ತುರುಬು ಎಂದು ಈಗ ಮೂಗು ಮುರಿಯುವಂತಿಲ್ಲ. ಮದುವೆ ಇರಲಿ; ನಿಶ್ಚಿತಾರ್ಥ, ಮೆಹೆಂದಿ, ಸಂಗೀತ ಸಂಜೆ, ಆರತಕ್ಷತೆ ಪಾರ್ಟಿಗೂ ಚಂದದ ತುರುಬು ಕಟ್ಟಿಕೊಳ್ಳಬಹುದು. ಸೀರೆಯಷ್ಟೆ ಅಲ್ಲ ಪಾಶ್ಚಿಮಾತ್ಯ ಶೈಲಿಯ ಫ್ಯೂಷನ್ ದಿರಿಸಿಗೂ ತುರುಬು ಸೂಕ್ತ ಆಯ್ಕೆ
ಮದುವೆಗೊಂದು ಅಂದದ ಕೇಶವಿನ್ಯಾಸ ಬೇಕು ಎಂದಾಗ ಥಟ್ಟನೇ ಹೊಳೆಯುವ ನೂರಾರು ಆಯ್ಕೆಗಳಲ್ಲಿ ಬನ್ ಕೇಶವಿನ್ಯಾಸ ಕೂಡ ಒಂದು. ’ಅರೆ! ಅದಾ? ತುರುಬು. ಅದರಲ್ಲೇನು ವಿಶೇಷ?... ಬನ್ ಹಳೇಯದಾಯ್ತು ಬಿಡಿ’ ಎನ್ನುವವರಿಗೆ ಇಲ್ಲಿವೆ ನೂರಾರು ವೈವಿಧ್ಯಮಯ ಬನ್ ಕೇಶವಿನ್ಯಾಗಳು.
ಹೌದು, ಅಜ್ಜಿ–ಮುತ್ತಜ್ಜಿಯ ಕಾಲದ ಗಟ್ಟಿಯಾದ, ಹೆಣೆದ ತುರುಬು ಅಮ್ಮನ ಕಾಲಕ್ಕೆ ಬಂದಾಗ ತುಸು ಮೆದುವಾಯಿತು. ಅಜ್ಜಿಯ ಕಾಲದಲ್ಲಿ ಕತ್ತಿನಿಂದ ತುಸು ಮೇಲಿನ ಜಾಗದಲ್ಲಿದ್ದ ತುರುಬು, ಅಮ್ಮನ ಕಾಲಕ್ಕೆ ಒಂಚೂರು ಮೇಲಕ್ಕೆ ಜರಿದು ಆಕರ್ಷಣೆಯನ್ನು ಹೆಚ್ಚಿಸಿಕೊಂಡಿತ್ತು.
70ರ ದಶಕದಿಂದ ಉದ್ದ ಜಡೆಯನ್ನು ಒಪ್ಪವಾಗಿ ಹೆಣೆದು ದೊಡ್ಡ ಬನ್‌ಗಳಿಂದಲೇ ಗುರುತಿಸಿಕೊಂಡ ಕನ್ನಡ ನಟಿಯರಾದ ಕಲ್ಪನಾ, ಆರತಿ, ಮಂಜುಳಾರಿಂದ ಹಿಡಿದು, ಬಾಲಿವುಡ್ ನಟಿಯರಾದ ಸಾಯಿರಾ, ಸಾಧನಾ, ಮುಮ್ತಾಜ್‌ವರೆಗೆ ಅನೇಕರು ಈ ಕೇಶವಿನ್ಯಾಸ ಹೊಸ ಹೊಸ ಹೊಳಹುಗಳನ್ನು ನೀಡಿ ಹೋಗಿದ್ದಾರೆ. ಇಂದಿಗೂ ಕಾಲಕ್ಕೆ ತಕ್ಕಂತೆ ಬದಲಾಗುತ್ತ, ಎಲ್ಲಾ ಕಾಲದ ವನಿತೆಯರನ್ನೂ ತನ್ನ ಲೋಕಕ್ಕೆ ಸೇರಿಸಿಕೊಳ್ಳುತ್ತಿರುವ ಬನ್ ಕೇಶವಿನ್ಯಾಸಕ್ಕೆ ಮನಸೋಲದವರೇ ಇಲ್ಲ.
ಬನ್ ಕೇಶವಿನ್ಯಾಸದ ಬಗ್ಗೆ ಮಾತನಾಡುವಾಗ ಈ ಬಗೆಯ ಹೇರ್‌ಸ್ಟೈಲ್‌ನಲ್ಲಿ ಕಂಗೊಳಿಸಿದ ಈಗಿನ ಬಾಲಿವುಡ್ ಬೆಡಗಿಯರ ಬಗೆಗೂ ಹೇಳಲೇಬೇಕು. ಕಾಜೋಲ್, ಮಾಧುರಿ ದಿಕ್ಷೀತ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಒಂದಿಲ್ಲ ಒಂದು ಸಂದರ್ಭಗಳಲ್ಲಿ ಸಾಂಪ್ರದಾಯಿಕ ದಿರಿಸಿನೊಂದಿಗೆ ಬನ್ ಕೇಶವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದನ್ನು ಗಮನಿಸಬಹುದು. ಕಾರ್ಯಕ್ರಮವೊಂದರಲ್ಲಿ ಸರಳವಾದ ಬನ್ ಕೇಶವಿನ್ಯಾಸಕ್ಕೆ ಮಲ್ಲಿಗೆ ಮೊಗ್ಗು ಮುಡಿದು, ನೇರಳೆ ಬಣ್ಣದ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡ ಶ್ರದ್ಧಾ ಕಪೂರ್ ಎಲ್ಲರ ಗಮನ ಸೆಳೆದಿದ್ದರು. ತಾಪ್ಸಿ ಪನ್ನು ಸಹ ಒಂದು ಸಂದರ್ಭದಲ್ಲಿ ಲ್ಯಾವೆಂಡರ್ ಸೀರೆಗೆ ಪಪ್ಫಿ ನೆಟ್ ಸ್ಲೀವ್ಸ್ ರವಿಕೆಯುಟ್ಟು, ಸಿಂಪಲ್ ಬನ್ ಹೇರ್‌ಸ್ಟೈಲ್‌ನಲ್ಲಿ ಗಮನ ಸೆಳೆದಿದ್ದರು. ದೀಪಿಕಾ ಪಡುಕೋಣೆ ತಮ್ಮ ಪಾಶ್ಚಿಮಾತ್ಯ ಶೈಲಿಯ ಔಟ್‌ಫಿಟ್‌ನಲ್ಲಿಯೂ ಹೈ ಬನ್ ಕೇಶವಿನ್ಯಾಸದ ಮೊರೆ ಹೋಗುವುದುಂಟು. ಬಿಪಾಶಾ ಬಸು, ಸೋನಂ ಕಪೂರ್, ಕೀರ್ತಿ ಸನಾನ್ ಕಾಕ್‌ಟೈಲ್ ಅಥವಾ ರಿಸೆಪ್ಶನ್‌ನಂತಹ ಪಾರ್ಟಿಗಳಲ್ಲಿ ತಮ್ಮ ಗೌನ್, ಸೂಟ್, ಮ್ಯಾಕ್ಸಿಯಂಥ ದಿರಿಸಿನ ಜತೆಗೂ ಸರಳವಾದ ಲೋ ಬನ್ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದುಂಟು. ನಿಶ್ಚಿತಾರ್ಥ, ಮೆಹೆಂದಿ, ಸಂಗೀತ ಸಂಜೆ, ಆರತಕ್ಷತೆ ಪಾರ್ಟಿಯವರೆಗೆ ಅಂದದ ಬನ್ ಕೇಶವಿನ್ಯಾಸ ಹೊಂದಲಿದೆ ಎನ್ನುತ್ತಾರೆ ಮೇಕಪ್ ಕಲಾವಿದರು.
ವಿವಿಧ ಬಗೆಯ ಕಿರೀಟ, ಚೈನ್, ಹೂವು, ಆಭರಣಗಳಿಂದ ಅಲಂಕೃತಗೊಂಡು ಕಾಲ ಎಷ್ಟೇ ಮುಂದಕ್ಕೋಡಿದರೂ ತನ್ನ ಮೀರಿಸುವವರು ಯಾರಿಲ್ಲ ಎನ್ನುವಂತೆ ಅಗ್ರ ಹೇರ್‌ಸ್ಟೈಲ್ ಪಟ್ಟಿಯಲ್ಲಿ ಇದು ಉಳಿದುಕೊಂಡಿದೆ. ಸಾಂಪ್ರದಾಯಿಕ ಸೀರೆಯೇ ಆಗಲಿ, ಇಂಡೋ–ವೆಸ್ಟರ್ನ್ ಲೆಹೆಂಗಾ ಆಗಿರಲಿ, ಎರಡಕ್ಕೂ ಒಪ್ಪುವುದು ಬನ್ ಹೇರ್‌ಸ್ಟೈಲ್. ನಂಬರ್ ಒನ್ ವೆಡ್ಡಿಂಗ್ ಪ್ಲಾನರ್ ವೆಬ್‌ಸೈಟ್ ಆಗಿರುವ ‘ವೆಡ್ಡಿಂಗ್ ಬಜಾರ್’ನ ಹೇರ್‌ಸ್ಟೈಲ್ ಪಟ್ಟಿಯಲ್ಲಿಯೂ ಇದಕ್ಕೆ ಮೊದಲ ಸ್ಥಾನವಿದೆ.
ಎರಡೂ ಕಡೆ ಜಡೆಗಳನ್ನು ಹೆಣೆದು, ಅದನ್ನು ಹಿಂದಕ್ಕೆ ಎಳೆದು ಒಂದು ಬನ್ ಕಟ್ಟಿ ಅದಕ್ಕೆ ಆಕರ್ಷಕ ಚಿಕ್ಕಚಿಕ್ಕ ತಿಳಿಗುಲಾಬಿ ಬಣ್ಣದ ಗುಲಾಬಿ ಹೂವುಗಳಿಂದ ಸಿಂಗರಿಸಬಹುದು. ಒಂದೇ ಬದಿಗೆ ಜಡೆ ಹೆಣೆದು ಅದನ್ನು ಇನ್ನೊಂದು ಬದಿಗೆ ಎಳೆದು ಬನ್ ಕಟ್ಟಬಹುದು. ಇದನ್ನು ಚಿಕ್ಕ ಚಿಕ್ಕ ಬೀಡ್ಸ್‌ಗಳಿಂದ ಅಲಂಕರಿಸಬಹುದು. ಇನ್ನು ಚಿಕ್ಕ ಚಿಕ್ಕ ಹೆರಳುಗಳನ್ನು ಹೆಣೆದು ಬನ್ ಕಟ್ಟುವ ಟ್ವಿಸ್ಟೆಡ್ ಬನ್ ಹೇರ್‌ಸ್ಟೈಲ್‌ಗೆ ಯಾವುದೇ ಆಲಂಕಾರಿಕ ವಸ್ತುಗಳನ್ನು ಬಳಸುವ ಅಗತ್ಯವಿಲ್ಲ. ಸಣ್ಣ ಸಣ್ಣ ಜಡೆಗಳಿಂದ ಹೆಣೆಯಲ್ಪಟ್ಟ ಬನ್‌ಗೆ ಮುತ್ತು ಅಥವಾ ಹರಳುಗಳಿಂದ ಅಲಂಕರಿಸಬಹುದು.
ದಟ್ಟವಾದ ಕೇಶರಾಶಿಯನ್ನು ಹೊಂದಿರುವವರು ಮೆಸ್ಸಿ ಬನ್ ಹೇರ್‌ಸ್ಟೈಲ್ ಪ್ರಯತ್ನಿಸಬಹುದು. ಆದರೆ, ಇದಕ್ಕೆ ಅದ್ಧೂರಿಯಾದ ಅಲಂಕಾರ ಬೇಡ. ಮೆಸ್ಸಿ ಬನ್ ಸರಳವಾಗಿದ್ದಷ್ಟೂ ಚಂದ. ಹಾಗೆಯೇ ಬೊಕೆ ಬನ್ ಹೇರ್‌ಸ್ಟೈಲ್ ಕಡಿಮೆ ಅಥವಾ ತೆಳುವಾದ ಕೇಶರಾಶಿಯವರಿಗೆ ಸೂಕ್ತ. ಹೆಸರೇ ಹೇಳುವಂತೆ ಬೊಕೆ ಬನ್‌ಗೆ ಆಕರ್ಷಕ ಹೂವುಗಳಿಂದ ಅಲಂಕರಿಸಿ ಬೊಕೆಯ ಹಾಗೆಯೇ ಕಂಗೊಳಿಸುವಂತೆ ಮಾಡಲಾಗುತ್ತದೆ.
ಬನ್ ಹೇರ್‌ಸ್ಟೈಲ್... ಅದೇ ತುರುಬು... ಎಂದು ಎಂದೂ ಮೂಗು ಮುರಿಯದಿರಿ. ಕಳೆದ ಹತ್ತಾರು ದಶಕಗಳಿಂದ ತನ್ನದೇ ಆದ ಛಾಪು ಉಳಿಸಿಕೊಂಡು ಬಂದಿರುವ ಬನ್, ಮುಂದೆಯೂ ಮದುವೆ ಸಿಂಗಾರದಲ್ಲಿ ತಾನೇ ಹೆಚ್ಚು ಎಂದು ನಿಲ್ಲುವುದರಲ್ಲಿ ಅನುಮಾನವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.