ADVERTISEMENT

ಬಿಎಸ್‌6 ಮಾನದಂಡ ಅಳವಡಿಕೆ: ಮುಂಚೂಣಿಯಲ್ಲಿ ಮಾರುತಿ

ಬಜೆಟ್‌: ವಾಹನ ಉದ್ದಿಮೆಗೆ ಪರೋಕ್ಷ ನೆರವು

​ಕೇಶವ ಜಿ.ಝಿಂಗಾಡೆ
Published 4 ಫೆಬ್ರುವರಿ 2020, 19:30 IST
Last Updated 4 ಫೆಬ್ರುವರಿ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಾಹನ ಮಾಲಿನ್ಯ ನಿಯಂತ್ರಣದ ಹೊಸ ಮಾನದಂಡವಾದ ಬಿಎಸ್‌6 ಅಳವಡಿಕೆಯಲ್ಲಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐಎಲ್‌) ಮುಂಚೂಣಿಯಲ್ಲಿದೆ.

‘ವಾಹನ ಹೊರಸೂಸುವ ಹೊಗೆಯ ಪ್ರಮಾಣದ ಬಿಎಸ್‌4 ಮಾನದಂಡದ ವಾಹನ ತಯಾರಿಕೆ ನಿಲ್ಲಿಸಿ ಹೆಚ್ಚು ಕಠಿಣ ಸ್ವರೂಪದ ಬಿಎಸ್‌6 ಅಳವಡಿಕೆಯನ್ನು ಶೇ 100ರಷ್ಟು ಜಾರಿಗೆ ತಂದ ಏಕೈಕ ತಯಾರಿಕಾ ಕಂಪನಿ ನಮ್ಮದಾಗಿದೆ’ ಎಂದು ಎಂಎಸ್‌ಐಎಲ್‌ನ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ್‌ ಅವರು ಇಲ್ಲಿ ತಿಳಿಸಿದ್ದಾರೆ.

‘ಮೂರನೇ ತ್ರೈಮಾಸಿಕದಲ್ಲಿ ಮಾರಾಟ ಹೆಚ್ಚಾಗಿದೆ. ಜನವರಿ ತಿಂಗಳ ಮಾರಾಟವು ಉದ್ದಿಮೆಗೆ ನಕಾರಾತ್ಮಕವಾಗಿದ್ದರೂ, ಮಾರುತಿ ಪಾಲಿಗೆ ಸಕಾರಾತ್ಮಕವಾಗಿದೆ. ಕಂಪನಿಯ ಮಾರುಕಟ್ಟೆ ಪಾಲು ಈಗ ಶೇ 3.60ರಷ್ಟು ಹೆಚ್ಚಳಗೊಂಡಿದೆ. ಒಟ್ಟಾರೆ ವಹಿವಾಟಿನಲ್ಲಿ ಗ್ರಾಮೀಣ ಮಾರುಕಟ್ಟೆಯ ಪಾಲು ಶೇ 40ರಷ್ಟಿದೆ.

ADVERTISEMENT

‘ಮಾಲಿನ್ಯ ನಿಯಂತ್ರಣದ ಹೊಸ ಮಾನದಂಡ ಅಳವಡಿಕೆ ಮತ್ತು ಜಾರಿಗೆ ಸಂಬಂಧಿಸಿದ ಗೊಂದಲ ದೂರವಾಗುತ್ತಿದ್ದಂತೆ ಉದ್ದಿಮೆಯ ವಹಿವಾಟಿಗೆ ಹೆಚ್ಚು ಖಚಿತತೆ ಬರಲಿದೆ.

‘ಈ ಬಾರಿಯ ಬಜೆಟ್‌ನಲ್ಲಿ ಗ್ರಾಮೀಣ ಮತ್ತು ಮೂಲ ಸೌಕರ್ಯ ವಲಯಕ್ಕೆ ಹೆಚ್ಚು ಅನುದಾನ ನಿಗದಿ ಮಾಡಿರುವುದು ದೀರ್ಘಾವಧಿಯಲ್ಲಿ ವಾಹನ ತಯಾರಿಕೆ ಉದ್ದಿಮೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ಗಳ (ಎಸ್‌ಯುವಿ) ಮಾರಾಟ ಶೇ 35ರಷ್ಟು ಬೆಳವಣಿಗೆ ಕಾಣುತ್ತಿದೆ.

ವಿದ್ಯುತ್‌ ಚಾಲಿತ ವಾಹನ: ‘ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ವರ್ಷ ಮಾರಾಟ
ವಾಗುವ 9.60 ಕೋಟಿ ವಾಹನಗಳಲ್ಲಿ ಸದ್ಯಕ್ಕೆ ವಿದ್ಯುತ್‌ ಚಾಲಿತ ವಾಹನಗಳ (ಇವಿ) ಮಾರಾಟ ಕೇವಲ ಶೇ 1ರಷ್ಟಿದೆ. ದುಬಾರಿ ಬ್ಯಾಟರಿ, ಚಾರ್ಜಿಂಗ್‌ ಮೂಲ ಸೌಕರ್ಯಗಳ ಕೊರತೆ, ದೂರ ಕ್ರಮಿಸುವ ಸಾಮರ್ಥ್ಯಕ್ಕೆ ಸಂಬಂಧಿಸಿದ ಅನುಮಾನಗಳು ಇವಿ ಜನಪ್ರಿಯತೆಗೆ ಅಡ್ಡಿಯಾಗಿವೆ. ಉದ್ದಿಮೆಯು ಈ ನಿಟ್ಟಿ
ನಲ್ಲಿ ಸಾಗುವ ಮಾರ್ಗ ಸವಾಲುಗಳಿಂದ ಕೂಡಿದೆ. ಸಾಂದ್ರಿಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಚಾಲಿತ 8 ವಾಹನಗಳನ್ನು ಮಾರುತಿ ತಯಾರಿಸುತ್ತಿದ್ದು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ಎಂದರು.

ಇಂದಿನಿಂದ ವಾಹನ ಮೇಳ

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ವಾಹನ ಮೇಳವು ಬುಧವಾರ ಆರಂಭವಾಗಲಿದ್ದು, ಗುರುವಾರ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಶುಕ್ರವಾರದಿಂದ (ಫೆ.7) ಇದೇ 12ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ.

ಮೇಳದಲ್ಲಿ ಚೀನಾದ ಕಂಪನಿಗಳು ದೊಡ್ಡ ಮಟ್ಟದಲ್ಲಿ ಭಾಗಿಯಾಗುತ್ತಿದ್ದು, ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಪ್ರದರ್ಶನ ಮಳಿಗೆಗಳಲ್ಲಿ ಚೀನಾ ಪ್ರತಿನಿಧಿಗಳು ಭಾಗವಹಿಸುತ್ತಿಲ್ಲ. ಭಾರತೀಯರೇ ಈ ಮಳಿಗೆಗಳನ್ನು ನಿರ್ವಹಿಸಲಿದ್ದಾರೆ ಎಂದು ಭಾರತದ ವಾಹನ ತಯಾರಕರ ಸಂಘವು (ಸಿಐಎಎಂ) ತಿಳಿಸಿದೆ.

(ಮಾರುತಿ ಕಂಪನಿಯ ಆಹ್ವಾನದ ಮೇರೆಗೆ ವರದಿಗಾರ ದೆಹಲಿಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.