ಬೆಂಗಳೂರು: ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಏಥರ್ ಎನರ್ಜಿ ಜೂನ್ ತ್ರೈಮಾಸಿಕದಲ್ಲಿ ₹178 ಕೋಟಿ ನಷ್ಟ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹183 ಕೋಟಿ ನಷ್ಟ ಕಂಡಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ನಷ್ಟದ ಮೊತ್ತವು ತಗ್ಗಿದೆ. ಕಂಪನಿಯ ವರಮಾನದಲ್ಲಿ ಶೇ 83ರಷ್ಟು ಏರಿಕೆ ಆಗಿದ್ದು, ₹673 ಕೋಟಿಗೆ ತಲುಪಿದೆ. ಜೂನ್ ತ್ರೈಮಾಸಿಕದಲ್ಲಿ ಕಂಪನಿಯು 46,078 ವಾಹನಗಳನ್ನು ಮಾರಾಟ ಮಾಡಿದೆ.
ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ವಾಹನಗಳ ಮಾರಾಟದಲ್ಲಿ ಶೇ 97ರಷ್ಟು ಹೆಚ್ಚಳವಾಗಿದೆ. ಏಥರ್ ರಿಜ್ಟಾ ವಾಹನಗಳಿಗೆ ಹೆಚ್ಚಿದ ಬೇಡಿಕೆ ಮತ್ತು ಮಾರಾಟ ಜಾಲದ ವಿಸ್ತರಣೆಯಿಂದ ವಾಹನಗಳ ಮಾರಾಟದಲ್ಲಿ ಏರಿಕೆಯಾಗಿದೆ ಎಂದು ಕಂಪನಿ ಸೋಮವಾರ ಷೇರುಪೇಟೆಗೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.