ADVERTISEMENT

ಕುತೂಹಲ ಹುಟ್ಟಿಸಿರುವ ಟಾಟಾ ಹ್ಯಾರಿಯರ್

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 19:45 IST
Last Updated 14 ನವೆಂಬರ್ 2018, 19:45 IST
a
a   

ಟಾಟಾ ಮೋಟಾರ್ಸ್ ಅವರ ಹ್ಯಾರಿಯರ್ ಎಸ್‌ಯುವಿ ಮುಂದಿನ ವರ್ಷದ ಜನವರಿಯಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಹಲವು ಮೊದಲುಗಳನ್ನು ಒಳಗೊಂಡಿರುವ ಈ ಎಸ್‌ಯುವಿ ಭಾರತೀಯ ಎಸ್‌ಯುವಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಪ್ರತಿಷ್ಠಿತ ಲ್ಯಾಂಡ್‌ ರೋವರ್ ಕಂಪನಿಯ ಡಿಸ್ಕವರಿ ಸ್ಫೋರ್ಟ್ಸ್ ಎಸ್‌ಯುವಿಯ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡೇ ಹ್ಯಾರಿಯರ್ ಅನ್ನು ವಿನ್ಯಾಸ ಮಾಡಲಾಗಿದೆ.

ಎಸ್‌ಯುವಿಗಳ ವಿನ್ಯಾಸದ ಭಾಷೆಯನ್ನೇ ಬದಲಿಸಿದಂತೆ ಹ್ಯಾರಿಯರ್‌ನ ಹೊರನೋಟವಿದೆ. ದೊಡ್ಡ ಚಕ್ರಗಳು, ಮೊನಚಾದ ಬಾಡಿ ಪ್ಯಾನಲ್‌ಗಳು, ದೊಡ್ಡ ಮತ್ತು ಹುಬ್ಬಿನಂತೆ ಕಾಣುಡ ಡೇ ಟೈಂ ರನ್ನಿಂಗ್ ಲೈಟ್, ದೊಡ್ಡ ಗ್ರಿಲ್ ಹ್ಯಾರಿಯರ್‌ಗೆ ಒರಟು ಮತ್ತು ಗಡಸು ನೋಟ ನೀಡಿವೆ.

ಇನ್ನು ಒಳಾಂಗಣವೂ ಪ್ರೀಮಿಯಂ ಆಗಿದೆ. ಐಷಾರಾಮಿ ಎಸ್‌ಯುವಿಗಳಲ್ಲಿ ಇರುವಂತಹ ವಿನ್ಯಾಸ, ಸವಲತ್ತುಗಳು ಹ್ಯಾರಿಯರ್‌ನಲ್ಲಿ ಇರಲಿವೆ. ಪ್ರತಿ ಸೀಟಿನಲ್ಲೂ ಪ್ರತ್ಯೇಕ ಚಾರ್ಜಿಂಗ್ ಪಾಯಿಂಟ್, ಅತ್ಯುತ್ತಮ ಲೆದರ್ ಸೀಟುಗಳು, ಹರ್ಮಾನ್ ಮ್ಯೂಸಿಕ್ ಸಿಸ್ಟಂ ಇರುತ್ತವೆ. ಮೂಲಗಳ ಪ್ರಕಾರ ಹ್ಯಾರಿಯರ್ ನಲ್ಲಿ 8.8 ಇಂಚಿನ ಟಚ್‌ಸ್ಕ್ರೀನ್ ಇರಲಿದೆ. ರೇಂಜ್ ರೋವರ್ ವೆಲಾರ್‌ನಲ್ಲಿ ಬಳಸಿರುವ ಟಚ್ ಸ್ಕ್ರೀನ್ ಅನ್ನೇ ಇಲ್ಲಿಯೂ ಬಳಸಲಾಗುತ್ತದೆ. ಇದು ನಿಜವೇ ಆಗಿದ್ದಲ್ಲಿ ಅಷ್ಟು ದೊಡ್ಡ, ಅತ್ಯಾಧುನಿಕ, ಐಷಾರಾಮ ಮತ್ತು ದುಬಾರಿ ಇನ್ಫೊಟೈನ್‌ಮೆಂಟ್ ಸಿಸ್ಟಂ ಭಾರತದಲ್ಲಿ ಮಾರಾಟವಾಗುತ್ತಿರುವ ಬೇರೆ ಯಾವ ಎಂಟ್ರಿ ಪ್ರೀಮಿಯಂ ಎಸ್‌ಯುವಿಯಲ್ಲೂ ಇರುವುದಿಲ್ಲ. ಟಾಟಾ ಮೋಟಾರ್ಸ್ ಈಗ ತನ್ನ ಕಾರುಗಳಲ್ಲಿ ಬಳಸುತ್ತಿರುವ ಹರ್ಮಾನ್ ಮ್ಯೂಸಿಕ್ ಸಿಸ್ಟಂಗೆ ಸರಿಸಾಟಿಯೇ ಇಲ್ಲ ಎಂಬಂತಾಗಿದೆ. ಹ್ಯಾರಿಯರ್‌ನಲ್ಲಿ ಇದು ಮತ್ತಷ್ಟು ಉತ್ಕೃಷ್ಟಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ADVERTISEMENT

ಹ್ಯಾರಿಯರ್‌ನಲ್ಲಿ ಹೊರ ಕ್ರಯೋಟೆಕ್ ಎಂಜಿನ್ ಬಳಸಲಾಗಿದೆ ಎಂದು ಟಾಟಾ ಮೋಟಾರ್ಸ್ ಅಧಿಕೃತವಾಗಿಯೇ ಹೇಳಿದೆ.ಈ ಎಂಜಿನ್ ಅನ್ನು ಟಾಟಾ ಮೋಟಾರ್ಸ್ ಸ್ವತಃ ತಾನೇ ಅಭಿವೃದ್ಧಿಪಡಿಸಿದೆಯೇ ಅಥವಾ ಫಿಯೆಟ್‌ ನಿಂದ ಎಂಜಿನ್ ಎರವಲು ಪಡೆದಿದೆಯೇ ಎಂಬುದುರ ಬಗ್ಗೆ ಮಾಹಿತಿ ನೀಡಲು ಕಂಪನಿ ನಿರಾಕರಿಸಿದೆ. ಫಿಯೆಟ್ ಎಂಜಿನ್ ಬಳಸಿರುವುದು ನಿಜವೇ ಆಗಿದ್ದಲ್ಲಿ ಅದು ಲಾಭವೇ ಆಗಲಿದೆ. ಏಕೆಂದರೆ ಮೂಲಗಳ ಪ್ರಕಾರ ಜೀಪ್ ಕಂಪಾಸ್ ನಲ್ಲಿ ಇರುವ 2 ಲೀಟರ್ ಮಲ್ಟಿಜೆಟ್ ಎಂಜಿನ್ ಅನ್ನೇ ಹ್ಯಾರಿಯರ್‌ನಲ್ಲಿ ಬಳಸಲಾಗಿದೆ. ಈ ಎಂಜಿನ್ ಹೆಚ್ಚು ನಯವಾಗಿದ್ದು, ಶಕ್ತಿಶಾಲಿಯೂ ಹೌದು, ಇಂಧನ ಕ್ಷಮತೆಯೂ ಹೆಚ್ಚು. ಅದರ ಎಲ್ಲಾ ಲಾಭ ಹ್ಯಾರಿಯರ್‌ಗೆ ವರ್ಗವಾಗಲಿದೆ. ಎಂಜಿನ್‌ನಲ್ಲಿ ವಿವಿಧ ಡ್ರೈವ್ ಮೋಡ್‌ಗಳು ಲಭ್ಯವಿರಲಿವೆ.

ಈ ಎಂಜಿನ್ 140 ರಿಂದ 170 ಬಿಎಚ್‌ಪಿಯಷ್ಟು ಶಕ್ತಿ ಉತ್ಪಾದಿಸಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಈ ಎಂಜಿನ್‌ಗೆ 6 ಗಿಯರ್‌ಗಳ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಮತ್ತು 6 ಗಿಯರ್‌ಗಳ ಆಟೊ ಮ್ಯಾಟಿಕ್ ಟ್ರಾನ್ಸ್‌ಮಿಷನ್ ಬಳಸಲಾಗುತ್ತಿದೆ. ಆಟೊಮ್ಯಾಟಿಕ್ ಗಿಯರ್ ಬಾಕ್ಸ್ ಅನ್ನು ಹುಂಡೈನ ಟಕ್ಸಾನ್ ಎಸ್‌ಯುವಿಯಿಂದ ಎರವಲು ಪಡೆಯಲಾಗಿದೆ. ಇನ್ನು ಲ್ಯಾಂಡ್ ರೋವರ್ ಎಸ್‌ಯುವಿಗಳಲ್ಲಿ ಇರುವಂತೆ ಟೆರೇನ್ ರೆಸ್ಪಾನ್ಸ್ ಸಿಸ್ಟಂ ಅನ್ನು ಹ್ಯಾರಿಯರ್‌ಗೆಂದೇ ಹೊಸತಾಗಿ ಅಭಿವೃದ್ಧಿಪಡಿಸಲಾಗಿದೆ.

ಒಟ್ಟಿನಲ್ಲಿ ಒಂದು ಎಸ್‌ಯುವಿಗೆ ಇರಬೇಕಾದ ಎಲ್ಲಾ ಅರ್ಹತೆಗಳ ಮಾನದಂಡ ವನ್ನು ಸ್ವಲ್ಪ ಮೇಲಕ್ಕೆತ್ತುವ ಕೆಲಸವನ್ನು ಹ್ಯಾರಿಯರ್ ಮಾಡಲಿದೆ ಎಂದು ಟಾಟಾ ಮೋಟರ್ಸ್ ಹೇಳಿದೆ. ಅದು ಎಷ್ಟು ನಿಜವಾಗಲಿದೆ ಎಂದು ತಿಳಿಯಲು ಮುಂದಿನ ವರ್ಷದ ಜನವರಿವರೆಗೂ ಕಾಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.