
ಚೆನ್ನೈ: ‘ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್’ (ಎಸ್‌ಯುವಿ) ಹೊಂದಬೇಕು ಎಂದು ಭಾರತದ ಗ್ರಾಹಕರಲ್ಲಿ ಇದ್ದ ಬಯಕೆಗೆ ‘ಡಸ್ಟರ್’ ಮೂಲಕ ಸ್ಪಂದಿಸಿದ್ದ ಫ್ರಾನ್ಸ್‌ನ ರೆನೊ ಕಂಪನಿಯು ಈಗ ಅದೇ ಹಳೆಯ ‘ಡಸ್ಟರ್’ ಕಾರನ್ನು ಹೊಸ ರೂಪದಲ್ಲಿ ಮಾರುಕಟ್ಟೆ ಪರಿಚಯಿಸಿದೆ.
ಭಾರತದ ಕಾರು ಪ್ರಪಂಚಕ್ಕೆ ‘ಡಸ್ಟರ್’ ಎಸ್‌ಯುವಿ ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದ ಮೂಲಕ ಮರುಪ್ರವೇಶ ಪಡೆದಿದೆ. ಈ ಬಾರಿ ಅದು ಹೊಸ ರೂಪವನ್ನು ಹೊತ್ತು ಬಂದಿದೆ.
2012ರ ಜುಲೈನಲ್ಲಿ ರೆನೊ ಕಂಪನಿಯು ‘ಡಸ್ಟರ್’ ಕಾರನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿತು. ಹ್ಯಾಚ್‌ಬ್ಯಾಕ್ ಎಂಬ ಪುಟ್ಟ ಕಾರುಗಳು, ಸೆಡಾನ್ ಎಂಬ ಉದ್ದನೆಯ ಕಾರುಗಳ ನಡುವೆ, ಎಸ್‌ಯುವಿ ಎಂಬುದು ‘ಶ್ರೀಮಂತರಿಗೆ ಮಾತ್ರ’ ಎಂಬ ಕಲ್ಪನೆಯು ಮಧ್ಯಮ ವರ್ಗದಲ್ಲಿ ಇತ್ತು. ಆದರೆ ಡಸ್ಟರ್ ಪ್ರವೇಶವು ಕಾರು ಲೋಕದಲ್ಲಿ ಸಂಚಲನ ಸೃಷ್ಟಿಸಿತು. ಕಾಂಪ್ಯಾಕ್ಟ್ ಎಸ್‌ಯುವಿ ಅಥವಾ ಕ್ರಾಸ್ ಓವರ್ ವಿಭಾಗ ಎಂಬ ಹೊಸ ವರ್ಗವನ್ನು ಕಾರುಗಳ ಲೋಕದಲ್ಲಿ ಹುಟ್ಟುಹಾಕಿತು.
ಕಟ್ಟುಮಸ್ತಾದ ದೇಹ, ಭಾರತದ ರಸ್ತೆಗಳಿಗೆ ತೀರಾ ಅಗತ್ಯವಿದ್ದ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಸೆಡಾನ್ ಕಾರುಗಳಿಗೆ ನಿಗದಿ ಮಾಡುವಂತಹ ಬೆಲೆಯು ಕಾರು ಪ್ರಿಯರನ್ನು ತನ್ನತ್ತ ನೋಡುವಂತೆ ಇದು ಮಾಡಿತು. ಉತ್ತಮ ಟಾರ್ಕ್ ಹೊಂದಿದ್ದ ಡೀಸೆಲ್ ಎಂಜಿನ್‌ನ ಇಂಧನ ಕ್ಷಮತೆ ಹುಬ್ಬೇರಿಸಿತ್ತು. ಹೊರ ಕವಚಕ್ಕೆ ಪೂರಕವಾದ ಮೊನೊಕಾಕ್ ಚಾಸೀಸ್ ಅನ್ನು ಪರಿಚಯಿಸಿದ ರೆನೊ, ಪ್ರಯಾಣಿಕರಿಗೆ ಹೆಚ್ಚಿನ ಆರಾಮ ಮತ್ತು ಸುರಕ್ಷತೆಯನ್ನು ಖಾತರಿಪಡಿಸಿತ್ತು.
ಸ್ಪರ್ಧಿಗಳೇ ಇಲ್ಲದ ಕ್ಷೇತ್ರಕ್ಕೆ ಕಾಲಿಟ್ಟ ರೆನೊ ಮಾಸಿಕ 5 ಸಾವಿರದಿಂದ 6 ಸಾವಿರ ಡಸ್ಟರ್ ಮಾರುವಷ್ಟು ಬೇಡಿಕೆ ಸೃಷ್ಟಿಸಿಕೊಂಡಿತು.
ಬದಲಾದ ಕಾಲಕ್ಕೆ ಮತ್ತು ಗ್ರಾಹಕರ ಬೇಡಿಕೆಗೆ ತಕ್ಕಂತೆ ಡಸ್ಟರ್‌ನಲ್ಲಿ ಬದಲಾವಣೆ ಮಾಡುವಲ್ಲಿ ರೆನೊ ಅಷ್ಟಾಗಿ ಆಸಕ್ತಿ ತೋರದಿದ್ದದ್ದು ದುಬಾರಿಯಾಯಿತು. ಭಾರತದಲ್ಲಿನ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದ ಬೆಳವಣಿಗೆಯನ್ನು ಗಮನಿಸಿದ ರೆನೊ, ಇದೀಗ ಡಸ್ಟರ್ ಹೆಸರಿನಲ್ಲಿಯೇ ಎಸ್‌ಯುವಿ ಬಿಡುಗಡೆ ಮಾಡಿದೆ. ಹೊರ ಭಾಗದಲ್ಲಿ ಬದಲಾವಣೆ ತಂದಿದೆ, ಒಳಾಂಗಣದಲ್ಲೂ ಆಧುನಿಕ ಸೌಲಭ್ಯಗಳನ್ನು ನೀಡಿದೆ.
ಕಂಪನಿಯ ಆಹ್ವಾನದ ಮೇರೆಗೆ ಪ್ರತಿನಿಧಿ ಚೆನ್ನೈಗೆ ತೆರಳಿದ್ದರು.
ಹೀಗಿದೆ ಡಸ್ಟರ್
ಮರು ಪ್ರವೇಶ ಪಡೆದಿರುವ ಡಸ್ಟರ್ ಅನ್ನು ಮೂರು ಎಂಜಿನ್ ಮಾದರಿಯಲ್ಲಿ ರೆನೊ ಪರಿಚಯಿಸಿದೆ. 1 ಲೀ. 1.3ಲೀ. ಹಾಗೂ 1.8ಲೀ ಹೈಬ್ರಿಡ್ ಟಿಸಿಇ 160 ಎಂಬ ಎಂಜಿನ್ ಇದರಲ್ಲಿದೆ. ಎಲ್ಲವೂ ಪೆಟ್ರೋಲ್ ಮಾದರಿಯವು. ಹೈಬ್ರಿಡ್ ಮಾದರಿಯಲ್ಲಿ ಎರಡು ಮೋಟಾರ್‌ಗಳನ್ನು ನೀಡಲಾಗಿದ್ದು ನಗರ ಪ್ರದೇಶದಲ್ಲಿ ಶೇ 80ರಷ್ಟು ಬ್ಯಾಟರಿಯಿಂದಲೇ ಚಾಲಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. 360 ಡಿಗ್ರಿ ಕ್ಯಾಮೆರಾದೊಂದಿಗೆ ಎಡ್ಯಾಸ್ ಏರ್‌ಬ್ಯಾಗ್ ಜತೆಗೆ 35 ಸುರಕ್ಷತಾ ಸಾಧನಗಳನ್ನು ಕಂಪನಿ ಅಳವಡಿಸಿದೆ. ಇದಕ್ಕಾಗಿ ಡಸ್ಟರ್‌ಗೆ ಪಂಚತಾರಾ ಸುರಕ್ಷತಾ ಮಾನ್ಯತೆ ದೊರೆತಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಒಳಾಂಗಣದಲ್ಲಿ ಗೂಗಲ್ ಅಸಿಸ್ಟೆನ್ಸ್ ಇರುವ ಇನ್ಫೊಟೈನ್ಮೆಂಟ್ ಸಿಸ್ಟಂ ವೆಂಟಿಲೇಟೆಡ್ ಸೀಟ್ ಬೃಹತ್ ಪ್ಯಾನಾರೊಮಿಕ್ ಸನ್‌ರೂಫ್ ನೀಡಲಾಗಿದೆ. 780 ಲೀಟರ್ ಬೂಟ್ ಸ್ಪೇಸ್ ಕೂಡಾ ಹೊಸ ಡಸ್ಟರ್ ಹೊಂದಿದೆ. ಕಂಪನಿಯು ವಾಹನದ ಬೆಲೆಯನ್ನು ಇನ್ನೂ ಪ್ರಕಟಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.