ADVERTISEMENT

ತಂತ್ರಜ್ಞಾನ: ಕಾರುಗಳಿಗೆ ಜಲಜನಕದ ಅಂಟಿನ ನಂಟು

ಜಪಾನ್‌ನ ನಗೋಯ ವಿಶ್ವವಿದ್ಯಾಲಯದ ವಿಜ್ಞಾನಿಗಳ ಪ್ರಕಾರ ಇದಕ್ಕೊಂದು ಪರಿಹಾರ ಇದೆ.

ನೇಸರ ಕಾಡನಕುಪ್ಪೆ
Published 24 ಡಿಸೆಂಬರ್ 2024, 15:43 IST
Last Updated 24 ಡಿಸೆಂಬರ್ 2024, 15:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಇತ್ತೀಚೆಗೆ ಬೆಂಗಳೂರಿನ ನೆಲಮಂಗಲದ ಬಳಿ ಕಾರ್‌ ಮೇಲೆ ಕಂಟೇನರ್‌ ಬಿದ್ದು, ಒಂದೇ ಕುಟುಂಬದ ಆರು ಮಂದಿ ಮೃತಪಟ್ಟ ಸುದ್ದಿ ನೀವೆಲ್ಲ ಕೇಳಿರಬಹುದು. ಹತ್ತಾರು ಟನ್‌ ತೂಕವಿರುವ ಕಂಟೇನರ್ ಬಿದ್ದು, ಅತ್ಯುತ್ತಮ ಗುಣಮಟ್ಟದ ವೋಲ್ವೊ ಕಾರಿನ ದೇಹವೇ ನಜ್ಜು ಗುಜ್ಜಾಗಿತ್ತು. ಈ ಬಗೆಯ ಸುದ್ದಿಗಳನ್ನು ನಾವು ಮೊದಲ ಬಾರಿ ಕೇಳುತ್ತಿಲ್ಲ. ಅಪಘಾತಗಳಲ್ಲಿ ಕಾರ್‌ಗಳು ಇನ್ನಿಲ್ಲದಂತೆ ಘಾಸಿಯಾಗಿ ಒಳಗಿರುವವರು ಮೃತಪಡುತ್ತಲೇ ಇರುತ್ತಾರೆ. ಹಾಗಾದರೆ ಇದಕ್ಕೇನು ಪರಿಹಾರ? ಜಪಾನ್‌ನ ನಗೋಯ ವಿಶ್ವವಿದ್ಯಾಲಯದ ವಿಜ್ಞಾನಿಗಳ ಪ್ರಕಾರ ಇದಕ್ಕೊಂದು ಪರಿಹಾರ ಇದೆ.

ಸಾಮಾನ್ಯವಾಗಿ ಕಾರ್‌ನ ದೇಹವನ್ನು ಎರಡು ಬಗೆಯ ಉಕ್ಕಿನಿಂದ ಇತ್ತೀಚಿನ ದಿನಗಳಲ್ಲಿ ತಯಾರಿಸಲಾಗುತ್ತಿದೆ. ಕಾರ್‌ನ ಎಂಜಿನ್‌ ಇರುವ ಭಾಗವು ಮೃದು ಉಕ್ಕಿನಿಂದಲೂ ಪ್ರಯಾಣಿಕರ ಕ್ಯಾಬಿನ್‌ ಅನ್ನು ಬಲಿಷ್ಠ ಉಕ್ಕಿನಿಂದಲೂ ತಯಾರಿಸಲಾಗಿರುತ್ತದೆ. ಕೆಲವು ರೇಸಿಂಗ್‌ ಕಾರ್‌ಗಳಲ್ಲಿ ಕಾರ್ಬನ್ ಫೈಬರ್‌ ದೇಹವನ್ನೂ ಕಾಣಬಹುದಾಗಿದೆ. ಅಪಘಾತದ ಪರಿಣಾಮವನ್ನು ತಡೆದುಕೊಳ್ಳುವಂಥ ಕೆಲವು ಅತ್ಯುನ್ನತ ದೇಹನಿರ್ಮಾಣ ತಂತ್ರಜ್ಞಾನಗಳನ್ನು ಐಷಾರಾಮಿ ಕಾರ್‌ಗಳಾದ ಬಿಎಂಡಬ್ಲ್ಯೂ, ಮರ್ಸಿಡೆಸ್ ಬೆನ್ಸ್, ವೋಲ್ವೊ, ರೋಲ್ಸ್ ರಾಯ್ಸ್ ಕಾರ್‌ಗಳಲ್ಲಿ ಅಳವಡಿಸಲಾಗಿರುತ್ತದೆ. ಅಂದರೆ, ಬಹುಪದರದ ಉಕ್ಕಿನಿಂದ ಪ್ರಯಾಣಿಕರ ಕ್ಯಾಬಿನ್ ತಯಾರಿಸಿರಲಾಗುತ್ತದೆ. ಆದರೂ, ಎಷ್ಟೇ ಉನ್ನತ ತಂತ್ರಜ್ಞಾನ ಬಳಸಿದರೂ, ಅಪಘಾತದ ತೀವ್ರತೆಯನ್ನು ತಡೆದುಕೊಳ್ಳುವುದಕ್ಕೆ ಕಾರುಗಳಿಗೆ ಮಿತಿಯಿರುತ್ತದೆ. ಇಲ್ಲವಾದರೆ, ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಸಾಕ್ಷಿಯಾದಂತೆ ಕಾರ್‌ಗಳು ನಾಶವಾಗುತ್ತವೆ.

ADVERTISEMENT

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಹೆಜ್ಜೆಗಳನ್ನು ಇಡಲಾಗಿದೆ. ನಗೋಯ ವಿಶ್ವವಿದ್ಯಾಲಯದ ಸಂಶೋಧನೆಯನ್ನು ಅರ್ಥಮಾಡಿಕೊಳ್ಳುವ ಮೊದಲು ಹಾಲಿ ಇರುವ ತಂತ್ರಜ್ಞಾನದ ಬಗ್ಗೆ ಒಂದು ಕಿರುನೋಟವನ್ನು ಬೀರಲೇಬೇಕು. ಕಾರ್‌ನ ದೇಹದ ಚೌಕಟ್ಟನ್ನು ‘ಮಾನೋಕಾಕ್‌’ ಎಂದು ಕರೆಯಲಾಗುತ್ತದೆ. ಎಂದರೆ, ಒಂದು ಅಸ್ಥಿಪಂಜರದಂತೆ ಹಿಡಿಯಾದ ಒಂದು ಆಕಾರವಿರುವ ಒಂದು ಆಕೃತಿ. ಅದರ ಮೇಲೆ ಕಾರ್‌ನ ದೇಹದ ಭಾಗಗಳಾದ ಬಾಗಿಲು, ಗಾಜು ಇತ್ಯಾದಿಗಳು ಕೂರುತ್ತವೆ. ಇನ್ನೊಂದು ‘ಲ್ಯಾಡರ್‌’ (ಏಣಿ) ಚೌಕಟ್ಟು ಎಂದು. ಅಂದರೆ, ಚೌಕಟ್ಟಿನ ಮೇಲೆ ಕಾರ್‌ನ ದೇಹವನ್ನು ಒಂದೊಂದಾಗಿ ಕೂರಿಸಲಾಗಿತ್ತದೆ. ಸಾಮಾನ್ಯವಾಗಿ ಕಾರ್‌ ಇತ್ಯಾದಿ ವಾಹನಗಳು ‘ಮಾನೋಕಾಕ್‌‘’ ಚೌಕಟ್ಟು, ಜೀಪ್‌, ಬಸ್‌, ಲಾರಿ ಇತ್ಯಾದಿ ವಾಹನಗಳಲ್ಲಿ ಲ್ಯಾಡರ್ ಚೌಕಟ್ಟು ಇರುತ್ತದೆ. ‘ಮಾನೋಕಾಕ್‌’ ಚೌಕಟ್ಟು ನೋಡಲು ಒಂದೇ ಆಕೃತಿಯಂತೆ ಕಂಡರೂ, ಅನೇಕ ಭಾಗಗಳನ್ನು ಸೇರಿಸಿ, ಅಂಟಿಸಲಾಗಿರುತ್ತದೆ. ಎಂದರೆ, ಎಂಜಿನ್‌ ಭಾಗ, ಪ್ರಯಾಣಿಕರು ಕೂರುವ ಭಾಗ, ಛಾವಣಿ, ಅಡಿ ಭಾಗ ಇವೆಲ್ಲವೂ ಪ್ರತ್ಯೇಕ ಭಾಗಗಳೇ. ಅವನ್ನು ಒಂದಕ್ಕೊಂದು ಬಳಿಕ ಅಂಟಿಸಿ, ಒಟ್ಟಾರೆಯಾಗಿ ಒಂದು ಆಕೃತಿಯಾಗಿರುವಂತೆ ಮಾಡಲಾಗುತ್ತದೆ.

ಈ ಅಂಟಿಸುವ ಪ್ರಕ್ರಿಯೆಯೇ ಇಲ್ಲಿ ಮಹತ್ವವಾದುದು. ಹಾಲಿ ತಂತ್ರಜ್ಞಾನದಲ್ಲಿ ‘ಅಪಾಕ್ಸಿ ರೆಸಿನ್‌’ ಎನ್ನುವ ಪ್ಲಾಸ್ಟಿಕ್– ರಬ್ಬರ್‌ ಆಧಾರಿತ ಅಂಟನ್ನು ವಿವಿಧ ಲೋಹದ ಭಾಗಗಳನ್ನು ಅಂಟಿಸಲು ಬಳಸಲಾಗುತ್ತದೆ. ಐಷಾರಾಮಿ ಕಾರ್‌ ಕಂಪೆನಿಗಳಿಂದ ಹಿಡಿದು, ಜನಸಾಮಾನ್ಯರ ಮೆಚ್ಚುಗೆಯ ಮಾರುತಿ, ಟಾಟಾ ಕಾರ್‌ಗಳವರೆಗೂ ಇದೇ ತಂತ್ರಜ್ಞಾನ ಇರುವುದು. ‘ಅಪಾಕ್ಸಿ ರೆಸಿನ್‌’ ಅಂಟು ಬಲಶಾಲಿಯೇ ಆಗಿರುವುದಾದರೂ ಅದಕ್ಕೆ ಅದರದೇ ಆದ ಮಿತಿಯಿದೆ.

ಅದರಲ್ಲಿ ಪ್ರಮುವಾದ ಮಿತಿಯೆಂದರೆ, ‘ಅಪಾಕ್ಸಿ ರೆಸಿನ್‌’ನ ಬಾಳಿಕೆಯ ಅವಧಿ. ಇದು ರಬ್ಬರ್ ಹಾಗೂ ಪ್ಲಾಸ್ಟಿಕ್‌ ಆಧಾರಿತ ರಾಸಾಯನಿಕ ವಸ್ತುವಾಗಿರುವ ಕಾರಣ ದಿನಕಳೆದಂತೆ ತನ್ನ ದೃಢತೆಯನ್ನು ಕಳೆದುಕೊಳ್ಳುತ್ತ ಬರುತ್ತದೆ. ಹಾಗಾಗಿ, ಕಾರ್‌ ಹಳೆಯದಾದಂತೆ ಕಾರ್‌ನ ದೃಢತೆಯೂ ಕಡಿಮೆ ಆಗಬಹುದು. ಬೆಂಗಳೂರಿನಲ್ಲಿ ಅಪಘಾತವಾದ ಕಾರ್‌ ಕೇವಲ ಆರು ತಿಂಗಳು ಹಳೆಯದು. ಅದಕ್ಕೆ ಈ ವಾದ ಅನ್ವಯಿಸದೇ ಇರಬಹುದು. ಆದರೆ, ‘ಅಪಾಕ್ಸಿ ರೆಸಿನ್‌’ ಅಂಟು ಬಹುಪದರ ಜೋಡಣೆಗೆ ಹೇಳಿ ಮಾಡಿಸಿದ್ದಲ್ಲ ಎನ್ನುವ ಬಲವಾದ ವಾದವಿದೆ. ಹಾಗಾಗಿ, ಅಪಘಾತದ ಸಮಯದಲ್ಲಿ ತೀವ್ರವಾದ ಏಟು, ಅಥವಾ ಅತೀವ ಭಾಗ ಬಿದ್ದಾಗ ಬಹುಪದರ ಲೋಹದ ಬಳಕೆ ಆಗದೇ ಇರುವ ಕಾರಣ ಕಾರು ನಜ್ಜು ಗುಜ್ಜಾಗಬಹುದು.

ಹೊಸ ಪರಿಹಾರ

ಜಪಾನ್‌ನ ನಗೋಯ ವಿಶ್ವವಿದ್ಯಾಲಯದ ವಿಜ್ಞಾನಿಗಳ ಪ್ರಕಾರ ‘ಅಪಾಕ್ಸಿ ರೆಸಿನ್‌’ ಅಂಟನ್ನು ಬಳಕೆಯನ್ನು ನಿಲ್ಲಿಸುವುದು ಇದಕ್ಕೆ ಪರಿಹಾರವಾಗಬಹುದು ಎಂದಿದ್ದಾರೆ. ಪ್ಲಾಸ್ಟಿಕ್ ಹಾಗೂ ರಬ್ಬರ್ ಆಧಾರಿತ ಅಂಟಿಗೆ ಪರ್ಯಾಯವಾಗಿ, ‘ಜಲಜನಕ ಆಧಾರಿತ ಶಾಖೋತ್ಪನ್ನ ಫೈಬರ್‌’ ಅಂಟನ್ನು ಬಳಸಬಹುದು ಎಂದು ಪ್ರತಿಪಾದಿಸಿದ್ದಾರೆ. ಪ್ರತಿಷ್ಠಿತ ಎಸಿಎಸ್ ಅಪ್ಲೈಡ್‌ ಮೆಟೀರಿಯಲ್ಸ್ ಅ್ಯಂಡ್‌ ಇಂಟರ್‌ಫೇಸಸ್‌ (ಅನ್ವಯಿಕ ಸಾಮಗ್ರಿಗಳು ಹಾಗೂ ಸಂಪರ್ಕಸೇತು) ನಿಯತಕಾಲಿಕೆಯಲ್ಲಿ ತಮ್ಮ ಸಂಶೋಧನೆಯನ್ನು ಪ್ರಕಟಿಸಿದ್ದಾರೆ.

ಈ ಅಂಟು ಸಾಂಪ್ರದಾಯಿಕ ‘ಅಪಾಕ್ಸಿ ರೆಸಿನ್‌’ ಅಂಟಿಗಿಂತ ಸುಮಾರು 23 ಪಟ್ಟು ಹೆಚ್ಚು ಬಲಶಾಲಿಯಾಗಿರುತ್ತದೆ. ಜೊತೆಗೆ ಸುಮಾರು 20 ಪಟ್ಟು ಹೆಚ್ಚು ಬಾಳಿಕೆ ಬರುತ್ತದೆ. ಸಾಮಾನ್ಯವಾಗಿ ಪ್ಲಾಸ್ಟಿಕ್‌ ಅಥವಾ ರಬ್ಬರ್‌ ಬಿಸಿಲು ಹಾಗೂ ಶಾಖಕ್ಕೆ ತೆರೆದುಕೊಂಡಂರೆ ತಮ್ಮ ಶಕ್ತಿಯನ್ನು ಕಳೆದುಕೊಂಡು ಮೃದುವಾಗುತ್ತವೆ. ನಾವು ಪ್ರತಿನಿತ್ಯ ಅನೇಕ ಸಂದರ್ಭಗಳಲ್ಲಿ ಇದನ್ನು ನೋಡಿರುತ್ತೇವೆ. ಇದಕ್ಕೆ ಕಾರಣ, ಇವುಗಳಲ್ಲಿ ಇರುವ ಇಂಗಾಲದ ಅಂಶ. ಈ ಹೊಸ ಅಂಟು ಜಲಜನಕ ಆಧಾರಿತವಾಗಿರುವ ಕಾರಣ, ಈ ಮಿತಿ ಇರುವುದಿಲ್ಲ. ಫೈಬ‌ರ್‌ ಅಂಶ ಹೊಸ ಅಂಟಿನಲ್ಲೂ ಇರುವುದಾದರೂ ಇಂಗಾಲದ ಅಂಶ ‘ಅಪಾಕ್ಸಿ ರೆಸಿನ್‌’ ಅಂಟಿಗೆ ಹೋಲಿಸಿದರೆ ಕಡಿಮೆ ಇರುತ್ತದೆ. ಹಾಗಾಗಿ, ಇದು ಬೇಗ ಹಾಳಾಗುವುದಿಲ್ಲ ಎಂದು ನಗೋಯ ವಿಶ್ವವಿದ್ಯಾಲಯದ ಪ್ರಧಾನ ಸಂಶೋಧಕ ಅಟ್ಸುಷಿ ನೋರೊ ವಾದ ಮಂಡಿಸಿದ್ದಾರೆ.

ಜೊತೆಗೆ, ಈ ಅಂಟು ಹಗುರವಾದ ಅಲ್ಯೂಮಿನಂ ಮಾದರಿಯ ಲೋಹದ ಹಾಳೆಗಳನ್ನು ಸಮರ್ಥವಾಗಿ ಬೆಸೆಯುವ ಗುಣ ಹೊಂದಿರುತ್ತದೆ. ಜೊತೆಗೆ, ಕಾರ್ಬನ್‌ ಫೈಬರ್, ಸಿಂಥೆಟಿಕ್ ಆಧಾರಿತ ಸಾಮಗ್ರಿಗಳನ್ನೂ ಹಾಳೆ ಹಾಳೆಗಳಾಗಿ ಅಂಟಿಸಬಲ್ಲದಾಗಿರುತ್ತದೆ. ಆದ್ದರಿಂದ ಪ್ರಯಾಣಿಕರ ಕ್ಯಾಬಿನ್‌ನಂತಹ ಭಾಗಗಳನ್ನು ಅತ್ಯಂತ ಬಲಶಾಲಿಯಾಗಿ ನಿರ್ಮಿಸಬಹುದಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಈ ತಂತ್ರಜ್ಞಾನವನ್ನು ಯುದ್ಧವಿಮಾನಗಳು, ನೌಕೆಗಳಲ್ಲಿ ಬಳಸಬಹುದಾಗಿದೆ ಎಂದು ನೋರೊ ಹೇಳಿದ್ದಾರೆ. ಈ ತಂತ್ರಜ್ಞಾನವನ್ನು ಬಳಸಿದರೆ ವಾಹನದ ದೇಹವು ದೃಢವೂ ಹಗುರವೂ ಆಗಿರುತ್ತದೆ ಎಂಬುದು. ಜೊತೆಗೆ, ವಾಹನದ ಮೈಲೇಜ್ ಸಹ ಹೆಚ್ಚುತ್ತದೆ ಎಂದೂ ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.