ADVERTISEMENT

ಫ್ಯಾಷನ್‌ ಲೋಕ | ನಖ ಈಗೀಗ ಕಲಾತ್ಮಕ

ರೂಪಾ .ಕೆ.ಎಂ.
Published 16 ಸೆಪ್ಟೆಂಬರ್ 2022, 19:30 IST
Last Updated 16 ಸೆಪ್ಟೆಂಬರ್ 2022, 19:30 IST
   

ನಖ ಅರ್ಥಾತ್‌ ಉಗುರು ಬೆಳೆಯುವುದು ಸ್ವಾಸ್ಥ್ಯದ ಸಂಕೇತ. ಹಾಗೆಯೇ, ಫ್ಯಾಷನ್‌ ಲೋಕದಲ್ಲಿ ಉಗುರಿಗೆ ತನ್ನದೇ ಆದ ಮಹತ್ವವಿದೆ. ಅದರಲ್ಲೂ ‘ನೇಲ್ ಆರ್ಟ್‌’ ಈಚೆಗೆ ಯುವ ಮನಸ್ಸುಗಳ ಗಮನ ಸೆಳೆಯುತ್ತಿದೆ. ಒಂದೊಂದು ಉಗುರಿಗೆ ಒಂದೊಂದು ನಮೂನೆಯ ಬಣ್ಣ ಹಚ್ಚಿಕೊಂಡು ಅಂದ ಹೆಚ್ಚಿಸಿಕೊಳ್ಳುವ ಪರಿಪಾಠ ಮುಂದುವರಿದೆ. ಧರಿಸುವ ದಿರಿಸಿಗೆ ಹೊಂದಿಕೆಯಾಗುವಂತೆ ಉಗುರನ್ನು ಕಲಾತ್ಮಕವಾಗಿ ಅಲಂಕರಿಸಿಕೊಳ್ಳಲಾಗುತ್ತಿದೆ. ಅಷ್ಟೆ ಅಲ್ಲದೇ ಆಯಾ ಋತುಮಾನಕ್ಕೆ ತಕ್ಕಂತೆ ಉಗುರಿಗೆ ಬಣ್ಣ ಲೇಪಿಸಲಾಗುತ್ತಿದೆ. ಮಳೆಗಾಲವನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಮಾಡಿಕೊಳ್ಳುವ ಕೆಲವು ನೇಲ್‌ ಆರ್ಟ್‌ಗಳು ಇಂತಿವೆ...

ಮಳೆಹನಿ ಬಣ್ಣ: ಮಳೆಗಾಲವೆಂದರೆ ಮಳೆ ಹನಿಗಳ ಚಿಟಪಟ ಸದ್ದು. ಇಂಥ ಮಳೆಹನಿಗಳು ಉಗುರಿನ ಮೇಲೆ ಮೂಡಿದರೆ...!. ಹೌದು ಮಳೆ ಹನಿಯನ್ನೇ ಹೋಲುವ ಬಣ್ಣವನ್ನು ಉಗುರಿಗೆ ನೀಡಬಹುದು. ಉಗುರಿಗೆ ತಿಳಿ ನೀಲಿ ಬಣ್ಣವನ್ನು ಬೇಸ್ ಆಗಿ ಮಾಡಿಕೊಳ್ಳಬೇಕು. ನಂತರ ಗಾಢಬಣ್ಣದ ನೀಲಿಯನ್ನು ಚುಕ್ಕಿಯಾಗಿ ಮೂಡಿಸಲಾಗುತ್ತದೆ. ಒಂದು ಬೆರಳಿನ ಉಗುರಿಗೆ ಕೊಡೆಯ ಚಿತ್ರವನ್ನು ಮೂಡಿಸಿದರೆ ಈ ಪರಿಕಲ್ಪನೆಗೆ ಇನ್ನಷ್ಟು ಅರ್ಥ ಬರುತ್ತದೆ.

ಕಾಮನಬಿಲ್ಲಿನ ಬಣ್ಣ: ಮಳೆಗಾಲದಲ್ಲಿ ಕಾಮನಬಿಲ್ಲು ಮೂಡುವ ಕ್ಷಣವನ್ನು ಆನಂದಿಸದವರೇ ಇಲ್ಲ. ಕಾಮನಬಿಲ್ಲು ಅಂದರೆ ವರ್ಣಮಯ. ಇಂಥ ಕಾಮನಬಿಲ್ಲನ್ನು ಉಗುರಿನ ಮೇಲೆ ಮೂಡಿಸಿಕೊಳ್ಳುವುದು ಸದ್ಯದ ಟ್ರೆಂಡ್‌. ಮಳೆಗಾಲದಲ್ಲಿ ಕಾಮನಬಿಲ್ಲು ಮೂಡುತ್ತದೋ ಇಲ್ಲವೋ ಆದರೆ, ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳ ಕೈ ಉಗುರಿನಲ್ಲಿ ಥೇಟ್‌ ಕಾಮನಬಿಲ್ಲನ್ನೇ ಹೋಲುವ ಬಣ್ಣ ಕಂಡುಬರುತ್ತದೆ. ಬದುಕೆಂದರೆ ಕಲರ್‌ಫುಲ್‌ ಎಂದು ಸಂಭ್ರಮಿಸುವವರು ಹೆಚ್ಚಾಗಿ ಈ ಬಣ್ಣವನ್ನು ಇಷ್ಟಪಡುತ್ತಾರೆ.

ADVERTISEMENT

ಮೇಘವರ್ಣ: ಮಳೆಗಾಲದಲ್ಲಿ ಮೇಘಗಳದ್ದೇ ಕಾರುಬಾರು. ಈ ಮೇಘಗಳೆಲ್ಲವೂ ಇಮೋಜಿಗಳ ರೂಪ ಪಡೆದು ಉಗುರಿನ ಮೇಲೆ ನಿಂತರೆ ಹೇಗಿರುತ್ತದೆ. ಹಾಗಿರುತ್ತದೆ ಈ ನೇಲ್‌ ಆರ್ಟ್‌. ತಿಳಿ ನೀಲಿ ಬಣ್ಣದ ಬೇಸ್‌ ಕೋಟ್‌ ಮೇಲೆ ಶ್ವೇತ ಹಾಗೂ ಶ್ಯಾಮಲ ವರ್ಣದ ಮೋಡಗಳನ್ನು ಇಮೋಜಿ ರೂಪದಲ್ಲಿ ಮೂಡಿಸಲಾಗುತ್ತದೆ.

ಬೂದುಬಣ್ಣ: ನಮಗಿರುವ ಮೂಡ್‌ಗೆ ಆಧಾರದ ಮೇಲೂ ನೇಲ್‌ ಆರ್ಟ್‌ ಮಾಡಿಕೊಳ್ಳಲಾಗುತ್ತದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಉದಾಸೀನ ಪ್ರವೃತ್ತಿ ಹೆಚ್ಚಿರುತ್ತದೆ. ಹಾಗಾಗಿ ಅದನ್ನೆ ಬಿಂಬಿಸುವ ಬಣ್ಣವೆಂದರೆ ಬೂದು ಮಿಶ್ರಿತ ಬಿಳಿ ಬಣ್ಣ. ಇವರೆಡನ್ನು ಸಮಪ್ರಮಾಣದಲ್ಲಿ ಒಂದೊಂದು ಬೆರಳಿಗೆ ಒಂದೊಂದರಂತೆ ಹಾಕಿಕೊಂಡು ಮನಸ್ಸಿನ ಮೂಡ್‌ ಅನ್ನು ವ್ಯಕ್ತಪಡಿಸಲಾಗುತ್ತದೆ.

ಕಪ್ಪೆಬಣ್ಣ: ಮಳೆಗಾಲವೆಂದರೆ ವಟಗುಟ್ಟುವ ಕಪ್ಪೆಗಳು. ಈ ಕಪ್ಪೆಗಳು ಉಗುರಿನಲ್ಲಿ ಮೈದಾಳಿದರೆ.. ಹೌದು, ಹಲವು ಬಣ್ಣಗಳಲ್ಲಿ ಒಂದೊಂದು ಬೆರಳಿಗೆ ಒಂದರಂತೆ ಕಪ್ಪೆಯ ಚಿತ್ತಾರವನ್ನು ಕಲಾತ್ಮಕವಾಗಿ ಪೇಂಟ್ ಮಾಡಬಹುದು. ಆ ಮೂಲಕ ಆಯಾ ಋತುಮಾನದ ವಿಶೇಷವನ್ನು ಫ್ಯಾಷನ್ ವಸ್ತುವಾಗಿ ನೋಡಬಹುದು.

ಜೆಲ್ಲಿ ಉಗುರು: ಮಳೆಗಾಲದಲ್ಲಿ ಸಾಮಾನ್ಯವಾಗಿ ಈ ಬಗೆಯ ವಿನ್ಯಾಸ ಹೆಚ್ಚು ಪ್ರಚಲಿತದಲ್ಲಿದೆ. ಪಾರದರ್ಶಕ ಎನಿಸುವ ಜೆಲ್‌ ಮಾದರಿಯ ನೇಲ್‌ ಪಾಲಿಶ್‌ ಅನ್ನು ಬೇಸ್‌ ಕೋಟ್‌ ಆಗಿ ಬಳಸಲಾಗುತ್ತದೆ. ಅದರ ಮೇಲೆ ಬಣ್ಣ ಬಣ್ಣದ ಗುಳ್ಳೆಯ ಚಿತ್ತಾರವನ್ನು ಮೂಡಿಸಲಾಗುತ್ತದೆ.ಇದು ಕೂಡ ನೋಡಲು ಆಕರ್ಷಕವಾಗಿ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.