ನವದೆಹಲಿ: ‘ದೇಶದಲ್ಲಿ ಇ.ವಿ ಚಾರ್ಜಿಂಗ್ ಕೇಂದ್ರಗಳ ಮೂಲಸೌಕರ್ಯದ ತ್ವರಿತ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ’ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಬುಧವಾರ ಚಾರ್ಜಿಂಗ್ ಕೇಂದ್ರಗಳ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸಚಿವಾಲಯದ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.
ಕೇಂದ್ರ ಪೆಟ್ರೋಲಿಯಂ ಸಚಿವಾಲಯ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯದಿಂದ ಇ.ವಿ ಚಾರ್ಜಿಂಗ್ ಕೇಂದ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಿದರು.
‘ದೇಶದಲ್ಲಿ ಇ.ವಿ ವಲಯವು ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಅನುಗುಣವಾಗಿ ಮೂಲಸೌಕರ್ಯ ಒದಗಿಸಬೇಕಿದೆ. ಈ ವಲಯದ ಅಭಿವೃದ್ಧಿಗೆ ಪೂರಕವಾಗಿ ಇಂಧನ ಭದ್ರತೆಯನ್ನೂ ಹೆಚ್ಚಿಸಬೇಕಿದೆ’ ಎಂದರು.
ಹಸಿರು ಸಾರಿಗೆಯ ಉತ್ತೇಜನಕ್ಕೆ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಜನರನ್ನು ಸಜ್ಜುಗೊಳಿಸಲಾಗುವುದು ಎಂದು ಹೇಳಿದರು.
ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರವು ‘ಪಿಎಂ ಇ–ಡ್ರೈವ್’ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಇದರಡಿ ವಿದ್ಯುತ್‌ಚಾಲಿತ ವಾಹನಗಳಿಗೆ ಅವುಗಳ ಬ್ಯಾಟರಿ ಸಾಮರ್ಥ್ಯ ಆಧಾರದ ಮೇಲೆ ಸಬ್ಸಿಡಿ ದೊರೆಯಲಿದೆ. ಇದಕ್ಕಾಗಿ ₹10,900 ಕೋಟಿ ಮೀಸಲಿಡಲಾಗಿದೆ. ಈ ಮೊತ್ತದಲ್ಲಿ ದೇಶದಾದ್ಯಂತ 72 ಸಾವಿರ ಇ.ವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ₹2 ಸಾವಿರ ಕೋಟಿಯನ್ನು ನಿಗದಿಪಡಿಸಲಾಗಿದೆ.
ಈ ಯೋಜನೆಯಡಿ 24.70 ಲಕ್ಷ ವಿದ್ಯುತ್‌ಚಾಲಿತ ದ್ವಿಚಕ್ರವಾಹನಗಳು, 3.16 ಲಕ್ಷ ಇ–ತ್ರಿಚಕ್ರ ವಾಹನಗಳು ಹಾಗೂ 14,028 ಇ–ಬಸ್‌ಗಳಿಗೆ ಮುಂದಿನ ಎರಡು ವರ್ಷಗಳವರೆಗೆ ಸಬ್ಸಿಡಿ ನೀಡುವ ಗುರಿ ಹೊಂದಲಾಗಿದೆ.
ರಾಜ್ಯದ 15 ಹೆದ್ದಾರಿಯಲ್ಲಿ ಕೇಂದ್ರ ಸ್ಥಾಪನೆ
ಕರ್ನಾಟಕದ 15 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇ.ವಿ ಚಾರ್ಜಿಂಗ್ ಕೇಂದ್ರಗಳು ಸ್ಥಾಪನೆಯಾಗಲಿವೆ.
‘ದೇಶದ 50 ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ಗಳು, ಮಹಾನಗರಗಳು, ಟೋಲ್ ಪ್ಲಾಜಾಗಳು, ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಇಂಧನ ಮಳಿಗೆಗಳು ಮತ್ತು ರಾಜ್ಯ ಹೆದ್ದಾರಿಗಳಂತಹ ಹೆಚ್ಚಿನ ದಟ್ಟಣೆಯ ತಾಣಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು’ ಎಂದು ಸಚಿವ ಕುಮಾರಸ್ವಾಮಿ ತಿಳಿಸಿದ್ದಾರೆ.
ಕರ್ನಾಟಕದ ಮೂಲಕ ಹಾದುಹೋಗುವ ಎರಡು ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಗಳನ್ನು ಹೆದ್ದಾರಿ ಹಾಗೂ ಭೂಸಾರಿಗೆ ಸಚಿವಾಲಯ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಆದ್ಯತೆಯ ಮೇರೆಗೆ ವಿದ್ಯುದ್ದೀಕರಣಕ್ಕಾಗಿ ಗುರುತಿಸಿವೆ. ವಿಶೇಷವಾಗಿ ಬೆಂಗಳೂರು ನಗರವನ್ನು ಚೆನ್ನೈ, ಹೈದರಾಬಾದ್ ಮತ್ತು ಕರಾವಳಿ ಕರ್ನಾಟಕದೊಂದಿಗೆ ಸಂಪರ್ಕಿಸುವ ಮಾರ್ಗಗಳು ಒಳಗೊಂಡಿವೆ. ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಚೆನ್ನೈ ಹೆದ್ದಾರಿಗಳು ಈ ಗುರುತಿಸಲಾದ ಕಾರಿಡಾರ್‌ಗಳ ಭಾಗವಾಗಿವೆ ಎಂದು ಮೂಲಗಳು ತಿಳಿಸಿವೆ.
ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯ ಮೊದಲ ಹಂತದಲ್ಲಿ ಗುರುತಿಸಲಾದ 10 ಮಹಾನಗರಗಳಲ್ಲಿ ಬೆಂಗಳೂರು ಕೂಡ ಸೇರಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಾಗುತ್ತದೆ. ಇವುಗಳ ಸ್ಥಾಪನೆ ಹಾಗೂ ಮೇಲ್ವಿಚಾರಣೆಯನ್ನು ಬಿಎಚ್‌ಇಎಲ್ ನೋಡಿಕೊಳ್ಳಲಿದೆ.
‘ದೇಶದಾದ್ಯಂತ ಇ.ವಿ ಬಳಕೆದಾರರಿಗೆ ಒಂದೇ ವೇದಿಕೆಯಾಗಿ ಕಾರ್ಯ ನಿರ್ವಹಿಸುವ ಏಕೀಕೃತ ಡಿಜಿಟಲ್ ಸೂಪರ್ ಅಪ್ಲಿಕೇಷನ್‌ನ ಅಭಿವೃದ್ಧಿಗಾಗಿ ನೋಡಲ್ ಏಜೆನ್ಸಿಯಾಗಿ ಬಿಎಚ್‌ಇಎಲ್ ಅನ್ನು ನೇಮಿಸಲಾಗಿದೆ. ಈ ಅಪ್ಲಿಕೇಷನ್ ನೈಜ-ಸಮಯದ ಸ್ಲಾಟ್ ಬುಕಿಂಗ್, ಪಾವತಿ ವ್ಯವಸ್ಥೆ, ಚಾರ್ಜರ್ ಲಭ್ಯತೆಯ ಸ್ಥಿತಿ ಮತ್ತು ಪ್ರಗತಿ ಡ್ಯಾಶ್‌ಬೋರ್ಡ್‌ಗಳನ್ನು ಒಳಗೊಂಡಿರುತ್ತದೆ’ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.