ADVERTISEMENT

ಆಟೊಮೊಬೈಲ್ ಕ್ಷೇತ್ರ ಭಾರತಕ್ಕೆ 4ನೇ ಸ್ಥಾನ

ಆಟೊಮೊಬೈಲ್ ಕ್ಷೇತ್ರದಲ್ಲಿ ಛಾಪು ಮೂಡಿಸುವ ಉಮೇದು

ರಾಹುಲ ಬೆಳಗಲಿ
Published 16 ಜನವರಿ 2019, 19:45 IST
Last Updated 16 ಜನವರಿ 2019, 19:45 IST
   

ವಾಹನ ಉತ್ಪಾದನಾ ಮತ್ತು ಮಾರಾಟ ಕ್ಷೇತ್ರದಲ್ಲಿ ಎಲ್ಲವೂ ಅಂದ್ಕೊಂಡಂತೆ ನಡೆದರೆ, 2030ರ ವೇಳೆಗೆ ಭಾರತವು ಆಟೊಮೊಬೈಲ್ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಡುವುದಂತೂ ನಿಶ್ಚಿತ. ಕಳೆದ ಐದು ವರ್ಷಗಳಲ್ಲಿ ಆಗಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬಹುತೇಕ ಪೂರಕ ಅಂಶಗಳು ಲಭ್ಯವಾಗುತ್ತವೆ. ವಿಶ್ವದ ಮಾರುಕಟ್ಟೆಯಲ್ಲಿ ತಕ್ಕ ಪೈಪೋಟಿ ಎದುರಿಸಿ ಭಾರತವು ತನ್ನದೇ ಆದ ಛಾಪು ಮೂಡಿಸುವುದರ ಜೊತೆಗೆ ಹೊಸ ಅಲೆ ಸೃಷ್ಟಿಸಲಿದೆ ಎಂಬುದು ಸ್ಪಷ್ಟವಾಗುತ್ತದೆ.

ಆಟೊಮೊಬೈಲ್ ಕ್ಷೇತ್ರದಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿರುವ ಭಾರತವು 2017ರ ವರ್ಷಕ್ಕೆ ಹೋಲಿಸಿದರೆ 2018ರಲ್ಲಿ ವಾಹನಗಳ ಮಾರಾಟದಲ್ಲಿ ಶೇ 9.5ರಷ್ಟು ಪ್ರಗತಿ ಸಾಧಿಸಿದೆ. ಆಟೊಮೊಬೈಲ್ ರಫ್ತು ಕ್ಷೇತ್ರದಲ್ಲಿ 2018ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಶೇ 20.78ರಷ್ಟು ಮುನ್ನಡೆ ಸಾಧಿಸಿರುವುದು ಗಮನಾರ್ಹ. ನಾಲ್ಕನೇ ಸ್ಥಾನದಿಂದ ಮೊದಲನೇ ಸ್ಥಾನಕ್ಕೇರುವ ಉಮೇದಿನಲ್ಲಿರುವ ಭಾರತವು ಅದಕ್ಕಾಗಿ ಸಿದ್ಧತೆ ನಡೆಸಿದೆ. ವಾಹನ ಉತ್ಪಾದನಾ ಸಂಸ್ಥೆಗಳು ಬಗೆಬಗೆಯ ಮಾರ್ಗ ಅನುಸರಿಸುತ್ತಿವೆ. ನವೀನ ಮಾದರಿಯ ವಾಹನಗಳನ್ನು ಪರಿಚಯಿಸಿ, ಗ್ರಾಹಕರನ್ನು ಪರಿಚಯಿಸುತ್ತಿವೆ.

ಕಾರುಗಳು ಸೇರಿದಂತೆ ದ್ವಿಚಕ್ರ ವಾಹನಗಳಿಗೂ ಬೇಡಿಕೆ ಹೆಚ್ಚಿದೆ. ಮಧ್ಯಮ ವರ್ಗದ ಜನರು ಅದರಲ್ಲೂ ಯುವಜನರು ದ್ವಿಚಕ್ರ ವಾಹನಗಳ ಖರೀದಿಯತ್ತ ಹೆಚ್ಚು ಆಸಕ್ತರಾಗಿದ್ದಾರೆ. ನಗರ ಅಲ್ಲದೇ ಗ್ರಾಮೀಣ ಪ್ರದೇಶವನ್ನು ಕೇಂದ್ರೀಕರಿಸಿರುವ ಆಟೊಮೊಬೈಲ್ ಸಂಸ್ಥೆಗಳು ಬಗೆಬಗೆಯ ತಂತ್ರಗಳನ್ನು ಅನುಸರಿಸುತ್ತಿವೆ.

ADVERTISEMENT

2013-2018ರ ಅವಧಿಯಲ್ಲಿ 29.07 ದಶಲಕ್ಷ ವಾಹನಗಳು ಸಿದ್ಧವಾಗಿವೆ. 2018ರಲ್ಲಿ ಶೇ 7.8ರಷ್ಟು ವಾಹನಗಳ ಉತ್ಪಾದನೆ ವೃದ್ಧಿಸಿದೆ. ಜನವರಿ-ಸೆಪ್ಟೆಂಬರ್ 2018ರ ಅವಧಿಯಲ್ಲಿ ಬಿಎಂಡಬ್ಲ್ಯೂ ಸಂಸ್ಥೆಯು ಶೇ 11ರಷ್ಟು ಅಭಿವೃದ್ಧಿ ಸಾಧಿಸಿದೆ. ಮರ್ಸಡೀಸ್ ಬೆನ್ಜ್ ಸಂಸ್ಥೆಯು ಕೂಡ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. 2017-18ರ ಅವಧಿಯಲ್ಲಿ ಈ ಕಂಪನಿಯ 55 ಸಾವಿರ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು ವಿಶೇಷ. ಬೇಡಿಕೆ ಅನುಸಾರ ವಾಹನಗಳನ್ನು ಉತ್ಪಾದಿಸಲು ಆಟೊಮೊಬೈಲ್ ಸಂಸ್ಥೆಗಳು ಶ್ರಮಿಸುತ್ತಿವೆ. ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ ಅಂಕಿ ಅಂಶಗಳ ಪ್ರಕಾರ, 19.29ರಷ್ಟು ಡಾಲರ್ ವಿದೇಶಿ ಬಂಡವಾಳ ಹೂಡಿಕೆಯಾಗಿದೆ.

ವಿವಿಧ ಕಂಪನಿಗಳಿಂದ ಬಂಡವಾಳ

ಹೊಸ ಮಾದರಿಯ ವಾಹನಗಳನ್ನು ಪರಿಚಯಿಸುವ ಉದ್ದೇಶದಿಂದ ಅಶೋಕ್ ಲೇಲೆಂಡ್ ಸಂಸ್ಥೆಯು ಒಂದು ವರ್ಷದ ಅವಧಿಯಲ್ಲಿ 1000 ಕೋಟಿ ರೂಪಾಯಿ ಬಂಡವಾಳ ಹೂಡಲು ಯೋಜಿಸಿದೆ. ಹುಂಡೈ ಮತ್ತು ಎಸ್ಎಐಸಿ ಮೋಟರ್ಸ್ ಸಂಸ್ಥೆಯವರು ಕೂಡ ಬಂಡವಾಳ ಹೂಡಲು ಉದ್ದೇಶಿಸಿದ್ದಾರೆ. ಹೊಂಡಾ ಮೋಟರ್ಸ್‌ ಕಂಪನಿಯವರು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಗುರಿ ಹೊಂದಿದ್ದಾರೆ. ಅದಕ್ಕಾಗಿ ಬಂಡವಾಳ ಹೂಡಲು ಸಿದ್ಧತೆ ನಡೆಸಿದ್ದಾರೆ.

ವಾಹನಗಳ ಬೇಡಿಕೆ ಹೆಚ್ಚಳವೇಕೆ?

ವಾಹನಗಳ ಬೇಡಿಕೆ ಏರಿಕೆಯಾಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಮಧ್ಯಮ ವರ್ಗದವರು ಮತ್ತು ಅವರಲ್ಲಿ ಮೂಡಿರುವ ವಾಹನಗಳ ಖರೀದಿ ಉತ್ಸಾಹ. ಬಗೆಬಗೆಯ ಆಧುನಿಕ ಮಾದರಿಯ ದ್ವಿಚಕ್ರ ವಾಹನಗಳತ್ತ ಯುವಜನರು ಆಕರ್ಷಿತರಾಗುತ್ತಿರುವುದು ಮುಖ್ಯ ಕಾರಣಗಳಲ್ಲಿ ಒಂದು.

ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿದರದ ಸಾಲ ಯೋಜನೆಗಳನ್ನು ಪರಿಚಯಿಸುತ್ತಿವೆ. ವಾಹನ ಉತ್ಪಾದನಾ ಸಂಸ್ಥೆಗಳು ಕಡಿಮೆ ದರದ ಇಎಂಐ ಸೌಲಭ್ಯ ನೀಡುತ್ತಿರುವುದು ಗ್ರಾಹಕರ ಗಮನ ಸೆಳೆದಿದೆ.

ದೇಶೀಯ ಆಟೊಮೊಬೈಲ್ ಸಂಸ್ಥೆಗಳು ಅಲ್ಲದೇ ವಿದೇಶಿ ಬಂಡವಾಳ ಹೂಡಿಕೆಯು ವೃದ್ಧಿ ಆಗಿರುವುದು ವಾಹನಗಳ ಉತ್ಪಾದನೆಗೆ ಪೂರಕವಾಗಿದೆ. ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರದ ನೀತಿಗಳು ಅವಕಾಶ ಮಾಡಿಕೊಡುತ್ತಿರುವುದು ಗಮನಾರ್ಹ.

ವಿಶ್ವದ ಮಾರುಕಟ್ಟೆ ಕ್ಷೇತ್ರದಲ್ಲಿ ಭಾರತವು ಪ್ರಥಮ ಸ್ಥಾನಗಳಿಸಲಿ ಎಂದು ಉತ್ತೇಜಿಸುತ್ತಿರುವ ಕೇಂದ್ರ ಸರ್ಕಾರವು ಅದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.