ಬಂಧನ
(ಪ್ರಾತಿನಿಧಿಕ ಚಿತ್ರ)
“ಏ ಸ್ವಲ್ಪ ಆ ಕಡೆ ಹುಡುಕ್ರಪ್ಪ, ಚಪ್ಪಲಿ, ಬ್ಯಾಗು ಇಲ್ಲೇ ಇದೆ” ಒಬ್ಬ.
“ಇಲ್ಲ ಬಿದ್ದ ತಕ್ಷಣ ಬಾಡಿ ನೆಲಕ್ಕೆ ಅಂಟಿಕೊಂಡಿರುತ್ತೆ. ಅದೇ ಜಾಗದಲ್ಲಿ ಹುಡುಕ್ಲಿ” ಇನ್ನೊಬ್ಬ.
“ಅಲ್ರಯ್ಯಾ ಬಿದ್ದಿರೋದ ನೀವೇನು ನೋಡಿದಿರಾ? ಕಂಡವರತರ ಅಲ್ಲಿ ಹುಡ್ಕಿ ಇಲ್ಲಿ ಹುಡ್ಕಿ ಅಂತ ಹೆಣ ಹುಡ್ಕೋನ್ರೂ ತಲೆ ಕೆಡಿಸ್ತೀರಲ್ಲಾ” ಎಂದು ಕಾಣಿಯಾಗಿರುವ ಗಣೇಶನ ಚಿಕ್ಕಪ್ಪ ಈರಪ್ಪಣ್ಣ ಸಂಪನಹಳ್ಳಿಯ ಯಜಮಾನನು ಆಗಿರುವುದರಿಂದ ತುಸು ಜೋರಾಗಿಯೇ ರೇಗಿಕೊಂಡ.
“ಅಲ್ಲ, ಈರಪ್ಪಣ್ಣ, ಕೆರೆಗೆ ಬಿದ್ದಿರೋ ಮಗು ನಮ್ಮ ಮಗ ಇದ್ದಂಗಲ್ವಾ. ಅದಕ್ಕೆ ಬೇಗ ಸಿಗಲಿ ಬಾಡಿ ಅಂತ ಹೇಳಿದ್ವಿ ತಪ್ಪಾ? ಆ ಹೆತ್ತ ಕರುಳು ಗೋಳು ನೋಡಕ್ಕಾಕ್ತಿಲ್ಲ” ಎಂದ ಮಾಜಿ ಪಂಚಾಯ್ತಿ ಸದಸ್ಯ ಜಗ್ಗಣ್ಣ.
“ನನಗೂವೇ ಅವನು ಮಗನೇ ಆಗಬೇಕು. ಹೊಟ್ಟೇಲಿ ಹುಟ್ಟದಿದ್ರೆ ಏನು. ನಮ್ಮ ವಂಶಕ್ಕೆ ಅಂತ ಇದ್ದವನು ಇವನೊಬ್ನೆ” ಎಂದು ದುಃಖ ತಡೆದುಕೊಂಡೆ ಬಿಕ್ಕಳಿಸಿದ ಈರಪ್ಪಣ್ಣ.
ಗಣೇಶನ ತಾಯಿ ನಿರ್ಮಲ ಕೆರೆಯ ಏರಿಯ ಮೇಲೆ ಅವನ ಬಾಲ್ಯ, ಆಟ, ಪಾಠ, ತುಂಟಾಟವನ್ನೆಲ್ಲ ನೆನಪಿಸಿಕೊಂಡು ಬೋರಾಡುತ್ತಾಲೇ ಇತ್ತು. ಅವನ ತಂದೆ ನಿರಂಜನ ಕೆರೆಯ ತುಂಬಾ ಓಡಾಡುತ್ತಿದ್ದ ಬೋಟಿನ ಅಲೆಗಳನ್ನೇ ನೋಡುತ್ತ, ತನ್ನ ಬದುಕಿನ ಸಂಚಿಕೆಯ ಮೊದಲ ಪುಟಕ್ಕೆ ಬಂದು ನಿಂತಿದ್ದ.
ಸಂಪನಹಳ್ಳಿಯಲ್ಲಿ ಕಡುಬಡತನದಲಿದ್ದ ದೇವರಾಜಪ್ಪನಿಗೆ ಇಬ್ಬರು ಗಂಡು ಮಕ್ಕಳು. ಐದು ಹೆಣ್ಣು ಮಕ್ಕಳು. ಈರಪ್ಪಣ್ಣ ಏಳನೇ ತರಗತಿಯ ಮೆಟ್ಟಿಲನ್ನು ಹತ್ತಿ, ಓದು ನನಗೆ ಹತ್ತುವುದಿಲ್ಲ ಅಂತ ಅಪ್ಪನೊಂದಿಗೆ ವ್ಯವಸಾಯಕ್ಕೆ ಇಳಿದಿದ್ದ. ಹಿರಿಯನಾದ ನಿರಂಜನ ತನ್ನ ಮುಗ್ಧತೆಗೆ ತಕ್ಕಂತೆ ಓದುವುದರಲ್ಲಿ ಶಿಸ್ತಿನಿಂದಿದ್ದ. ಹೊಲದ ಕೆಲಸವನ್ನು ಮಾಡುತ್ತಿದ್ದ. ಹತ್ತನೆ ತರಗತಿ ಪಾಸು ಮಾಡಿದ ಊರಿನ ಮೊದಲ ಪ್ರಜೆಯಾಗಿದ್ದ. ಅಷ್ಟರಲ್ಲಿ ಬೆಂಗಳೂರಿಗೆ ಹೋಗಿ ಯಾವುದಾದರೂ ಕೆಲಸ ಹುಡುಕಬೇಕು ಎಂದುಕೊಳ್ಳುವಾಗಲೇ, ದೇವರಾಜಪ್ಪನವರ ಹಳೆಯ ಮಿತ್ರರೊಬ್ಬರು ಭೀಮರಾಯಪ್ಪ ಅಂತ ಮನೆಗೆ ಬಂದಿದ್ದರು. “ನಾನು ಬೆಂಗಳೂರಿನಲ್ಲಿ ಕೆಲಸ ಕೊಡಿಸುತ್ತೇನೆ. ನಿರಂಜನನನ್ನು ನನ್ನ ಜೊತೆ ಕಳಿಸು” ಎಂದು ಉತ್ಸಾಹ ತೋರಿದ್ದರು. ಅವರು ಬೆಂಗಳೂರಿನಲ್ಲೇ ಇದ್ದದ್ದರಿಂದ ಧೈರ್ಯವಾಗಿ ಕಳಿಸಬಹುದು ಎಂದು, ಎರಡು ದಿನದ ನಂತರ ನಿರಂಜನನನ್ನು ಅವರ ಜೋಡಿ ಕಳಿಸಿಕೊಟ್ಟಿದ್ದರು.
ನಿರಂಜನ ಬೆಂಗಳೂರಿಗೆ ಹೋದ ಮೇಲೆ ಒಂದು ವಾರ ಪೂರ್ತಿ ಭೀಮರಾಯಪ್ಪನ ಮನೆಯಲ್ಲಿ ತಿಂಡಿ, ಊಟ ಮಾಡುತ್ತಾ ನಿದ್ರೆಯಲ್ಲೇ ಕಳೆದುಹೋದ. ಅವತ್ತು ಭಾನುವಾರ ಭೀಮರಾಯಪ್ಪನ ಹೆಂಡತಿ ಮೋತಿಯಮ್ಮ ಬೆಳಗ್ಗೆ ಬೆಳಗ್ಗೆಯೇ ನಿರಂಜನನಿಗೆ ಮಂಗಳಾರತಿ ಮಾಡುವುದಕ್ಕೆ ಪ್ರಾರಂಭಿಸಿದಳು. “ಇದೇನು ಛತ್ರ ಅನ್ಕೊಂಡಿದೀಯಾ, ಇಲ್ಲ ನಿಮ್ಮಪ್ಪನ ಮನೆ ಅನ್ಕೊಂಡಿದೀಯಾ? ಸಮಯ ಒಂಬತ್ತು ಗಂಟೆಯಾದ್ರು ಮಲಗೇ ಇದ್ದೀಯಲ್ಲ ಎದ್ದೇಳು. ಸಾಕಷ್ಟು ಬಟ್ಟೆ ಇವೆ ತೊಳಿಬೇಕು” ಎಂದು ಗದರಿದರು. ಮೊದಲೇ ಸೌಮ್ಯ ಸ್ವಭಾವದ ನಿರಂಜನನಿಗೆ ಏನು ಮಾತಾಡಬೇಕು ತೋಚದೆ ಬಚ್ಚಲಿಗೆ ಹೋಗಿ ಮುಖಕ್ಕೆ ನೀರು ಚಿಮ್ಮಿಸಿಕೊಂಡು ಮೋತಿಯಮ್ಮನ ಹಿಂದೆ ಹೊರಟ. ಬಟ್ಟೆಯ ರಾಶಿ ಬೆಟ್ಟದಂತೆ ಬಿದ್ದಿತ್ತು. ಪಕ್ಕದಲ್ಲಿ ಸೋಪು, ಸರ್ಪು ಇವನ್ನನು ನೋಡಿ ಹಂಗಿಸುತ್ತಿದ್ದವು. ಹಿಂದೇ ಮುಂದೆ ನೋಡಿದ. “ಏನೋ ಮುಖ ನೋಡ್ತೀಯಾ? ಆ ಕಲ್ಲ ಮೇಲೆ ಕೂತು ಎಲ್ಲಾ ಬಟ್ಟೆನೂ ತೊಳಿ. ಇವೆಲ್ಲ ತೊಳೆದು ಹೊಣಗಿಸಿದರೇನೆ ನಿನಗೆ ಮಧ್ಯಾಹ್ನದ ಊಟ. ಇಲ್ಲ ರಾತ್ರಿಯೂ ಹಾಗೆ ಮಲಗಬೇಕು” ಎಂದು ಅಧಿಕಾರದ ಧ್ವನಿಯಲ್ಲಿ ಗುಡುಗಿದರು.
ಹದಿನೈದು ವರ್ಷದ ಬಾಲಕ ನಿರಂಜನನಿಗೆ ಬಟ್ಟೆ ತೊಳೆದು, ಪಾತ್ರೆ ತೊಳೆದು ಅಭ್ಯಾಸವಿಲ್ಲ. ಆದರೂ ಇವರು ನನಗೆ ಅನ್ನ ಹಾಕುತ್ತಾರಲ್ಲಾ ಅದಕ್ಕಾದರೂ ಕೆಲಸ ಮಾಡಬೇಕೆಂದು ತೀರ್ಮಾನಿಸಿ ಬಟ್ಟೆ ತೊಳೆಯುವುದಕ್ಕೆ ಕೂತ. ಮೋತಿಯಮ್ಮ ಕೈಯಲ್ಲೊಂದು ಕಡ್ಡಿ ಹಿಡಿದುಕೊಂಡು ಬಿಸಲಿಗೆ ಅಂಜಿ ಛತ್ರಿಯ ನೆರಳು ಮಾಡಿಕೊಂಡು ನಿರಂಜನನನ್ನೇ ನೋಡುತ್ತಿದ್ದಳು. “ಅದನ್ನು ಜಾಸ್ತಿ ತಿಕ್ಬೇಡ, ಆ ಅಂಗಿಯ ಕಾಲರ್ ತಿಕ್ಕು, ನನ್ನ ಬ್ಲೌಸ್ ಜೋಪಾನ, ಭೀಮರಾಯರ ರೇಷ್ಮೆ ಪಂಚೆ ಹರಿದು ಬಿಟ್ಟೀಯೆ” ಎಂದು ಒಂದೊಂದು ಬಟ್ಟೆಗೂ ಎಚ್ಚರಿಕೆ ಕೊಡುತ್ತಿದ್ದರೆ ನಿರಂಜನನ ಮೈ ಉರಿದು ಹೋಗುತಿತ್ತು. ಆದರೆ ಊರು ಬಿಟ್ಟು ಊರಿಗೆ ಬಂದು ಗೊತ್ತಿಲ್ಲದ ಜಾಗದಲ್ಲಿ ಅವರು ಕೊಡುವ ಎಲ್ಲಾ ಕೋಟಲೆಗಳನ್ನು ಸಹಿಸಿಕೊಳ್ಳಬೇಕು ಎನ್ನುವುದನ್ನು ಅಪ್ಪನಿಂದನೇ ಕಲಿತಿದ್ದ.
ಭೀಮರಾಯಪ್ಪನಿಗೆ ಮನೆಗೆ ಒಬ್ಬ ಕೆಲಸದವನು ಸಿಕ್ಕ ಎನ್ನುವ ಸಂತೋಷದಲ್ಲಿ ಪ್ರತೀ ತಿಂಗಳು ಎರಡು ಸಾವಿರ ರೂಪಾಯಿಯನ್ನು ದೇವರಾಜಪ್ಪನಿಗೆ ಮನಿಯಾರ್ಡರ್ ಮಾಡುತ್ತಿದ್ದನು. ನಿರಂಜನನಿಗೆ ಒಂದೊಂದು ದಿನವು ಯುಗದಂತೆ ಕಳೆಯುತ್ತಿತ್ತು. ಮೋತಿಯಮ್ಮನ ಕಾಟ ಹೆಚ್ಚಾಗುತ್ತಲೇ ಇತ್ತು. ಕುಂತರು ತಪ್ಪು ನಿಂತರೂ ತಪ್ಪು. ಮಲಗುವುದಕ್ಕೆ ಕಾರ್ ಶೆಡ್ಡಿನಲ್ಲಿ ಜಾಗ ಮಾಡಿಕೊಟ್ಟರು. ಉಪ್ಪುರಿಗೆಯಿಂದ ಪಾತಾಳಕ್ಕೆ ತಳ್ಳಿದ ಅನುಭವವಾಯ್ತು.
ವಾರದಲ್ಲಿ ಎರಡು ಸಲ ನಿರಂಜನ ತರಕಾರಿ ತರುವುದಕ್ಕೆ ಅಂತ ಪಕ್ಕದ ಬೀದಿಯಲ್ಲಿದ್ದ ತರಕಾರಿ ಅಂಗಡಿಗೆ ಹೋಗಿಬರಬೇಕಿತ್ತು. ಅಷ್ಟು ಸ್ವತಂತ್ರ ಬಿಟ್ಟರೆ ಮತ್ತೆಲ್ಲವೂ ನರಕವೆ. ಇಲ್ಲಿಂದ ಹೇಗಾದರೂ ಪಾರಾಗಿ ಊರಿಗೆ ಹೋಗಬೇಕು ಎಂದು ಅಂದುಕೊಂಡು ಒಮ್ಮೆ ಸಿಟಿ ಬಸ್ ಹತ್ತಿ ಮೆಜೆಸ್ಟಿಕ್‌ಗೆ ಬಂದು, ಅವರಿವರನ್ನು ಸಹಾಯ ಕೇಳಿಕೊಂಡು ಊರಿನ ಕಡೆಗೆ ಬಂದು ಬಿಟ್ಟಿದ್ದ. ಇದರಿಂದ ರೌದ್ರರೂಪ ತಾಳಿದ ತಂದೆ “ನಿನ್ನ ತಂಗೀರ ಮದುವೆ ಮಾಡಬೇಕು. ನಾನೇನು ಕುಬೇರನಲ್ಲ, ಹೊಲ ಮಾರಬೇಕು. ನೀನು ಇರೋ ಕೆಲಸ ಬಿಟ್ಟು ಊರಿಗೆ ಬಂದ್ರೆ ಇಲ್ಲಿ ಕೂಳಿಗೂ ಕಷ್ಟವಾಗುತ್ತೆ”
“ಹಾಗಂತ ನಾನು ಅವರ ಮನೆ ಚಾಕ್ರಿ ಮಾಡಕ ಓದಿದ್ದು”
“ಓ, ನೀನೇನು ದೊಡ್ಡ ಸಾಹೇಬ್ರು ಕೆಲಸಕ್ಕೆ ಓದಿದ್ಯಾ ಹೋಗೋಗು”
“ಓದಿಸಬೇಕಿತ್ತು”
“ಓದಿವಂತೆ, ನಾಳೆ ಭೀಮರಾಯಪ್ಪ ಬರ್ತಾರೆ, ನೀನು ಅವರ ಜೊತೆ ಸುಮ್ಮನೆ ಹೋಕ್ತಿರಬೇಕು ಅಷ್ಟೇ. ಪಾಪ ನೀ ಮಾಡೋ ದೊಡ್ಡ ಕೆಲಸಕ್ಕೆ ತಿಂಗ್ಳತಿಂಗ್ಳು ಎರಡು ಸಾವಿರ ಕಳಸ್ತಾರೆ. ನೀನು ಹೊರಗೆ ಕೆಲಸ ಮಾಡಿದ್ರು ಯಾರು ತಿಂಡಿ, ಊಟ, ಮಲಗಕ್ಕೆ ಜಾಗ ಕೊಟ್ಟು ಅಷ್ಟು ಸಂಬಳ ಕೊಡಲ್ಲ ತಿಳ್ಕೊ”
“ನಾನು ಕೆರೆಗೆ ಬೇಕಾದ್ರೆ ಹಾರ್ತಿನಿ, ಅವರ ಜೋಡಿ ಹೋಗಲ್ಲ ಕಣಪ್ಪ. ನಾನು ಮತ್ತೆ ಹೋದ್ರೆ ಆ ಮೋತಿಯಮ್ಮ ಸಾಯಿಸಿದ್ರು ಆಶ್ಚರ್ಯ ಇಲ್ಲ” ಎಂದ ಬೇಡಿಕೊಂಡ.
ಈರಪ್ಪಣ್ಣ ಅಣ್ಣನ ದುಃಖದ ಮಾತು ಕೇಳಿ “ ಅಪ್ಪ, ದೊಡ್ಡ ನಗರದಲ್ಲಿ ನೀನು ಅಂದುಕೊಂಡಂಗೆ ಜನ ಇರಲ್ಲ. ಅವರೆಲ್ಲ ಊಸರವಳ್ಳಿ ಅಂತವರು. ಅಣ್ಣನಿಗೆ ಅವರೆಲ್ಲ ಬಹಳ ಶಿಕ್ಷೆ ಕೊಡ್ತಿದ್ದಾರೆ ಅನಿಸುತ್ತೆ. ನಮ್ಮ ಜೋಡಿನೇ ಇದ್ದಬಿಡ್ಲಿ” ಎಂದ.
ದೇವರಾಜಪ್ಪನಿಗೆ ಕಿರಿಯ ಮಗನ ಮಾತು ಕೇಳಿ ಮತ್ತಷ್ಟು ಪಿತ್ತ ನೆತ್ತಿಗೇರಿತು. “ಮನೆಯಾಳನ ರೀತಿ ಮಾತಾಡ್ತಿಯಲ್ಲಲೇ, ನಾಕು ಕಾಸು ಸಿಗುವಾಗ ಯಾರಾದ್ರು ಅದೃಷ್ಟನ ಕಾಲಲ್ಲಿ ಜಾಡಿಸಿ ಒದಿತಾರಾ?” ಎಂದು ತಲೆಯ ಮೇಲೆ ಎರಡು ತಟ್ಟಿದರು. ಇದಕ್ಕೆ ಭಯಗೊಂಡ ನಿರಂಜನ ದಿಕ್ಕೇ ತೋಚದೆ ಆ ರಾತ್ರಿಯನ್ನು ನಿದ್ರೆ ಇಲ್ಲದೇ ಕಳೆದ. ಬೆಳಗ್ಗೆ ಎಂಟು ಗಂಟೆಯ ವೇಳೆಗೆ ಭೀಮರಾಯಪ್ಪ ಕಾರು ಮನೆಯ ಮುಂದೆ ನಿಂತಿತು. ಅಪ್ಪ ಓಡಿ ಹೋಗಿ ಕಾರಿನ ಬಾಗಿಲು ತೆಗೆದರು. ನಗುನಗುತ್ತಲೇ ಜಗಲಿ ಮೇಲೆ ಬಂದು ಕುಳಿತ. ನಿರಂಜನನ ಬರುವೆಗೆ ಕಾದ. ಒಂದು ಬ್ಯಾಗಿನಲ್ಲಿ ಇದ್ದ ನಾಲ್ಕು ಜೋಡಿ ಬಟ್ಟೆ ಇರಿಸಿಕೊಂಡು ಮೆಲ್ಲಗೆ ಬಂದು ಕಾರು ಹತ್ತಿ ಕುಳಿತ. ಭೀಮರಾಯಪ್ಪ ಜೇಬಿನಿಂದ ಐವತ್ತರ ನೋಟಿನ ಒಂದು ಕಂತೆಯನ್ನು ದೇವರಾಜಪ್ಪನಿಗೆ ಕೊಟ್ಟು “ನೀನು ಚೆನ್ನಾಗಿರಬೇಕು ಮಿತ್ರ. ಮತ್ತೆ ಬೇಕಾದ್ರೆ ಹೇಳು. ಮುಂದಿನ ವಾರ ಕಳುಸ್ತೀನಿ. ನಿನ್ನ ಮಗ ಅಲ್ಲ ನನ್ನ ಮಗ ನಿರಂಜನ” ಅಂತ ಮಾತಾಡುತ್ತಲೇ ಕಾರು ಹತ್ತಿಕೊಂಡು ಡ್ರೈವರ್‌ಗೆ ಸನ್ನೆ ಮಾಡಿದ. ಕಾರು ಧೂಳೆಬ್ಬಿಸುತ್ತಾ ಮಾಯವಾಯ್ತು.
ರಾತ್ರಿ ನಿದ್ರೆ ಇಲ್ಲದೇ ಇದ್ದ ನಿರಂಜನನಿಗೆ ಕಾರಿನಲ್ಲಿ ಲೋಕ ಮರೆಯುವಷ್ಟು ನಿದ್ದೆ ಬಂತು. ಭೀಮರಾಯಪ್ಪ ನೆಲಮಂಗಲಕ್ಕೆ ಬಂದಾಗ ಆಗಲೇ ಹತ್ತು ಗಂಟೆ ಮೀರುತ್ತಿದ್ದರಿಂದ ಹೊಟೇಲ್ ಬಳಿ ನಿಲ್ಲಿಸಲು ಡ್ರೈವರ್‌ಗೆ ಸೂಚಿಸಿದರು. ಕಾರು ನಿಂತಾಗ ಭೀಮರಾಯ ನಿರಂಜನನನ್ನು ಎಚ್ಚರಿಸದೇ ಹೊಟೇಲ್ ಒಳಗೆ ಹೊರಟನು. ಡ್ರೈವರ್ ಅವನನ್ನೇ ಹಿಂಬಾಲಿಸಿದನು. ನಿದ್ದೆಯಲಿದ್ದ ನಿರಂಜನನಿಗೆ ಸತ್ತು ಹೋಗಿದ್ದ ತಾಯಿ, ಜೀವಂತವಾಗಿ ಬಂದು ಕಪಾಳಕ್ಕೆ ಹೊಡೆದಂತಾಗಿ “ಅವ್ವಾ...” ಅಂತ ಕಿರುಚಿ ಎಚ್ಚರಾಗಿ ಕುಳಿತ. ಅಕ್ಕ ಪಕ್ಕದಲ್ಲಿ ಲಾರಿ, ಕಾರು ಬಸ್ಸುಗಳು ನಿಂತಿದ್ದವು. ಆ ಕಡೆ ಈ ಕಡೆಯೊಮ್ಮೆ ಕಣ್ಣಾಯಿಸಿ ತಲೆಗೆ ಬಂದ ಯೋಚನೆಯನ್ನು ಕಾರ್ಯರೂಪಕ್ಕೆ ತರಲು ಸಜ್ಜಾದ. ನಿಧಾನಕ್ಕೆ ಕಾರಿನ ಡೋರನ್ನು ತೆಗೆದು ಕೆಳಗಿಳಿದು ಓಡಿಕೊಂಡು ಮುಖ್ಯ ರಸ್ತೆಗೆ ಬಂದು ನಿಂತ. ಲಾರಿಯೊಂದಕ್ಕೆ ಕೈ ತೋರಿಸಿದ. ಅವನ ಅದೃಷ್ಟವೋ ಏನೋ ಲಾರಿ ನಿಂತಿತು. ಹತ್ತಿಕೊಂಡು ಯಶವಂತಪುರದವರೆಗೂ ಬಂದ. ಅಲ್ಲಿಂದ ಇಳಿದು ಕಿರಿದಾದ ರಸ್ತೆಗಳಲ್ಲಿ ಗಲ್ಲಿ ಗಲ್ಲಿಗಳನ್ನು ಹಾಯುತ್ತಾ ಒಂದು ಬೈಕ್ ಗ್ಯಾರೇಜಿನ ಮುಂದೆ ಬಂದು “ಅಣ್ಣ ನನಗೆ ಯಾವುದಾದ್ರು ಕೆಲಸ ಕೊಡಿ” ಎಂದು ವಿನಮ್ರವಾಗಿ ಕೇಳಿದ. ಆ ವ್ಯಕ್ತಿ ಮುಸ್ಲಿಂ ಆಗಿದ್ದರಿಂದ ಅನುಮಾನದಿಂದಲೇ ಕೇಳಿದ “ನೀನು ಮನೆ ಬಿಟ್ಟು ಬಂದಿದ್ದೀಯಾ ಹೇಳು? ನಾನು ನಿಮ್ಮನೆಗೆ ಕಳಿಸೋ ವ್ಯವಸ್ಥೆ ಮಾಡ್ತಿನಿ ಹುಡುಗ” ಎಂದ. ಇದರಿಂದ ವಿಚಲಿತನಾದ ನಿರಂಜನ ತನ್ನ ಕತೆಯನ್ನೆಲ್ಲ ಹೇಳಿಕೊಂಡ. ಆ ವ್ಯಕ್ತಿ ಕನಿಕರದಿಂದ ಊಟ ಕೊಟ್ಟು, ಕೊನೆಗೆ ಕೆಲಸವನ್ನು ನೀಡಿದ.
ಸುಮಾರು ಹತ್ತು ವರ್ಷಗಳ ಕಾಲ ಜಾವೀದನ ಗ್ಯಾರೇಜಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಕಲಿತು, ಗಿರಾಕಿಗಳ ಮೆಚ್ಚುಗೆ ಗಳಿಸಿದ್ದ. ಬೈಕು ರಿಪೇರಿಯವರೆಲ್ಲ ನಿರಂಜನನೇ ಬೇಕು ಎಂದು ಹುಡುಕಿಕೊಂಡು ಬರುತ್ತಿದ್ದರು. ನಿರಂಜನ ಜಾವೀದನಿಗೆ ಮಕ್ಕಳಿಲ್ಲದ್ದರಿಂದ ಮಗನೇ ಆಗಿ ಹೋಗಿದ್ದ. ನಿರಂಜನ ಇಪ್ಪತ್ತಾರು ವಸಂತಗಳನ್ನು ದಾಟಿದ್ದ. ಜಾವೀದ್ ತನ್ನ ಪರಿಚಿತ ಹಿಂದೂ ಸ್ನೇಹಿತರ ಬಳಿ “ನಮ್ಮ ಹುಡುಗನಿಗೊಂದು ಹೆಣ್ಣು ನೋಡಿ. ಬಡವರಾದ್ರೂ ಸರಿ. ಗುಣವಂತೆಯಾಗಿರಬೇಕು” ಎಂದು ತಿಳಿಸಿದ. ಕೊನೆಗೆ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ನಿರ್ಮಲ ನಿರಂಜನನನ್ನು ಒಪ್ಪಿಕೊಂಡಳು. ಅವಳಿಗೂ ತಂದೆ ತಾಯಿ ಇಲ್ಲದ ಕಾರಣಕ್ಕೆ ಜಾವೀದ್ ತನ್ನ ಹೊಟ್ಟೆಯಲಿ ಹುಟ್ಟಿದ ಮಕ್ಕಳಿಗೆ ಮದುವೆ ಮಾಡುವಂತೆ ಕಲ್ಯಾಣ ಮಂಟಪದಲ್ಲೇ ಅದ್ದೂರಿಯಾಗಿ ಮದುವೆ ಮಾಡಿದ್ದ.
ನಿರಂಜನ ಮದುವೆಯ ನಂತರ ಸಂಸಾರದ ಭಾರ ಹೆಚ್ಚಾಗುತ್ತದೆಂದು ತಾನೆ ಒಂದು ಗ್ಯಾರೇಜ್ ತೆಗೆಯುವುದಾಗಿ ಜಾವೀದ್‌ನ ಬಳಿ ಹೇಳಿಕೊಂಡಿದ್ದ. ಇದಕ್ಕೆ ಸಂತೋಷದಿಂದಲೇ ಒಪ್ಪಿಕೊಂಡ ಜಾವೀದ್, ತನ್ನ ಗ್ಯಾರೇಜಿನಿಂದ ಐನೂರು ಮೀಟರ್ ದೂರದ ಖಾಲಿ ಮಳಿಗೆಯಲ್ಲೇ ಅವನಿಗೂ ಗ್ಯಾರೇಜ್ ಮಾಡಿಕೊಟ್ಟು “ಎಷ್ಟು ಬೇಕಾದರು ದುಡಿ ಶ್ರೀಮಂತನಾಗು, ನಿನ್ನ ಜಾವೀದ್ ಯಾವತ್ತಿಗೂ ನಿನ್ನ ಬೆನ್ನಿಗಿರುತ್ತಾನೆ” ಎಂದು ಮನಸಾರೆ ಹಾರೈಸಿದ್ದ. ನಿರ್ಮಲ ಜಾವೀದನಿಗೆ ಪ್ರೀತಿಯ ಸೊಸೆಯಾಗಿ ಹೋಗಿದ್ದಳು. ಹಬ್ಬ ಹರಿದಿನಕ್ಕೆ ಅವರ ಮನೆಯಲ್ಲಿ ಇವರು, ಇವರ ಮನೆಯಲ್ಲಿ ಅವರು ಇರುತ್ತಿದ್ದರು.
ಗ್ಯಾರೇಜಿನಿಂದ ಬರುತ್ತಿದ್ದ ಸಂಪಾದನೆಯನ್ನು ಉಳಿಸಿಕೊಂಡು ನಿರಂಜನ ಮನೆ ಕಟ್ಟುವ ಕನಸು ಕಾಣುತ್ತಿದ್ದ. ಇದರ ನಡುವೆ ನಿರ್ಮಲ ತಾಯಿಯಾಗುತ್ತಿದ್ದಳು. ಇದು ಅವನ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು. ಜಾವೀದ್ ನಿರ್ಮಲಳ ಸೀಮಂತಕ್ಕೆ ಒಂದು ಸೈಟನ್ನು ಕೊಡಿಸಿದ್ದ. “ನಿನ್ನ ಗಂಡ ನಿಯತ್ತಿನಿಂದ ಹತ್ತು ವರ್ಷ ನನ್ನ ಬಳಿ ದುಡಿದಿದ್ದಾನೆ. ಅದರ ಕಾಣಿಕೆಯಷ್ಟೇ ಮತ್ತೇನಿಲ್ಲ” ಎಂದು ಸಂತೋಷ ವ್ಯಕ್ತಪಡಿಸಿದ್ದ. ನಿರ್ಮಲಳಿಗೆ ಗಂಡು ಮಗು ಜನಿಸಿತ್ತು. ಜಾವೀದ್ ಮತ್ತು ನಿರಂಜನ ಇಬ್ಬರು ಆಲೋಚಿಸಿ ಮಗುವಿಗೆ ‘ಗಣೇಶ’ ಎಂದು ಹೆಸರಿಟ್ಟಿದ್ದರು.
ಗಣೇಶ ಹಿಂದೂ ಮುಸ್ಲಿಂ ಎನ್ನುವ ಭಿನ್ನತೆಯನ್ನೇ ಮುರಿದವನಂತೆ ಜಾವೀದನ ಮನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ. ಜಾವೀದನ ಹೆಂಡತಿ ಮುಸ್ಕಾನ್‌ಗೆ ಗಣೇಶನೆಂದರೆ ಅಚ್ಚುಮೆಚ್ಚು. ಮಕ್ಕಳ ವರವೇ ಇಲ್ಲದ ಅವರಿಬ್ಬರಿಗೂ ಮೊಮ್ಮಗನ ಕೊರತೆಯನ್ನು ನೀಗಿಸಿದ್ದ. ಇದೆಲ್ಲವನ್ನು ನೋಡುತ್ತಿದ್ದ ಬೀದಿಯವರು, ಮೌಲ್ವಿಗಳು “ಧರ್ಮದ ವಿರುದ್ಧ ನಡದ್ರೆ ಇವ್ರೊಂದಿನ ದೇವರ ಶಾಪಕ್ಕೆ ಗುರಿಯಾಕ್ತಾರೆ ನೋಡ್ತಿರಿ!” ಎಂದು ಕೊಂಕು ಮಾತಾಡುತ್ತಿದ್ದರು. ಜಾವೀದ್ ತಲೆಕೆಡಿಸಿಕೊಂಡಿರಲಿಲ್ಲ.
ನಿರಂಜನ ಮಗನ ಬೆಳವಣಿಗೆಯಲ್ಲಿ ತನ್ನ ಬೆಳವಣಿಗೆಯನ್ನು ಕಾಣತ್ತಿದ್ದ. ಮಗನಿಗೆ ಒಳ್ಳೆ ಶಿಕ್ಷಣ ಕೊಡಿಸಬೇಕು ಅಂದುಕೊಂಡು ಖಾಸಗಿ ಶಾಲೆಗೆ ಸೇರಿಸಿದ್ದ. ತಾನು ಪಟ್ಟ ಕಷ್ಟ ಮಗನಿಗೆ ಬರಬಾರದು ಎಂದು ಅವನನ್ನು ಶಾಲೆಗೆ ಬಿಡಲು ಕಾರು, ಹೊಸ ಮನೆ ಹೀಗೆ ವರ್ಷ ವರ್ಷವೂ ಹೊಸತನವೇ ಆವರಿಸಿಕೊಳ್ಳುತಿತ್ತು. ಗಣೇಶ ಐದನೇ ತರಗತಿ ಮುಗಿಸುವುದರಲ್ಲಿ ಹೆಚ್ಚು ಚುರುಕಾಗಿದ್ದ. ಅಪ್ಪನ ಮೊಬೈಲ್ ತೆಗೆದುಕೊಂಡು ಅದ್ಯಾವ್ಯಾವುದೋ ಆಟಗಳನ್ನು ಆಡುತ್ತಿದ್ದ. ನಿರ್ಮಲ ಮಗನ ವರ್ತನೆಗಳನ್ನು ಗಮನಿಸಿತ್ತಿದ್ದರು, ಅವನು ಓದುತ್ತಾನೆ ಎಂಬ ನಂಬಿಕೆಯಲ್ಲಿ ಯಾವುದೇ ಒತ್ತಡವನ್ನು ಹಾಕುವುದಾಗಲಿ, ಶಿಕ್ಷಿಸುವುದಾಗಲಿ ಮಾಡುತ್ತಿರಲಿಲ್ಲ. ಇನ್ನೂ ನಿರಂಜನ ಶಾಲೆಯಲ್ಲಿ ವಿಚಾರಿಸಿದರೆ “ಮೊದಲು ಓದುತ್ತಿದ್ದ ರೀತಿಯಲ್ಲಿ ಅವನು ಓದುತ್ತಿಲ್ಲ. ಅವನಿಗೆ ನಿಮ್ಮ ಮುದ್ದು ಜಾಸ್ತಿಯಾಗಿರಬೇಕು” ಎಂದು ನಗುತ್ತಾ ಉತ್ತರಿಸಿದರು. ಅವತ್ತೆ ನಿರಂಜನ ಮಗನ ಶಾಲೆ ಬದಲಿಸುವ ನಿರ್ಧಾರ ಮಾಡಿಕೊಂಡು ಮನೆಗೆ ಬಂದಿದ್ದ.
ಗಣೇಶನ ಏಳನೇ ತರಗತಿ ಮುಗಿದಾಗ, ಎಂಟನೇ ತರಗತಿಗೆ ಟೀಸಿ ಪಡೆದು ‘ಮಾರ್ಕಂಡೇಯ’ ಖಾಸಗಿ ಶಿಕ್ಷಣ ಸಂಸ್ಥೆಗೆ ಲಕ್ಷದಷ್ಟು ಹಣ ಸುರಿದು ಸೇರಿಸಿದ್ದ ನಿರಂಜನ. ಅಲ್ಲಿ ಗಣೇಶ ಮತ್ತಷ್ಟು ಸ್ನೇಹಿತರನ್ನು ಮಾಡಿಕೊಂಡು, ಗ್ರೂಪ್ ಸ್ಟಡಿ ಅಂತ ಯಾರ‍್ಯಾರದೋ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ. ಮುದ್ದಾಗಿ ಸಾಕಿರುವ ಮಗ ತಪ್ಪು ಮಾಡುತ್ತಿರುವುದು ಗಮನಕ್ಕೆ ಬಂದಾಗೆಲ್ಲ ಬೈಯುವುದು, ಕೂರಿಸಿಕೊಂಡು ಬುದ್ದಿ ಹೇಳುವುದು ಮಾಡುತ್ತಲೇ ಇದ್ದರು. ಜಾವೀದ್ ಕೂಡ ಮನೆಗೆ ಬಂದು ಸನಿಹ ಕೂರಿಸಿಕೊಂಡು “ಬೇಟಾ, ನಿನ್ನ ವಯಸ್ಸಿಗೆ ಮೀರಿದ ಚಟಗಳ ಕಲಿಬಾರ್ದು. ನಮಗೆ ಯಶಸ್ಸಲ್ಲ” ಎಂದು ಹೇಳಿದರು ಅವನ ವರ್ತನೆಗಳು ವಿಚಿತ್ರವಾಗ ತೊಡಗಿದವು. ನಿರಂಜನ ಗ್ಯಾರೇಜಿನಿಂದ ಬಂದು ಊಟ ಮಾಡಿ, ಮಗನ ಜೊತೆ ಮಾತಾಡಿ ಮಲಗಬೇಕು ಅಂತ ಅಂದುಕೊಂಡು ಆಸೆಯಿಂದ ಬಂದರೆ ಅಮ್ಮನ ಮೊಬೈಲ್ ಎತ್ತಿಕೊಂಡು ರೂಮು ಸೇರಿಕೊಂಡು ಇಂಟರ್‌ನೆಟ್‌ನಲ್ಲಿ ಅದೇನೇನೋ ಹುಡುಕಿಕೊಂಡು ನೋಡುತ್ತಿದ್ದ. ನಿರ್ಮಲ ಒಮ್ಮೆ ಮೊಬೈಲ್ ಪರೀಕ್ಷೆ ಮಾಡಿ ನೋಡಿದರೆ ಡ್ರಗ್ಸ್ ಸೇವಿಸುವುದರ ಬಗ್ಗೆ, ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ, ಅಶ್ಲೀಲ ಚಿತ್ರಗಳನ್ನು ನೋಡುತ್ತಿರುವುದರ ಬಗ್ಗೆ ತಿಳಿದು ಬಿಕ್ಕಿ ಬಿಕ್ಕಿ ಅತ್ತಿದ್ದಳು. ಈ ವಿಷಯವನ್ನು ನಿರಂಜನನಿಗೆ ತಿಳಿಸಿದಾಗ ಅವನ ಬಾಹುಬಲವೇ ಕುಸಿದು ಹೋದಂತೆನಿಸಿ, ಗಣೇಶನನ್ನು ಕೂರಿಸಿಕೊಂಡು ಬುದ್ಧಿವಾದ ಹೇಳಿದ್ದ. ಆದರೆ ಅವನು ಅಪ್ಪ ಅಮ್ಮನ ಮಾತು ಕೇಳದಷ್ಟು ದೂರ ಹೋಗಿಬಿಟ್ಟಿದ್ದ. ಎಲ್ಲದಕ್ಕೂ ತಲೆಯಾಡಿಸುತ್ತಿದ್ದ. ಕೆಟ್ಟದಾಗಿ ಕಣ್ಣು ಬಿಡುತ್ತಿದ್ದ. ಮಾನಸಿಕ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಲಿಲ್ಲ. ಶಾಲೆಯನ್ನು ಬಿಟ್ಟು ಮೂರೊತ್ತು ರೂಮಿನ ಬಾಗಿಲಾಕಿಕೊಂಡೇ ಇರುತ್ತಿದ್ದ. ನಿಂತಲ್ಲಿ ಕುಂತಲ್ಲಿ ಅವನ ಕೈಕಾಲುಗಳು ನಡುಗುತ್ತಿದ್ದವು, ಮಾತು ತೊದಲುತ್ತಿದ್ದವು. ಮೊಬೈಲ್ ಸಿಗದಿದ್ದರೆ ಹುಚ್ಚನಂತೆ ಆಡುತ್ತಿದ್ದ.
ನಿರಂಜನನಿಗೆ ನಾನು ಇಲ್ಲೇ ಉಳಿದರೆ ಮಗ ಕೈತಪ್ಪಿ ಹೋಗುತ್ತಾನೆಂದು ಹೆಂಡತಿ ಮತ್ತು ಜಾವೀದ್ ಸಲಹೆ ಮೇರೆಗೆ ತನ್ನ ಹುಟ್ಟೂರಿಗೆ ಬರುವ ನಿರ್ಧಾರ ಮಾಡಿದ. ತಾನು ಸಂಪಾದಿಸಿದ ಆಸ್ತಿಯನೆಲ್ಲಾ ಮಾರಿ, ಸಂಪನಹಳ್ಳಿಗೆ ಬಂದಾಗ ಊರಿನವರು ಗುರುತು ಹಚ್ಚದೆ ಅಪರಿಚಿತರಂತೆ ನೋಡಿದ್ದರು. ಹದಿನೈದು ವರ್ಷದವನಾಗಿದ್ದಾಗ ಊರು ಬಿಟ್ಟಿದ್ದವನು ನಲ್ವತ್ತೈದನೆ ವಯಸ್ಸಿಗೆ ಹೆಂಡತಿ ಮಗನೊಂದಿಗೆ ಬಂದಾಗ ತಮ್ಮ ಈರಪ್ಪಣ ಗುರುತಿಡಿದು “ನಿರಂಜನಣ್ಣ, ನಿನ್ನ ಹುಡುಕದೇ ಇರುವ ಜಾಗವೇ ಇಲ್ಲ. ನೀನು ಸತ್ತೋದೆ ಅಂತ ಹಾಲು ತುಪ್ಪಾನು ಬಿಟ್ಟಿದ್ದ ಅಪ್ಪ. ನೀನು ಬಂದಿದ್ದು ದೇವರೇ ಬಂದಂಗಾಯ್ತು! ಎಂದು ಅಣ್ಣ ಅತ್ತಿಗೇನ ಸಂಭ್ರಮದಿಂದ ಮನೆ ತುಂಬಿಸಿಕೊಂಡಿದ್ದ. ಆ ವೇಳೆಗೆ ಅಪ್ಪ ತೀರಿಕೊಂಡಿದ್ದರು. ತಂಗಿಯರು ದೂರದೂರುಗಳಿಗೆ ಮದುವೆಯಾಗಿದ್ದರು.
ಈರಪ್ಪಣ್ಣನ ಮನೆಯಲ್ಲೇ ಆಶ್ರಯ ಪಡೆದ ಗಂಡ ಹೆಂಡತಿ ಮತ್ತು ಮಗ ವಾರವೆಲ್ಲ ಸಂತೋಷದಿಂದಲೇ ಇದ್ದರು. ಈರಪ್ಪಣನ ಹೆಂಡತಿಯೂ ಕೂಡ ಸಂತೋಷದಿಂದಲೇ ಅವರ ಜೊತೆ ಬೆರೆತುಕೊಂಡಳು. ಆದರೆ ಗಣೇಶನಿಗೆ ಹಳ್ಳಿಯ ವಾತಾವರಣ ಉಸಿರು ಕಟ್ಟಿಸುವಂತೆ ಭಾಸವಾಗುತಿತ್ತು. ಮನೆಯಲ್ಲಿ ಯಾರು ಮೊಬೈಲ್ ಇಟ್ಟರು ಕದ್ದುಕೊಂಡು ಉಪ್ಪರಿಗೆ ಸೇರಿಕೊಳ್ಳುತ್ತಿದ್ದ. ಅವತ್ತು ತೋಟಕ್ಕೆ ಹೋಗಿದ್ದ ನಿರಂಜನ ತಮ್ಮನೊಂದಿಗೆ ವಾಪಸ್ಸು ಬಂದು ಮೊಬೈಲ್ ನೋಡಿದರೆ ಟೇಬಲ್ಲಿನ ಮೇಲೆ ಇರಲಿಲ್ಲ. ಮನೆಯೆಲ್ಲ ಹುಡುಕಾಡಿದರು ಸಿಗಲಿಲ್ಲ. ಮೊಬೈಲನ್ನು ಗಣೇಶನೇ ಕದ್ದಿರುವುದೆಂದು ಮನದಟ್ಟಾಯ್ತು. ಬೆಳಗ್ಗಿಂದ ಇಲ್ಲದ ಗಣೇಶ ಸಂಜೆ ಮನೆಯ ಮುಂದೆ ಕಾಣಿಸಿಕೊಂಡ. ನಿರಂಜನನಿಗೆ ಅದೆಲ್ಲಿ ಕೋಪವಿತ್ತೋ, ಪ್ಯಾಂಟಿನಲಿದ್ದ ಬೆಲ್ಟು ಬಿಚ್ಚಿಕೊಂಡು ಉರುಳಾಡಿಸಿಕೊಂಡು ದನಕ್ಕೆ ಬಡಿದಂತೆ ಬಡಿಯ ತೊಡಗಿದ. “ನಿನ್ನಿಂದ ನನ್ನ ಜೀವ್ನ, ಹೆಸರು ಎಲ್ಲಾ ಹಾಳಾಯ್ತಲ್ಲೋ. ಎಲ್ಲೋ ಮೊಬೈಲ್? ಹಾಳಾದ ಮೊಬೈಲ್ ಚಟ ಬಿಡಲ್ವೇನೋ?” ಎಂದು ಬೈಯುತ್ತಾ, ಯಾರು ಬಿಡಿಸಿಕೊಳ್ಳಲು ಬಂದರು ಸುಮ್ಮನಾಗಲಿಲ್ಲ. ಕೊನೆಗೆ ಈರಪ್ಪಣ್ಣ ಅಣ್ಣನನ್ನು ತಬ್ಬಿಕೊಂಡು ಮನೆಯೊಳಗೆ ಎಳೆದುಕೊಂಡು ಹೋಗಿ ಕೂಡಿ ಹಾಕಿದ. ಅಳುತ್ತಲೇ ಜಗಲಿಯಲ್ಲಿ ಕುಳಿತಿದ್ದ ಗಣೇಶ ಸೂರ್ಯ ಮುಳುಗುವ ಸಮಯಕ್ಕೆ ಸೈಕಲ್ ತೆಗೆದುಕೊಂಡು, ಚಪ್ಪಲಿ ಹಾಕಿಕೊಂಡು ದೇವಸ್ಥಾನದ ಕಡೆ ಹೋದದ್ದನ್ನಷ್ಟೇ ಮನೆಯವರು ನೋಡಿದರು. ಆಟವಾಡಲು ಹೋಗಿರಬಹುದೆಂದು ಭಾವಿಸಿಕೊಂಡರು. ರಾತ್ರಿ ಊಟಕ್ಕೂ ಬರದೇ ಇದ್ದಾಗ ಎಲ್ಲರು ಕಂಗಾಲಾಗಿ ಊರು, ಮನೆ, ರೈಲ್ವೇ ಹಳಿ, ತೋಟ, ಅಂತ ಹುಡುಕಾಡಿದರು. ಎಲ್ಲಿಯೂ ಗಣೇಶನ ಸುಳಿವಿಲ್ಲ.
ಬೆಳಗ್ಗೆ ಎದ್ದು ಪೊಲೀಸರಿಗೆ ದೂರು ಕೊಡಲು ಹೊರಟಾಗ, ಊರ ಹೊರಗಿದ್ದ ಕೆರೆಯ ಬಳಿ ಗಣೇಶನ ಸೈಕಲ್ ನಿಂತಿರುವುದು, ಅವನ ಚಪ್ಪಲಿಯೂ ಅಲ್ಲೇ ಇರುವುದನ್ನು ಕಾಡಜ್ಜ ತಿಳಿಸಿದ.
ಊರಿನವರೆಲ್ಲ ವಿಷಯ ತಿಳಿದು ಓಡಿಹೋದರು. ನಿರ್ಮಲ, ನಿರಂಜನನನ್ನು ನಿಂದಿಸುತ್ತಾ “ನೀವು ಮಗನಿಗೆ ದನ ಬಡಿದಂಗೆ ಬಡಿದ್ರಲ್ಲಾ ನೋಡಿ. ಇವತ್ತು ಅವನೇ ಇಲ್ಲ. ನನಗೂ ಒಂದು ತೊಟ್ಟು ವಿಷ ಕೊಟ್ಟು ಬಿಡ್ರಿ” ಎಂದು ಗೋಳಿಡುತ್ತಾ ಕೆರೆಯ ತಟಕ್ಕೆ ಬಂದಳು. ನಿರಂಜನನಿಗೆ ದುಃಖ ಉಮ್ಮಳಿಸಿ ಬಂದರು ಅಳಲು ಕಣ್ಣೀರೆ ಬತ್ತಿ ಹೋಗಿದ್ದವು. ‘ನಾನೇನು ಮಾಡಿಬಿಟ್ಟೆ’ ಎನ್ನುವ ಪಶ್ಚಾತ್ತಾಪ ಕಾಡತೊಡಗಿತು. ಅಷ್ಟರಲ್ಲಿ ಊರಿನ ಈಜುಗಾರ ಹುಡುಗರೇ ಕೆರೆಗೆ ಧುಮುಕಿ, ಹುಡುಕಿದರು ಗಣೇಶನ ಹೆಣ ಸಿಗಲಿಲ್ಲ. ಆದ್ದರಿಂದಲೇ ಪಟ್ಟಣದಿಂದ ಮುಳುಗು ಈಜುಗಾರರನ್ನು ಕರೆಸಿ ಹೆಣ ಹುಡುಕಲು ಪ್ರಯತ್ನ ಮಾಡುತ್ತಿದ್ದರು.
ಸಂಜೆಯ ತನಕ ಹುಡುಕಿದರೂ ಗಣೇಶನ ಶವದ ಸುಳಿವು ಸಿಗಲಿಲ್ಲ. ಗೊಬ್ಬರ ಗೋಡು ಅಂತ ತೆಗೆದು ಆಳವಾಗಿದ್ದ ಕೆರೆಯಲ್ಲಿ ಅವನ ಶವ ಮೂರು ದಿನವಾದ ಮೇಲೆ ಸಿಗುತ್ತದೆ. ಅಲ್ಲಿಯವರೆಗೆ ಕಾಯಬೇಕು ಎಂದು ಮುಳುಗು ತಜ್ಞರು ಹೇಳಿ ಹೋದರು. ನಿರಂಜನ ಮಗನ ಚಪ್ಪಲಿ, ಸೈಕಲ್ ತಬ್ಬಿಕೊಂಡು ಕುಳಿತಿದ್ದ, ಎಲ್ಲರೂ ಒಬ್ಬೊಬ್ಬರಾಗಿ ಮನೆಯ ಕಡೆಗೆ ಹೊರಟರು. ಈರಪ್ಪಣ್ಣ “ಬಾ ಅಣ್ಣ ಹೋಗನ ಮನೆಗೆ” ಅಂದ್ರೆ “ನೀವು ನಡೀರಿ ನಾನು ಹಿಂದೆನೇ ಬರ್ತೀನಿ” ಅಂದ. ನಿರ್ಮಲ ಕೂಡ ಅಳುತ್ತಾ ಮೈದನೊಂದಿಗೆ ಹೊರಟಳು.
ಗಂಡನ ಮೇಲಿನ ಕೋಪ, ದುಃಖದಲ್ಲೂ ಕಡಿಮೆಯಾಗಿರಲಿಲ್ಲ. ತಣ್ಣಗೆ ಬೀಸುತ್ತಿದ್ದ ಸಂಜೆಯ ಗಾಳಿ ನಿರಂಜನನ ದೇಹವನ್ನು ಸುಡುವುದಕ್ಕೆ ಪ್ರಾರಂಭಿಸಿತು. ಪಶ್ಚಿಮದ ನಕ್ಷತ್ರ ನೀಲಿಯಿಂದ ಕೆಂಪಾದಂತೆ ಕಂಡಿತು. ಎದ್ದು ನಿಂತುಕೊಂಡ ಅತ್ತಿತ್ತ ನೋಡಿದ. ದೂರದ ಗುಡ್ಡವಿಳಿದು ಯಾರೋ ಒಬ್ಬ ಹುಡುಗ ನಡೆದು ಬರುತ್ತಿರುವುದು ಕಾಣಿಸಿತು. ಆ ರೂಪ ಹತ್ತಿರ ಹತ್ತಿರವಾಗುತ್ತಿದ್ದಂತೆ, ಒಂದು ನಿಟ್ಟುಸಿರು ಬಿಟ್ಟ. ನಿರಂಜನ ಕಣ್ಣುಮುಚ್ಚಿ ಮಗನ ಚಪ್ಪಲಿ ತಬ್ಬಿಕೊಂಡೆ ಕೆರೆಗೆ ಹಾರಿದ್ದ.
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.