ಸಂಕ್ರಾಂತಿ ಸಂಭ್ರಮದೊಳಗ ಸುಗ್ಗಿಯ ಜೊತಿಗೆ ಕರಿಹರಿಯೂ ಸಂಭ್ರಮನೂ ಇರ್ತದ. ಎತ್ತುಗಳಿಗೆ ಕಿಚ್ಚು ಹಾಯಿಸಿದ್ರ, ಸಂಕ್ರಾಂತಿ ಕರಿಗೆ ಕರಿ ಅರವಿ ಹಾಕ್ಕೋಬೇಕು ಅನ್ನೋದೊಂದು ನಂಬಿಕೆ.
ಸೂರ್ಯದೇವನನ್ನು ಒಲಿಸಿಕೊಳ್ಳಲು ಆಚರಿಸುವ ಈ ಹಬ್ಬದಲ್ಲಿ ಸೂರ್ಯ ಸಂತಾನ ಶನಿಯನ್ನು ಆರಾಧಿಸುವ ಆಚರಣೆಯೂ ಇದೆ. ಪ್ರತ್ಯಕ್ಷವಾಗಿ ಪೂಜೆ ಪುನಸ್ಕಾರಗಳು ನಡೆಯದಿದ್ದರೂ, ಜನಪದರಲ್ಲಿ ಸಂಕ್ರಾಂತಿ ಕರಿಗೆ ಕಾಡಿಗೆ ಕಪ್ಪು ಕಣ್ಣಿಗಿರಬೇಕು. ಉಡಲು ಕರಿಚಂದ್ರಕಾಳಿ ಸೀರೆ ಇರಬೇಕು. ಇಲ್ಲವೇ ಕರಿ ಬಣ್ಣದ ಉಡುಪುಗಳನ್ನು ತೊಡಬೇಕು ಎಂಬ ಪ್ರತೀತಿ ಬೆಳೆದು ಬಂದಿದೆ.
ಎಳ್ಳುಬೆಲ್ಲ ಹಂಚುವುದರೊಂದಿಗೆ ಎಳ್ಳಿನ ಚಿಗಳಿ (ಎಳ್ಳುಬೆಲ್ಲ ತುಸು ಮಾತ್ರ ಜೀರಿಗೆ ಬೆರೆಸಿದ ಉಂಡೆ) ಹಂಚುವಾಗಲೆಲ್ಲ ಕಣ್ಣಿಗೆ ಕಾಡಗಿ ಇರಬೇಕು ಅನ್ನುವ ನಂಬಿಕೆ ಇದೆ. ಮದುವೆಯಾಗಿ ಮೊದಲ ಸಲ ಮನೆಗೆ ಬಂದ ಮಗಳಿಗೆ, ಅಥವಾ ಮೊದಲ ಸಂಕ್ರಮಣ ಆಚರಿಸುವ ಸೊಸೆಗೆ ಕರಿಚಂದ್ರಕಾಳಿ ಸೀರೆಯನ್ನುಡಿವುದು, ಕೊಡಿಸುವುದು ಸಹ ಸಂಪ್ರದಾಯವಾಗಿದೆ. ಕಪ್ಪು ಒಡಲಿನ ಸೀರೆಯ ಮೇಲೆ ಬಿಳಿ ರೇಷ್ಮೆದಾರದ ಕಸೂತಿ ಮಾಡಿರಲಾಗುತ್ತದೆ. ಕಪ್ಪು ಬಾನಂಗಳದಲ್ಲಿ ಮಿನುಗುವ ತಾರೆಗಳಂಥ ಲುಕ್ ಈ ಸೀರೆ ನೀಡುತ್ತದೆ. ಸೆರಗಲ್ಲಿ ತೆನೆ, ನವಿಲು, ತೇರು, ಆನೆಗಳ ಕಸೂತಿ ಮಾಡಿರಲಾಗುತ್ತದೆ. ಸೆರಗು ಹೊದ್ದಾಗ ಭುಜಗಳಿಂದ ಬೆನ್ನ ಮೇಲೆ ಹರಡುವ ಸೆರಗಿನಲ್ಲಿ ಈ ಚಿತ್ತಾಕರ್ಷಕ ಕಸೂತಿಗಳು ಹೃನ್ಮನ ಸೆಳೆಯುತ್ತವೆ.
ಇದೀಗ ಕರಿಚಂದ್ರಕಾಳಿ ಸೀರೆಯ ಸಂಭ್ರಮ ಕಾಣದಿದ್ದರೂ ಕಪ್ಪು ಬಟ್ಟೆಗಳ ಫ್ಯಾಶನ್ ಅತಿ ಹೆಚ್ಚಾಗಿದೆ. ಬನಾರಸಿ ಕಪ್ಪು ಸಲ್ವಾರ್‌ಗಳು, ಅನಾರ್‌ಕಲಿ ಸೀರೆಗಳು, ಶಿಫಾನ್ ಸೀರೆಯ ಮೇಲೆ ಸ್ವರೋಸ್ಕಿ ಹರಳು ಅಂಟಿಸಿ ತನೈರಾದವರು ಹೊಸ ಸಂಗ್ರಹವನ್ನೇ ಪರಿಚಯಿಸಿದ್ದಾರೆ. ಶಿಫಾನ್ ಹಾಗೂ ಜಾರ್ಜೆಟ್ ಸೀರೆಗಳ ಮೇಲೆ ಅದೇ ಬಣ್ಣದ ಹರಳುಗಳನ್ನು ಅಂಟಿಸಿರುವ ಟ್ರೆಂಡ್ ಇದೀಗ ಜನಪ್ರಿಯವಾಗುತ್ತಿದೆ.
ಕಪ್ಪು ಬಣ್ಣವನ್ನೂ ಉಟ್ಟು, ತೊಟ್ಟು, ಸಂಭ್ರಮಿಸುವ ಹಬ್ಬ ಒಂದಿದ್ದರೆ ಅದು ಸಂಕ್ರಾಂತಿ ಮಾತ್ರ. ಈ ಋತುಮಾನವನ್ನೇ ಸಂಕ್ರಮಣದ ಋತುಮಾನವೆಂದು ಕರೆಯಲಾಗುತ್ತದೆ.
ಈ ಸಂಕ್ರಾಂತಿಯಿಂದ ಶಿವರಾತ್ರಿಯವರೆಗೂ ಕುದಿಸಿ ತಿನ್ನುವ ಸಂಪ್ರದಾಯವೂ ಇದೆ. ಹಸಿ ಅವರೆಕಾಯಿ, ಬಟಾಣಿ ಕಾಳು, ಗೆಣಸು, ಕಡಲೆಕಾಯಿಗಳನ್ನು ಮಡಕೆಯಲ್ಲಿ ಉಪ್ಪಿನೊಂದಿಗೆ ಕುದಿಸಿ, ತಿನ್ನಲು ನೀಡಲಾಗುತ್ತದೆ. ಅರೆ ಬಲಿತ ಈ ಕಾಯಿಗಳನ್ನು ತಿನ್ನುವುದನ್ನೇ ಹಾಡಿನಲ್ಲಿಯೂ ಹೇಳಲಾಗಿದೆ.
‘ಯವ್ವಾ ಯವ್ವಾ ಗೆಣಸ
ಗಡಗ್ಯಾಗ ಹಾಕಿ ಕುದುಸ
ಕರಿ ಸೀರಿ ಉಡುಸ
ಗಂಡನ ಮನೀಗೆ ಕಳಸ’
ಎಂದು ಹೇಳುವ ಜನಪದೀಯ ಹಾಡುಗಳು ಈಗಲೂ ಜನಜನಿತವಾಗಿವೆ. ಎಳ್ಳುಬೆಲ್ಲದ ಸಂಭ್ರಮವನ್ನು ಕರಿಯಾಕಾಶದ ಬಣ್ಣದೊಳಗೆ ಮಿಂದೆದ್ದು ಸಂಭ್ರಮಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.