ADVERTISEMENT

Shopping: ನಿಮಗೂ ಉಂಟಾ ಶಾಪಿಂಗ್‌ ಮೇನಿಯಾ?!

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 1:30 IST
Last Updated 24 ಜನವರಿ 2026, 1:30 IST
   
ಅಗತ್ಯ ಹಾಗೂ ಅನಿವಾರ್ಯದ ವ್ಯಾಪ್ತಿಯನ್ನು ಮೀರಿ ಮಾಡುವ ಬಹುತೇಕ ಶಾಪಿಂಗ್‌ಗಳು ಗೀಳಿಗೆ ದಾರಿ ಮಾಡುವ ಸಾಧ್ಯತೆಯೇ ಹೆಚ್ಚು

‘ಅಯ್ಯೋ ಇದೇ ಬಣ್ಣ, ಇದೇ ಡಿಸೈನ್‌ನ ಸೀರೆ ನನ್ನ ವಾರಗಿತ್ತಿ ಹತ್ರಾನೂ ಇದೆ. ಇನ್ಮುಂದೆ ನಾನು ಇದನ್ನ ಉಡಲ್ಲ ಕಣೇ’.

‘ಜಾಮದಾನಿ, ಪೋಚಂಪಲ್ಲಿ, ಬಾಂದಿನಿ, ಕಂಚಿ, ಬನಾರಸಿ, ಮೈಸೂರು ಸಿಲ್ಕ್‌ ಎಲ್ಲವೂ ಇವೆ. ಆದರೆ, ಇನ್‌ಸ್ಟಾದಲ್ಲಿ ಟ್ರೆಂಡಿಂಗ್ ಆಗಿರೊ ‘ಪರ್ಪಲ್‌ ಅಜ್ರಕ್‌’ ಒಂದನ್ನ ಈ ತಿಂಗಳು ಖರೀದಿಸಲೇಬೇಕು’.

‘ಎಲ್ಲ ಶೇಡ್‌ನ ಜೀನ್ಸ್‌ಗಳಿವೆ. ಆದರೆ, ಬಿಳಿ ಮತ್ತು ಕ್ರೀಂ ಬಣ್ಣ ಮಿಕ್ಸ್‌ ಆಗಿರೊ ‘ಟೋರ್ನ್‌’ ಜೀನ್ಸ್‌ ಒಂದಿಲ್ಲ. ಯಾವಾಗ ಕೊಳ್ಳಲಿ?’

ADVERTISEMENT

–ಹೀಗೆ, ವಾರ್ಡ್‌ರೋಬ್‌ ನೋಡ್ತಿದ್ದ ಹಾಗೇ ‘ಶಾಪಿಂಗ್’ ಮಾಡಲು ಹೆಣ್ಣುಮಕ್ಕಳಿಗೆ ಹಲವಾರು ಕಾರಣಗಳು ಹುಟ್ಟಿಕೊಳ್ಳುತ್ತವೆ. ಶಾಪಿಂಗ್‌ ಮೇನಿಯಾಗೆ ಒಳಗಾದವರಿಗೆ ಬೇಕಾದ್ದು, ಬೇಡದ್ದು ಎಲ್ಲವನ್ನೂ ಕೊಳ್ಳುವಾಗ ಕಿಕ್‌ ಹೊಡೆದಂತೆ ಆಗುತ್ತದಾದರೂ ಕ್ರಮೇಣ ಅದು ಆರ್ಥಿಕ ಹೊರೆಯಷ್ಟೇ ಅಲ್ಲ ಮಾನಸಿಕ ಒತ್ತಡವನ್ನೂ ತರುತ್ತದೆ ಎಂಬ ಸಣ್ಣ ಅಂದಾಜೂ ಇರುವುದಿಲ್ಲ. 

ಕೈಬೆರಳ ತುದಿಯಲ್ಲಿಯೇ ಆನ್‌ಲೈನ್‌ ಶಾಪಿಂಗ್‌ಗೆ ಅವಕಾಶ ಇರುವುದರಿಂದ ಬೇಕಾದ್ದನ್ನು ‘ಗೋ ಕಾರ್ಟ್‌’ಗೆ ಹಾಕಿಕೊಂಡು, ಕ್ಯಾಷ್‌ ಆನ್‌ ಡೆಲಿವರಿಯೋ ರಿಟರ್ನ್ ಪಾಲಿಸಿಯೋ ಒಟ್ಟಿನಲ್ಲಿ ಆ ಕ್ಷಣಕ್ಕೆ ಚಂದ ಎನಿಸಿದ್ದನ್ನು ಖರೀದಿಸಬಹುದು. ಇನ್ನು ಕ್ರೆಡಿಟ್ ಕಾರ್ಡ್ ಉಜ್ಜಿದರೆ ಸಿಗುವ ಕೂಪನ್ ಪಾಯಿಂಟ್ಸ್, ಡಿಸ್ಕೌಂಟ್ಸ್‌, ಈಝಿ ಪೇಮೆಂಟ್... ಹೀಗೆ ಶಾಪಿಂಗ್ ಮೇನಿಯಾವನ್ನು ಹೆಚ್ಚಿಸಲು ಎಷ್ಟೊಂದು ಆಕರ್ಷಕ ಉಡುಗೊರೆಗಳು ಅಂತೀರಾ!

ಕಾಸ್ಮೆಟಿಕ್ಸ್‌, ಬ್ಯಾಗ್ಸ್‌, ಕಿಡ್ಸ್‌ವೇರ್‌, ಫುಟ್‌ವೇರ್‌... ಹೀಗೆ ಎಲ್ಲದಕ್ಕೂ ಪ್ರತ್ಯೇಕ ಷೋರೂಂಗಳು. ‌ಅಗತ್ಯ ಮೀರಿ ಒಂದಕ್ಕಿಂತ ಒಂದು ಶೈಲಿ, ವಿನ್ಯಾಸ, ಬಣ್ಣ ಹೀಗೆ ಹಲವು ನೆಪಗಳಲ್ಲಿ ಮೂರರಿಂದ ನಾಲ್ಕು ಬಟ್ಟೆಗಳನ್ನು ಒಟ್ಟೊಟ್ಟಿಗೇ ಖರೀದಿಸುವ ವರಸೆ ಶುರುವಾಗಿದೆ. ದಿಢೀರ್‌ ಕೊಳ್ಳುವ ‘ಇಂಪಲ್ಸಿವ್ ಶಾಪಿಂಗ್’ ಈಗ ಆಧುನಿಕ ಜೀವನಶೈಲಿಯ ಭಾಗವೇ ಆಗಿಹೋಗಿದೆ. ಈ ಬಗೆಯ ಶಾಪಿಂಗ್‌ ಮೊದಲಿಗೆ, ಬೇಕೋ ಬೇಡವೋ ಎಂದು ನಿರ್ಧರಿಸುವ ನಮ್ಮ ವಿವೇಚನಾ ಶಕ್ತಿಯನ್ನೇ ಬೇಟೆಯಾಡುತ್ತದೆ. ‘ಮೊದಲು ಖರೀದಿಸುವ, ಆಮೇಲೆ ಸಾಲ ತೀರಿಸುವ’ ಎಂಬ ಆಲೋಚನೆಗೆ ಕ್ರೆಡಿಟ್‌ ಕಾರ್ಡ್ ಇಂಬು ನೀಡುತ್ತದೆ. ಕಂಡಿದ್ದೆಲ್ಲವನ್ನೂ ಖರೀದಿಸುವ ಚಟ ಹತ್ತಿದರೆ ಸಾಲದ ಸುಳಿಯಲ್ಲಿ ಸಿಲುಕುವುದು ನಿಶ್ಚಿತ.

ಹಿಂದೆಲ್ಲ ಮಧ್ಯಮ ವರ್ಗದವರದ್ದು ವ್ಯವಸ್ಥಿತ ಶಾಪಿಂಗ್ ಆಗಿತ್ತು. ವರ್ಷಕ್ಕೊಮ್ಮೆ ಎರಡು ಜತೆ ಬಟ್ಟೆ ಹೊಲಿಸಿಕೊಂಡು, ಅದನ್ನೇ ವರ್ಷವಿಡೀ ಬಳಸುತ್ತಿದ್ದರು. ಕ್ರಮೇಣ, ಪ್ರಮುಖ ಹಬ್ಬಗಳಲ್ಲಷ್ಟೇ ಬಟ್ಟೆ ಖರೀದಿಸುವ ಸಂಪ್ರದಾಯ ಬಂತು. ಅಮ್ಮ, ಅಜ್ಜಿಯ ಸೀರೆ, ಕುಪ್ಪಸಗಳು, ಅಕ್ಕನ ಕುರ್ತಾ, ಅಣ್ಣನ ಶರ್ಟ್‌, ಚಡ್ಡಿಯೂ ಮನೆಯ ಕಿರಿಯ ಸದಸ್ಯರ ಪಾಲಾಗುತ್ತಿದ್ದವು. ಉಡುಗೆ ದೊಡ್ಡ ಸೈಜಿನದಾಗಿದ್ದರೆ, ಅದಕ್ಕೆ ಹೊಲಿಗೆ ಹಾಕಿಸಿ ತೊಡಲಾಗುತ್ತಿತ್ತು. ಮದುವೆ, ಮುಂಜಿಯಂಥ ಸಮಾರಂಭಗಳಲ್ಲಿ ಮನೆಯ ಮಕ್ಕಳಿಗೆ ಅಗತ್ಯವಾದ ಪ್ರಾಶಸ್ತ್ಯ ಕೊಟ್ಟು ಬಟ್ಟೆ ಖರೀದಿಸಲಾಗುತ್ತಿತ್ತು. ಎಲ್ಲಾದರೂ ಪ್ರವಾಸಕ್ಕೆ ಹೋದರೆ, ಆ ಪ್ರದೇಶದ ವಿಶೇಷ ಶೈಲಿಯ ಬಟ್ಟೆ ಕೈಗೆಟಕುವ ದರದಲ್ಲಿ ಇದ್ದರೆ ಮಾತ್ರ ಕೊಳ್ಳಲಾಗುತ್ತಿತ್ತು.

ಖಯಾಲಿಯೇ ಬಂಡವಾಳ!

ಯಾವುದೇ ವಸ್ತುವನ್ನು ಖರೀದಿಸುವಾಗ ಹೆಣ್ಣುಮಕ್ಕಳದ್ದು ಬಹಳ ನಾಜೂಕಿನ, ಅಷ್ಟೇ ನಿರ್ದಿಷ್ಟವಾದದ್ದನ್ನು ಬೇಡುವ ಖಯಾಲಿ. ಅವರ ಈ ‘ದೌರ್ಬಲ್ಯ’ವೇ ಚಿನ್ನ ಹಾಗೂ ಉಡುಪು ಉದ್ಯಮಗಳ ಮೂಲ ಬಂಡವಾಳ. ‘ಈ ಬಣ್ಣದ ಬೇರೆ ವಿನ್ಯಾಸವಿದ್ದರೆ ತೋರಿಸಿ, ಇದೇ ವಿನ್ಯಾಸದ್ದು ಬೇರೆ ಬಣ್ಣವಿದೆಯೇ ನೋಡಿ’ ಎಂದು, ಶಾಪಿಂಗ್‌ಪ್ರಿಯ ಹೆಣ್ಣುಮಕ್ಕಳನ್ನು ಕೆಲವು ಪುರುಷರು ಗೇಲಿ ಮಾಡುವುದುಂಟು.

ಇರುವ ಇತಿಮಿತಿಗಳಲ್ಲಿಯೇ, ಖರೀದಿಸುವಾಗ ಖರೀದಿಸಿ, ಬೇಡ ಎನಿಸಿದಾಗ ಸುಮ್ಮನಿರುವುದು ಒಂದು ಕೌಶಲ. ಇದನ್ನು ಅರಿತು ಮುನ್ನಡೆದರೆ ಬದುಕು ಹೊರೆ ಎನಿಸದೆ ಸರಾಗವಾಗಿ ಸಾಗುತ್ತದೆ.

ಅದೃಷ್ಟ ಹೋಗುತ್ತದಂತೆ!
‘ನಿಮ್ಮ ಬಟ್ಟೆಯನ್ನು ತೊಡಲು ಯಾರಿಗೂ ಅವಕಾಶ ಕೊಡಬೇಡಿ. ಅವರು ಸಂಬಂಧಿಕರೇ ಆಗಿರಲಿ ಆಪ್ತರೇ ಆಗಿರಲಿ. ಹಾಗೊಮ್ಮೆ ಮಾಡಿದರೆ ನಿಮ್ಮ ಅದೃಷ್ಟವೆಲ್ಲ ಸೋರಿ ಹೋಗುತ್ತದೆ. ಅಷ್ಟೇ ಅಲ್ಲ ಅದರಿಂದ ನಿಮ್ಮೊಳಗಿನ ಸಕಾರಾತ್ಮಕ ಧೋರಣೆಯನ್ನು ಬೇರೆಯವರಿಗೆ ಕೊಟ್ಟಂತೆ’ ಎಂದು ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಒಬ್ಬರು ಬಹಳ ಗಂಭೀರವಾಗಿ ಹೇಳುತ್ತಿದ್ದ ಮಾತು ಇನ್‌ಸ್ಟಾದ ಫೀಡ್‌ನಲ್ಲಿ ಕಾಣಿಸಿಕೊಂಡಿತ್ತು. ಅಕ್ಕನ, ಅಮ್ಮನ ಸೀರೆ ಉಡುವಾಗ ಸಿಗುವ ತೃಪ್ತ ಭಾವವನ್ನು ವರ್ಣಿಸುವುದು ಹೇಗೆ? ಅಜ್ಜಿ– ಅಮ್ಮನ ಹರಿದ ಸೀರೆಗಳೇ ಕೌದಿಗಳಾಗಿ ಮನೆಮಕ್ಕಳ ಮೈ ಮನಸ್ಸನ್ನು ಬೆಚ್ಚಗಿಡುತ್ತವಲ್ಲದೆ, ಸಂಬಂಧಗಳ ಬಿಸುಪನ್ನೂ ಉಳಿಸುತ್ತವೆ ಎಂಬುದನ್ನು ಈ ಇನ್‌ಸ್ಟಾ ಕೂಸುಗಳಿಗೆ ಹೇಳುವವರು ಯಾರು?

ಸರಳ ಸೂತ್ರ ಪಾಲಿಸಿ

ತಮಗಾಗಿಯೋ ಬೇರೆಯವರ ಖುಷಿಗಾಗಿಯೋ ಅನಗತ್ಯವಾಗಿ ಶಾಪಿಂಗ್ ಮಾಡಿ ತಲೆನೋವು ತಂದುಕೊಳ್ಳುವುದಕ್ಕಿಂತ, ಶಾಪಿಂಗ್ ಮಾಡಬೇಕು ಎಂದುಕೊಂಡಾಗೆಲ್ಲ ಈ ಸರಳ ಸೂತ್ರಗಳನ್ನು ಪಾಲಿಸುವುದು ಒಳಿತು

  • ಮೊದಲಿಗೆ ಗಳಿಸಿ. ಗಳಿಸಿದ್ದರಲ್ಲಿ ಸ್ವಲ್ಪವಾದರೂ ಉಳಿಸಿ. ದಿನನಿತ್ಯದ ಅಗತ್ಯಗಳಿಗೆ ಖರ್ಚು ಮಾಡಿದ ನಂತರ, ಯಾವುದೇ ಹೊರೆ ಆಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಶಾಪಿಂಗ್ ಮಾಡಿ. 

  • ಆರ್ಥಿಕ ಶಿಸ್ತು ಇಲ್ಲದವರು ಬಹುಬೇಗ ಅಧಃಪತನಕ್ಕೆ ಒಳಗಾಗುತ್ತಾರೆ ಎಂಬುದನ್ನು ಮರೆಯಬೇಡಿ. 

  • ಪರಸ್ಪರ ಹೋಲಿಕೆ ಮಾಡಿಕೊಳ್ಳುವುದರಿಂದ ಆಗಾಗ್ಗೆ ಶಾಪಿಂಗ್ ಮಾಡಬೇಕು ಎಂಬ ತಹತಹ ಉಂಟಾಗುತ್ತದೆ. ಹೋಲಿಕೆಯನ್ನು ಬಿಡಿ, ನಿಮಗೆ ಅಗತ್ಯ ಎನಿಸಿದರೆ ಮಾತ್ರ ಖರೀದಿಸಿ. 

  • ಹೊಸ ಕಲಿಕೆ, ಹೊಸ ತಾಣಕ್ಕೆ ಭೇಟಿ, ಪ್ರಯಾಣದ ಅನುಭವ, ಕೌಶಲ ಹೆಚ್ಚಿಸಿಕೊಳ್ಳುವಂತಹ ವಿಷಯಗಳಿಗೆ ಹಣ ವಿನಿಯೋಗಿಸುವುದಕ್ಕೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ.

  • ನಿರೀಕ್ಷಿತ/ಭವಿಷ್ಯದ ಖರ್ಚುಗಳಿಗಾಗಿ ಉಳಿಸಲು ಪ್ರಾರಂಭಿಸಿ.  ಹಬ್ಬ, ಇಎಂಐ, ಇನ್ಶೂರೆನ್ಸ್, ಸ್ಕೂಲ್ ಫೀಸ್‌ನಂತಹ ಕಾರಣಗಳಿಗೆ ಹಾಗೂ ಸಣ್ಣದಾದ ತುರ್ತು ನಿಧಿಗಾಗಿ ಒಂದು ಎಸ್‌ಐಪಿಯಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಶಾಪಿಂಗ್‌ನ ತಹತಹ ಕಡಿಮೆಯಾಗುತ್ತದೆ. ಸ್ವಲ್ಪಮಟ್ಟಿಗೆ ಹಣವೂ ಉಳಿತಾಯ ಆಗುತ್ತದೆ.

  • ಎಂದಾದರೂ ಒಮ್ಮೆ, ಅತಿಯಾಗಿ ಯೋಚಿಸದೆ ಧಾರಾಳವಾಗಿ ಖರ್ಚು ಮಾಡಿ ತೃಪ್ತ ಭಾವ ಹೊಂದುವುದರಲ್ಲಿ ತಪ್ಪಿಲ್ಲ.

  • ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದು ಶಾಪಿಂಗ್‌ ಗೀಳಿಗೆ ಒಳಗಾಗದಂತೆ ನಮ್ಮನ್ನು ತಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.