ADVERTISEMENT

ಡೀಸೆಲ್ ಕಾರು ಉತ್ಪಾದಿಸಲ್ಲ, ಪೆಟ್ರೋಲ್‌ ಕಾರುಗಳ ಇಂಧನ ದಕ್ಷತೆಗೆ ಆದ್ಯತೆ: ಮಾರುತಿ

ಪಿಟಿಐ
Published 21 ನವೆಂಬರ್ 2021, 6:50 IST
Last Updated 21 ನವೆಂಬರ್ 2021, 6:50 IST
ಮಾರುತಿ ಸುಜುಕಿ (ಸಂಗ್ರಹ ಚಿತ್ರ)
ಮಾರುತಿ ಸುಜುಕಿ (ಸಂಗ್ರಹ ಚಿತ್ರ)   

ನವದೆಹಲಿ: ಡೀಸೆಲ್‌ ಎಂಜಿನ್‌ ಕಾರುಗಳ ತಯಾರಿಕೆಯನ್ನು ಮತ್ತೆ ಆರಂಭಿಸುವುದಿಲ್ಲ ಎಂದು ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಸ್ಪಷ್ಟಪಡಿಸಿದೆ.

2023ರ ವೇಳೆಗೆ ಮುಂದಿನ ಹಂತದ ಮಾಲಿನ್ಯ ನಿಯಮಗಳು ಜಾರಿಗೆ ಬರಲಿದ್ದು, ಡೀಸೆಲ್ ಕಾರುಗಳ ಮಾರಾಟ ಮತ್ತಷ್ಟು ಕಡಿಮೆಯಾಗಲಿದೆ ಎಂದು ಭಾವಿಸಿರುವುದಾಗಿ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಹಂತದ ಮಾಲಿನ್ಯ ನಿಯಮಗಳಿಂದಾಗಿ ಡೀಸೆಲ್ ವಾಹನಗಳ ಬೆಲೆ ಏರಿಕೆಯಾಗಲಿದೆ. ಇದು ಮಾರಾಟದ ಮೇಲೂ ಪರಿಣಾಮ ಬೀರಲಿದೆ. ಕಳೆದ ಕೆಲವು ವರ್ಷಗಳಿಂದ ಆಟೊಮೊಬೈಲ್ ಮಾರುಕಟ್ಟೆಯು ಪೆಟ್ರೋಲ್ ಕಾರುಗಳತ್ತ ವಾಲುತ್ತಾ ಬಂದಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

‘ನಾವು ಡೀಸೆಲ್ ಕಾರು ತಯಾರಿಸುವತ್ತ ಮುಖಮಾಡುತ್ತಿಲ್ಲ. ಡೀಸೆಲ್ ಕಾರುಗಳ ಕುರಿತು ಅಧ್ಯಯನ ನಡೆಸಿ ಗ್ರಾಹಕರ ಬೇಡಿಕೆ ಇದ್ದರೆ ಆ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದಷ್ಟೇ ಈ ಹಿಂದೆ ಹೇಳಿದ್ದೆವು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಡೀಸೆಲ್ ಕಾರು ತಯಾರಿಸಲು ಮುಂದಾಗುವುದಿಲ್ಲ. ಇದಕ್ಕೆ ಮುಂದಿನ ಹಂತದ ಮಾಲಿನ್ಯ ನಿಯಮಗಳೇ ಮುಖ್ಯ ಕಾರಣ’ ಎಂದು ಮಾರುತಿ ಸುಜುಕಿಯ ಮುಖ್ಯ ತಾಂತ್ರಿಕ ಅಧಿಕಾರಿ ಸಿ.ವಿ.ರಾಮನ್ ‘ಪಿಟಿಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

2020ರ ಏಪ್ರಿಲ್‌ 1ರಿಂದ ಮಾರುತಿ ಸುಜುಕಿಯು ಡೀಸೆಲ್ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿತ್ತು. ಇದಾಗಿ ಹಲವು ತಿಂಗಳುಗಳ ಬಳಿಕ, ಮಾರುತಿ ಸುಜುಕಿಯು ಮತ್ತೆ ಡೀಸೆಲ್ ಕಾರುಗಳ ಉತ್ಪಾದನೆ ಆರಂಭಿಸಲಿದೆ ಎಂಬ ಊಹಾಪೋಹಗಳು ಕೇಳಿಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.