ADVERTISEMENT

ಆರೋಗ್ಯಕರ ಎಸೆನ್ಶಿಯಲ್ ಎಣ್ಣೆ: ಇಲ್ಲಿದೆ ಉಪಯೋಗಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 19:30 IST
Last Updated 22 ಅಕ್ಟೋಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೇಹಸಿರಿಯನ್ನು ಕಾಪಾಡಿಕೊಳ್ಳುವುದು ಯಾರಿಗೆ ಇಷ್ಟವಿಲ್ಲ ಹೇಳಿ! ಅದಕ್ಕಾಗಿ ಸದಾ ಹುಡುಕಾಟ ನಡೆದೇ ಇರುತ್ತದೆ. ಅಂಗಡಿ ಮಳಿಗೆಗಳಲ್ಲಿ ಸಿಗುವ ಉತ್ಪನ್ನಗಳು, ವನಸ್ಪತಿ ಔಷಧ ಎಂದೆಲ್ಲ ಬಳಸಿ ನೋಡುವುದು ಸಹಜ. ಕೆಲವು ಉತ್ಪನ್ನಗಳು ಸೌಂದರ್ಯವನ್ನು ಹೆಚ್ಚಿಸಿದರೆ ಇನ್ನು ಕೆಲವು ಸೌಂದರ್ಯವನ್ನು ಕೆಡಿಸುತ್ತವೆ.

ಸೌಂದರ್ಯವರ್ಧಕಗಳಲ್ಲಿ ಎಸೆನ್ಶಿಯಲ್ ಎಣ್ಣೆ ಉತ್ತಮ ಎಂದು ಬಳಸಿ ಅನುಭವ ಇರುವವರು ಹೇಳುತ್ತಾರೆ. ಇದಕ್ಕೆ ಕಾರಣವೂ ಇದೆ. ಯಾವುದೇ ರಾಸಾಯನಿಕ ವಸ್ತುಗಳನ್ನು ಸೇರಿಸದೆ ನೈಸರ್ಗಿಕವಾಗಿರುವ ಇದು ತ್ವಚೆಗೆ ಆರೋಗ್ಯಕರ. ಇತ್ತೀಚೆಗೆ ಬಹುತೇಕ ಎಲ್ಲಾ ರೀತಿಯ ಥೆರಪಿ ಹಾಗೂ ಫೇಶಿಯಲ್‌ ವಿಧಾನಗಳಲ್ಲಿ ಎಸೆನ್ಶಿಯಲ್ ಎಣ್ಣೆಯನ್ನು ಬಳಸುತ್ತಾರೆ. ಇದರಲ್ಲಿ ಸೌಂದರ್ಯಕ್ಕೆ ಪೂರಕವಾದ ಅಂಶಗಳಿವೆ. ಪೆಪ್ಪರ್‌ಮಿಂಟ್, ಲ್ಯಾವೆಂಡರ್‌, ರೋಸ್‌ಮೆರಿ, ಲೆಮನ್‌, ಆರೆಂಜ್‌ ಮುಂತಾದ ಎಸೆನ್ಶಿಯಲ್ ಎಣ್ಣೆಗಳಿವೆ. ಈ ಎಣ್ಣೆಯನ್ನು ಬಳಸುವುದು ಹೇಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಇದರ ಮಸಾಜ್‌ನಿಂದಾಗುವ ಉಪಯೋಗಗಳೇನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ರಕ್ತ ಸಂಚಾರ ವೃದ್ಧಿಗೆ

ADVERTISEMENT

ವಾರಕ್ಕೊಮ್ಮೆ ಅಥವಾ ದಿನ ಬಿಟ್ಟು ದಿನ ಎಸೆನ್ಶಿಯಲ್ ಎಣ್ಣೆಯಿಂದ ಸಂಪೂರ್ಣ ದೇಹಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ದೇಹದಲ್ಲಿ ರಕ್ತಸಂಚಾರ ಸುಗಮವಾಗುತ್ತದೆ. ಮಸಾಜ್ ಪ್ರಕ್ರಿಯೆಯು ದೇಹವನ್ನು ಬೆಚ್ಚಗಾಗಿಸುತ್ತದೆ. ಆಗ ನರಗಳು ಹಾಗೂ ರಕ್ತನಾಳಗಳಿಗೆ ಆರಾಮ ಎನ್ನಿಸಿ ರಕ್ತಸಂಚಾರ ಸರಾಗವಾಗಲು ಅನುಕೂಲ.

ದೇಹದ ಆರಾಮಕ್ಕೆ

ಈ ಎಣ್ಣೆಯಿಂದ ಮಸಾಜ್ ಮಾಡಿಸಿಕೊಳ್ಳುವುದರಿಂದ ದೈಹಿಕ ಒತ್ತಡವೂ ಕಡಿಮೆಯಾಗುತ್ತದೆ. ದೇಹದ ಕೆಲವು ಪ್ರಮುಖ ಅಂಗಗಳಿಗೆ ಮಸಾಜ್ ಮಾಡುವುದರಿಂದ ದೇಹ ಶಾಂತವಾಗುತ್ತದೆ. ಎಸೆನ್ಶಿಯಲ್ ಎಣ್ಣೆಯ ಮಸಾಜ್‌ ಮಾಡಿ ನಂತರ ಸ್ನಾನ ಮಾಡುವುದರಿಂದ ದೇಹಕ್ಕೆ ಆರಾಮ ಎನ್ನಿಸುತ್ತದೆ. ಅಲ್ಲದೇ ಒಟ್ಟಾರೆ ದೈಹಿಕ ವ್ಯವಸ್ಥೆ ಸುಧಾರಿಸಲು ಕೂಡ ಇದು ಸಹಕಾರಿ.

ಒತ್ತಡರಹಿತ ಮನಸ್ಸಿಗೆ

ದೇಹದಲ್ಲಿ 30ಕ್ಕೂ ಹೆಚ್ಚು ಒತ್ತಡ ತರುವ ಕೇಂದ್ರ ಅಥವಾ ಬಿಂದುಗಳಿವೆ. ದೇಹದಲ್ಲಿ ಒತ್ತಡ ಕಡಿಮೆಯಾಗಿ ಆರಾಮ ಎನ್ನಿಸಲು ಆ ಬಿಂದುಗಳಿಗೆ ಸರಿಯಾಗಿ ಮಸಾಜ್ ನೀಡಬೇಕು. ಅವುಗಳಿಗೆ ಆರಾಮ ಎನ್ನಿಸಿದಾಗ ಸಹಜವಾಗಿ ದೈಹಿಕ ಒತ್ತಡವೂ ಕಡಿಮೆಯಾಗುತ್ತದೆ. ಈ ಬಿಂದುಗಳು ಮೆದುಳು, ಗ್ರಂಥಿ, ಮೇದೋಜೀರಕ ಗ್ರಂಥಿ ಸೇರಿದಂತೆ ದೇಹದ ಇತರ ಕೆಲವು ಭಾಗಗಳಿಗೆ ಆರಾಮ ಎನಿಸಿ ಸಂಪೂರ್ಣ ದೇಹಕ್ಕೆ ಪುನಶ್ಚೇತನ ಸಿಗುತ್ತದೆ.

ಮೃದುವಾದ ಚರ್ಮಕ್ಕೆ..

ಎಸೆನ್ಶಿಯಲ್ ಎಣ್ಣೆ ಬಳಕೆಯಿಂದ ಚರ್ಮವು ಮೃದುವಾಗುತ್ತದೆ. ವಯಸ್ಸಾದಂತೆ ಚರ್ಮದಲ್ಲಿ ನೆರಿಗೆ ಮೂಡುವುದು, ನೆರಿಗೆ ಬೀಳುವುದು, ಅಲ್ಲಲ್ಲಿ ಗಂಟಾಗುವುದು ಮುಂತಾದುವನ್ನು ತಡೆದು ವಯಸ್ಸಾದ ಲಕ್ಷಣಗಳು ಚರ್ಮದಲ್ಲಿ ಕಾಣಿಸದಂತೆ ನಿಯಂತ್ರಿಸುತ್ತದೆ. ಆಗಾಗ ಎಸೆನ್ಶಿಯಲ್ ಎಣ್ಣೆಯಿಂದ ಚರ್ಮಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ಚರ್ಮವು ಒಣಗುವುದನ್ನು ತಡೆಯಬಹುದು, ಅಲ್ಲದೇ ಸದಾ ಕಾಂತಿಯಿಂದ ಹೊಳೆಯುವಂತೆ ನೋಡಿಕೊಳ್ಳಬಹುದು. ಇದರಿಂದ ಕಣ್ಣಿಗೆ ಒತ್ತಡ ಬೀಳುವುದನ್ನು ತಡೆಯಬಹುದು. ಅಲ್ಲದೇ ಕಣ್ಣಿಗೆ ದೃಷ್ಟಿ ಸುಧಾರಣೆಗೂ ನೆರವಾಗುತ್ತದೆ.

ಅಂಗಾಂಗಗಳ ಆರೋಗ್ಯಕ್ಕೆ..

ಈ ಎಣ್ಣೆಯಿಂದ ಮಸಾಜ್ ಮಾಡಿಸಿಕೊಳ್ಳುವುದರಿಂದ ದೇಹದ ವಿವಿಧ ಅಂಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಇದು ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಹಾರ್ಮೋನ್‌ಗಳನ್ನು ಶಾಂತಗೊಳಿಸಿ ಹೃದಯ ಬಡಿತವನ್ನು ಸುಧಾರಿಸುತ್ತದೆ. ಅಲ್ಲದೇ ದೇಹದ ಅಂಗಾಂಗಗಳ ವ್ಯವಸ್ಥೆ ಸುಧಾರಣೆಗೂ ಇದು ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.