ADVERTISEMENT

₹1 ಕೋಟಿ ಕಾರು ಖರೀದಿಸಿದ ಬಾಲಕಿ!

ಖ್ಯಾತನಾಮರ ನೆಚ್ಚಿನ ಮೇಕಪ್ ಆರ್ಟಿಸ್ಟ್‌ l ಕಿರಿಯ ವಯಸ್ಸಿಗೇ ಅಂತರರಾಷ್ಟ್ರೀಯ ಪ್ರಶಸ್ತಿಗಳು

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 19:30 IST
Last Updated 10 ಜುಲೈ 2019, 19:30 IST
ನಟ್ಹಾನಸ್
ನಟ್ಹಾನಸ್   

ಜನ್ಮದಿನ ಬಂತೆಂದರೆ ಸಾಕು, ಮಕ್ಕಳೆಲ್ಲಾ ಅಪ್ಪ–ಅಮ್ಮನನ್ನು ಕಾಡಿಸಿ ತಮಗಿಷ್ಟವಾದ ಉಡುಗೊರೆಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಥಾಯ್ಲೆಂಡ್‌ನ ನಾಟ್ಹಾನಸ್‌ ಎಂಬ ಬಾಲಕಿ ಮಾತ್ರ ತನ್ನ ಜನುಮ ದಿನಕ್ಕೆ ತಾನೇ ₹1 ಕೋಟಿ ಮೌಲ್ಯದ ಬಿಎಂಡಬ್ಲ್ಯೂ ಕಾರು ಖರೀದಿಸಿ ವಿಶ್ವದ ಗಮನ ಸೆಳೆದಿದ್ದಾಳೆ. ಪುಟ್ಟ ಬಾಲಕಿ ಕೋಟಿ ರೂಪಾಯಿ ಸಂಪಾದಿಸಿದ್ದು ಹೇಗೆ ಎಂಬ ಆಲೋಚನೆ ಮೂಡುವುದು ಸಹಜ. ಈ ಕುತೂಹಲ ತಣಿಸುವ ಮಾಹಿತಿ ಇಲ್ಲಿದೆ.

ಏಳು ವರ್ಷ ತುಂಬುವ ಹೊತ್ತಿಗೆನಾಟ್ಹಾನಸ್ ಮೇಕಪ್ ಮಾಡುವುದನ್ನು ಆಟವಾಗಿ ಭಾವಿಸಿ, ತಾಯಿಯ ಮುಖಕ್ಕೆ ಬಣ್ಣ ಬಳಿಯುತ್ತಿದ್ದಳು. ಹುಡುಗಾಟಕ್ಕೆ ಆರಂಭಿಸಿದ ಈ ಪ್ರವೃತ್ತಿ ಬಾಲಕಿಯ ಜೀವನವನ್ನೇ ಬದಲಿಸಿತು. ತಾಯಿ ಅಂದ ಹೆಚ್ಚಿಸಿದ ಅವಳ ಕೈಚಳಕ ಕಂಡು ಬಂಧು–ಮಿತ್ರರಿಗೆಲ್ಲಾ ಅಚ್ಚರಿಯಾಯಿತು. ಅವಳ ಈ ಕೆಲಸಕ್ಕೆ ಹಲವರಿಂದ ಮೆಚ್ಚುಗೆ ಮಾತುಗಳು ವ್ಯಕ್ತವಾದವು.

ಈ ಮಾತುಗಳಿಂದಾಗಿ ಹೋದಲ್ಲಿ, ಬಂದಲೆಲ್ಲಾ ಮೇಕಪ್ ಮಾಡುವಂತೆ ಕೇಳಿಕೊಳ್ಳುವವರ ಸಂಖ್ಯೆ ಹೆಚ್ಚಾಗತೊಡಗಿತು. ಮದುವೆ, ಸಮಾರಂಭಗಳಿಗೆ ಹೋದಾಗಲೆಲ್ಲಾ ತಿಳಿದವರು ಆ ಬಾಲಕಿಯಿಂದ ಮೇಕಪ್ ಮಾಡಿಸಿಕೊಳ್ಳುತ್ತಿದ್ದರು. ಇದರಿಂದ ಮತ್ತಷ್ಟು ಪ್ರಾವಿಣ್ಯತೆ ಸಾಧಿಸುತ್ತಾ ಹೋದಳು. ಹಲವು ಕೋರ್ಸ್‌ಗಳನ್ನು ಪೂರೈಸಿದಳು. ತನ್ನ ನೈಪುಣ್ಯದ ಮೂಲಕ ಜನರ ಅಂದ ಹೆಚ್ಚಿಸುವ ಕಲೆ ಕರಗತವಾಯಿತು.

ADVERTISEMENT

ನಿತ್ಯ ಹೊಸ ವಿಧಾನವನ್ನು ಕಂಡುಕೊಳ್ಳುತ್ತಿದ್ದಳು. ಹೊಸ ತಂತ್ರಗಳನ್ನು ಪಾಲಿಸುತ್ತಿದ್ದಳು. ಇದರಿಂದ ಈ ಬಾಲಕಿಯ ಬಗ್ಗೆ ಊರಿಗೆಲ್ಲಾ ಮಾಹಿತಿ ತಿಳಿಯಿತು. ಇದರಿಂದ ಪ್ರೇರಣೆ ಪಡೆದು, ಯೂಟ್ಯೂಬ್ ಚಾನೆಲ್ ಆರಂಭಿಸಿ. ಆನ್‌ಲೈನ್‌ನಲ್ಲಿ ಮೇಕಪ್ ಮಾಡುವ ಪಾಠಗಳನ್ನು ಶುರು ಮಾಡಿದಳು.

ಅತಿಕಡಿಮೆ ಸಮಯದಲ್ಲೇ ಚಾನೆಲ್‌ನ ವೀಕ್ಷಕರ ಸಂಖ್ಯೆ ಹೆಚ್ಚಾಯಿತು. ಲೈಕ್‌ಗಳು, ಷೇರ್‌ಗಳು ಹೆಚ್ಚಾಗತೊಡಗಿದವು. ಇದೇ ಪ್ರೇರಣೆ ಪಡೆದು ಫೇಸ್‌ಬುಕ್ ಪುಟವನ್ನೂ ತೆರೆದಳು. ಪ್ರಸ್ತುತ ಸುಮಾರು 8.5 ಲಕ್ಷ ಮಂದಿ ಈ ಪುಟವನ್ನು ಅನುಸರಿಸುತ್ತಿದ್ದಾರೆ.

ಈಗ ಆ ಬಾಲಕಿ ವಿಶ್ವದ ಖ್ಯಾತ ಮೇಕಪ್ ಆರ್ಟಿಸ್ಟ್ ಆಗಿದ್ದಾಳೆ. ಖ್ಯಾತನಾಮರ ಮುಖಕ್ಕೆ ಬಣ್ಣ ಬಳಿಯುವ ಕೆಲಸದಲ್ಲಿ ನಿರತಳಾಗಿದ್ದಾಳೆ. ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.

2018ರಲ್ಲಿ ಲಂಡನ್‌ನಲ್ಲಿ ನಡೆದ ಫ್ಯಾಷನ್‌ ವೀಕ್‌–2018 ಸ್ಪರ್ಧೆಯಲ್ಲಿ ಭಾಗವಹಿಸಿದ ಅತಿ ಕಿರಿಯಳಾಗಿ ದಾಖಲೆಯನ್ನೂ ನಿರ್ಮಿಸಿದ್ದಾಳೆ.

ವಯಸ್ಸಿಗೆ ಮೀರಿದ ಪ್ರತಿಭೆ, ಅದಕ್ಕೂ ಮೀರಿದ ಹೆಸರು ಸಂಪಾದನೆ ಮಾಡಿದ್ದರಿಂದಾಗಿ, ಹಣ ಸಂಪಾದಿಸುವ ಹಲವು ದಾರಿಗಳು ಆ ಬಾಲಕಿಯನ್ನು ಕೈ ಬೀಸಿ ಕರೆಯುತ್ತಿವೆ. ಹೀಗಾಗಿಯೇ ಈಚೆಗಷ್ಟೇ ನಡೆದ ತನ್ನ ಜನುಮದಿನಕ್ಕೆ ಐಷರಾಮಿ ಕಾರು ಖರೀದಿಸಿದ್ದಾಳೆ.

‘ಹ್ಯಾಪಿ ಬರ್ತ್‌ಡೇ ಟು ಮಿ’ ಎಂಬ ಸಂದೇಶ ಬರೆದುಕೊಂಡು ಖರೀದಿಸಿದ ಕಾರಿನ‌ ಜೊತೆಗೆ ತೆಗೆಸಿಕೊಂಡ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಹಲವರ ಗಮನ ಸೆಳೆದಳು.

ಥಾಯ್ಲೆಂಡ್ ಕಾನೂನಿನ ಪ್ರಕಾರ 18 ವರ್ಷದೊಳಗಿನ ಮಕ್ಕಳು ನಾಲ್ಕುಚಕ್ರದ ವಾಹನಗಳನ್ನು ಓಡಿಸುವುದಕ್ಕೆ ಅವಕಾಶವಿಲ್ಲ. ಆದರೇನಂತೆ ‘ಈ ಕಾರನ್ನು ಅಪ್ಪ–ಅಮ್ಮನಿಗೆ ನೀಡುತ್ತೇನೆ. ದೊಡ್ಡವಳಾದ ಮೇಲೆ ಸ್ಟೇರಿಂಗ್ ಹಿಡಿಯುತ್ತೇನೆ’ ಎಂದು ಹೇಳುತ್ತಾಳೆ.

ಹಲವು ಸಾಧನೆಗಳನ್ನು ಮಾಡಿರುವ ಈ ಬಾಲಕಿಯ ವಯಸ್ಸು ಇನ್ನೂ 12!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.