
ಎಡದಿಂದ ಬಲಕ್ಕೆ: ಹೆಚ್ಚುವರಿ ರಿಜಿಸ್ಟ್ರಾರ್ ಡಾ. ರಾಘವೇಂದ್ರ ಪ್ರಭು, ಶಾಸಕರು ಶ್ರೀ ಎಸ್. ಆರ್. ವಿಶ್ವನಾಥ್, ಪ್ರೊ ವೈಸ್-ಚಾನ್ಸಲರ್ ಡಾ. ಮಧು ವೀರರಾಘವನ್, ಪ್ರೊ ವೈಸ್-ಚಾನ್ಸಲರ್ ಡಾ. ಶರತ್ ರಾವ್, COO ಡಾ. ಆನಂದ್ ವೇಣುಗೋಪಾಲ್ — MAHETHON 2026.
ಮಾಹೆ ಆವರಣದಲ್ಲಿ ಬೆಂಗಳೂರಿನ ಅತಿದೊಡ್ಡ 'ರನ್ನಿಂಗ್ ಫೆಸ್ಟಿವಲ್': 10,000ಕ್ಕೂ ಹೆಚ್ಚು ಕ್ರೀಡಾಸಕ್ತರು ಭಾಗಿ
ಕ್ರೀಡಾ ಶ್ರೇಷ್ಠತೆಗೆ ಸಾಕ್ಷಿಯಾದ 'ಮಹೆಥಾನ್-2026': ವಿವಿಧ ವಿಭಾಗಗಳಲ್ಲಿ ಅಗ್ರ ಓಟಗಾರರಿಗೆ ಬಹುಮಾನ
21.1K, 10K, 5K ಹಾಗೂ 3K ವಿಜೇತರಿಗೆ ನೀಡಿದ ಒಟ್ಟು ನಗದು ಬಹುಮಾನ ₹13.75 ಲಕ್ಷ
ಬೆಂಗಳೂರು, ಜನವರಿ 25, 2025: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ, ಬೆಂಗಳೂರು ಕ್ಯಾಂಪಸ್ ಆಯೋಜಿಸಿದ್ದ 'ಮಾಹೆಥಾನ್ 2026'ರ ಮೊದಲ ಆವೃತ್ತಿಯು ಅಭೂತಪೂರ್ವ ಯಶಸ್ಸು ಕಂಡಿತು. ಯಲಹಂಕದಲ್ಲಿ ಭಾನುವಾರ ನಡೆದ ಈ ಓಟದಲ್ಲಿ ಆರೋಗ್ಯ, ಸಮುದಾಯದ ಸಹಭಾಗಿತ್ವ ಮತ್ತು ಸುಸ್ಥಿರ ಬದುಕಿನ ಮಹತ್ವವನ್ನು ಸಾರಲು 4 ವರ್ಷದ ಪುಟಾಣಿಗಳಿಂದ ಹಿಡಿದು 94 ವರ್ಷದ ಹಿರಿಯರವರೆಗೂ ಭಾಗಿಯಾಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಕ್ರೀಡಾಸಕ್ತರು ಪಾಲ್ಗೊಂಡಿದ್ದರು.
ಆಕ್ಸಿಸ್ ಬ್ಯಾಂಕ್ ಸಹಯೋಗದೊಂದಿಗೆ ನಡೆದ ಮಾಹೆಥಾನ್ನಲ್ಲಿ ವಿದ್ಯಾರ್ಥಿಗಳು, ವೃತ್ತಿಪರ ಕ್ರೀಡಾಪಟುಗಳು, ಕಾರ್ಪೊರೇಟ್ ತಂಡಗಳು, ರಕ್ಷಣಾ ಮತ್ತು ಪೊಲೀಸ್ ಸಿಬ್ಬಂದಿ, ಫಿಟ್‌ನೆಸ್ ಆಸಕ್ತರು ಮತ್ತು ಮಕ್ಕಳು ಸೇರಿದಂತೆ ಅನೇಕರು ಈ ಓಟದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. AIMS-ಪ್ರಮಾಣೀಕೃತವಾದ ಈ ಓಟದ ಎಲ್ಲಾ ವಿಭಾಗದ ಓಟಗಳು ಮಾಹೆ ಬೆಂಗಳೂರು ಆವರಣದಿಂದಲೇ ಆರಂಭಗೊಂಡು ಅಲ್ಲಿಯೇ ಮುಕ್ತಾಯಗೊಂಡವು.
"ಬೆಂಗಳೂರಿನ ಅತಿದೊಡ್ಡ ರನ್ನಿಂಗ್ ಫೆಸ್ಟಿವಲ್" ಎಂದೇ ಗುರುತಿಸಿಕೊಂಡಿರುವ ‘ಮಾಹೆಥಾನ್ 2026’ಕ್ಕೆ ಯಲಹಂಕ ಶಾಸಕರಾದ ಎಸ್. ಆರ್. ವಿಶ್ವನಾಥ್ ಅವರು ಅಧಿಕೃತವಾಗಿ ಚಾಲನೆ ನೀಡಿದರು. ಆಕ್ಸಿಸ್ ಬ್ಯಾಂಕ್ ಲಿಮಿಟೆಡ್‌ನ ಉಪಾಧ್ಯಕ್ಷರಾದ ರಾಹುಲ್ ಮಾಥೂರ್, ಮಾಹೆ ಮಣಿಪಾಲದ ಎಂಎಲ್ಎಚ್ಎಸ್ ಹಾಗೂ ಮಾಹೆ ಬೆಂಗಳೂರು ಕ್ಯಾಂಪಸ್‌ನ ಪ್ರೊ ವೈಸ್ ಚಾನ್ಸಲರ್ ಡಾ. ಮಧು ವೀರರಾಘವನ್, ಮಾಹೆ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕೆ. ರಾವ್ , ಮಾಹೆ ಸಿಒಒ ಆನಂದ್ ವೇಣುಗೋಪಾಲ್ ಮತ್ತು ಮಾಹೆ ಬೆಂಗಳೂರಿನ ಅಡಿಷನಲ್ ರಿಜಿಸ್ಟ್ರಾರ್ ಡಾ. ರಾಘವೇಂದ್ರ ಪ್ರಭು ಪಿ. ಸೇರಿದಂತೆ ಮಾಹೆಯ ಹಿರಿಯ ನಾಯಕರು ಉಪಸ್ಥಿತರಿದ್ದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಸ್. ಆರ್. ವಿಶ್ವನಾಥ್, ‘ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವಲ್ಲಿ ಮಣಿಪಾಲ್ ಸಮೂಹ ಸಂಸ್ಥೆಗಳ ಕಾರ್ಯ ಶ್ಲಾಘನೀಯ. ಬೆಂಗಳೂರು ಹಾಗೂ ಇತರೆಡೆಗಳಿಂದ ಸ್ಪರ್ಧಿಗಳು ಇಲ್ಲಿಗೆ ಆಗಮಿಸಿರುವುದು, ಮಣಿಪಾಲ್ ಸಂಸ್ಥೆಗಳ ಮೇಲೆ ಜನರಿಗಿರುವ ವಿಶ್ವಾಸ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಈ ರೀತಿಯ ಉತ್ತಮ ಕಾರ್ಯಕ್ರಮಗಳು ನಮ್ಮ ಭಾಗದ ಜನರಿಗೆ ಹೊಸ ಅವಕಾಶಗಳನ್ನು ತೆರೆಯುತ್ತವೆ. ಯಲಹಂಕದ ರಸ್ತೆಗಳ ಸುಧಾರಣೆಗೆ ನಾನು ಈಗಾಗಲೇ ಕ್ರಮ ಕೈಗೊಂಡಿದ್ದೇನೆ, ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ ಇನ್ನೂ ರಸ್ತೆಗಳ ದುರಸ್ತಿ ಅಗತ್ಯವಿದೆ. ಮಾಹೆಥಾನ್ 2027ರ ವೇಳೆಗೆ ಯಲಹಂಕದ ಎಲ್ಲಾ ರಸ್ತೆಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತೇನೆʼ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಆಶಯದ ಕುರಿತು ಮಾತನಾಡಿದ ಡಾ. ಮಧು ವೀರರಾಘವನ್, ‘ನಮ್ಮ ಮಾಹೆಥಾನ್‌ನಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ಸ್ಪರ್ಧಿಯಲ್ಲೂ ಕಾಣುತ್ತಿರುವ ಅದಮ್ಯ ಉತ್ಸಾಹವನ್ನು ಕಂಡು ಖುಷಿಯಾಗಿದೆ. ಪ್ರತಿಯೊಬ್ಬ ಓಟಗಾರನಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಹಾಗೆಯೇ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ನಮ್ಮ ಪ್ರಾಯೋಜಕರಿಗೆ ವಿಶೇಷ ಕೃತಜ್ಞತೆಗಳು. ನಾವೆಲ್ಲರೂ ಒಗ್ಗೂಡಿ ಮಾಹೆ ಸಮುದಾಯಕ್ಕಾಗಿ ಒಂದು ಅದ್ಭುತ ಮೈಲಿಗಲ್ಲನ್ನು ನಿರ್ಮಿಸಿದ್ದೇವೆʼ ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ಶೈಕ್ಷಣಿಕ ಮುಖ್ಯಸ್ಥರು, ಕಾರ್ಪೊರೇಟ್ ಪ್ರತಿನಿಧಿಗಳು ಹಾಗೂ ಹಿರಿಯ ಆಡಳಿತಾಧಿಕಾರಿಗಳು ಪಾಲ್ಗೊಂಡು, ಸ್ಪರ್ಧಿಗಳಿಗೆ ಹುರಿದುಂಬಿಸಿದರು.
ಎಲ್ಲರನ್ನೂ ಒಳಗೊಳ್ಳುವ ಉದ್ದೇಶದೊಂದಿಗೆ, ಮ್ಯಾರಥಾನ್‌ನಲ್ಲಿ ಹಾಫ್ ಮ್ಯಾರಥಾನ್ (21.1K), 10K, 5K ಮತ್ತು 3K ಫನ್ ರನ್ ಎಂಬ ಓಟದ ವಿಭಾಗಗಳನ್ನು ಆಯೋಜಿಸಲಾಗಿತ್ತು. ಸಶಸ್ತ್ರ ಪಡೆ ಸಿಬ್ಬಂದಿ ಹಾಗೂ ವಿಕಲಚೇತನರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದು ಈ ಮಾಹೆಥಾನ್‌ನ ವಿಶೇಷತೆಯಾಗಿತ್ತು. ಪ್ರತಿ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ವೇಗದ ಓಟಗಾರರನ್ನು ಗುರುತಿಸಿ ಗೌರವಿಸಲಾಯಿತು ಹಾಗೂ ಎಲ್ಲಾ ವಿಭಾಗದ ವಿಜೇತರಿಗೂ ಸೇರಿ ಒಟ್ಟು ₹13.75 lakh ಮೊತ್ತದ ನಗದು ಬಹುಮಾನವನ್ನು ವಿತರಿಸಲಾಯಿತು.
ರನ್ ಗ್ರೀನ್, ಬ್ರೀದ್ ಫ್ರಿ ಎಂಬ ಧ್ಯೇಯವಾಕ್ಯ ಹಾಗೂ ಭೂಮಿಗಾಗಿ ಓಟ ಎಂಬ ಶೀರ್ಷಿಕೆಯಡಿ ಜರುಗಿದ ಈ ಕಾರ್ಯಕ್ರಮವು, ದೈಹಿಕ ಕ್ಷಮತೆಯನ್ನು ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯೊಂದಿಗೆ ಅರ್ಥಪೂರ್ಣವಾಗಿ ಬೆಸೆಯಿತು. ಆಚರಣೆಯ ಭಾಗವಾಗಿ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮವು, ಪರಿಸರ ಸ್ನೇಹಿ ಆಚರಣೆಗಳು, ಜೀವವೈವಿಧ್ಯದ ಸಂರಕ್ಷಣೆ ಹಾಗೂ ಸುಸ್ಥಿರ ಜೀವನಶೈಲಿ ಬಗ್ಗೆ ಮಾಹೆ ಬೆಂಗಳೂರು ಹೊಂದಿರುವ ಬದ್ಧತೆಯನ್ನು ಎತ್ತಿ ತೋರಿಸಿತು. ಭಾರತದ 77ನೇ ಗಣರಾಜ್ಯೋತ್ಸವದ ಮುನ್ನದಿನ ನಡೆದ ಈ ಕಾರ್ಯಕ್ರಮವು ರಾಷ್ಟ್ರದ ಗೌರವ, ಐಕ್ಯತೆ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಸಂಭ್ರಮಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಹೆ ಬೆಂಗಳೂರಿನ ಅಡಿಷನಲ್ ರಿಜಿಸ್ಟ್ರಾರ್ ಡಾ. ರಾಘವೇಂದ್ರ ಪ್ರಭು ಅವರು, ಪರಿಸರ ಜಾಗೃತಿ ಮತ್ತು ಸಮುದಾಯದ ಅಭಿವೃದ್ಧಿಗೆ ಮಾಹೆಯು ನೀಡುತ್ತಿರುವ ಕೊಡುಗೆಯನ್ನು ಮುಂದುವರಿಸುವ ನಿಟ್ಟಿನಲ್ಲಿ, ಪ್ರತಿ ವರ್ಷ ಜನವರಿ 4ನೇ ಭಾನುವಾರದಂದು ಮಾಹೆಥಾನ್ ಆಯೋಜಿಸಲಾಗುವುದು ಎಂದು ಘೋಷಿಸಿದರು.
ಮಾಹೆಥಾನ್ 2026ರ ಯಶಸ್ಸು, ಆರೋಗ್ಯ, ಸುಸ್ಥಿರತೆ ಮತ್ತು ಸಾಮಾಜಿಕ ಕಳಕಳಿಯ ಕಡೆಗೆ ಮಾಹೆ ಹೊಂದಿರುವ ಬದ್ಧತೆಯನ್ನು ಒತ್ತಿಹೇಳುತ್ತದೆ. ಮಣಿಪಾಲದಲ್ಲಿ ಆಯೋಜಿಸಲಾಗುವ 'ಮಣಿಪಾಲ್ ಮ್ಯಾರಥಾನ್' ಜೊತೆಗೆ, ಈ 'ಮಾಹೆಥಾನ್' ಕೂಡ ಸಮುದಾಯ ಆಧಾರಿತ ಕ್ರೀಡಾ ಕಾರ್ಯಕ್ರಮದಲ್ಲಿ ಸೇರಿದ್ದು, ಇದು ಮಾಹೆಯ ರಾಷ್ಟ್ರವ್ಯಾಪಿ ಅಸ್ಮಿತೆಯನ್ನು ಮತ್ತಷ್ಟು ಬಲಪಡಿಸಿದೆ. ಮುಂದಿನ ಆವೃತ್ತಿಗಳಿಗೆ ಒಂದು ಹೊಸ ಮಾದರಿಯನ್ನು ರೂಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.