
ಎಲ್ಲಾ ರೀತಿಯ ಮನೋ ವ್ಯಾಧಿಗಳಿಗೆ ಚಂದ್ರನೇ ಖಳ ನಾಯಕನಾಗಿರುತ್ತಾನೆ ಎಂದರೆ ಅತಿಶಯೋಕ್ತಿಯ ಮಾತೇನಲ್ಲ. ಮನುಷ್ಯನಿಗೆ ವ್ಯಕ್ತಿತ್ವದ ಮನೋಹರ ವಿಕಸನಕ್ಕೆ ದಾರಿ ಮಾಡಿ ಕೊಡುವವನೂ ಚಂದ್ರನಾಗಿರುತ್ತಾನೆ. ತುಸು ಅಳತೆ ತಪ್ಪಿದರೆ ಪಾತಾಳಕ್ಕೆ ತಳ್ಳುತ್ತಾನೆ. ಅಳತೆ ತಪ್ಪಿದರೆ ಸದಾ ಒಂದಿಲ್ಲೊಂದು ತೊಂದರೆಯನ್ನು ಕಟ್ಟಿಟ್ಟು ವ್ಯಥೆಗೆ ಬೇಕಾದ ದಾರಿಯನ್ನು ಪ್ರತಿ ದಿನವೂ ನಿರ್ಮಿಸುತ್ತಲೇ ಇರುತ್ತಾನೆ.
ನಮ್ಮದೇ ಹುಬ್ಬಳ್ಳಿಯ ಕಡೆಯ ಹೆಣ್ಣು ಮಗಳು ಇಂಜಿನಿಯರಿಂಗ್ ಮುಗಿಸಿ ಒಳ್ಳೆಯ ಸಂಬಳದ ಕೆಲಸ ಕೂಡಾ ಪಡೆಯುತ್ತ ಸದ್ಯ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇದ್ದಾಳೆ. ಆದರೆ ಏನೋ ಒಂದು ಖಿನ್ನತೆಯಿಂದ ಚಡಪಡಿಸುತ್ತಿದ್ದಾಳೆ.
ಅಂದರೆ ಶಾಂತಿ ಸಮಾಧಾನ ಇರದ ವರ್ತಮಾನದಲ್ಲಿ ದಿನ ನೂಕುತ್ತ ಇದ್ದಾಳೆ. ತನಗೆ ಬೇಕಾದ ರೀತಿಯಲ್ಲಿ ತಾ ನಡೆಯಲು ಸಾಧ್ಯವಿರದ ಕಾರಣಗಳು ಇವಳನ್ನು ಕಾಡುತ್ತಿವೆ. ಹೀಗಿರುವುದೆಲ್ಲಕ್ಕೆ ತನಗೆ ತಾನೇ ಪರಿಹಾರದ ದಾರಿಯನ್ನು ಕಂಡುಕೊಳ್ಳಲು ವಿಫಲವಾಗುತ್ತಿರುವ ವಿಚಾರಗಳಿಂದಲೂ ಇವಳು ಪರದಾಡತೊಡಗಿದ್ದಾಳೆ. ತಾನು ಅನ್ಯರಿಗಿಂತ ಒಳ್ಳೆಯ ಕೆಲಸ ಪಡೆಯಲು ಸಫಲಳಾಗಿದ್ದೇನೆ ಎಂಬುದನ್ನು ಈಕೆ ಯೋಚಿಸುತ್ತಿಲ್ಲ. ಈ ರೀತಿಯ ಕೆಲಸ ಯಾರಿಗೂ ಸಿಗಬಹುದು ಅಲ್ಲವೆ ಎಂದೇ ಯೋಚಿಸುತ್ತಿದ್ದಾಳೆ. ಅವಳದೇ ಆದ ಧಾಟಿಯಲ್ಲಿ ತಾನು ಒಂಟಿಯಾಗಿ ಹೋದೆ ಎಂಬ ಅಸಮಾಧಾನ ಅವಳಿಂದ ಸದಾ ಪ್ರಕಟಗೊಳ್ಳುತ್ತಲೇ ಇದೆ. ಈ ದೇಶದಲ್ಲಿ ನನ್ನದು ಶುಷ್ಕ ಜೀವನ. ನಾನು ಜೀವನದಲ್ಲಿ ಸೋತು ಹೋಗಿದ್ದು ಅತ್ಯಂತ ಸ್ಪಷ್ಟ ಎಂದು ಗೋಳಾಡುತ್ತಿದ್ದಾಳೆ. ಹಾಗಾದರೆ ಯಾಕೆ ಈ ಗೋಳಾಟ? ಸಾಮಾಜಿಕ ಅಥವಾ ಆರ್ಥಿಕ ನೆಲೆಯಲ್ಲಿ ವಿಶ್ಲೇಷಿಸಿ ಹೇಳುವುದಾದರೆ ಇವಳ ಗೋಳಾಟಗಳಿಗೆ ಅರ್ಥವೇ ಇಲ್ಲ. ಹಾಗಾದರೆ ಏನು ಇವಳ ಗೋಳಾಟಗಳು?
ಚಂದ್ರ ಗ್ರಹದ ಮೇಲೆ ಶನಿ ಗ್ರಹದ ಪ್ರಹಾರ
ಯಾರೇ ಇರಲಿ ಅಸೂಯೆ ಪಡಬಹುದಾದ ರೀತಿಯಲ್ಲಿ ಇವಳ ಸಂಬಳವಿದೆ. ಒಳ್ಳೆಯ ಅಂಕ ಪಡೆದು ಪಾಸಾದ ಮ್ಯಾನೇಜ್ಮೆಂಟ್ ಸ್ನಾತಕೋತ್ತರ ಡಿಗ್ರಿ ಇವಳ ಹೆಚ್ಚುಗಾರಿಕೆ. ದೊಡ್ಡ ಕಂಪನಿಯ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಇದ್ದರೂ ಅಂತರಂಗದಲ್ಲಿ ಅಸುಖಿ. ಕಾರಣ ಸುಖವಿರದ ಒಂಟಿತನ. ಸುಖದ ಮನೆಯಾದ ವೃಶ್ಚಿಕ ರಾಶಿಯಲ್ಲಿ ಕುಳಿತಿದೆ ಶನಿ ಗ್ರಹ. ಈ ಮನೆಯ ಯಜಮಾನ ಆಗಿರುವ ಕುಜ ಗ್ರಹ ಕುಟುಂಬ ಸ್ಥಾನವಾದ ಕನ್ಯಾ ರಾಶಿಯಲ್ಲಿ, ಶುಕ್ರ ಗ್ರಹದ ಜತೆ ಕುಳಿತಿದೆ. ಆದರೆ ಶುಕ್ರ ಗ್ರಹಕ್ಕೆ ನೀಚ ಸ್ಥಿತಿ ಇದೆ. ನೀಚ ಸ್ಥಿತಿ ಅಂದರೆ, ಸ್ವತಃ ತನ್ನದಾದ ಒಳ ವಲಯದ ಅಮೂಲ್ಯ ಶಕ್ತಿಯ ಪ್ರಮಾಣವನ್ನು ಪಡೆದು ಗೆಲ್ಲಲು ವಿಫಲವಾಗುವ ದುರ್ಬಲ ಸ್ಥಿತಿ. ಇಂತಹ ನೀಚ ಶುಕ್ರ ಗ್ರಹ, ಈ ಹೆಣ್ಣು ಮಗಳ ಜನ್ಮ ಕುಂಡಲಿಯ ಕರ್ಮ ಸ್ಥಾನದ ಯಜಮಾನನೂ ಆಗಿದ್ದಾನೆ. ಸುಖ ಹಾಗೂ ಭಾಗ್ಯದ ಮನೆಗಳ ಯಜಮಾನನಾಗಿ ಈ ಹೆಣ್ಣು ಮಗಳ ಜನ್ಮ ಕುಂಡಲಿಯ ಪಾಲಿಗೆ ಸ್ಪಷ್ಟವಾಗಿ ಯೋಗಕಾರಕನೇ ಆಗಿದ್ದಾನೆ. ಇಷ್ಟೇ ಸಾಲದು ಎಂಬಂತೆ ಮಹತ್ವದ ಶುಕ್ರ ಗ್ರಹದ ಜತೆಗೆ ಇದ್ದು ಭಾರೀ ತೂಕದ ಧರ್ಮ ಕರ್ಮಾಧಿಪ ಯೋಗದ ಚೌಕಟ್ಟಿನಲ್ಲಿ ಅತ್ಯಂತ ಬಲಿಷ್ಠವಾದ ಸ್ಥಿತಿಯನ್ನು ಸಂಪದಿಸಿದ್ದಾನೆ.
ಇಷ್ಟೆಲ್ಲ ಇದ್ದರೂ ಈ ಹೆಣ್ಣು ಮಗಳು ಅಂತರಂಗದಲ್ಲಿ ಅಸುಖಿಯಾಗಿದ್ದಾಳೆ. ಇದು ಒಂದು ವಿಪರ್ಯಾಸವೇ ಸರಿ. ಕಾರಣ ಸರಳ. ಶನಿ ಗ್ರಹದ ಕೆಟ್ಟ ದೃಷ್ಟಿಗೆ ಒಳಗಾದ ಚಂದ್ರ ಗ್ರಹ ಕೆಲಸದ ಸ್ಥಳದಲ್ಲಿ ಇವಳನ್ನು ಒಂಟಿಯಾಗಿಸಿದ್ದಾನೆ. ಹೀಗಾಗಿ ಇವಳಿಗೆ ದೊಡ್ಡದೇ ಹುದ್ದೆಯ ಕೆಲಸವಿದ್ದರೂ ಖಿನ್ನತೆಯ ಕೆನೆಗಳಿವೆ. ಈ ಖಿನ್ನತೆಯ ಎಳೆಗಳನ್ನು ನೇಯ್ದು ಚಂದ್ರ ಗ್ರಹವನ್ನು ಪರದಾಡಿಸುತ್ತಿರುವುದು ಶನಿ ಗ್ರಹವೇ ಆಗಿದೆ. ಹಾಗೂ ಈ ಪರದಾಟದ ಸ್ಥಾಪಿತ ಸ್ಥಿತಿಗೆ ಬೇಕಾದ ಮೂಲ ದ್ರವ್ಯ (ನೀಚತ್ವದ ವಿನ್ಯಾಸ ಪಡೆದ ಶುಕ್ರ ಗ್ರಹ,ಕೆಲಸ ಹಾಗೂ ಸಂಬಳದ ಕಾರಣ ಮಾಡಿಕೊಂಡು ತನ್ನ ನೇರ ವೈರಿಯೇ ಆದರೂ ಕುಜನ ಜತೆ ಸೇರಿ ದೊಡ್ಡ ಕೆಲಸ ಕೊಟ್ಟ ಸೌಭಾಗ್ಯವನ್ನು ಈ ಹೆಣ್ಣು ಮಗಳಿಗೆ ಕೊಟ್ಟಿದ್ದರೂ) ಕುಜ ಹಾಗೂ ಶುಕ್ರ ಗ್ರಹಗಳ ಮೂಲಕವಾದ ಬಹು ದೊಡ್ಡ ರಾಜ ಯೋಗದ ಒಳಗಿನ ವಿಷಕಾರಕ ನಿಕ್ಷೇಪದಿಂದಲೇ ಒದಗುತ್ತಿರುತ್ತದೆ. ಹೆಣ್ಣು ಹಾಗೂ ಗಂಡುಗಳ ಕಾಮದ ಹಲವು ಸಕಾರಾತ್ಮಕ ಅಥವಾ ನಕಾರಾತ್ಮಕ ನಡೆಗಳು, (ಯಾವುದೇ ವ್ಯಕ್ತಿ ಇರಲಿ) ಎಲ್ಲರ ಲೈಂಗಿಕ ಬಯಕೆಗಳು (ಕುಜ ಹಾಗೂ ಶುಕ್ರ ಗ್ರಹಗಳ ಸಂಯೋಜನೆಯು ಹೇಗೆ ಇದ್ದಿವೆ ಎಂಬುದನ್ನು ತಿಳಿದೇ ವಿಶ್ಲೇಷಣೆ ಆಗಬೇಕು.) ಕುಜ ಹಾಗೂ ಶುಕ್ರ ಗ್ರಹ ಆರೋಗ್ಯಕರ ದೃಢೀಕರಣದ ಸೂಕ್ತ ಅಸ್ತಿತ್ವಕ್ಕೆ ಹೊಂದಿಕೊಂಡೇ ಇರುತ್ತವೆ.
ಈಗ ಚಂದ್ರನ ಸ್ಥಿತಿ ಈ ಹೆಣ್ಣು ಮಗಳ ಜಾತಕ ಕುಂಡಲಿಯಲ್ಲಿ ಹಲವು ತರದ ದೌರ್ಬಲ್ಯ ಪಡೆದಿರುವುದರಿಂದ,ಲೈಂಗಿಕ ಕಾಮನೆಗಳ ಸೂಕ್ಷ್ಮಗಳು ಇವಳನ್ನು ಶನಿ ಗ್ರಹ ಪ್ರೇರಿತವಾದ ಹಿಂಸೆಯಲ್ಲಿ ಮುಳುಗೇಳಿಸುತ್ತಿರುತ್ತವೆ. ಹೀಗಾಗಿ ಇವಳ ಅಂತರಂಗದ ಕ್ಷೋಭೆ ಸೂಕ್ತವಾದ ಸಂಗಾತಿಯೇ ಸಿಗದ ಕಾರಣ, ಖಿನ್ನತೆಗೆ ಪರಿವರ್ತನಗೊಂಡ ಸ್ವರೂಪದಲ್ಲಿ ವ್ಯಕ್ತವಾಗುತ್ತದೆ. ಯಾರ ಜತೆಗೂ ಜೀವನದ ಪಾಡನ್ನು ತಿಳಿಸಿ ಹೇಳಲಾಗದ, ಸುಡು ಕೆಂಡಗಳ ಮೇಲೇ ನಿಲ್ಲುವ ಹಾಗೆ ಮಾಡುತ್ತಿರುತ್ತದೆ. ಪರಸ್ಪರ ವೈರಿಗಳ ಮೂಲಕವಾದ ಅದ್ಭುತ ಯೋಗದ (ಧರ್ಮಕರ್ಮಾಧಿಪ ಯೋಗ) ಕಾರಣ, ಒಳ್ಳೆಯ ಸಂಬಳ ಹಾಗೂ ಸ್ಥಾನಮಾನ ಸಿಕ್ಕಿದರೂ ನೀಗಲಾಗದ ಒಂಟಿತನ ಚೂರಿಯ ಅಲಗೇ ಆಗಿ ಬಿಡುತ್ತದೆ. ಅಂತೂ ಹಲವು ಜಿಣುಕುಗಳಲ್ಲಿ ಬಂಧಿಯಾದ ಚಂದ್ರ ಗ್ರಹ ಮನೋ ಮಂಡಲದ ಸುತ್ತ ಬಾಧೆ ಕೊಡುತ್ತ.. ಒಟ್ಟಿನಲ್ಲಿ ದಟ್ಟ ಖಿನ್ನತೆಗೆ ದೂಡುತ್ತದೆ. ಹಾಗೆಂದು ಕ್ಷಣ ಹೊತ್ತ ಅವಧಿಯ ದೇಹ ಸುಖಕ್ಕಾಗಿ ಯಾರದೋ ಜತೆ ತೆಕ್ಕೆಗೊಪ್ಪಿಸುವ ಸ್ವೇಚ್ಛೆಗಾಗಿ ಮುಂದರಿಯದ ಸ್ವಯಂ ನಿಯಂತ್ರಣವೂ ಈ ಹೆಣ್ಣು ಮಗಳ ಸಂಸ್ಕಾರದಲ್ಲಿದೆ.
ಪ್ರಖ್ಯಾತ ಚಲನ ಚಿತ್ರ ನಟಿ ಹಾಗೂ ಖಿನ್ನತೆ
ಭಾರತೀಯ ಚಿತ್ರರಂಗದ ಖ್ಯಾತ ನಟಿಯ ವೇದನೆ ಹಾಗೂ ಅಳಲನ್ನು ಅವಳ ಕುರಿತಾಗಿ ಮಾಧ್ಯಮ ಸಮೂಹಗಳು ಕೆಲ ವರ್ಷಗಳ ಹಿಂದೆ ಬಿತ್ತರಿಸುತ್ತಿದ್ದ ವಿಷಯಗಳ ಮೂಲಕ ನಾವು ಕೇಳಿಸಿಕೊಂಡಿದ್ದೇವೆ. ತನ್ನ ಸೌಂದರ್ಯ ಹಾಗೂ ಮೋಹಕತೆಯಿಂದಾಗಿ ಅಗಾಧವಾದ ಅಭಿಮಾನಿಗಳ ಗುಂಪನ್ನೂ,ಜನಪ್ರಿಯತೆಯನ್ನು ಪಡೆದ ಈ ನಟಿ ತಾನುಅನುಭವಿಸುತ್ತಿರುವ ಖಿನ್ನತೆಯ ಬಗ್ಗೆ ಮಾಧ್ಯಮಗಳಲ್ಲಿ ದುಃಖ ಹಂಚಿಕೊಂಡಿದ್ದನ್ನು ನಾವು ಓದಿ, ಕೇಳಿ ತಿಳಿದಿದ್ದೇವೆ. ಸದ್ಯ ಈಗ ಮದುವೆ ಕೂಡಾ ಆಗಿ ಮಗುವನ್ನೂ ಪಡೆದು ಖುಷಿಯ ತಾಯ್ತನ ಹೊಂದಿ ಸಿನಿಮಾ ಇಂಡಸ್ಟ್ರಿಯಲ್ಲಿನ ಖ್ಯಾತಿಯ ಕಾರಣದ ನೆಮ್ಮದಿಯನ್ನೂ ಪಡೆದಿರುವ ಗ್ರಹಿಕೆ ನಮಗೆ ಕಾಣಿಸುತ್ತಿದೆ. ಈ ನಟಿಯ ಜಾತಕ ಕುಂಡಲಿಯಲ್ಲಿ ಕೂಡಾ ಅಪಾರವಾದ ಧನ ಸಂಚಯನ ಚಂದ್ರ ಹಾಗೂ ಕುಜ ಗ್ರಹಗಳ ಮೂಲಕವಾಗಿ ಚೆನ್ನಾಗಿಯೇ ಗೋಚರಿಸುತ್ತಿದೆ. ಆದರೆ ಕೇತು ಗ್ರಹ ಮುಖೇನವಾದ ಚಂದ್ರನ ಮಂದ ಕಾಂತಿ ಹಾಗೂ ಸೂರ್ಯ ಶಾಖವು ಶುಕ್ರನ ಬೇಗುದಿಗೆ ಕಾರಣವಾಗಿ(ಹಲವರ ಜತೆ ಪ್ರೇಮದ ಸಂವೇದನೆ ವಿಷಯವಾಗಿ) ಬಿಕ್ಕಳಿಕೆಗಳು ಹಾಗೂ ಖಿನ್ನತೆಯ ಕಾರ್ಮೋಡಗಳಿದ್ದವು. ಈ ಕಾರ್ಮೋಡಗಳ ದೆಸೆಯಿಂದಾಗಿ ಹತ್ತಿರ,ತೀರಾ ಹತ್ತಿರಕ್ಕೇ ಬಂದ ಗೆಳೆಯರು, ಕ್ರಮೇಣ ‘ಇಷ್ಟೇನಾ ಇವರು?’ ಎಂಬ ಪ್ರಶ್ನೆ ಎಬ್ಬಿಸುತ್ತಿದ್ದರು.ಸಂಭ್ರಮದಿಂದ ಶುರುಗೊಂಡ ಗೆಳೆತನ ಹತಾಶೆಯ ಸೋಲಲ್ಲಿ ಮುಕ್ತಾಯ ಪಡೆಯುತ್ತಿತ್ತು.
ಜೀವನದ ವಿಚಾರವಾಗಿ ಅನೇಕ ಬಾರಿ ‘ಹಿಡಿದ ಎಲ್ಲಾ ದಾರಿಗಳೂ ಬಾಯ್ತೆರೆದ ಕಣಿವೆಗೆ ತಳ್ಳುತ್ತಿವೆಯಲ್ಲ ದೇವರೆ?’ ಚೀರಾಡುತ್ತಿದ್ದಳು. ಒಪ್ಪಿಕೊಂಡು, ಸಹಿ ಹಾಕಿದ ಸಿನಿಮಾಗಳಿಗಾಗಿ ಹೋಗಲೇಬೇಕಿತ್ತು ಕೆಲಸಕ್ಕೆ. ತನ್ನ ಮನಸ್ಸು ರಣ ಖಿನ್ನತೆಯಿಂದ ಬಳಲಿಸುತ್ತಿದೆ. ಬಿಟ್ಟುಬಿಡಿ ನನ್ನನ್ನು ಇಂದಿನ ಮಟ್ಟಿಗೆ ಎಂದು ವಿನಂತಿಸುವುದಕ್ಕೆ ಸಾಧ್ಯವೇ ಇರಲಿಲ್ಲ. ಇನ್ನೇನಿದೆ, ಜೀವನದ ಅಂತ್ಯವೇ ಇದು? ಎಂದು ಅವಳಿಗೆ ಹೆದರಿಕೆಯೂ ಆಗುತ್ತಿತ್ತು.
ಒಟ್ಟಿನಲ್ಲಿ ಖಿನ್ನತೆಗೆ ಹಲವು ಮುಖಗಳಿವೆ.ಪ್ರೇಮ ಅಥವಾ ಕಾಮದ ವಿಚಾರ ಒಂದಾದರೆ. ಇನ್ನೂ ಇತರ ಸಾಮಾಜಿಕ, ಆರ್ಥಿಕ, ಸಾಂಸಾರಿಕ ಕಾರಣಗಳ ಹದಿ ಕಟ್ಟಿರುತ್ತವೆ. ಯಾವ ಕಾರಣಗಳೇ ಇದ್ದರೂ ಚಂದ್ರ ಗ್ರಹ, ಈ ಎಲ್ಲ ಕಾರಣಗಳ ಮೂಲಕ ಖಿನ್ನತೆಯ ಬೇರುಗಳಿಗೆ ಬೆಂಬಲ ನೀಡುವ ದುಷ್ಟ ಖಳ ನಾಯಕನ ಪಾತ್ರವನ್ನೇ ನಿರ್ವಹಿಸುತ್ತದೆ. ಉಳಿದ ಗ್ರಹಗಳೂ ಸಾಥ್ ನೀಡಬಲ್ಲವು ಇದಕ್ಕೆ.