಲ್ಲ. ಅನುಮಾನ ಪಡಬೇಡ ಅಂತ ನಿನ್ನ ಗಂಡನಿಗೆ ಹೇಳು...’ ಎಂದು ಅವಳ ತಮ್ಮ ಹೇಳಿದ ಮೇಲೆ ಗೋಪಾಲಿ ಮತ್ತವನ ಹೆಂಡತಿಗೆ ನಿರಾಳವೆನಿಸಿತು.

‘ಅಮ್ಮಯ್ಯಂಗೆ ತಿರುಪತಿಗೆ ಹೋಗಿ ಸ್ವಾಮೀನ ನೋಡಬೇಕು ಅಂಬೋ ಆಸೆ ಇತ್ತು. ಹತ್ತಾರು ಸಲ ನನ್ನತ್ರ ಹೇಳಿದರೂ ನಾವು ತಿಮ್ಮಪ್ಪನ ಕಳ್ಳಒಕ್ಕಲು. ನಾವೇ ನೇರವಾಗಿ ತಿರುಪತಿಗೆ ಹೋಗಂಗಿಲ್ಲ. ಯಾರಾದರೂ ಕರಕೊಂಡು ಹೋದರೆ ಹೋಗಬಹುದು...’ ಯಾರನ್ನಾರೂ ಕೇಳಿ ನೋಡ್ತೀನಿ. ಮುಂದಿನ ವರ್ಷ ನಮ್ಮನ್ನು ಕರಕಂಡು ಹೋಗಿ ಅಂತ ಪುಟ್ಟಣ್ಣಯ್ಯ ಅಮ್ಮನಿಗೆ ಹೇಳುತ್ತ ತಿರುಪತಿ ಯಾತ್ರೆಯನ್ನು ಮುಂದೂಡಿದ್ದ. ತಿಮ್ಮಪ್ಪನ ದರ್ಶನ ಮಾಡಕೆ ಆಗಲಿಲ್ಲ ಅಂತ ಅಮ್ಮಯ್ಯ ಕೊರಗುತ್ತಿರಬಹುದೇ ಎಂದು ಕೊಳ್ಳುತ್ತ ಪಡಸಾಲೆಗೆ ಬಂದು ಅಮ್ಮನ ಮುಖ ನೋಡಿದ. ನಾವು ತಿಮ್ಮಪ್ಪನ ಕಳ್ಳೊಕ್ಕಲು ಅಂತ ಸಬೂಬು ಹೇಳಿ ತಿರುಪತಿಗೆ ಕರಕಂಡು ಹೋಗದೆ ತಪ್ಪು ಮಾಡಿದೆ ಅಂತ ಅವನ ಮನಸ್ಸು ಇಡೀ ದಿನ ಹಳಹಳಿಸಿತು. ನಮ್ಮ ಖರ್ಚಿನಲ್ಲೇ ಹೋಗಿ ದೇವರ ಹುಂಡಿಗೆ ತಪ್ಪು ಕಾಣಿಕೆ ಹಾಕಬಹುದಿತ್ತು ಅನ್ನೋದು ನನಗೆ ಹೊಳೆಯಲಿಲ್ಲವಲ್ಲ ಎಂದು ಪೇಚಾಡಿಕೊಂಡ.

*

ಮರು ದಿನ ಬೆಳಿಗ್ಗೆ ಒಂಬತ್ತು ಗಂಟೆ ಹೊತ್ತಿಗೆ ಗಂಗಮ್ಮಜ್ಜಿಯ ಇಬ್ಬರೂ ಹೆಣ್ಣು ಮಕ್ಕಳು ತಂತಮ್ಮ ಮಕ್ಳು, ಮರಿಗಳ ಸಮೇತ ಬಂದರು. ಪಡಸಾಲೆಯಲ್ಲಿ ಮಲಗಿದ್ದ ತಾಯಿಯನ್ನು ನೋಡಿ ಹೋ ಎಂದು ಏರು ಧ್ವನಿಯಲ್ಲಿ ಅಳತೊಡಗಿದರು. ಇದ್ದಕ್ಕಿದ್ದಂತೆ ಅಳಲು ಮುಂದಾದ ತಾಯಂದಿರನ್ನು ನೋಡಿ ಅವರ ಚಿಳ್ಳೆ ಪಿಳ್ಳೆಗಳು ಅಳ ತೊಡಗಿದವು. ಅಳುತ್ತಲೇ ಎಲ್ಲರೂ ಮನೆಯೊಳಕ್ಕೆ ಬಂದರು. ಹಾಗೆ ಬಂದವರನ್ನು ನೋಡಿ ಮನೆಯೊಳಗಿದ್ದ ಹೆಂಗಸರು ಮಕ್ಕಳು ಅಳಲು ಶುರು ಮಾಡಿದರು. ಪೈಪೋಟಿಗೆ ಬಿದ್ದವರಂತೆ ಅತ್ತರು. ಮನೆ ಮಂದಿಯೆಲ್ಲ ಒಟ್ಟಿಗೇ ಅಳುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದ ಮನೆಗಳ ಜನರು ಗಂಗಜ್ಜಿ ಸತ್ತಿರಬಹುದು ಎಂದು ಭಾವಿಸಿ ಮನೆಯ ಅಂಗಳಕ್ಕೆ ಬಂದರು. ಅಳು ನಿಂತ ಮೇಲೆ ಗಂಗಜ್ಜಿಯ ಹೆಣ್ಮಕ್ಕಳು ಬಂದಿದ್ದಾರೆ ಎನ್ನುವುದು ಅವರಿಗೆ ಗೊತ್ತಾಯಿತು. ‘ಅಮ್ಮಯ್ಯನಿಗೆ ಹುಷಾರಿಲ್ಲ ಅಂಬದನ್ನು ನಮಗೆ ಹೇಳಕೆ ತಡ ಮಾಡಿದ್ರಿ...’ ಎಂದು ಇಬ್ಬರೂ ತಂಗಿಯರು ಅಣ್ಣಂದಿರನ್ನು ತರಾಟೆಗೆ ತಗಂಡರು. ನಾವು ಊರಿಗೆ ಬಂದು ಮೂರು ವರ್ಷಗಳಾದ್ವು, ನೀವು ಬದುಕಿದ್ದೀರ, ಸತ್ತಿದ್ದೀರ ಅಂತ ನೀವ್ಯಾರೂ ವಿಚಾರಿಸಲಿಲ್ಲ. ಅಮ್ಮಯ್ಯನಿಗೆ ಮಾತು ಬಿದ್ದು ನೆಲಕಚ್ಚಿದ ಮೇಲೆ ಹೇಳಿ ಕಳಿಸಿದ್ದೀರ ಎಂದು ಆಕ್ಷೇಪಿಸಿದರು. ಅಮ್ಮಯ್ಯನ್ನ ನೋಡಿದ್ದಾಯ್ತಲ್ಲ, ನಾವು ಊರಿಗೆ ಹೋಗ್ತೀವಿ ಎನ್ನುತ್ತ ಇಬ್ಬರೂ ಹೊರಟು ನಿಂತರು!. ಅವರನ್ನು ಸಮಾಧಾನ ಮಾಡುವಷ್ಟರಲ್ಲಿ ಪುಟ್ಟಣಯ್ಯ ಮತ್ತು ಅವನ ತಮ್ಮಂದಿರಿಗೆ ಸಾಕು ಸಾಕಾಯಿತು. ಅಮ್ಮಯ್ಯ ಹುಷಾರಾಗ್ತಾರೆ ಅಂತ ಡಾಕ್ಟರು ಹೇಳಿದ್ದರಿಂದ ನಿಮಗೆ ಫೋನ್‌ ಮಾಡದು ತಡ ಮಾಡಿದೆ ಎಂದು ಪುಟ್ಟಣ್ಣಯ್ಯ ತಂಗಿಯರಿಗೆ ಸಬೂಬು ಹೇಳಿ, ನಮ್ಮಿಂದ ತಪ್ಪಾಗಿದೆ. ಹೊಟ್ಟೆಗೆ ಹಾಕ್ಕಳಿ ಎಂದು ಮೂವರೂ ಕ್ಷಮೆ ಕೇಳಿದರು.

ಹತ್ತು ದಿನ ಕಳೆದು ಹೋದವು. ಅಮ್ಮಯ್ಯ ಇವತ್ತು ಸಾಯಬೌದು. ನಾಳೆ ಸಾಯಬೌದು ಎಂದು ಕಾದಿದ್ದೇ ಬಂತು. ಸಾಯುವ ಲಕ್ಷಣಗಳು ಕಾಣಲಿಲ್ಲ! ಗಂಡನ್ನ, ಮನೇನ ಬಿಟ್ಟು ಬಂದು ಇಲ್ಲಿ ಸಾವಿಗೆ ಕಾಯ್ಕಂಡು ಕೂತಿದ್ದೇವಲ್ಲ ಎಂದು ಹೆಣ್ಮಕ್ಕಳಿಗೆ ಅನ್ನಿಸಿತು. ಹತ್ತು ದಿನಗಳು ಕಳೆದರೂ ಅಮ್ಮಯ್ಯ ಒಂದು ಸಲವಾದ್ರೂ ಕಣ್‌ ಬಿಟ್ಟು ನೋಡಲಿಲ್ಲ. ಬಾಯಿ ತೆರೆದು ಒಂದು ಮಾತು ಆಡಲಿಲ್ಲ ಎಂದು ಇಬ್ಬರೂ ನೊಂದುಕೊಂಡರು. ಇನ್ನು ಸಾವಿಗೆ ಕಾಯುತ್ತ ಕೂರುವುದರಲ್ಲಿ ಅರ್ಥವಿಲ್ಲ ಅನ್ನಿಸಿತು. ಅಪ್ಪನ ಆಸ್ತಿಯಲ್ಲಿ ಹೆಣ್ಮಕ್ಕಳಿಗೆ ಸಮ ಪಾಲಿದೆ ಅಂಬೋ ಕಾನೂನು ಬಂದಿರೋದು ನಮಗೆ ಗೊತ್ತಿದೆ. ಆಸ್ತಿಯಲ್ಲಿ ನಮಗೆ ಪಾಲು ಕೊಡಬೇಕು ಎಂದು ಅಮ್ಮಯ್ಯ ಬದುಕಿರುವಾಗಲೇ ಅಣ್ಣಂದಿರನ್ನು ಕೇಳದು ಚೆನ್ನಾಗಿರಲ್ಲ ಎಂದು ಇಬ್ಬರಿಗೂ ಅನ್ನಿಸಿ ಅಮ್ಮಯ್ಯನ ಉಸಿರು ನಿಂತ ಮೇಲೆ ಪೋನು ಮಾಡ್ರಣ್ಣ ಮಣ್ಣಿಗೆ ಬರ್ತೀವಿ ಎಂದು ಹೇಳಿ ಇಬ್ಬರೂ ತಮ್ಮ ಮಕ್ಕಳು,ಮರಿಗಳ ಸಮೇತ ಊರಿಗೆ ಹೋದರು.

*

ಮರುದಿನ ಬೆಳಿಗ್ಗೆ ಹತ್ತರ ಹೊತ್ತಲ್ಲಿ ಗಂಗಮ್ಮಜ್ಜಿ ಕಣ್ಣು ತೆರೆಯಿತು. ಅದನ್ನು ಗಮನಿಸಿದ ಪುಟ್ಟಣ್ಣಯ್ಯನ ದೊಡ್ಡ ಮಗಳು ಲಕ್ಷ್ಮಿದೇವಿ ಮನೆ ಮಂದಿಗೆಲ್ಲ ಕೇಳುವಂತೆ ಅಜ್ಜಿ ಕಣ್ಬಿಡ್ತು, ಅಜ್ಜಿ ಕಣ್ಬಿಡ್ತು ಎಂದು ಸಂತೋಷದಿಂದ ಕೂಗಿ ಹೇಳಿದಳು. ಸಂಬಳದಾಳನ್ನು ಕಳಿಸಿ ಹಿತ್ತಲಲ್ಲಿರೋ ಮರದಿಂದ ಎಳ್ನೀರು ಕೀಳಿಸಿ ತಂದು ಅಜ್ಜಿಗೆ ಕುಡಿಸಿದಳು. ಅಜ್ಜಿ, ಅರ್ಧ ಲೋಟ ಕಾಯಿನೀರು ಕುಡೀತು ಅಂತ ಮನೆ ಮಂದಿಗೆಲ್ಲ ಹೇಳಿದಳು. ಅವಳ ಮಾತು ಕೇಳಿ ಎಲ್ಲರಿಗೂ ಆಶ್ಚರ್ಯ. ಮಧ್ಯಾಹ್ನ ಗೋಪಾಲಿಯ ಕೊನೇ ಮಗ ಬಾಲಗೋವಿಂದ ಅಜ್ಜಿಗೆ ಮಜ್ಜಿಗೆ ಕುಡಿಸಿದೆ ಅಂದ. ಅಜ್ಜಿ ಒಂದು ಲೋಟದಷ್ಟು ಮಜ್ಜಿಗೆ ಕುಡಿದಿತ್ತು! ಇದರಿಂದ ಮೊಮ್ಮಕ್ಕಳಿಗೆ ಸಂತೋಷವಾಗಿತ್ತು. ಹಾಲು, ಪಾನಕ, ಮಜ್ಜಿಗೆ, ಎಳನೀರು ಕುಡಿಸಿದರೆ ಅಜ್ಜಿ ಚೇತರಿಸಿಕೊಂಡು ಮೊದಲಿನಂತೆ ಆಗಬಹುದು ಎಂದು ಮೊಮ್ಮಕ್ಕಳಿಗೆ ಅನ್ನಿಸಿತು. ಮಕ್ಕಳು ಅಜ್ಜಿಗೆ ಮತ್ತೆ ಮತ್ತೆ ಏನನ್ನಾದರೂ ಕುಡಿಸುವುದು ಅವರ ತಾಯಂದಿರಿಗೆ ಇಷ್ಟವಾಗಲಿಲ್ಲ.

*

ಮುಸ್ಸಂಜೆ ಹೊತ್ತಲ್ಲಿ ಗೋವಿಂದ ಶೆಟ್ಟರ ಮಗಳು ರುಕ್ಮಿಣಿ ಗಂಗಜ್ಜಿಯನ್ನು ನೋಡಲು ಬಂದಳು. ಗಾಯತ್ರಮ್ಮನ ಜತೆ ಮಾತಾಡುತ್ತ ನಾವು ಕಾಶಿ, ಅಯೋಧ್ಯೆ ಕಡೆಗೆ ಟೂರು ಹೋಗಿದ್ವಿ. ನಿನ್ನೆ ಸಾಯಂಕಾಲ ಊರಿಗೆ ಬಂದ್ವಿ. ರಾತ್ರಿ ಅಜ್ಜಿ ಸತ್ತಂಗೆ ಕನಸು ಬಿತ್ತು. ನೋಡನ ಅಂತ ಬಂದೆ ಅನ್ನುತ್ತ ಪಡಸಾಲೆಯಲ್ಲಿ ಮಲಗಿದ್ದ ಅಜ್ಜಿಯನ್ನು ಐದಾರು ಅಡಿಯಷ್ಟು ದೂರದಲ್ಲಿ ನಿಂತು ನೋಡಿದಳು. ‘ಮನೆಗೆ ಹೋದ ಮೇಲೆ ಕಾಶಿಯಿಂದ ತಂದಿರೋ ಗಂಗಾಜಲದ ಗಿಂಡಿ ಕಳಿಸಿಕೊಡ್ತೀನಿ. ಒಡ್ದು ಅಜ್ಜಿಗೆ ಕುಡಿಸಿ, ಸರಿ ಹೋಗ್ತಾರೆ...’ ಎಂದು ಹೇಳಿಹೋದಳು.

ಅವತ್ತು ರಾತ್ರಿ ಎಚ್ಚರವಾದಾಗಲೆಲ್ಲ ಪುಟ್ಟಣ್ಣಯ್ಯ ಎದ್ದು ಬಂದು ಅಮ್ಮಯ್ಯನನ್ನು ನೋಡಿ ಬಾಯಿಗೆ ಸ್ವಲ್ಪ ನೀರು ಬಿಟ್ಟು ಹೋದ. ಅತ್ತೆ ಹಾಸಿಗೆ ಹಿಡಿದು ಮಲಗಿದಾಗಿನಿಂದ ಒಂದು ರಾತ್ರಿಯೂ ಬಂದು ನೋಡದ ಗಾಯತ್ರಮ್ಮ ಅವತ್ತು ರಾತ್ರಿ ಮೂರು ಸಲ ಬಂದು ಅತ್ತೆಮ್ಮನ ಬಾಯಿಗೆ ಗಂಗಾ ಜಲ ಬಿಟ್ಟು ಹೋದಳು!

ಬೆಳಕು ಹರಿಯಿತು. ಹಿಂದೂಪುರಕ್ಕೆ ಹೋಗುವ ಮೊದಲ ಬಸ್ಸು ಬಂದ ಮೇಲೆ ಬೆಳಗಾಯಿತೆಂದು ಅಂಗಳದಲ್ಲಿ ಮಲಗಿದ್ದ ಸಂಬಳದಾಳುಗಳು ಗಡಿಬಿಡಿಯಿಂದ ಎದ್ದರು. ದನಕರುಗಳಿಗೆ ಹುಲ್ಲು ಹಾಕಿ, ಕೊಟ್ಟಿಗೆಯ ಸಗಣಿ ತೆಗೆದು ಕಸ ಗುಡಿಸಲು ಮುಂದಾದರು. ಗೋಪಾಲಿಗೆ ಎಚ್ಚರವಾಯಿತು. ಎದ್ದು ಪಡಸಾಲೆಗೆ ಬಂದ. ಬಚ್ಚಲ ಮನೆಗೆ ಹೋಗಿ ಬಂದು ಅಮ್ಮಯ್ಯನ ಕಡೆಗೆ ನೋಡಿದ.‌ ಗಂಗಜ್ಜಿ ಕಣ್ಣು, ಬಾಯಿ ದೊಡ್ಡದಾಗಿ ತೆರೆದಿತ್ತು. ಗಾಬರಿಯಾಗಿ ಹತ್ತಿರ ಬಂದವನು ಅಮ್ಮನ ಹಣೆಯ ಮೇಲೆ ಕೈ ಇಟ್ಟ. ಹಾಗೇ ಕೈಗಳನ್ನು ಮುಟ್ಟಿದ. ಮೈಯಿ ಮರಗಟ್ಟಿ ತಣ್ಣಗಾಗಿತ್ತು. ಮುಖ ಕಪ್ಪಗಾಗಿತ್ತು!

ಗೋಪಾಲಿ ಅಂಗಳಕ್ಕೆ ಬಂದು ಸಗಣಿ ತೆಗೆಯುತ್ತಿದ್ದ ಆಳು ಮಕ್ಕಳನ್ನು ಕರೆದು, ‘ತಿಪ್ಪೆ ಹತ್ರ ಹೋಗಿ ಕುಳ್ಳು ತಗಂಡು ಬರ್ರಿ ಹೊಗೆ ಹಾಕಬೇಕು...’ ಎನ್ನುತ್ತ ಅಮ್ಮಯ್ಯನ ಕಡೆ ನೋಡತೊಡಗಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.