ADVERTISEMENT

ಕಾರ್‌ ಖರೀದಿಗೆ ಡಿಸೆಂಬರ್‌ ‘ಸುಗ್ಗಿ’

ಮೋಹನ್ ಕುಮಾರ ಸಿ.
Published 18 ಡಿಸೆಂಬರ್ 2019, 19:30 IST
Last Updated 18 ಡಿಸೆಂಬರ್ 2019, 19:30 IST
ಫೋರ್ಡ್‌
ಫೋರ್ಡ್‌   

ಕುಂ ಠಿತ ಆರ್ಥಿಕ ಪ್ರಗತಿಯೂ ಸೇರಿದಂತೆ ವಿವಿಧ ಕಾರಣಗಳಿಗೆ ಕಾರುಗಳ ಮಾರಾಟವೂ ಕುಸಿತಗೊಂಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾರಾಟ ಚೇತರಿಕೆಯಾಗಲು ಕಾರು ಕಂಪನಿಗಳು ಅಲ್ಪ ಮಟ್ಟಿಗೆ ರಿಯಾಯಿತಿಯನ್ನು ಘೋಷಿಸಿದ್ದವು. ಅದು ಕೆಲಮಟ್ಟಿಗೆ ಯಶಸ್ಸು ಕಂಡಿತ್ತು. ಈಗ, ಕ್ಯಾಲೆಂಡರ್‌ ವರ್ಷಾಂತ್ಯದ ಕೊನೆಯ ದಿನಗಳಲ್ಲಿ ಮತ್ತೆ ಎಲ್ಲ ಕಾರು ಕಂಪನಿಗಳು ಪೈಪೋಟಿಗೆ ಬಿದ್ದು ಹೆಚ್ಚಿನ ರಿಯಾಯಿತಿ ದರದಲ್ಲಿ ಕಾರು ಮಾರಾಟಕ್ಕೆ ಮುಂದಾಗಿವೆ. ಇದರಿಂದ ಗ್ರಾಹಕರಿಗೆ ಡಿಸೆಂಬರ್‌ ತಿಂಗಳೇ ಸುಗ್ಗಿಕಾಲವಾಗಿದ್ದು, ಕಿಸೆಯಲ್ಲಿ ಸ್ವಲ್ಪ ಹಣವಿದ್ದರೂ ಸಾಕು, ತಮಗಿಷ್ಟದ ಕಾರುಗಳನ್ನು ಹಲವಾರು ವಿಶೇಷ ಕೊಡುಗೆಗಳಿಂದ ಖರೀದಿಸುವ ಸದವಕಾಶ ಒದಗಿಬಂದಿದೆ.

ಶೇ 5ರಿಂದ 15ರಷ್ಟರವರೆಗೆ ಎಲ್ಲ ಕಾರು ಕಂಪನಿಗಳು ರಿಯಾಯಿತಿ ಘೋಷಿಸಿವೆ. ಈ ರಿಯಾಯಿತಿ ಮತ್ತು ವಿಶೇಷ ಕೊಡುಗೆಗಳ ಕಾರಣಕ್ಕೆ ‘ಬಿಎಸ್‌–4’ಮಾಲಿನ್ಯ ನಿಯಂತ್ರಣ ಮಾನದಂಡದ ವಾಹನಗಳ ದಾಸ್ತಾನು ಬೇಗನೆ ಮುಗಿಯುವಂತೆ ಕಾಣುತ್ತಿದೆ. ಮಾಲಿನ್ಯ ನಿಯಂತ್ರಣದ ಹೊಸ ಮಾನದಂಡವಾಗಿರುವ ‘ಭಾರತ್‌ ಸ್ಟೇಜ್‌–6’ 2020ರ ಏಪ್ರಿಲ್‌ನಿಂದ ಜಾರಿಗೊಳ್ಳುವುದರಿಂದ ‘ಬಿಎಸ್‌–4’ ಕಾರುಗಳ ದಾಸ್ತಾನು ಖಾಲಿ ಮಾಡುವ ಉದ್ದೇಶದಿಂದಲೂ ರಿಯಾಯಿತಿ ಮಾರಾಟಕ್ಕೆ ಕಾರು ಕಂಪನಿಗಳು ಮುಂದಾಗಿವೆ. ಕಾರುಗಳ ಬೆಲೆ ಜನವರಿ ವೇಳೆಗೆ ಏರಿಕೆ ಆಗಲಿದೆ ಎಂಬುದು ಕಾರು ಮಾರುಕಟ್ಟೆ ತಜ್ಞರ ಅಭಿಮತವಾಗಿದೆ.

ವಿಭಿನ್ನ ಬಗೆಯ ಕೊಡುಗೆಗಳು

ADVERTISEMENT

ವಿವಿಧ ಕಾರ್‌ ತಯಾರಿಕಾ ಕಂಪನಿಗಳು ಹಲವಾರು ಬಗೆಯ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿವೆ. ‌‌ಮಾರುತಿ ಸುಜುಕಿಯು ‘ವರ್ಷದ ಅಮೋಘ ರಿಯಾಯಿತಿ’ ಎಂದರೆ, ಟಾಟಾ ಮೋಟರ್ಸ್ ‘ದಶಕದಲ್ಲೇ ಅತ್ಯುತ್ತಮ ರಿಯಾಯಿತಿ ಉಡುಗೊರೆ’ ಎಂದಿದೆ. ಹ್ಯುಂಡೈ ‘ಡಿಸೆಂಬರ್‌ ಡಿಲೈಟ್‌’ ಎಂದು ತನ್ನ ರಿಯಾಯಿತಿ ಮಾರಾಟ ಕ್ರಮವನ್ನು ಬಣ್ಣಿಸಿದೆ.

‘ಬಿಎಸ್‌–4’ ಕಾರುಗಳನ್ನು ಪೂರ್ಣಪ್ರಮಾಣದಲ್ಲಿ ಮಾರಾಟ ಮಾಡುವ ದೃಷ್ಟಿಯಿಂದ ರಿಯಾಯಿತಿ ದರವನ್ನು ಘೋಷಿಸಲಾಗಿದೆ. ಇದು ಕಂಪನಿ ದೃಷ್ಟಿಯಿಂದ ಸುಸ್ಥಿರ ಉಪಕ್ರಮ ಅಲ್ಲ. ಆದರೂ, ಮಾರಾಟದಲ್ಲಿ ಸ್ಥಿರತೆ ಸಾಧಿಸಲು ಈ ಕ್ರಮ ಅನಿವಾರ್ಯ. ಜನವರಿ ವೇಳೆಗೆ ಕಾರುಗಳ ದರದಲ್ಲಿ ಮತ್ತೆ ಏರಿಕೆ ಆಗಲಿದೆ. ಮಾಲಿನ್ಯ ನಿಯಂತ್ರಣದ ಹೊಸ ಮಾನದಂಡ ಅಳವಡಿಕೆ, ಸುರಕ್ಷತಾ ಮಾನದಂಡ ಸುಧಾರಣೆ ಹಾಗೂ ರೂಪಾಯಿ ಬೆಲೆಯ ಏರಿಳಿತ ಮೊದಲಾದ ಕಾರಣಗಳಿಗಾಗಿ ದರ ಹೆಚ್ಚಳ ಮಾಡಲೇ ಬೇಕಾಗಿದೆ’ ಎನ್ನುತ್ತಾರೆ ಮಾರುತಿ ಸುಜುಕಿಯ ಮಾರುಕಟ್ಟೆ ವ್ಯವಸ್ಥಾಪಕ ಶಶಾಂಕ್‌ ಶ್ರೀವಾತ್ಸವ.

ಭರಪೂರ ಕೊಡುಗೆ

ಮಾರುತಿ ಸುಜುಕಿ ದೇಶದಲ್ಲೇ ಹೆಚ್ಚು ಕಾರುಗಳನ್ನು ತಯಾರಿಸುವ ಕಂಪನಿಯಾಗಿದ್ದು, ಇದು ತನ್ನ ಕಾರುಗಳಿಗೆ ₹ 37,000ದಿಂದ 89,000ರದವರೆಗೆ ರಿಯಾಯಿತಿ ನೀಡಿದೆ. ಇಕೊ ಕಾರಿಗೆ ಕಡಿಮೆ ರಿಯಾಯಿತಿ ನೀಡಿದ್ದರೆ ವಿಟಾರಾ ಬ್ರೆಜಾಗೆ ಹೆಚ್ಚು ರಿಯಾಯಿತಿ ನೀಡಿದೆ. ಹ್ಯುಂಡೈ ₹ 20,000ದಿಂದ ₹ 2 ಲಕ್ಷದ ವರೆಗೆ ರಿಯಾಯ್ತಿ ಘೋಷಿಸಿದೆ. ಟಾಟಾ ಮೋಟರ್ಸ್‌ನ ರಿಯಾಯಿತಿಯು ₹ 77,500ದಿಂದ ₹ 2.25ಲಕ್ಷದವರೆಗೆ ಇದೆ.

ಕಾರು ತಯಾರಿಕೆ ಹೆಚ್ಚಿಸಲು ಕ್ರಮ

‘ಕುಸಿದಿರುವ ಕಾರುಗಳ ಮಾರಾಟವನ್ನು ಹೆಚ್ಚಿಸಲು ಇಡೀ ಕಾರು ಉದ್ಯಮ ಮುಂದಾಗಿದೆ. ಹೊಸ ಕಾರುಗಳ ತಯಾರಿಕೆಯನ್ನು ಹೆಚ್ಚಿಸಲು ಈ ಕ್ರಮ ಅನಿವಾರ್ಯವಾಗಿದೆ. ಗ್ರಾಹಕರಿಗೆ ಕೊಳ್ಳುವ ಶಕ್ತಿ ಇದ್ದರೂ ಹೆಚ್ಚಿನ ರಿಯಾಯಿತಿ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ. ಅಂತಹವರಿಗೆ ಈ ರಿಯಾಯಿತಿ ಹೆಚ್ಚು ಉಪಯೋಗಕ್ಕೆ ಬರಲಿದೆ’ ಎಂದು ಹುಂಡೈ ಮೋಟರ್ಸ್‌ನ ಮಾರಾಟ ಮುಖ್ಯಸ್ಥ ವಿಕಾಸ್‌ ಜೈನ್‌ ಹೇಳುತ್ತಾರೆ.

ಏಪ್ರಿಲ್‌ನಲ್ಲಿ ಬಿಎಸ್‌–6 ಮಾನದಂಡ ಜಾರಿಗೆ ಬರುವ ಕಾರಣಕ್ಕೆ ಗ್ರಾಹಕರು ಕಾರುಕೊಳ್ಳುವ ನಿರ್ಧಾರವನ್ನು ತಡೆಹಿಡಿದಿದ್ದಾರೆ. 2017ರಲ್ಲಿ ಬಿಎಸ್‌–3ಯಿಂದ ಬಿಎಸ್‌–4ಗೆ ಮಾನದಂಡ ಬದಲಾದಾಗಲೂ ಹೀಗೆಯೇ ಆಗಿತ್ತು.

ಕಾರ್‌ ತಯಾರಿಸುವ ಎಲ್ಲ ಕಂಪನಿಗಳು ಪೈಪೋಟಿ ಮೇಲೆ ಕೊಡುಗೆಗಳನ್ನು ನೀಡುತ್ತಿರುವುದರಿಂದ ಡಿಸೆಂಬರ್‌ ತಿಂಗಳ ಕೊನೆ ವಾರದಲ್ಲಿ ಕಾರುಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ. 2020ರ ಮೊದಲ ತ್ರೈಮಾಸಿಕದ ವೇಳೆಗೆ ಕಾರು ಉದ್ಯಮ ಚೇತರಿಕೆ ಕಾಣಲು ಡಿಸೆಂಬರ್‌ ತಿಂಗಳು ಸಹಾಯ ಮಾಡಬಲ್ಲದು ಎಂಬ ನಿರೀಕ್ಷೆ ಮೂಡಿದೆ.

ಕೆಲವು ಕಂಪನಿಗಳು ದಾಸ್ತಾನನ್ನು 30 ದಿನಗಳಿಗಾಗುವಷ್ಟು ಇಟ್ಟಿದ್ದರೆ, ಇನ್ನೂ ಕೆಲವು 20 ದಿನಗಳಿಗಾಗುವಷ್ಟು ಕಾರು ಸಂಗ್ರಹವನ್ನು ಹೊಂದಿವೆ. ಗ್ರಾಹಕರು ಕಾರು ಕೊಳ್ಳಲು ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಮುಗಿಬಿದ್ದದ್ದೇ ಆದಲ್ಲಿ ಬಿಎಸ್‌–4 ಮಾದರಿಯ ಕಾರುಗಳು ಬೇಗನೇ ಮಾರಾಟವಾಗಲಿವೆ.

ಜನವರಿ ವೇಳೆಗೆ ಕಾರುಗಳ ದರವನ್ನು ಹೆಚ್ಚಿಸಲು ಹಲವಾರು ಕಂಪನಿಗಳು ಈಗಾಗಲೇ ನಿರ್ಧರಿಸಿವೆ. ರಿಯಾಯಿತಿ ಮತ್ತು ವಿಶೇಷ ಕೊಡುಗೆಗಳು ಕೊನೆಗೊಳ್ಳುವ ಮುಂಚೆಯೇ ಕಾರ್‌ ಖರೀದಿಸಲು ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.