ADVERTISEMENT

Fashion: ಯಾವ ಮೂಗುತಿ ಆಯ್ಕೆ ಮಾಡುತಿ?

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 23:30 IST
Last Updated 1 ಆಗಸ್ಟ್ 2025, 23:30 IST
   

ಮೂಗುತಿ ಎಂದರೆ ಹೆಣ್ಣುಮಕ್ಕಳಿಗೆ ಅದೇನೋ ಪ್ರೀತಿ. ಮೂಗಿಗೆ ಎಂದೂ ಭಾರವಾಗದ ಈ ಆಭರಣವು ಈಗೀಗ ಹೊಸ ಹೊಸ ವಿನ್ಯಾಸಗಳಲ್ಲಿ ಲಭ್ಯವಾಗುತ್ತಿದ್ದು, ಯುವ ಮನಸ್ಸುಗಳನ್ನು ಸೆಳೆಯುತ್ತಿದೆ. 

ಬಂಗಾರ, ಬೆಳ್ಳಿ, ವಜ್ರ, ಮುತ್ತು, ರತ್ನ, ಹರಳುಗಳಿಂದ ಮಾಡಿದ ಮೂಗುತಿಗಳು ಈಗ ಲಭ್ಯವಿವೆ. ಎಂಥ ಮುಖದವರಿಗೆ, ಯಾವ ರೀತಿಯ ಮೂಗು ಇರುವವರಿಗೆ ಯಾವ ಬಗೆಯ ಮೂಗುತಿ ಸರಿ ಹೊಂದುತ್ತದೆ ಎಂಬುದನ್ನು ಸರಿಯಾಗಿ ಅಳೆದು ತೂಗಿಯೇ ಮೂಗುತಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. 

ಗಿಣಿಯಂಥ ನೀಳವಾದ ಮೂಗಿಗೆ ರಿಂಗ್‌ ಮೂಗುತಿ ಒಪ್ಪುತ್ತದೆ. ದುಂಡಗಿನ ಮೊರದಗಲದ ಮುಖಕ್ಕೆ ರಿಂಗ್‌ ಅಥವಾ ಸಣ್ಣ ಸಣ್ಣ ಹರಳುಗಳಿರುವ ಉದ್ದನೆಯ ಮೂಗುತಿ ಸೂಕ್ತವಾಗುತ್ತದೆ ಅಥವಾ ಮುತ್ತಿನ ಹರಳು ಇರುವ ನತ್ತನ್ನು ಧರಿಸಬಹುದು. ಚಿಕ್ಕ  ಮೂಗು ಇದ್ದರೆ ಚಿನ್ನ, ವಜ್ರ ಅಥವಾ ಮುತ್ತಿನ ಸ್ಟಡ್‌ ಇರುವ ಮೂಗುತಿಯನ್ನು ಧರಿಸಬಹುದು. 

ADVERTISEMENT

ಟ್ರೆಂಡಿಂಗ್‌ನಲ್ಲಿರುವ ಮೂಗುತಿ....

ಬೆಳ್ಳಿಯಿಂದ ಮಾಡಲಾದ, ವೃತ್ತಾಕಾರದಲ್ಲಿರುವ, ಆರು ಅಥವಾ ಐದು ಹರಳುಗಳಿರುವ ಮೂಗುತಿ ಹೆಚ್ಚು ಸದ್ದು ಮಾಡುತ್ತಿದೆ. ಧರಿಸುವ ಉಡುಪಿಗೆ ಅನುಗುಣವಾಗಿ ಮೂಗುತಿಯನ್ನು ಹೊಂದಿಸಬಹುದು. ಸೀರೆ, ಲೆಹೆಂಗಾಗಳಿಗೆ ಚಿನ್ನ ಅಥವಾ ವಜ್ರದ ದೊಡ್ಡ ಮೂಗುತಿ ಒಪ್ಪುತ್ತದೆ. ಇದಲ್ಲದೇ ಮುತ್ತಿನ ಮೂಗುತಿ, ನತ್ತುಗಳು ಚೆನ್ನಾಗಿ ಕಾಣುತ್ತವೆ. ಜೀನ್ಸ್‌, ಸ್ಕರ್ಟ್‌, ಇಂಡೋವೆಸ್ಟ್ರನ್‌ ಔಟ್‌ಫಿಟ್‌ ಇದ್ದಾಗ ಬೆಳ್ಳಿಯ ತೆಳುವಾದ ರಿಂಗ್, ಬಿಳಿ ಹರಳಿನ ಅಥವಾ ವಜ್ರದ ಸ್ಟಡ್‌ ಧರಿಸಿಯೂ ಆಧುನಿಕವಾಗಿ ಕಾಣಿಸಿಕೊಳ್ಳಬಹುದು. 

ದೊಡ್ಡದಾದ ಮೂಗುತಿ ಧರಿಸಿದಾಗ ಅತಿಯಾದ ಮೇಕಪ್‌ ಬೇಡ. ಸ್ಟಡ್‌ ಧರಿಸಿದಾಗ ಮೇಕಪ್‌ ಹೆಚ್ಚಿದ್ದರೂ ನಡೆಯುತ್ತದೆ. ಈಗೀಗ ಮೂಗಿನ ಎಡ ಹಾಗೂ ಬಲ ಎರಡು ಬದಿಗಳಲ್ಲಿಯೂ ಮೂಗು ಚುಚ್ಚಿಸಿ ಕೊಳ್ಳುವ ಟ್ರೆಂಡ್ ಹೆಚ್ಚುತ್ತಿದೆ. ಮಾಡೆಲಿಂಗ್‌ ಕ್ಷೇತ್ರದಲ್ಲಿ ಇರುವವರು ಮೂಗಿನ ಮಧ್ಯಭಾಗದಲ್ಲಿ ರಿಂಗ್‌ನಂಥ ಒಡವೆಯನ್ನು ಹಾಕುತ್ತಾರೆ. ಚೆನ್ನಾಗಿ ಕಾಣಿಸದ ಆಭರಣಗಳಾಗಲಿ, ಮುಖವಾಗಲಿ ಇರುವುದಿಲ್ಲ. ಎಂಥ ಮುಖದ ಆಕಾರಕ್ಕೆ ಎಂಥ ಮೂಗುತಿ ಬೇಕು ಎಂಬುದನ್ನು ಆಯ್ಕೆ ಮಾಡುವ ಹೊಣೆ ನಮ್ಮದಾಗಿರಬೇಕಷ್ಟೆ.

ಮೂಗುತಿ ಹಾಕಿಕೊಳ್ಳುವ ಉತ್ಸಾಹದಲ್ಲಿ, ಮೂಗು ಚುಚ್ಚಿಸಿಕೊಳ್ಳುವಾಗ ವಿನಾಕಾರಣ ನೋವುಣ್ಣಬೇಡಿ. ನುರಿತವರಿಂದಲೇ ಮೂಗು ಚುಚ್ಚಿಸಿಕೊಳ್ಳಿ. ಆಗ ಮೂಗಿನ ಮೇಲೆ ಗುಳ್ಳೆಗಳಾಗುವುದು, ನರದ ಮೇಲೆ ಚುಚ್ಚಿ ಬಾಧೆಗೆ ಒಳಗಾಗುವುದು ತಪ್ಪುತ್ತದೆ. ಮೂಗುತಿಯ ಸಹವಾಸವೇ ಬೇಡಪ್ಪ ಎಂದೆಲ್ಲ ಅನ್ನಿಸದೆ, ಮೂಗುತಿಯು ಫ್ಯಾಷನ್‌ ಆ್ಯಕ್ಸೆಸರಿಯ ಭಾಗವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.