ಪ್ರಾತಿನಿಧಿಕ ಚಿತ್ರ
ದೋಷಗಳು ಜೀವನದ ಮೇಲೆ ಪರಿಣಾಮವನ್ನು ಬೀರುತ್ತವೆ ಎಂಬ ನಂಬಿಕೆ ಇದೆ. ಜ್ಯೋತಿಷ್ಯದ ಪ್ರಕಾರ ಹಲವು ದೋಷಗಳು ಇರುವುದನ್ನು ಕಾಣಬಹುದು. ಅವುಗಳಲ್ಲಿ ಮಾತೃ ಪಿತೃ ದೋಷ ಹಾಗೂ ಗುರು ದೋಷ ಪ್ರಮುಖವಾದವು.
ಈ ಎರಡು ಶಾಪಗಳಿಂದಾಗುವ ಪರಿಣಾಮವೇನು? ಎಂಬ ಮಾಹಿತಿ ಇಲ್ಲಿದೆ..
ತಂದೆ–ತಾಯಿ ಶಾಪ:
ಇದು ಅತ್ಯಂತ ಕಠಿಣವಾದ ಶಾಪ ಎಂದು ಜ್ಯೋತಿಷ್ಯ ಹೇಳುತ್ತದೆ. ಯಾವ ಮಕ್ಕಳು ಜವಾಬ್ದಾರಿ ಬಂದ ಮೇಲೆ ತಮ್ಮ ತಂದೆ ತಾಯಿಗಳನ್ನು ನೋಡಿಕೊಳ್ಳುವುದಿಲ್ಲವೋ ಅವರು ಈ ಶಾಪಕ್ಕೆ ಗುರಿಯಾಗುವ ಸಾಧ್ಯತೆ ಇದೆ.
ವೃದ್ಧಾಪ್ಯದ ತಂದೆ ತಾಯಿಗಳು ಬದುಕಿರುವಾಗ ಮಕ್ಕಳು ಬೇರೆ ಮನೆ ಮಾಡಿಕೊಂಡು ಅವರನ್ನು ನಿರ್ಲಕ್ಷ ಮಾಡುವವರು.
ತಂದೆ ತಾಯಿಗಳ ಮನಸ್ಸು ನೋಯಿಸಿದ ಮಕ್ಕಳಿಗೆ ಮಾತೃಪಿತೃ ಶಾಪ ತಗಲುವ ಸಾಧ್ಯತೆ ಇರುತ್ತದೆ.
ಮನೆಗೆ ಬಂದ ಸೊಸೆಯಂದಿರು ತಂದೆ ತಾಯಿಯರನ್ನು ಬೇರ್ಪಡಿಸಿದರೆ ಶಾಪ ದೊರೆಯಬಹುದು.
ತಂದೆ ತಾಯಿಯರ ಅಂತಿಮ ಕಾರ್ಯ ಮಾಡದ ಮಕ್ಕಳು ಕೂಡ ಈ ಶಾಪಕ್ಕೆ ಒಳಗಾಗಬಹುದು.
ಈ ದೋಷದ ಪರಿಣಾಮವೇನು?
ಈ ದೋಷ ಇದ್ದರೆ ಮನೆಯು ಏಳಿಗೆಯಾಗುವುದಿಲ್ಲ. ಮಕ್ಕಳ ಏಳಿಗೆಯಾಗುವುದಿಲ್ಲ. ಸಂತಾನ ದೋಷ ಪ್ರಾಪ್ತಿಯಾಗಬಹುದು. ನೆಮ್ಮದಿ ಇರದೆ ದಾರಿದ್ರ್ಯಕ್ಕೆ ಒಳಗಾಗಬಹುದು.
ಗುರುಶಾಪ:
‘ಒಂದಕ್ಷರಂ ಕಲಿಸಿದಾತಂ ಗುರು‘ ಎಂಬ ಪ್ರಸಿದ್ಧ ಮಾತಿದೆ. ಗುರುಗಳನ್ನು ಪೂಜನೀಯ ಸ್ಥಾನದಲ್ಲಿಟ್ಟು ಪೂಜಿಸಬೇಕು. ಒಂದು ವೇಳೆ ತಿರಸ್ಕರಿಸಿದರೆ ಗುರುಶಾಪಕ್ಕೆ ಒಳಗಾಗಬಹುದೆಂದು ಜ್ಯೋತಿಷ್ಯದ ಪ್ರಕಾರ ನಂಬಲಾಗಿದೆ.
ಗುರುವಿನಿಂದ ಮಂತ್ರ ದೀಕ್ಷೆ ಪಡೆದು ದಕ್ಷಿಣೆ ಕೊಡದಿದ್ದರೆ ದೋಷಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.
ಗುರುವಿನ ನಿಂದನೆ ಮಾಡುವು ಗುರು ದೋಷ ಉಂಟಾಗಬಹುದು.
ಗುರುವಿನ ಅನುಗ್ರಹ ಪಡೆದು ಗುರುವಾಕ್ಯ ಪಾಲಿಸದೆ ಇರುವುದು.
ಗುರುವಿನಿಂದ ವಿದ್ಯೆ ಕಲಿತು ಗುರುವಿಗೆ ತಿರುಮಂತ್ರ ಹಾಕುವುದು.
ಗುರುಗಳು ನೊಂದುಕೊಳ್ಳುವಂತೆ ಮಾಡುವುದು.
ಗುರುವಿನಿಂದ ಮಂತ್ರೋಪದೇಶ, ದೀಕ್ಷೆ ಪಡೆದು ಕೆಟ್ಟ ಕಾರ್ಯಗಳಿಗೆ ಉಪಯೋಗಿಸುವುದು.
ಈ ದೋಷದ ಪರಿಣಾಮವೇನು?
ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುವಲ್ಲಿ ವಿಫಲವಾಗುತ್ತಾರೆ. ಸಂತಾನ ದೋಷ ಪ್ರಾಪ್ತಿಯಾಗಬಹುದು ಎನ್ನಲಾಗಿದೆ. ಮಕ್ಕಳಿಗೆ ವಿದ್ಯೆಯಲ್ಲಿ ನಿರಾಸಕ್ತಿ ಮೂಡುತ್ತದೆ. ಅಗೋಚರ ಕಾಯಿಲೆಗಳಿಗೆ ತುತ್ತಾಗುವ ಸಂಭವವಿರುತ್ತದೆ. ವಂಶವು ಅಧಃಪತನವಾಗುವ ಸಾಧ್ಯತೆ ಇದೆ ಎಂದು ನಂಬಲಾಗಿದೆ.
ನಾವು ನಿತ್ಯ ಮಾಡುವ ಕೆಲಸ ಕಾರ್ಯಗಳು ನಮ್ಮ ಕರ್ಮ ಫಲಗಳನ್ನು ಆಧರಿಸಿರುತ್ತವೆ. ಆದ್ದರಿಂದ ಸಾಧ್ಯವಾದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರಯತ್ನಿಸುವುದು ಒಳ್ಳೆಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.