ADVERTISEMENT

ರಾಜಶ್ರೀ ಟಿ. ರೈ ಪೆರ್ಲ ಅವರ ಕಥೆ ‘ಅಕ್ವೇರಿಯಂ’

ರಾಜಶ್ರೀ ಟಿ.ರೈ ಪೆರ್ಲ
Published 20 ಆಗಸ್ಟ್ 2022, 23:45 IST
Last Updated 20 ಆಗಸ್ಟ್ 2022, 23:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ನಾಲ್ಕು ದಿನದಲ್ಲಿ ನೀನು ಚೆನ್ನೈ ಹೋಗುವವಳು. ಈ ಮೀನನ್ನು ಯಾಕೆ ತರಬೇಕಿತ್ತು? ಒಂದು ಹೊತ್ತು ತಿನ್ನಲು ಹಾಕದಿದ್ದರೆ ಸತ್ತು ಹೋಗುತ್ತದೆ. ನಾಯಿ, ಬೆಕ್ಕು, ದನಗಳ ಜೊತೆ ನನ್ನ ಬಾಲ್ಯದ ಬಹುಪಾಲು ಕಳೆದುಹೋದದ್ದು. ಹಳ್ಳಿ ಬಿಟ್ಟು ಪೇಟೆ ಸೇರಿದವಳು ನಾನು. ನಿಧಾನಕ್ಕೆ ಎಲ್ಲಾ ಮರೆತ ನಂತರ ಈಗ ನೆಮ್ಮದಿಯಲ್ಲಿ ಇದ್ದೇನೆ. ಆವತ್ತು ಎಲ್ಲ ಬಿಟ್ಟು ಇಲ್ಲಿ ಬಂದಾಗ ಇಲ್ಲೇನಿದೆ, ಆಸ್ಪತ್ರೆಯಲ್ಲಿ ಸ್ಪೆಷಲ್ ವಾರ್ಡಿನ ಹಾಗಿರುವ ಮನೆಗಳು ಅಷ್ಟೆ ಅಂತ ಅನ್ನಿಸಿತ್ತು. ನಿಧಾನಕ್ಕೆ ಈ ಜಗತ್ತಿಗೆ ಹೊಂದಿಕೊಂಡೆ. ಮತ್ತೆ ಹಳೆಯ ಬಂಧನಗಳ ಬಲೆಯೊಳಗೆ ಸಿಲುಕಿಸಬೇಡ. ನಂಗೆ ಇಷ್ಟ ಆಗಲ್ಲ’ ಮಗಳು ಮೇಜಿನ ಮೇಲೆ ಇಟ್ಟ ಫಿಶ್ ಬೌಲ್ ಅಕ್ವೇರಿಯಂನ್ನು ನೋಡುತ್ತಾನಾನು ಮುನಿಸಿನಿಂದಲೇ ಹೇಳಿದೆ.

ನನಗೆ ಹೂವಿನ ಗಿಡದ ನಡುವೆ ಚಿಟ್ಟೆ, ಗುಬ್ಬಚ್ಚಿ ನೋಡುತ್ತಾ ಕುಳಿತರೆ ಎಲ್ಲವೂ ಮರೆತು ಹೋಗುತ್ತದೆ. ಮಾತಿಗೆ ನಿಂತರೇ ಪೂರ್ತಿ ಊರನ್ನೇ ಖರೀದಿಸಿಬಿಟ್ಟರೋ ಎಂದು ನೋಡಿದವರು ಅಂದುಕೊಳ್ಳುವಷ್ಟು ವಾಚಾಳಿಗಳು ಅಕ್ಕಪಕ್ಕದ ಮನೆಯ ಹೆಂಗಸರು. ಅಡುಗೆ, ಮನೆಯ ಒಪ್ಪ ಓರಣ, ನೆಂಟರು, ಸ್ನೇಹಿತರು ಅಂತ ಬೆಳಗ್ಗೆ ರಾತ್ರಿಯಾಗುವಾಗ ಒಮ್ಮೊಮ್ಮೆ ಯಾವುದೋ ಮಾಡಬೇಕೆಂದು ಯೋಚಿಸಿದ ಕೆಲಸ ಮಾಡಲಾಗದೆ ಸಮಯದ ಓಡುವ ಹಾದಿಗೆ ಜಲ್ಲಿಕಲ್ಲು ಸುರಿಯಬೇಕು ಅನ್ನಿಸುವಷ್ಟು ಅಸಹನೆ.

‘ಅಮ್ಮಾ, ಎರಡು ವಾರದ ನಂತರ ನಾನು ಹೊರಟುಹೋಗುತ್ತೇನೆ. ಹಾಸ್ಟೆಲ್‌ನಿಂದ ತಿಂಗಳಿಗೊಮ್ಮೆ ಮನೆಗೆ ಬರುವುದು, ಅಪ್ಪ ಆಫೀಸ್ ಬಿಟ್ಟು ಬರುವಾಗ ರಾತ್ರಿಯಾಗುತ್ತೆ. ಇಡೀ ದಿನ ಒಂಟಿಯಾಗಿ ಇರುತ್ತಿ. ಬೆಕ್ಕು, ನಾಯಿ ನಿಂಗೆ ಸರಿ ಬರುವುದಿಲ್ಲ. ಇಡೀ ದಿನ ಒಂಟಿಯಾಗಿರುವ ನಿನಗೆ ಕಂಪೆನಿಗೆ ಇರಲಿ ಅಂತ ತಂದಿರುವೆ. ನೋಡು ಎಷ್ಟು ಚಂದದ ಗೋಲ್ಡನ್ ಫಿಶ್! ಅದಕ್ಕೆ ಹಾಕುವುದಕ್ಕೆ ಟೆಟ್ರಾ ಮಿನಿ ಮಾತ್ರೆಗಳನ್ನು ಕೂಡ ತಂದಿರುವೆ. ಈಗ ಅಕ್ವೇರಿಯಂ ಇಲ್ಲದ ಮನೆ ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ’ ಅವಳು ನನ್ನ ಕೋಪ ಇಳಿಸುವ ಹಾಗೆ ಮಮತೆಯಿಂದ ಹೇಳಿದಾಗ ನಾನು ಸ್ವಲ್ಪ ತಣ್ಣಗಾಗಿ ಮೀನಿನತ್ತ ನೋಡಿದೆ.

ADVERTISEMENT

ಅವಳು ಹೇಳಿದ್ದರಲ್ಲಿ ಉತ್ಪ್ರೇಕ್ಷೆಯಿಲ್ಲ. ಗಾಜಿನ ಆವರಣದ ಸುತ್ತ ಮರಿಮೀನು ವೇಗವಾಗಿ ಈಜುತ್ತಿತ್ತು.ಫಿನೇಜ್ ಜಾತಿಯ ಮೀನು. ಗಾಜಿನ ಪಾತ್ರೆಯಲ್ಲಿ ಚಿನ್ನದ ಬಣ್ಣದ ಅದರ ಓಡಾಟ ಕಣ್ಮನ ಸೆಳೆಯುವಂತಿತ್ತು. ಇದನ್ನು ಸಾಕುವ ಹುಚ್ಚು ಹಲವು ರಾಜವಂಶದವರಿಗೆ ಅನಾದಿ ಕಾಲದಿಂದ ಇತ್ತಂತೆ. ಮನುಷ್ಯ ಶೋಕಿಯ ಅವಕಾಶವನ್ನು ಯಾವ ಕಾಲಕ್ಕೂ ಬಿಟ್ಟುಕೊಡುವುದಿಲ್ಲ. ಕೆಲವು ದೇಶದಲ್ಲಿ ಗಂಡಂದಿರು ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಮಡದಿಗೆ ಈ ಮೀನುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರಂತೆ! ಹಾಗೆ ನೋಡಿದರೆ ವಠಾರದ ಎಲ್ಲಾ ಮನೆಗಳಲ್ಲಿ ಅಕ್ವೇರಿಯಂ ಇತ್ತು. ಕೆಲವರಂತೂ ವಾಸ್ತುತಜ್ಞರ ಸೂಚನೆಯಂತೆ ಸೂಕ್ತ ಸ್ಥಳ ನೋಡಿ ಅದನ್ನು ಹಾಲ್, ಕಿಚನ್ ಅಂತ ಇರಿಸಿಕೊಂಡಿದ್ದರು.

ನಿಧಾನಕ್ಕೆ ಮೀನು ನನ್ನ ಖಾಲಿ ಸಮಯವನ್ನು ತುಂಬತೊಡಗಿತು. ಆದರೆ ಮಲ ಮತ್ತು ಕಿವಿರುಗಳ ದೊಡ್ಡ ಪ್ರಮಾಣದ ತ್ಯಾಜ್ಯ ಉಂಟು ಮಾಡುವ ಕಾರಣ ದಿನಾ ನೀರು ಬದಲಾಯಿಸಬೇಕಾಗುತ್ತಿತ್ತು. ಸ್ವಲ್ಪ ದಿನದಲ್ಲಿಯೇ ಆ ಸಣ್ಣ ಮೀನನ್ನು ಬಹಳ ಹಚ್ಚಿಕೊಂಡುಬಿಟ್ಟೆ. ಪರಿದಿಯೊಳಗಣ ಅದರ ಬದುಕು ಎಷ್ಟು ಸುಂದರ ಅನ್ನಿಸುತ್ತಿತ್ತು. ಆತಂಕ, ಅಪಾಯದ ಭಯ, ಆಹಾರದ ಅನ್ವೇಷಣೆ ಯಾವುದೂ ಇರಲಿಲ್ಲ. ಆದರೂ ಎಷ್ಟೊಂದು ಲವಲವಿಕೆ! ಒಬ್ಬಳು ಕೆಲಸದವಳು ನೆಲ ಗುಡಿಸಿ ಒರೆಸುವುದಕ್ಕೆ ಒಂದು ಹೊತ್ತು ಬರುತ್ತಿದ್ದಳು. ಅವಳೂ ಕೂಡ ಮೀನನ್ನು ತುಂಬಾ ಹಚ್ಚಿಕೊಂಡಿದ್ದಳು. ಒಮ್ಮೊಮ್ಮೆ ಅವಳೇ ಅದರ ನೀರು ಬದಲಿಸಿ ಆಹಾರ ಹಾಕುತ್ತಿದ್ದಳು. ಆಗೆಲ್ಲಾ ನಾನು ಸಿಟ್ಟಿನಿಂದ ಬೈದುಬಿಡುತ್ತಿದ್ದೆ. ದಿನಕ್ಕೊಂದು ಕಡೆ ಅದರ ಮಿನಿ ಆಹಾರ ಮಾತ್ರೆಗಳನ್ನು ಅಡಗಿಸಿಡುತ್ತಿದ್ದೆ. ಅಷ್ಟು ಸ್ವಾರ್ಥ ಹುಟ್ಟಿತ್ತು. ಅವಳೂ ಅದೇನು ಅನ್ನಿಸಿಯೋ ನಾನು ಎಲ್ಲಿಟ್ಟರೂ ಹುಡುಕಿ ಹೊತ್ತಿಗೆ ಮೊದಲೇ ಹಾಕುತ್ತಿದ್ದಳು.

ಮಗಳು ಹಾಸ್ಟೆಲ್‌ಗೆ ಹೊರಡುವ ಹಿಂದಿನ ದಿನ ಒಂದು ಘಟನೆ ನಡೆಯಿತು. ನಮ್ಮದೇ ಮನೆಗೆ ಕೆಲಸಕ್ಕೆ ಬಂದ ಕೆಲಸದವಳು ನಾಪತ್ತೆಯಾಗಿದ್ದಳು! ಪೋಲಿಸಿನವರು ನಾಲ್ಕೈದು ಸಲ ಬಂದು ನಮ್ಮನ್ನು ವಿಚಾರಿಸಿದ್ದರು. ಏನಾದರೂ ಕಳೆದುಹೋಗಿದೆಯಾ ಎಂದು ಕೂಡ ವಿಚಾರಿಸಿದ್ದರು. ಒಟ್ಟಾರೆ ಆತಂಕ ಕಿರಿಕಿರಿಯಾಗಿತ್ತು. ಮಗಳ ಬಟ್ಟೆಬರೆ ತುಂಬಿಸುವ ಗಡಿಬಿಡಿ ಒಂದೆಡೆಯಾದರೆ ಇದೊಂದು ಹೊಸ ಚಿಂತೆ ತಗಲುಹಾಕಿಕೊಂಡಿತ್ತು. ಕೊನೆಗೂ ಕೆಲಸದವಳು ಪತ್ತೆ ಆಗಲಿಲ್ಲ. ಪೋಲಿಸರು ಹುಡುಕಾಟ ಪ್ರಾರಂಭಿಸಿದ್ದರು.

ನನಗೆ ಆದರ ಬಗ್ಗೆ ದೊಡ್ಡ ಯೋಚನೆಯಿರಲಿಲ್ಲ. ಮನಸ್ಸಿನ ಒಳಗೇ ಏನೋ ಖುಷಿಯಾಗಿತ್ತು. ಅವಳನ್ನು ಕೆಲಸದಿಂದ ಬಿಟ್ಟುಬಿಡಬೇಕು ಎಂದರೂ ಸರಿಯಾದ ನೆಪ ಸಿಕ್ಕಿರಲಿಲ್ಲ. ಇನ್ನು ಬೇರೆ ಜನ ಮಾಡಿಕೊಂಡರೆ ಆಯಿತು ಎಂಬ ನೆಮ್ಮದಿ. ಅಲ್ಲದೇ ಅವಳು ನಮ್ಮಲ್ಲಿಗೆ ಮಾತ್ರವಲ್ಲ. ಆ ಏರಿಯಾದ ಹಲವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ಅವಳ ಸಂಸಾರದಲ್ಲಿಯೂ ಸಮರಸವಿರಲಿಲ್ಲವಂತೆ. ಕುಡುಕ ಗಂಡನೇ ಏನಾದರೂ ಮಾಡಿದನೋ ಎನ್ನುವ ಸಂಶಯ ಎಲ್ಲರಿಗೂ. ಆದರೆ ಅವಳು ಅಂದು ನಮ್ಮನೆಯ ಕೆಲಸಕ್ಕೆ ಬಂದಿದ್ದಳು. ನಾನು ಪಕ್ಕದ ಮನೆಗೆ ಹೋಗಿ ಬರುವಷ್ಟರಲ್ಲಿ ಬಾಗಿಲು ತೆರೆದಿಟ್ಟೇ ಹೋಗಿದ್ದಳು! ಕೆಲಸ ಎಲ್ಲಾ ಮುಗಿಸಿ ನನ್ನನ್ನು ಕಾದಿರಬೇಕು. ಹೇಗೂ ಅಲ್ಲೇ ಇದ್ದೇನೆ ಅಲ್ವಾ ಎಂದು ಹೋಗಿರಬೇಕು. ಅಕ್ವೇರಿಯಂ ಸುತ್ತಾ ಒಂದಿಷ್ಟು ನೀರು ಚೆಲ್ಲಿತ್ತು. ಒಂಟಿ ಮೀನು ಮಾತ್ರ ಆರಾಮದಲ್ಲಿ ಈಜುತ್ತಿತ್ತು.

ನಮ್ಮ ಮನೆಯ ಎದುರೇ ಇದ್ದ ಬಾವಿಯ ಕಸ ನಿನ್ನೆಯಷ್ಟೇ ತೆಗೆದಿದ್ದರು. ಅದರ ಮೇಲೆ ಕಸ ಬೀಳದಂತೆ ಹಾಕಿದ ನೆಟ್ ಮತ್ತೆ ಕಟ್ಟಬೇಕಿತ್ತು. ಅದಕ್ಕೆ ಯಾರಾದರೂ ಆಳು ಸಿಗಬಹುದಾ ಅಂತ ವಿಚಾರಿಸಿಕೊಂಡು ಬರುವುದಕ್ಕೆ ಹೋಗಿದ್ದೆ. ಆದರೆ ರಾತ್ರಿಯಾಗುವಾಗ ಪೊಲೀಸರು ಬಂದಾಗಲೇ ಅವಳು ಎಲ್ಲೂ ಇಲ್ಲ ಅಂತ ಗೊತ್ತಾಗಿದ್ದು. ಅವಳಿಗೆ ಪುಟ್ಟ ಮಗೂ ಬೇರೆ ಇದೆಯಂತೆ. ಗಂಡ ಅದನ್ನೂ ಎತ್ತಿಕೊಂಡು ಬಂದಿದ್ದ. ಛೇ! ಹೀಗಾಗಬಾರದಿತ್ತು ಅಂದುಕೊಂಡೆ.

‘ನೀನು ಏರ್‌ಪೊರ್ಟಿಗೆ ಬರೋದು ಬೇಡ. ಪೋಲೀಸರು ಒಂದು ವೇಳೆ ಮನೆಗೆ ಬಂದು ಬೀಗ ಹಾಕಿ ನಾವು ಹೋಗಿರುವುದು ನೋಡಿದರೆ ಏನಾದರೂ ಸಂಶಯ ಬರುತ್ತೆ. ಸುಮ್ಮನೆ ಸಮಸ್ಯೆ ಮೈಮೇಲೆ ಎಳೆದುಕೊಳ್ಳುವುದು ಬೇಡ. ಇವಳಿಗೂ ಸಮಸ್ಯೆ ಆಗುತ್ತೆ. ನಾಳೆಯಿಂದ ತರಗತಿಗಳು ಪ್ರಾರಂಭವಾಗುತ್ತದೆ. ಯಾವುದಕ್ಕೂ ನೀನು ಇಲ್ಲೇ ಇರು’ ಎಂದು ಗಂಡ ಅಂದಾಗ ಕಂಬನಿಯ ಕಣ್ಣಿಂದ ಮಗಳನ್ನು ಬೀಳ್ಕೊಂಡು ಕೆಲಸದವಳನ್ನು ಮನಸಾರೆ ಬೈದಿದ್ದೆ. ಅವರು ಇಬ್ಬರೂ ಹೋದ ನಂತರ ಮನೆ ಖಾಲಿ ಆದ ಹಾಗೆ ಅನ್ನಿಸಿತು. ಸುಮ್ಮನೆ ಮೆಟ್ಟಿಲಲ್ಲಿ ಕುಳಿತವಳಿಗೆ ಒಳಗಿನ ಗಾಜಿನ ಪಾತ್ರೆಯಿಂದ ಕುಲುಕುಲು ಸದ್ದು ಕೇಳಿಸಿತು. ಓ ದೇವರೇ? ಈ ಗಡಿಬಿಡಿಯಲ್ಲಿ ಮೀನಿಗೆ ನಿನ್ನೆಯಿಂದ ತಿನ್ನುವುದಕ್ಕೇ ಹಾಕಿರಲಿಲ್ಲ. ಅದು ಸತ್ತು ಹೋಗದ್ದು ನನ್ನ ಪುಣ್ಯ. ಹಾಗಂದುಕೊಂಡು ಗಡಿಬಿಡಿಯಿಂದ ಅತ್ತ ಹೋಗಿ ನೋಡಿದರೆ ಮೀನು ಬಾಯಿ ತೆರೆದು ಮೇಲೆ ನೋಡುತ್ತಿತ್ತು. ಬೌಲ್‌ನ ಗಾಜಿಗೆ ಮೂತಿ ಬಡಿದು ಸಣ್ಣ ಸದ್ದು ಮಾಡುತ್ತಿತ್ತು.

ಹಸಿವಾಗಿರಬೇಕು. ಕಣ್ಣುಗಳು ನನ್ನನ್ನೇ ದೃಷ್ಟಿಸುತ್ತಿರುವ ಹಾಗೆ ಕಂಡಿತು. ಮೈ ಇಡೀ ಕುಣಿಸುತ್ತಾ ಅದು ನೀರಲ್ಲಿ ತೇಲಾಡುವಾಗ ಅದರ ತೆಳು ಪರದೆಯ ಹಾಗಿರುವ ಬಾಲ ಹರಡಿ ಅತ್ತಿತ್ತ ಓಲಾಡುತ್ತಿತ್ತು. ಪಚ ಪಚ ಎನ್ನುವ ಸದ್ದಿನ ಜೊತೆ ನೀರಿನ ಗುಳ್ಳೆಗಳು ಏಳುತ್ತಿದ್ದವು. ಆಹಾರ ಹಾಕಿರಿಸಿದ ಡಬ್ಬಿಗಾಗಿ ಹುಡುಕಿದೆ. ಕೆಲದವಳು ಎಲ್ಲಿ ಇಟ್ಟಿದ್ದಾಳೋ? ಎಷ್ಟು ಹುಡುಕಿದರೂ ಸಿಗಲಿಲ್ಲ. ಹೊಸ ಒಂದು ಪೊಟ್ಟಣ ಒಳಗೆ ಕಪಾಟಿನಲ್ಲಿ ಇತ್ತು. ಅದನ್ನೇ ಕತ್ತರಿಸಿ ತಂದೆ.

ಮನುಷ್ಯ ಸ್ಪರ್ಶಿಸಿದರೆ ಈ ಮೀನು ಸತ್ತುಹೋಗುತ್ತೆ ಅಂತ ಯಾರೋ ಹೇಳಿದ ನೆನಪು. ಹಾಗೆ ಯಾವಾಗಲೂ ಎತ್ತರದಿಂದ ಆಹಾರ ಹಾಕುತ್ತಿದ್ದೆ. ಅವತ್ತು ಯಾಕೋ ಆಹಾರ ಎರಡು ಬೆರಳ ಮೇಲೆ ಇರಿಸಿ ಬೆರಳನ್ನು ನೀರಿಗೆ ಇಳಿಸಿದೆ. ಮೀನು ಯಾವುದೇ ಹೆದರಿಕೆಯಿಲ್ಲದೇ ಬೆರಳುಗಳ ಬಳಿ ಬಂತು. ಮೆಲ್ಲಗೆ ಕಚಗುಳಿ ಇಟ್ಟು ಆಹಾರವನ್ನು ತಿಂದಿತ್ತು. ಅವಗಳು ನಿಧಾನಕ್ಕೆ ಮನುಷ್ಯ ಸ್ಪರ್ಶಕ್ಕೆ ಒಗ್ಗಿಕೊಳ್ಳುತ್ತವೆ ಅಂತೆ. ಇದು ಯಾಕೋ ಮೋಜೆನ್ನಿಸಿ ಮತ್ತೆ ಕೈ ನೀರಿಗಿಳಿಸಿದೆ. ಇದ್ದಕ್ಕಿದ್ದಂತೆ ನಾನು ನಿರೀಕ್ಷಿಸಿರದ ಹಾಗೆ ಮೀನು ನನ್ನ ಬೆರಳನ್ನು ಗಟ್ಟಿಯಾಗಿ ಕಚ್ಚಿಕೊಂಡಿತು. ಒಮ್ಮೆಗೆ ಗಾಭರಿಯಿಂದ ನಾನು ಕೈ ಹಿಂದಕ್ಕೆ ಎಳೆದೆ. ಮೀನು ನನ್ನ ಬೆರಳನ್ನು ಬಾಯಿಯ ಒಳಕ್ಕೆ ಎಳೆದುಕೊಳ್ಳುತ್ತಾ ನನ್ನ ಪೂರ್ತಿ ಕೈಯನ್ನು ಬಾಯೊಳಗೆ ಸೆಳೆಯತೊಡಗಿತು. ಇಷ್ಟು ದೊಡ್ಡ ಗಾತ್ರದ ನಾನೆಲ್ಲಿ, ಆ ಮರಿ ಮೀನೆಲ್ಲಿ? ಭ್ರಮೆಯೇ ಎಂದು ಕೈ ಕೊಡವಳು ನೋಡಿದರೂ ಸಾಧ್ಯವಾಗಲೇ ಇಲ್ಲ. ಭಯದಿಂದ ಚೀರುವುದಕ್ಕೇ ಮರೆತು ಹೋಗಿತ್ತು. ಬೆವರಿ ಒದ್ದೆಯಾಗಿದ್ದೆ. ಸಹಾಯಕ್ಕೆ ಕರೆದರೂ ಯಾರೂ ಕೇಳಿಸಿಕೊಳ್ಳುವವರು ಅಲ್ಲಿ ಇರಲಿಲ್ಲ.

ನಿಧಾನವಾಗಿ ನನ್ನ ದೇಹದ ಆಕೃತಿ ಬದಲಾಗತೊಡಗಿತ್ತು! ಬಟ್ಟೆ ಪೂರ್ತಿಯಾಗಿ ಕಳಚಿತ್ತು. ಮುಜುಗರಗೊಂಡು ಹೊರಳಾಡಿದೆ. ಚರ್ಮದ ರೋಮಗಳುದುರಿ ಮೆಲ್ಲಗೆ ಲೋಳೆ ಅಂಟಿಕೊಳ್ಳುತ್ತಿತ್ತು. ಕೈಗಳು ತನ್ನಷ್ಟಕ್ಕೆ ರೆಕ್ಕೆಗಳಾಗಿ ದೇಹಕ್ಕೆ ಭಾರವಾಗದೆ ಜೋತುಬಿದ್ದವು. ಕಣ್ಣಿನ ಸುತ್ತಣ ಚರ್ಮವು ಕಣ್ಣುಗುಡ್ಡೆಯ ಮೇಲೆ ಬಂದಿತ್ತು. ಕಾಲುಗಳು ಬಾಲವಾಗಿ ಹರವಿಕೊಳ್ಳುತ್ತಾ ಹೋದಂತೆ ನೆಟ್ಟಗೆ ನಿಲ್ಲಲಾಗದೆ ಜಾರುತ್ತಿದ್ದೆ. ಆ ಮರಿ ಮೀನಿಗೆ ಈ ರಾಕ್ಷಸ ಶಕ್ತಿ ಎಲ್ಲಿಂದ ಬಂತೋ, ನನ್ನನ್ನು ಎಳೆದ ರಭಸಕ್ಕೆ ಮುಖ ಗಾಜಿನ ಪಾತ್ರೆಯ ಬಾಯಿಗೆ ಒತ್ತಿಕೊಂಡಿತ್ತು. ನನ್ನ ಮುಖವನ್ನು ನೀರಿನ ಒಳಗೆ ನುಗ್ಗಿಸಬೇಕು ಎಂದನ್ನಿಸಿ ಶಕ್ತಿಮೀರಿ ಪ್ರಯತ್ನಪಟ್ಟರೂ ಆಗುತ್ತಿರಲಿಲ್ಲ. ಉಸಿರಾಡಲಾರದೆ ಚಡಪಡಿಸುತ್ತಿದ್ದೆ. ಭಯದಿಂದ ದ್ವನಿ ಸತ್ತಿತ್ತು.

ಈಗ ಹೇಗಾದರೂ ಬದುಕಿಕೊಳ್ಳಬೇಕಿತ್ತು. ತಲೆಯನ್ನು ಬಲವಾಗಿ ಹಿಂದಕ್ಕೆಳೆದೆ. ಗಾಜಿನ ಬೌಲ್ ನೆಲಕ್ಕೆ ಅಪ್ಪಳಿಸಿ ಚೂರುಚೂರಾಯಿತು. ಸುತ್ತ ಚೆಲ್ಲಿದ ನೀರಿನಲ್ಲಿ ಮರಿಮೀನು ಒಂದಿಷ್ಟು ಹೊರಳಾಡಿ ಸ್ತಬ್ಧವಾಯಿತು. ನಾನು ಮರುಕ್ಷಣ ಜಾರಿ ಕೆಳಗೆ ಬಿದ್ದು ನೆಲದಲ್ಲಿ ಪಟಪಟನೆ ಹೊರಳಾಡುತ್ತಿದ್ದೆ. ನನ್ನ ದೇಹ ಏನಾಗಿದೆ ಎಂದು ನನಗೆ ಕಾಣುತ್ತಿರಲಿಲ್ಲ. ಆದರೆ ನಾನು ನಾನಾಗಿರಲಿಲ್ಲ. ಒಂದೇ ಸವನೆ ಹೊರಳಾಡುತ್ತಾ ಮನೆಯಿಂದ ಹೊರಕ್ಕೆ ಬಿದ್ದೆ. ಅಂಗಳದ ಮಣ್ಣು, ಹೊಯಿಗೆ ಮೈಗೆ ಮೆತ್ತಿಕೊಂಡು ಸೂಜಿ ಮೊನೆಯಲ್ಲಿ ಇರಿದಂತೆ ಮೈಕೈ ನೋವು. ಸುಪ್ತ ಮನಸ್ಸು ನೀರು ನೀರು ಎಂದು ಚಡಪಡಿಸುತ್ತಿತ್ತು. ಬಾವಿಯ ಕಟ್ಟೆಯ ಕೆಳಭಾಗದಲ್ಲಿ ನೀರಿನ ಪೈಪ್ ಇಳಿಸುವುದಕ್ಕೆ ದೊಡ್ಡ ತೂತು ಇರಿಸಿದ್ದರು. ನಿನ್ನೆ ಬಾವಿ ಸ್ವಚ್ಚ ಮಾಡುವಾಗ ಅದನ್ನು ತೆಗೆದಿರಿಸಿದ ಕಾರಣ ಆ ತೂತು ಹಾಗೇ ಇತ್ತು. ಹೊರಳುತ್ತಾ ಹೋದವಳು ಜಾರಿ ಅದರ ಒಳಗೆ ಬಿದ್ದೆ! ದೊಡ್ಡ ಪ್ರಪಾತಕ್ಕೆ ಜಾರಿದ್ದಷ್ಟೇ ಅನುಭವಕ್ಕೆ ಬಂದದ್ದು.

ಈಗ ಆಹಾ ಎಂಥಹಾ ಸುಖ! ಮೈಯೆಲ್ಲಾ ತಂಪು ತಂಪು! ಸರಾಗವಾಗಿ ಉಸಿರಾಡಲು ಆಗುತ್ತಿತ್ತು. ಬದುಕಿ ಬಿಟ್ಟೆ ಎಂದು ಸುತ್ತಲೂ ನೋಡಿದರೆ ಪೂರ್ತಿ ನೀರು ಆವರಿಸಿಕೊಂಡಿತ್ತು. ಪಾಚಿ ನಿಂತ ಶುಭ್ರ ಕೊಳದಲ್ಲಿ ನೀರು ಫಳಫಳ ಹೊಳೆಯುತ್ತಿತ್ತು. ನಾನು ಪೂರ್ತಿಯಾಗಿ ಅದರೊಳಗೆ ಇದ್ದರೂ ನಿರಾಳವಾಗಿ ಉಸಿರಾಡುತ್ತಿದ್ದೆ!

ಅಷ್ಟರಲ್ಲಿ ಗಂಡ ಮಗಳನ್ನು ವಿಮಾನಕ್ಕೆ ಹತ್ತಿಸಿ ಮರಳಿ ಬಂದಿರಬೇಕು. ಹೆಸರಿಡಿದು ಜೋರಾಗಿ ಕೂಗುತ್ತಿದ್ದರು. ಅಯ್ಯೋ, ನಾನಿಲ್ಲಿದ್ದೀನಿ...ರೀ.. ಬಾವಿಯೊಳಗೆ ನೋಡಿ ಎಂದು ಕೂಗಿಕೊಂಡೆ. ಧ್ವನಿ ಹೊರ ಬರಲಿಲ್ಲ. ನನ್ನ ಮಾತು ಬಿದ್ದುಹೋಗಿತ್ತು. ಅಸಹಾಯಕತೆಯಿಂದ ಕಣ್ಣೀರು ಬಂತು. ಆದರೆ ಅದೂ ನೀರಲ್ಲಿ ಬೇರೆಯಾಗಿ ಕಾಣಲೇ ಇಲ್ಲ! ಬಾವಿಕಟ್ಟೆಯ ಸುತ್ತ ಅಕ್ಕಪಕ್ಕದ ಮನೆಯವರೆಲ್ಲಾ ನೆರೆದು ನಿಂತು ಮಾತನಾಡುತ್ತಿದ್ದರು. ನಾನು ಎಲ್ಲಿ ಹೋದೆ ಎನ್ನುವುದೇ ಅವರ ಚಿಂತೆಯಾಗಿರಬೇಕು. ಹಾಲ್‌ನಲ್ಲಿ ಕಳಚಿ ಬಿದ್ದ ನನ್ನ ವಸ್ತ್ರಗಳು ಅವರನ್ನು ಮತ್ತಷ್ಟು ಗಾಬರಿಗೆ ತಳ್ಳುತ್ತಿರಬಹುದು. ಒಂದಿಷ್ಟು ಜನ ನನ್ನ ಗಂಡನಿಗೆ ಸಮಾಧಾನ ಹೇಳುತ್ತಿದ್ದರು, ಭರವಸೆ ತುಂಬುತ್ತಿದ್ದರು. ಹಲವರು ಬಾವಿಗೆ ಇಣುಕಿ ನೋಡಿದರು. ನುರಿತ ಈಜುಗಾರರು ಬಾವಿಗೆ ಇಳಿದು ಮುಳುಗು ಹಾಕಿ ನೋಡಿದರು. ನಾನು ಅವರೆದುರೆದುರು ಬಂದರೂ ಅವರು ನನ್ನ ಗುರುತುಹಿಡಿಯಲೇ ಇಲ್ಲ.

ಒಮ್ಮೆ ಸುತ್ತಲೆಲ್ಲಾ ಕಣ್ಣು ಅರಳಿಸಿ ನೋಡಿದೆ. ನಾನು ಹೊರಹೋಗುವ ಯಾವ ದಾರಿಯೂ ಇರಲಿಲ್ಲ. ಆಗ ಬಾವಿಯ ಮತ್ತೊಂದು ಮೂಲೆಯಲ್ಲಿ ದೊಡ್ಡ ಕಪ್ಪು ಕಪ್ಪೆಯೊಂದು ದಿಟ್ಟಿಸಿ ನನ್ನನ್ನೇ ನೋಡುತ್ತಿರುವುದು ಕಾಣಿಸಿತು. ಅದರ ಕಣ್ಣುಗಳು ಮುಖದ ಮೇಲಕ್ಕೆ ಮೊಳೆತು ಇಡೀ ದೇಹ ಉಸಿರಾಟದ ವೇಗಕ್ಕೆ ಉಬ್ಬಿ ತಗ್ಗುತ್ತಿತ್ತು. ನನಗೆ ಈ ಕಪ್ಪೆಗಳೆಂದರೆ ಒಂಥರಾ ಹೇಸಿಗೆ. ಭಯದಿಂದ ಎತ್ತ ಹೋಗಲಿ ಎಂಬಂತೆ ಅತ್ತಿತ್ತ ಈಜಿದೆ. ಹೇಗೆ ತಪ್ಪಿಸಿಕೊಳ್ಳುವುದು ಎಂದು ಗೊತ್ತಾಗಲಿಲ್ಲ. ಅಷ್ಟರಲ್ಲಿ ಯಾರೋ ಪಕ್ಕದಲ್ಲಿ ಬಂದು ಅಂಟಿ ನಿಂತ ಹಾಗಾಯಿತು! ಹಾವೇನಾದರೂ ಆಗಿರಬಹುದೇ ಎಂದು ಬೆದರಿ ಪಕ್ಕಕ್ಕೆ ಸರಿದು ನೋಡಿದೆ. ಅಲ್ಲೊಂದು ಮೀನಿತ್ತು! ಅದರ ಹತ್ತಿರ ಹತ್ತಿರ ಹೋದೆ. ಅದು ನಾನು ಏನು ಮಾಡುತ್ತೇನೋ ಎನ್ನುವ ಹಾಗೆ ಭಯದಿಂದ ನನ್ನಿಂದ ತಪ್ಪಿಸಿಕೊಂಡು ಅತ್ತಿತ್ತ ಈಜತೊಡಗಿತು. ಏನೋ ಅರ್ಥವಾದ ಹಾಗೆ ಅನ್ನಿಸಿದಾಗ ನನ್ನ ಮನುಷ್ಯ ಬುದ್ಧಿ ಕ್ಷೀಣಿಸುತ್ತಿರುವುದು ಅನುಭವಕ್ಕೆ ಬರುತ್ತಿತ್ತು.
ಬಾವಿಯಲ್ಲಿ ಆ ಎರಡೂ ಮೀನುಗಳು ಜೊತೆಯಾಗಿ ಈಜಾಡುತ್ತಾ ಆಟವಾಡುತ್ತಿದ್ದವು. ಮೇಲೆ ಪೊಲೀಸರ ತೀವ್ರ ತನಿಖೆ ಮುಂದುವರೆದಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.