ADVERTISEMENT

ನಾಕಿನ್ ದವೆ ಅವರ ಕಥೆ: ನಾಯಿಯ ಸಾವು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 0:24 IST
Last Updated 31 ಆಗಸ್ಟ್ 2025, 0:24 IST
<div class="paragraphs"><p>ಕಥೆ</p></div>

ಕಥೆ

   

ಮೂಲ: ಪಿನಾಕಿನ್ ದವೆ

ಕನ್ನಡಕ್ಕೆ: ಡಿ.ಎನ್. ಶ್ರೀನಾಥ್

ADVERTISEMENT

-ಇಪ್ಪತ್ತೈದು
-ಐವತ್ತು!
-ನೂರು!
-ನೂರಾ ಇಪ್ಪತ್ತೈದು
-ನೂರಾ ಐವತ್ತು!
-ಇನ್ನೂರು!
ಹರಾಜು ಇನ್ನಷ್ಟು ಏರಬೇಕಿತ್ತು. ಇನ್ನೂರು ರೂಪಾಯಿಗಳಿಗೆ ಕೂಗು ನಿಂತಿದ್ದನ್ನು ನೋಡಿ ಹರಾಜು ಹಾಕುವವನು ಅಲ್ಲಿ ಕಲೆತಿದ್ದ ಗುಂಪನ್ನು ಉತ್ಸಾಹ ಹೆಚ್ಚಿಸುವ ದೃಷ್ಟಿಯಿಂದ ನೋಡಿದ.
ಅವನು ಎರಡು ದಿನಗಳ ಹಿಂದೆ ಸ್ಥಳೀಯ ಪತ್ರಿಕೆಯಲ್ಲಿ ಒಂದು ಜಾಹೀರಾತನ್ನು ಕೊಟ್ಟಿದ್ದ. ಪ್ರತಿಕ್ರಿಯೆಯಲ್ಲಿ ಸುಮಾರು ನೂರು ಜನರ ಗುಂಪು ಅವನ ಅಂಗಳದಲ್ಲಿ ಕಲೆಯಿತು. ಅವನು ಹರಾಜಿನ ಕೂಗಿಗೆ ಉತ್ತೇಜಿಸುತ್ತಿದ್ದ. ಅವನ ಎದುರು ಮೇಜಿನ ಮೇಲೆ ಬಿಳಿ ಕೂದಲಿನ, ಗಿಡ್ಡ ಆಕಾರದ ಒಂದು ನಾಯಿ ಮತ್ತು ಖಾಕಿ ಬಣ್ಣದ ಇನ್ನೊಂದು ನಾಯಿ ಕೂತಿದ್ದವು. ನಾಯಿಗಳು ಸಹ ಆಹ್ವಾನಿತ ಜನರನ್ನು ನೋಡಿ ಎಚ್ಚರದಿಂದಿವೆ ಎಂದು ತೋರುತ್ತಿತ್ತು. ಅವು ಬಾಲ ಮುದುರಿಕೊಂಡು, ಭಯದಿಂದ ಕೂತಿದ್ದವು. ಹರಾಜು ಹಾಕುವ ವ್ಯಕ್ತಿ ಆಗಾಗ ನಾಯಿಗಳ ಬೆನ್ನನ್ನು ನೇವರಿಸುತ್ತಾ ತನ್ನ ಬಳಿ ನಿಂತಿದ್ದ ಮಿತ್ರನೊಂದಿಗೆ ಹರಟುತ್ತಿದ್ದ.
“ಮೊದಲಿನ ಹಾಗೆ ಈಗ ಒಳ್ಳೆಯ ಗ್ರಾಹಕರು ಸಿಗಲ್ಲ. ಹಣ ಸಾಕಷ್ಟಿದ್ದರೂ, ಚಿಕ್ಕಾಸಿನಂತೆ...”
“ಕಾಲವೇ ಹೀಗಿದೆ.” ಎಂದ ಮಿತ್ರ.
“ಇನ್ನೂರಾ ಇಪ್ಪತ್ತೈದು!” ಗುಂಪಿನಲ್ಲಿದ್ದ ಒಬ್ಬ ಕೂಗಿದ.
“ವಾಹ್!” ಹರಾಜು ಹಾಕುವವನು ‘ಮೂಡ್’ ಗೆ ಬಂದ. ಅವನು ಕೂಗು ಹಾಕಿದವನನ್ನು ಪ್ರಶಂಸಿಸಿದ. ನಂತರ ತನ್ನ ಮಾತಿನ ಲಗಾಮನ್ನು ಸಡಿಲಿಸಿದ, “ಮಿತ್ರರೇ, ಇಂಥ ವಿದೇಶಿ ಜಾತಿಯ ಮತ್ತು ತರಬೇತಿ ಪಡೆದ ನಾಯಿಗಳು ಸುಲಭದಲ್ಲಿ ಸಿಗಲ್ಲ. ಇವು ನಿಮ್ಮೊಂದಿಗೆ ಜೀವಮಾನವಿಡೀ ಇರುತ್ತವೆ, ಆದ್ರೆ ನೀವು ಇವುಗಳನ್ನು ದುಡ್ಡಿನಿಂದ ಅಳೆಯುತ್ತಿದ್ದೀರ!”
“ಇನ್ನೂರಾ ಐವತ್ತು.”
“ಶಬಾಶ್!” ಅವನ ಕಣ್ಣುಗಳಲ್ಲಿ ಕಾಂತಿ ಮೂಡಿತು.
“ಮುನ್ನೂರು!”
“ನಾಲ್ಕನೂರು!”
ವಾತಾವರಣದಲ್ಲಿ ಉತ್ತೇಜನ ವೃದ್ಧಿಸಿತು. ಹರಾಜು ಹಾಕುವವನ ಬೆರಳುಗಳು ನಾಯಿಯ ಬೆನ್ನುಗಳನ್ನು ವೇಗವಾಗಿ ಸವರುತ್ತಿದ್ದವು. ಹರಾಜಿನ ‘ಕೂಗು’ ಹೆಚ್ಚುತ್ತಿತ್ತು. ನಂತರ ಇದಕ್ಕಿಂತ ಹೆಚ್ಚಾಗುವ ಭರವಸೆ ಕಾಣ ಬರಲಿಲ್ಲ, ಇದು ಹರಾಜು ಹಾಕುವವನಿಗೂ ತಿಳಿದಿತ್ತು.

ಅವನು ಎರಡನೆಯ ನಾಯಿಯ ಹರಾಜಿಗೆ ಅನುವಾದ. ಮೊದಲಿನಂತೆ ಎರಡನೆಯದನ್ನು ಮಾರುವಲ್ಲಿ ಸಹ ಯಶಸ್ವಿಯಾದ. ಬೆಲೆ ಸ್ವಲ್ಪ ಹೆಚ್ಚು ಬರಬಹುದು ಎಂದು ತನ್ನ ಪ್ರಯತ್ನವನ್ನು ಮುಂದುವರೆಸುತ್ತಿದ್ದ. ಜನರ ಉತ್ಸಾಹವನ್ನು ಸಹ ಹೆಚ್ಚಿಸುತ್ತಿದ್ದ.
ಆಗಲೇ ಗುಂಪಿನ ಹಿಂದಿನಿಂದ ಧ್ವನಿಯೊಂದು ಕೇಳಿಸಿತು-
“ನನ್ನನ್ನು ಖರೀದಿಸಿ!”
ಆ ಧ್ವನಿ ಒರಟಾಗಿದ್ದು ಎಲ್ಲರ ಗಮನ ಅತ್ತ ಹರಿಯಿತು. ಹೀಗೆ ಹೇಳಿದ ಆ ಮನುಷ್ಯ ತಮ್ಮ ನಡುವೆ ಇರುವುದನ್ನು ನೋಡಿ, ಅವನಿಂದ ಅಂತರವನ್ನು ಕಾಯ್ದುಕೊಂಡು ನಿಂತರು.
ಆ ವ್ಯಕ್ತಿ, “ನನ್ನನ್ನೇ ಖರೀದಿಸಿ!” ಎಂದು ನಕ್ಕ. ಅವನ ನಗು ನಿಸ್ಸಾರವಾಗಿತ್ತು. ಅವನು ಎಲ್ಲರಿಗೂ ಸಲಾಮ್ ಮಾಡಲು ಬಾಗಿದ, ಆದರೆ ಅವನು ಸರಿಯಾಗಿ ಭಾಗದಾದ.
ಡಾಂಬರು ರಸ್ತೆ. ಕೆದರಿದ ತಲೆಗೂದಲು, ಸಿಕ್ಕುಗಟ್ಟಿದ ಕೂದಲುಗಳು, ಅದರೊಂದಿಗೆ ಒಂದು ಕಡೆ ಕೊಳಕಿನ ಆವರಣ. ಮುಖದಲ್ಲಿ ಸಹ ಕೊಳಕಿನ ಮಣ್ಣು. ಮುಖದಲ್ಲಿಯೂ ಕೊಳಕಿನ ಲೆಕ್ಕಾಚಾರ. ಅವನ ಬಟ್ಟೆಗೆ ಒಂದೇ ಬಣ್ಣವಿರಲಿಲ್ಲ. ಅವನ ಆಕಾರ ಪಕ್ಷಿಯೊಂದರ ಗೂಡಿನಂತಿತ್ತು. ನೀಳಕಾಯದವನಾಗಿದ್ದ ಅವನ ಕೈಗಳು ಕಬ್ಬಿಣದ ಕಡ್ಡಿಗಳಂತೆ ನಿರ್ಜೀವವಾಗಿದ್ದವು. ಕೈಗಳ ಅಂಗೈಗಳು ಮುದುಡಿದ್ದವು. ಅವನ ಕೊರಳಿನಲ್ಲಿ ಕೊಳಕಿನ ಮೂರು ಗೆರೆಗಳನ್ನು ಸ್ಪಷ್ಟವಾಗಿ ಕಾಣ ಬಹುದಿತ್ತು.

2

ಅವನ ಬಾಯಿ ನಗುವ ಪ್ರಯತ್ನದಲ್ಲಿ ತೆರೆದಿತ್ತು. ಅವನ ಕೊಳಕು ಹಲ್ಲುಗಳು ಕಾಣುತ್ತಿದ್ದವು. ನೆರೆದಿದ್ದ ಗುಂಪಿನಲ್ಲಿದ್ದ ಮಹಿಳೆಯರು ಕಿರುಚ ಬೇಕೆಂದಿದ್ದರು...
ಹರಾಜು ಹಾಕುತ್ತಿದ್ದ ವ್ಯಕ್ತಿ, ‘ದೂರ ಹೋಗು, ದೂರ ಹೋಗು’ ಎನ್ನುತ್ತಾ ಅಲ್ಲಿಂದ ಹೋಗುವಂತೆ ಆ ವ್ಯಕ್ತಿಗೆ ಸಂಜ್ಞೆ ಮಾಡುತ್ತಿದ್ದ. ಆದರೆ ಆ ವ್ಯಕ್ತಿ ಎರಡೂ ಕೈಗಳನ್ನು ಮುಗಿದು, ಗೋಳಿಡುತ್ತಾ ಮುಂದಕ್ಕೆ ಬಂದ.
“ನನ್ನನ್ನು ಈ ನಾಯಿ ಮರಿಯಂತೆ ನೋಡಿ, ಇದಕ್ಕೆ ಕೊಟ್ಟಂತೆಯೇ ನನಗೂ ಆಹಾರ ಕೊಡಿ. ಇದರ ಜಾಗದಲ್ಲೇ ನಾನೂ ಬಿದ್ದರ‍್ತೀನಿ...ಬೇಕಾದರೆ ಕೊರಳಿಗೆ ಬೆಲ್ಟ್ ಕಟ್ಟಿ. ನಾನೂ ನಾಯಿಯಂತೆಯೇ ನಡೀತೀನಿ.” ಹೀಗೆಂದು ಅವನು ಮೊಣಕಾಲೂರಿ ನಾಯಿಯಂತೆ ನಡೆಯಲಾರಂಭಿಸಿದ.
ಎಲ್ಲರ ಮುಖದಲ್ಲಿ ಕಳವಳ ಮೂಡಿತು. ಮಹಿಳೆಯರು ಮೂಗಿನ ಮೇಲೆ ಕರ್ಚೀಫಿಟ್ಟುಕೊಂಡರು. ಹರಾಜು ಹಾಕುವವನು, ಇವನನ್ನು ಇಲ್ಲಿಗೆ ಬರಲು ಬಿಟ್ಟವರು ಯಾರೆಂದು ಯೋಚಿಸುತ್ತಿದ್ದ.
“ವಾಚ್‌ಮೆನ್! ವಾಚ್‌ಮೆನ್! ಇವನನ್ನು ಆಚೆ ಕಳಿಸು.” ಹರಾಜು ಹಾಕುವವನು ಆದೇಶಿಸಿದ.
“ಹೀಗೆ ಮಾಡಬೇಡಿ.” ಆ ವ್ಯಕ್ತಿ ದೈನ್ಯತೆಯಿಂದ ಎಲ್ಲರನ್ನು ನೋಡುತ್ತಾ ಹೇಳಿದ, “ನೀವು ನನ್ನನ್ನು ಪುಕ್ಕಟೆಯಲ್ಲಿ ಕೊಳ್ಳಿ.” ಹೀಗೆಂದು ಮತ್ತೆ ನಾಯಿಯಂತೆ ನಡೆದ.
ಸ್ವಲ್ಪ ದೂರದಲ್ಲಿ ನಿಂತಿದ್ದ ಪ್ರೆಸ್ ಫೋಟೋಗ್ರಾಫರಿಗೆ ಏನು ಹೊಳೆಯಿತೋ ಏನೋ! ತನ್ನ ಪತ್ರಿಕೆಯಲ್ಲಿ ಪ್ರಕಟಿಸಲು ಈ ದೃಶ್ಯವನ್ನು ಸೆರೆಹಿಡಿದ. ಅಲ್ಲದೆ ಅವನು ಈ ಸಮಸ್ಯೆಗೆ ಪರಿಹಾರವನ್ನೂ ಹುಡುಕಿದ. ತನ್ನ ಜೇಬಿನಿಂದ ಒಂದು ನಾಣ್ಯವನ್ನು ತೆಗೆದು ಅವನೆಡೆಗೆ ಹಾಕಿದ. ಆ ವ್ಯಕ್ತಿ ಮುಗುಳ್ನಕ್ಕ.
ಬೇರೆಯವರಿಗೂ ಪರಿಹಾರ ಸಿಕ್ಕಂತಾಯಿತು, ಅಂದರೆ ಇಂಥ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಹೊಳೆಯಿತು. ಅವರೂ ಅವನೆಡೆಗೆ ನಾಣ್ಯಗಳನ್ನು ಎಸೆದರು.
ಆಗಲೇ ವಾಚ್‌ಮೆನ್ ಬಂದ. ದಯಾವಂತರಾದ ಪುರುಷರು ಮತ್ತು ಮಹಿಳೆಯರು ಅವನನ್ನು ತಡೆದರು.
“ಅವನು ಮೊದಲು ದುಡ್ಡು ತೆಗೆದುಕೊಳ್ಳಲಿ, ಆಮೇಲೆ ಹೊರಗೆ ಕಳಿಸಿ.”
ಆ ವ್ಯಕ್ತಿ ಎರಡೂ ಕೈಗಳಿಂದ ನಾಣ್ಯಗಳನ್ನು ಬಾಚಿಕೊಂಡ, ನಂತರ ಅವುಗಳನ್ನು ಮುಷ್ಟಿಗಳಲ್ಲಿ ಹಿಡಿದು ಬಂಗ್ಲೆಯಿಂದ ಹೊರ ಹೋದ.
ಹೊರಗೆ ಬಂದು ಮುಷ್ಟಿಗಳನ್ನು ಬಿಚ್ಚಿದ. ನಂತರ ‘ಇಷ್ಟೊಂದು ದುಡ್ಡು?’ ಎಂದು ಕುಣಿದ.
ಹೊಟೇಲ್‌ಗೆ ಹೋಗಿ ಮನಸಾರೆ ತಿನ್ನಬೇಕೆಂದು ಮನಸ್ಸಾಯಿತು. ಅವನು ಹೊಟೇಲ್ ಬಳಿ ಬಂದು ನಿಂತ. ಒಳಗೆ ಹೋಗುವ ಧೈರ್ಯ ಬರಲಿಲ್ಲ. ಅಲ್ಲಿದ್ದ ಮೆಟ್ಟಿಲುಗಳ ಬಳಿ ಕೂತ. ಅಲ್ಲಿಂದಲೇ ಹೊಟೇಲ್‌ನ ಒಬ್ಬ ಹುಡುಗನನ್ನು ಕರೆದು ಅವನ ಕೈಗೆ ನಾಣ್ಯಗಳನ್ನು ಹಾಕುತ್ತಾ ಹೇಳಿದ, “ಎಣಿಸಿಕೊಳ್ಳಪ್ಪಾ. ಎಷ್ಟು ಹೊತ್ತಿನ ಊಟ ಸಿಗುತ್ತೆ, ಹೇಳು.”
ಹುಡುಗ ನಾಣ್ಯಗಳನ್ನು ಎಣಿಸಿ ಹೇಳಿದ, “ಮೂರು ಹೊತ್ತಿಗೆ.”
“ಇಷ್ಟೆ...?”
“ಇಷ್ಟು ದುಡ್ಡಿನಿಂದ ಜೀವಮಾನವಿಡೀ ಊಟ ಸಿಗುತ್ತಾ?” ಹುಡುಗ ರೇಗಿದ.
ಅವನೂ ಸಿಟ್ಟಿನಿಂದ ಹುಡುಗನನ್ನು ನೋಡಿದ, ನಂತರ ಕೈಚಾಚಿ ತನ್ನ ನಾಣ್ಯಗಳನ್ನು ತೆಗೆದುಕೊಂಡ. ಮುಷ್ಟಿಗಳಲ್ಲಿ ನಾಣ್ಯಗಳನ್ನು ಹಿಡಿದುಕೊಂಡು ಇನ್ನೊಂದು ಹೊಟೇಲ್‌ಗೆ ಹೋದ. ಅಲ್ಲಿ ದುಡ್ಡನ್ನು ಎಣಿಸಿಕೊಂಡ.
ಅಲ್ಲಿಯೂ ಹಿಂದಿನಂತೆಯೇ ಹೇಳಲಾಯಿತು. ಅವನಿಗೆ ಇವರೆಲ್ಲಾ ಒಂದಾಗಿದ್ದಾರೆ ಎಂದು ಅನ್ನಿಸಿತು. ಇದಕ್ಕಿಂತ ತನ್ನನ್ನು ಯಾರಾದರು ಪುಕ್ಕಟೆಯಲ್ಲಿ ಕೊಂಡಿದ್ದರೆ ಲೇಸಿತ್ತು ಎಂದು ಯೋಚಿಸಿದ...ಆಗ ಅವನು ಕೊರಳಿಗೆ ಗಂಟೆ ಹಾಕಿಸಿಕೊಂಡು ತೋಟದಲ್ಲಿ ಅಡ್ಡಾಡುತ್ತಿದ್ದ. ಅವನು ಬಂಗ್ಲೆಗಳಲ್ಲಿರುವ ನಾಯಿಗಳನ್ನು ನೋಡಿದ್ದ, ಹೀಗಾಗಿ ಈ ಯೋಚನೆ ಬಂತು. ಅಲ್ಲಿ ಸ್ನಾನಕ್ಕೆ, ಊಟಕ್ಕೆ ಕೊರತೆಯಿರುವುದಿಲ್ಲ, ಬೇಕಾದಂತೆ ಅಡ್ಡಾಡಬಹುದು. ಆದರೆ ಇದು ತಾನು ಮನುಷ್ಯನಾಗಿದ್ದಕ್ಕೆ ಶಾಪ, ಅದಕ್ಕೇ ತನ್ನನ್ನು ಯಾರೂ ನಾಯಿಯಂತೆ ಒಪ್ಪಲು ಸಿದ್ಧರಿಲ್ಲ ಎಂದು ಯೋಚಿಸಿದ.
ಅವನು ಆ ಹೊಟೇಲ್‌ನ ಹುಡುಗನಿಗೆ ತಿಳಿಯಪಡಿಸಿದ, “ನೀನು ಈ ದುಡ್ಡನ್ನೆಲ್ಲಾ ತೆಗೆದುಕೋ, ನನಗೆ ಮೂರು ಹೊತ್ತಿನ ಊಟ ಕೊಡು.”
ಅವನ ಬಟ್ಟೆಗಳಲ್ಲಿ ಜೇಬುಗಳಿರಲಿಲ್ಲ, ಹೀಗಾಗಿ ದುಡ್ಡನ್ನು ಎಲ್ಲಿಡುತ್ತಾನೆ!
ತಾನು ಸ್ವಲ್ಪ ಕಡಿಮೆ ತಿಂದರೆ, ಐದು ಹೊತ್ತಿನ ಊಟ ಮಾಡಬಹುದು, ಆದರೆ ಇದನ್ನು ಆ ಹುಡುಗನಿಗೆ ಹೇಳದಾದ. ಸರಿ, ಮೂರು ಹೊತ್ತಿನ ಊಟವನ್ನಂತೂ ಮಾಡಬೇಕು. ಜನ ನಿತ್ಯ ಹೊಟ್ಟೆ ಬಿರಿಯುವಷ್ಟು ತಿನ್ನುತ್ತಾರೆ. ಹೊಟ್ಟೆ ತುಂಬಾ ಉಂಡರೆ ಎಂಥ ಮಜವಾಗುತ್ತೆ ಅನ್ನೋದನ್ನು ನೋಡಬೇಕು.
ಅವನು ಮೊದಲ ಬಾರಿಗೆ ಮನಸಾರೆ ತಿಂದ. ಅವನಿಗೆ ಒಂದೇ ಸಮನೆ ನಗು ಬರುತ್ತಿತ್ತು. ಹೊಟ್ಟೆ ಮೇಲೆ ಕೈಯಾಡಿಸುತ್ತಾ ಎರಡು ಬಾರಿ ತೇಗಿದ. ಇಷ್ಟು ತಿಂದ ನಂತರ ಒಳ್ಳೆ ನಿದ್ದೆ ಬರುತ್ತದೆ.
ಅವನು ಆಕಳಿಸಿದ, ಮೈಮುರಿದ. ನಂತರ ಕೈ ಆಸರೆಯಿಂದ ಎದ್ದು ನಿಂತ. ಅಲ್ಲಿಂದ ಸಮೀಪದಲ್ಲಿದ್ದ ತೋಟಕ್ಕೆ ಹೋಗಿ, ಅಲ್ಲಿದ್ದ ಒಂದು ಬೆಂಚಿನ ಕೆಳಗೆ ಕೈ-ಕಾಲುಗಳನ್ನು ಚಾಚಿ ನಿದ್ರಿಸಿದ.
ಅವನಿಗೆ ಎಚ್ಚರವಾದಾಗ ರಾತ್ರಿಯಾಗಿತ್ತು. ಶರೀರ ಆಯಾಸದಿಂದ ತುಂಬಾ ಬಳಲಿತ್ತು. ಮತ್ತೆ ನಿದ್ರಿಸಲು ಮನಸ್ಸಾಗುತ್ತಿತ್ತು. ಅವನು ಅಲ್ಲಿದ್ದ ನಲ್ಲಿಯ ಬಳಿಗೆ ಹೋಗಿ ನೀರು ಕುಡಿದ, ಪಕ್ಕದಲ್ಲಿ ಮೂತ್ರವಿಸರ್ಜನೆ ಮಾಡಿದ, ನಂತರ ಮೆಲ್ಲನೆ ಬಂದು, ತನ್ನನ್ನು ಯಾರೂ ನೋಡಬಾರದೆಂದು ಅದೇ ಜಾಗದಲ್ಲಿ ಮುದುಡಿ ಮಲಗಿದ.
ಮತ್ತೆ ಎಚ್ಚೆತ್ತು, ಮತ್ತೆ ತಿಂದು ಮತ್ತೆ ನಿದ್ರಿಸಿದ. ತಿನ್ನಲು ತಲೆಕೆಡಿಸಿಕೊಳ್ಳಬೇಕಿರಲಿಲ್ಲ, ಹೀಗೆಂದು ಯೋಚಿಸಿ ಸಂತಸಪಟ್ಟ.

3

ಮೂರೂ ಹೊತ್ತು ತಿಂದ. ನಾಲ್ಕನೆಯ ಬಾರಿಗೆ ಹೋಗಿ ಹೊಟೇಲ್‌ನ ವರಾಂಡದಲ್ಲಿ ನಿಂತ, ನಾಲ್ಕನೆಯ ಬಾರಿ ತಿನ್ನಲು ಏನಾದರೂ ಸಿಗಬಹುದೆಂಬ ಅಂದಾಜಿನಲ್ಲಿ ನಿಂತಿದ್ದ. ತಿನ್ನಲು ಸ್ವಲ್ಪವೂ ಸಿಗುವುದಿಲ್ಲವೇ?...
ಹೊಟೇಲ್ ಹುಡುಗ ಮೊದಲು ನಿಂದಿಸಿದ. ನಂತರ, ‘ಸ್ವಲ್ಪ ತಾಳು, ಈಗ್ಲೇ ತರ‍್ತೀನಿ’ ಎಂದು ಒಳಗೆ ಹೋದ. ನಂತರ ಉಳಿದ ಎಂಜಲು ತಿನಿಸುಗಳನ್ನು ತಂದು ಅವನ ಬಟ್ಟಲಿಗೆ ಹಾಕಿದ. ಅವನಿಗೆ ತುಂಬಾ ಖುಷಿಯಾಯಿತು. ತಕ್ಷಣ ಎಲ್ಲವನ್ನೂ ಕಬಳಿಸಿದ. ಮತ್ತೆ ತೋಟಕ್ಕೆ ಹೋಗಿ ಮಲಗಿದ.
ಎಚ್ಚರವಾದಾಗ ಸಂಜೆ ದಟ್ಟವಾಗುತ್ತಿತ್ತು. ಇಂದು ಸರಿಯಾಗಿ ನಿದ್ರಿಸಲಿಲ್ಲ, ಏಕೆಂದರೆ ಹೆಚ್ಚು ತಿಂದಿರಲಿಲ್ಲವಲ್ಲ...ಎಂದು ಹೇಳಿಕೊಂಡ.
ಮುಖ ತೊಳೆದು ನೀರು ಕುಡಿದಾಗ, ಇಂದು ರಾತ್ರಿ ಖಂಡಿತ ಹೊಟ್ಟೆ ಹಸಿಯುತ್ತದೆ ಎಂದು ಅನ್ನಿಸಿತು. ಹಾಗೆಯೇ ಆಯಿತು. ರಾತ್ರಿ ದಟ್ಟವಾಗುತ್ತಿತ್ತು, ಹಸಿವು ಕಾಡಿಸಿತು. ಆಹಾರ ಅರಸುವ ಬಗ್ಗೆ ಕೆಡುಕೆನಿಸುತ್ತಿತ್ತು. ಆದರೆ ಕೂತಲ್ಲಿಯೇ ಆಹಾರ ಸಿಗುವ ಸಾಧ್ಯತೆಯಿರಲಿಲ್ಲ.
ಎಂದಿನಂತೆ ಅವನ ಕಾಲುಗಳು ನಗರದ ಗಲ್ಲಿಗಳನ್ನು ಮೂಸುವಂತೆ ಚಲಿಸುತ್ತಿದ್ದವು. ಸ್ವಲ್ಪ ದೂರದಲ್ಲಿ ಒಂದು ಬಾಲ್ಕನಿಯಿಂದ ಉಳಿದ ಆಹಾರವನ್ನು ರಸ್ತೆಯ ಬದಿಗೆ ಎಸೆಯುತ್ತಿರುವುದನ್ನು ನೋಡಿದ. ಅವನ ಕಾಲುಗಳು ಚುರುಕಾದವು, ಆದರೆ ಅಲ್ಲಿಗೆ
ಹೋಗುವುದಕ್ಕೂ ಮೊದಲೇ ಅಲ್ಲಿಗೆ ನಾಯಿಯೊಂದು ಬಂದು, ‘ತಿನ್ನಲೋ-ಬೇಡವೋ?’ ಎಂದು ಆ ಆಹಾರವನ್ನು ಮೂಸಲಾರಂಭಿಸಿತು.
ಅವನು ಮೆಲ್ಲನೆ ಸಮೀಪಕ್ಕೆ ಹೋದ. ಅದರ ಎರಡೂ ಕಾಲುಗಳನ್ನು ಇಕ್ಕಳದಂತೆ ಬಿಗಿಯಾಗಿ ಹಿಡಿದ. ನಾಯಿಯ ಬಾಯಿಯಿಂದ ಒಂದು ಸಣ್ಣ ಕಿರುಚು ಧ್ವನಿ ಹೊರಟಿತು. ನಂತರ ಅವನು ನಾಯಿಯನ್ನು ದೂರಕ್ಕೆಸೆದು, ಆಹಾರದ ಮೇಲೆ ಮುಗಿಬಿದ್ದ. ಸ್ವಲ್ಪ ದೂರ ಹೋಗಿ, ನಾಯಿಯನ್ನು ನೋಡಿದ, ನಂತರ ಕತ್ತಲು ಜಾಗಕ್ಕೆ ಹೋಗಿ ಆಹಾರವನ್ನು ತಿಂದ.
ಹೊಟ್ಟೆಗೆ ಬಿದ್ದಿದ್ದರಿಂದ ಸ್ವಲ್ಪ ಸಮಾಧಾನವಾಯಿತು, ಆದರೆ ಇಷ್ಟರಿಂದ ಹೊಟ್ಟೆ ತುಂಬಲಿಲ್ಲ. ಅವನು ನಡುರಾತ್ರಿಯವರೆಗೆ ನಗರದ ಗಲ್ಲಿಗಳಲ್ಲಿ ಆಹಾರಕ್ಕಾಗಿ ಅಲೆಯುತ್ತಿದ್ದ. ಆದರೆ ವ್ಯರ್ಥ. ಏನೂ ಸಿಗಲಿಲ್ಲ. ನಿದ್ರೆ ಬರುತ್ತಿರಲಿಲ್ಲ. ಒಂದು ಬದಿಯಲ್ಲಿ ಕೂತು ಕೈಮೇಲೆ ತಲೆಯಿಟ್ಟು ಕಾಲುಗಳನ್ನು ಚಾಚಿದ. ಆಗ ಅವನಿಗೆ ವಾಂತಿಯಾಗುವಂಥ ಅನುಭವವಾಯಿತು.
ಇದು ಹೊಸದೇನಾಗಿರಲಿಲ್ಲ. ಈ ಮೊದಲು ಎಷ್ಟೋ ಬಾರಿ ವಾಂತಿಯಾಗಿದೆ. ಹಳಸಿದ ಆಹಾರವನ್ನು ಸೇವಿಸಿದಾಗ ಹೀಗಾಗುತ್ತದೆ ಎಂಬುದು ಅವನಿಗೆ ತಿಳಿದಿತ್ತು. ಆದರೆ ಇಂದೇಕೋ ಹೃದಯವೇ ಬಾಯಿಗೆ ಬರುತ್ತಿದೆ ಎಂಬ ಅನುಭವವಾಗುತ್ತಿತ್ತು. ಅವನಿಗೆ ಎರಡು ಬಾರಿ ವಾಂತಿಯಾಯಿತು. ಕತ್ತಲಿದ್ದಾಗ್ಯೂ ವಾಂತಿಯಲ್ಲಿ ಕೆಂಪು ಬಣ್ಣ ಕಂಡಿತು.
‘ನೀರು ಸಿಕ್ಕರೆ ಸ್ವಲ್ಪ ಸುಧಾರಿಸಬಹುದು.’ ಎಂದು ಅನ್ನಿಸಿತು. ಕೈಯಿಂದ ಬಾಯಿಯನ್ನು ಒರೆಸಿಕೊಳ್ಳುತ್ತಾ ಎದ್ದು ನಿಂತ ನೀರಿಗಾಗಿ ಅತ್ತ-ಇತ್ತ ಅಲೆದ. ಇಂದಿನ ಆಹಾರದಲ್ಲಿ ಅವಶ್ಯವಾಗಿ ವಿಷ ಸೇರಿದೆ ಎಂದು ಅನ್ನಿಸಿತು.
ಸ್ವಲ್ಪ ಹೊತ್ತಿನ ನಂತರ ಮತ್ತೆ ವಾಂತಿಯಾಯಿತು. ಶುದ್ಧ ರಕ್ತ! ತಲೆ ಸುತ್ತುತ್ತಿತ್ತು. ಕಾಲುಗಳು ಸಡಿಲಗೊಂಡವು. ಅವನು ಅಲ್ಲಿಯೇ ಕುಸಿದು ಬಿದ್ದ.
ಬೆಳಿಗ್ಗೆ ಆ ಗಲ್ಲಿಯ ಜನ ರಕ್ತದ ನಡುವೆ ಬಿದ್ದಿದ್ದ ವ್ಯಕ್ತಿಯೊಬ್ಬನನ್ನು ನೋಡಿದರು. ಜನ ಅವನನ್ನು ದಯೆ-ಕರುಣೆ-ಅನುಕಂಪದಿಂದ ನೋಡುತ್ತಿದ್ದರು. ಈ ಅವಘಡವನ್ನು ನಿಭಾಯಿಸುವುದು ಹೇಗೆಂಬ ಚರ್ಚೆಯಲ್ಲಿ ಎಲ್ಲರೂ ತೊಡಗಿದ್ದರು, ಆಗಲೇ ವ್ಯಕ್ತಿಯೊಬ್ಬ ಅವನ ಗುರುತನ್ನು ಹೇಳಿದ.
“ಕೆಲವು ದಿನಗಳ ಹಿಂದೆ ಪತ್ರಿಕೆಯಲ್ಲಿ ಒಂದು ಫೋಟೋ ಬಂದಿತ್ತು. ನಾಯಿಗಳ ಹರಾಜಿನಲ್ಲಿ ಒಬ್ಬ ವ್ಯಕ್ತಿ, ‘ನನ್ನನ್ನು ಖರೀದಿಸಿ’ ಎಂದು ಹೇಳಿದ್ದ, ಇವನು ಅದೇ ಮನುಷ್ಯ!”
ಸಾಕಷ್ಟು ಜನ ಆ ಫೋಟೋ ನೋಡಿದ್ದರು. ಈಗ ಎಲ್ಲರೂ ಅವನನ್ನು ಗುರುತಿಸುತ್ತಿದ್ದರು. ಓರ್ವ ಸಜ್ಜನರು ಪತ್ರಿಕೆಯ ಕಛೇರಿಗೆ ಫೋನ್ ಮಾಡಿ, ಆ ಫೋಟೋಗ್ರಾಫರ್‌ಗೆ ವಿಷಯ ತಿಳಿಸಿದರು. ಆ ಫೋಟೋಗ್ರಾಫರ್ ಘಟನಾ-ಸ್ಥಳಕ್ಕೆ ದೌಡಾಯಿಸಿ ಬಂದ. ಅವನು ಜನರ ಹೃದಯ ಕಂಪಿಸುವಂಥ ಫೋಟೋವನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದುಕೊಂಡ.
ಚುನಾವಣೆಯಲ್ಲಿ ಒಂದು ಪಕ್ಷ ಈ ಫೋಟೋ ಮತ್ತು ಈ ಘಟನೆಯನ್ನು ಬಳಸಿಕೊಂಡು ಅಮೋಘ ಗೆಲುವನ್ನು ಪಡೆಯಿತು.
ವಿರೋಧ ಪಕ್ಷದ ಯಾವ ಉಮೇದುವಾರ ಸಹ ಈ ಅವಕಾಶವನ್ನು ಕಳೆದುಕೊಂಡಿರಲಿಲ್ಲ. ಅವರ ಘೋಷಣೆ ಹೀಗಿತ್ತು:
“ಇನ್ನು ನಾಯಿಯ ಹರಾಜಿನಲ್ಲಿ, ‘ನನ್ನನ್ನು ಪುಕ್ಕಟೆ ಕೊಳ್ಳಿ’ ಎಂದು ಹೇಳುವ ಯಾವ ವ್ಯಕ್ತಿ ಸಹ ನಿಮಗೆ ಕಾಣ ಬರುವುದಿಲ್ಲ! ಹಾಗೂ ರಸ್ತೆಯ ಬದಿಯಲ್ಲಿ ಎಸೆಯಲಾಗಿದ್ದ ಹಳಸಲು ಆಹಾರವನ್ನು ಸೇವಿಸಿ ಯಾರೂ ಸಹ ಸಾಯುವ ಪರಿಸ್ಥಿತಿ ಬರುವುದಿಲ್ಲ!!”


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.