ADVERTISEMENT

ಐಒಸಿಎಲ್‌ ಪೆಟ್ರೋಲ್ ಬಂಕ್‌ಗಳಲ್ಲಿ ಮಾರುತಿ ಕಾರು ರಿಪೇರಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 15:41 IST
Last Updated 12 ಜನವರಿ 2026, 15:41 IST
ಮಾರುತಿ ಸುಜುಕಿ
ಮಾರುತಿ ಸುಜುಕಿ   

ನವದೆಹಲಿ: ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ನ (ಐಒಸಿಎಲ್‌) ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನಗಳ ರಿಪೇರಿ ಸೇವಾ ಘಟಕ ಆರಂಭಿಸಲು ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಮುಂದಾಗಿದೆ. ಈ ವಿಚಾರವಾಗಿ ಇಂಡಿಯನ್ ಆಯಿಲ್ ಮತ್ತು ಮಾರುತಿ ಸುಜುಕಿ ನಡುವೆ ಒಪ್ಪಂದ ಆಗಿದೆ.

ಇದರ ಭಾಗವಾಗಿ ದೇಶದಾದ್ಯಂತ ಇಂಡಿಯನ್‌ ಆಯಿಲ್‌ನ ಹಲವು ಬಂಕ್‌ಗಳಲ್ಲಿ ಸೇವಾ ಘಟಕಗಳು ಆರಂಭವಾಗಲಿವೆ. ಈ ಘಟಕಗಳ ಮೂಲಕ ಗ್ರಾಹಕರು ತಮ್ಮ ಮಾರುತಿ ಸುಜುಕಿ ಕಾರಿನ ನಿರ್ವಹಣೆ ಕೆಲಸ, ಸಣ್ಣ–ಪುಟ್ಟ ರಿಪೇರಿ ಹಾಗೂ ಕೆಲವು ಪ್ರಮುಖ ರಿಪೇರಿ ಕೆಲಸಗಳನ್ನು ಮಾಡಿಸಿಕೊಳ್ಳಬಹುದು. ಇದರಿಂದಾಗಿ ಕಾರು ರಿಪೇರಿ ಕೆಲಸಗಳು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಆಗುತ್ತದೆ ಎಂದು ಮಾರುತಿ ಸುಜುಕಿ ಪ್ರಕಟಣೆ ತಿಳಿಸಿದೆ.

ಈಗ ಮಾರುತಿ ಸುಜುಕಿ ಕಂಪನಿ ದೇಶದ 2,882 ನಗರಗಳಲ್ಲಿ ಒಟ್ಟು 5,780ಕ್ಕೂ ಹೆಚ್ಚಿನ ಸೇವಾ ಕೇಂದ್ರಗಳನ್ನು ಹೊಂದಿದೆ. ಹೊಸ ಒಪ್ಪಂದದಿಂದಾಗಿ ಕಂಪನಿಯ ಸೇವಾ ಜಾಲವು ಇನ್ನಷ್ಟು ವಿಸ್ತರಣೆ ಕಾಣಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

‘ನಾವು ದೇಶದಾದ್ಯಂತ 41 ಸಾವಿರ ಬಂಕ್‌ಗಳನ್ನು ಹೊಂದಿದ್ದೇವೆ. ಅಗತ್ಯ ಸೇವೆಗಳನ್ನು ಗ್ರಾಹಕರ ಹತ್ತಿರ ತರುವ ವಿಶಿಷ್ಟವಾದ ಶಕ್ತಿ ನಮಗಿದೆ. ಮಾರುತಿ ಸುಜುಕಿ ಜೊತೆ ಪಾಲುದಾರಿಕೆ ಮೂಲಕ ನಾವು ವಿಶ್ವದರ್ಜೆಯ ವಾಹನ ರಿಪೇರಿ ಸೇವೆಗಳನ್ನು ನಮ್ಮ ಇಂಧನ ಮಾರಾಟದ ಜೊತೆ ಬೆಸೆಯುತ್ತಿದ್ದೇವೆ’ ಎಂದು ಇಂಡಿಯನ್‌ ಆಯಿಲ್‌ನ ಮಾರುಕಟ್ಟೆ ವಿಭಾಗದ ನಿರ್ದೇಶಕ ಸೌಮಿತ್ರ ಪಿ. ಶಿವಾಸ್ತವ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.