ನಾಯಿಗಳು ಒಂದೇ ಸಮನೆ ಬೊಗಳುತ್ತಿದ್ದವು. ಕಿಟಕಿಯಿಂದ ನೋಡಿದ. ಚಳಿಗಾಳಿ ಬೀಸುತ್ತಿತ್ತು. ಕೆಳಗಿಳಿದು ಬಾರೊ ಇದೇ ಪಂಚಾಯ್ತಿ ಎಂದು ರೇಗಿಸುತ್ತಿದ್ದವು. ಆತ ಪಿಎಚ್‌ಡಿ ಬರಹದಲ್ಲಿ ಮುಳುಗಿದ್ದ. ಯಾವ ಒಂದು ಹೆಣ್ಣುನಾಯಿಯೂ ಇಲ್ಲಿಲ್ಲ; ಆದರೂ ಏನಿದೀ ನಾಯಿಗಳ ತರಲೆ ಎಂದು ಸಿಟ್ಟಾದ. ಎಲ್ಲೊ ಇದ್ದ ಬಿಕಾರಿಯ ಗುರುಗಳು ಕರೆದು ಹಾಸ್ಟಲಲ್ಲಿ ಜಾಗ ಕೊಡಿಸಿ ತಾವೇ ಮಾರ್ಗದರ್ಶಕರಾಗಿದ್ದರು. ನಾಯಿಗಳೆಂದರೆ ಅವನಿಗೆ ಅಷ್ಟಕ್ಕಷ್ಟೇ. ಗಂಡುನಾಯಿಗಳಿಗೆ ಬೆದೆಯೇ ಬರದಂತೆ ಇಂಜೆಕ್ಷನ್ ಕೊಡಿಸಬೇಕು ಎಂದು ಸೆಕ್ಯೂರಿಟಿ ನಾಯಿಗಳನ್ನು ಹೀನಾಮಾನವಾಗಿ ಬೈಯ್ದು ಓಡಿಸಿದ್ದ.
ನಾಯಿಗಳು ಲೆಕ್ಕಿಸುತ್ತಲೆ ಇರಲಿಲ್ಲ. ಆತ ಹೊರ ಬಂದ ಕೂಡಲೆ ಗುರಾಯಿಸುತ್ತಿದ್ದವು. ಪಿಎಚ್‌ಡಿ ಮಾಡಿ ಮುಗಿಸಿದರೆ ಸಾಕಪ್ಪಾ ತನ್ನ ಗುರುಗಳು ಕಟ್ ಅಂಡ್ ಪೇಸ್ಟ್ ಮಾಡು ಅಂತಾರೆ. ಹಾಗೆಲ್ಲ ಮಾಡಕ್ಕಾಗಲ್ಲ ಎಂದು ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಗುರುಗಳ ಇಬ್ಬರು ದಡೂತಿ ಗಂಡು ಮಕ್ಕಳು ಅವನ್ನು ತಮ್ಮ ತಂದೆಯ ಸಾಕುನಾಯಿ ಎಂದೇ ಪರಿಗಣಿಸಿದ್ದರು. ಪ್ರಾಧ್ಯಾಪಕರ ಬಗ್ಗೆ ಏನೇನೊ ಕಥೆಗಳಿದ್ದವು. ಅವಾವನ್ನೂ ಶಿಷ್ಯ ಒಪ್ಪಿರಲಿಲ್ಲ. ನೀನು ಸಧೃಡ ಶಕ್ತಿವಂತನಾಗಬೇಕು ಕಣಯ್ಯಾ ಎಂದು ಪ್ರಾಧ್ಯಾಪಕರು ಆ ಶಿಷ್ಯನಿಗೆ ಏನೇನೊ ಮಾತ್ರೆಗಳ ನುಂಗಿಸಿ ನೀರು ಕುಡಿಸುತ್ತಿದ್ದರು.
ಅವನ ಪ್ರಾಧ್ಯಾಪಕರು ಹಳ್ಳಿ ಮೂಲದಿಂದ ಬಂದು ಸ್ವಜಾತಿ ರಾಜಕಾರಣದಿಂದ ಯೂನಿವರ್ಸಿಟಿಯಲ್ಲಿ ಒಳ್ಳೆಯ ಸ್ಥಾನವನ್ನೆ ಆಕ್ರಮಿಸಿಕೊಂಡಿದ್ದರು. ಅವರಿಗೊ ಸದಾ ಅಧಿಕಾರದ ಅಮಲು. ಬುದ್ಧಿಗಿದ್ದಿ ಅವೇನೂ ಬೇಕಿರಲಿಲ್ಲ. ಕೊನೆಗಾಲದಲ್ಲಿ ಹೇಗಾದರೂ ಮಾಡಿ ಕುಲಪತಿ ಆಗಲೇಬೇಕೆಂದು ಲಡಾಸು ಬಯೋಡೆಟಾ ಹಿಡಿದು ರಾಜಕಾರಣಿಗಳ ಮುಂದೆ ದುಂಬಾಲು ಬಿದ್ದು ಬೇಡುತ್ತಿದ್ದರು. ತನ್ನ ಏಳಿಗೆ ಸಹಿಸುತ್ತಿಲ್ಲ ಎಂದು ಎದುರಾಳಿಗಳ ಮೇಲೆ ಕೈಕೈ ಮಿಲಾಯಿಸಲು ಮುನ್ನುಗ್ಗುತ್ತಿದ್ದರು. ಯಾವುದೂ ಸಿಗಲಿಲ್ಲ ಎಂದರೆ ಏನು ಮಾಡುವಿರಿ ಎಂದು ಗೆಳೆಯರು ಕೇಳಿದರೆ, ನನಗೇನ್ರೀ ನಷ್ಟಾ... ಯೂನಿವರ್ಸಿಟಿಗೆ ಕಣ್ರಿ ನಷ್ಟ ಆಗೋದು... ರಿಟಯರ್ಡ್ ಆದ ಮ್ಯಾಲೆ ಮಂಡ್ಯಕ್ಕೆ ಹೋಗ್ತಿನಿ ಮೂರು ವೈನ್‌ಶಾಪ್ ಮೂರು ಮಿಲ್ಟ್ರಿ ಹೋಟೆಲ್ ತೆಗೀತೀನಿ. ಅರಿಯರ್ಸ್ ತಕಂಡು ಬಡ್ಡಿದುಡ್ಡಿನ ವ್ಯವಹಾರ ಮಾಡ್ತೀನಿ. ಬಿಳಿ ಹಂದಿ ಫಾರಂ ಹಾಕ್ತೀನಿ... ಎಂದು ಮೀಸೆ ತಿರುವುತ್ತಿದ್ದರು. ಬಳ್ಳಿಯಂತಿದ್ದ ಮಗಳಿಗೆ ವಯಸ್ಸಾಗುತ್ತಿತ್ತು. ಶಿಷ್ಯನಿಗೆ ಅವರ ಮಗಳ ಮೇಲೆ ಅವ್ಯಕ್ತ ಮೋಹ. ಹೀಗಿರುವಲ್ಲಿ ಗುರುಗಳಿಗೆ ತಮ್ಮ ಗ್ರಾಮ ದೇವತೆಯ ಪರಿಶೆ ನೆನಪಾಗಿ ಸಂಸಾರ ಸಮೇತ ಹಳ್ಳಿಗೆ ಹೋಗಿ ದೇವತಾಕಾರ್ಯ, ಮಾಟಮಂತ್ರ ಮಾಡಿಸಿ ಬರಲು ಮುಂದಾಗಿದ್ದರು. ಮೂಢನಂಬಿಕೆಗಳಲ್ಲಿ ಅವರಿಗೆ ಏನೊ ಶ್ರದ್ಧೆ. ಗುರು ಪುತ್ರಿ ಈ ನಾಯಿಯನ್ನು ಇಷ್ಟೊಂದು ಪ್ರೀತಿಸುತ್ತಾಳಲ್ಲಾ... ತನ್ನನ್ನಾದರೂ ಸುಮ್ಮನೆ ವಾರೆನೋಟದಲ್ಲಾದರೂ ನೋಡಿದ್ದರೆ ಜನ್ಮಾಂತರಗಳ ಕಾಲ ಅವಳ ಕಾಯುವ ನಾಯಿಯಾಗಿ ಹಿಂಬಾಲಿಸುವೆನಲ್ಲಾ ಎಂದು ಆ ನಾಯಿಯ ಬಗ್ಗೆ ಸಿಟ್ಟಾಗುತ್ತಿದ್ದ. ಗುರುಗಳೊ ಆ ನಾಯಿಯ ಸ್ವಚ್ಛತಾ ಕಾರ್ಯಗಳ ಅವನ ಕೈಯಿಂದಲೆ ಮಾಡಿಸುತ್ತಿದ್ದರು. ತನ್ನ ಪೂರ್ವಿಕರು ಬರಿಗೈಲೆ ಏನೇನೊ ಬಾಚಿದ್ದಾರೆ; ತನ್ನದೇನು ಮಹಾ... ಎಷ್ಟೇ ಆಗಲಿ ಇದು ಅವಳ ನಾಯಿ ಎಂದು ಸ್ಯಾಂಪೊ ಹಚ್ಚಿ ನೊರೆಗರೆಸಿ ಉಜ್ಜಿ ತೊಳೆದು ಅದರ ಉದ್ದ ಕೂದಲ ಬಾಚಿ ಬಿಸಿಲಿಗೆ ಒಣಗಿಸುತ್ತಿದ್ದ. ಯಾವ ಬೀದಿ ನಾಯಿಗಳೂ ರಾಣಿಯ ಕಡೆ ನೋಡದಂತೆ ಎಚ್ಚರವಹಿಸು ಎಂದು ಗುರುಗಳು ಅವನಿಗೆ ಆಜ್ಞೆ ಮಾಡಿದ್ದರು. ನಾಯಿಗೆ ಮಾಲಿಸ್ ಮಾಡುತ್ತಿದ್ದಾಗ ಗುರು ಪುತ್ರಿ ಅಕಸ್ಮಾತ್ ಉಳಿದಿದ್ದ ಚಿತ್ರನ್ನವ ಬಿಸಾಡಬಾರದು ಎಂದು ಅವನಿಗೆ ತಂದುಕೊಟ್ಟು ನಕ್ಕಿದ್ದಳು. ಅಹಾ! ನಾನು ಆಕಾಶವ ಮುಟ್ಟಿಸಿಕೊಂಡೆನೇ ಎಂದು ಒಳಗೊಳಗೇ ನಲಿದಿದ್ದ. ಏನೂ ಮಾಡುವಂತಿರಲಿಲ್ಲ. ಗುರು ಪತ್ನಿಯನ್ನೋ ಪುತ್ರಿಯನ್ನೊ ಮೋಹಿಸಿದ ಶಿಷ್ಯ ಏಳೇಳು ಜನ್ಮಗಳ ತನಕ ಹೆಣ್ಣಂದಿಯಾಗಿ ಜನಿಸಿ ಹೇಸಿಗೆ ತಿಂದುಕೊಂಡೇ ಬದುಕಬೇಕಾಗುತ್ತದೆ ಎಂದಿದ್ದು ನೆನಪಾಗಿ ಚಿತ್ರಾನ್ನವ ನುಂಗಲಾರದೆ ನೆತ್ತಿಗೇರಿಸಿಕೊಂಡು ಕೆಮ್ಮಿದ್ದ. ಆ ನಾಯಿ ಅವನಿಗೆ ಗೌರವವನ್ನೆ ಕೊಡುತ್ತಿರಲಿಲ್ಲ. ಮರುದಿನ ಪ್ರಾಧ್ಯಾಪಕರು ಕರೆದು ಹೇಳಿದ್ದರು... ನೋಡಪ್ಪಾ ನಾವು ಊರಿಗೆ ದೇವರ ಕಾರ್ಯನಿಮಿತ್ತ ಹೋಗುತ್ತಿದ್ದೇವೆ. ಒಂದದಿನೈದು ದಿನ ಆಗಬಹುದು. ನಮ್ಮ ಮನೆಯಲ್ಲೇ ಇದ್ದುಕೊಂಡು ನಿನ್ನ ಪಿಎಚ್‌ಡಿ ಫೈನಲ್ ಬರಹ ಮಾಡು. ಬಂದು ನೋಡಿ ತಿದ್ದಿಕೊಡುವೆ ಎಂದಿದ್ದರು. ಧೂಳು ಹಿಡಿದಿದ್ದ ಅಂಬಾಸಿಡರ್ ಕಾರನ್ನು ತಿಕ್ಕಿತಿಕ್ಕಿ ತೊಳೆಸಿದ್ದರು. ನಿನ್ನ ಜೀವನದಲ್ಲೆ ಇಂತದೊಂದು ಬಂಗಲೆಯಲ್ಲಿ ಮಲಗಲಾರೆ. ಹಾಯಾಗಿದ್ದು ನೋಡಿಕೋಬೇಕು. ಹಾಸ್ಟಲಿಗೆ ಹೋಗಿ ಬಟ್ಟೆಬರೆ ತಂದುಬಿಡು ಎಂದು ಶಿಷ್ಯನ ಮೇಲೆ ಪ್ರೀತಿ ತೋರಿದರು. ಹಾಸ್ಟಲಿಗೆ ಬಂದು ಬಟ್ಟೆಗಳ ಬ್ಯಾಗಿಗೆ ಹಾಕಿಕೊಂಡು ಗೆಲುವಾದ.
ಏನೊ ಬಹಳ ಖುಷಿಯಾಗಿದ್ದೀಯೆ ಎಂದರು ಗೆಳೆಯರು. ನಾನ್ಯಾವ ಸುಖಿ ಬಾರೊ... ಎಲ್ಲಾ ನಾಯಿ ಪಾಡು ಎಂದಿದ್ದ. ಯಾಕೇ... ನಿಮ್ಮ ಪ್ರಾಧ್ಯಾಪಕರಿದ್ದಾರಲ್ಲಾ... ಕೆಲಸ ಕೊಡಿಸ್ತಾರೆ; ನಿನಗೇನು ಕಷ್ಟ ಎಂದಿದ್ದರು. ಸಾಯಂಕಾಲ ಆಗಿತ್ತು. ಪ್ರಾಧ್ಯಾಪಕರು ಗಡಿಬಿಡಿಯಲ್ಲಿದ್ದರು. ಅವರ ಇಬ್ಬರು ಗಡವ ಗಂಡು ಮಕ್ಕಳು ಸೊಂಬೇರಿಯಾಗಿ ಆಕಳಿಸುತ್ತ ಹೊರಗೊಬ್ಬ ಕಾರೊಳಗೊಬ್ಬ ಕೂತಿದ್ದವರು... ಡ್ಯಾಡೀ; ಅವನು ಬಂದ ಎಂದು ಹೊರಡಲು ಮುಂದಾದರು. ಎಷ್ಟಯ್ಯ ನಿನ್ನನ್ನು ಕಾಯೋದೂ... ಬಾಬಾ ಲಗೇಜೆಲ್ಲ ಡಿಕ್ಕಿಗೆ ಇಡು ಎಂದರು. ಇಟ್ಟ. ಅವರ ಮಗಳು ಒಳಗೆ ಇನ್ನೂ ಮೇಕಪ್ಪಲ್ಲೇ ಇದ್ದಂತಿತ್ತು.
ಅಷ್ಟರಲ್ಲಿ ಮನೆಯ ಹಿತ್ತಲಿಂದ ಅವರ ಮಗಳ ದರ್ಶನವಾಯಿತು. ಅಲ್ಲಿ ತಂತಿಯ ಮರೆಯಲ್ಲಿ ಒಣಹಾಕಿದ್ದ ತುಂಡು ಬಟ್ಟೆಗಳ ಎತ್ತಿಕೊಂಡು ಹೋಗಿ ಮರೆಯಲ್ಲಿ ಇಟ್ಟು; ಏನೊ ನೆನಪಾಗಿ ಒಳ ಹೋಗಿ ವ್ಯಾನಿಟಿ ಬ್ಯಾಗನ್ನು ನೋಡಿಕೊಂಡಳು. ಎಲ್ಲ ಹೊರ ಬಂದರು. ಕಾರು ಹೊರಗೆ ನಿಂತಿತ್ತು. ವಿಶಾಲ ಕಾಂಪೌಂಡ್. ಮರಗಿಡ. ನೆರಳು. ತಂಪು. ಮರೆ, ಹಕ್ಕಿಗಳ ಇಂಚರ. ಪ್ರಾಧ್ಯಾಪಕರು ಅವನ್ನೆಲ್ಲ ತೋರಿಸುತ್ತ; ಇವುಗಳ ಜವಾಬ್ದಾರಿ ನಿನ್ನದು. ಚೆನ್ನಾಗಿ ನೀರು ಕುಡಿಸು ಎಂದರು. ಆಯ್ತೇನಮ್ಮಾ... ಎಲ್ಲಾ ಬೀಗ ಹಾಕಿದೆಯಾ ಎಂದು ಹೆಂಡತಿಯ ಕೇಳಿದರು. ಆಯ್ತು ನಡೀರಿ ಸಾಕು ನಿಮ್ಮ ಹಿತೋಪದೇಸ; ಆ ನಾಯಿ ಬಗ್ಗೆ ಹೇಳಿಬಿಟ್ಟು ಬನ್ರಿ ಎಂದು ರೇಗಿದರು. ಓಹೋ... ಮುಖ್ಯವಾದದ್ದನ್ನೆ ಮರೆತಿದ್ದೆ. ಈ ನಮ್ಮ ರಾಣಿ ಇದ್ದಾಳಲ್ಲಾ... ಬಹಳ ಒಳ್ಳೆಯವಳಪ್ಪಾ... ಮುದ್ದಿನಿಂದ ಸಾಕಿರುವೆ. ನಿನ್ನ ಕೈಗಿಟ್ಟು ಹೋಗುತ್ತಿರುವೆ. ಇವಳ ಸುಖವಾಗಿ ನೋಡಿಕೊಳ್ಳಬೇಕು ಕಣಪ್ಪಾ. ಇಲ್ನೋಡೂ... ಇಲ್ಲಿ ಸಣ್ಣಕ್ಕಿ ಇಟ್ಟಿರುವೆ. ಸೀಮೆಣ್ಣೆ ಸ್ಟೌವ್ ಇಲ್ಲೆ ಹೊರಗಿದೆ. ಅನ್ನ ಮಾಡಿ ಹೊತ್ತೊತ್ತಿಗೆ ಅದಕ್ಕೆ ಹಾಕಿ ನೀನೂ ಅದರ ಜೊತೆ ಮೂರೊತ್ತೂ ಊಟ ಮಾಡಪ್ಪ ಎಂದರು. ಆ ನಾಯಿಗೆ ತಿಳಿದಂತಾಗಿ... ನೋ ನೋ... ಇಂಪಾಸಿಬಲ್, ನಾನೂ ನಿಮ್ಮ ಜೊತೆಯೇ ಊರ ಹಬ್ಬಕ್ಕೆ ಬರುವೆ ಬಾಡುಬಳ್ಳೆ ತಿನ್ನಬೇಕು ಎಂಬಂತೆ ಸದ್ದು ಮಾಡಿತು. ಅತ್ತ ಅವರ ಮಗಳು ಆ ರಾಣಿ ನಾಯಿಗೆ; ಲವ್ ಯೂ ರಾಣಿ... ಜೋಪಾನ; ಬೇಗ ಬರುವೆ ಸುಮ್ಮನಿರು ಎಂದು ಗಾಳಿಯಲ್ಲಿ ಮುತ್ತು ತೂರಿ ಗ್ಲಾಸು ಏರಿಸಿದಳು. ಆ ಗಾಳಿಯಲ್ಲಿದ್ದ ರೂಪವಿಲ್ಲದ ಹಿಡಿತಕ್ಕೆ ನಿಲುಕಲಾರದ ಅವಳ ಮುತ್ತನ್ನು ದೇಹಾತೀತವಾಗಿ ಎಟುಕಿಸಿಕೊಂಡ. ಅದು ಆ ಯಾರ ಅರಿವಿಗೂ ಬರಲಿಲ್ಲ. ನಾಯಿ ಕಾರಿನ ಹಿಂದೆ ಓಡೋಡಿ ಹೋದಂತೆಯೇ ಗುರುಗಳು ಗೋಗೋ; ಗೋಟು ಹೊಂ ರಾಣೀ... ಮೈ ಸ್ಟುಡೆಂಟ್ ವಿಲ್ ಟೇಕ್ ಕೇರ್ ಎಬೌಟ್ ಯೂ. ಗೋಗೋ ಗೊ ಎಂದರು. ಪೆಚ್ಚಾಗಿ ನಾಯಿ ಕಾರಿನ ಕಪ್ಪು ಹೊಗೆಯ ತಾಳಲಾರದೆ ಸಿಟ್ಟಾಗಿ ಬಂದು ಅವನನ್ನು ದುರುಗುಟ್ಟಿ ನೋಡಿತು. ಹೋಗತ್ತ ಬಿದ್ದುಕೊ ಎಂದು ಮನೆ ಒಳಗೆ ಹೋದ. ಎಲ್ಲ ರೂಮುಗಳಿಗೂ ಬೀಗ ಹಾಕಿದ್ದರು. ಹಜ್ಹಾರದ ಪೀಠೋಪಕರಣಗಳ ರೂಮಿಗೆ ದಬ್ಬಿದ್ದರು. ಟಾಯ್ಲೆಟ್ ರೂಮನ್ನೂ ಭದ್ರವಾಗಿ ಮುಚ್ಚಿ ಹಿತ್ತಲ ಸ್ನಾನದ ಮನೆಯ ಮಾತ್ರ ತೆರೆದಿಟ್ಟಿದ್ದರು. ಅದರಲ್ಲಿ ನಾಯಿಯೂ ಮಲಗುತ್ತಿರಲಿಲ್ಲ.
ಮನೆಯ ಒಳಗಿನ ಖಾಲಿತನವ ನೋಡಿ ನಿಟ್ಟುಸಿರು ಬಿಟ್ಟು; ಈ ಬಡಪಾಯಿ ನಾಯಿಗೆ ಏನಾದರೂ ಮಾಡಬೇಕೂ... ನನ್ನ ಹೊಟ್ಟೆಯೂ ತುಂಬುತ್ತದೆ ಎಂದುಕೊಂಡ. ಗುರುಗಳ ಮನೆಯಲ್ಲಿ ಹಾಗೆ ಉಳಿದುಕೊಂಡಿದ್ದು ಅದೇ ಮೊದಲು. ಇಲ್ಲಿ ಏನೇನು ಇದೆ ಎಂದು ನೋಡಿದರೆ ಎಲ್ಲ ಮುಚ್ಚಿದೆ. ಇವರ ಮನೆ ಕಾಯಲು ನಾನೇ ಒಂದು ನಾಯಿ ಆದೆನೇ... ಇನ್ನು ಈ ರಾಣಿ ನಾಯಿಗೂ ನಾನೇ ಸೇವಕನಾಗಬೇಕಾಯಿತೇ... ಅಹಾ! ಗುರು ಪುತ್ರೀ... ನನ್ನ ಪಾಡು ನಿನಗೆ ತಿಳಿಯುವುದೇ ಎಂದು ಯೋಚಿಸುತ್ತಿದ್ದ. ಅಪರೂಪಕ್ಕೆ ಎಣ್ಣೆ ತೆಗೆದುಕೊಳ್ಳುವ ಅಭ್ಯಾಸ ಅವನಿಗಿತ್ತು. ಅದು ಕೂಡ ಅವನ ಗುರುಗಳ ಪ್ರಭಾವವೇ ಅಗಿತ್ತು. ಹೋಗುವಾಗ ಗುರುಗಳು ಚಿಲ್ಲರೆ ಕಾಸು ಕೊಟ್ಟು ಹೋಗಿದ್ದರು. ಅದು ಸಾಲುತ್ತಿರಲಿಲ್ಲ. ಅಂತಹ ಒಳ್ಳೆ ಸ್ನೇಹಿತರೂ ಅವನಿಗೆ ಇರಲಿಲ್ಲ. ಮುಸ್ಸಂಜೆ ಕವಿಯುತ್ತಿತ್ತು. ಹಿತ್ತಲ ಬಾಗಿಲ ಹೊರಗಿನ ಟಾಯ್ಲೆಟ್ ರೂಂ ಬಳಿ ಒಂದು ಮರೆ ಇತ್ತು. ಅಲ್ಲೊಂದು ಹದಿನೆಂಟನೆ ಶತಮಾನದ ಕೈಗಾರಿಕಾ ಕ್ರಾಂತಿಯ ಕಾಲದ ಸೀಮೆಎಣ್ಣೆ ಸ್ಟೌವ್ ಇತ್ತು. ಅದರ ಪಕ್ಕದಲ್ಲೆ ಹಳೆಯ ತೂತಾದ ಬ್ಯಾಗಿನಲ್ಲಿ ಮುಗ್ಗಲು ಹಿಡಿದ ಬಿಳಿ ಹುಳುಗಳಿದ್ದ ಕಲ್ಲು ಮಣ್ಣಿನ ನುಚ್ಚಕ್ಕಿ ಇದ್ದವು. ಅನ್ನ ಮಾಡಲು ಕುಡಿಯಲು ಪಾಚಿಗಟ್ಟಿದ್ದ ಟ್ಯಾಂಕಿನ ನೀರನ್ನೆ ಬಳಸಬೇಕಿತ್ತು. ತಲೆ ಕೆಟ್ಟಿತು. ಛೀ; ಮಹಾಗುರುಗಳೇ; ಇಷ್ಟೆನಾ ನಿಮ್ಮ ಬಂಗಲೆಯ ವೈಭವ ಎಂದು ಸ್ಟಕ್ಕಾಗಿ ಕೂತು ಬಿಟ್ಟಿದ್ದ. ನನಗೆ ಚಿಕನ್ ಬಿರಿಯಾನಿ ಮಾಡು ಎಂದು ನಾಯಿ ಕೇಳಿದಂತಾಯಿತು. ಮಾಡ್ತಿನಿ ಮಾಡ್ತಿನಿ ತಾಳು ಎಂದು ಅಲ್ಲೇ ಹತ್ತಿರದಲ್ಲಿದ್ದ ಗ್ರ್ಯಾಂಡ್ ಪಾ ಬಾರ್ ಅಂಡ್ ರೆಸ್ಟೋರೆಂಟಿಗೆ ಹೋಗಿ ಕಡಿಮೆ ಬೆಲೆಯ ವಿಸ್ಕಿ ತಂದ. ಬಾರ್ ಮಾಲೀಕ ಚಿಲ್ಲರೆ ಸಾಲವನ್ನೂ ಕೊಡುತ್ತಿದ್ದರು. ಚಿಕನ್ ಟಿಕ್ಕಾವನ್ನೂ ತಂದಿದ್ದ. ಪ್ಲಾಸ್ಟಿಕ್ ಗ್ಲಾಸಿಗೆ ಬಿಟ್ಟುಕೊಂಡು ಕುಡಿದ. ಬಿಸಿಬಿಸಿ ನಿಶೆ ತಲೆಗೇರಿ ಬೆವರು ಕಡೆಯಿತು. ಸಿಗರೇಟು ಹಚ್ಚಿದ. ರಾಣಿ ನಾಯಿ ಮೊದಮೊದಲು ಇದೆಲ್ಲ ಸರಿ ಇಲ್ಲ; ಸಭ್ಯರ ಮನೆಯ ಉಸ್ತುವಾರಿ ನೋಡಿಕೊಳ್ಳಲು ಬಂದ ನೀನು ಯಾವುದೊ ಒಬ್ಬ ಚಿಲ್ಲರೆ ಬೀದಿ ರಾಜಕಾರಣಿಯಂತೆ ವರ್ತಿಸುವುದು ತರವಲ್ಲ ಎಂಬಂತೆ ಹಾವಭಾವದಲ್ಲಿ ಹೇಳೀತು. ನಿನ್ನೆಲ್ಲ ಬಿಹೇವಿಯರ್ ನನಗೆ ಗೊತ್ತೂ... ತಕೊ ಈ ಲೆಗ್‌ಪೀಸ ಎಂದು ಅದರತ್ತ ಎಸೆದ.
ಅದು ಕ್ಷಣ ಮಾತ್ರದಲ್ಲಿ ಅವನನ್ನು ಒಪ್ಪಿಕೊಂಡಿತು. ಮಂಡಿಯೂರಿ ವಿನಯ ಪ್ರದರ್ಶಿಸಿತು. ಮೂಳೆಗಳ ಎಸೆದ. ಹೇ; ನೀನೆಂತಾ ಜಿಪುಣನೊ... ಹಾಕೊ ಹೆಚ್ಚಿಗೆ ಎಂದಿತು. ಹಾಕ್ತೀನೀ... ಒಂದು ವಿಷಯಾ... ಅವಳು ನಮ್ಮ ಗುರುಗಳ ಮಗಳು ನಿನ್ನ ತುಂಬಾ ಮುದ್ದು ಮಾಡ್ತಳೆ ಅಲ್ಲವೇ... ಯಾರಾದ್ರೂ ಲವರ್ ಇದ್ದಾರಾ ಅವಳಿಗೇ... ಎಂದು ನಾಯಿಯ ತಲೆ ಸವರುತ್ತ ಕೇಳಿದ. ಅದೆಲ್ಲ ಕೇಳಬೇಡ. ಅಳತೆ ಮೀರಬೇಡ. ನಿನ್ನದು ಎಷ್ಟಿದೆಯೊ ಅಷ್ಟು ನೋಡಿಕೊ ಎಂದು ಅತ್ತ ನೋಡಿತು. ಅದರ ಮೂಗಿನ ಹೊಳ್ಳೆಗಳಿಗೆ ಸಿಗರೇಟಿನ ಹೊಗೆಯ ಉರುಬಿದ. ಜೋರಾಗಿ ಸೀನಿತು. ಅದರ ಸಿಂಬಳ ಅವನ ಮುಖಕ್ಕೆ ಸಿಡಿಯಿತು. ಅದರ ಕತ್ತಿನ ಮೇಲೆ ಗುದ್ದಿದ. ಮೂಳೆ ಗಂಟಲಿಗೆ ಸಿಕ್ಕಿಹಾಕಿಕೊಂಡಿತು ಎಂಬಂತೆ ಕಕ್ಕಿತು. ಅತ್ತ ತಳ್ಳಿದ. ನಾಯಿ ಸೂಕ್ಷ್ಮ. ಮುನಿಸಿಕೊಂಡಿತು. ಕರೆದ. ಬರಲಿಲ್ಲ. ಅವಳು ನಿನ್ನ ಮುದ್ದು ಮಾಡುವಳಲ್ಲಾ... ಅದರ ಸೊಕ್ಕ ನನ್ನ ಮುಂದೆ ತೋರಬೇಡ. ಮಾಡ್ತಿನಿ ನೋಡೀಗ ಎಂದು ಹಿಡಿದು ಬಾಯಿ ಅಗಲಿಸಿ ಅದರ ಬಾಯಿಗೆ ವಿಸ್ಕಿ ಸುರಿದ. ಅರೇ; ಏನಾಶ್ಚರ್ಯ... ಕುಡಿದೇ ಬಿಟ್ಟಿತು. ಗುರುಗಳು ಸರಿಯಾಗಿಯೆ ಟ್ರೈನಿಂಗ್ ಕೊಟ್ಟಿದ್ದಾರೆ ಎಂದುಕೊಂಡ. ಮತ್ತೆ ಮತ್ತೆ ಪೆಗ್ಗೇರಿಸಿ ನಿಶೆಯಲ್ಲಿ ತೂರಾಡಿದ. ಎರಡು ಬಿರಿಯಾನಿ ತಂದಿದ್ದ. ಅದಕ್ಕೊಂಡು ಕೊಟ್ಟು ತಿನ್ನಿಸಿ ಮೈ ಸವರಿ ಬೇಜಾರು ಮಾಡಿಕೊಳ್ಳಬೇಡ. ಆದಿ ಕಾಲದಿಂದಲೂ ನೀನು ನಮ್ಮ ಪೂರ್ವಿಕರ ಜೊತೆ ಬಂದ ನಿಯತ್ತಿನ ನಾಯಿ ಎಂದು ಹೊಗಳಿದ. ನಾಯಿಗೂ ಮನುಷ್ಯರ ಬುದ್ದಿ. ಅವನ ಮುಖವ ನೆಕ್ಕಿ ಪ್ರೀತಿ ತೋರಿತು. ಏನೋ ಪುಳಕಿತವಾಯಿತು. ಅವಳ ಕೆನ್ನೆಗೂ ಈ ನಾಯಿ ಮುತ್ತುಕೊಟ್ಟು ತನಗೂ ಕೊಟ್ಟಿತಲ್ಲ ಎಂದು ನಿಶೆಯಲ್ಲಿ ಅದಕ್ಕೂ ಅವನು ಮುತ್ತಿಟ್ಟ. ಹೊತ್ತಾಗುತ್ತಿತ್ತು. ನಾಯಿ ತೂಕಡಿಸುತ್ತಿತ್ತು. ನಿಶೆ ಹೆಚ್ಚಾಗಿತ್ತೇನೊ. ಮಲಗಲು ಹಜಾರಕ್ಕೆ ಹೋದ. ಹಾಸಿ ಹೊದ್ದುಕೊಳ್ಳಲು ಅಲ್ಲಿ ಏನೂ ಇರಲಿಲ್ಲ. ಗುರುಗಳ ಹೊಸ ಕಾಲದ ಅಸ್ಪೃಶ್ಯತೆಯೇ ಅವನಿಗೆ ಗೊತ್ತಾಗಿರಲಿಲ್ಲ. ಕಿಟಕಿಗಳಿಗೆ ಹಾಕಿದ್ದ ಕರ್ಟನ್‌ಗಳ ಬಿಚ್ಚಿ ಅವನ್ನೆ ಹಾಸಿ ಹೊದ್ದು ಮಲಗಿದ.
ಬೆಳಗಾಗಿತ್ತು. ಏನೊ ವಾಸನೆ. ಬಾಗಿಲು ತೆಗೆದ. ನಾಯಿ ಮನೆ ಬಾಗಿಲ ಮೆಟ್ಟಿಲಲ್ಲಿ ಸತ್ತಂತೆ ಬಿದ್ದಿತ್ತು. ಅಯ್ಯೋ ಎಣ್ಣೆ ಕುಡಿಸಿ ಕೊಂದುಬಿಟ್ಟೆನೇ ಎಂದು ಅಲುಗಾಡಿಸಿದ. ಅದು ಅಲ್ಲೆಲ್ಲ ಹೇಸಿಗೆ ಮಾಡಿತ್ತು. ವಿಪರೀತ ಕೆಟ್ಟವಾಸನೆ. ತಣ್ಣೀರು ಸುರುವಿದ. ಎಚ್ಚರಗೊಂಡಿತು. ವಿಪರೀತ ಮಬ್ಬಾಗಿತ್ತು. ಅದರ ಉದ್ದ ಕೂದಲಿಗೆ ಕಸ ಮೆತ್ತಿಕೊಂಡಿತ್ತು. ಕ್ಲೀನ್ ಮಾಡಲೇಬೇಕಿತ್ತು. ಯಾರೂ ನೋಡದಿರಲಿ ಎಂದು ಲಗುಬಗೆಯಲ್ಲಿ ಮುಗಿಸಿ ಗಿಡಮರಗಳಿಗೆಲ್ಲ ನೀರು ಹಾಕಿದ. ನಾಯಿ ವಾಲಾಡುತ್ತ ಅವನ ಬಳಿ ಬಂದು ಅಣ್ಣಾ... ನೀವು ರಾತ್ರಿ ಕುಡಿಸಿದ್ರೀ... ಈಗ ನೋಡಿ ನನ್ನ ಕಷ್ಟವ ಎಂದು ಸಪ್ಪೆ ಮೋರೆ ತೋರಿತು. ಛೀ; ತೊಲಗತ್ತ ಎಂದು ಒಂದು ಏಟು ಕೊಟ್ಟ. ಕೊಯ್ಯೋ ಎಂದು ಗೇಟಿನ ಆಚೆ ಹೋಗಿ ಒಡೆಯನಿಲ್ಲದ ಈ ಮನೆಯಲ್ಲಿ ತಾನಿರಲಾರೆ ಎಂಬಂತೆ ದುಃಖಿಸುತ್ತ ಕೂತುಕೊಂಡಿತು. ನಾಯಿಯ ಬಿಟ್ಟು ಲೈಬ್ರರಿಗೆ ಹೋದ. ಘನವಾದ ವಿಷಯದ ಬಗ್ಗೆಯೆ ಸಂಶೋಧನೆ ನಡೆಸಿದ್ದ. ‘ಜಾಗತೀಕರಣ ಮತ್ತು ಮಾನವೀಕರಣ’ ಎಂಬ ಸಮಸ್ಯೆಯನ್ನು ವಿವೇಚಿಸುತ್ತಿದ್ದ. ಯಾವನೊ ಬಂದು ಜಾಗತೀಕರಣ ಓಕೇ ಈ ಮಾನವೀಕರಣ ಯಾಕೆ ಎಂದು ರೇಗಿಸಿದ. ಗುರುಗಳು ಊರಿಗೆ ಹೋಗಿ ಒಂದು ವಾರ ಆಗಿತ್ತು. ನಾಯಿಗೂ ಅವನಿಗೂ ಸಾಕಷ್ಟು ಮನಸ್ತಾಪಗಳಾಗಿದ್ದವು. ಗುರುಗಳ ಮೇಲಿನ ಸಿಟ್ಟನ್ನೆಲ್ಲ ಆತ ಆ ನಾಯಿಯ ಮೇಲೆ ಹಾಕಿದ್ದ. ಆದರೂ ಆ ನಾಯಿ ಗುರು ಪುತ್ರಿಗೆ ಇಷ್ಟ ಎಂದು ಅದರ ಬಗ್ಗೆ ಸಾಕಷ್ಟು ರಿಯಾಯಿತಿ ತೋರಿದ್ದ. ಅನ್ನ ಮಾಡಿ ಹಾಕುವ ಎಂದರೆ ಆ ಸೀಮೆಣ್ಣೆ ಬತ್ತಿ ಸ್ಟೌವ್ ಕೆಟ್ಟಿತ್ತು. ಬತ್ತಿಗಳು ಕರಕಲಾಗಿ ಯಕ್ಕುಟ್ಟಿತ್ತು. ಬಿಚ್ಚಿ ಒಂದೊಂದೇ ಬತ್ತಿಯ ಸುತ್ತಿ ಎಳೆದು ರೆಡಿ ಮಾಡಿದರೆ ಸೀಮೇಣ್ಣೆಯೆ ತೀರಿತ್ತು. ಸೀಮೆಣ್ಣೆ ತಂದು ಸ್ಟೌವ್ ಹಚ್ಚುವ ಗಡಿಬಿಡಿಯಲ್ಲಿ ಭಗ್ ಎಂದು ಸ್ಟೌವ್ ಬೆಂಕಿಕಾರಿ ಅವನ ಮೀಸೆ ಗಡ್ಡ ಸುಟ್ಟಿದ್ದವು. ಸಿಟ್ಟಿನಿಂದ ಆ ಸ್ಟೌವ್ ಅನ್ನೆ ಎತ್ತಿ ಕಾಂಪೌಂಡ್ ಆಚೆ ಬಿಸಾಡಿದ್ದ. ಊಟವಿಲ್ಲದೆ ಹಸಿದು ಕುಯ್‌ಗರೆಯುತ್ತಿತ್ತು. ದಿನಾಲು ಇದಕ್ಕೆ ಬಿರಿಯಾನಿ ತಂದು ತಿನ್ನಿಸುವ ಎಂದರೆ ಗುರುಗಳ ಮಗಳು ನನ್ನ ಪ್ರೇಮಿಸುವಳೇ... ನಾನೆಲ್ಲಿ ಅವಳೆಲ್ಲಿ... ಇದೇನಾದರೂ ಗುರುಗಳಿಗೆ ಗೊತ್ತಾದರೆ ನನ್ನ ಪಿಎಚ್‌ಡಿ ಆದಂತೆಯೇ ಎಂದುಕೊಂಡು ಸಾಲ ಮಾಡಿ ಬಿರಿಯಾನಿ ತಂದು ನಾಯಿ ಮುಂದಿಟ್ಟ. ಅದು ಬೇಡ ಎಂದಿತು. ತಿನ್ನು ಎಂದು ಬಾಯಿಗೆ ಇಟ್ಟ. ಬೇಡವೇ ಬೇಡ ಎಂದಿತು. ಇದು ಸತ್ತರೆ ಗುರುಗಳು ನನ್ನ ಮುಗಿಸಿಬಿಡುತ್ತಾರೆ... ನಾನೇ ಎಲ್ಲಿಯಾದರೂ ಕಣ್ಮರೆ ಆಗಲೇ ಎನಿಸಿತಾದರೂ ಆ ಚೆಲುವೆಯ ಮುಖವ ಒಮ್ಮೆ ನೋಡಿ ತೀರ್ಮಾನಿಸುವ ಎಂದು ಮಲಗಿದ. ನಾಯಿ ವಿಪರೀತ ಅಳುತ್ತಿತ್ತು. ಕರ್ಟೆನ್ ತಂದು ಹೊದಿಸಿದ. ಲೈಟ್ ಆಫ್ ಮಾಡಿ ಜಾಲರಿಯಿಂದ ನೋಡಿದ. ಸಿಟ್ಟಿನಿಂದ ಕರ್ಟೆನ್ ಹರಿದು ಕಿತ್ತು ಹಾಕಿತ್ತು. ಹೊರಬಂದು ಯಾಕೆ ಏನಾಯ್ತು ಎಂದ. ಅದು ತಿರುಗಿ ನೋಡಲಿಲ್ಲ. ನಿನ್ನ ಗುರು ಪುತ್ರಿ ಇನ್ನೇನೊ ವಾರದೊಳಗೆ ಬರುವಳು; ತಡೆದುಕೊ ಎಂದ. ರೋದಿಸಿತು. ಹೇ ರಾಣೀ... ನಾನೇ ಬಿಕಾರಿ. ನಾನು ಸತ್ತರೂ ಯಾರೂ ಇಲ್ಲ. ನಿನಗಾಗಿ ಅಳುವವರಾದರೂ ಇದ್ದಾರೆ... ಸುಮ್ಮನೆ ಮಲಗು. ನಾಳೆ ಡಾಕ್ಟರ್ ಬಳಿ ಕರೆದೊಯ್ಯುವೆ... ನನ್ನಂತಹ ಪಾಪಿಗಳ ಮರುಕವೆಲ್ಲ ಎಲ್ಲೆಲ್ಲೊ ಸೋರಿ ಹೋಗಿದೆ ಎಂದು ಬಾಗಿಲು ಮುಚ್ಚಿಕೊಂಡ.
ಆಗ ತಾನೆ ನಿದ್ದೆ ಹತ್ತುತ್ತಿತ್ತು. ವಿಪರೀತ ನಾಯಿಗಳು ರಾಣಿ ನಾಯಿಯ ಪರವಾಗಿ ಬೊಗಳುತ್ತಿದ್ದವು. ಬೊಗಳಿಕೊಂಡು ಹಾಳಾಗಿ... ಈಗೇನು ಕ್ರಾಂತಿ ಗೀಂತಿ ಏನೂ ಆಗಬೇಕಿಲ್ಲವಲ್ಲಾ ಎಂದು ಮಲಗಿದ್ದ. ಕನಸಿನಲ್ಲಿ ಏನೇನೊ ಕಂಡಿತ್ತು. ಗುರು ಪುತ್ರಿ ಬಂದು ಪಕ್ಕದಲ್ಲೇ ಮಲಗಿದಂತೆ ಕಂಡು ಬೆಚ್ಚಿ ಎದ್ದು ಕೂತಿದ್ದ. ಗುರುಗಳಿಗೆ ಎಷ್ಟೀಡಿ ಬೂತಿನಿಂದ ಪೋನು ಮಾಡಿ ಯಾವಾಗ ಬರುವಿರಿ ಎಂದಿದ್ದ. ಇನ್ನೂ ಒಂದು ವಾರ ತಡ ಆಗುತ್ತೆ ಎಂದಿದ್ದರು. ಏನಪ್ಪಾ... ಗುರುಗಳ ಮಾನಸ ಪುತ್ರ ಎಂದು ಗೆಳೆಯರು ತಮಾಷೆ ಮಾಡಿದ್ದರು. ಆ ದಡಿಯ ಗಡವಂದಿಯಂತಿದ್ದ ಗುರುಗಳ ಗಂಡು ಮಕ್ಕಳು ಕತ್ತು ಮುರಿಯುವಂತೆ ಮನದ ಮುಂದೆ ಬಂದರು. ಮನುಷ್ಯರ ಯಾವ ವ್ಯಾಪಾರಿ ಸ್ವಭಾವಗಳಿಂದ ಜಾಗತೀಕರಣವನ್ನು ಪತ್ತೆ ಮಾಡುವುದು ಎಂದು ಹೊಳೆಯದೆ ಚಡಪಡಿಸುತ್ತಿದ್ದ. ರಾಣೀ... ರಾಣೀ ಎಲ್ಲಿದ್ದೀಯೆ ಎಂದು ಮನೆಯ ಸುತ್ತ ಮುತ್ತ ಹುಡುಕಿದ. ಎಲ್ಲಿ ಹೋಯಿತೊ ಎಂದು ಹಿಂದೆ ಇದ್ದ ಬಚ್ಚಲು ಮನೆಯ ಬಾಗಿಲು ಸರಿಸಿ ನೋಡಿದ. ಅಲ್ಲೊಂದು ಮುರುಕಲು ಟೇಬಲಿನ ಮೇಲೆ ಬಟ್ಟೆಗಳ ಗಂಟೊಂದಿತ್ತು. ಮುಟ್ಟಿ ನೋಡಿದ. ಅವತ್ತು ಆತುರದಲ್ಲಿ ಗುರು ಪುತ್ರಿ ಈ ಗಂಟ ಅಲ್ಲಿ ಇಟ್ಟು ಒಳಹೋಗಿದ್ದಳಲ್ಲವೇ ಎಂಬುದು ನೆನಪಾಯಿತು. ಇದಿಲ್ಲೆ ಇರಲಿ ಎಂದಿಟ್ಟು... ಆ ನಾಯಿ ಸಾಯಂಕಾಲ ಬರಲಿ ಎಂದು ವಿಭಾಗಕ್ಕೆ ಹೋದ. ಗುರುಗಳಿಗೆ ಆಗದ ಹಿರಿಯ ಪ್ರಾಧ್ಯಾಪಕರು ಗೇಲಿ ಮಾಡುತ್ತ... ಏನಯ್ಯಾ... ನಿಮ್ಮ ಗುರುಗಳು ಅಂಗಿ ಪ್ಯಾಂಟು ಬಿಚ್ಚಿ ವಿಧಾನಸೌಧದ ಮುಂದೆ ದರಣಿ ಕೂತಿದ್ದಾರಂತಲ್ಲ... ಹೋಗಿ ನೀರು ಗೀರು ಕೊಟ್ಟು ಬೆಂಬಲಿಸಬಾರದೇ ಎಂದಿದ್ದರು. ಕೊನೆಯ ಪ್ರಯತ್ನವ ಭಯಂಕರವಾಗಿಯೆ ಮಾಡುತ್ತಿದ್ದರು. ಅಬ್ಬಾ; ಈ ವಿದ್ಯಾವಂತ ವಿದ್ವಾಂಸರ ಕತ್ತಿ ಇರಿತಗಳಿಂದ ಅದೆಷ್ಟು ಜನ ಹತರಾದರೊ ಎಂದು ಆ ನಾಯಿ ಬಗ್ಗೆ ಯೋಚಿಸುತ್ತ ಗುರುಗಳ ನೆನೆದ.
ಪ್ರಾಧ್ಯಾಪಕರ ವಿರುದ್ಧ ಯಾರೊ ಕರಪತ್ರ ಹಂಚುತ್ತಿದ್ದರು. ಓದಿದ. ಅನಾಹುತವಾಗಿತ್ತು. ಅವರ ವಿರುದ್ದ ನೂರ ಒಂದು ಆರೋಪಗಳಿದ್ದವು. ಯಾವುದಾವುದೊ ಹಗರಣಗಳ ಪೋಣಿಸಿ ಪತ್ರಿಕೆಗಳಲ್ಲಿ ಅವರ ಮಾನ ಹರಾಜು ಹಾಕಿದ್ದರು. ಆ ಸುದ್ಧಿಯಲ್ಲಿ ಅವನನ್ನೂ ಸಿಲುಕಿಸಿದ್ದರು. ಪಿಎಚ್‌ಡಿಗಳ ಕೃತಿ ಚೌರ್ಯದ ದಂಧೆಯನ್ನು ತನ್ನ ಶಿಷ್ಯನ ಕೈಯಿಂದ ಮಾಡಿಸುವರು ಎಂದು ಗಾಳಿ ಸುದ್ದಿ ಹಬ್ಬಿತ್ತು. ಏನೊ ನಿನ್ನ ಕರಾಮತ್ತೂ... ಮೊದಲೇ ನಿನ್ನ ಬಗ್ಗೆ ನಮಗೆ ಅನುಮಾನ ಇತ್ತು. ಈಗದು ನಿಜವಾಯ್ತು ಎಂದು ಕಂಡವರೆಲ್ಲ ಕೆಂಡವಾದರು. ಹೀಗೆಲ್ಲ ಆಗಿದೆ ಎಂದು ಗುರುಗಳಿಗೆ ಪೋನು ಮಾಡಿದ. ಏಯ್ ಕತ್ತೆ ಬಡವಾ; ಈ ಸ್ಯಾಟವ ಹೇಳೋಕೆ ಪೋನು ಮಾಡಿದೆಯೇನೊ... ನನಗೆ ಆಗದವರ ಜೊತೆ ಮಾತಾಡ್ತಾ ಇದ್ದಂತಲ್ಲೊ... ನಿನ್ನನ್ನೂ ನಂಬಲಾಗದು... ಎಲ್ಲರೂ ಬೆನ್ನಿಗೆ ಚೂರಿ ಹಾಕುವವರೇ ಎಂದು ಕಿಡಿಯಾದರು. ಮನುಷ್ಯರು ತಮ್ಮ ನರಭಕ್ಷಕ ಅಭಿರುಚಿಯ ತರಾವರಿಯಾಗಿ ತೀರಿಸಿಕೊಳ್ಳಲು ಬೇಟೆ ಆಡುತ್ತಲೇ ಇರುತ್ತಾರೆ ಎನಿಸಿತು.
ಮನುಷ್ಯರಿಗೆ ದುಃಖ ಮರೆತೇ ಹೋಯಿತೇ... ಅಂತಃಕರಣದ ಅವಶ್ಯಕತೆ ಈ ಲೋಕಕ್ಕೆ ಇಲ್ಲವೇ... ಮನುಷ್ಯ ಏನೇನು ಸಾಧಸಬೇಕಿದೆ ಎಂದು ಅನಾಥವಾಗಿ ಕೇಳಿಕೊಂಡ. ಛೇ; ಈ ನಾಯಿಯೂ ನನ್ನ ಬಿಟ್ಟು ಹೋಯಿತಲ್ಲಾ ಎಂದು ಕ್ಯಾಂಪಸ್ಸಿನ ಮೂಲೆಗಳನೆಲ್ಲ ತಡಕಾಡಿದ. ತೂರಾಡಿಕೊಂಡು ಹೋಗಿ ಯಾವುದಾದರೂ ಲಾರಿಯ ಪಾಲಾಯಿತೇ ಎಂದು ಕಲ್ಪಿಸಿ ಛೇ ಛೇ ಎಂದು ನಾಲಿಗೆ ಕಚ್ಚಿಕೊಂಡ. ಆ ಗುರುವರ್ಯರೊ; ಹೆಣ್ಣು ನಾಯಿ ಬೆದೆಗೇ ಬರಬಾರದು ಎಂದು ತನ್ನ ಶಿಷ್ಯನ ಮೂಲಕವೇ ವೈದ್ಯರಿಂದ ಚುಚ್ಚು ಮದ್ದು ಕೊಡಿಸಿದ್ದರು. ಪ್ರತಿವರ್ಷವೂ ಆ ಹೆಣ್ಣು ನಾಯಿ ಪ್ರಿಯಕರರಿಲ್ಲದೆ ಪರಿತಪಿಸಿ ಋತುಮಾನಗಳ ಕಳೆದುಕೊಂಡು ತೆಪ್ಪಗಾಗುತ್ತಿತ್ತು.
ಅವರ ದಾಂಡಿಗ ಗಂಡು ಮಕ್ಕಳು ವಿಚಿತ್ರವಾಗಿದ್ದರು. ಅವರಲ್ಲಿ ಒಬ್ಬ ಸಲಿಂಗ ಕಾಮಿಯಾಗಿದ್ದ. ಮದುವೆಯೇ ಬೇಡ ಎನ್ನುತ್ತಿದ್ದ. ಕಿರಿಯವನು ನೀಲಿ ಚಿತ್ರಗಳ ವ್ಯಸನಿಯಾಗಿದ್ದ. ಮಿಥುನ ಚಿತ್ರಗಳ ಭಂಡಾರವೇ ಅವನ ಕೊಠಡಿಯಲ್ಲಿ ತುಂಬಿ ತುಳುಕಿತ್ತು. ಅಂತಹ ಸಿ.ಡಿ.ಗಳ ನಟ್ಟಿರುಳ ತನಕ ನೋಡುತ್ತ ಮುಷ್ಠಿ ಮೈಥುನದಲ್ಲಿ ಮಾತ್ರ ಸುಖಿಸುತ್ತ ದಾರಿತಪ್ಪಿದ್ದ. ಗುರು ಪುತ್ರಿಗೆ ಆ ಲೋಕವೇ ಗೊತ್ತಿಲ್ಲ. ಒಂದು ಬೆಳದಿಂಗಳ ಕನಸಲ್ಲಿ ನದಿಯ ದಂಡೆಯಲ್ಲಿ ಆ ಶಿಷ್ಯನ ಜೊತೆ ಕೂತಿದ್ದಂತೆ ಭಾಸವಾಗಿತ್ತು. ಇದು ಕನಸು ತಾನೇ; ತಪ್ಪಿಲ್ಲ ಬಿಡು ಎಂದು ಮಲಗಿದ್ದಳು.
ನಾಳೆ ಬರುತ್ತಿದ್ದೇವೆ ಎಂದು ಪಕ್ಕದ ಮನೆಯವರಿಗೆ ಗುರುಗಳು ಪೋನು ಮಾಡಿದ್ದರು. ಮನೆಯ ಸುತ್ತ ಮುತ್ತಲ ಕಸ ಗುಡಿಸಿ ಸ್ವಚ್ಛ ಮಾಡಿದ. ಯೂನಿವರ್ಸಿಟಿಯಲ್ಲಿ ಗುರುಗಳ ವೈರಿಗಳು ವಿಚಾರಣೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದರು. ರಾತ್ರಿ ಕಳೆಯಿತು. ಮತ್ತೊಮ್ಮೆ ರಾಣಿಯ ತಡಕಾಡಿದ. ಪಾಪ ಪ್ರಜ್ಞೆ ಕಾಡುತ್ತಿತ್ತು. ಮಧ್ಯಾಹ್ನವಾಗಿತ್ತು. ಹಿತ್ತಲಲ್ಲಿ ನಿಂತು ನೋಡಿದ. ಅಲ್ಲೊಂದು ಬಟ್ಟೆಗಂಟು ಕಂಡಿತು. ಓಹ್! ಇದು ಗುರುಪುತ್ರಿಯು ಆ ದಿನ ಹೋಗುವ ಗಡಿಬಿಡಿಯಲ್ಲಿ ಇಲ್ಲೇ ಬಿಟ್ಟು ಹೋಗಿದ್ದ ಬಟ್ಟೆ ಅಲ್ಲವೇ ಎಂದು ತೆರೆದು ನೋಡಿದ... ತುಂಡು ತುಂಡು ಬಟ್ಟೆಗಳು. ರಕ್ತದ ಕಲೆಗಳಿದ್ದವು. ಮುಗ್ಗುಲು ವಾಸನೆ ಹೊಡೆಯುತ್ತಿದ್ದವು. ಅಸಹ್ಯ ಎನಿಸಲಿಲ್ಲ. ಗೊತ್ತಾಯಿತು. ಆ ತುಂಡು ಬಟ್ಟೆಗಳು ಅವಳು ಮುಟ್ಟಾದಾಗ ಹಾಕಿಕೊಳ್ಳುತ್ತಿದ್ದ ಬಟ್ಟೆಗಳು. ನ್ಯಾಪ್‌ಕಿನ್ ಬಳಸುವ ಅಭ್ಯಾಸ ಅವಳಿಗೆ ಇರಲಿಲ್ಲ. ಅವನ ತಲೆಯಲ್ಲಿ ಯಾಕೊ ಆ ಗೆಜ್ಜೆಪೂಜೆ ಸಿನಿಮಾದ ‘ಪಂಚಮ ವೇದ ಪ್ರೇಮದನಾದ’ ಎಂಬ ಹಾಡು ರಿಂಗಣಿಸಿತು. ಬಕೆಟ್ಟಲ್ಲಿ ಆ ತುಂಡು ಬಟ್ಟೆಗಳ ಸರ್ಪ್ ಜೊತೆ ನೆನೆಸಿ ಉಜ್ಜಿ ತೊಳೆದು ಜಾಲಿಸಿ ಹಿಂಡಿ ಒಣ ಹಾಕಿದ. ಏನೊ ದಿವ್ಯ ಆನಂದವಾಯಿತು. ತಾನೊಬ್ಬ ಪಂಚಮ... ನನ್ನದು ಪಂಚಮ ವೇದ ಅಷ್ಟೇ... ಅದು ಯಾರಿಗೂ ಗೊತ್ತಾಗಬೇಕಾಗಿಲ್ಲ. ನನ್ನೊಳಗಿನ ನಾದ ಅದು ಎಂದು ಆ ಹಾಡ ಗುನುಗಿದ. ಮನೆಯ ಮುಂದೆ ನಾಯಿಗಳು ಕಚ್ಚಾಡುತ್ತಿದ್ದವು. ರಾಣಿ ಬಂದಳೇನೊ ಎಂದು ಹೋಗಿ ನೋಡಿದ. ಘನ ಘೋರವಾಗಿ ಆ ನಾಯಿಗಳು ಒಂದನ್ನೊಂದು ಬಗೆದು ಹರಿದು ಬಿಸಾಡುವಂತೆ ಕಚ್ಚಾಡುತ್ತಿದ್ದವು. ಬೆದರಿದ. ಅಂತಹ ಬರ್ಬರ ಕಿತ್ತಾಟವ ಅವನೆಂದೂ ಕಂಡೇ ಇರಲಿಲ್ಲ. ಹೀಗೇಕೆ ಬಂದು ಕಾಟಕೊಡುತ್ತಿವೆ... ಎಲ್ಲೇ ಹೋದರೂ ಹಿಂಬಾಲಿಸಿ ಬರುತ್ತಿವೆಯಲ್ಲಾ... ರಾಣಿ ನಾಯಿ ಈ ಗಂಡು ನಾಯಿಗಳಿಗೆ ನನ್ನ ವಿರುದ್ಧ ಹೇಳಿ ಆತ್ಮಹತ್ಯೆ ಮಾಡಿಕೊಂಡಿತೇ... ಏನೆಂದು ತಿಳಿಯಲಪ್ಪಾ ದೇವರೇ ಎಂದು ಅವುಗಳ ಅತ್ತ ಅಟ್ಟಲು ನೋಡಿದ. ಅವನನ್ನೆ ಬಗೆದು ತಿನ್ನುವಂತೆ ಆ ನಾಯಿಗಳು ಬಾಗಿಲತ್ತ ನುಗ್ಗಿದವು. ಓಡಿ ಹೋಗಿ ಬಾಗಿಲ ಹಾಕಿಕೊಂಡ. ತಟ್ಟನೆ ಸದ್ದಡಗಿತು. ಕಿಂಡಿಯಿಂದ ನೋಡಿದ. ಯಾವ ನಾಯಿಯೂ ಕಾಣಲಿಲ್ಲ. ಸಂಜೆಯಾಗುತ್ತಿತ್ತು. ಗುರುಗಳು ಇನ್ನೂ ಬಂದಿಲ್ಲವಲ್ಲಾ ಎಂದುಕೊಳ್ಳುತ್ತಿರುವಂತೆ ಅವರು ಬರುತ್ತಿರುವ ಅಂಬಾಸಿಡರ್ ಕಾರಿನ ಸದ್ದಾಯಿತು. ಕಾರಿನ ಹರ‍್ನ್ ಭಯಂಕರವಾಗಿತ್ತು. ಏನು ಕೆಟ್ಟಿತ್ತೊ ಏನೊ... ಯಾರೊ ರಾಕ್ಷಸ ಕೇಕೇ ಹಾಕಿ ಘರ್ಜಿಸಿದಂತಿತ್ತು. ಆ ನಾಯಿಗಳು ಕಾಂಪೌಂಡಿನ ಆಚೆ ಮರೆಯ ಎಲ್ಲಿದ್ದವೊ ಏನೊ ಒಂದೇ ಸಲಕ್ಕೆ ಕಾರಿನ ಮೇಲೆ ದಾಳಿ ಮಾಡಿದವು. ಆ ರಾಣಿ ನಾಯಿ ಬೆದೆಗೆ ಬರದಂತೆ ತಡೆದಿದ್ದವರು ಇವರೇ ಎಂದು ಆ ಗಂಡುನಾಯಿಗಳಿಗೆ ಗೊತ್ತಿತ್ತೊ ಇಲ್ಲವೊ ಯಾರಿಗೂ ತಿಳಿದಿರಲಿಲ್ಲ. ಗುರುಗಳು ಕಿರುಚಿಕೊಂಡು ಶಿಷ್ಯನ ಕರೆದಿದ್ದರು. ಹೊರ ಬರಲು ಅವನಿಗೆ ಧೈರ್ಯ ಇರದಿದ್ದರೂ ಆಕೆಗಾಗಿಯಾದರೂ ಹೋಗುವ ಎಂದು ಗೇಟು ತೆಗೆದು ನಾಯಿಗಳತ್ತ ಬಡಿಗೆ ಬೀಸಿದ. ನಾಯಿಗಳು ಚದುರಿದವು. ಗಾಬರಿಯಿಂದ ಎಲ್ಲರೂ ಒಳ ಹೊಕ್ಕರು. ಆ ನಾಯಿಗಳೊ ಘೋರ ಕದನವಾಡಿ ರಕ್ತ ಚೆಲ್ಲಿದ್ದವು. ಕಾದಾಟದಲ್ಲಿ ಒಂದು ನಾಯಿ ಸತ್ತು ಬಿದ್ದಿತ್ತು. ಗುರುಗಳು ಕೆಂಡಾಮಂಡಲವಾದರು. ರಾಣಿ ನಾಯಿಯಂತೆಯೇ ಸತ್ತ ನಾಯಿ ಕಂಡಿತ್ತು. ನನ್ನ ರಾಣಿಯ ಕೊಲ್ಲಿಸಿದ್ದೀಯಲ್ಲೊ ಎಂದು ಕೂಗಾಡಿದರು. ಅವರ ಮಗಳು ಇಲ್ಲ ಅಪ್ಪಾ... ಅದು ರಾಣಿ ಅಲ್ಲ ಬಿಡೂ... ನಾನು ನಿಮ್ಮ ಮಗಳು ರಾಣಿ ನಾನಿಲ್ಲೇ ಇದ್ದೀನಲ್ಲಾ ಎಂದಳು. ಶಿಷ್ಯ ಕಾಲು ಕೀಳಲು ನೋಡುತ್ತಿದ್ದ. ನಿನ್ನ ಆಮ್ಯಾಲೆ ನೋಡಿಕೊಳ್ಳುವೆ ತೊಲಗು ಎಂದಿದ್ದರು. ಹಿತ್ತಲ ಸ್ನಾನದ ಮನೆಯಲ್ಲಿ ಅವನು ಒಂದು ಜೊತೆ ಬಟ್ಟೆ ಇಟ್ಟುಕೊಂಡಿದ್ದ. ಎತ್ತಿಕೊಳ್ಳಲು ಹೋದ. ಆಗ ತಾನೆ ಗುರು ಪುತ್ರಿ ಬೆರಗಾಗಿಯೊ ನಾಚಿಕೆಯಿಂದಲೊ ಅವನು ತೊಳೆದು ಹಾಕಿದ್ದ ಮುಟ್ಟಿನ ಬಟ್ಟೆಗಳ ಮುಟ್ಟಿ ನೋಡುತ್ತಿದ್ದಳು. ತಾನೇ ತೊಳೆದಿದ್ದು ಎಂಬಂತೆ ನಕ್ಕ. ಅವಳಿಗೆ ಎದೆಯನ್ನು ಹಿಂಡಿದಂತಾಗಿ ಹೊಕ್ಕುಳು ಹೂ ಬಿಟ್ಟಂತಾಗಿತ್ತು. ಒಳಕ್ಕೆ ಹೊರಟು ಹೋದಳು. ಹಾಸ್ಟಲಿಗೆ ಬಂದು ಬಿಟ್ಟ. ಮನುಷ್ಯರ ದೌರ್ಬಲ್ಯಗಳ ಮೀರಿದ ಭಾವ ಅವರಿಬ್ಬರಲ್ಲೂ ಒಂದು ಕ್ಷಣ ತುಳುಕಿ ಮಾಯವಾಯಿತು. ಎರಡು ಮೂರು ದಿನ ಕಳೆದವು. ಗುರುಗಳ ಮೇಲಿದ್ದ ಆರೋಪಗಳ ವಿಚಾರಣೆಯ ಹಿನ್ನೆಲೆಯಲ್ಲಿ ಶಿಷ್ಯನ ಕರೆಸಿದ್ದರು. ತಬ್ಬಿಬ್ಬಾಗಿದ್ದ. ಕಮಿಟಿಯ ಮುಂದೆ ಬೆದರಿ ಕೈ ಮುಗಿದಿದ್ದ. ಅವನ ಪಿಎಚ್‌ಡಿ ನೋಂದಣಿಯ ರದ್ದು ಮಾಡಿದರು. ನಿನ್ನ ಅರೆಸ್ಟ್ ಮಾಡುವರು ಎಂದು ಹೆದರಿಸಿದರು. ರಾತ್ರೋರಾತ್ರಿ ಕಣ್ಮರೆಯಾದ. ಆತ ಏನಾದ ಎಂದು ಯಾರೂ ಕೇಳಲಿಲ್ಲ. ಗುರುಗಳು ನಿವೃತ್ತಿಯಲ್ಲಿದ್ದರು. ಯಾವುದೊ ಒಂದು ಗಡವನ ತಂದು ಮಗಳಿಗೆ ತಾಳಿ ಕಟ್ಟಿಸಿದರು. ಹತಾಶೆಯಲ್ಲಿ ಹಗಲೇ ಕುಡಿದು ಬೀದಿ ಜಗಳಗಳಿಗೆ ನಿಂತರು.
ಕಾಲ ತೂರಿಕೊಂಡು ಹೋಗುತ್ತಿತ್ತು. ಗುರು ಪುತ್ರಿಯ ಮದುವೆ ಆದವನೊಬ್ಬ ಪುಂಡನಾಗಿದ್ದ. ಒಂದು ರಾತ್ರಿಯೂ ಅವಳು ಅವನ ಜೊತೆ ಸುಖವಾಗಿ ಮಲಗಲಿಲ್ಲ. ವಿಕಾರಿಯಾಗಿದ್ದ. ಅವಳ ಅಣ್ಣ ಸಲಿಂಗ ಕಾಮಿಯ ಆಪ್ತಮಿತ್ರನಾಗಿದ್ದ ಅವನಿಗೆ ಅವಳ ಮೇಲೆ ಏನೇನೊ ಗುಮಾನಿ. ಅವಳ ಜೊತೆ ಸಲಿಗೆಯಿಂದ ಇರುವ ಬದಲು ಅವಳ ಅಣ್ಣನ ಜೊತೆ ಹರಟುತ್ತ ಮಲಗುತ್ತಿದ್ದ. ಎಲ್ಲೊ ಒಂದು ಕೊಂಪೆಯಲ್ಲಿ ಬಾಡಿಗೆ ಮನೆ ಮಾಡಿದ್ದ. ಎರಡು ವರ್ಷಗಳು ಕಣ್ಣೀರಲ್ಲಿ ಕರಗಿದ್ದವು. ಶಿಷ್ಯ ಯಾವುದೊ ವ್ಯಾಪಾರಿ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಂಡು ಅದೇ ಮೈಸೂರಿನ ಮೂಲೆಯಲ್ಲಿದ್ದ.
ಒಂದು ದಿನ ಸಯ್ಯಾಜಿರಾವ್ ರಸ್ತೆಯ ಮಾರುಕಟ್ಟೆಯಲ್ಲಿ ಗುರು ಪುತ್ರಿ ಎದುರಾದಳು. ಬಡವಾಗಿದ್ದಳು. ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವಂತೆ ನೋಡಿಕೊಂಡರು. ಬಳಬಳ ಅತ್ತಳು. ಬನ್ನಿ ಹೋಗುವ ಎಂದು ಪುಟ್ಟ ಮನೆಗೆ ಕರೆತಂದ. ರಾತ್ರಿ ಆದರೂ ಆಕೆ ಹೋಗಲಿಲ್ಲ. ಗಂಡ ಎಂಬ ಆ ಪ್ರಾಣಿಯ ಬಿಟ್ಟಿರುವೆ... ಇನ್ನು ಮುಂದೆ ನಿಮ್ಮ ಜೊತೆಯೇ ಇರುವೆ... ಬನ್ನಿ ಹತ್ತಿರ ಎಂದಳು. ಮಧ್ಯರಾತ್ರಿ ಆಗಿತ್ತು. ಮಂಚದ ಮೇಲೆ ಗುರು ಪುತ್ರಿಯ ಮಲಗಿಸಿ ಕೆಳಗೆ ಕೂತು ಮಾತಾಡುತ್ತಿದ್ದ. ನನ್ನದು ಪಂಚಮ ಪ್ರೇಮ... ಮುಟ್ಟುವಂತದ್ದಲ್ಲ ಎಂದ. ಯಾಕೆ ಎಂದಳು. ಇಲ್ಲ ಅದೆಲ್ಲ ನನ್ನಿಂದಾಗಲ್ಲ... ನಿಮ್ಮ ತಂದೆ ನನ್ನ ಗುರುಗಳು ನನ್ನ ಆರೋಗ್ಯ ಸುಧಾರಿಸಲಿ ಎಂದು ಏನೇನೊ ಮಾತ್ರೆ ಕೊಡಿಸಿದರು. ಏನು ಮಾಡಿದರೂ ನಾನು ಕಟ್ಟುಮಸ್ತಾಗಲಿಲ್ಲ. ಎಲ್ಲ ಮೆತ್ತೆ ಮನುಷ್ಯ ಆದೆ. ಕೊರಡಿನಂತೆ ಆಗಲೇ ಇಲ್ಲ. ಈಗಲೂ ಅದೇ ಮಾತ್ರೆಗಳ ತಿನ್ನುತ್ತಿರುವೆ... ನನಗೆ ಆ ಮೋಹದ ಆಸೆಯೂ ಸತ್ತು ಹೋಯಿತು ಎಂದು ತಲೆ ತಗ್ಗಿಸಿದ. ಆಕೆಗೆ ಹಳೆಯದು ನೆನಪಾಯಿತು. ಅವಳ ಅಪ್ಪ ಹೇಳುತ್ತಿದ್ದ... ಹೇ ಸುಮ್ನಿರೇ... ಅವನ ಗಂಡಸ್ತನವೆ ಇಲ್ಲದಂತಾಗೊ ಔಷಧಿ ಕೊಡ್ಸಿದ್ದೀನಿ. ನಿನ್ನ ಮಗಳ ಮೇಲೆ ಕಣ್ಣು ಹಾಕದಂತೆ ತಡೆಯೊ ಜವಾಬ್ದಾರಿ ನನ್ನದು... ಷಂಡ... ಷಂಡನ ಮಾಡಿ ಮೂಲೆಗೆಸೆವೆ ಅವನ ಎಂದು ಅವಳಪ್ಪ ಹೇಳುತ್ತಿದ್ದುದು ಎದೆಗೆ ನಾಟಿತು. ಆತ ಗುರುಗಳ ಹೊಗಳುತ್ತಲೆ ಇದ್ದ. ಆಕೆಯ ದುಃಖ ಹೆಪ್ಪುಗಟ್ಟಿತ್ತು. ಸಾವರಿಸಿಕೊಂಡಳು. ಇರಲಿ ಬನ್ನಿ... ನೀವು ನನ್ನ ಮನಸ್ಸ ಮುಟ್ಟಿದ್ದೀರಿ. ದೇಹ ಮುಟ್ಟಿಸಿಕೊಳ್ಳೋದು ಏನು ಮಹಾ... ಏನನ್ನು ಮುಟ್ಟಬೇಕೊ ಅದನ್ನೇ ಮನುಷ್ಯರು ಮುಟ್ಟೋಲ್ಲ. ನಾನು ನಿಮ್ಮನ್ನು ಮುಟ್ಟಿಸಿಕೊಳ್ಳಬೇಕು ಹತ್ತಿರ ಬನ್ನಿ ಒಟ್ಟಿಗೇ ಮಲಗುವ ಎಂದಳು. ಅವನೊ; ಇಹದ ಈ ಮುಟ್ಟುಚಟ್ಟುಗಳ ಆಚೆಗಿನದನ್ನು ಮುಟ್ಟಲು ಕನಸು ಕಾಣುತ್ತಿದ್ದ. ಇಹ ಪರಗಳ ಆಚೆಗೆ ಮನುಷ್ಯ ಏನನ್ನೊ ಮುಟ್ಟಿಸಿಕೊಳ್ಳುವುದಿತ್ತು. ಅವನ ಭಾವವನ್ನು ಆಕೆ ಅರಿತಂತೆ ನಿಟ್ಟುಸಿರುಬಿಟ್ಟಳು. ನೀವು ಮಲಗಿ ಎಂದು ಕೆಳಗೆ ಕೂತು ಅವಳ ಪಾದವ ಒತ್ತುತ್ತ ಮುತ್ತಿಕ್ಕಿಕೊಳ್ಳುತ್ತಿದ್ದ. ಅವಳು ನಿದ್ದೆಯಲ್ಲೂ ನಗುನಗುತ್ತಲೇ ದುಃಖಿಸುತ್ತಿದ್ದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.