ಬೆಂಗಳೂರು: ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾವು (ಎಚ್‌ಎಂಎಸ್‌ಐ) ತನ್ನ ಮೊದಲ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಆ್ಯಕ್ಟಿವಾ ಇ’ ಮತ್ತು ‘ಕ್ಯೂಸಿ1’ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣ ಮಾಡಿದೆ. ಜನವರಿ 1ರಿಂದ ಬುಕಿಂಗ್ ಶುರುವಾಗಲಿದ್ದು, ಫೆಬ್ರುವರಿಯಲ್ಲಿ ದ್ವಿಚಕ್ರ ವಾಹನ ವಿತರಣೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ಇದು ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಜೊತೆಗೆ ಪರ್ಲ್ ಶಾಲೋ ಬ್ಲೂ, ಪರ್ಲ್ ಮಿಸ್ಟಿ ವೈಟ್, ಪರ್ಲ್ ಸೆರಿನಿಟಿ ಬ್ಲೂ, ಮ್ಯಾಟ್ ಫಾಗ್ಗಿ ಸಿಲ್ವರ್ ಮೆಟಾಲಿಕ್ ಮತ್ತು ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಬಣ್ಣಗಳಲ್ಲಿ ದೊರೆಯಲಿವೆ.
ದ್ವಿಚಕ್ರ ವಾಹನದಲ್ಲಿ ನೀಡಲಾಗಿರುವ ಇನ್ಫೋಟೈನ್ಮೆಂಟ್ ವ್ಯವಸ್ಥೆಯು ನ್ಯಾವಿಗೇಶನ್ ಸೌಲಭ್ಯವನ್ನು ಒದಗಿಸುತ್ತದೆ. ಇನ್ಫೋಟೈನ್ಮೆಂಟ್ ವ್ಯವಸ್ಥೆಯು ಡೇ ಮತ್ತು ನೈಟ್ ಮೋಡ್‌ಗಳನ್ನು ಹೊಂದಿದ್ದು, ಬೆಳಕಿಗೆ ಅನುಗುಣವಾಗಿ ಸ್ಕ್ರೀನ್ ಬ್ರೈಟ್ ನೆಸ್ ಅನ್ನು ಹೆಚ್ಚು–ಕಡಿಮೆ ಮಾಡುತ್ತದೆ. ಆ ಮೂಲಕ ಸ್ಕ್ರೀನ್ ಅನ್ನು ಸಮರ್ಪಕವಾಗಿ ನೋಡಲು ಅವಕಾಶ ಮಾಡಿಕೊಡುತ್ತದೆ.
ಆ್ಯಕ್ಟಿವಾ ಇ ಹೋಂಡಾದ ಎಚ್ ಸ್ಮಾರ್ಟ್ ಕೀ ಜೊತೆಗೆ ಲಭ್ಯವಿದ್ದು, ಈ ಕೀ ಸ್ಮಾರ್ಟ್ ಫೈಂಡ್, ಸ್ಮಾರ್ಟ್ ಸೇಫ್, ಸ್ಮಾರ್ಟ್ ಅನ್ ಲಾಕ್ ಮತ್ತು ಸ್ಮಾರ್ಟ್ ನಂತಹ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದೆ. ಆ್ಯಕ್ಟಿವಾ ಇ ಸ್ಕೂಟರ್ ಜೊತೆಗೆ ಎರಡು ಸ್ವ್ಯಾಪ್ ಮಾಡಬಹುದಾದ ಬ್ಯಾಟರಿಗಳನ್ನು ನೀಡಲಾಗುತ್ತಿದ್ದು, ಈ ಎರಡೂ ಬ್ಯಾಟರಿಗಳು 1.5 kWh ಸಾಮರ್ಥ್ಯ ಹೊಂದಿವೆ. ಈ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 102 ಕಿ.ಮೀ. ದೂರ ಕ್ರಮಿಸಬಹುದಾಗಿದೆ.
ಈ ಎರಡೂ ಇ.ವಿ ಮಾದರಿಗಳನ್ನು ಬೆಂಗಳೂರಿನ ಸಮೀಪದಲ್ಲಿರುವ ಎಚ್ಎಂಎಸ್ಐನ ನರಸಾಪುರ ಘಟಕದಲ್ಲಿ ತಯಾರಿಸಲಾಗುತ್ತದೆ. ಈ ಮಾದರಿಗಳ ಜೊತೆಗೆ 3 ವರ್ಷ ಅಥವಾ 50 ಸಾವಿರ ಕಿ.ಮೀ ವಾರಂಟಿ ಮತ್ತು ಮೊದಲ ವರ್ಷ ಮೂರು ಉಚಿತ ಸರ್ವಿಸ್‌ಗಳನ್ನು ನೀಡಲಾಗುತ್ತದೆ. ಮೊದಲ ವರ್ಷದಲ್ಲಿ ಉಚಿತ ರಸ್ತೆ ಬದಿಯ ಸಹಾಯ (ರೋಡ್ ಸೈಡ್ ಅಸಿಸ್ಟೆನ್ಸ್) ಒದಗಿಸಲಾಗುವುದು ಎಂದು ಕಂಪನಿ ತಿಳಿಸಿದೆ.
‘ಎಚ್ಎಂಎಸ್ಐ ಕಂಪನಿಯು ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಸಾರಿಗೆ ಕ್ಷೇತ್ರಕ್ಕೆ ಕಾಲಿಟ್ಟಿದೆ. 2050ರ ವೇಳೆಗೆ ಶೂನ್ಯ ಇಂಗಾಲ ಸಾಧಿಸಬೇಕು ಎನ್ನುವ ಹೋಂಡಾದ ಜಾಗತಿಕ ಮಟ್ಟದ ‘ಟ್ರಿಪಲ್ ಆಕ್ಷನ್ ಟು ಝೀರೋ’ ಪರಿಕಲ್ಪನೆಗೆ ಅನುಗುಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ತರಲಾಗುತ್ತಿದೆ’ ಎಂದು ಹೋಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ, ವ್ಯವಸ್ಥಾಪಕ ನಿರ್ದೇಶಕ ಟ್ಸುಟ್ಸುಮು ಒಟಾನಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.